ಝೆನ್ ಪ್ರಸಂಗ: ಚಾಳಿ ಬಿಡಿಸುವ ದಿಢೀರ್ ತಂತ್ರ

ಗುರು ಸೆನ್‌ಗೈಯ ಆಶ್ರಮದಲ್ಲಿ ಧ್ಯಾನ ಕಲಿಯಲು ಸೇರಿಕೊಂಡಿದ್ದರು ಹಲವು ಶಿಷ್ಯರು. ಯೌವನದ ಸಹಜ ಪ್ರವೃತ್ತಿಗಳ ಸೆಳೆತ ಅವರಲ್ಲಿ ಕೆಲವರಿಗೆ. ಒಬ್ಬನಿಗಂತೂ ಪೇಟೆಗೆ ಹೋಗಿ ಸುತ್ತಾಡುವ ಚಾಳಿ. ರಾತ್ರಿ ಎಲ್ಲರೂ ಮಲಗಿದ ನಂತರ ಆಶ್ರಮದ ಗೋಡೆ ಹಾರಿ ಪೇಟೆಗೆ ಹೋಗುತ್ತಿದ್ದ; ಮರುದಿನ ಮುಂಜಾವ ಮೆತ್ತಗೆ ಮರಳುತ್ತಿದ್ದ.

ಅದೊಂದು ದಿನ ರಾತ್ರಿ ಗುರು ಸೆನ್‌ಗೈ ಆಶ್ರಮದ ಗೋಡೆಗೆ ಐದು ಮೆಟ್ಟಲುಗಳ ಪುಟ್ಟ ಏಣಿ ತಗಲಿಸಿ ಇಟ್ಟದ್ದನ್ನು ನೋಡಿದ. ಶಿಷ್ಯರನ್ನೆಲ್ಲ ಗಮನಿಸಿದಾಗ ಒಬ್ಬ ಶಿಷ್ಯ ನಾಪತ್ತೆ ಎಂಬುದು ಪತ್ತೆ. ಸೆನ್‌ಗೈಗೆ ಎಲ್ಲವೂ ಅರ್ಥವಾಯಿತು.

ಅನಂತರ, ಆ ಪುಟ್ಟ ಏಣಿಯನ್ನು ಆಚೆಗಿಟ್ಟು, ಅದಿದ್ದ ಜಾಗದಲ್ಲಿ ನಿಂತುಕೊಂಡ ಗುರು ಸೆನ್‌ಗೈ. ಪೇಟೆಯ ತಿರುಗಾಟ ಮುಗಿಸಿದ ಶಿಷ್ಯ ಎಂದಿನಂತೆ ಮುಂಜಾವ ವಾಪಾಸು ಬಂದ. ಆಶ್ರಮದ ಗೋಡೆಯಿಂದ ಕೆಳಗೆ ಇಳಿಯುವಾಗ, ಏಣಿಯ ಮೆಟ್ಟಲೆಂದು ಭಾವಿಸಿ, ಗುರುವಿನ ತಲೆಯ ಮೇಲೇ ಕಾಲಿಟ್ಟು ಕೆಳಕ್ಕೆ ಜಿಗಿದ. ತಕ್ಷಣವೇ ಪ್ರಮಾದವಾಯಿತೆಂದು ತಿಳಿದ ಶಿಷ್ಯ ಕಕ್ಕಾಬಿಕ್ಕಿಯಾಗಿ ಗುರುವಿನ ಎದುರು ತಲೆ ತಗ್ಗಿಸಿ ನಿಂತ.

ಗುರು ಸೆನ್‌ಗೈ ಶಾಂತ ಸ್ವರದಲ್ಲಿ ಹೇಳಿದ, “ಬೆಳ್ಳಂಬೆಳಗ್ಗೆ ಹೊರಗೆ ಬಹಳ ಚಳಿ ಇರುತ್ತದೆ. ನಿನಗೆ ಶೀತವಾಗದಂತೆ ಎಚ್ಚರದಿಂದಿರು ಮಗೂ!"

ಅದೇ ಕೊನೆ. ಅನಂತರ ಯಾವತ್ತೂ ಆ ಶಿಷ್ಯ ರಾತ್ರಿ ಆಶ್ರಮದಿಂದ ಹೊರಗೆ ಹೋಗಲಿಲ್ಲ.