HRM

ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ?
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ
ಜೀರ್ಣಿಸದ ಋಣಶೇಷ - ಮಂಕುತಿಮ್ಮ
“ನಾನೀಗ ಉಣ್ಣುತ್ತಿರುವ ಊಟ ನನ್ನದೇ ಬೆವರಿನ ದುಡಿಮೆಯಿಂದ ಗಳಿಸಿದ್ದೋ? ಅಥವಾ ಈ ಊಟ ಇತರರನ್ನು ಕಣ್ಣೀರು ಹಾಕಿಸಿ ಸಂಪಾದಿಸಿದ್ದೋ?” ಈ ಪ್ರಶ್ನೆಯನ್ನು ಪ್ರತಿ ದಿನವೂ ಊಟ ಮಾಡುವಾಗ ನಿನಗೆ ನೀನೇ ಕೇಳಿಕೋ ಎಂದು ಈ ಮುಕ್ತಕದಲ್ಲಿ ನಮ್ಮನ್ನು ಬಡಿದೆಬ್ಬಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಈ ಜಗತ್ತಿನ ಜನರಿಗೆ ತಿನ್ನಲು ಏನಾದರೂ ಕೊಟ್ಟಿದ್ದೀಯಾ? ಅಥವಾ ಇತರರ ಹಸಿವು ನೀಗಲು ಏನಾದರೂ ದಾನ ಮಾಡಿದ್ದೀಯಾ? ಹಾಗೆ ಕೊಟ್ಟಿದ್ದರೆ, ಅಷ್ಟನ್ನು ಮಾತ್ರ ಉಣ್ಣುವ ಹಕ್ಕು ನಿನಗುಂಟು ಎಂದು ಅವರು ಎಚ್ಚರಿಸುತ್ತಾರೆ. ಮಿಕ್ಕೂಟ ಅಂದರೆ ಅದಕ್ಕಿಂತ ಮಿಗಿಲಾಗಿ ನೀನು ತಿಂದದ್ದೆಲ್ಲಾ “ಜೀರ್ಣಿಸದ ಋಣಶೇಷ” ಎಂಬುದು ಅವರು ನೀಡುವ ಅಂತಿಮ ಎಚ್ಚರಿಕೆ. ಆ ಋಣಶೇಷ ನಿನ್ನ ಬೆಂಬಿಡದು; ಇಂದಲ್ಲದಿದ್ದರೆ ನಾಳೆ ನೀನು ಅದನ್ನು ತೀರಿಸಲೇ ಬೇಕು ಎಂದು ಸ್ಪಷ್ಟಪಡಿಸುತ್ತಾರೆ ಡಿ.ವಿ.ಜಿ.ಯವರು
ಎಂತಹ ಮಹಾನ್ ಸತ್ಯ! ಈ ಸತ್ಯವನ್ನು ಒಪ್ಪದವರು ಮೋಸದಿಂದ, ಅಕ್ರಮದಿಂದ ಹಾಗೂ ಅನೈತಿಕವಾಗಿ ರಾಶಿರಾಶಿ ಹಣ ಲೂಟಿ ಮಾಡಿ ಶೇಖರಿಸಿಟ್ಟರು. ಉದಾಹರಣೆಗೆ, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ೨೦೦೯ರಿಂದ ೨೦೧೩-೧೪ರ ವರೆಗೆ ಐದು ವರುಷಗಳಲ್ಲಿ ೧೦೬ ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ ರೂಪಾಯಿ ೧೦,೦೦೦ ಕೋಟಿ ಲೂಟಿಯಾಗಿದೆ. ಇದು ಪುರಾವೆಗಳ ಸಹಿತ ಸಾಬೀತಾಗಿದೆ. ಇದನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದವರು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು.
ಗಮನಿಸಿ, ಒಂದೆರಡಲ್ಲ ೧೦,೦೦೦ ಕೋಟಿ ರೂಪಾಯಿ ಲೂಟಿ! ಹಾಗಾದರೆ, ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಈ ವರೆಗೆ ಅದೆಷ್ಟು ಕೋಟಿ ರೂಪಾಯಿ ಲೂಟಿಯಾಗಿದೆ? ಬೇರೆ ರಾಜ್ಯಗಳಲ್ಲಿ, ಕೇಂದ್ರ ಸರಕಾರದ ಮಂತ್ರಾಲಯಗಳಲ್ಲಿ, ಸಾವಿರಾರು ನಿಗಮ-ಮಂಡಲಿಗಳಲ್ಲಿ ಅದೆಷ್ಟು ಲಕ್ಷಲಕ್ಷ ಕೋಟಿ ರೂಪಾಯಿ ಲೂಟಿಯಾಗಿದೆ?
ಕೋಟಿಗಟ್ಟಲೆ ಜನರಿಗೆ ಅನ್ಯಾಯ ಮಾಡಿ, ಅವರ ಕಣ್ಣೀರು ಹಾಕಿಸಿ ಕೊಳ್ಳೆ ಹೊಡೆದ ಈ ಕೋಟಿಕೋಟಿ ರೂಪಾಯಿ “ಕಪ್ಪುಹಣ” ಲೂಟಿಕೋರರಿಗೆ ದಕ್ಕೀತೇ? ೮ ನವಂಬರ್ ೨೦೧೬ರಂದು ಭಾರತದಲ್ಲಿ ರೂ.೫೦೦ ಮತ್ತು ರೂ.೧೦೦೦ ಮುಖಬೆಲೆಯ ನೋಟುಗಳನ್ನು ಪ್ರಧಾನಮಂತ್ರಿ ರದ್ದು ಮಾಡಿದಾಗ, ಈ ಕಪ್ಪುಹಣದ ಬಹುಪಾಲು ಕೇವಲ ಕಾಗದದ ಕಸವಾಯಿತು, ಅಲ್ಲವೇ? ಪೆರರ ಕಣ್ಣೀರು ಹಾಕಿಸಿ, ಶೇಖರಿಸಿದ ಸಂಪತ್ತನ್ನು ದಕ್ಕಿಸಿಕೊಳ್ಳುವೆನೆಂಬ ಭ್ರಮೆಯಲ್ಲಿ ಇರುವವರು ಇನ್ನಾದರೂ “ಆ ಸಂಪತ್ತು ಜೀರ್ಣಿಸದ ಋಣಶೇಷ” ಎಂಬ ಮಹಾನ್ ಸತ್ಯಕ್ಕೆ ಶರಣಾಗಲಿ.

ಸಜ್ಜೀವನಕೆ ಸೂತ್ರವೆರಡು ಮೂರದು ಸರಳ
ಹೊಟ್ಟೆಪಾಡಿಗೆ ವೃತ್ತಿ ಸತ್ಯ ಬಿಡದಿಹುದು
ಚಿತ್ತವೀಶನೊಳದುವೆ ಚಿಂತೆಗಳ ಬಿಟ್ಟಿಹುದು
ಮೈತ್ರಿ ಲೋಕಕ್ಕೆಲ್ಲ – ಮರುಳ ಮುನಿಯ
ಒಳ್ಳೆಯ ಜೀವನ ನಡೆಸಲು ಎರಡು ಮೂರು ಸರಳ ಸೂತ್ರಗಳ ಪಾಲನೆಯೇ ಸಾಕೆಂದು ಈ ಮುಕ್ತಕದಲ್ಲಿ ಸಾರಿದ್ದಾರೆ ಡಿವಿಜಿಯವರು. ಆ ಮೂಲಕ ಒಳ್ಳೆಯ ಬದುಕು ಎಷ್ಟು ಸರಳ ಎಂಬದನ್ನು ಮನಗಾಣಿಸಿದ್ದಾರೆ. ಮೊದಲ ಸೂತ್ರ: ಹೊಟ್ಟೆಪಾಡಿಗೊಂದು ವೃತ್ತಿ ಮಾಡುವುದು. ಅದು ಕೃಷಿಯಂತಹ ಸ್ವ-ಉದ್ಯೋಗ ಆಗಿರಬಹುದು ಅಥವ ಕಚೇರಿ ಕೆಲಸದಂತಹ ಸಂಬಳದ ಉದ್ಯೋಗ ಆಗಿರಬಹುದು. ಅಂತೂ, ಮನುಷ್ಯನಿಗೆ ಏನಾದರೂ ಉದ್ಯೊಗ ಬೇಕೇಬೇಕು. ಇಲ್ಲವಾದರೆ, ನಮ್ಮ ಮನಸ್ಸೆಂಬುದು ದೆವ್ವಗಳ ಮನೆಯಂತೆ ಅನಗತ್ಯ ಹಾಗೂ ದಿಕ್ಕೆಟ್ಟ ಯೋಚನೆಗಳ ಗೂಡಾದೀತು.
ಸತ್ಯವನ್ನು ಬಿಡದಿರುವುದು ಒಳ್ಳೆಯ ಜೀವನದ ಎರಡನೇ ಸೂತ್ರ. ಬಸವಣ್ಣನವರೂ ತಮ್ಮ ಪ್ರಸಿದ್ಧ ವಚನದಲ್ಲಿ ಇದನ್ನೇ ಹೇಳಿದ್ದಾರೆ: ಹುಸಿಯ ನುಡಿಯಲು ಬೇಡ…. ಇದುವೇ ಕೂಡಲಸಂಗಮ ದೇವನೊಲಿಸುವ ಪರಿ. ಮಹಾತ್ಮ ಗಾಂಧಿ ಸತ್ಯವೇ ದೇವರೆಂದು ನಂಬಿ ಬದುಕಿದವರು. ಸುಳ್ಳಿನ ಹಾದಿ ಹಿಡಿದವನಲ್ಲಿ ಯಶಸ್ಸಿನ ಸಾಧನೆಗೆ ಅದು ಸುಲಭದ ದಾರಿ ಎಂಬ ಭ್ರಮೆ ಹುಟ್ಟುತ್ತದೆ. ಆದರೆ, ಆ ದಾರಿಯಿಂದ ಎಂದಿಗೂ ಗುರಿ ಮುಟ್ಟಲಾಗದು ಎಂಬುದೇ ಸತ್ಯ. ಈಗ ಹಲವರ ಜೀವನವೇ ಸುಳ್ಳಿನ ಕಂತೆಯಾಗಿದೆ. ಹಾಗಾಗಿ, ಯಾರು ಸತ್ಯದ ದಾರಿಯಲ್ಲಿದ್ದಾರೆ ಎಂದು ತಿಳಿಯುವುದೇ ಸವಾಲಾಗಿದೆ. ಬ್ಯಾಂಕಿನಿಂದ ಪಡೆದ ಸಾಲದ ನಿಯತ್ತಿನ ಮರುಪಾವತಿಯ ಷರತ್ತನ್ನು ಒಪ್ಪಿಕೊಂಡಿದ್ದ ವಿಜಯ ಮಲ್ಯ, ರೂ.೭,೦೦೦ ಕೋಟಿ ಸಾಲ ಮರುಪಾವತಿಸದೆ, ದೇಶ ಬಿಟ್ಟು ಹೋಗಿದ್ದಾರೆ! ರೈತರಿಗೆ ಸಾವಿರಾರು ಕೋಟಿ ರೂಪಾಯಿ ಸಬ್ಸಿಡಿ ಕೊಡುತ್ತಿದ್ದೇವೆ ಎನ್ನುವ ಸರಕಾರ ಅದನ್ನು ನಿಜವಾಗಿ ಕೊಡುತ್ತಿರುವುದು ರಾಸಾಯನಿಕ ಗೊಬ್ಬರ ಉತ್ಪಾದಿಸುವ ಕಾರ್ಖಾನೆಗಳಿಗೆ!
ಡಿವಿಜಿಯವರು ತಿಳಿಸುವ ಮೂರನೇ ಸೂತ್ರ “ಈಶನೊಳು ಚಿತ್ತ” ಇರಿಸುವುದು ಅಂದರೆ ದೇವರನ್ನು ನಂಬುವುದು; ಆ ಮೂಲಕ ಚಿಂತೆ ಬಿಟ್ಟು ಬದುಕುವುದು. ದೇವರ ಬಗೆಗಿನ ಚರ್ಚೆಯ ಬದಲಾಗಿ, ದೇವರು ಇದ್ದಾನೆ ಎಂಬಂತೆ ಬದುಕುವುದು ನಿರಾಳ. ಈ ಭೂಮಿಯನ್ನು ಆಧರಿಸಿರುವ ಶಕ್ತಿ ಇರುವುದು ಸತ್ಯ. ಆ ಸತ್ಯಕ್ಕೆ ಶರಣಾದರೆ, ಈ ಲೋಕದ ಎಲ್ಲದರೊಂದಿಗೆ ಮೈತ್ರಿಯಿಂದ ಬಾಳಲು ಸಾಧ್ಯ. ಇವು ಮೂರೇ ನೆಮ್ಮದಿಯ ಬದುಕಿಗೆ ಬೇಕಾದ ಸರಳ ಸೂತ್ರಗಳು.  
 

ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ
ಭವಿಷಿಯವ ಚಿಂತಿಸದೆ ಬದುಕ ನೂಕುತಿರು
ವಿವರಗಳ ಜೋಡಿಸುವ ಯಜಮಾನ ಬೇರಿಹನು
ಸವೆಸು ನೀಂ ಜನುಮವನು - ಮಂಕುತಿಮ್ಮ
ದಿವಸದಿಂದ ದಿವಸಕ್ಕೆ, ನಿಮಿಷದಿಂದ ನಿಮಿಷಕ್ಕೆ ಭವಿಷ್ಯವನ್ನು ಚಿಂತಿಸದೆ ಬದುಕನ್ನು ನೂಕುತ್ತಿರು. ಯಾಕೆಂದರೆ ನಿನ್ನ ಬದುಕಿನ ವಿವರಗಳನ್ನು ಜೋಡಿಸುವ ಯಜಮಾನ ಬೇರೆ ಇದ್ದಾನೆ. ನಿನ್ನ ಮುಂದಿನ ದಿನ ಅಥವಾ ನಿಮಿಷ ಹೇಗಿರಬೇಕು ಎಂದು ನಿರ್ಧರಿಸುವವನು ಅವನು, ನೀನಲ್ಲ. ಆದ್ದರಿಂದ ಆ ಜಗನ್ನಿಯಾಮಕನ ಮೇಲೆ ನಂಬಿಕೆಯಿಟ್ಟು ನಿನ್ನ ಜನ್ಮವನ್ನು ನೀನು ಸವೆಸು ಎಂದಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು.
ಹೆತ್ತವರು ಕೆಲವರು ತಮ್ಮ ಮಗ/ ಮಗಳನ್ನು ಡಾಕ್ಟರ್ ಮಾಡಲೇ ಬೇಕೆಂಬ ಹಟಕ್ಕೆ ಬೀಳುತ್ತಾರೆ. ಆದರೆ ಮಗ/ ಮಗಳಿಗೆ ಅದರಲ್ಲಿ ಆಸಕ್ತಿಯೇ ಇಲ್ಲ. ಆತ/ ಆಕೆಯ ಆಸಕ್ತಿ ಸಂಗೀತ, ನೃತ್ಯ, ಚಿತ್ರಕಲೆ ಅಥವಾ ಸಾಹಿತ್ಯ ಆಗಿರ ಬಹುದು. ಆದರೂ ಅಪ್ಪಅಮ್ಮನ ಒತ್ತಾಯಕ್ಕಾಗಿ ವೈದ್ಯಕೀಯ ಶಿಕ್ಷಣಕ್ಕೆ ಸೇರುತ್ತಾರೆ. ಒಂದೆರಡು ವರುಷಗಳಲ್ಲಿ “ಅದು ನನ್ನಿಂದ ಸಾಧ್ಯವೇ ಇಲ್ಲವೆಂದು” ಅದನ್ನು ತೊರೆದು, ತಮ್ಮ ಆಸಕ್ತಿಯ ವಿಷಯದ ಶಿಕ್ಷಣದಲ್ಲಿ ಮುಂದುವರಿಯುತ್ತಾರೆ.
ಹಾಗೆಯೇ ಮಗ/ ಮಗಳು ತಮ್ಮ ಜಾತಿಯವರನ್ನೇ ಮದುವೆಯಾಗಬೇಕು ಎಂಬುದು ಬಹುಪಾಲು ಹೆತ್ತವರ ನಿರೀಕ್ಷೆ. ಆದರೆ ಆಧುನಿಕ ಶಿಕ್ಷಣ ಪಡೆದು, ಜಗತ್ತಿನ ವಿವಿಧ ಪ್ರಭಾವಗಳಿಗೆ ಒಳಗಾಗಿ, ಎಲ್ಲಿಯೋ ದುಡಿಯುವ ಮಗ/ ಮಗಳು ಬೇರೆ ಜಾತಿಯ ಸಂಗಾತಿಯನ್ನು ಪ್ರೀತಿಸಲು ತೊಡಗುತ್ತಾರೆ; ಅನಂತರ ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ. ಅಲ್ಲಿಗೆ ಹೆತ್ತವರ ಭವಿಷ್ಯದ ಕನಸು ನುಚ್ಚುನೂರು. ತಮ್ಮ ಮಕ್ಕಳು ಕೊನೆಗಾಲದ ವರೆಗೂ ತಮ್ಮೊಂದಿಗೇ ಇರಬೇಕೆಂಬ ಯೋಜನೆ ಕೆಲವು ಹೆತ್ತವರದ್ದು. ಅದಕ್ಕಾಗಿ ದೊಡ್ಡ ಮನೆ ಕಟ್ಟುತ್ತಾರೆ. ಕೊನೆಗೆ, ದೂರದ ಊರಿನಲ್ಲಿ/ ದೇಶದಲ್ಲಿ ಉದ್ಯೋಗದಲ್ಲಿರುವ ಮಕ್ಕಳು, ತಮ್ಮ ಶಿಕ್ಷಣದ ಬಳಿಕ ಒಂದು ತಿಂಗಳೂ ಈ ಮನೆಯಲ್ಲಿ ವಾಸವಿರುವುದಿಲ್ಲ. ಅದರಿಂದಾಗಿ ಈ ದೊಡ್ಡ ಮನೆ ಖಾಲಿಖಾಲಿ. ಇನ್ನು ಕೆಲವು ಹೆತ್ತವರದ್ದು ಇನ್ನೊಂದು ದೊಡ್ಡ ಕನಸು: ತಮ್ಮ ಮಕ್ಕಳು ಕೊನೆಗಾಲದಲ್ಲಿ ತಮ್ಮೊಂದಿರುತ್ತಾರೆ ಎಂದು. ಆದರೆ, ಅದೇ ಊರಿನಲ್ಲಿದ್ದರೂ ಕೆಲವು ಮಕ್ಕಳು ವೃದ್ಧ ತಂದೆತಾಯಿಯನ್ನು ಭೇಟಿ ಮಾಡುವುದು ಅಪರೂಪ. ವಿದೇಶಕ್ಕೆ ಹೋದರಂತೂ ಮಕ್ಕಳು ಹೆತ್ತವರಿಂದ ದೂರವಾದಂತೆಯೇ. ಪಿಎಚ್-ಡಿ ಮಾಡಲಿಕ್ಕಾಗಿ ಅಮೆರಿಕಾಕ್ಕೆ ಹೋಗುವ ಯುವಜನರಲ್ಲಿ ಶೇ.೯೫ ಜನರು ಹಿಂತಿರುಗಿ ಭಾರತಕ್ಕೆ ಬರುವುದಿಲ್ಲ; ಅಲ್ಲೇ ನೆಲೆಸುತ್ತಾರೆ. ಆದ್ದರಿಂದ ೨ ಕೂಡಿಸು ೨ ಎಂದರೆ ನಾಲ್ಕು ಎಂಬ ಲೆಕ್ಕಾಚಾರ ಗಣಿತಕ್ಕೆ ಸರಿ; ಆದರೆ ಬದುಕಿಗಲ್ಲ. ಬದುಕಿಗೆ ಬೇಕಾದ್ದು ಡಿವಿಜಿಯವರು ಇಲ್ಲಿ ತಿಳಿಸಿರುವ ಸರಳ ತತ್ವದ ಪಾಲನೆ, ಅಲ್ಲವೇ?

ದೇವನುದ್ದೇಶವೇನಿಂದೆನಲು ನೀನಾರು?
ಆವಶ್ಯಕವೆ ನಿನ್ನನುಜ್ನೆಯಾತಂಗೆ?
ಆವುದೋ ಪ್ರಭುಚಿತ್ತವೇನೊ ಅವನ ನಿಮಿತ್ತ
ಸೇವಕಂಗೇತಕದು? – ಮರುಳ ಮುನಿಯ
ದೇವರ ಉದ್ದೇಶ ಏನು ಎಂದು ಕೇಳಲು ನೀನು ಯಾರು? ಯಾವುದೇ ಕಾಯಕಕ್ಕೆ ನಿನ್ನ ಒಪ್ಪಿಗೆ (ಅನುಜ್ನೆ) ದೇವರಿಗೆ ಆವಶ್ಯಕವೇ? ಆ ಮಹಾಪ್ರಭುವಿನ ಮನಸ್ಸಿನಲ್ಲಿ ಏನಿರುವುದೋ, ಆತನಿಗೆ ಯಾವುದೇ ಕಾಯಕಕ್ಕೆ ಏನು ಕಾರಣಗಳು ಇವೆಯೋ, ಅವೆಲ್ಲ ಸೇವಕನಾದ ನಿನಗೆ ಯಾತಕ್ಕೆ? ಎಂದು ಮಾನ್ಯ ಡಿವಿಜಿಯವರು ಜಿಜ್ನಾಸೆ ಮಾಡುತ್ತಾರೆ.
ಸುನಾಮಿ, ಭೂಕಂಪ, ಬಿರುಗಾಳಿ, ಮಹಾನೆರೆ, ಅಗ್ನಿ ಪರ್ವತ ಸ್ಫೋಟ, ಮೇಘಸ್ಫೋಟ, ಭೀಕರ ಅಪಘಾತಗಳು ಇವನ್ನೆಲ್ಲ ಗಮನಿಸಿ. ಅದರಿಂದಾಗುವ ಸಾವುನೋವು, ಅನಾಹುತಗಳನ್ನು ಪರಿಗಣಿಸಿ. ೩೧.೧೦.೨೦೧೬ರಂದು ಇಟೆಲಿಯ ಭೂಕಂಪದಿಂದಾಗಿ ೧೫,೦೦೦ ಜನರು ಮನೆ ಕಳೆದುಕೊಂಡರು. ಈಗ ನಮ್ಮಲ್ಲಿ ಮೂಡುವ ಪ್ರಶ್ನೆ: ಇಷ್ಟೆಲ್ಲ ಸಾವುನೋವು ಉಂಟು ಮಾಡುವ ದೇವರ ಉದ್ದೇಶವೇನು? ಆದರೆ ಮೂಲಭೂತ ಪ್ರಶ್ನೆ: ಇದನ್ನು ಕೇಳಲು ನಾವು ಯಾರು? ಹೌದಲ್ಲ, ದೇವರಿಗೆ ದೇವರದ್ದೇ ಆದ ಲೆಕ್ಕಾಚಾರ ಇರಬಹುದು. ಉದಾಹರಣೆಗೆ ಈ ಭೂಮಿಯಲ್ಲಿ ಮನುಷ್ಯರ ಸಂಖ್ಯೆ ಮಿತಿ ಮೀರಿದಾಗ, ಅದನ್ನು ನಿಯಂತ್ರಿಸಲು ದೇವರು ಯಾವುದೋ ಕ್ರಮ ಕೈಗೊಳ್ಳಬಹುದು, ಅಲ್ಲವೇ? ಭೂಮಿಯ ಸಮತೋಲನದ ಮರುಸ್ಥಾಪನೆಗಾಗಿ ಸಾವುನೋವೂ ಅಗತ್ಯವಾದೀತು, ಅಲ್ಲವೇ?
ಈ ಭೂಮಿಯಲ್ಲಿದ್ದ ಡೈನಾಸಾರುಗಳು ಅಳಿದೇ ಹೋದವು. ಯಾಕೆ? ಅದು ದೇವರ ನಿರ್ಧಾರ ಎಂದಿರಲಿ. ಈ ಮುಂದಿನ “ಮನುಷ್ಯ” ನಿರ್ಧಾರ ಗಮನಿಸಿ. ಕೆಲವು ವರುಷಗಳ ಮುಂಚೆ, ಯುರೋಪಿನಲ್ಲಿ ಲಕ್ಷಗಟ್ಟಲೆ ದನಗಳನ್ನು ಕೊಲ್ಲಲಾಯ್ತು. ಯಾಕೆ? ಅವುಗಳಿಗೆ “ಹುಚ್ಚು ದನದ ಕಾಯಿಲೆ”ಯ ಸೋಂಕು ತಗಲಿದ್ದ ಕಾರಣ. ಇತ್ತೀಚೆಗೆ ಆಫ್ರಿಕಾದ ನೈಜೀರಿಯದಲ್ಲಿ ಸಾವಿರಾರು ಆನೆಗಳನ್ನು ಸರಕಾರದ ಆದೇಶದಂತೆ ಕೊಂದು ಹಾಕಲಾಯಿತು. ಯಾಕೆ? ಆನೆಗಳ ಸಂಖ್ಯೆ ಹೆಚ್ಚಾಯಿತೆಂದು. ಇದೇ ವರುಷ, ಬಿಹಾರದಲ್ಲಿ ಸರಕಾರದ ಆದೇಶದಂತೆ ನೂರಾರು ಕಾಡುಜಿಂಕೆಗಳನ್ನು ಗುಂಡಿಟ್ಟು ಕೊಲ್ಲಲಾಯಿತು. ಯಾಕೆ? ಅವುಗಳ ಸಂಖ್ಯೆ ಮಿತಿ ಮೀರಿತೆಂದು. ಇವು ಮೂರು ಮನುಷ್ಯ ನಿರ್ಧಾರಗಳು ಸರಿಯೇ?
ಹಾಗಾದರೆ, ಮನುಷ್ಯ ಎಂಬ ಪ್ರಾಣಿಯ ಸಂಖ್ಯೆ ನಿಯಂತ್ರಿಸಲಿಕ್ಕಾಗಿ ವಿಶ್ವನಿಯಾಮಕ ತನ್ನ ಕ್ರಮ ಜ್ಯಾರಿಗೊಳಿಸಿದಾಗ ಅದನ್ನು “ಭಗವಂತನ ನಿಯಮ” ಎಂದು ಸ್ವೀಕರಿಸಬೇಕಲ್ಲವೇ? ನಾವು ಕೇವಲ ಸೇವಕರು. ಆತನ ವಿಧಿವಿಧಾನಗಳನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ, ಅಲ್ಲವೇ?    
 

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ
ದೂರವಾದೊಡದೇನು? ಕಾಲು ಕುಂಟಿರಲೇನು?
ಊರ ನೆನಪೇ ಬಲವೋ - ಮಂಕುತಿಮ್ಮ
ಈ ಭೂಮಿಯಲ್ಲಿ ನಮ್ಮ ಬದುಕಿನುದ್ದಕ್ಕೂ ಅತ್ಯುನ್ನತ ಗುರಿ (ಮೇರು) ತಲಪುವ ಹೆಬ್ಬಯಕೆ ನಮಗಿರಬೇಕು. ಅಂತಹ ಗುರಿಯನ್ನು ಮರೆತು ಬಿಟ್ಟಾಗ, ಅದುವೇ ನರಕಕ್ಕೆ ದಾರಿಯಾದೀತು. ಸಣ್ಣತನ, ನೀಚತನ, ದುಷ್ಟತನಗಳು ನಮ್ಮನ್ನು ಮತ್ತೆಮತ್ತೆ ನರಕದಂತಹ ಬದುಕಿಗೆ ಎಳೆಯುತ್ತವೆ. ನಮ್ಮ ಗುರಿ ಬಹಳ ದೂರವಿದ್ದೀತು ಅಥವಾ ನಡಿಗೆಯಲ್ಲಿ ಕಾಲು ಕುಂಟಿದಂತೆ ಎಡರುತೊಡರುಗಳು ಗುರಿ ತಲಪುವುದಕ್ಕೆ ಅಡ್ಡಿಯಾದಾವು. ಆದರೂ ನಮ್ಮೂರಿನ ನೆನಪಿನ ಸೆಳೆತದಂತೆ  ಮೇರುಗುರಿ ನಾವು ಮುನ್ನುಗ್ಗಲು ಪ್ರೇರಣೆ ಎಂಬುದು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರ ಸಂದೇಶ.
ಬ್ರೆಜಿಲಿನ ರಿಯೋ ಡಿ ಜೆನೈರೋದಲ್ಲಿ ಆಗಸ್ಟ್ ೫ರಿಂದ ೨೧ರ ವರೆಗೆ (೨೦೧೬) ಜರಗಿದ ಒಲಿಪಿಂಕ್ಸ್ ಸ್ಪರ್ಧೆಗಳ ವರ್ಣರಂಜಿತ ಆಗುಹೋಗುಗಳು ಡಿ.ವಿ.ಜಿ.ಯವರ ಸಂದೇಶವನ್ನು ಸಮರ್ಥಿಸುತ್ತವೆ. ಅಬ್ಬ, ಎಂತಹ ಬೃಹತ್ ವಿದ್ಯಮಾನ ಅದು! ಅಲ್ಲಿ ೧೦,೫೦೦ ಸ್ಪರ್ಧಿಗಳು, ೩೦೬ ಸ್ಪರ್ಧೆಗಳು, ೨೮ ಕ್ರೀಡೆಗಳು ಹಾಗೂ ಭಾಗವಹಿಸಿದ ದೇಶಗಳು ೨೦೬. ಅವರೆಲ್ಲರ ಗುರಿ ಒಂದೇ: ಇನ್ನಷ್ಟು ವೇಗ, ಇನ್ನಷ್ಟು ತಾಕತ್ತು, ಇನ್ನಷ್ಟು ಎತ್ತರ.
ನಿರೀಕ್ಷೆಯಂತೆ ಯುಎಸ್ಎ ದೇಶದ ಸ್ಪರ್ಧಾಳುಗಳು ಅತ್ಯಧಿಕ ಪದಕ ಗೆದ್ದರು: ೪೩ ಚಿನ್ನ, ೩೭ ಬೆಳ್ಳಿ ಮತ್ತು ೩೮ ಕಂಚು (ಒಟ್ಟು ೧೧೮) ಪದಕಗಳು. ದೊಡ್ಡ ಸುದ್ದಿ ಮಾಡಿದ್ದು ಜಮೈಕಾದ ಓಟಗಾರ ಉಸೈನ್ ಬೋಲ್ಟ್. ಚೀನಾದ ಬೀಜಿಂಗಿನಲ್ಲಿ ೨೦೦೮ರಲ್ಲಿ, ಲಂಡನಿನಲ್ಲಿ ೨೦೧೨ರಲ್ಲಿ, ಈಗ ರಿಯೋದಲ್ಲಿ - ಸತತವಾಗಿ ಈ ಮೂರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ತಲಾ ಮೂರು ಚಿನ್ನ ಪದಕಗಳನ್ನು (೧೦೦ ಮೀ., ೨೦೦ ಮೀ. ಮತ್ತು ೪*೧೦೦ ಮೀ. ರಿಲೇ ಓಟಗಳಲ್ಲಿ) ಗೆದ್ದು ಚರಿತ್ರೆಯಲ್ಲೇ ಅಪ್ರತಿಮ ಓಟಗಾರನೆಂದು ಹೆಸರು ದಾಖಲಿಸಿದ.
ಅದೆಲ್ಲ ಸರಿ. ಆದರೆ ವಿವಿಧ ದೇಶಗಳು ಮತ್ತು ಕ್ರೀಡಾಪಟುಗಳು ಒಲಿಂಪಿಕ್ಸ್ ಎಂಬ ಮಹಾ ಸ್ಪರ್ಧೆಯಲ್ಲಿ ಮೇರುಗುರಿ ತಲಪುವ ಮಹತ್ವಾಕಾಂಕ್ಷೆಯ ಬೆಂಬತ್ತಿದ ಕಾರಣ ಈಗ ಏನಾಗಿದೆ? ಅದೀಗ ಹಣದ ಹೊಳೆ ಹರಿಸುವ ಉದ್ಯಮವಾಗಿದೆ. ಯುಎಸ್ಎ ದೇಶದ ಟೆಲಿವಿಷನ್ ಕಂಪೆನಿ ಎನ್ಬಿಸಿ ೨೦೧೪ರಿಂದ ೨೦೨೦ರ ವರೆಗಿನ ಒಲಿಂಪಿಕ್ಸ್-ಗಳ ಪ್ರಸಾರಕ್ಕಾಗಿ ೪.೩೮ ಬಿಲಿಯನ್ ಡಾಲರ್ ಪಾವತಿಸಲಿದೆ. ಎಲ್ಲ ವಿಜೇತರೂ ಯಾವ್ಯಾವುದೋ ಕಂಪೆನಿಗಳ ಜಾಹೀರಾತುಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ – ಕೋಟಿಕೋಟಿ ರೂಪಾಯಿ ಹಣಕ್ಕಾಗಿ. ಜೊತೆಗೆ ಒಲಿಂಪಿಕ್ಸಿನ ಕರಾಳ ಮುಖವನ್ನೂ ಗಮನಿಸಿ: ಅಂದು ಪೂರ್ವ ಜರ್ಮನಿಯಲ್ಲಿ ಸಣ್ಣ ಮಕ್ಕಳಿಗೆ ಉತ್ತೇಜಕ ಚುಚ್ಚುಮದ್ದು ನೀಡಿ ಬೆಳೆಸಿ ಪದಕಗಳನ್ನು ಬಾಚಿ ಕೊಂಡದ್ದು; ಇಂದು ರಷ್ಯಾದ ಸ್ಪರ್ಧಿಗಳು ಉತ್ತೇಜಕ ಬಳಸಿ ಸಿಕ್ಕಿಬಿದ್ದು ನಿಷೇಧಕ್ಕೆ ಒಳಗಾದದ್ದು. ಗುರಿ ತಲಪಲಿಕ್ಕಾಗಿ ಅಡ್ಡದಾರಿಯಲ್ಲಿ ಸಾಗುವುದು ಪತನದ ಉದಾಹರಣೆ. ಗುರಿ ಸಾಧನೆಯಂತೆ ಸಾಧನೆಯ ದಾರಿಯೂ ಮುಖ್ಯ, ಅಲ್ಲವೇ?  

ಗುರಿಯೇನು ಜೀವನಕೆ ಗುರಿಯರಿತು ಜೀವಿಪುದು
ಧರೆಯಿಂದ ಶಿಖರಕೇರುವುದು ಪುರುಷತನ
ಕಿರಿದರಿಂ ಹಿರಿದಾಗುವುದು ದಿನದಿನದೊಳಿನಿತನಿತು
ಪರಮಾರ್ಥ ಸಾಧನೆಯೊ – ಮರುಳ ಮುನಿಯ
ಜೀವನದ ಗುರಿಯೇನು? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತಕದಲ್ಲಿ ಮತ್ತೆ ಎತ್ತಿದ್ದಾರೆ ಮಾನ್ಯ ಡಿ.ವಿ.ಜಿ.ಯವರು. ಆ ಪ್ರಶ್ನೆಗೆ “ಗುರಿಯರಿತು ಜೀವಿಪುದು” ಎಂಬ ಉತ್ತರವನ್ನೂ ನೀಡಿದ್ದಾರೆ. ಪ್ರತಿಯೊಬ್ಬರೂ ತನ್ನ ಬದುಕಿಗೆ ಏನಾದರೂ ಉದ್ದೇಶಗಳಿವೆಯೇ? ಎಂದು ಚಿಂತನೆ ಮಾಡುವುದು ಅಗತ್ಯ. ಆಳವಾಗಿ ಮತ್ತು ಗಾಢವಾಗಿ ಚಿಂತಿಸಿ, ಆ ಉದ್ದೇಶಗಳನ್ನು ಗುರುತಿಸಿಕೊಳ್ಳುವುದೂ ಮುಖ್ಯ. ಹಾಗೆ ಗುರುತಿಸಿಕೊಂಡ ಬಳಿಕ, ಈಗಿನ ಬದುಕಿನಿಂದ (ಧರೆಯಿಂದ) ಆ ಮಹೋನ್ನತ ಬದುಕಿಗೆ (ಶಿಖರಕೆ) ಏರುವುದೇ ಸಾಧನೆ (ಪುರುಷತನ). ಇದಕ್ಕಾಗಿ ದಿನದಿನವೂ ಸಣ್ಣಪುಟ್ಟ ಸಾಧನೆಗಳ ಮೂಲಕ ಮಹತ್ತಾದ ಶ್ರೇಷ್ಠವಾದ ಗುರಿಯತ್ತ ಸಾಗುವುದೇ ಅಂತಿಮ ಗುರಿಸಾಧನೆಗೆ (ಮೋಕ್ಷಪ್ರಾಪ್ತಿಗೆ) ದಾರಿ ಎಂದು ಅವರು ವಿವರಿಸುತ್ತಾರೆ.
ಈ ವಿವರಣೆಯನ್ನು ಆಗಸ್ಟ್ ೨೦೧೬ರ ರಿಯೋ ಒಲಿಂಪಿಕ್ಸಿನಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆಗೆ ಅನ್ವಯಿಸೋಣ. ರಿಯೋ ಡಿ ಜೆನೈರೋ ಒಲಿಂಪಿಕ್ಸಿಗೆ ಭಾರತ ಕಳಿಸಿದ್ದು ೧೧೮ ಸ್ಪರ್ಧಾಳುಗಳ ತಂಡವನ್ನು. ಅವರಲ್ಲಿ ಹತ್ತು ಸ್ಪರ್ಧಿಗಳಾದರೂ ಪದಕ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಭಾರತದ ಸ್ಪರ್ಧಿಗಳು ಗಳಿಸಿದ್ದು ಎರಡು ಪದಕಗಳನ್ನು ಮಾತ್ರ. ಬ್ಯಾಡ್ಮಿಂಟನಿನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆದ್ದರೆ, ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಳು. ಇವರಿಬ್ಬರ ಬಗ್ಗೆ ಯಾರಿಗೂ ದೊಡ್ಡ ನಿರೀಕ್ಷೆ ಇರಲಿಲ್ಲ. ಆದರೆ ಅವರಿಬ್ಬರಿಗೂ ಅಗಾಧ ಆತ್ಮವಿಶ್ವಾಸವಿತ್ತು ಮತ್ತು ಪದಕ ಗೆದ್ದೇ ಗೆಲ್ಲಬೇಕೆಂಬ ಛಲವಿತ್ತು. ಪಿ.ವಿ. ಸಿಂಧುವಿನದು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಎಂತಹ ದಿಟ್ಟತನದ ಆಟ! ಒಂದೊಂದು ಪಾಯಿಂಟ್ ಗೆದ್ದಾಗಲೂ ಅವಳು ಹೊಮ್ಮಿಸುತ್ತಿದ್ದ ಘರ್ಜನೆಯೇ ಅವಳ ಅಖಂಡ ಆತ್ಮವಿಶ್ವಾಸದ ಪುರಾವೆ; ಸ್ವಪ್ರೇರಣೆಯ ದ್ಯೋತಕ.
ಹರಿಯಾಣ ರಾಜ್ಯದ ರೋಹ್ಟಕ್ ಜಿಲ್ಲೆಯ ಮೋಖ್ರಾ ಗ್ರಾಮದ ಸಾಕ್ಷಿ ಮಲಿಕ್ ಆರು ನಿಮಿಷಗಳ ಕುಸ್ತಿ ಪಂದ್ಯದಲ್ಲಿ ಕಿರ್ಗಿಸ್ತಾನದ ಸ್ಪರ್ಧಿಯ ಎದುರು ಹಿನ್ನಡೆಯಲ್ಲೇ ಇದ್ದಳು. ಕೊನೆಯ ಹತ್ತು ಸೆಕೆಂಡ್ ಉಳಿದಿತ್ತು – ಆಗ ಮಿಂಚಿನ ವೇಗದಲ್ಲಿ ತನ್ನ ನೆಚ್ಚಿನ ಪಟ್ಟು ಹಾಕಿ, ಎದುರಾಳಿಯನ್ನು ಕೆಡವಿ ಬಿಟ್ಟಳು. ಭಾರತಕ್ಕೆ ರಿಯೋ ಒಲಿಂಪಿಕ್ಸಿನ ಮೊದಲ ಪದಕ ಗೆದ್ದು ಕೊಟ್ಟಳು. ಇವರಿಬ್ಬರೂ ಕಠಿಣ ಸ್ಪರ್ಧೆಯಲ್ಲಿ ವಿಜೇತರಾಗಿ ಮಹಾನ್ ಗುರಿಸಾಧನೆ ಮಾಡಿದರು. ಜಾಗತಿಕ ಮಟ್ಟದಲ್ಲಿ ಮಾತೃಭೂಮಿಯನ್ನು ಪ್ರತಿನಿಧಿಸಿ, ತಮ್ಮ ಶಕ್ತಿಮೀರಿ ಸ್ಪರ್ಧಿಸಿ, ದೇಶಕ್ಕೆ ಗೌರವ ತರುವುದು ಮಹಾನ್ ಗುರಿಯತ್ತ ಸಾಗುವುದಕ್ಕೆ ಅಮೋಘ ಉದಾಹರಣೆ, ಅಲ್ಲವೇ?  
 

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು
ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ
ಗೋಳ್ಕರೆದೇನು ಫಲ? ಗುದ್ದಾಡಲೇನು ಫಲ?
ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ
ಬದುಕಿನಲ್ಲಿ ನೂರೆಂಟು ಎಡರುತೊಡರುಗಳುಂಟು, ಸಂಕಟಗಳುಂಟು; ಅವನ್ನು ನಾವು ಒಪ್ಪಿದರೂ (ಕೇಳ್ಕೆ) ಒಪ್ಪದಿದ್ದರೂ (ಮಾಣ್ಕೆ) ಅವು ಒಂದಿಷ್ಟೂ ಬದಲಾಗುವುದಿಲ್ಲ. ಅವೆಲ್ಲ ಅಡ್ಡಿಗಳನ್ನೂ ನೋವುಗಳನ್ನೂ ಅನುಭವಿಸಿಯೇ ತೀರಬೇಕು. “ಅಯ್ಯೋ, ಆ ಭಗವಂತ ಹೀಗೆ ಮಾಡಿದನಲ್ಲ; ನನಗೇ ಹೀಗೆ ಮಾಡಿದನಲ್ಲ” ಎಂದು ಗೋಳಾಡಿದರೆ ಪ್ರಯೋಜನವಿದೆಯೇ? ಜೀವನದಲ್ಲಿ ಎದುರಾಗುವ ತೊಡಕುಗಳೊಡನೆ, ಬೆಂಬಿಡದ ಸಂಕಟಗಳೊಡನೆ ಗುದ್ದಾಡಿದರೆ ಉಪಯೋಗವಿದೆಯೇ? ಇಲ್ಲವೆನ್ನುತ್ತಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು.
ಇತ್ತೀಚೆಗೆ ಕರ್ನಾಟಕದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಆತ್ಮಹತ್ಯಾ ಪ್ರಕರಣಗಳನ್ನು ಗಮನಿಸಿ. ಅವರಿಬ್ಬರೂ ಹಿರಿಯ ಹುದ್ದೆಯಲ್ಲಿದ್ದರು – ಅದೂ ಪೊಲೀಸ್ ಇಲಾಖೆಯಲ್ಲಿ. ಉತ್ತಮ ಶಿಕ್ಷಣ ಹಾಗೂ ತರಬೇತಿ ಪಡೆದಿದ್ದರು. ಸರಕಾರಿ ವೃತ್ತಿಯಲ್ಲಿದ್ದು, ಪತ್ನಿ ಮತ್ತು ಮಕ್ಕಳೊಂದಿಗೆ ಸಂಸಾರ ನಡೆಸಿದ್ದರು.
ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗರ ಮೇಲೆ ಬಂದ ಆಪಾದನೆ: ಕಿಡ್ನಾಪ್ ಆಗಿದ್ದ ಯುವಕನೊಬ್ಬನ ಬಿಡುಗಡೆಗಾಗಿ ಪವನ್ ಎಂಬಾತ ಪಾವತಿಸಿದ್ದ ರೂಪಾಯಿ ಹತ್ತು ಲಕ್ಷದ ಬಗ್ಗೆ. ಆ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಪತ್ನಿ ಮತ್ತು ಮಗುವಿನೊಂದಿಗೆ ಅವರು ಧಾವಿಸಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದ ಮಾವನ ಮನೆಗೆ. ಮರುದಿನ ೭ ಜುಲಾಯಿ ೨೦೧೬ರಂದು ಬೆಳಗ್ಗೆ ಅಲ್ಲೇ ನೇಣು ಹಾಕಿಕೊಂಡು ಅವರ ಆತ್ಮಹತ್ಯೆ.
ಡಿವೈಎಸ್ಪಿಯಾಗಿ ಭಡ್ತಿ ಪಡೆದು ಬೆಂಗಳೂರಿನಿಂದ ಮಂಗಳೂರಿನ ಐಜಿ ಕಚೇರಿಗೆ ವರ್ಗವಾಗಿದ್ದ ಎಂ.ಕೆ. ಗಣಪತಿ (೫೧) ಅವರು ೭ ಜುಲಾಯಿ ೨೦೧೬ರಂದು ಮಡಿಕೇರಿಗೆ ಹೋಗಿ, ವಸತಿಗೃಹದಲ್ಲಿ ರೂಂ ಮಾಡಿದ್ದರು. ಅನಂತರ ಸ್ಥಳೀಯ ಸುದ್ದಿವಾಹಿನಿಗೆ ಹೋಗಿ, ೨೦ ನಿಮಿಷಗಳ ಸಂದರ್ಶನದಲ್ಲಿ ತನಗೆ ಕಿರುಕುಳ ನೀಡುತ್ತಿರುವ ಒಬ್ಬ ಸಚಿವರ ಮತ್ತು ಇಬ್ಬರು ಮೇಲಧಿಕಾರಿಗಳ ಹೆಸರು ಬಹಿರಂಗ ಪಡಿಸಿದ್ದರು. ಬಳಿಕ ವಸತಿಗೃಹಕ್ಕೆ ಹಿಂತಿರುಗಿ ನೇಣು ಬಿಗಿದು ಅವರ ಆತ್ಮಹತ್ಯೆ. ಬದುಕಿನಲ್ಲಿ ಬಿರುಗಾಳಿ ಎದ್ದಾಗ ಹತಾಶರಾಗದೆ, ಅವನ್ನು ಹಲ್ಲು ಕಿರಿದು ತಾಳಿಕೊಳ್ಳುವುದೇ ಸರಿಯಾದ ಪ್ರತಿಕ್ರಿಯೆ ಎಂಬುದು ಈ ಮುಕ್ತಕದ ಸಂದೇಶ.

ಸವೆಯಿಪುದು ಶಿಲೆಯ ಗಾಳಿಗಳುಜ್ಜಿ ನೆಲವ ಜಲ
ಸವೆಯಿಪುದು ಜಲವ ರವಿ ಎಲ್ಲವೆಲ್ಲರನು
ಸವೆಯಿಪುದು ತನುವ ಮನಸಿನ ಕೊರಗು ಕೆಣಕುಗಳು
ಜವನು ಜಗದುಜ್ಜಿಕೆಯೊ – ಮರುಳ ಮುನಿಯ
ಈ ಭೂಮಿಯಲ್ಲಿ ಯಾವುದನ್ನು ಯಾವುದು ಸವೆಯಿಸುತ್ತಿದೆ ಎಂಬುದನ್ನು ಇದರಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ ಮಾನ್ಯ ಡಿ.ವಿ.ಗುಂಡಪ್ಪನವರು. ಶಿಲೆಗಳನ್ನು ಗಾಳಿ ಉಜ್ಜಿ ಸವೆಸಿದರೆ, ನೆಲವನ್ನು ಜಲವೇ ಸವೆಯಿಸುತ್ತದೆ. ಆ ಜಲವನ್ನು ಸವೆಯಿಸುವ (ಆವಿಯಾಗಿಸುವ) ಸೂರ್ಯನು ತನ್ನ ಶಾಖದಿಂದ ಎಲ್ಲವನ್ನೂ ಎಲ್ಲರನ್ನೂ ದಣಿಸಿ ಸವೆಯಿಸುತ್ತಾನೆ. ಇದೇ ರೀತಿಯಲ್ಲಿ ಮನುಷ್ಯನ ದೇಹವನ್ನು ಸವೆಯಿಸುವುದು ಅವನ ಮನಸ್ಸಿನ ಕೊರಗು ಮತ್ತು ಕೆಣಕುಗಳು (ಪೀಡನೆಗಳು). ಅಂತೂ ಜವರಾಯನು ಈ ಭೂಮಿಯ ಜೀವಸಂಕುಲವನ್ನು ವಿಧವಿಧವಾಗಿ ಉಜ್ಜಿ ಹಾಕುವ ಉಜ್ಜುಗಲ್ಲು ಆಗಿದ್ದಾನೆ. ಅವನೀಯುವ ಬವಣೆಗಳಿಂದ (ಉಜ್ಜುವಿಕೆಯಿಂದ) ಯಾರಿಗೂ ವಿನಾಯ್ತಿಯಿಲ್ಲ.
ಈ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕದ ಇಬ್ಬರು ಮಹಿಳಾ ಅಧಿಕಾರಿಗಳ ಇತ್ತೀಚೆಗಿನ ಆತ್ಮಹತ್ಯಾ ಪ್ರಯತ್ನದ ಪ್ರಕರಣಗಳನ್ನು ಗಮನಿಸಿ. ಒಬ್ಬರು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರೂಪಾ ತಂಬದ (೨೯). ಅವರಿಂದ ೧೯ ಜುಲಾಯಿ ೨೦೧೬ರಂದು ಮಧ್ಯಾಹ್ನ ಠಾಣೆಯಲ್ಲೇ ೨೩ ನಿದ್ರಾ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನ. ೨೦೦೯ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ರೂಪಾ ತಂಬದ ದಾವಣಗೆರೆ ಜಿಲ್ಲೆಯ ಗೋಪನಾಳ ಗ್ರಾಮದವರು. ಆ ದಿನ ಬೆಳಗ್ಗೆ, ಠಾಣೆಯ ಇನ್-ಸ್ಪೆಕ್ಟರ್ ಎರಡು ಪ್ರಕರಣಗಳ ತನಿಖೆಯನ್ನು ಸರಿಯಾಗಿ ನಡೆಸಿಲ್ಲವೆಂದು ನಿಂದಿಸಿದ್ದಕ್ಕೆ ಇದು ರೂಪಾ ಅವರ ಪ್ರತಿಕ್ರಿಯೆ. ಇನ್ನೊಬ್ಬರು ಹಾಸನದ ಹಿಮ್ಸ್ ಆಡಳಿತಾಧಿಕಾರಿ ಇ. ವಿಜಯಾ. ಇವರು ೨೧ ಜುಲಾಯಿ ೨೦೧೬ರಂದು ತಮ್ಮ ನಿವಾಸದಲ್ಲಿ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಮ್ಮ ಹುದ್ದೆಯಲ್ಲಿನ ಕಿರುಕುಳಕ್ಕೆ ಇದು ಅವರ ಪ್ರತಿಕ್ರಿಯೆ. ಯಾಕೆ ಹೀಗಾಗುತ್ತಿದೆ?
ಜವನು ಜಗದುಜ್ಜಿಕೆ ಅಂದರೆ ಜೀವನವೇ ಸಂಕಟಗಳ ಸರಣಿ. ಹುಟ್ಟಿನಿಂದ ಸಾವಿನ ತನಕ ಯಾವುದೇ ತೊಂದರೆ, ಸಮಸ್ಯೆ, ಸಂಕಟ, ಯಾತನೆ ಅನುಭವಿಸದವರು ಯಾರಿದ್ದಾರೆ? ಅವೆಲ್ಲವೂ ಅಗ್ನಿಪರೀಕ್ಷೆಗಳು. ಪ್ರತಿಯೊಂದಕ್ಕೂ ಎದೆಗೊಟ್ಟು, ಯಾತನೆಯ ಬೆಂಕಿಯಲ್ಲಿ ಬೆಂದಾಗಲೇ ಬಂಗಾರದಂತೆ ಪುಟವಾಗಲು ಸಾಧ್ಯ. ಗೆಲುವುಗಳ ಕುದುರೆ ಸವಾರಿ ಮಾಡಲು ಯಾವುದೇ ಮಾನಸಿಕ ಸಿದ್ದತೆ ಬೇಕಾಗಿಲ್ಲ. ಆದರೆ ಸೋಲುಗಳ ಸೋಪಾನ ಏರಲು ಆಳವಾದ ಮಾನಸಿಕ ತಯಾರಿ ಬೇಕು. ಹಾಗೆ ನಾವು ಸಜ್ಜಾದರೆ, ಯಾವುದೇ ಜವನುಜ್ಜಿಕೆಗೆ ಎದೆಗೊಡಲು ಸಾಧ್ಯ, ಅಲ್ಲವೇ?
 

ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ
ಕಳೆವುವದರಲಿ ನಮ್ಮ ಜನುಮಜನುಮಗಳು
ಗೆಲವಾರ್ಗೊ! ಸೋಲಾರ್ಗೊ! ಲೆಕ್ಕ ನೋಡುವುದೆಂದೊ!
ಪಲವು ಬರಿಯಾಟವೆಲೊ - ಮಂಕುತಿಮ್ಮ
ಈ ಜಗತ್ತಿನ ಆಟ ಮೊದಲು ಕೊನೆಯಿಲ್ಲದ ಆಟ. ಅದು ಯಾವತ್ತೂ ನಿಲ್ಲುವುದಿಲ್ಲ; ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅದರಲ್ಲಿ ಕಳೆಯುತ್ತವೆ ನಮ್ಮ ಜನುಮಜನುಮಗಳು ಎಂಬ ಸರಳಸತ್ಯವನ್ನು ಈ ಮುಕ್ತಕದಲ್ಲಿ ತಿಳಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪ. ಅದೇ ಚಿಂತನಾ ಸರಣಿ ಮುಂದುವರಿಸುತ್ತಾ ಮೂರು ಮೂಲಭೂತ ಪ್ರಶ್ನೆ ಎತ್ತುತ್ತಾರೆ. ಈ ಆಟದಲ್ಲಿ ಗೆಲುವು ಯಾರಿಗೆ? ಸೋಲು ಯಾರಿಗೆ? ಈ ಸೋಲುಗೆಲುವಿನ ಲೆಕ್ಕ ನೋಡುವುದು ಯಾವಾಗ?
ಈ ಜಗತ್ತನ್ನೇ ಗೆದ್ದು ತಮ್ಮ ಸಾಮ್ರಾಜ್ಯ ಸ್ಥಾಪಿಸುತ್ತೇವೆ ಎಂಬ ದುರಹಂಕಾರಿಗಳು ಎರಡು ಜಾಗತಿಕ ಯುದ್ಧ ನಡೆಸಿದರು: ೧೯೧೪-೧೮ರಲ್ಲಿ ಮೊದಲನೆಯ ಮತ್ತು ೧೯೩೯-೪೫ರಲ್ಲಿ ಎರಡನೆಯ ಜಾಗತಿಕ ಯುದ್ದ. ಕೊನೆಗೆ ಗೆಲುವು ಯಾರಿಗೆ? ಸೋಲು ಯಾರಿಗೆ? ಎಂದು ಯೋಚಿಸಿದರೆ ದಿಕ್ಕೆಟ್ಟು ಹೋಗುತ್ತೇವೆ. ಈ ಯುದ್ಧಗಳಿಂದಾಗಿ ಆದದ್ದೇನು? ಲಕ್ಷಗಟ್ಟಲೆ ಸೈನಿಕರ ಹಾಗೂ ಅಸಹಾಯಕ ಜನರ ಕಗ್ಗೊಲೆ. ಕೋಟಿಗಟ್ಟಲೆ ರೂಪಾಯಿ ಬೆಲೆಬಾಳುವ ಸೊತ್ತು ನಾಶ. ಅಸಂಖ್ಯ ಕುಟುಂಬಗಳು ದಿಕ್ಕಾಪಾಲು. ದೇಶದೇಶಗಳ ಜನಜೀವನ ವರುಷಗಟ್ಟಲೆ ಅಲ್ಲೋಲ ಕಲ್ಲೋಲ. ಜಾಗತಿಕ ಯುದ್ಧ ಆರಂಭಿಸಿದ ಮತಿಗೆಟ್ಟ ನಾಯಕರು ಸಾಧಿಸಿದ್ದೇನು? ಇದು ಎಂದಿಗೂ ಉತ್ತರಿಸಲಾಗದ ಪ್ರಶ್ನೆ.
ನಮ್ಮ ದೇಶದ ಚರಿತ್ರೆಯನ್ನೇ ಗಮನಿಸಿದರೆ…. ೧೫ ಆಗಸ್ಟ್ ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದ ಬಳಿದ ಸುಮಾರು ಆರು ದಶಕಗಳ ಕಾಲ ಒಂದೇ ರಾಜಕೀಯ ಪಕ್ಷ ಆಡಳಿತ ಸೂತ್ರ ಹಿಡಿದಿತ್ತು. ಈ ದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅವಕಾಶಗಳನ್ನು ಸುಧಾರಿಸುವುದರಲ್ಲಿ ಮತ್ತೆಮತ್ತೆ ಎಡವಿತು. ಕೊನೆಗೆ, ೨೦೧೪ರ ಮಹಾಚುನಾವಣೆಯಲ್ಲಿ ಹೇಳಹೆಸರಿಲ್ಲದಂತೆ ಸೋತಿತು. ಆ ಪಕ್ಷ, ಆ ಸೋಲಿನಿಂದ ಪಾಠ ಕಲಿಯಿತೇ? ಈಗ ಕೆಲವೇ ರಾಜ್ಯಗಳಲ್ಲಿ ಆಡಳಿತದ ಗದ್ದುಗೆ ಏರಿರುವ ಆ ಪಕ್ಷ ಕರ್ನಾಟಕದಲ್ಲಿ ಏನು ಮಾಡುತ್ತಿದೆ? ಮೇ ೨೦೧೮ರಲ್ಲಿ ಜರಗಿದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ೩೭ ಮತಕ್ಷೇತ್ರಗಳಲ್ಲಿ ಗೆದ್ದ ಇನ್ನೊಂದು ರಾಜಕೀಯ ಪಕ್ಷದ ಜೊತೆ ಸೇರಿ ಸರಕಾರ ರಚಿಸಿ, ಅಧಿಕಾರದ ಗದ್ದುಗೆ ಏರಿದೆ. ಆ ಇನ್ನೊಂದು ಪಕ್ಷದ ಅಭ್ಯರ್ಥಿಗಳು ೧೧೯ ಕ್ಷೇತ್ರಗಳಲ್ಲಿ ಇಡುಗಂಟನ್ನೇ ಕಳೆದುಕೊಂಡಿದ್ದರು! ಅಂದರೆ, ಆ ಇನ್ನೊಂದು ರಾಜಕೀಯ ಪಕ್ಷವನ್ನು ಮತದಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಅಧಿಕಾರದ ಲಾಲಸೆಗಾಗಿ ಅಂತಹ ರಾಜಕೀಯ ಪಕ್ಷದೊಂದಿಗೆ ಕೈಜೋಡಿಸುವುದೆಂದರೆ…. ಜನಪರ ಆಡಳಿತ ನೀಡುವ ಬದಲಾಗಿ ಇಂತಹ ಸರ್ಕಸ್ ನಡೆದಿದೆ. ಅದಕ್ಕಾಗಿಯೇ ಡಿವಿಜಿಯವರು ಹೇಳುತ್ತಾರೆ: ಅಂತಿಮವಾಗಿ, ಈ ಜಗತ್ತಿನಲ್ಲಿ ಆಟ ಆಡಿದ್ದೇ ಫಲ.

ಅಂದಿನಂದಂದಿಗದು ಮುಂದೆ ಸಾಗುವ ಲೀಲೆ
ಸಂಧಾನಗಳನೆಲ್ಲ ಮೀರ್ದುದಾ ಲೀಲೆ
ಅಂದಂದಿಗಂದಂದು ಬಂದಿಹುದು ಕರ್ತವ್ಯ
ಸಂದುದನು ನಿರ್ವಹಿಸು – ಮರುಳ ಮುನಿಯ
ಈ ಜಗತ್ತಿನ ಆಟವಿದೆಯಲ್ಲ, ಅದು ಅಂದಿನದು ಅಂದಿಗೆ ಮುಗಿದು, ಮುಂದೆ ಸಾಗುತ್ತಿರುವ ಲೀಲೆ. ಇದು ಎಲ್ಲ ಹೊಂದಾಣಿಕೆಗಳನ್ನೂ ಮೀರಿದ ಲೀಲೆ ಎಂದು ಜಗತ್ತಿನ ವಿದ್ಯಮಾನಗಳನ್ನು ಇದರಲ್ಲಿ ವಿವರಿಸಿದ್ದಾರೆ ಮಾನ್ಯ ಡಿ.ವಿ.ಜಿ.
ಮನುಷ್ಯ ಈ ಜಗತ್ತಿನ ಎಲ್ಲವೂ ನನ್ನ ಕೈಯಲ್ಲಿದೆ ಅಂದುಕೊಳ್ಳುತ್ತಾನೆ. ಅಷ್ಟರಲ್ಲಿ ಅವನ ಬೇರುಗಳನ್ನೇ ಅಲುಗಾಡಿಸುವ ಘಟನೆ ನಡೆಯುತ್ತದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಸಾಧನೆ ಗಮನಿಸಿ: ಒಂದೇ ವಾಹಕದ ಮೂಲಕ ೨೦೦೮ರಲ್ಲಿ ೧೦ ಉಪಗ್ರಹಗಳನ್ನು, ೨೨ ಜೂನ್ ೨೦೧೬ರಂದು ೨೦ ಉಪಗ್ರಹಗಳನ್ನು, ೧೫ ಫೆಬ್ರವರಿ ೨೦೧೭ರಂದು ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ೧೦೪ ಉಪಗ್ರಹಗಳನ್ನು ಒಟ್ಟಾಗಿ ಬಾಹ್ಯಾಕಾಶಕ್ಕೆ ಉಡಾಯಿಸಿದೆ. ಇದು ಮಹಾಸಾಧನೆ. ಆದರೆ, ಈ ವರುಷದ ಮಳೆ ಎಷ್ಟು? ಮುಂದಿನ ಭೂಕಂಪ, ಸುನಾಮಿ ಅಥವಾ ಬಿರುಗಾಳಿ ಯಾವಾಗ? ಎಲ್ಲಿ? ಇವನ್ನೆಲ್ಲ ತಿಳಿಯಲಾಗದ ಅಸಹಾಯಕ ಸ್ಥಿತಿ ನಮ್ಮದು.
ಇಂತಹ ಪರಿಸ್ಥಿತಿಯಲ್ಲಿ ಮನುಷ್ಯ ಏನು ಮಾಡಬೇಕು? ಎಂಬ ಪ್ರಶ್ನೆ ಎತ್ತಿ, ಅದಕ್ಕೆ ಸರಳ ಉತ್ತರವನ್ನೂ ಈ ಮುಕ್ತಕದಲ್ಲಿ ನೀಡಿದ್ದಾರೆ ಡಿ.ವಿ.ಜಿ.ಯವರು. ಅಂದಂದಿಗೆ ನೀನು ಮಾಡಲೇ ಬೇಕಾದ ಕೆಲಸಗಳು ಎದುರಾಗುತ್ತವೆ. ನಿನ್ನ ಪಾಲಿಗೆ ಬಂದ ಆ ಕೆಲಸಗಳ ನಿರ್ವಹಣೆಯೇ ನಿನ್ನ ಕರ್ತವ್ಯ. ಇದನ್ನು (ಸಂದುದನು) ನಿರ್ವಹಿಸು ಎಂಬುದವರ ಸಂದೇಶ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಮಹಾನ್ ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿ ಇಡಬೇಕಾದ ಸಂಸ್ಥೆ. ಇದರ ಈಗಿನ ಗವರ್ನರ್ ರಘುರಾಮ ರಾಜನ್. ಜಗತ್ತಿನ ಹಲವು ದೇಶಗಳ ಆರ್ಥಿಕತೆ ಮುಗ್ಗರಿಸಿದ ಕಳೆದ ಮೂರು ವರುಷಗಳಲ್ಲಿ ಭಾರತದ ಆರ್ಥಿಕತೆಯನ್ನು ಸಮರ್ಥವಾಗಿ ನಿಭಾಯಿಸಿದ ಖ್ಯಾತಿ ಅವರದು. ಆದರೂ, ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಅಪಸ್ವರಗಳು ಎದ್ದವು. ಅವರು ಬಡ್ಡಿದರಗಳನ್ನು ಇಳಿಸಬೇಕೆಂದು ಒತ್ತಾಯಿಸುವವರು ಅದರ ದೂರಗಾಮಿ ಪರಿಣಾಮಗಳನ್ನು ಪರಿಗಣಿಸಿದ್ದಾರೆಯೇ? ಆದರೆ, ರಘುರಾಮ ರಾಜನ್ ಹುದ್ದೆಗೆ ಅಂಟಿಕೊಳ್ಳುವ ವ್ಯಕ್ತಿಯಲ್ಲ. ತನ್ನ ಅವಧಿ ಮುಗಿದಾಗ (ಸಪ್ಟಂಬರ್ ೨೦೧೬ರಲ್ಲಿ) ತಾನು ನಿರ್ಗಮಿಸುತ್ತೇನೆ, ತನ್ನ ಮೆಚ್ಚಿನ ಶಿಕ್ಷಣರಂಗಕ್ಕೆ ಮರಳುತ್ತೇನೆ ಎಂದು ವಿದಾಯಪತ್ರ ಬರೆದು, ನುಡಿದಂತೆ ನಡೆದ ಧೀಮಂತ. ಡಿ.ವಿ.ಜಿ.ಯವರ ಸಂದೇಶದಂತೆ, ತನ್ನ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ ಧನ್ಯತೆ ಅವರಿಗಿದೆ, ಅಲ್ಲವೇ?
 

ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ
ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು
ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ
ಮುಗಿಲವೊಲು ದೈವಕೃಪೆ - ಮಂಕುತಿಮ್ಮ
ಬಿರುಬೇಸಗೆಯಲ್ಲಿ ಏನಾಗುತ್ತದೆ? ಆಕಾಶವು ಬೆಂಕಿಬಲೆಯಾಗಿ ಭೂಮಿಗೆ ಬಿಸಿಯಾದ ಮುಸುಕು (ಗವಸು) ಹಾಕಿದಂತೆ ಆವರಿಸಿಕೊಳ್ಳುತ್ತದೆ. ಕೆರೆಗಳು ಒಣಗಿ, ಕುಂಬಾರನು ಮಡಕೆ ಸುಡುವ ಒಲೆ(ಆವಿಗೆ)ಯಂತೆ ಬಿಸಿಲಿಗೆ ಬಿಸಿಬಿಸಿಯಾಗುತ್ತವೆ. ಜಗತ್ತಿನಲ್ಲಿ ಜನರು ಉಸಿರಾಡುವ ಗಾಳಿಯೆಲ್ಲ ಬೆಂಕಿಯ ಹೊಗೆಯಾಗಿ ಧಗಧಗಿಸುತ್ತದೆ.
ಇಂತಹ ರಣಬಿಸಿಲಿನ ದಾರುಣ ಬೇಸಗೆಯ ರಾತ್ರಿಯಲ್ಲಿ ಎಲ್ಲಿಂದಲೋ ಹುಟ್ಟಿ (ಒಗೆದು) ಬರುವ ಮುಗಿಲು ಮಳೆ ಸುರಿಸಿ ಭೂಮಿಗೆ ತಂಪೆರೆಯುತ್ತದೆ. ದೈವಕೃಪೆ ಎಂಬುದು ಆ ಮುಗಿಲಿನಂತೆ, ನಾವು ಕಷ್ಟಕಾರ್ಪಣ್ಯದಿಂದ ಬಸವಳಿದಾಗ ಬದುಕಿನಲ್ಲಿ ನೆರವಾಗಿ ತಂಪಾಗಿಸುತ್ತದೆ ಎಂದು ಮನಮುಟ್ಟುವಂತೆ ವಿವರಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಈ ವರುಷದ ಬೇಸಗೆ ಭರತಖಂಡವನ್ನೇ ಬೆಂಕಿಯಂತೆ ಬೇಯಿಸಿದೆ. ಮೈಸೂರು, ಬೀದರ್, ಗುಲ್ಬರ್ಗ ಇತ್ಯಾದಿ ನಗರಗಳಲ್ಲಿ ಕಳೆದ ಶತಮಾನದಲ್ಲೇ ಅತ್ಯಧಿಕ ಉಷ್ಣತೆ ೨೦೧೬ರಲ್ಲಿ ದಾಖಲಾಗಿದೆ. ಬಾವಿ, ಕೆರೆ, ಕೊಳ, ತೊರೆ, ನದಿ, ಸರೋವರ, ಜಲಾಶಯಗಳೆಲ್ಲ ನೀರಿಲ್ಲದೆ ಬತ್ತಿ ಹೋಗಿವೆ. ಕರ್ನಾಟಕದ ಒಂದು ಸಾವಿರ ಹಳ್ಳಿಗಳಿಗೆ ಟ್ಯಾಂಕರುಗಳಲ್ಲಿ ಕುಡಿಯುವ ನೀರಿನ ಸರಬರಾಜು. ಒಂದು ಕೊಡ ನೀರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಅಸಹಾಯಕ ಪರಿಸ್ಥಿತಿ.
ಅರಬೀ ಸಮುದ್ರದ ತೀರದಲ್ಲಿರುವ ಮಂಗಳೂರು ಜಗತ್ತಿನಲ್ಲೇ ಅತ್ಯಧಿಕ ಮಳೆ ಬೀಳುವ ನಗರಗಳಲ್ಲಿ ಒಂದು. ಇಲ್ಲಿಯೂ ಮೇ ೨೦೧೬ರಲ್ಲಿ ಐದು ದಿನಕ್ಕೊಮ್ಮೆ ನಳ್ಳಿಯಲ್ಲಿ ನೀರು ಸರಬರಾಜು. ದೈವಕೃಪೆಯಿಂದಾಗಿ ಮೇ ೧೫ ಮತ್ತು ಮೇ ೧೭ರಂದು ಭಾರೀ ಮಳೆ ಸುರಿದ ಕಾರಣ ಬಚಾವ್. ಆದರೆ, ದೇವರನ್ನೇ ನಂಬಿ ಕೂತರೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆಯೇ? ಮನುಷ್ಯ ಪ್ರಯತ್ನ ಮಾಡುವುದು ಪ್ರತಿಯೊಬ್ಬನ ಕರ್ತವ್ಯ. ಮನೆಯ ಚಾವಣಿ ಮೇಲೆ ಬೀಳುವ ಮಳೆನೀರನ್ನು ಪ್ರತಿ ಮನೆಯವರೂ ಕೊಯ್ಲು ಮಾಡಬೇಕು – ಮನೆಬಳಕೆಗಾಗಿ ಮತ್ತು ನೆಲದಾಳಕ್ಕೆ ಇಂಗಿಸಲಿಕ್ಕಾಗಿ. ಪ್ರತಿಯೊಬ್ಬ ರೈತರೂ ತಮ್ಮ ಜಮೀನಿನಲ್ಲಿ ಕೃಷಿಹೊಂಡ ಮಾಡಿ ನೀರಿಂಗಿಸ ಬೇಕು. ಬೃಹತ್ ಪ್ರಮಾಣದ ನೀರು ಬೇಕಾದ ಕೈಗಾರಿಕೆಗಳು (ಮಳೆಗಾಲದ ನಂತರ) ನೀರಿಗಾಗಿ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ದೇವರು ಕೃಪೆದೋರಿ ಸಕಾಲದಲ್ಲಿ ಮಳೆ ಬಂದೀತು.

ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು
ಸೇರಿ ಕೆರೆ ಹಳೆಯುಳಿಕೆ ಊರಿಗುಪಯೋಗ
ಮೂರುಣಿಸು ನಿನಗಂ ನಿಜಾರ್ಜಿತಂ ಸೃಷ್ಟ್ಯಂಶ
ಪ್ರಾರಬ್ದವೀ ತ್ರಿತಯ – ಮರುಳ ಮುನಿಯ
ಈ ಭೂಮಿಯ ಸಕಲ ಜೀವಸಂಕುಲಕ್ಕೆ ನೀರು ಎಲ್ಲಿಂದ ಸಿಗುತ್ತದೆ? ಎಂಬ ಪ್ರಶ್ನೆಗೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರ ಉತ್ತರ ಮಾರ್ಮಿಕ. ಭೂಮಿಯ ಜೀವಿಗಳಿಗೆ ಮೂರು ರೀತಿಯಲ್ಲಿ ನೀರು ಸಿಗುತ್ತದೆ ಎನ್ನುತ್ತಾರೆ ಅವರು. ಆಕಾಶದಿಂದ ಬೀಳುವ ಮಳೆ ಮತ್ತು ನೆಲದಾಳದಿಂದ ಜಿನುಗುವ ಒಸರು ಅಥವಾ ಚಿಲುಮೆ (ಊಟೆ). ಇವೆರಡು ಜೊತೆಯಾಗಿ ಹರಿದು ಹೋಗಿ ಕೆರೆಗಳಲ್ಲಿರುವ ಹಳೆಯ ನೀರನ್ನು ಸೇರಿಕೊಂಡು ಊರಿನ ಬಳಕೆಗೆ ಲಭ್ಯ.
ಅದೇ ರೀತಿಯಲ್ಲಿ, ಮನುಷ್ಯನಿಗೆ ಮೂರು ರೀತಿಯಲ್ಲಿ ಸಂಪತ್ತು ಒಲಿದು ಬರುತ್ತದೆ. ಕಾಯಕದಿಂದ ಗಳಿಸಿದ ಸಂಪತ್ತು, ಕುಟುಂಬದ ಸದಸ್ಯನಾಗಿ ಪಡೆಯುವ ನಿಶ್ಚಿತವಾದ ಸಂಪತ್ತಿನ ಪಾಲು (ಸೃಷ್ಟಿ ಅಂಶ) ಮತ್ತು ವಿಧಿ ದಯಪಾಲಿಸುವ ಸಂಪತ್ತು (ಅಂದರೆ ಯಾವುದೇ ಪ್ರಯತ್ನವಿಲ್ಲದೆ ಕೈಸೇರುವ ಸಂಪತ್ತು).
ಇದರಿಂದ ನಾವು ತಿಳಿಯಬೇಕಾದ್ದು ಏನು? ಸಂಪತ್ತನ್ನು ಹೇಗೆ ಜೋಪಾನ ಮಾಡಬೇಕೋ ನೀರನ್ನೂ ಹಾಗೆಯೇ ಜೋಪಾನ ಮಾಡಬೇಕು. ಯಾವುದೇ ಸಂಪತ್ತನ್ನು (ಜಮೀನು, ಚಿನ್ನ, ಮನೆ, ಹಣ ಇತ್ಯಾದಿ) ಸೃಷ್ಟಿ ಮಾಡಬಹುದು. ಆದರೆ ನೀರನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಈ ಎಚ್ಚರ ನಮ್ಮಲ್ಲಿ ಇದೆಯೇ? ಈಗಾಗಲೇ ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ಕೊಳವೆಬಾವಿ ಕೊರೆಯಲಾಗಿದೆ. ಈಗ ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲಿ ೧,೦೦೦ ಅಡಿಗಿಂತ ಆಳದ, ಕೊಯಂಬತ್ತೂರಿನಲ್ಲಿ ೧,೫೦೦ ಅಡಿಗಿಂತ ಆಳದ ಕೊಳವೆಬಾವಿಗಳು! ಪ್ರತಿ ನೂರು ಹೊಸ ಕೊಳವೆಬಾವಿಗಳಲ್ಲಿ ೫೦ಕ್ಕಿಂತ ಹೆಚ್ಚಿನದರಲ್ಲಿ ನೀರೇ ಸಿಕ್ಕುವುದಿಲ್ಲ. ಇನ್ನುಳಿದ ಕೊಳವೆಬಾವಿಗಳು ೨-೩ ವರುಷಗಳಲ್ಲಿ ಬತ್ತಿ ಹೋಗುತ್ತವೆ. ಹಾಗಿರುವಾಗ, ನಾವು ಸಾಧಿಸಿದ್ದೇನು? ಮುಂದಿನ ತಲೆಮಾರುಗಳ ಸೊತ್ತಾದ ಜೀವಜಲದ ಕೊಳ್ಳೆ. (ನೆನಪಿರಲಿ: ಐವತ್ತು ವರುಷಗಳ ಮುಂಚೆ ಕೊಳವೆಬಾವಿಗಳು ಇರಲೇ ಇಲ್ಲ.) ಆಯಾ ಪ್ರದೇಶದಲ್ಲಿ ಬೀಳುವ ಮಳೆ ನೀರಿಗೆ ಅನುಗುಣವಾದ ಬೆಳೆಗಳನ್ನು ಮಾತ್ರ ಬೆಳೆದಿದ್ದರೆ, ಈ ಅನಾಹುತ ತಪ್ಪಿಸಬಹುದಾಗಿತ್ತು.
ಸಂಪತ್ತನ್ನು ಖರ್ಚು ಮಾಡುತ್ತಾ ಹೋದರೆ, ಒಂದು ದಿನ ಅದು ಮುಗಿದೇ ಹೋಗುತ್ತದೆ. ಖರ್ಚು ಮಾಡಿದಷ್ಟನ್ನು ಪುನಃ ಮೂಲಸಂಪತ್ತಿಗೆ ಸೇರಿಸಿದರೆ ಮುಂದಿನ ತಲೆಮಾರಿಗೆ ಉಳಿದೀತು. ನೀರೂ ಹಾಗೆಯೇ. ಆದ್ದರಿಂದ, ತಾನು ಖರ್ಚು ಮಾಡಿದ ನೀರನ್ನು ನೆಲದಾಳಕ್ಕೆ ಮರುಪೂರಣ ಮಾಡುವ ಎಚ್ಚರ ಪ್ರತಿಯೊಬ್ಬರಲ್ಲಿಯೂ ಮೂಡಲಿ.  
 

ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು
ನೆಲೆಯೆಲ್ಲಿ ನಿದ್ದೆಗೆಲೊ - ಮಂಕುತಿಮ್ಮ
ನಮ್ಮ ತಲೆಯೊಳಗೆ ತುಂಬಿರುವ ಯೋಚನೆಗಳನ್ನು ಹಕ್ಕಿಗಳಿಗೆ ಹೋಲಿಸುತ್ತಾ, ಮುಖ್ಯವಾದ ಪ್ರಶ್ನೆಯೊಂದನ್ನು ಈ ಮುಕ್ತಕದಲ್ಲಿ ಎತ್ತುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಗಿಳಿ, ಗೂಗೆ, ಕಾಗೆ, ಕೋಗಿಲೆ, ಹದ್ದು, ನವಿಲು ಇತ್ಯಾದಿ ಪಕ್ಷಿಗಳಿರುವಂತೆ, ನಮ್ಮ ತಲೆಯೊಳಗೆ ವಿಧವಿಧ ಯೋಚನೆಗಳು ತುಂಬಿ ತುಳುಕಾಡುತ್ತಿವೆ. ಕೆಲವು ಹಕ್ಕಿಗಳ ಸ್ವರ ಕಿಲಕಿಲವೆಂದು ಇಂಪಾಗಿದ್ದರೆ, ಇನ್ನು ಕೆಲವು ಹಕ್ಕಿಗಳ ಸ್ವರ ಗೊರಗೊರನೆ ಕರ್ಕಶ. ಹಾಗೆಯೇ ಕೆಲವು ಯೋಚನೆಗಳು ಹಿತಕರವಾಗಿದ್ದರೆ, ಇನ್ನು ಕೆಲವು ಯೋಚನೆಗಳು ಸಂಕಟದಾಯಕ.
ಹೀಗಿರುವಾಗ, ಮಲಗಿದರೆ ನಿದ್ದೆ ಬಂದೀತೇ (ನಿದ್ದೆಗೆ ನೆಲೆಯೆಲ್ಲಿ)? ಎಂಬುದೇ ಮುಖ್ಯವಾದ ಪ್ರಶ್ನೆ. ಮನದೊಳಗೆ ನಿರಂತರವಾಗಿ ಯೋಚನೆಗಳು ಹುಟ್ಟುತ್ತಿರಬೇಕಾದರೆ, ಅವುಗಳ ತಾಕಲಾಟದಿಂದಾಗಿ ನೆಮ್ಮದಿಯೇ ಇಲ್ಲವಾಗುತ್ತದೆ.
ನಮ್ಮ ಮನಸ್ಸಿನೊಳಗೆ ಏನಾಗುತ್ತಿದೆ ಎಂದು ತಿಳಿಯಬೇಕಾದರೆ ಕಣ್ಣು ಮುಚ್ಚಿಕೊಂಡು ಆರಾಮವಾಗಿ ಕುಳಿತುಕೊಳ್ಳ ಬೇಕು. ಬಹುಪಾಲು ಜನರು ಹೀಗೆ ಕೂರಲು ತಯಾರಿಲ್ಲ. ಯಾಕೆಂದರೆ, ಕಣ್ಣು ಮುಚ್ಚಿದೊಡನೆ ನಮ್ಮ ಮನಸ್ಸಿಗೆ ಕನ್ನಡಿ ಹಿಡಿದಂತಾಗುತ್ತದೆ. ಕೆಟ್ಟ ಯೋಚನೆಗಳ ಸಹಿತ ನಮ್ಮ ಎಲ್ಲ ಯೋಚನೆಗಳು ಧುತ್ತೆಂದು ನಮಗೆ ಎದುರಾಗುತ್ತವೆ. ಇವನ್ನೆಲ್ಲ ಎದುರಿಸುವುದು ಸುಲಭವಲ್ಲ. ಒಂದು ಕ್ಷಣ ಯೋಚಿಸಿ – ನಿಮ್ಮೆದುರು ನಿಂತ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಹುಟ್ಟುವ ಎಲ್ಲ ಯೋಚನೆಗಳನ್ನು ಅವರಿಗೆ ಬಾಯಿಬಿಟ್ಟು ಹೇಳಲಿಕ್ಕಾಗುತ್ತದೆಯೇ?
ನಮ್ಮ ಯೋಚನೆಗಳ ವೇಗ ಮತ್ತು ವಿವಿಧತೆ ನಮ್ಮನ್ನು ದಿಕ್ಕುಗೆಡಿಸುತ್ತದೆ, ಅಲ್ಲವೇ? ನಾವು ಕಣ್ಣುಮುಚ್ಚಿ ಕುಳಿತಾಗ, ಅಲ್ಲಿಂದಲೇ ಮುಂಬೈಗೆ, ಲಂಡನಿಗೆ, ಚಂದ್ರಲೋಕಕ್ಕೆ ಮತ್ತೆ ಮಂಗಳಗ್ರಹಕ್ಕೆ ಮನೋವೇಗದಲ್ಲಿ ಪಯಣಿಸಿ, ಕ್ಷಣದೊಳಗೆ ವಾಪಾಸು ಬರಬಹುದು. ಈ ವೇಗ ಯಾತಕ್ಕೆ? ಇದರಿಂದಾಗಿ ಮನಸ್ಸಿನ ಉದ್ವೇಗ ಹೆಚ್ಚುತ್ತದೆ. ಹಾಗೆಯೇ, ಕಣ್ಣುಮುಚ್ಚಿ ಕೂತಾಗ ಚಿಮ್ಮಿ ಬರುವ ಯೋಚನೆಗಳ ವೈವಿಧ್ಯ ಗಮನಿಸಿ: ಬಾಲ್ಯದ, ಶಾಲೆಯ, ಹೈಸ್ಕೂಲಿನ, ಕಾಲೇಜಿನ ನೆನಪುಗಳು, ಹೆತ್ತವರ ಮಮಕಾರ, ಮುಂದಿನ ಬದುಕಿನ ಚಿಂತೆಗಳು, ಭಯಗಳು ನಮ್ಮನ್ನು ಅಲುಗಾಡಿಸುತ್ತವೆ. ಇದರಿಂದ ಪಾರಾಗಬೇಕಾದರೆ, ಮನಸ್ಸನ್ನು ಶಾಂತವಾಗಿಸಬೇಕು. ಆಗ ಮಲಗಿದೊಡನೆ ನಿದ್ದೆ. ಬದುಕು ಬಂಗಾರ.

ತನುರುಜೆಯ ವಿಷ ಕರಗಿ ಬಣ್ಣ ಬಣ್ಣದಿ ಪರಿಯೆ
ಗುಣವಪ್ಪುದೌಷಧಕೆ ಕಾಲವನುವಾಗೆ
ಮನದ ರುಜಿನವುಮಂತು ಕರಗಿ ಹೊರಹರಿಯದಿರೆ
ತಣಿವೆಂತು ಜೀವಕ್ಕೆ – ಮರುಳ ಮುನಿಯ
ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ಎತ್ತುವ ಸರಳ ಪ್ರಶ್ನೆ: “ನಮ್ಮ ಜೀವಕ್ಕೆ ತಣಿವೆಂತು?” ಈ ಪ್ರಶ್ನೆಯ ಹಿನ್ನೆಲೆ ಮಾರ್ಮಿಕವಾಗಿದೆ. ನಮ್ಮ ಶರೀರದ ಕಾಯಿಲೆ (ರುಜೆ) ವಾಸಿಯಾಗ ಬೇಕಾದರೆ ಏನಾಗಬೇಕು? ಎಂಬುದನ್ನು ಮೊದಲ ಎರಡು ಸಾಲುಗಳಲ್ಲಿ ವಿವರಿಸಿದ್ದಾರೆ. ಆ ರೋಗದ ವಿಷ ಕರಗಿ, ಬಣ್ಣಬಣ್ಣದ ಕಫ – ಮಲ – ಮೂತ್ರ – ಬೆವರಿನ ರೂಪದಲ್ಲಿ ದೇಹದಿಂದ ಹೊರಕ್ಕೆ ಹರಿಯಬೇಕು. ಜೊತೆಗೆ ಔಷಧ ಸೇವಿಸುತ್ತಿದ್ದರೆ, ಕಾಲ ಕೂಡಿ ಬಂದಾಗ (ಅಂದರೆ ಕೆಲವು ದಿನಗಳಲ್ಲಿ) ಕಾಯಿಲೆ ಗುಣವಾಗುತ್ತದೆ.
ಹಾಗೆಯೇ, ಮನಸ್ಸಿನ ಕಾಯಿಲೆ(ರುಜಿನ)ಯ ವಿಷವೂ ಕರಗಿ ಹೊರಕ್ಕೆ ಹರಿದು ಹೋಗಬೇಕು. ಅದು ಒಳಗೇ ಉಳಿದರೆ, ಮನವನ್ನೆಲ್ಲ ವ್ಯಾಪಿಸುವ ಹಾಲಾಹಲವಾಗುತ್ತದೆ. ಅದರಿಂದಾಗಿ ಯಾರಿಗೂ ಯಾವತ್ತೂ ನೆಮ್ಮದಿ ಸಿಗುವುದಿಲ್ಲ.
ಮನಸ್ಸಿನ ಕಾಯಿಲೆಗಳು ಯಾವುವು? ಅವನ್ನು ಗುಣ ಪಡಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ನಾವು ನಮ್ಮನ್ನೇ ಗಮನಿಸಬೇಕು. ನಮ್ಮ ಭಾವನೆ ಮತ್ತು ವರ್ತನೆಗಳನ್ನು ಗುರುತಿಸುತ್ತಾ, ನಮ್ಮ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು. ಯಾವುದೇ ಸನ್ನಿವೇಶದಲ್ಲಿ ನಾವು ಹೇಗೆ ವರ್ತಿಸುತ್ತೇವೆ ಮತ್ತು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಅರಿತು ಕೊಂಡರೆ, ನಮ್ಮ ಮನಸ್ಸಿನ ಏರುಪೇರುಗಳನ್ನು ಸಂಭಾಳಿಸಲು ಸಾಧ್ಯ. ಉದಾಹರಣೆಗೆ, ದುಃಖ. ಆತ್ಮೀಯರ ಸಾವು, ಶಾಲಾ ಪರೀಕ್ಷೆಯಲ್ಲಿ ಫೈಲ್, ಪ್ರಯತ್ನಕ್ಕೆ ಸೋಲು, ಉದ್ಯೋಗ ಕಳೆದುಕೊಳ್ಳುವುದು, ವ್ಯವಹಾರದಲ್ಲಿ ನಷ್ಟ – ಇವೆಲ್ಲ ದುಃಖದ ಘಟನೆಗಳು. ಆದರೆ ಇಂತಹ ಬಹುಪಾಲು ಘಟನೆಗಳು ನಮ್ಮ ನಿಯಂತ್ರಣದಲ್ಲಿಲ್ಲ. ಹಾಗಾಗಿ, ದುಃಖಿಸಿ ಫಲವಿಲ್ಲ. ಆದಷ್ಟು ಬೇಗನೇ ದುಃಖದ ಮನಸ್ಥಿತಿಯಿಂದ ಹೊರಬರಬೇಕು. ಕೋಪದ ಬಗ್ಗೆಯೂ ನಾವು ತಿಳಿಯಬೇಕಾದ್ದು ಏನೆಂದರೆ, “ನನಗೆ ಕೋಪ ಬರುವುದಲ್ಲ”; ಬದಲಾಗಿ “ನಾನು ಕೋಪ ಮಾಡಿಕೊಳ್ಳುವುದು”. ಇದನ್ನು ಒಪ್ಪಿಕೊಂಡರೆ, ನಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯ. ಭಯ ಆದಾಗಲೂ ಅದರ ಕಾರಣದ ಪತ್ತೆ ಮಾಡಿದರೆ, ಭಯವನ್ನು ನಿಗ್ರಹಿಸಲು ಸಾಧ್ಯ. ತಪ್ಪು ತಿಳಿವಳಿಕೆ ಹಾಗೂ ಅನಿಶ್ಚಿತತೆಯಿಂದ ಹುಟ್ಟುವ ಭಯಕ್ಕೆ ಅರ್ಥವೇ ಇಲ್ಲ. ದ್ವೇಷ ಮತ್ತು ಮತ್ಸರ ಭಾವವಂತೂ ನಮ್ಮನ್ನೇ ಸುಟ್ಟು ಹಾಕುತ್ತದೆ. ಯಾರಿಗೋ ತೊಂದರೆ ನೀಡಿ, ಯಾರನ್ನೋ ನಾಶ ಮಾಡಿ ನಾವು ಸಾಧಿಸುವುದು ಏನೂ ಇಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನಮ್ಮನ್ನು, ಪರರನ್ನು ಮತ್ತು ನಡೆಯುವ ಸಂಗತಿಗಳನ್ನು ಇದ್ದಂತೆಯೇ ಸ್ವೀಕರಿಸಬೇಕು. ಆಗ, ನಮ್ಮ ಜೀವಕ್ಕೆ ತಣಿವು, ಅಲ್ಲವೇ?
 

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು
ಗುರುತಿಸೊಳಿತಿರುವುದನು ಕೇಡುಗಳ ನಡುವೆ
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯೆಲೊ – ಮಂಕುತಿಮ್ಮ
ಕೆಲವರದು ಬದುಕಿನಲ್ಲಿ ಭಾರೀ ಲೆಕ್ಕಾಚಾರ – ತಮ್ಮ ಕೈಗೆ ಬಾರದಿರುವುದರ ಬಗ್ಗೆ. ಈ ಲೆಕ್ಕಾಚಾರದಲ್ಲಿ ನಿನ್ನ ಕೈಗೆ ಬಂದಿರುವುದನ್ನು ಮರೆಯಬೇಡ ಎಂದು ಎಚ್ಚರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಒಂದು ಸಂಸ್ಥೆಯಲ್ಲಿ ಗುಮಾಸ್ತನಾದವನಿಗೆ ಅಧಿಕಾರಿಯಾಗಲಿಲ್ಲವೆಂಬ ಚಿಂತೆ. ಅಧಿಕಾರಿಯಾದವನಿಗೆ ಭಡ್ತಿ ಸಿಗಲಿಲ್ಲ; ಮೇಲಧಿಕಾರಿ ಆಗಲಿಲ್ಲ ಎಂಬ ವ್ಯಸನ. ಮೇಲಧಿಕಾರಿಯಾದವನಿಗೆ ಚೇರ್ಮನ್ ಆಗಲಿಲ್ಲ ಎಂಬ ಚಿಂತೆ! ಇವರೆಲ್ಲರೂ ತಮಗೊಂದು ಉದ್ಯೋಗವಿದೆ; ಪ್ರತಿ ತಿಂಗಳೂ ಸಂಬಳ ಸಿಗುತ್ತದೆ ಎಂಬುದನ್ನು ಮರೆತೇ ಬಿಡುತ್ತಾರೆ. ಮಂಗಳೂರಿನಲ್ಲಿ ಇತ್ತೀಚೆಗೆ ಒಂದು ಪೆಟ್ರೋಲ್ ಬಂಕನ್ನು ಮುಚ್ಚಲಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರನ್ನು ಕೇಳಿದೆ, “ಮುಂದೇನು?” ಅವರ ಉತ್ತರ, “ಬೇರೆ ಕಡೆ ಕೆಲಸ ಹುಡುಕಬೇಕು.” ಮುಂಬೈಯ ಹತ್ತಾರು ಬಟ್ಟೆ ಗಿರಣಿಗಳು ಮುಚ್ಚಿದಾಗ, ಅಲ್ಲಿನ ಸಾವಿರಾರು ಕೆಲಸಗಾರರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದರು. ಇವರ ಪಾಡೇನು?
ಹಾಗೆಯೇ, ಸಣ್ಣ ಕಾರಿನ ಮಾಲೀಕರಿಗೆ ದೊಡ್ಡ ಕಾರು ಖರೀದಿಸಲಾಗುತ್ತಿಲ್ಲ ಎಂಬ ಚಿಂತೆ! ಸಣ್ಣ ಕಾರನ್ನೂ ತಗೊಳ್ಳಲಾಗಲಿಲ್ಲ ಎಂಬ ವೇದನೆ ದ್ವಿಚಕ್ರ ವಾಹನಗಳ ಮಾಲೀಕರಿಗೆ. ಇವರೆಲ್ಲರೂ ತಮಗೊಂದು ವಾಹನ ಇದೆಯೆಂಬುದನ್ನೇ ಗಮನಿಸುವುದಿಲ್ಲ. ಅಂತೆಯೇ, ಸಣ್ಣ ಮನೆಯ ಮಾಲೀಕರಿಗೆ ದೊಡ್ಡ ಮನೆಯ ಒಡೆಯರಾಗದ ಚಿಂತೆ! ಈ ಜಗತ್ತಿನಲ್ಲಿ ಲಕ್ಷಲಕ್ಷ ಜನರಿಗೆ ಸ್ವಂತ ಮನೆಯೇ ಎಲ್ಲ ಎಂಬ ಸತ್ಯ ಅವರಿಗೆ ಕಾಣಿಸುವುದೇ ಇಲ್ಲ. ಒಂದು ಚಿನ್ನದ ಚೈನು, ಎರಡು ಚಿನ್ನದ ಬಳೆ ಇರುವವರಿಗೆ, ಮೈತುಂಬ ಬಂಗಾರದೊಡವೆ ಧರಿಸಲಾಗಲಿಲ್ಲವೆಂಬ ಚಿಂತೆ!
ನಮಗೆ ಎದುರಾಗುವ ಕೇಡುಗಳ ಬಗ್ಗೆಯೂ ಇಂತಹದೇ ಮನಸ್ಥಿತಿ. “ಬೇರೆಯವರೆಲ್ಲ ಸುಖಸಂತೋಷದಲ್ಲಿದ್ದಾರೆ; ನನಗೆ ಮಾತ್ರ ಬೆನ್ನುಬೆನ್ನಿಗೆ ಸಂಕಟ” ಎಂಬ ಚಿಂತೆ! ನಮಗೆ ಬಂದಿರುವ ಹತ್ತು ಕೆಡುಕುಗಳ ನಡುವೆ ಒಂದಾದರೂ ಒಳಿತಿಗೆ ಕಾರಣವಾಗಿದೆಯೇ? ಎಂದು ಪರಿಶೀಲಿಸಲು ತಯಾರಿಲ್ಲ. ಹಲವು ವಿಕಲಚೇತನರ ಹೆತ್ತವರು ಆ ಮಕ್ಕಳಿಂದಾಗಿ ತಾವು ತಾಳ್ಮೆ ಕಲಿತದ್ದನ್ನು ನೆನೆಯುತ್ತಾರೆ. ಇದುವೇ ಕೇಡುಗಳ ನಡುವಿನ ಒಳಿತು, ಅಲ್ಲವೇ? ಆದ್ದರಿಂದ, ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡಬೇಕು. ನಮ್ಮ ಬದುಕಿನಲ್ಲಿ ಹರುಷಕ್ಕೆ ಇದೇ ದಾರಿ.

ಸಿರಿಯೇಕೊ ಸೌಖ್ಯಕ್ಕೆ? ಅರುಣಂಗೆ ಬಾಡಿಗೆಯೆ?
ಧರೆಯ ದಿನದಿನದ ಬಣ್ಣಗಳಿಗೇಂ ಬೆಲೆಯೆ?
ಹರುಷವಂಗಡಿ ಸರಕೆ? ಹೃದಯದೊಳಚಿಲುಮೆಯದು
ಸರಸತೆಯೆ ಸಿರಿತನವೊ – ಮರುಳ ಮುನಿಯ
ಖುಷಿಯಿಂದಿರುವುದಕ್ಕೆ ಸಂಪತ್ತು ಬೇಕೇ? ಎಂಬ ಪ್ರಶ್ನೆಯ ಮೂಲಕ ನಮ್ಮ ಚಿಂತನಾ ಲಹರಿಗೆ ಚುರುಕು ಮುಟ್ಟಿಸುತ್ತಾರೆ ಮಾನ್ಯ ಡಿ.ವಿ.ಜಿ.ಯವರು.
ಬೇಡವೇ ಬೇಡ. ಸೂರ್ಯನ ಹೊಂಗಿರಣಗಳಿಗೆ ಬಾಡಿಗೆ ಕೊಡಬೇಕೇ? ಭೂಮಿಯಲ್ಲಿ ದಿನದಿನವೂ ಕಾಣಿಸುವ ಬಣ್ಣಗಳಿಗೆ ಹಣ ತೆರಬೇಕೇ? ಸಾವಿರಾರು ಹೂಗಳ ಸಾವಿರಸಾವಿರ ಬಣ್ಣಗಳು, ಎಲೆಗಳ ಭಿನ್ನಭಿನ್ನ ಬಣ್ಣಗಳು, ಸೂರ್ಯ ಮೂಡುವಾಗ ಮತ್ತು ಮುಳುಗುವಾಗ ಆಕಾಶದಲ್ಲಿ ಎದ್ದು ಬರುವ ಚಿತ್ತಾರಗಳ ಬಣ್ಣಗಳು, ವಿವಿಧ ಹಕ್ಕಿಗಳ ಪುಕ್ಕಗಳ ವಿಸ್ಮಯ ಬಣ್ಣಗಳು – ಇವನ್ನೆಲ್ಲ ಕಾಣುತ್ತ ಸಂತೋಷ ಪಡಲು ಕಾಸು ಕೊಡಬೇಕಾಗಿಲ್ಲ.
ಯಾಕೆಂದರೆ, ಹರುಷವೆಂಬುದು ಅಂಗಡಿಯಲ್ಲಿ ಮಾರಾಟಕ್ಕಿರುವ ಸರಕಲ್ಲ. ಹರುಷವೆಂಬುದು ಹೃದಯದ ಒಳಗಿನ ಚಿಲುಮೆ. ನಾವು ಹೆಚ್ಚೆಚ್ಚು ನೀರು ನುಗ್ಗಿಸಿದರೆ, ಆ ಕಾರಂಜಿ ಹೆಚ್ಚೆಚ್ಚು ಎತ್ತರಕ್ಕೆ ಪುಟಿಯುತ್ತದೆ.
ಮೊಗ್ಗೊಂದು ಹೂವಾಗಿ ಅರಳುವುದನ್ನು, ಚಿಗುರೊಂದು ಎಲೆಗೊಂಚಲಾಗಿ ನಳನಳಿಸುವುದನ್ನು, ಹಸುರು ಎಲೆಗಳನ್ನು ಹೊದ್ದ ಮರದ ತುಂಬ ಧಿಗ್ಗನೆ ಹೂಗೊಂಚಲುಗಳು ತುಂಬುವುದನ್ನು, ಒದ್ದೆ ಮಣ್ಣಿನಲ್ಲಿ ಬಿದ್ದ ಬೀಜವೊಂದು ಚಿಗುರಿ ತಲೆಯೆತ್ತುವುದನ್ನು, ಹಕ್ಕಿಗೂಡಿನಲ್ಲಿರುವ ಮೊಟ್ಟೆಗಳಿಂದ ಪುಟ್ಟಪುಟ್ಟ ಮರಿಗಳು ಜೀವ ತಳೆದು ಚಿಂವ್-ಚಿಂವ್ ಸದ್ದು ಮಾಡುವುದನ್ನು, ಗಗನದಲ್ಲಿ ಮುಗಿಲುಗಳ ಚಿತ್ತಾರಗಳನ್ನು, ಹಕ್ಕಿಗಳ ಹಾರುಹಾದಿಯ ವಿನ್ಯಾಸಗಳನ್ನು, ಜೇನ್ನೊಣಗಳ ನರ್ತನವನ್ನು, ಚಿಟ್ಟೆಗಳ ನಾಟ್ಯವನ್ನು ತದೇಕ ಚಿತ್ತದಿಂದ ಕಂಡಿದ್ದೀರಾ? ಇವೆಲ್ಲದರ ಚೈತನ್ಯ ಕಾಣುತ್ತಾ ರೋಮಾಂಚನ ಅನುಭವಿಸಿದ್ದೀರಾ? ಅದುವೇ ಪ್ರಕೃತಿಯ ಸಂಭ್ರಮಗಳಿಗೆ ಸ್ಪಂದಿಸುವ ನಿಮ್ಮ ಹೃದಯದ ಒಳಚಿಲುಮೆ.
ಸಂತೋಷ ಪಡಲಿಕ್ಕಾಗಿ ನಾವು ಹಬ್ಬಗಳಿಗಾಗಿ, ಜಾತ್ರೆಗಳಿಗಾಗಿ ಕಾಯಬೇಕಾಗಿಲ್ಲ. ಸಣ್ಣಪುಟ್ಟ ಸಂಗತಿಗಳಲ್ಲೂ ಹರುಷದ ಸೆಲೆ ಕಾಣಲು ಕಲಿತರೆ, ನಮಗೆ ದಿನದಿನವೂ ಹಬ್ಬ. ಬಿಸಿಲಿಗೆ ನಡೆದು ಬಂದು ಬೆವರೊರೆಸುತ್ತ ಕುಡಿಯುವ ಬೆಲ್ಲ-ನೀರಿನಲ್ಲಿ, ಚಳಿಗಾಲದ ಮುಂಜಾನೆ ಮೈಗೆ ಸುರಿದುಕೊಳ್ಳುವ ಉಗುರು ಬೆಚ್ಚಗಿನ ನೀರಿನಲ್ಲಿ, ದೂರದೂರಿನಿಂದ ಹಸಿದು ಮನೆಗೆ ಬಂದಾಗ ಊಟದ ಬಟ್ಟಲಿನಲ್ಲಿ ಚಪ್ಪರಿಸುವ ಗಂಜಿ-ಚಟ್ನಿಯಲ್ಲಿ ಎಂತಹ ಸುಖವಿದೆ! ಇವನ್ನೆಲ್ಲ ಸವಿಯುವ ಸರಸತೆಯೇ ಸಿರಿತನ.
 

ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ?
ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ
ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು
ವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ
“ಅದು ಒಳ್ಳೆಯದು, ಇದು ಕೆಟ್ಟದು ಎಂಬ ಹಟ ನಿನಗೇಕೆ?” ಎಂಬ ಸರಳ ಪ್ರಶ್ನೆಯ ಮೂಲಕ ದೊಡ್ಡ ಸತ್ಯವೊಂದನ್ನು ಈ ಮುಕ್ತಕದಲ್ಲಿ ವಿವರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ದೈವ ಎಲ್ಲದಕ್ಕೂ ಒಂದು ತೆರೆಯನ್ನು ಹೊದಿಸಿರುತ್ತದೆ. ಆ ತೆರೆ ಸರಿದಾಗ ವಿಧಿಯ ಉದ್ದೇಶ ತಿಳಿದೀತು – ವಿಷದ (ನಂಜು) ಬಟ್ಟಲಿನಲ್ಲಿ ಅಮೃತದ (ಸೊದೆಯ) ಪರಿಮಳ ಕಂಡುಬಂದಂತೆ – ಎಂದು ತಿಳಿಸುತ್ತಾರೆ ಅವರು.
ಕೆಲವು ಹೆತ್ತವರು ಮನೆಯ ಹತ್ತಿರದ ಶಾಲೆಗಳೆಲ್ಲ ಕೆಟ್ಟವು ಎಂದು ತೀರ್ಮಾನಿಸಿ, ಯಾವುದೋ ದೂರದ ಶಾಲೆಗೆ ಮಗುವನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸುತ್ತಾರೆ. ಇದರಿಂದಾಗಿ, ದಿನಕ್ಕೆ ಎರಡು-ಮೂರು ತಾಸು ಆ ಶಾಲೆಗೆ ಹೋಗಿ ಬರಲಿಕ್ಕಾಗಿ ಪ್ರಯಾಣಿಸುವ ಮಗು ದಣಿದು ಬಂದು ಚೆನ್ನಾಗಿ ಕಲಿಯಲಿಕ್ಕಿಲ್ಲ. ಅಲ್ಲಿನ ಹತ್ತಿರದ ಶಾಲೆಗೆ ಹೋಗಿ ಬರುವ ಇತರ ಮಕ್ಕಳು ಆ ಹೊತ್ತಿನಲ್ಲಿ ಚೆನ್ನಾಗಿ ಓದಿಕೊಂಡು ಒಳ್ಳೆಯ ಅಂಕ ಗಳಿಸುತ್ತಾರೆ. ಹಾಗಾದರೆ, ಯಾವ ಶಾಲೆ ಒಳ್ಳೆಯದು, ಯಾವುದು ಕೆಟ್ಟದು?
ಕೆಲವು ಯುವಕ – ಯುವತಿಯರು ತಮಗೆ ವೈದ್ಯಕೀಯ ಶಿಕ್ಷಣವೇ ಬೇಕು ಅಥವಾ ಇಂಜಿನಿಯರಿಂಗ್ ಶಿಕ್ಷಣವೇ ಬೇಕು; ಇದೇ ಒಳ್ಳೆಯದು, ಉಳಿದದ್ದೆಲ್ಲ ಕೆಟ್ಟದು ಎಂಬ ಹಟಕ್ಕೆ ಬೀಳುತ್ತಾರೆ. ಈಗ ವಿದ್ಯಾರ್ಥಿಗಳಿಗೆ ಕಲಿಕೆಗೆ ಎರಡು ಸಾವಿರಕ್ಕಿಂತ ಜಾಸ್ತಿ ಕೋರ್ಸುಗಳು ಲಭ್ಯ. ಯಾವುದೇ ಕೋರ್ಸ್ ಕಲಿತರೂ ಸಂಬಳದ ಉದ್ಯೋಗಕ್ಕೆ ಅಥವಾ ಸ್ವಂತ ಉದ್ಯೋಗಕ್ಕೆ ಅವಕಾಶವಿದೆ. ಬಿ.ಕಾಂ. ಕಲಿತಿರುವ ಗಗನ್ ರಾಜ್, ಯಾವುದೇ ಉದ್ಯೋಗಕ್ಕೆ ಸೇರಿಕೊಳ್ಳಲಿಲ್ಲ; ಶ್ರೀರಂಗ ಪಟ್ಟಣದಲ್ಲಿ ನಾಟಿ ಕೋಳಿ ಫಾರ್ಮ್ ಶುರು ಮಾಡಿ ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ. ಮಾತ್ರವಲ್ಲ, ಹಲವರಿಗೆ ಉದ್ಯೋಗ ನೀಡಿದ್ದಾರೆ. ಆದ್ದರಿಂದ, ನಮ್ಮ ಆಸಕ್ತಿಗೆ ಹೊಂದುವ ಯಾವುದೇ ಕೋರ್ಸಿಗೆ ಸೇರಿ ಚೆನ್ನಾಗಿ ಕಲಿಯುವುದೇ ಒಳ್ಳೆಯದು, ಅಲ್ಲವೇ?
ಇನ್ನು ಕೆಲವರಿದ್ದಾರೆ. ತಾನು ಪ್ರೇಮಿಸಿದವಳನ್ನೇ ಅಥವಾ ಪ್ರೀತಿಸಿದವನನ್ನೇ ಮದುವೆಯಾಗಬೇಕೆಂಬ ಹಟಕ್ಕೆ ಬೀಳುವವರು. ಪ್ರಿಯತಮೆ ಅಥವಾ ಪ್ರಿಯಕರ ತನ್ನನ್ನು ಪ್ರೀತಿಸುತ್ತಿದ್ದಾರೆಯೇ ಎಂದು ಇವರು ಯೋಚಿಸುವುದೇ ಇಲ್ಲ. ಕುರುಡು ಪ್ರೀತಿಯಿಂದ ಮದುವೆಯಾದವರು ಕೆಲವೇ ತಿಂಗಳುಗಳಲ್ಲಿ ವಿವಾಹ – ವಿಚ್ಛೇದನಕ್ಕೆ ಅರ್ಜಿ ಹಾಕುವುದನ್ನು ಕಂಡರೂ ಇವರು ಪಾಠ ಕಲಿಯುವುದಿಲ್ಲ. ನಾವೊಂದು ಬಗೆದರೆ, ವಿಧಿ ಇನ್ನೊಂದು ಬಗೆಯುತ್ತದೆ, ಅಲ್ಲವೇ?

ಎಲೆ ಹಸಿರು ಹೂ ಬಿಳ್ಪು ಜಾಜಿಯೊಂದರೊಳೆಂತು
ಹುಳಿಸಿಹಿಗಳೊಂದೆ ಮಾವಿನ ಕಾಯೊಳೆಂತು
ಒಳಿತು ಕೆಡುಕಂತು ಮಾಯಾಯಂತ್ರವೊಂದರಿನೆ
ನೆಲವೊಂದು ಬೆಳೆ ಹಲವು – ಮರುಳ ಮುನಿಯ
ಜಾಜಿ ಹೂವಿನ ಬಳ್ಳಿಯಲ್ಲಿ ಎಲೆ ಹಸಿರು, ಹೂ ಬಿಳಿ, ಇದೆಂತು? ಹಾಗೆಯೇ, ಮಾವು ಕಾಯಾಗಿದ್ದಾಗ ಹುಳಿ, ಹಣ್ಣಾದಾಗ ಸಿಹಿ, ಇದು ಹೇಗೆ? ಎಂಬ ಪ್ರಶ್ನೆಗಳ ಮೂಲಕ ಪ್ರಕೃತಿಯ ವೈಚಿತ್ರ್ಯಗಳನ್ನು ಎತ್ತಿ ತೋರಿಸುತ್ತಾ, ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ, ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರು. ಈ ಭೂಮಿಯಲ್ಲಿರುವುದು ಒಂದೇ ನೆಲ. ಆದರೆ ಅದರಲ್ಲಿ ಬೆಳೆಯುವ ಬೆಳೆ ಹಲವು: ಭತ್ತ, ಗೋಧಿ, ರಾಗಿ, ಸಿರಿಧಾನ್ಯಗಳು, ತರಕಾರಿಗಳು, ಹಣ್ಣುಗಳು, ಹೂಗಳು ಇತ್ಯಾದಿ. ಹಾಗೆಯೇ, ಒಂದೇ ಮಾಯಾಯಂತ್ರದಿಂದ ಒಳಿತು ಮತ್ತು ಕೆಡುಕು ಮೂಡಿ ಬರುತ್ತಿವೆ ಎಂದು ವಿವರಿಸುತ್ತಾರೆ.
ಅದೇ ಮಳೆ – ಜಗದ ಜೀವಿಗಳನ್ನೆಲ್ಲ ಬದುಕಿಸುವ ಜೀವಜಲ ಧಾರೆ ಎರೆಯುತ್ತದೆ. ಆದರೆ ಅದು ಅತಿಯಾದರೆ….. ಕೇದಾರನಾಥದಲ್ಲಿ, ಶ್ರೀನಗರದಲ್ಲಿ, ೨೦೧೫ರ ಡಿಸೆಂಬರಿನಲ್ಲಿ ಚೆನ್ನೈಯಲ್ಲಿ ಆದಂತೆ ಜೀವನಾಶಕ್ಕೆ ಕಾರಣ.
ಒಂದೇ ಅಣುಶಕ್ತಿ – ಅದರಿಂದ ವಿದ್ಯುತ್ ಉತ್ಪಾದಿಸಿದರೆ ಜನಜೀವನಕ್ಕೆ ಒಳಿತು. ಆದರೆ ವಿನಾಶಕ್ಕೆ ಬಳಸಿದರೆ….. ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಅಣುಬಾಂಬ್ ಎಸೆದಾಗ ಆದಂತೆ, ಲಕ್ಷಗಟ್ಟಲೆ ಜನರ ಸಾವು; ಸೊತ್ತು ನಾಶ ಮತ್ತು ದಶಕಗಳ ಕಾಲ ವಿಕಿರಣದ ಅಪಾಯ. ರಷ್ಯಾದ ಚೆರ್ನೊಬಿಲ್ನಲ್ಲಿ ಆದಂತೆ ಅಣುಶಕ್ತಿಯ ಅವಘಡ ಆದರೆ, ಸುತ್ತಲಿನ ಇನ್ನೂರು ಕಿಮೀ ಪ್ರದೇಶದಲ್ಲಿ ವಿಕಿರಣದಿಂದ ಸರ್ವನಾಶ.
ವಾಹನಗಳು, ವಿಮಾನಗಳು, ಮೊಬೈಲ್ ಫೋನುಗಳು, ಸ್ಮಾರ್ಟ್ ಫೋನುಗಳು, ಕಂಪ್ಯೂಟರುಗಳು, ಇಂಟರ್ನೆಟ್ – ಇವೆಲ್ಲ ತಂತ್ರಜ್ನಾನದಿಂದ ಒಳಿತೂ ಇದೆ, ಕೆಡುಕೂ ಇದೆ. ವಾಹನಗಳ ವೇಗ ಮಿತಿ ಮೀರಿದರೆ ಕಾದಿರುತ್ತದೆ ಅಪಘಾತ. ಮೊಬೈಲ್ ಮತ್ತು ಇಂಟರ್ನೆಟ್ ಮೂಲಕ ವದಂತಿ, ಪ್ರಚೋದನಕಾರಿ ಹೇಳಿಕೆ, ತಿರುಚಿದ ಚಿತ್ರಗಳನ್ನು ಪ್ರಚಾರ ಮಾಡಿದರೆ ತೊಂದರೆ ಖಂಡಿತ. ಆನ್-ಲೈನ್ ವ್ಯವಹಾರದಿಂದ ಸಾವಿರಾರು ಜನರಿಗೆ ಒಂದೇಟಿಗೆ ಮೋಸವಾದೀತು. ಭಾರೀ ವೇಗದ ವಿಮಾನವೊಂದು ದುರುಳನೊಬ್ಬನ ಕೈಗೆ ಸಿಕ್ಕರೆ ನ್ಯೂಯಾರ್ಕಿನಲ್ಲಿ ಆದಂತೆ, ಗಗನಚುಂಬಿ ಕಟ್ಟಡ ಧ್ವಂಸ ಮಾಡುವ ಸಾಧನವಾದೀತು. ಆದ್ದರಿಂದ ಒಳಿತು, ಕೆಡುಕುಗಳ ಬಗ್ಗೆ ನಿರಂತರ ಚಿಂತನೆ, ವಿವೇಚನೆ ಅಗತ್ಯ.
 

ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ
ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ
ಹೀನಮಾವುದುವಿಲ್ಲ ಜಗದ ಗುಡಿಯೂಳಿಗದೆ
ತಾಣ ನಿನಗಿಹುದಿಲ್ಲಿ - ಮಂಕುತಿಮ್ಮ
“ಏನಾದರೂ ಕೆಲಸ ಮಾಡುತ್ತಿರು; ಸೋಮಾರಿಯಾಗಿ ಕೂತಿರಬೇಡ. ನಿನ್ನ ಕೈಗೆ ಸಿಕ್ಕಿದ ಯಾವುದೇ ಕೆಲಸವನ್ನಾದರೂ ಮಾಡು” ಎಂಬ ಸಾರ್ವಕಾಲಿಕ ಸಂದೇಶದೊಂದಿಗೆ ಈ ಮುಕ್ತಕವನ್ನು ಆರಂಭಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಕೆಲವರು ಪದವಿ ಮುಗಿಸಿದ ಬಳಿಕ, ಸ್ನಾತಕೋತ್ತರ ಪದವಿ ಮಾಡಬೇಕೆಂದು ಬಯಸುತ್ತಾರೆ, ಆದರೆ, ತಮಗೆ ಬೇಕಾದ ವಿಷಯದಲ್ಲಿ ಅಥವಾ ತಮಗೆ ಬೇಕಾದ ಕಾಲೇಜಿನಲ್ಲಿ ಪ್ರವೇಶ ಸಿಗಲಿಲ್ಲ ಎಂಬ ಕಾರಣಕ್ಕಾಗಿ, (ಪದವಿಯ ಅಂತರ) ಒಂದು ವರುಷ ವೃಥಾ ಕಾಲಹರಣ ಮಾಡುತ್ತಾರೆ. ಬದುಕಿನ ಅತ್ಯಮೂಲ್ಯ ಒಂದು ವರುಷವನ್ನೇ ಹೀಗೆ ಹಾಳು ಮಾಡುತ್ತಾರೆ. ಅದರ ಬದಲಾಗಿ, ತಾವು ಬಯಸಿದ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ವಿಷಯದಲ್ಲಿ ಸ್ನಾತಕೋತ್ತರ ಕಲಿಕೆ ಸಾಧ್ಯವಿಲ್ಲವೇ? ಅಥವಾ ಇನ್ನೊಂದು ಕಾಲೇಜಿನಲ್ಲಿ ಅಧ್ಯಯನ ಮುಂದುವರಿಸಲಾಗದೇ?
“ನಾನೇನು ಹುಲುಕಡ್ಡಿ, ನನ್ನಿಂದ ಏನಾದೀತು ಎಂಬ ಮಾತು ಬೇಡ.” ಇಂತಹ ನಕಾರಾತ್ಮಕ ಭಾವನೆಯಿಂದ ಬದುಕಿನಲ್ಲಿ ಏನನ್ನೂ ಸಾಧಿಸಲಾಗದು ಎಂಬುದು ಮಾನ್ಯ ಡಿವಿಜಿಯವರ ಇನ್ನೊಂದು ಸಂದೇಶ. ೧೯೮೦ರಲ್ಲಿ ಮಂಗಳೂರಿನಲ್ಲಿ “ಬಳಕೆದಾರರ ವೇದಿಕೆ” ಆರಂಭಿಸಿದಾಗಿನಿಂದ ಮೂರು ಸಾವಿರದಷ್ಟು ಪ್ರಕರಣಗಳಲ್ಲಿ ನೊಂದವರಿಗೆ ಮಾರ್ಗದರ್ಶನ ನೀಡಿದ ಸಮಾಧಾನ ನನಗಿದೆ. ನನ್ನಿಂದೇನಾದೀತು ಎಂದು ಕೈಚೆಲ್ಲಿ ಕೂತಿದ್ದರೆ ಇದಾಗುತ್ತಿತ್ತೇ?
ಈ ಜಗತ್ತು ಒಂದು ಗುಡಿ; ಇದರ ಸೇವೆ(ಊಳಿಗ)ಯಲ್ಲಿ ಯಾವುದೂ ಹೀನವಲ್ಲ; ಎಲ್ಲ ಕೆಲಸವೂ ಉತ್ತಮ ಎನ್ನುತ್ತಾರೆ ಡಿ.ವಿ. ಗುಂಡಪ್ಪನವರು. ಕೆಲಸದಲ್ಲಿ ಮೇಲು-ಕೀಳು ಎಂಬುದು ನಮ್ಮ ಭಾವನೆ, ಅಷ್ಟೇ. ಮನೆಯಿರಲಿ, ಕಚೇರಿಯಿರಲಿ, ಕಾರ್ಖಾನೆಯಿರಲಿ, ಸಂಸ್ಥೆಯಿರಲಿ ಅಲ್ಲಿ ಎಲ್ಲ ಕೆಲಸವೂ ಉತ್ತಮ ಹಾಗೂ ಅವಶ್ಯ. ಅಧಿಕಾರಿಗಳ ಕೆಲಸ ಮೇಲು; ಕಾರಕೂನರ, ಗುಮಾಸ್ತರ, ಸಹಾಯಕರ, ಕೂಲಿಗಳ, ಶುಚಿ ಮಾಡುವವರ ಕೆಲಸ ಕೀಳು ಎಂಬ ಭಾವವೇ ಸರಿಯಲ್ಲ.
ಯಾಕೆಂದರೆ, ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಥಾನ(ತಾಣ)ವಿದೆ; ಅದರೊಂದಿಗೆ ಜವಾಬ್ದಾರಿಯೂ ಇದೆ. ಅದನ್ನು ತಿಳಿದುಕೊಂಡು, ಮನೆಯಲ್ಲಿ, ಕಚೇರಿಯಲ್ಲಿ, ಕಾರ್ಖಾನೆಯಲ್ಲಿ, ಸಂಸ್ಥೆಯಲ್ಲಿ ಪ್ರತಿಯೊಬ್ಬರೂ ತನ್ನ ಹೊಣೆ ಹೊತ್ತರೆ ಜಗತ್ತಿನಲ್ಲಿ ಎಲ್ಲವೂ ಸುಗಮ, ಅಲ್ಲವೇ?

ದುಡಿ ಲೋಕದಲಿ ಮರುಳೆ ದುಡಿದೊಡಲ ಸವೆಯಿಸೈ
ಒಡಲು ಸವೆದಂತೆ ಮನದಲಗು ಸವೆಯುವುದು
ಸಡಗರವು ಕುಗ್ಗುತಿರೆ ಬುದ್ಧಿ ಕಳೆಯೇರುವುದು
ಬೆಡಗುವಡೆಯುವುದಾತ್ಮ – ಮರುಳ ಮುನಿಯ
“ಮರುಳೆ, ದುಡಿ ಲೋಕದಲಿ; ದುಡಿದೊಡಲ ಸವಿಯಿಸೈ.” ಇದು, ಮುಂಚಿನ ಮುಕ್ತದದಲ್ಲಿ ನೀಡಿದ ಸಂದೇಶಕ್ಕೆ ಪೂರಕವಾಗಿ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರು ನೀಡುವ ಸಂದೇಶ.
ಲೋಕದಲ್ಲಿ ಈ ದೇಹ (ಒಡಲು) ಸವೆಯುವಂತೆ ದುಡಿ ಮರುಳೇ ಎಂಬುದವರ ಹಿತನುಡಿ. ಯಾಕೆಂದರೆ, ಒಡಲು ಸವೆದಂತೆ ನಮ್ಮ ಮನಸ್ಸೆಂಬ ಕತ್ತಿಯ ಹರಿತವೂ ಸವೆಯುತ್ತದೆ. ಹಾಗೆ ಮಾಡದಿದ್ದರೆ ನಾವು ಆಗಾಗ ಮನಸ್ಸಿನ ಏರುಪೇರುಗಳಿಗೆ ಒಳಗಾಗುತ್ತೇವೆ. ಆವೇಶದಿಂದ ವರ್ತಿಸುತ್ತೇವೆ; ಉದ್ವೇಗಕ್ಕೆ ಬಲಿಯಾಗುತ್ತೇವೆ. ನಮ್ಮ ಒಡಲು ಸವೆಯುವಂತೆ ದುಡಿಯದಿರುವುದೇ ಈ ಜಗತ್ತಿನ ಹಲವು ಅನಾಹುತಗಳಿಗೆ ಕಾರಣ ಅನಿಸುತ್ತದೆ.
ಮನೆಯ ಕೆಲಸಗಳನ್ನೇ ಗಮನಿಸಿ. ದಶಕಗಳ ಮುಂಚೆ ಬಾವಿಯಿಂದ ನೀರು ಸೇದಿ, ಮನೆಗೆ ತರುವುದು. ಬಟ್ಟೆ ಹಾಗೂ ಉಡುಪು ಕೈಗಳಿಂದ ಒಗೆಯುವುದು,ಅಡುಗೆಗಾಗಿ ಅರೆಯುವ ಕಲ್ಲಿನಿಂದ ಅರೆಯುವುದು, ಧಾನ್ಯ ಬೀಸಿ ಹಿಟ್ಟು ಮಾಡುವುದು – ಇವೆಲ್ಲ ಕೆಲಸಗಳಿದ್ದವು. ಈಗ ಇಂಥ ಕೆಲಸಗಳನ್ನು ಯಂತ್ರಗಳಿಂದ ಮಾಡಲಾಗುತ್ತಿದೆ.
ತಂತ್ರಜ್ನಾನವಂತೂ ಹಲವು ಕೆಲಸಗಳನ್ನು ಸುಲಭವಾಗಿಸಿದೆ; ವೇಗವಾಗಿಸಿದೆ. ಮುಂಚೆ ಬಸ್, ರೈಲ್, ವಿಮಾನ ಟಿಕೆಟ್ ಕಾದಿರಿಸಲು ಗಂಟೆಗಟ್ಟಲೆ ಕಾಯಬೇಕಾಗಿತ್ತು; ಈಗ ನಮ್ಮ ಕೈಯಲ್ಲಿರುವ ಮೊಬೈಲಿನಿಂದಲೇ ಈ ಕೆಲಸ ಸಾಧ್ಯ. ಅದೊಂದು ಕಾಲವಿತ್ತು; ಫೋನಿನಲ್ಲಿ ದೂರದೂರಿಗೆ ಮಾತಾಡಲು ಗಂಟೆಗಟ್ಟಲೆ ಕಾಯಬೇಕಾಗಿದ್ದ ಕಾಲ. ಈಗ ಪ್ರಪಂಚದ ಯಾವುದೇ ಮೂಲೆಯ ವ್ಯಕ್ತಿಯೊಂದಿಗೆ ನಿಮಿಷದೊಳಗೆ ಫೋನ್ ಸಂಪರ್ಕ ಸಾಧ್ಯ. ಹಿಂದಿನ ದಿನಗಳಲ್ಲಿ ಮಾಹಿತಿ ತಿಳಿಸಲು ಪತ್ರ ಬರೆದು ಉತ್ತರಕ್ಕಾಗಿ ದಿನಗಟ್ಟಲೆ ಕಾಯಬೇಕಿತ್ತು. ಈಗ ಎಸ್ಎಂಎಸ್, ಇ-ಮೆಯಿಲ್ ಅಥವಾ ವಾಟ್ಸಪ್ ಮೂಲಕ ಹತ್ತಾರು ಜನರಿಗೆ ತಕ್ಷಣವೇ ಮಾಹಿತಿ ರವಾನಿಸಿ, ತಕ್ಷಣವೇ ಹಿಮ್ಮಾಹಿತಿ ಪಡೆಯಲೂ ಸಾಧ್ಯ.
ಇದೆಲ್ಲದರಿಂದಾಗಿ ನಮ್ಮ ಕಾಯಕ ಕಡಿಮೆಯಾಗಿದೆ. ಹಾಗಾಗಿ ಮನದಲಗು ಸವೆಯುತ್ತಿಲ್ಲ. ಮನದ ಮೊನಚು ಕುಗ್ಗಿದರೆ, ನಮ್ಮ ಅರ್ಥವಿಲ್ಲದ ಸಡಗರಗಳೂ ಕುಗ್ಗಿ, ಬುದ್ಧಿ ಕಳೆಯೇರುತ್ತಿತ್ತು. ಅದರಿಂದಾಗಿ ನಮ್ಮ ಆತ್ಮ ಬೆಡಗು ಪಡೆಯುತ್ತಿತ್ತು. ಈಗ ಹಾಗಾಗುತ್ತಿಲ್ಲ. ಕಾಯಕ ಕಳಕೊಂಡು ನಾವು ಆತ್ಮೋನ್ನತಿಯ ದಾರಿಯನ್ನೂ ಕಳೆದುಕೊಂಡಿದ್ದೇವೆ ಅನಿಸುತ್ತದೆ. ಇನ್ನಾದರೂ ಬದಲಾಗೋಣ.
 

Pages