ಕಗ್ಗ ದರ್ಶನ – 29

ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ
ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು
ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ
ಮುಗಿಲವೊಲು ದೈವಕೃಪೆ - ಮಂಕುತಿಮ್ಮ
ಬಿರುಬೇಸಗೆಯಲ್ಲಿ ಏನಾಗುತ್ತದೆ? ಆಕಾಶವು ಬೆಂಕಿಬಲೆಯಾಗಿ ಭೂಮಿಗೆ ಬಿಸಿಯಾದ ಮುಸುಕು (ಗವಸು) ಹಾಕಿದಂತೆ ಆವರಿಸಿಕೊಳ್ಳುತ್ತದೆ. ಕೆರೆಗಳು ಒಣಗಿ, ಕುಂಬಾರನು ಮಡಕೆ ಸುಡುವ ಒಲೆ(ಆವಿಗೆ)ಯಂತೆ ಬಿಸಿಲಿಗೆ ಬಿಸಿಬಿಸಿಯಾಗುತ್ತವೆ. ಜಗತ್ತಿನಲ್ಲಿ ಜನರು ಉಸಿರಾಡುವ ಗಾಳಿಯೆಲ್ಲ ಬೆಂಕಿಯ ಹೊಗೆಯಾಗಿ ಧಗಧಗಿಸುತ್ತದೆ.
ಇಂತಹ ರಣಬಿಸಿಲಿನ ದಾರುಣ ಬೇಸಗೆಯ ರಾತ್ರಿಯಲ್ಲಿ ಎಲ್ಲಿಂದಲೋ ಹುಟ್ಟಿ (ಒಗೆದು) ಬರುವ ಮುಗಿಲು ಮಳೆ ಸುರಿಸಿ ಭೂಮಿಗೆ ತಂಪೆರೆಯುತ್ತದೆ. ದೈವಕೃಪೆ ಎಂಬುದು ಆ ಮುಗಿಲಿನಂತೆ, ನಾವು ಕಷ್ಟಕಾರ್ಪಣ್ಯದಿಂದ ಬಸವಳಿದಾಗ ಬದುಕಿನಲ್ಲಿ ನೆರವಾಗಿ ತಂಪಾಗಿಸುತ್ತದೆ ಎಂದು ಮನಮುಟ್ಟುವಂತೆ ವಿವರಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಈ ವರುಷದ ಬೇಸಗೆ ಭರತಖಂಡವನ್ನೇ ಬೆಂಕಿಯಂತೆ ಬೇಯಿಸಿದೆ. ಮೈಸೂರು, ಬೀದರ್, ಗುಲ್ಬರ್ಗ ಇತ್ಯಾದಿ ನಗರಗಳಲ್ಲಿ ಕಳೆದ ಶತಮಾನದಲ್ಲೇ ಅತ್ಯಧಿಕ ಉಷ್ಣತೆ ೨೦೧೬ರಲ್ಲಿ ದಾಖಲಾಗಿದೆ. ಬಾವಿ, ಕೆರೆ, ಕೊಳ, ತೊರೆ, ನದಿ, ಸರೋವರ, ಜಲಾಶಯಗಳೆಲ್ಲ ನೀರಿಲ್ಲದೆ ಬತ್ತಿ ಹೋಗಿವೆ. ಕರ್ನಾಟಕದ ಒಂದು ಸಾವಿರ ಹಳ್ಳಿಗಳಿಗೆ ಟ್ಯಾಂಕರುಗಳಲ್ಲಿ ಕುಡಿಯುವ ನೀರಿನ ಸರಬರಾಜು. ಒಂದು ಕೊಡ ನೀರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಅಸಹಾಯಕ ಪರಿಸ್ಥಿತಿ.
ಅರಬೀ ಸಮುದ್ರದ ತೀರದಲ್ಲಿರುವ ಮಂಗಳೂರು ಜಗತ್ತಿನಲ್ಲೇ ಅತ್ಯಧಿಕ ಮಳೆ ಬೀಳುವ ನಗರಗಳಲ್ಲಿ ಒಂದು. ಇಲ್ಲಿಯೂ ಮೇ ೨೦೧೬ರಲ್ಲಿ ಐದು ದಿನಕ್ಕೊಮ್ಮೆ ನಳ್ಳಿಯಲ್ಲಿ ನೀರು ಸರಬರಾಜು. ದೈವಕೃಪೆಯಿಂದಾಗಿ ಮೇ ೧೫ ಮತ್ತು ಮೇ ೧೭ರಂದು ಭಾರೀ ಮಳೆ ಸುರಿದ ಕಾರಣ ಬಚಾವ್. ಆದರೆ, ದೇವರನ್ನೇ ನಂಬಿ ಕೂತರೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆಯೇ? ಮನುಷ್ಯ ಪ್ರಯತ್ನ ಮಾಡುವುದು ಪ್ರತಿಯೊಬ್ಬನ ಕರ್ತವ್ಯ. ಮನೆಯ ಚಾವಣಿ ಮೇಲೆ ಬೀಳುವ ಮಳೆನೀರನ್ನು ಪ್ರತಿ ಮನೆಯವರೂ ಕೊಯ್ಲು ಮಾಡಬೇಕು – ಮನೆಬಳಕೆಗಾಗಿ ಮತ್ತು ನೆಲದಾಳಕ್ಕೆ ಇಂಗಿಸಲಿಕ್ಕಾಗಿ. ಪ್ರತಿಯೊಬ್ಬ ರೈತರೂ ತಮ್ಮ ಜಮೀನಿನಲ್ಲಿ ಕೃಷಿಹೊಂಡ ಮಾಡಿ ನೀರಿಂಗಿಸ ಬೇಕು. ಬೃಹತ್ ಪ್ರಮಾಣದ ನೀರು ಬೇಕಾದ ಕೈಗಾರಿಕೆಗಳು (ಮಳೆಗಾಲದ ನಂತರ) ನೀರಿಗಾಗಿ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ದೇವರು ಕೃಪೆದೋರಿ ಸಕಾಲದಲ್ಲಿ ಮಳೆ ಬಂದೀತು.

ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು
ಸೇರಿ ಕೆರೆ ಹಳೆಯುಳಿಕೆ ಊರಿಗುಪಯೋಗ
ಮೂರುಣಿಸು ನಿನಗಂ ನಿಜಾರ್ಜಿತಂ ಸೃಷ್ಟ್ಯಂಶ
ಪ್ರಾರಬ್ದವೀ ತ್ರಿತಯ – ಮರುಳ ಮುನಿಯ
ಈ ಭೂಮಿಯ ಸಕಲ ಜೀವಸಂಕುಲಕ್ಕೆ ನೀರು ಎಲ್ಲಿಂದ ಸಿಗುತ್ತದೆ? ಎಂಬ ಪ್ರಶ್ನೆಗೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರ ಉತ್ತರ ಮಾರ್ಮಿಕ. ಭೂಮಿಯ ಜೀವಿಗಳಿಗೆ ಮೂರು ರೀತಿಯಲ್ಲಿ ನೀರು ಸಿಗುತ್ತದೆ ಎನ್ನುತ್ತಾರೆ ಅವರು. ಆಕಾಶದಿಂದ ಬೀಳುವ ಮಳೆ ಮತ್ತು ನೆಲದಾಳದಿಂದ ಜಿನುಗುವ ಒಸರು ಅಥವಾ ಚಿಲುಮೆ (ಊಟೆ). ಇವೆರಡು ಜೊತೆಯಾಗಿ ಹರಿದು ಹೋಗಿ ಕೆರೆಗಳಲ್ಲಿರುವ ಹಳೆಯ ನೀರನ್ನು ಸೇರಿಕೊಂಡು ಊರಿನ ಬಳಕೆಗೆ ಲಭ್ಯ.
ಅದೇ ರೀತಿಯಲ್ಲಿ, ಮನುಷ್ಯನಿಗೆ ಮೂರು ರೀತಿಯಲ್ಲಿ ಸಂಪತ್ತು ಒಲಿದು ಬರುತ್ತದೆ. ಕಾಯಕದಿಂದ ಗಳಿಸಿದ ಸಂಪತ್ತು, ಕುಟುಂಬದ ಸದಸ್ಯನಾಗಿ ಪಡೆಯುವ ನಿಶ್ಚಿತವಾದ ಸಂಪತ್ತಿನ ಪಾಲು (ಸೃಷ್ಟಿ ಅಂಶ) ಮತ್ತು ವಿಧಿ ದಯಪಾಲಿಸುವ ಸಂಪತ್ತು (ಅಂದರೆ ಯಾವುದೇ ಪ್ರಯತ್ನವಿಲ್ಲದೆ ಕೈಸೇರುವ ಸಂಪತ್ತು).
ಇದರಿಂದ ನಾವು ತಿಳಿಯಬೇಕಾದ್ದು ಏನು? ಸಂಪತ್ತನ್ನು ಹೇಗೆ ಜೋಪಾನ ಮಾಡಬೇಕೋ ನೀರನ್ನೂ ಹಾಗೆಯೇ ಜೋಪಾನ ಮಾಡಬೇಕು. ಯಾವುದೇ ಸಂಪತ್ತನ್ನು (ಜಮೀನು, ಚಿನ್ನ, ಮನೆ, ಹಣ ಇತ್ಯಾದಿ) ಸೃಷ್ಟಿ ಮಾಡಬಹುದು. ಆದರೆ ನೀರನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಈ ಎಚ್ಚರ ನಮ್ಮಲ್ಲಿ ಇದೆಯೇ? ಈಗಾಗಲೇ ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ಕೊಳವೆಬಾವಿ ಕೊರೆಯಲಾಗಿದೆ. ಈಗ ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲಿ ೧,೦೦೦ ಅಡಿಗಿಂತ ಆಳದ, ಕೊಯಂಬತ್ತೂರಿನಲ್ಲಿ ೧,೫೦೦ ಅಡಿಗಿಂತ ಆಳದ ಕೊಳವೆಬಾವಿಗಳು! ಪ್ರತಿ ನೂರು ಹೊಸ ಕೊಳವೆಬಾವಿಗಳಲ್ಲಿ ೫೦ಕ್ಕಿಂತ ಹೆಚ್ಚಿನದರಲ್ಲಿ ನೀರೇ ಸಿಕ್ಕುವುದಿಲ್ಲ. ಇನ್ನುಳಿದ ಕೊಳವೆಬಾವಿಗಳು ೨-೩ ವರುಷಗಳಲ್ಲಿ ಬತ್ತಿ ಹೋಗುತ್ತವೆ. ಹಾಗಿರುವಾಗ, ನಾವು ಸಾಧಿಸಿದ್ದೇನು? ಮುಂದಿನ ತಲೆಮಾರುಗಳ ಸೊತ್ತಾದ ಜೀವಜಲದ ಕೊಳ್ಳೆ. (ನೆನಪಿರಲಿ: ಐವತ್ತು ವರುಷಗಳ ಮುಂಚೆ ಕೊಳವೆಬಾವಿಗಳು ಇರಲೇ ಇಲ್ಲ.) ಆಯಾ ಪ್ರದೇಶದಲ್ಲಿ ಬೀಳುವ ಮಳೆ ನೀರಿಗೆ ಅನುಗುಣವಾದ ಬೆಳೆಗಳನ್ನು ಮಾತ್ರ ಬೆಳೆದಿದ್ದರೆ, ಈ ಅನಾಹುತ ತಪ್ಪಿಸಬಹುದಾಗಿತ್ತು.
ಸಂಪತ್ತನ್ನು ಖರ್ಚು ಮಾಡುತ್ತಾ ಹೋದರೆ, ಒಂದು ದಿನ ಅದು ಮುಗಿದೇ ಹೋಗುತ್ತದೆ. ಖರ್ಚು ಮಾಡಿದಷ್ಟನ್ನು ಪುನಃ ಮೂಲಸಂಪತ್ತಿಗೆ ಸೇರಿಸಿದರೆ ಮುಂದಿನ ತಲೆಮಾರಿಗೆ ಉಳಿದೀತು. ನೀರೂ ಹಾಗೆಯೇ. ಆದ್ದರಿಂದ, ತಾನು ಖರ್ಚು ಮಾಡಿದ ನೀರನ್ನು ನೆಲದಾಳಕ್ಕೆ ಮರುಪೂರಣ ಮಾಡುವ ಎಚ್ಚರ ಪ್ರತಿಯೊಬ್ಬರಲ್ಲಿಯೂ ಮೂಡಲಿ.