HRM
ನಮ್ಮ ಊರಿನ ಒಂದು ಬೀದಿಯಲ್ಲಿ ಎರಡು ಬಟ್ಟೆ ಅಂಗಡಿಗಳು. ಮೊದಲನೆಯ ಅಂಗಡಿಗೆ ಹೋದೆವು. "ಏನು ಬೇಕಾಗಿತ್ತು?" ಅಂಗಡಿಯವನ ಪ್ರಶ್ನೆ. "ಸೀರೆ ಬೇಕಾಗಿತ್ತು". ಒಂದೊಂದೇ ಸೀರೆ ತೋರಿಸತೊಡಗಿದ. ಸುಮಾರು ನಲುವತ್ತು ಸೀರೆ ನೋಡಿದ್ದಾಯಿತು. ನಮಗೆ ಯಾವುದೂ ಮೆಚ್ಚಿಗೆಯಾಗಲಿಲ್ಲ. ಅಲ್ಲಿಂದ ಹೊರಟಾಗ "ಏನು, ಸೀರೆ ತಗೊಳ್ಳೋದಿಲ್ವಾ?" ಎಂದು ಕೇಳಿದ. "ಇಲ್ಲ, ನಮಗೆ ಇಲ್ಲಿನ ಡಿಸೈನ್ ಇಷ್ಟವಾಗಲಿಲ್ಲ" ಎಂದೆ. "ಮತ್ಯಾಕೆ ಅಷ್ಟು ಸೀರೆ ತೋರಿಸಲಿಕ್ಕೆ ಹೇಳಿದ್ದು?" ಮುಖ ಗಂಟಿಕ್ಕಿದ ಆತನಿಂದ ಪ್ರಶ್ನೆ ತೂರಿ ಬಂತು.
ಆಲ್ಲೇ ಹತ್ತಿರದಲ್ಲಿದ್ದ ಇನ್ನೊಂದು ಸೀರೆ ಅಂಗಡಿಗೆ ಹೋದೆವು. ಅಲ್ಲಿ ಕೂಡ ಐವತ್ತು ಸೀರೆ ನೋಡಿದರೂ ಯಾವುದೂ ಇಷ್ಟವಾಗಲಿಲ್ಲ. ಅಲ್ಲಿಂದ ಹೊರಟಾಗಲೂ ಅಂಗಡಿಯವನಿಂದ ಅದೇ ಪ್ರಶ್ನೆ. ನಮ್ಮಿಂದ ಅದೇ ಉತ್ತರ. ಆದರೆ ಈ ಅಂಗಡಿಯವನ ಪ್ರತಿಕ್ರಿಯೆ ಭಿನ್ನ. "ಪರವಾಗಿಲ್ಲ, ಮುಂದಿನ ವಾರ ಹೊಸ ಸ್ಟಾಕ್ ಬರುತ್ತದೆ. ಈ ಕಡೆ ಬಂದರೆ ಖಂಡಿತ ಬನ್ನಿ" ನಸುನಗುತ್ತ ಹೇಳಿದ. ಈ ಎರಡೂ ಪ್ರಸಂಗಗಳನ್ನು , ಎರಡೂ ಅಂಗಡಿಯವರ ಕೊನೆಯ ಮಾತುಗಳನ್ನು ನಾವು ಇತರರಿಗೆ ತಿಳಿಸಲು ಮರೆತಿಲ್ಲ.
ಮುರಿದು ಬಿದ್ದ ಸ್ನೇಹ
ಹರೀಶ ಮತ್ತು ಗಿರೀಶ ಸ್ನೇಹಿತರು. ಹರೀಶನ ಮನೆಗೆ ಸಂಜೆ ಬರುತ್ತೇನೆಂದಿದ್ದ ಗಿರೀಶ ಬರಲೇ ಇಲ್ಲ. ಗಿರೀಶನಿಗಾಗಿ ಕಾದುಕಾದು ಬೇಸತ್ತ ಹರೀಶ ಅಸಹನೆಯಿಂದ ಕುದಿಯುತ್ತಿದ್ದ. ಮರುದಿನ ಭೇಟಿಯಾದಾಗ "ಯಾಕೋ ನಿನ್ನೆ ಬರ್ತೇನೆಂದು ಬರಲೇ ಇಲ್ಲ, ನಂಗೇನೂ ಬೇರೆ ಕೆಲಸ ಇಲ್ಲ ಅಂದ್ಕೊಂಡಿದ್ದೀಯಾ" ಎಂದು ಸಿಡುಕಿದ ಹರೀಶ. "ಹಾಗಲ್ಲ. ನಾನು ..." ಎನ್ನುತ್ತಿದ್ದ ಗಿರೀಶನ ಮಾತು ಕೇಳಿಸಿಕೊಳ್ಳದೆ, "ಸೊಕ್ಕು ನಿಂಗೆ. ನನ್ನ ಇಡೀ ದಿನ ಹಾಳು ಮಾಡಿದೆ" ಎಂದು ಹರಿಹಾಯ್ದ ಹರೀಶ. ಬಿಸಿಬಿಸಿ ಮಾತು ಜಗಳಕ್ಕೆ ತಿರುಗಿ, ಅವರ ಸ್ನೇಹ ಮುರಿದು ಬಿತ್ತು. ಇದಾಗಿ ಎರಡು ವರುಷಗಳಾದರೂ ಅವರು ಮತ್ತೆ ಮಾತಾಡಿಲ್ಲ.
ಈ ಎರಡೂ ಪ್ರಕರಣಗಳು ವ್ಯವಹಾರ ಕೌಶಲ್ಯವಿಲ್ಲದವರ, ಹಳಿ ತಪ್ಪಿದ ಒಂದು ಮಾತಿನ ಮತ್ತು ವರ್ತನೆಯ ದುಷ್ಪರಿಣಾಮಗಳನ್ನು ಎತ್ತಿ ತೋರಿಸುತ್ತವೆ.
ಆಕರ್ಷಣೆಯ ಕೇಂದ್ರ ಬಿಂದು
ಕೆಲವರಿರುತ್ತಾರೆ ನೋಡಿ. ಸುತ್ತಲಿದ್ದವರನ್ನು ತಮ್ಮ ಒಂದೇ ಮಾತಿನಿಂದ ಆಕರ್ಷಿಸುತ್ತಾರೆ. ಅಂಗಡಿಗಳಲ್ಲಿ, ಕಚೇರಿಗಳಲ್ಲಿ, ಸಭೆಗಳಲ್ಲಿ, ಸಂಸ್ಥೆಗಳಲ್ಲಿ ಇಂಥವರು ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ. ಮಂಗಳೂರಿನ ಬಿಎಸ್ಎನ್ಎಲ್ ಪ್ರಧಾನ ಕಚೇರಿಯಲ್ಲಿ "ಗ್ರಾಹಕರ ದೂರು ವಿಭಾಗ"ದಲ್ಲಿ ಇಂಥ ವ್ಯಕ್ತಿಯೊಬ್ಬರಿದ್ದರು. ಸದಾ ಹಸನ್ಮುಖ, ಲವಲವಿಕೆಯ ಮಾತು. ತಮ್ಮ ದೂರಿನೊಂದಿಗೆ ಬುಸುಗುಡುತ್ತ ಬಂದ ಗ್ರಾಹಕರ ದೂರನ್ನು ತಾಳ್ಮೆಯಿಂದ ಕೇಳಿ, ನಿಯಮಗಳನ್ನು ಸರಳವಾಗಿ ವಿವರಿಸಿ, ಕೆಲವೇ ನಿಮಿಷಗಳಲ್ಲಿ ಸಮಾಧಾನ ಮಾಡಿ ಕಳಿಸುತ್ತಿದ್ದರು. ಇಂಥವರು ತಮ್ಮ ಮಾತಿನ ಕೌಶಲ್ಯದಿಂದ ಯಾರನ್ನಾದರೂ ಗೆದ್ದು ಬಿಡುತ್ತಾರೆ.
ಮೂರು ಸೂತ್ರಗಳು
ಇಂಥ ವ್ಯಕ್ತಿಗಳನ್ನು ಹತ್ತಿರದಿಂದ ಗಮನಿಸಿದರೆ, ಯಶಸ್ವಿ ವ್ಯವಹಾರ ಕೌಶಲ್ಯದ ೩ ಸೂತ್ರಗಳು ಸಿಪ್ಪೆ ತೆಗೆದ ಕಿತ್ತಳೆಯ ತೊಳೆಗಳಂತೆ ಬಿಚ್ಚಿಕೊಳ್ಳುತ್ತವೆ:
* "ಆ ಮದುವೆಗೆ ಎಷ್ಟು ಜನ ಬಂದಿದ್ದರು?" ಎಂದು ಕೇಳಿದರೆ, "ಐನೂರಕ್ಕಿಂತ ಜಾಸ್ತಿ ಜನ ಬಂದಿದ್ದರು" ಎನ್ನುವುದೇ ಸಾಮಾನ್ಯ ಉತ್ತರ. ಹಾಗೆಂದರೆ ಎಷ್ಟು? ಕೇಳಿದವನಿಗೆ ಅರ್ಥವಾಗುತ್ತದೆಯೇ? ಇಂಥ ಸಂದರ್ಭಗಳಲ್ಲಿ ಎಷ್ಟು ಜನರು ಬಂದಿದ್ದರೆಂದು ಸುಲಭವಾಗಿ ಅಂದಾಜು ಮಾಡಬಹುದು - ಅಲ್ಲಿರುವ ಕುರ್ಚಿಗಳನ್ನು ಎಣಿಸಿದರೆ ಸಾಕು. ವ್ಯವಹಾರ ಕೌಶಲ್ಯದ ವ್ಯಕ್ತಿಗಳು ಇದನ್ನು ಕರಗತ ಮಾಡಿಕೊಂಡಿರುತ್ತಾರೆ. ನಿಖರವಾಗಿ ವಿಷಯ ತಿಳಿಸುತ್ತಾರೆ. ಅದಕ್ಕಾಗಿ ಉದ್ದ, ಅಗಲ, ಎತ್ತರ, ಆಳ, ವಸ್ತುಗಳು ಇವನ್ನೆಲ್ಲ ಅಂಕೆಸಂಖ್ಯೆಗಳಿಂದ ತಿಳಿಸುತ್ತಾರೆ.
* ಅವರು ಚುಟುಕಾಗಿ ಮಾತನಾಡುವುದನ್ನೂ ಅಭ್ಯಾಸ ಮಾಡಿಕೊಂಡಿರುತ್ತಾರೆ. ಹೇಳಬೇಕಾದ್ದನ್ನು ಕಡಿಮೆ ಪದಗಳಲ್ಲಿ, ಸೂಜಿಮೊನೆಯಂತಹ ಶಬ್ದಗಳಲ್ಲಿ ಹೇಳಿಬಿಡುತ್ತಾರೆ. ಡಿವಿಜಿಯವರ "ಮಂಕುತಿಮ್ಮನ ಕಗ್ಗ"ದ ಮುಕ್ತಕಗಳು ಅಗಾಧ ಅರ್ಥವನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಹುದುಗಿಡುವ ಹಾಗೆ.
* ಅಂಥವರು ಸ್ಪಷ್ಟವಾಗಿ ಮಾತನಾಡುತ್ತಾರೆ. "ಅವನು ಭಾಷೆಗೆಟ್ಟವನು", "ಅವಳು ಚೆಲ್ಲು ಹುಡುಗಿ" ಎಂಬ ಅಸ್ಪಷ್ಟ ಮಾತುಗಳನ್ನು ಅಪ್ಪಿತಪ್ಪಿ ಕೂಡ ಆಡುವುದಿಲ್ಲ. ಅಂತಹ ಅಪಾಯಕಾರಿ ಹೇಳಿಕೆಗಳಿಂದ ಆ ವ್ಯಕ್ತಿಗಳ ಬಾಳು ಹಾಳಾದೇತೆಂಬ ಅರಿವು ಅವರಿಗಿರುತ್ತದೆ. ಇತರರೂ ಇದನ್ನು ಸಾಧಿಸಬೇಕಾದರೆ ಏನು ಮಾಡಬೇಕು?
ಇದ್ದದ್ದು ಇದ್ದ ಹಾಗೆ
ಪ್ರತಿದಿನ ರಾತ್ರಿ ಮಲಗುವ ಮುನ್ನ, ಆ ದಿನವಿಡೀ ತಾವು ಆಡಿದ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು. ಅವುಗಳಲ್ಲಿ ಅನಗತ್ಯ ಮಾತುಗಳನ್ನು ಗುರುತಿಸಬೇಕು; ಅಂತಹ ಮಾತುಗಳನ್ನು ಮರುದಿನದಿಂದ ವ್ಯವಹಾರದಲ್ಲಿ ಬಳಸಬಾರದೆಂದು ನಿರ್ಧರಿಸಬೇಕು. ಆಡಿದ ಅಗತ್ಯದ ಮಾತುಗಳನ್ನು ನಿಖರವಾಗಿ, ಚುಟುಕಾಗಿ ಮತ್ತು ಸ್ಪಷ್ಟವಾಗಿ ಹೇಗೆ ಹೇಳಬಹುದಿತ್ತು ಎಂದು ಯೋಚಿಸಬೇಕು. ಉದಾಹರಣೆಗೆ: "ಭಾಷೆಗೆಟ್ಟವನು" ಎನ್ನುವ ಬದಲಾಗಿ, "ಅವನು ಈ ತಿಂಗಳು ಎರಡು ಸಲ ಕಚೇರಿಗೆ ಹತ್ತು ನಿಮಿಷ ತಡವಾಗಿ ಬಂದಿದ್ದ" ಎಂದು ಇದ್ದದ್ದನ್ನು ಇದ್ದ ಹಾಗೆ ಹೇಳಬೇಕು.
ಇದುವೇ ಎಲ್ಲದಕ್ಕಿಂತ ಕಷ್ಟವಾದ ಕೆಲಸ ಅಲ್ಲವೇ? ಆದ್ದರಿಂದ ಇದ್ದದ್ದನ್ನು ಇದ್ದ ಹಾಗೆ ನೋಡಲು ಮತ್ತು ಕೇಳಲು ಕಲಿಯಬೇಕು. ಇದಕ್ಕಾಗಿ ಪ್ರತಿದಿನ ಅರ್ಧ ತಾಸು ನಿರಾಳವಾಗಿರಲು ಧ್ಯಾನ, ವಾಕಿಂಗ್ ಅಥವಾ ಇತರ ವಿಧಾನಗಳನ್ನು ಅಭ್ಯಾಸ ಮಾಡಬಹುದು. ಆಗ ಪ್ರತಿಯೊಂದು ಕ್ಷಣದ ಆಗುಹೋಗುಗಳಿಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ. ಒಮ್ಮೆ ಈ ಕಲೆಯನ್ನು ಸಾಧಿಸಿಕೊಂಡಿರೋ, ನಿಮ್ಮ ಯೋಚನೆಯ ಧಾಟಿಯೇ ಬದಲಾಗುತ್ತದೆ. "ಯೋಚನೆಯಂತೆ ಮಾತು, ಮಾತಿನಂತೆ ಕೆಲಸ" ಎಂಬ ರೀತಿಯಲ್ಲಿ ವ್ಯವಹರಿಸಲು ಸಾಧ್ಯವಾಗುತ್ತದೆ. ಇದೇ ವ್ಯವಹಾರ ಕೌಶಲ್ಯ ಬೆಳೆಸಿಕೊಂಡ ವ್ಯಕ್ತಿಗಳ ಯಶಸ್ಸಿನ ಗುಟ್ಟು.
ಮಾತಲ್ಲದ ಮಾತು
ವ್ಯವಹಾರ ಕೌಶಲ್ಯದಲ್ಲಿ ಎಲ್ಲದಕ್ಕಿಂತ ಮುಖ್ಯ ಅಂಶ "ಮಾತು" ಅಂತೀರಾ? ಅಲ್ಲ. ಕಣ್ಣನೋಟ, ಹುಬ್ಬು ಮತ್ತು ತುಟಿಗಳ ಕೊಂಕು, ಮುಖದ ಭಾವ, ಬೆರಳುಗಳ ಹಾಗೂ ಕೈಗಳ ಚಲನೆ, ನಿಂತ ಅಥವಾ ಕುಳಿತ ಭಂಗಿ, ಧ್ವನಿಯ ಏರಿಳಿತ ಇವೆಲ್ಲ ಪ್ರಧಾನ ಪಾತ್ರ ವಹಿಸುತ್ತವೆ. ಒಂದು ಯೋಚನೆ ಅಥವಾ ಘಟನೆಯನ್ನು ಇತರರಿಗೆ ತಿಳಿಸುವಾಗ, ಶೇಕಡಾ ೮೦ರಷ್ಟು ವಿವರಗಳನ್ನು ಇಂತಹ "ಮಾತಲ್ಲದ ಮಾತು"ಗಳಿಂದ ತಿಳಿಸುತ್ತೇವೆ.
ಮಾತಲ್ಲದ ಮಾತಿನಲ್ಲಿ ಮೌನ ಎಂಬುದು ಪರ್ವತಗಳ ಗುಂಪಿನಲ್ಲಿ ಹಿಮಾಲಯವಿದ್ದಂತೆ. ಅತ್ಯಂತ ಉತ್ಕಟ ಭಾವನೆಯ ಕ್ಷಣಗಳಲ್ಲಿ (ಉದಾಹರಣೆಗೆ ತಾಯಿ-ಮಗುವಿನ ವಾತ್ಸಲ್ಯ, ಹೆಣ್ಣು-ಗಂಡಿನ ಒಲವು, ಸಾವಿನ ನೋವು) ಮಾತು ಬೇಕಾಗಿಯೇ ಇಲ್ಲ. ಮೌನವೇ ಎಲ್ಲವನ್ನೂ ಹೇಳಿಬಿಡುತ್ತದೆ.
ಪರಿಣಾಮಕಾರಿಯಾಗಲು...
> ನಿಮ್ಮ ವ್ಯವಹಾರ ಕೌಶಲ್ಯ ಪರಿಣಾಮಕಾರಿಯಾಗ ಬೇಕಾದರೆ - ಕ್ಷಮಿಸಿ, ಉಪಕಾರವಾಯಿತು, ದಯವಿಟ್ಟು ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ನೀವು ಒಳ್ಳೆಯ ಕೆಲಸ ಮಾಡಿದ್ದೀರಿ - ಎಂಬ ಮಾತುಗಳನ್ನು ಅಗತ್ಯವಿದ್ದಾಗೆಲ್ಲ ಬಳಸಿ.
> ನಾನು, ನನ್ನಿಷ್ಟ, ನನ್ನ ಹಕ್ಕು ಎಂಬ ಪದಗಳನ್ನು ಇತರರೊಂದಿಗೆ ವ್ಯವಹರಿಸುವಾಗ ಬಳಸಬೇಡಿ. ಬದಲಾಗಿ ದರ್ಪ ಮತ್ತು ಅಹಂಕಾರದ ಸೋಂಕಿಲ್ಲದ ಪದಗಳನ್ನು ಬಳಸಿ.
> ನಿಮ್ಮ ಯೋಚನೆಯ ಧಾಟಿಯನ್ನೇ ಸಕಾರಾತ್ಮಕವಾಗಿಸಿ. ಆಗ ಇತರರ ಬಗ್ಗೆ ವ್ಯಂಗ್ಯ, ಅವಹೇಳನ, ಹೀನಾಯ ಭಾವ ನಿಮ್ಮ ಮಾತಿನಲ್ಲಿ ನುಸುಳುವುದಿಲ್ಲ.
> ಇತರರು ನಿಮ್ಮೊಂದಿಗೆ ಹೇಗೆ ಮಾತಾಡಬೇಕು ಮತ್ತು ವರ್ತಿಸಬೇಕೆಂದು ನೀರೀಕ್ಷಿಸುತ್ತೀರೋ, ಇತರರೊಂದಿಗೆ ನೀವೂ ಹಾಗೆಯೇ ವ್ಯವಹರಿಸಿ.
> ಯಾವಾಗಲೂ ಇತರರ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿಕೊಳ್ಳಿ. ಅವರ ನೆಲೆಯಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಿ.
> ಮೊದಲ ಮಾತಿನಲ್ಲೇ ಅಂತಿಮ ಪರಿಣಾಮದ ಚಿಂತನೆಯಿರಲಿ. ಹೊಸ ವ್ಯಕ್ತಿ, ಕಚೇರಿ ಅಥವಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮೊದಲ ಭೇಟಿಯ ಮೊದಲ ಮಾತು ಆಡುವಾಗಲೇ ಅವರನ್ನು ಬೀಳ್ಗೊಡುವಾಗ ಸಕಾರಾತ್ಮಕ ಭಾವ ಇಬ್ಬರಲ್ಲೂ ತುಂಬಿರಬೇಕೆಂದು ನಿರ್ಧರಿಸಿ. ಅದನ್ನು ಸಾಧಿಸಲು ಮೊದಲ ಹಾಗೂ ನಂತರದ ವರ್ತನೆಗಳನ್ನು ರೂಪಿಸಿಕೊಳ್ಳಿ.
ಅವಿನಾಶ್ ಪಿಯುಸಿಯಲ್ಲಿ ಅನುತ್ತೀರ್ಣನಾದ. ಅವನು ರಾಂಕ್ ಪಡೆಯುತ್ತಾನೆಂಬ ತಂದೆಯ ನಿರೀಕ್ಷೆ ತಲೆಕೆಳಗಾಯಿತು. ಪೂರಕ ಪರೀಕ್ಷೆಯಲ್ಲಿಯೂ ಅವಿನಾಶ್ ಎರಡು ವಿಷಯಗಳಲ್ಲಿ ಫೇಲ್ ಆದ. ಆಗಂತೂ ಅವನ ತಂದೆ ಕಂಗಾಲಾದರು.
ಅವಿನಾಶನ ನಿರ್ಭಾವುಕ ಮುಖ ನೋಡಿ ಅವರಿಗೆ ಬೇಸರವಾಯಿತು. ಕೊನೆಗೆ ಅವನನ್ನು ಮನೋವೈಜ್ನಾನಿಕ ವಿಶ್ಲೇಷಣೆಗೆ ಒಳಪಡಿಸಲಾಯಿತು. ಮೂರನೇ ಭೇಟಿಯಲ್ಲಿ ಪರಿಣತರಿಗೆ ಅವಿನಾಶನ ಫೇಲ್ನ ಕಾರಣದ ಸುಳಿವು ಕಂಡಿತು. ಅದೇನು? ’ಅವಿನಾಶ್ ತನ್ನ ತಂದೆಯ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದ!’
ಅವಿನಾಶ್ ಎಂಟನೇ ತರಗತಿಯಲ್ಲಿ ಶೇಕಡಾ ೮೫ ಅಂಕ ಗಳಿಸಿದ್ದ. ಅದು ಅವನ ಹಿಂದಿನ ತರಗತಿಯ ಅಂಕಗಳಿಗಿಂತ ಕಡಿಮೆಯಾಗಿತ್ತು. "ನನ್ನ ಮರ್ಯಾದೆ ತೆಗೆದೆ, ನಿನ್ನಿಂದಾಗಿ ನಾನು ಯಾರಿಗೂ ಮುಖ ತೋರಿಸದಂತಾಗಿದೆ" ಎಂದು ತಂದೆ ಅವನ ಮೇಲೆ ರೇಗಾಡಿದ್ದರು. ಸಂಬಂಧಿಕರೆಲ್ಲರ ಎದುರು ಅವನನ್ನು ಅವಮಾನಿಸಿದ್ದರು. ಅವಿನಾಶ್ ಆಗಲೇ ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಮತ್ತೆಮತ್ತೆ ಪಿಯುಸಿಯಲ್ಲಿ ಫೇಲ್ ಆಗಿ ತಂದೆಗೆ ನಿಜಕ್ಕೂ ಮುಖವೆತ್ತಿ ತಿರುಗಾಡಲು ಸಾಧ್ಯವಾಗದಂತೆ ಮಾಡಿದ್ದ!
ಅಪ್ಪಮಗನ ಸಂಬಂಧವೇ ಹಾಗೆ. ಜೀವನದ ಯಾವ ಘಟ್ಟದಲ್ಲೇ ಇರಲಿ, ಇಬ್ಬರ ನಡುವಿನ ಕೊಂಡಿಗೆ ಕೊಂಚ ಏಟು ಬಿದ್ದರೂ "ಗಾಯ" ಮಾಯುವುದು ಸುಲಭದ ಮಾತಲ್ಲ.
ಅಪ್ಪ ತನ್ನ ಮಾತಿಗೆ ಬೆಲೆ ಕೊಡೋದಿಲ್ಲ, ಒಳ್ಳೆಯ ಕಾಲೇಜಿಗೆ ಕಳುಹಿಸಲಿಲ್ಲ, ಮೆಡಿಕಲ್ ಓದಿಸಲಿಲ್ಲ, ಸ್ವಂತ ವ್ಯವಹಾರ ಮಾಡಲು ಹಣ ಕೊಡಲಿಲ್ಲ, ಆಸ್ತಿ ಪಾಲು ಮಾಡಿ ಕೊಟ್ಟಿಲ್ಲ - ಹೀಗೆ ಅಪ್ಪನ ವಿರುದ್ಧ ಮಗ ನೀಡುವ ಆರೋಪಗಳ ಪಟ್ಟಿ ಬೆಳೆಯುತ್ತ ಹೋಗಬಹುದು. ಅಂತೆಯೇ, ಮಗ ನನ್ನ ಕಷ್ಟ ಅರ್ಥ ಮಾಡಿಕೊಳ್ಳಲಿಲ್ಲ, ತನಗೆ ಗೌರವ ಕೊಡೋದಿಲ್ಲ, ಶೋಕಿ ಮಾಡಿ ಹಣ ಖರ್ಚು ಮಾಡುತ್ತಾನೆ, ಸರಿಯಾಗಿ ಪಾಠ ಓದಲಿಲ್ಲ ಎಂದು ಅಪ್ಪನ ದೂರುಗಳು ಇರಬಹುದು. ಆದರೆ ಇಂತಹ ದೂರುಗಳಿಂದ ತಂದೆ-ಮಗನ ಸಂಬಂಧದಲ್ಲಿ ಕಂದರ ಬೆಳೆಯುತ್ತ ಹೋಗುತ್ತದೆ ಎಂಬುದಂತೂ ಸತ್ಯ.
ಅಪ್ಪ-ಮಗನ ನಡುವೆ ಸಂವಹನ ಹಾಗೂ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಇದ್ದರೆ ಇಂತಹ ಗೊಂದಲಗಳು ಉಂಟಾಗುವುದಿಲ್ಲ. ಇದಕ್ಕೆ ಉತ್ತರಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಘಟನೆ ಉದಾಹರಣೆ. ಅಲ್ಲಿನ ಹಳ್ಳಿಗರಿಗೆ ತಮಗಿರುವ ಅರ್ಧ ಎಕರೆ - ಒಂದೆಕರೆ ಅಡಿಕೆ ತೋಟವೇ ಜೀವನಾಧಾರ. ಅಡಿಕೆ ಬೆಲೆ ಕುಸಿದಾಗ ಅಲ್ಲಿ ವಾಸಿಸುತ್ತಿದ್ದ ಕುಟುಂಬವೊಂದರ ಬದುಕು ಅಡಿಮೇಲಾಗಿತ್ತು. ಹಿರಿಯ ಮಗ ಗುಣವಂತ, ತಂದೆಗೆ ತಕ್ಕಂತಿದ್ದ. ಸಿಇಟಿಯಲ್ಲಿ ಉತ್ತಮ ರಾಂಕ್ ಗಳಿಸಿದ್ದ ಅವನು ಮೆಡಿಕಲ್ ಕೋರ್ಸಿಗೆ ಸೇರಬಹುದಾಗಿತ್ತು. ಆ ಸಂದರ್ಭದಲ್ಲಿ ಅವನ ತಂದೆ ಮಗನಿಗೆ ಕುಟುಂಬದ ಆರ್ಥಿಕ ಪರಿಸ್ಥಿತಿ ಬಗ್ಗೆ ಮುಕ್ತವಾಗಿ ವಿವರಿಸಿದರು. ತಂದೆಗೆ ಮೆಡಿಕಲ್ ಕಾಲೇಜಿನ ಶುಲ್ಕ ಮತ್ತು ವೆಚ್ಚ ಭರಿಸಲು ಅಸಾಧ್ಯವೆಂದು ಅವನು ತಿಳಿದುಕೊಂಡ. ಆದ್ದರಿಂದ ಬೆಂಗಳೂರಿನಲ್ಲಿ ಬಿಎಸ್ಸಿ ಕೋರ್ಸಿಗೆ ಸೇರಿದ. ಮುಂದಿನ ವರುಷ ಅವನ ತಮ್ಮನೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ. ಆದರೆ ಕುಸಿದ ಅಡಿಕೆ ಬೆಲೆ ಏರಿರಲಿಲ್ಲ. ಹಾಗಾಗಿ ಅವನೂ ಕುಟುಂಬದ ಆರ್ಥಿಕ ಪರಿಸ್ಥಿತಿ ಮನಗಂಡು, ಉಚಿತ ಸಂಸ್ಕೃತ ಶಿಕ್ಷಣ ಪಡೆಯಲು ಮಠದ ಶಾಲೆಗೆ ಸೇರಿದ. ಈ ಕುಟುಂಬದಲ್ಲಿ ಅಪ್ಪ-ಮಗ ಪರಸ್ಪರ ಅರ್ಥ ಮಾಡಿಕೊಂಡದ್ದರಿಂದ ಕುಟುಂಬದ ಹಿತಾಸಕ್ತಿ ಕಾಯ್ದುಕೊಳ್ಳಲು ಸಾಧ್ಯವಾಯಿತು.
ತಂದೆ-ಮಗನ ಪರಸ್ಪರ ನಿರೀಕ್ಷೆಗಳ ತಾಕಲಾಟಕ್ಕೆ ಮುಕ್ತಿ ದೊರೆತರೂ ಅವರಿಬ್ಬರ ಸಂಬಂಧ ಹಸನಾಗಬಹುದು. ಉದಾಹರಣೆಗೆ ಚಿಕ್ಕಮಗಳೂರಿನ ಹಿರಿಯರೊಬ್ಬರು ತನ್ನ ಆಸ್ತಿ ಪಾಲು ಮಾಡಿ, ಸುಮಾರು ೫೦ ಎಕರೆಗಳ ಎಸ್ಟೇಟನ್ನು ಕಿರಿಯ ಮಗನಿಗೆ ಕೊಟ್ಟಿದ್ದಾರೆ. ಕಿರಿಯ ಮಗ ಯಾವುದೇ ವೃತ್ತಿಯಲ್ಲಿಲ್ಲ; ಆದ್ದರಿಂದ ಎಸ್ಟೇಟ್ನ ಆದಾಯದಿಂದ ಅವನ ಜೀವನ ಸಾಗಲಿ ಎಂಬುದು ಅವರ ಯೋಚನೆ. ನಗರದಲ್ಲಿರುವ ತನ್ನ ಮನೆಯನ್ನು ಹಿರಿಯ ಮಗನ ಪಾಲಿಗೆ ಕೊಟ್ಟಿದ್ದಾರೆ. ಈತನ ವೃತ್ತಿ ಜೀವನ ಚೆನ್ನಾಗಿ ನಡೆಯುತ್ತಿದ್ದು, ನಗರದಲ್ಲೇ ಅವನು ವಾಸಿಸಲಿ ಎಂಬುದು ತಂದೆಯ ಆಶಯ. ತಂದೆಯವರ ಈ ನಿಲುವು ತಂದೆ-ಮಗನ ಸಂಬಂಧವನ್ನು ಹದಗೆಡಿಸಿಲ್ಲ; ಇನ್ನಷ್ಟು ಗಟ್ಟಿಗೊಳಿಸಿದೆ.
ತಂದೆ-ಮಗನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಬಾಲ್ಯದಲ್ಲಿ ಮಗನನ್ನು ತಂದೆ ಹೇಗೆ ರೂಪಿಸಿದ್ದಾನೆ ಎನ್ನುವುದು ಮುಖ್ಯ ಕಾರಣವಾಗುತ್ತದೆ. ವಯಸ್ಸಿಗೆ ಬಂದ ಮಗ ಎದುರಾಡುತ್ತಾನೆಂದರೆ ಅವನಿಗೆ ಬಾಲ್ಯದಲ್ಲಿ ಸರಿಯಾದ ಮಾರ್ಗದರ್ಶನ ದೊರೆತಿಲ್ಲ ಎಂದರ್ಥ. ಪುತ್ರನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿ, ಅವನಲ್ಲಿ ಪ್ರೀತಿ-ವಿಶ್ವಾಸ, ಹಿರಿಯರ ಬಗ್ಗೆ ಗೌರವ ಮುಂತಾದ ಗುಣಗಳನ್ನು ಬೆಳೆಸುವ ಜವಾಬ್ದಾರಿ ತಂದೆಯದು.
ಅನೇಕ ತಂದೆಯಂದಿರು ತಮ್ಮ ಕೆಲಸದ ಒತ್ತಡಗಳಿಂದಾಗಿ ಮಗನೊಂದಿಗೆ ಸಂವಹನವನ್ನು ಬೆಳೆಸಿಕೊಳ್ಳುವುದಿಲ್ಲ. ಆಗ ತಂದೆಯಿಂದ ಮಗ ಭಾವನಾತ್ಮಕವಾಗಿ ದೂರಾಗುತ್ತಾನೆ. ಹೀಗಾಗದಂತೆ ನೋಡಿಕೊಳ್ಳಲು ತಂದೆಯಾದವನು ಮುಂಚಿನಿಂದಲೇ ಪ್ರಯತ್ನಿಸಬೇಕು. ತನ್ನ ಕೆಲಸ-ಕಾರ್ಯಗಳ ಮಧ್ಯೆಯೂ ಮಗನಿಗಾಗಿ ಕೆಲವು ನಿಮಿಷಗಳನ್ನು ಮೀಸಲಿಡಬೇಕು. ಇಂತಹ ಸಂವಹನದಿಂದ ಪರಸ್ಪರ ತಿಳಿವಳಿಕೆ ಹೆಚ್ಚುತ್ತದೆ.
ಕೆಲವು ತಂದೆಯಂದಿರು ಮಗನ ಮೇಲಿನ ಅತಿಯಾದ ಪ್ರೀತಿಯಿಂದ ರಕ್ಷಿತ ವಾತಾವರಣದಲ್ಲಿ ಮಗನನ್ನು ಬೆಳೆಸುತ್ತಾರೆ. ಆದರೆ ಆ ಮಗುವಿಗೆ ಮುಂದೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಸಮಸ್ಯೆಯಾದೀತು. ಇಂತಹ ಮಗು ಬೆಳೆದು ಹೊರ ಪ್ರಪಂಚಕ್ಕೆ ಕಾಲಿರಿಸಿದಾಗ ತಾನು ಇತರರಿಗಿಂತ ದುರ್ಬಲ ಎಂದು ಭಾವಿಸಿ ಹತಾಶನಾಗಬಹುದು. ಇಂತಹ ಹತಾಶೆಯೂ ಕೋಪವಾಗಿ ಪರಿವರ್ತನೆಗೊಂಡು ತಂದೆ-ಮಗನ ಸಂಬಂಧಕ್ಕೆ ಧಕ್ಕೆ ಉಂಟು ಮಾಡಬಹುದು.
ಉಚಿತ ಸ್ವ-ಉದ್ಯೋಗ ತರಬೇತಿಗೆ ಆಯ್ಕೆಗಾಗಿ ನಿರುದ್ಯೋಗಿ ಯುವಕರ ಸಂದರ್ಶನ ನಡೆಸುತ್ತಿದ್ದೆ. ಸುಮಾರು ೫೫ ವರುಷ ವಯಸ್ಸಿನ ವ್ಯಕ್ತಿಯೊಬ್ಬರು ಒಳಬಂದರು. "ನೀವು ತರಬೇತಿಗೆ ಬರುತ್ತೀರಾ?" ಎಂದು ಕೇಳಿದೆ. ತಲೆಯಾಡಿಸುತ್ತ, "ಇಲ್ಲ, ಇಲ್ಲ, ನನ್ನ ಮಗನನ್ನು ಕಳಿಸೋಣ ಅಂತಿದೀನಿ" ಎಂದರು. "ಎಲ್ಲಿದ್ದಾರೆ ನಿಮ್ಮ ಮಗ" ಎಂಬ ಪ್ರಶ್ನೆಗೆ ಅವರ ಉತ್ತರ, "ಮನೆಯಲ್ಲಿದ್ದಾನೆ." ನಾನು "ಇಲ್ಲಿಗೆ ಅವನನ್ನೇ ಕಳುಹಿಸಬೇಕಾಗಿತ್ತು" ಎಂದಾಗ ಅವರ ಪ್ರತಿಕ್ರಿಯೆ, "ಅವನಿನ್ನೂ ಹುಡುಗ! ಅವನಿಗೇನು ಗೊತ್ತಾಗುತ್ತೆ? ಅದಕ್ಕೆ ನಾನೇ ಬಂದೆ." ಅವರ ಮಗನಿಗೆ ೨೨ ವರುಷ ವಯಸ್ಸು. ಈ ತಂದೆ ತನ್ನ ಮಗನನ್ನು ಹೇಗೆ ಬೆಳೆಸಿರಬಹುದು? ಆ ಮಗನ ಮನೋಸ್ಥಿತಿ ಹೇಗಿದ್ದೀತು?
ತಂದೆ -ಮಗನ ನೆಮ್ಮದಿಗಾಗಿ .....
ತಂದೆ-ಮಗನ ಸಂಬಂಧ ಹದಗೆಟ್ಟರೆ ಅದನ್ನು ಸುಧಾರಿಸಲು ಖಂಡಿತ ಸಾಧ್ಯವಿದೆ. ಈ ಕೆಳಗಿನ ಅಂಶಗಳಿಂದ ಅದಕ್ಕೆ ಸಹಾಯವಾದೀತು.
* ಕುಟುಂಬದಲ್ಲಿ ಭಿನ್ನಾಭಿಪ್ರಯಗಳು ತಲೆದೋರಿದಾಗ ತಂದೆ-ಮಗ ಇಬ್ಬರೂ ಆತ್ಮವಿಮರ್ಶೆ ಮಾಡಿಕೊಂಡು ತಮ್ಮ ವರ್ತನೆ ತಿದ್ದಿಕೊಳ್ಳಬೇಕು. ತಾನೇ ಸರಿ ಎಂದು ಹಟಕ್ಕೆ ಬಿದ್ದರೆ ಭಿನ್ನಭಿಪ್ರಾಯ ಹೆಚ್ಚಾಗುತ್ತದೆ.
* ವಯಸ್ಸಿನಲ್ಲಿ ಹಿರಿಯರಾದ ತಂದೆ, ವರ್ತನೆಯಲ್ಲಿಯೂ ಹಿರಿತನ ತೋರಬೇಕು. ಬದುಕಿನ ಬಗ್ಗೆ ತನ್ನ ಧೋರಣೆಗಳನ್ನೇ ಮಗನಲ್ಲಿ ನಿರೀಕ್ಷಿಸಬಾರದು. ವಯಸ್ಸಾದಂತೆ ಮನೆಯ ಪ್ರತಿಯೊಂದು ನಿರ್ಧಾರದಲ್ಲಿಯೂ ಮೂಗು ತೂರಿಸುವುದನ್ನು ಬಿಟ್ಟು ಹಾಯಾಗಿರಲು ಕಲಿಯಬೇಕು. ಮುಖ್ಯವಾಗಿ, ’ಮಗನಿಗೆ ಅವನದೇ ಆದ ಬದುಕು ಇದೆ’ ಎಂಬುದನ್ನು ಒಪ್ಪಿಕೊಂಡು, ಅದನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡಬೇಕು.
* ಮಗನೂ ತಂದೆಯ ಬಗ್ಗೆ ತನ್ನ ಧೋರಣೆಗಳನ್ನು ಸಕಾರಾತ್ಮಕವಾಗಿ ಬೆಳೆಸಿಕೊಳ್ಳಬೇಕು. ತಂದೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮಗ ಆದ್ಯತೆ ನೀಡಬೇಕು. ಬದುಕಿನಲ್ಲಿ ಹಣ್ಣಾದ ತಂದೆಯ ನಡವಳಿಕೆ ಬದಲಾಯಿಸುವ ಭ್ರಮೆ ಬಿಡಬೇಕು. "ಬದಲಾಗಬೇಕಾದ್ದು ತಂದೆಯಲ್ಲ, ನಾನು" ಎಂಬ ಸೂತ್ರ ಅಳವಡಿಕೊಳ್ಳಬೇಕು.
ಇವುಗಳನ್ನು ಅಳವಡಿಸಿಕೊಂಡರೆ, ತಂದೆ-ಮಗನ ಸಂಬಂಧದಲ್ಲಿ ನೋವಿಗಿಂತ ನಲಿವು ಜಾಸ್ತಿಯಾಗಲು ಸಾಧ್ಯ.
ಮೋಹನ್ ಎರಡು ತಿಂಗಳ ಮುಂಚೆ ಬ್ಯಾಂಕ್ ಸಾಲ ಪಡೆದು ಬೇಕರಿಯೊಂದನ್ನು ಆರಂಭಿಸಿದ್ದ. ವ್ಯಾಪಾರ ಆಗಿನ್ನೂ ಕುದುರುತ್ತಿತ್ತು. ಅಷ್ಟರಲ್ಲಿ ಪಕ್ಕದ ಮನೆಯವರ ಕೆಂಪು ಮಾರುತಿ ಕಾರು ಕಣ್ ಸೆಳೆಯಿತು. ತಾನೂ ಅಂತಹ ಕಾರಿನಲ್ಲಿ ಊರೆಲ್ಲ ಸುತ್ತಾಡಬೇಕೆಂಬ ಆಸೆ ಬಲವಾಗಿ ಇನ್ನೊಂದು ಸಾಲ ಮಾಡಿ ಹೊಸ ಕಾರು ಖರೀದಿಸಿದ.
ಕ್ರಮೇಣ ಮೋಹನನ ಗಳಿಕೆಯಿಲ್ಲವೂ ಹೊಸ ಕಾರಿನ ಪೆಟ್ರೋಲಿಗೇ ಆಹುತಿ. ಶನಿವಾರ ಬಂತೆಂದರೆ ಹೆಂಡತಿ-ಮಕ್ಕಳ ಒತ್ತಾಯ, "ಹೇಗೂ ಕಾರ್ ಇದೆಯಲ್ಲಾ, ಎಲ್ಲಿಗಾದರೂ ಹೋಗೋಣ." ಪ್ರತೀ ವಾರಾಂತ್ಯದಲ್ಲಿ ದೂರದೂರದ ಊರುಗಳಿಗೆ ಪ್ರವಾಸ ಹೋಗುವುದು ಪರಿಪಾಠವಾಯಿತು. ಇತ್ತ ಬೇಕರಿ ವ್ಯವಹಾರ ಕುಸಿಯತೊಡಗಿತು. ಅತ್ತ ಸಾಲದ ಹೊರೆ ಬೆಳೆಯತೊಡಗಿತು. ಸಾಲದ ಅಸಲು ಅಂತಿರಲಿ, ಬಡ್ಡಿಯನ್ನೂ ಕಟ್ಟಲಾಗದ ಪರಿಸ್ಥಿತಿ ಎದುರಾಯಿತು. ಕೊನೆಗೆ ಬ್ಯಾಂಕಿನವರು ಕಾರನ್ನು ವಶಕ್ಕೆ ತಗೊಂಡು ಹರಾಜು ಹಾಕಿದರು. ಮೋಹನ ಬೇಕರಿಯನ್ನೂ ಮುಚ್ಚಬೇಕಾಯಿತು. ಬಾಕಿಯಾದ ಸಾಲದ ವಸೂಲಿಗಾಗಿ ಬ್ಯಾಂಕ್ ಕೋರ್ಟಿನಲ್ಲಿ ಮೊಕದ್ದಮೆ ಹೂಡಿತು.
ಮದ್ದುಂಟೆ ಚಿನ್ನದ ಮೋಹಕ್ಕೆ?
ಕಲ್ಯಾಣಿಗೆ ಚಿನ್ನದ ಮೋಹ, ಹಿಂಗದ ದಾಹದಂತೆ. ಪವನುಗಟ್ಟಲೆ ಬಂಗಾರದೊಡವೆ ಹಾಕಿ, ಅಪ್ಪ-ಅಮ್ಮ ಮದುವೆ ಮಾಡಿಸಿದ್ದರು. ಆದರೂ ಇವಳಿಗೆ ಸಮಾಧಾನವಿಲ್ಲ. ಆಗರ್ಭ ಶ್ರೀಮಂತಳಾದ ತನ್ನ ಗೆಳತಿಯಂತೆ ತಾನೂ ಮೈತುಂಬ ಚಿನ್ನದೊಡವೆ ಹೇರಿಕೊಳ್ಳಬೇಕೆಂಬ ಬಯಕೆ. ಕೊನೆಗೆ ಚಿನ್ನಕ್ಕಾಗಿ ಹಣ ಗಳಿಸಬೇಕೆಂದು ಸಿದ್ಧ ಉಡುಪು ಹೊಲಿಯುವ ಘಟಕದಲ್ಲಿ ಕೆಲಸಕ್ಕೆ ಸೇರಿಕೊಂಡಳು. ಅಲ್ಲಿ ದಿನವೂ ಎಂಟು ಗಂಟೆಗಳ ಕೆಲಸ; ನಂತರ ಮನೆಗೆಲಸ. ಎರಡೂ ಕಡೆ ದುಡಿದು ಹೈರಾಣಾದಳು ಕಲ್ಯಾಣಿ. ಆದರೂ ಚಿನ್ನದಾಸೆ ಬಿಡಲಿಲ್ಲ. ದಿನೇದಿನ ಅವಳ ಆರೋಗ್ಯ ಹದಗೆಟ್ತಿತು.
ಈ ಎರಡೂ ಪ್ರಕರಣಗಳಲ್ಲಿ ಸಮಸ್ಯೆಯ ಕಾರಣ ಅನುಕರಣೆ. ಹಾಗಾದರೆ ಅನುಕರಣೆ ಬೇಡವೇ?
ಜೀವನದಲ್ಲಿ ಅನುಕರಣೆ ಬೇಕು. ಬಾಲ್ಯದಿಂದಲೇ ನಾವು ದಿನನಿತ್ಯದ ಚಟುವಟಿಕೆಗಳನ್ನು ಅನುಕರಣೆಯಿಂದಲೇ ಕಲಿಯುತ್ತೇವೆ. ಭಾಷಾ ಕಲಿಕೆಯನ್ನು ಗಮನಿಸಿ. ಅಪ್ಪ-ಅಮ್ಮ ಹಾಗೂ ಹಿರಿಯರು ಮಾತನಾಡುವುದನ್ನು ಅನುಕರಿಸುತ್ತಲೇ ಅ, ಆ ಇತ್ಯಾದಿ ಸ್ವರಗಳ ಉಚ್ಚಾರವನ್ನು ಮಗು ಕಲಿಯುತ್ತದೆ. ಅಕ್ಷರಗಳನ್ನು ಜೋಡಿಸುತ್ತ ಪದಗಳ ಉಚ್ಚಾರ ಕಲಿಯುತ್ತದೆ. ಕ್ರಮೇಣ ಪದಗಳನ್ನು ಜೋಡಿಸುತ್ತ ವಾಕ್ಯಗಳನ್ನು ರಚಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹಿರಿಯರ ತುಟಿಗಳ ಚಲನೆ ಹಾಗೂ ಅವರು ಹೊರಡಿಸುವ ಧ್ವನಿಗಳ ಅನುಕರಣೆಯೇ ಮುಖ್ಯವಾಗುತ್ತದೆ.
ಮಗುವಿನ ವರ್ತನೆಗಳ ಕಲಿಕೆಯಲ್ಲಿ ಕೂಡ ಅನುಕರಣೆಯೇ ಪ್ರಧಾನ. ನೆಟಿಕೆ ಮುರಿಯುವುದನ್ನು ಅಜ್ಜಿಯಿಂದ, ಸ್ವರವೆತ್ತಿ ಮಾತನಾಡುವುದನ್ನು ಅಜ್ಜನಿಂದ, ಮುದ್ದು ಮಾಡುವುದನ್ನು ಅಮ್ಮನಿಂದ, ಅಳುವುದು- ನಗುವುದನ್ನು ಅಣ್ಣ-ಅಕ್ಕನಿಂದ - ಇವನ್ನೆಲ್ಲ ಅನುಕರಣೆ ಮಾಡುತ್ತಲೇ ಮಗು ಕಲಿಯುತ್ತದೆ.
ಇವೆಲ್ಲ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅಗತ್ಯ. ಈ ದಿಸೆಯಲ್ಲಿ ಇನ್ನೊಬ್ಬರ ಒಳ್ಳೆಯ ಗುಣಗಳನ್ನು ಅನುಕರಿಸುವುದು ಒಳ್ಳೆಯದೇ. ಸತ್ಯ ಹೇಳುವುದು, ಪ್ರಾಮಾಣಿಕತೆ, ಸಮಯಪಾಲನೆ, ಅನುಕಂಪ, ಕೊಟ್ಟ ಮಾತು ಉಳಿಸಿಕೊಳ್ಳುವುದು - ಇವನ್ನೆಲ್ಲ ಇನ್ನೊಬ್ಬರಿಂದ ಅನುಕರಣೆ ಮಾಡಲೇ ಬೇಕು. ಇಲ್ಲವಾದರೆ ನಮ್ಮ ಸಮಾಜ ಜೀವನವೇ ಹದಗೆಟ್ಟು ಹೋದೀತು.
ಅನುಕರಣೆಯ ಅಪಾಯ
ಮೋಸ, ಸುಳ್ಳು ಹೇಳುವುದು, ಕೀಳಾಗಿ ಮಾತಾಡುವುದು, ನಿಂದಿಸುವುದು, ಹೊಟ್ಟೆಕಿಚ್ಚು ಪಡುವುದು, ಸಮಯದ ಪೋಲು - ಇಂಥವನ್ನೂ ಮಗು ಅನುಕರಿಸಿಯೇ ಕಲಿಯುತ್ತದೆ. ಸಾಲ ವಸೂಲಿಗಾಗಿ ಬಂದವನು ಮನೆಯ ಕರೆಗಂಟೆ ಒತ್ತಿದಾಗ, "ಅಪ್ಪ ಮನೆಯಲ್ಲಿಲ್ಲ ಅಂತ ಹೇಳು" ಎಂದಾಗ ಮಗು "ಹೀಗೂ ಮಾಡಬಹುದು" ಎಂದು ಕಲಿಯುತ್ತದೆ. ಅದನ್ನೇ ಅನುಕರಿಸಿ, ಶಾಲೆಗೆ ಚಕ್ಕರ್ ಹೊಡೆದರೂ "ಶಾಲೆಗೆ ಹೋಗಿದ್ದೆ" ಎಂದು ಸುಳ್ಳು ಹೇಳುವ ಅಭ್ಯಾಸ ಮಾಡಿಕೊಳ್ಳುತ್ತದೆ.
ಹೆತ್ತವರು ಗಮನಿಸಿ
೧) ನಿಮ್ಮ ಮಕ್ಕಳು ಆಗಾಗ ಗಂಟಲಿನಲ್ಲಿ ಸದ್ದು ಮಾಡುವುದು, ನಟಿಕೆ ಮುರಿಯುವುದು, ಕೆಮ್ಮುವುದು, ಉಗುರು ಕಚ್ಚುವುದು, ನಾಲಿಗೆಯಿಂದ ತುಟಿ ಸವರಿಕೊಳ್ಳುವುದು ಇಂತಹ ನಡವಳಿಕೆ ತೋರಿದರೆ, ಅವನ್ನು ಮೊಳಕೆಯಲ್ಲೇ ಚಿವುಟಿ ಹಾಕಿ.
೨) ಸ್ವರವೇರಿಸಿ ಮಾತನಾಡುವುದು, ಹೇಳಿದ್ದನ್ನೇ ಹೇಳುವುದು ಅಥವಾ ಸಣ್ಣ ಕಾರಣಗಳಿಗೂ ಸಿಡುಕುವುದು ಇಂಥ ನಡವಳಿಕೆ ನಿಮ್ಮ ಮಕ್ಕಳಲ್ಲಿ ಕಂಡುಬಂದರೆ, ಅವರು ಯಾವ ಟಿವಿ ಸೀರಿಯಲ್ ನೋಡುತ್ತಿದ್ದಾರೆಂದು ಗಮನಿಸಿ. ಅದರ ಪಾತ್ರವೊಂದರ ಅನುಕರಣೆ ಅವರು ಮಾಡುತ್ತಿರಬಹುದು. ಹಾಗಿದ್ದಲ್ಲಿ, ಆ ಟಿವಿ ಸೀರಿಯಲ್ ನೋಡೋದಕ್ಕೆ ತಡೆ ಹಾಕಿ.
೩) ನಿಮ್ಮ ಮಕ್ಕಳ ಗೆಳೆಯ-ಗೆಳತಿಯರನ್ನು ಗಮನಿಸುತ್ತಿರಿ. ಅಹಿತ ಅಥವಾ ಅಸಭ್ಯ ವರ್ತನೆಯನ್ನು ನಿಮ್ಮ ಮಕ್ಕಳು ಶುರು ಮಾಡಿದರೆ, ಯಾರ ಪ್ರಭಾವದಿಂದ ಹಾಗಾಯಿತೆಂದು ಪರೀಕ್ಷಿಸಿ. ಆ ವ್ಯಕ್ತಿಯ ವರ್ತನೆಯ ಅನುಕರಣೆಯ ದುಷ್ಪರಿಣಾಮಗಳನ್ನು ತಿಳಿಸಿ ಹೇಳಿ.
ಕೆಲವರಿಗೆ ಅನುಕರಣೆ ಎಂಬುದೊಂದು ಚಾಳಿಯಾಗಿ ಬಿಡುತ್ತದೆ. ಹದಿಹರೆಯದಲ್ಲಿ ಈ ಚಾಳಿ ಜಾಸ್ತಿ. ಯಾರನ್ನೋ ಹೀರೋ ಎಂದು ಭಾವಿಸಿದರೆ, ಅವರ ಸಾಮಾನ್ಯ ನಡವಳಿಕೆಗಳೂ ವಿಶೇಷ ಅನ್ನಿಸಿ ಬಿಡುತ್ತವೆ. ತುಟಿ ಕೊಂಕಿಸುವಾಗ, ಮುಖ ಊದಿಸುವಾಗ, ನಗುವಾಗ, ನಡೆಯುವಾಗ - ಹೀಗೆ ಬೇರೆಬೇರೆ ನಡವಳಿಕೆಗಳಲ್ಲಿ ಆ ಹೀರೋನನ್ನೇ ಅನುಕರಿಸುತ್ತಾರೆ. ಅದು ಚಾಳಿಯಾಗಿ ಇತರರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಆದರೆ ಅನುಕರಣೆಯ ಸುಳಿಯಲ್ಲಿ ಸಿಲುಕಿದವರು ಅದರಿಂದ ಹೊರಬರಲಾಗದೆ ಚಡಪಡಿಸುತ್ತಾರೆ.
ಸ್ವಂತಿಕೆ ಬಲಿಯಾಗದಿರಲಿ
ಕೆಲವರಲ್ಲಿ ಅನುಕರಣೆಯ ಚಾಳಿ ಯಾವ ಮಟ್ಟ ತಲಪುತ್ತದೆಂದರೆ ಕೊನೆಗೆ ಅವರು ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಾರೆ. ಅವರ ವ್ಯಕ್ತಿತ್ವದ ಬಹುಪಾಲು ಅಂಶಗಳು ಯಾರದೋ ನಕಲಿಯಾಗುತ್ತದೆ. ಆದ್ದರಿಂದ ಅವರು ಸಹಜವಾಗಿಯೇ ಕೀಳರಿಮೆಯಿಂದ ಬಳಲುವ ಸಾಧ್ಯತೆಗಳಿರುತ್ತವೆ.
ಅನುಕರಣೆಗೆ ಬಲಿಯಾಗಿ ಸ್ವಂತಿಕೆ ಕಳೆದುಕೊಳ್ಳ ಬಾರದು ಎಂಬ ಇಚ್ಚೆ ಇರುವವರಿಗೆ ಇಲ್ಲಿದೆ ಒಂದು ಸುಲಭ ಸೂತ್ರ: ನಿಮ್ಮ ಬದುಕಿನ ದೀರ್ಘಾವಧಿ ಗುರಿ ನಿರ್ಧರಿಸಿ. ಇನ್ನು ೧೦ ವರುಷಗಳಲ್ಲಿ ಮತ್ತು ೨೫ ವರುಷಗಳಲ್ಲಿ ನೀವು ಏನಾಗಬೇಕೆಂದು ಈಗಲೇ ನಿಶ್ಚಯಿಸಿ. ಆಗ ನಿಮ್ಮ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಆ ಹಾದಿಯಲ್ಲಿ ಅತ್ತಿತ್ತ ನೋಡದೆ ನಡೆಯುತ್ತ, ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳಿ. ನೀವು ಬೇರೆ ಯಾರಂತೆ ಆಗಬಾರದು, ನೀವು ನೀವೇ ಆಗಬೇಕು, ಅಲ್ಲವೇ?
ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪಕ್ಕದವರು ಬಿಸ್ಕಿಟ್ ಕೊಡುತ್ತಾರೆ. ಅದನ್ನು ತಿಂದ ನಂತರ ಎಚ್ಚರ ತಪ್ಪುತ್ತದೆ. ಎಚ್ಚರವಾದಾಗ ನಮ್ಮ ವಾಚ್, ಬಂಗಾರದ ಉಂಗುರ, ಚೈನ್, ಪರ್ಸ್, ಸೂಟ್ಕೇಸ್ ಮಾಯ. ಇನ್ನೊಂದು ಸನ್ನಿವೇಶ: ಮನೆಯ ಬಾಗಿಲು ಬಡಿದ ಸದ್ದು ಕೇಳಿ ಬಾಗಿಲು ತೆಗೆದಾಗ, ಅಪರಿಚಿತರು ನೀರು ಕೇಳುತ್ತಾರೆ ಅಥವಾ ಆಹ್ವಾನ ಪತ್ರಿಕೆ ಕೊಡುತ್ತಾರೆ. ಅವರನ್ನು ಮನೆಯ ಒಳಗೆ ಸೇರಿಸಿಕೊಂಡರೆ ನಿಮಗೆ ಅರಿವಿಲ್ಲದಂತೆಯೇ ಮನೆಯ ಸೊತ್ತನ್ನೆಲ್ಲ ದೋಚಿಕೊಂಡು ಹೋಗಿರುತ್ತಾರೆ.
ಅಪರಿಚಿತರು ಕೊಟ್ಟದ್ದನ್ನು ತಿನ್ನಬಾರದು ಮತ್ತು ಅಪರಿಚಿತರನ್ನು ಮನೆಯೊಳಗೆ ಬಿಡಬಾರದೆಂದು ನಮಗೆಲ್ಲ ಚೆನ್ನಾಗಿ ತಿಳಿದಿದೆ. ಆದರೂ ಏಕೆ ಹೀಗಾಗುತ್ತದೆ? ಏಕೆಂದರೆ ನಾವು ನಮ್ಮ ಪ್ರಜ್ನೆಯನ್ನು ಬಳಸಿಕೊಳ್ಳುತ್ತಿಲ್ಲ!
ಏನಿದು ಪ್ರಜ್ನೆ? ಪ್ರಜ್ನೆ ಎಂದರೆ ಅತ್ಯಂತ ಎಚ್ಚರದ ಸ್ಥಿತಿ. ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡದಿರುವುದು. ನಾವೆಲ್ಲರೂ ಬಹಳ ಎಚ್ಚರದಿಂದ ಇರುತ್ತೇವೆ ಎಂದೇ ಅಂದುಕೊಳ್ಳುತ್ತೇವೆ. ಉದಾಹರಣೆಗೆ, ಸೈಕಲ್, ಬೈಕ್ ಅಥವಾ ವಾಹನ ಚಲಾಯಿಸುವಾಗ, ವಿದ್ಯುತ್ ಉಪಕರಣ ಬಳಸುವಾಗ ನಾವು ಎಚ್ಚರಿಕೆಯಿಂದಲೇ ಇರುತ್ತೇವೆ. ಆದರೂ ಅಪಘಾತಗಳು ಆಗುತ್ತವೆ. ಏಕೆಂದರೆ ಎಚ್ಚರಿಕೆ ಬೇರೆ, ಎಚ್ಚರದ ಸ್ಥಿತಿ ಬೇರೆ.
ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ನೀವೀಗ ಓದುತ್ತಿರುವುದು ನಿಮಗೆ ಸಂಪೂರ್ಣ ಅರ್ಥ ಆಗುತ್ತಿದೆಯೇ? ಯಾರೊಡನೆಯೋ ಮಾತನಾಡುವಾಗ ಅವರ ಮಾತಿನ ಉದ್ದೇಶ ಮತ್ತು ಗೂಡಾರ್ಥ ನಿಮಗೆ ನೂರಕ್ಕೆ ನೂರರಷ್ಟು ಅರ್ಥ ಆಗುತ್ತದೆಯೇ? ಯಾವುದೇ ಕೆಲಸ ಮಾಡುವಾಗ ಅದರಲ್ಲಿ ನಾವು ಸಂಪೂರ್ಣ ತೊಡಗಿಕೊಳ್ಳುವುದು ಅಪರೂಪ. ನಮ್ಮ ಗಮನ ಆಗಾಗ ಬೇರೆತ್ತಲೋ ಜಿಗಿದಿರುತ್ತದೆ. ಇದು ನಮ್ಮ ಅಭ್ಯಾಸ. ಆದ್ದರಿಂದಲೇ ನಮಗೆ ಸಂಪೂರ್ಣ ಪ್ರಜ್ನೆಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ಪ್ರಜ್ನೆಯಿಂದ ಅರಿವು
ಸಂಪೂರ್ಣ ಪ್ರಜ್ನಾವಂತರಾಗಿ ಇರಬೇಕಾದರೆ, ಒಂದು ಕೆಲಸ ಮಾಡುತ್ತಿರುವಾಗ ಇನ್ನೊಂದಕ್ಕೆ ಗಮನ ಕೊಡುವ ಪರಿಪಾಠ ನಿಲ್ಲಿಸಬೇಕು. ಏಕೆಂದರೆ ಒಂದು ಕ್ಷಣದಲ್ಲಿ ಒಂದು ಕೆಲಸಕ್ಕೆ ಮಾತ್ರ ಗಮನ ಕೊಡಲು ಸಾಧ್ಯ. ಊಟ ಮಾಡುತ್ತ ಟಿವಿ ನೋಡುತ್ತಿದ್ದರೆ ಊಟವನ್ನೂ ಸರಿಯಾಗಿ ಅನುಭವಿಸಲಾಗದು ಮತ್ತು ಟಿವಿಯಲ್ಲಿ ನೋಡಿದ್ದನ್ನೂ ಸರಿಯಾಗಿ ಅನುಭವಿಸಲಿಕ್ಕಾಗದು. ಪಂಚೇಂದ್ರಿಯಗಳಿಂದ ಬರುವ ಸಂದೇಶಗಳನ್ನು ಪರಾಮರ್ಶೆಗೆ ಒಳಪಡಿಸಲು ನಾವು ಕಲಿತಿರುವುದಿಲ್ಲ. ಸಂಪೂರ್ಣ ಜಾಗೃತ ಸ್ಥಿತಿಯಲ್ಲಿ ನಾವು ಇರಬೇಕಾದರೆ ಮುಖ್ಯವಾಗಿ ಕಣ್ಣುಬಿಟ್ಟು ನೋಡಲು ಮತ್ತು ಕಿವಿಗೊಟ್ಟು ಕೇಳಲು ಕಲಿಯಬೇಕಾಗಿದೆ. ಅರೆಬರೆ ನೋಡುವ ಮತ್ತು ಅರೆಬರೆ ಕೇಳುವ ನಮ್ಮ ಅಭ್ಯಾಸವನ್ನೇ ಬದಲಾಯಿಸಿಕೊಳ್ಳ ಬೇಕಾಗಿದೆ.
ಪ್ರಜ್ನಾಪೂರ್ವಕ ನಿರ್ಧಾರಗಳು
ಬೆಳಗ್ಗೆ ಎಷ್ಟು ಹೊತ್ತಿಗೆ ಏಳಬೇಕು? ರಾತ್ರಿ ಯಾವಾಗ ಮಲಗಬೇಕು? ಇತ್ಯಾದಿ ದಿನನಿತ್ಯದ ಕೆಲಸಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸುಲಭ. ಆದರೆ ನಮ್ಮ ಬದುಕಿನಲ್ಲಿ ದೂರಗಾಮಿ ಪರಿಣಾಮ ಬೀರುವ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕಷ್ಟ.
ಯಾವ ಕೋರ್ಸಿಗೆ ಸೇರಬೇಕು? ಯಾವ ಕೆಲಸಕ್ಕೆ ಸೇರಬೇಕು? ಯಾರ ಸ್ನೇಹ ಮಾಡಬೇಕು? ಯಾರನ್ನು ಮದುವೆ ಆಗಬೇಕು? ಯಾವುದರಲ್ಲಿ ಹಣ ಹೂಡಬೇಕು? ಉಳಿತಾಯದ ಹಣ ಎಲ್ಲಿ ತೊಡಗಿಸಬೇಕು? ಯಾವ ಊರಿನಲ್ಲಿ ಮನೆ ಕಟ್ಟಬೇಕು? ಇಂತಹ ನಿರ್ಧಾರಗಳನ್ನು ಪ್ರಜ್ನಾಪೂರ್ವಕವಾಗಿ ಕೈಗೊಳ್ಳಬೇಕು. ಅಂದರೆ, ಅನುಕೂಲ ಹಾಗೂ ಅನಾನುಕೂಲಗಳನ್ನು ತೂಗಿ ನೋಡಬೇಕು. ನಮ್ಮ ಇಂದಿನ ನಿರ್ಧಾರದಿಂದಾಗಿ ಮುಂದೊಂದು ದಿನ ನಾವೇ ಪಶ್ಚಾತಾಪ ಪಡುವಂತಾಗಬಾರದು.
"ಅರ್ಧ ಬೆಲೆಗೆ ನಿಮಗೆ ಬೇಕಾದ್ದನ್ನು ಖರೀದಿಸಿ. ಟಿವಿ, ಪ್ರಿಜ್, ಡಿವಿಡಿ ಪ್ಲೇಯರ್, ಕೆಮರಾ, ಬೈಕ್, ಕಾರು ಏನು ಬೇಕಾದರೂ ಖರೀದಿಸಿರಿ..." ಎಂಬ ಜಾಹೀರಾತು ಕಂಡರೆ, ಈಗಲೂ ಜನ ಆ ಅಂಗಡಿಗೆ ಮುಗಿಬೀಳುತ್ತಾರೆ. ಮುಂಗಡ ತೆತ್ತು ಆ ಸೊತ್ತು ತಮ್ಮ ಕೈಗೆ ಬರಲಿಕ್ಕಾಗಿ ವಾರಗಟ್ಟಲೆ ಕಾಯುತ್ತಾರೆ. ಉದಾಹರಣೆಗೆ ೬೨೫ ಪ್ಲಾಂಟೇಷನ್ ಕಂಪೆನಿಗಳು ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ಜನರಿಗೆ ಕೋಟಿಗಟ್ಟಲೆ ರೂಪಾಯಿ ಹಣ ಟೊಪ್ಪಿ ಹಾಕಿದವು. "ಈಗ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ, ಇಪ್ಪತ್ತು ವರುಷಗಳ ಕೊನೆಗೆ ೨೦ ಲಕ್ಷ ರೂಪಾಯಿ ಹಿಂತಿರುಗಿಸುತ್ತೇವೆ" ಎಂದಾಗ ಜನ ನಂಬಿದರು. ಸಾಗುವಾನಿ ಗಿಡ ೨೦ ವರುಷಗಳಲ್ಲೇ ಬೆಳೆದು ದಿಮ್ಮಿಯಾಗುತ್ತದೆಯೇ? ಇಲ್ಲ. ಕನಿಷ್ಠ ೬೦ ವರುಷಗಳು ಬೇಕು! ಖಾಸಗಿ ಕಂಪೆನಿಗಳು ಕಾನೂನಿನ ಪ್ರಕಾರ (ಆಗ) ಕೃಷಿ ಜಮೀನು ಖರೀದಿಸಲು ಸಾಧ್ಯವೇ? ಈಗಾಗಲೇ ಆ ಜಮೀನು ಖರೀದಿಸಿವೆಯೇ? ಎಲ್ಲಿ? ಎಂಬ ಸರಳ ಪ್ರಶ್ನೆಗಳನ್ನೂ ಜನ ಕೇಳಲಿಲ್ಲ. ಆದರೆ ಠೇವಣಿ ಸಂಗ್ರಹವಾದ ಒಂದೆರಡು ವರುಷಗಳಲ್ಲೇ ಪ್ಲಾಂಟೇಷನ್ ಕಂಪೆನಿಗಳು ಕಾಣದಂತೆ ಮಾಯವಾದವು.
ಶೇಕಡಾ ೨೪ರಿಂದ ೩೬ರ ವಾರ್ಷಿಕ ಬಡ್ಡಿಯ ಆಮಿಷ ಒಡ್ಡಿ, ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟನೆ, ವರ್ಣರಂಜಿತ ಮಾಹಿತಿ ಪತ್ರಗಳು, ಬೀದಿಬೀದಿಗಳಲ್ಲಿ ಜಾಹೀರಾತು ಫಲಕಗಳು, ಝಗಮಗಿಸುವ ಕಚೇರಿಗಳು - ಇವುಗಳಿಂದ ಜನಸಾಮಾನ್ಯರನ್ನು ಮರುಳು ಮಾಡಿದ ಬ್ಲೇಡ್ ಕಂಪನಿಗಳು ಸಾವಿರಾರು ಕೋಟಿ ರೂಪಾಯಿಗಳನ್ನು ನುಂಗಿಹಾಕಿದವು.
ಇಂಥ ಮೋಡಿಗೆ ಒಳಗಾದವರ ಪ್ರಜ್ನೆ ಎಲ್ಲಿ ಹೋಗಿತ್ತು? ಅದು ಒಳದನಿಯ ರೂಪದಲ್ಲಿ ಎಚ್ಚರಿಸುತ್ತಿತ್ತು! ಆದರೆ ಅದನ್ನು ಕೇಳುವ ವ್ಯವಧಾನ, ಅರ್ಥ ಮಾಡಿಕೊಳ್ಳುವ ತಾಳ್ಮೆ ಮತ್ತು ನಿರ್ಧಾರವನ್ನು ಪುನರ್ ಪರಿಶೀಲಿಸುವ ಜಾಗೃತ ಮನಃಸ್ಥಿತಿ ಅವರಲ್ಲಿ ಇರಲಿಲ್ಲ. ಆಗ ಒಳದನಿಗೆ ಕಿವಿಗೊಡದ ತಪ್ಪಿಗೆ ಈಗ ದಂಡ ತೆರಬೇಕಾಗಿದೆ.
ಒಂದು ಕ್ಷಣ ನಿಮ್ಮ ಕೈ ಹೆಬ್ಬೆರಳಿನ ತುದಿಯಿಂದ ತೋರುಬೆರಳ ತುದಿಯನ್ನು ಒತ್ತಿ ಹಿಡಿದುಕೊಳ್ಳಿ. ಆ ಬೆರಳ ತುದಿಗಳಲ್ಲಿ "ನಿಮ್ಮದೇ ನಾಡಿಮಿಡಿತ" ನಿಮ್ಮ ಅನುಭವಕ್ಕೆ ಬರುತ್ತದೆಯೇ? ಸಂಪೂರ್ಣ ಪ್ರಜ್ನೆಯ ಸ್ಥಿತಿಯಲ್ಲಿದ್ದಾಗ ಅದು ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ.
ಇದೇ ಸಾಧನೆಯನ್ನು ಮುಂದುವರಿಸಿದರೆ, ನಿಮ್ಮ ದೇಹದ ಕೋಶಕೋಶದಲ್ಲಿ ಏನಾಗುತ್ತದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಹಸಿವು, ದಣಿವು, ನೋವು, ನಿಮ್ಮ ಮನಸ್ಸಿನ ಪದರಪದರದ ಆಗುಹೋಗುಗಳು ನಿಮಗೆ ಅರ್ಥವಾಗಲು ಶುರುವಾಗುತ್ತದೆ. ನಂತರದ ಹಂತದಲ್ಲಿ ನಿಮ್ಮ ಸುತ್ತಲಿನ ವ್ಯಕ್ತಿಗಳಲ್ಲಿ ಹಾಗೂ ವಸ್ತುಗಳಲ್ಲಿ ಏನಾಗುತ್ತಿದೆ ಎಂಬುದನ್ನು ಗ್ರಹಿಸಲು ನಿಮಗೆ ಸಾಧ್ಯವಾಗುತ್ತದೆ. ಇದುವೇ ಪ್ರಜ್ನೆಯ ಪರಕಾಷ್ಠೆಯ ಸ್ಥಿತಿ. ಆ ಸ್ಥಿತಿಯನ್ನು ತಲುಪಿ, ಅತ್ಯಂತ ಜಾಗೃತಾವಸ್ಥೆಯಲ್ಲಿ ನಿಮ್ಮ ಬದುಕಿನ ಕ್ಷಣಕ್ಷಣವನ್ನೂ ಬೆಳಗಿಸುವ ಪ್ರಜ್ನೆಯನ್ನು ನಿಮ್ಮದಾಗಿಸಿಕೊಳ್ಳಿ.
ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ
ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ
ಬ್ರಹ್ಮಾನುಭವಿಯಾಗುವ ದಾರಿಯನ್ನು ಅತ್ಯಂತ ಸರಳವಾಗಿ ನಮಗೆ ಈ ಮುಕ್ತಕದಲ್ಲಿ ತೋರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಒಮ್ಮೆ ಹೂದೋಟದಲ್ಲಿ, ಒಮ್ಮೆ ಗೆಳೆಯರ ಕೂಟದಲ್ಲಿ, ಒಮ್ಮೆ ಸಂಗೀತದ ಸ್ವಾದದಲ್ಲಿ, ಇನ್ನೊಮ್ಮೆ ಶಾಸ್ತ್ರಗಳ ಅಧ್ಯಯನದಲ್ಲಿ, ಮತ್ತೊಮ್ಮೆ ಸಂಸಾರದ ಅನುಭವಗಳಲ್ಲಿ, ಮಗದೊಮ್ಮೆ ಮೌನದ ಆಳದಲ್ಲಿ ಆ ಪರಬ್ರಹ್ಮನ ಇರುವಿಕೆಯನ್ನು ಪೂರ್ಣವಾಗಿ ಅನುಭವಿಸು ಎನ್ನುತ್ತಾರೆ. ಬದುಕಿನ ಎಲ್ಲ ಅನುಭವಗಳಿಗೂ ತೆರೆದುಕೊಳ್ಳಬೇಕು; ಪ್ರತಿಯೊಂದು ಅನುಭವದಲ್ಲಿಯೂ ಪರಬ್ರಹ್ಮನ ಇರುವಿಕೆಯನ್ನು ಗುರುತಿಸುತ್ತಾ ಪೂರ್ಣತ್ವದೆಡೆಗೆ ಸಾಗಬೇಕು ಎಂಬುದು ಡಿ.ವಿ.ಜಿ.ಯವರ ಸಂದೇಶ.
ಹೂದೋಟದಲ್ಲಿ ಬಿತ್ತಿದ ಬೀಜವೊಂದು ಮೊಳಕೆಯೊಡೆದು ಸಸಿಯಾಗಿ ಬೆಳೆಯುವುದು ಒಂದು ಅದ್ಭುತ. ನಿನ್ನೆಯ ಮೊಗ್ಗು ಇಂದು ಹೂವಾಗಿ ಅರಳುವುದು ಇನ್ನೊಂದು ಅದ್ಭುತ. ಈ ಎರಡು ಕ್ರಿಯೆಗಳು ಸೃಷ್ಟಿಯ ರಹಸ್ಯಗಳನ್ನೆಲ್ಲ ಒಳಗೊಂಡಿವೆ. ಪ್ರತಿಯೊಂದು ಹೂವಿನ ರೂಪ, ಆಕಾರ, ಗಾತ್ರ, ದಳಗಳ ಸಂಯೋಜನೆ, ಬಣ್ಣ ಭಿನ್ನಭಿನ್ನ. ಹಾಗೆಯೇ ನಮ್ಮ ಮಿತ್ರಕೂಟದ ಪ್ರತಿಯೊಬ್ಬ ಸ್ನೇಹಿತನೂ ವಿಭಿನ್ನ. ಕ್ಷಣಕ್ಷಣವೂ ಅವರ ಮನದಾಳದ ಭಾವನೆಗಳು ಏನೆಂಬುದು ನಿಗೂಢ. ಕೆಲವರು ಸ್ನೇಹದ ಮುಖವಾಡ ತೊಟ್ಟು ನಮಗೆ ದ್ರೋಹ ಬಗೆಯುತ್ತಲೇ ಇರುತ್ತಾರೆ. ಇಂಥವರ ಮುಖವಾಡಗಳ ಹಿಂದಿರುವ ದುರುಳತನ, ನೀಚತನಗಳ ಪತ್ತೆ ಹೇಗೆ? ಎಂಬುದೇ ನಾವು ಎದುರಿಸುವ ದೊಡ್ಡ ಸವಾಲು.
ಸಂಗೀತ, ನಾಟ್ಯ, ಚಿತ್ರಕಲೆ, ಶಿಲ್ಪಕಲೆ, ಜಾನಪದ ಕಲೆ – ಇವೆಲ್ಲವೂ ನಮ್ಮ ಬದುಕು ಅರಳಲು ಮತ್ತು ನಮ್ಮ ಅರಿವು ವಿಸ್ತಾರವಾಗಲು ಅಗತ್ಯ. ಹಲವರು ಇದ್ಯಾವುದಕ್ಕೂ ತೆರೆದುಕೊಳ್ಳದೆ ತಮ್ಮ ಜೀವನವನ್ನೇ ಮುಗಿಸುತ್ತಾರೆ. ಎಂ.ಎಸ್. ಸುಬ್ಬುಲಕ್ಷ್ಮಿ, ಭೀಮಸೇನ ಜೋಷಿ ಇಂತಹ ಸಂಗೀತ ದಿಗ್ಗಜಗಳ ಗಾಯನ ನೀಡುವ ದಿವ್ಯ ಅನುಭವವನ್ನು ಶಬ್ದಗಳಲ್ಲಿ ವಿವರಿಸಲಾದೀತೇ? ಅದೇ ರೀತಿಯಲ್ಲಿ, ವಿವಿಧ ಶಾಸ್ತ್ರಗಳ ಅಧ್ಯಯನವು ನಮ್ಮ ಅರಿವಿನ ಲೋಕದ ದಿಗಂತವನ್ನು ವಿಸ್ತರಿಸುತ್ತದೆ, ಅಲ್ಲವೇ? ಭೌತಶಾಸ್ತ್ರದಿಂದ ತೊಡಗಿ, ಸಾಹಿತ್ಯ ಸಹಿತವಾಗಿ ಕಂಪ್ಯೂಟರ್ ವಿಜ್ನಾನದ ವರೆಗಿನ ಅಗಾಧ ಜ್ನಾನಲೋಕಕ್ಕೆ ತೆರೆದುಕೊಳ್ಳದಿದ್ದರೆ ಬಾಳು ಬರಡಾದೀತು. ಹಾಗೆಯೇ ಸಾಂಸಾರಿಕ ಬದುಕೆಂಬುದೊಂದು ಸಾಗರ. ಅದರ ಆಳ-ಅಗಲ ಈಸಿ ತಿಳಿಯಬೇಕು. ಮೌನದ ಲೋಕದಲ್ಲಂತೂ ಪ್ರತಿಕ್ಷಣದಲ್ಲಿ ಬದುಕಿನ ಮೂಲಭೂತ ಪ್ರಶ್ನೆಗಳಿಗೆ ನಮ್ಮ ಮುಖಾಮುಖಿ. ಇವೆಲ್ಲದಕ್ಕೆ ತೆರೆದುಕೊಳ್ಳುವುದೇ ಬ್ರಹ್ಮಾನುಭವಿಯಾಗುವ ಸಾಧನೆಯ ದಾರಿ.
ನಿನಗೊದಗಿದ ಪ್ರಶ್ನೆಗಳ ನೀನೆ ಹರಿಸಿಕೊಳೊ
ಎನಿತು ದಿನವವರಿವರನವಲಂಬಿಸಿರುವೆ?
ಹೆಣ ಹೊರೆಯವರವರಿಗವರವರೆ ಹೊರುವನಿತು
ನಿನಗೆ ನೀನೇ ಗತಿಯೋ – ಮರುಳ ಮುನಿಯ
ಪ್ರತಿಯೊಬ್ಬರಿಗೂ ಬದುಕಿನಲ್ಲಿ ಸಾಲುಸಾಲು ಪ್ರಶ್ನೆಗಳು. ಬಹುಪಾಲು ಜನರು, ಒಮ್ಮೆ ಒಬ್ಬರ ಬಳಿ, ಇನ್ನೊಮ್ಮೆ ಇನ್ನೊಬ್ಬರ ಬಳಿ ಹೋಗಿ, ತಮ್ಮ ಪ್ರಶ್ನೆಗಳಿಗೆ ಉತ್ತರ ಬಯಸುತ್ತಾರೆ; ಉತ್ತರಕ್ಕಾಗಿ ಪೀಡಿಸುತ್ತಾರೆ. ಕೊನೆಗೆ ಉತ್ತರ ಸಿಗದೆ ಅಥವಾ ಸಿಕ್ಕ ಉತ್ತರದಿಂದ ಸಮಾಧಾನವಾಗದೆ ಮತ್ತೊಬ್ಬರ ಬಳಿ ಹೋಗಿ ತಮ್ಮ ಪ್ರಶ್ನೆಯ ಉತ್ತರದ ಹುಡುಕಾಟ ಮುಂದುವರಿಸುತ್ತಾರೆ. ಅದಕ್ಕಾಗಿಯೇ ಈ ಮುಕ್ತಕದಲ್ಲಿ ಮಾನ್ಯ ಡಿವಿಜಿಯವರು ಮಾರ್ಮಿಕ ಸಂದೇಶ ನೀಡುತ್ತಾರೆ: ನಿನಗೆ ಎದುರಾದ ಪ್ರಶ್ನೆಗಳನ್ನು ನೀನೇ ಪರಿಹರಿಸಿಕೊ. ಇನ್ನು ಎಷ್ಟು ದಿನ ನಿನ್ನ ಪ್ರಶ್ನೆಗಳ ಉತ್ತರಕ್ಕಾಗಿ ಇತರರನ್ನು ಅವಲಂಬಿಸಿ ಇರುತ್ತಿ? ಈ ಭೂಮಿಯಲ್ಲಿರುವ ಪ್ರತಿಯೊಬ್ಬರಿಗೂ ಅವರವರು ಹೊರುವಷ್ಟು ಹೆಣಹೊರೆ (ಅವರದೇ ಜಂಜಡಗಳು, ಸಂಕಟಗಳು, ಸಮಸ್ಯೆಗಳು) ಇರುತ್ತವೆ. ನಿನ್ನ ಪ್ರಶ್ನೆಗಳ ಬಗ್ಗೆ ಚಿಂತಿಸಲು, ಉತ್ತರಕ್ಕಾಗಿ ಹುಡುಕಾಡಲು ಅವರಿಗೆಲ್ಲಿ ಬಿಡುವಿದೆ? ಆದ್ದರಿಂದ ನಿನಗೆ ನೀನೇ ಗತಿ.
ಬದುಕಿನ ಅರ್ಥವೇನು? ನಾನು ಯಾಕಾಗಿ ಬದುಕಿದ್ದೇನೆ? (ಆ ಜಗನ್ನಿಯಾಮಕ ನನ್ನನ್ನು ಇನ್ನೂ ಯಾಕೆ ಬದುಕಿಸಿದ್ದಾನೆ?) ನಾನು ಯಾರಿಗಾಗಿ ಬದುಕಿದ್ದೇನೆ? (ನಾನು ಎಂದಾದರೂ ನನಗಾಗಿ ಬದುಕಿದ್ದೇನೆಯೇ?) – ಇಂತಹ ಮೂಲಭೂತ ಪ್ರಶ್ನೆಗಳನ್ನು ಎಂದಾದರೂ ಕೇಳಿಕೊಂಡಿದ್ದೀರಾ? ಈ ಭೂಮಿಯ ಎಲ್ಲ ಜೀವಿಗಳಿಗೂ ಇರುವ ಒಂದೇ ಒಂದು ಬದುಕಿನ ಗುರಿ: ಈ ಭೂಮಿಯಲ್ಲಿ ತಮ್ಮ ಸಂತಾನದ ಮುಂದುವರಿಕೆ. ಆ ಗುರಿಸಾಧನೆಗೆ ಬೇಕಾದ ಎಲ್ಲ ಸಾಮರ್ಥ್ಯಗಳನ್ನು ಅವು ಬೆಳೆಸಿಕೊಂಡಿವೆ. (ಸರ್ವನಾಶವಾದ ದೈತ್ಯಪ್ರಾಣಿ ಡೈನೊಸಾರ್ ಇತ್ಯಾದಿ ವಿನಾಯ್ತಿಗಳಿವೆ.) ಆದರೆ, ಮಾನವರ ಸಂಗತಿ ಹಾಗಲ್ಲ. ಪ್ರತಿಯೊಬ್ಬ ಮಾನವನ ಬದುಕಿಗೂ, ಉನ್ನತ ಗುರಿಯೊಂದು ಇದೆ. ಅದನ್ನು ಕಂಡುಕೊಳ್ಳುವುದೇ ಗುರಿಸಾಧನೆಯ ಮೊದಲ ಹೆಜ್ಜೆ. ಉದಾಹರಣೆಗೆ, ಎಂ.ಎಸ್. ಸುಬ್ಬುಲಕ್ಷ್ಮಿಯವರು ಜನಪ್ರಿಯ ಸಿನಿಮಾ ನಟಿ ಆಗಬಹುದಿತ್ತು. ಆದರೆ, ಅವರು ಆಯ್ಕೆ ಮಾಡಿದ್ದು ಸಂಗೀತದಲ್ಲಿ ಉತ್ತುಂಗಕ್ಕೆ ಏರುವ ಹಾದಿಯನ್ನು. ಹಾಗಾದರೆ, ಅವರ ಬದುಕಿನ ಗುರಿ ಏನಾಗಿತ್ತು? “ಮನುಕುಲದ ಸೇವೆಯೇ” ಅವರ ಬದುಕಿನ ಗುರಿ ಆಗಿತ್ತು. ಹೀಗೆ, ನಮ್ಮ ಬದುಕಿನ ಪ್ರಶ್ನೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕು. ನಿನಗೆ ನೀನೇ ಗತಿ ಎಂಬುದೇ ಸತ್ಯ, ಅಲ್ಲವೇ?
ಅಡಿ ಜಾರಿ ಬೀಳುವುದು, ತಡವಿಕೊಂಡೇಳುವುದು
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು
ಬದುಕೆಂಬುದಿದು ತಾನೆ? - ಮಂಕುತಿಮ್ಮ
ಕಾಲು ಜಾರಿ ಬೀಳುವುದು, ಬಿದ್ದಲ್ಲಿಂದ ಮೈ ತಡವಿಕೊಂಡು ಏಳುವುದು. ರುಚಿಯಾಗಿದೆಯೆಂದು ಕಡುಬನ್ನು ನುಂಗುವುದು; ಅನಂತರ ಹೊಟ್ಟೆ ಕೆಟ್ಟಿತೆಂದು ಕಹಿಮದ್ದು ಕುಡಿಯುವುದು. ದುಡುಕಿ, ಮತಿಗೆಟ್ಟು ತಪ್ಪು ಮಾಡುವುದು; ಬಳಿಕ ಅದು ತಪ್ಪಲ್ಲ, ಅದು ಸರಿಯಾದದ್ದೇ ಎಂದು ವಾದಿಸುವುದು. ಇದುವೇ ಬದುಕು ತಾನೇ? ಎಂದು ಪ್ರಶ್ನಿಸುವ ಮೂಲಕ ಈ ಮುಕ್ತಕದಲ್ಲಿ ನಮ್ಮ ವಿವೇಕವನ್ನು ಮೀಟುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಜಾಗ್ರತೆ ಮಾಡದೆ ಹೆಜ್ಜೆಯಿಟ್ಟರೆ ಬಿದ್ದೇ ಬೀಳುತ್ತೇವೆ. ವಾಹನ ಅಪಘಾತಗಳನ್ನು ಗಮನಿಸಿ. ವಾಹನ ಚಾಲಕರೆಲ್ಲರೂ ವಾಹನ ಚಲಾವಣೆ ತರಬೇತಿ ಪಡೆದು, ಪರೀಕ್ಷೆಯಲ್ಲಿ ಪಾಸಾಗಿ, ವಾಹನ ಚಲಾವಣಾ ಪರವಾನಗಿ ಪಡೆದಿರುತ್ತಾರೆ. ಆದರೂ, ಭಾರತದಲ್ಲಿ ಅತ್ಯಧಿಕ ಸಾವುಗಳು ಆಗುತ್ತಿರುವುದು ವಾಹನ ಅಪಘಾತಗಳಿಂದ! ಮದ್ಯಪಾನ ಮಾಡಿ ವಾಹನ ಓಡಿಸುವುದು, ಅತಿ ವೇಗದಿಂದ ಅಥವಾ ಅತಿ ಭಾರ ಹೇರಿಕೊಂಡು ವಾಹನ ಚಲಾಯಿಸುವುದು – ಇವೆಲ್ಲ ಬೇಕುಬೇಕೆಂದೇ ಅಡಿ ಜಾರಿ ಬೀಳುವ ನಿದರ್ಶನಗಳು.
ಸಿಗರೇಟು/ ಬೀಡಿ ಸೇದುವುದು, ತಂಬಾಕು ಸೇವನೆ, ಮದ್ಯಪಾನ – ಇವೆಲ್ಲ ಜೀವಕ್ಕೇ ಕುತ್ತು ಎಂದು ಗೊತ್ತಿದ್ದರೂ, ಆ ಚಟಕ್ಕೆ ಬಲಿಯಾಗುವವರನ್ನು ಗಮನಿಸಿ. ಕಡುಬು ನುಂಗಿ, ಕಹಿಮದ್ದು ಕುಡಿಯುವಂತೆ, ಅನಂತರ ಈ ಚಟಗಳಿಂದ ಪಾರಾಗಲು ಜೀವಮಾನವಿಡೀ ಹೆಣಗುತ್ತಾರೆ; ಹಲವರು ಕ್ಯಾನ್ಸರಿನಿಂದ ಸಾಯುತ್ತಾರೆ. ಮಾದಕದ್ರವ್ಯಗಳ ಸೇವನೆಯ ಚಟವೂ ಭಯಾನಕ. ೨೦೧೭ರಲ್ಲಿ ವರದಿಯಾಗಿರುವ ಮಂಗಳೂರಿನ ಪ್ರದೇಶದಲ್ಲಿ ಮಾದಕ ದ್ರವ್ಯಗಳನ್ನು ಪೊಲೀಸರು ವಶಪಡಿಸಿಕೊಂಡ ಹತ್ತಾರು ಪ್ರಕರಣಗಳು, ಈ ಚಟದ ಕರಾಳ ಬಾಹುಗಳ ಪುರಾವೆಗಳು.
ಸರಕಾರವೇ ದುಡುಕಿ ಮತಿದಪ್ಪಿ, ತದನಂತರ ತಾನು ಮಾಡಿದ್ದೇ ಸರಿ ಎಂದು ಸಾಧಿಸುವುದಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಗುಹೋಗುಗಳೇ ಪುರಾವೆ. ಆ ಇಲಾಖೆಯಲ್ಲಿ ಕಳೆದ ೩ ವರುಷದಲ್ಲಿ ೧೪ ಆಯುಕ್ತರನ್ನು ಎತ್ತಂಗಡಿ ಮಾಡಲಾಗಿದೆ! ಪಡಿತರ ಧಾನ್ಯ ಕಳ್ಳತನ, ಅನ್ನಭಾಗ್ಯದ ಭ್ರಷ್ಟಾಚಾರ ಆ ಇಲಾಖೆಯ ನಿರಂತರ ಕಳಂಕ. ಈ ವರೆಗೆ ಪತ್ತೆಯಾಗಿರುವ ನಕಲಿ ರೇಷನ್ ಕಾರ್ಡುಗಳ ಸಂಖ್ಯೆ ೨೦ ಲಕ್ಷಕ್ಕಿಂತ ಅಧಿಕ! ಆ ಕಾರ್ಡುಗಳಿಗೆ ಸಹಿ ಮಾಡಿದವರು ಅದೇ ಇಲಾಖೆಯ ಅಧಿಕಾರಿಗಳು! ಇಷ್ಟೆಲ್ಲ ಆದರೂ, ತಾನು ಕೈಗೊಂಡ ಕ್ರಮಗಳೆಲ್ಲ ಸರಿ ಎಂದೇ ಸಮರ್ಥಿಸುತ್ತದೆ ನಮ್ಮ ಘನ ಸರಕಾರ! ಇದೇ ಬದುಕು, ಅಲ್ಲವೇ?
ಬದುಕೆಂಬ ಹೆಸರಿನಲಿ ನೀಂ ಜಗವ ಜಗ ನಿನ್ನ
ಕುದಿಸುತ್ತ ಕೆದಕುತ್ತ ಕುಲುಕುತಿರುವಂದು
ಬದಲಾಗದೆಂತು ನೀಮಿರ್ಪುದೀ ನಿಮ್ಮಾಟ
ವಿಧಿಯ ನಿತ್ಯವಿಲಾಸ – ಮರುಳ ಮುನಿಯ
ಬದುಕು ಎಂಬ ಹೆಸರಿನಲ್ಲಿ ನೀನು ಜಗತ್ತನ್ನೂ, ಜಗತ್ತು ನಿನ್ನನ್ನೂ ಕುದಿಸುತ್ತ ಕೆದಕುತ್ತ ಕುಲುಕುತ್ತಿದೆ. ಹೀಗಿರುವಾಗ ನೀನು, ನಿನ್ನ ಇರುವಿಕೆ ಬದಲಾಗದಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸುವ ಮಾನ್ಯ ಡಿವಿಜಿಯವರು ಈ ನಿಮ್ಮ ಆಟ ವಿಧಿಯ ನಿತ್ಯವಿಲಾಸ ಎನ್ನುತ್ತಾರೆ. ಇದು ಸತ್ಯವೆಂಬುದಕ್ಕೆ ಚರಿತ್ರೆಯಲ್ಲಿ ನಿದರ್ಶನಗಳು ಹಲವಾರು. ಚಕ್ರವರ್ತಿ ಅಲೆಗ್ಸಾಂಡರ್ ದಂಡೆತ್ತಿ ಹೊರಟು, ಭಾರತದ ವರೆಗೂ ಬಂದದ್ದು! ಅಲ್ಲಾವುದ್ದೀನ್ ಖಿಲ್ಜಿ, ಚೆಂಗಿಸ್ ಖಾನ್ ಇಂತಹ ಹತ್ತಾರು ರಾಜರು ಭಾರತದ ಸಂಪತ್ತು ದೋಚಲಿಕ್ಕಾಗಿ ಮತ್ತೆಮತ್ತೆ ಮೇಲೆ ಧಾಳಿ ಮಾಡಿದ್ದು!
ಏಷ್ಯಾ ಖಂಡಕ್ಕೆ ಸಾಗರಪಥ ಪತ್ತೆ ಮಾಡುತ್ತೇನೆಂದು ೬ ಸಪ್ಟಂಬರ್ ೧೪೯೫ರಂದು ಸ್ಪೇನಿನಿಂದ ಮೂರು ನೌಕೆಗಳಲ್ಲಿ ಹೊರಟ ಕೊಲಂಬಸ್ ೧೨ ಅಕ್ಟೋಬರ್ ೧೪೯೫ರಂದು ತಲಪಿದ್ದು ವೆಸ್ಟ್-ಇಂಡೀಸ್ ದ್ವೀಪಗಳ ಸಾನ್ಸಾಲ್ವಡೋರಿಗೆ! ಹಾಗೆಯೇ, ಫರ್ಡಿನಾಂಡ್ ಮೆಗೆಲ್ಲನ್ ೨೦ ಸಪ್ಟಂಬರ್ ೧೫೧೯ರಂದು ಐದು ನೌಕೆಗಳಲ್ಲಿ ಸ್ಪೇನಿನಿಂದ ಹೊರಟು, ಅಮೇರಿಕಾ ಖಂಡ ದಾಟಿ, ೧೫೨೧ರ ಎಪ್ರಿಲಿನಲ್ಲಿ ಫಿಲಿಫೈನ್ಸ್ ತಲಪಿ, ಅಲ್ಲೇ ಎಪ್ರಿಲ್ ೨೭ರಂದು ತೀರಿಕೊಂಡ. ಅನಂತರ, ಯುರೋಪಿನಿಂದ ಬ್ರಿಟಿಷರು, ಫ್ರೆಂಚರು, ಡಚ್ಚರು, ಸ್ಪೇನಿನವರು ಅಮೇರಿಕಾ, ಆಫ್ರಿಕಾ ಹಾಗೂ ಏಷ್ಯಾ ಖಂಡಗಳಿಗೆ ಮತ್ತೆಮತ್ತೆ ಧಾಳಿ ಮಾಡಿದರು. ಅವರಿಂದ ಅಲ್ಲಿನ ಮೂಲನಿವಾಸಿಗಳ ಮಾರಣಹೋಮ. ಅಮೇರಿಕಾದ ಮೂಲನಿವಾಸಿಗಳ ನಿರ್ನಾಮ. ಆಫ್ರಿಕಾದ ಲಕ್ಷಗಟ್ಟಲೆ ಅಸಹಾಯಕ ಮೂಲನಿವಾಸಿಗಳನ್ನು ಸೆರೆ ಹಿಡಿದು, ಅಮೇರಿಕಾಕ್ಕೆ ಸಾಗಿಸಿ, ಅಲ್ಲಿ ಗುಲಾಮರನ್ನಾಗಿ ಶತಮಾನಗಳ ಕಾಲ ದುಡಿಸಿದ ಕ್ರೌರ್ಯ.
ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳಂತೂ ಕೆಲವೇ ದೇಶಗಳ ನಾಯಕರು ಜಗತ್ತನ್ನು ಕುದಿಸಿ, ಕೆದಕಿ, ಕುಲುಕಿದ್ದಕ್ಕೆ ಮಹಾನಿದರ್ಶನ. ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ಸ್ಫೋಟಿಸಿ ಲಕ್ಷಗಟ್ಟಲೆ ಅಮಾಯಕರ ಬದುಕು ಚಿಂದಿಚಿಂದಿ. ಆದರೂ ಯುದ್ಧಗಳು ಮುಗಿದಿಲ್ಲ. ಈ ಶತಮಾನದಲ್ಲಂತೂ, ಭಯೋತ್ಪಾದನೆಯ ಹಿಂಸೆಯ ಅಟ್ಟಹಾಸದಿಂದಾಗಿ ಕೋಟಿಗಟ್ಟಲೆ ಜನರ ಬದುಕು ಅಲ್ಲೋಲಕಲ್ಲೋಲ. ಇವೆಲ್ಲವೂ ವಿಧಿಯ ನಿತ್ಯವಿಲಾಸ.
ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ
ಕೋಟಿ ನಟರಾಂತಿಹರು ಚಿತ್ರಪಾತ್ರಗಳ
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ
ನೋಟಕರು ಮಾಟಕರೆ - ಮಂಕುತಿಮ್ಮ
ಈ ಬ್ರಹ್ಮಾಂಡದ ರಂಗಸ್ಥಳದಲ್ಲಿ ನಿರಂತರ ನಾಟಕ ನಡೆಯುತ್ತಿದೆ. ಇದರಲ್ಲಿ ಚಿತ್ರವಿಚಿತ್ರ ಪಾತ್ರಗಳನ್ನು ಧರಿಸಿ (ಆಂತು) ನಟಿಸುತ್ತಿದ್ದಾರೆ ೭೦೦ ಕೋಟಿಗಳಿಗಿಂತ ಅಧಿಕ ನಟರು. ಹೀಗೆ ನಡೆಯುತ್ತಿರುವ ನಾಟಕಕ್ಕೆ ಕಥೆಯಿಲ್ಲ; ಆರಂಭವೂ ಇಲ್ಲ, ಮುಕ್ತಾಯವೂ ಇಲ್ಲ. ಈ ನಾಟಕ ನೋಡುವವರೂ ಇದರ ನಟರು (ಆಟಕರು) ಆಗಿರುವುದೇ ಇದರ ವಿಶೇಷ ಎಂದು ನಮ್ಮ ಬದುಕನ್ನು ಒಂದು ಮಹಾನ್ ನಾಟಕಕ್ಕೆ ಹೋಲಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ನಮ್ಮ ದೇಶವನ್ನು ಆಳಿದ ಮಹಾರಾಜರನ್ನು ನೆನೆಯೋಣ. ಸಾಮ್ರಾಟ್ ಅಶೋಕ, ಹರ್ಷವರ್ಧನ, ಕೃಷ್ಣದೇವರಾಯ ಮತ್ತಿತರ ಮಹಾರಾಜರು. ಇವರ ಒಬ್ಬೊಬ್ಬರ ಆಳ್ವಿಕೆಯೂ ಮಹಾನ್ ನಾಟಕದ ಒಂದು ಅಂಕದಂತಿತ್ತು. ರಷ್ಯಾ, ಫ್ರಾನ್ಸ್, ಬ್ರಿಟನ್, ಜರ್ಮನಿ ಹಾಗೂ ಇತರ ವಿದೇಶಗಳಲ್ಲಿಯೂ ಒಬ್ಬೊಬ್ಬ ರಾಜ ಅಥವಾ ರಾಣಿಯ ಆಳ್ವಿಕೆಯ ಅವಧಿಯೂ ಆ ನಾಟಕದ ಒಂದು ಭಾಗವಾಗಿತ್ತು. ಸಿಂಧೂ ನಾಗರಿಕತೆ, ದಕ್ಷಿಣ ಅಮೇರಿಕದ ಇಂಕಾ ನಾಗರಿಕತೆ, ಈಜಿಪ್ಟಿನ ಫಾರೋಗಳ ಅವಧಿಯ ನಾಗರಿಕತೆ – ಇವೆಲ್ಲವೂ ಈ ಮುಗಿಯದ ನಾಟಕದ ಮಹತ್ವದ ಅಧ್ಯಾಯಗಳು.
ಕೈಗಾರಿಕಾ ಕ್ರಾಂತಿಯ ನಂತರ, ಪ್ರಪಂಚದ ನಾಟಕ ಹೆಚ್ಚೆಚ್ಚು ವರ್ಣಮಯ. ವಾಹನಗಳು, ರೈಲುಗಳು ಹಾಗೂ ಮಾನವನನ್ನು ಆಕಾಶಯಾನದ ಯುಗಕ್ಕೆ ಒಯ್ದ ವಿಮಾನಗಳಿಂದಾಗಿ ಈ ನಾಟಕ ಇನ್ನಷ್ಟು ರಂಗುರಂಗು. ರಾಕೆಟ್ ಮತ್ತು ಉಪಗ್ರಹಗಳ ಉಡ್ಡಯನ, ಮಾನವನ ಚಂದ್ರಯಾನ ಹಾಗೂ ಬಾಹ್ಯಾಕಾಶಯಾನ, ಸೌರಮಂಡಲದ ಇತರ ಗ್ರಹಗಳಿಗೆ ವಾಹನಗಳ ಯಾನ – ಇವೆಲ್ಲ ಈ ನಾಟಕದ ರಂಗಸ್ಥಳವನ್ನೇ ವಿಸ್ತರಿಸಿದವು.
ಈಗ ಜಗತ್ತಿನ ವ್ಯವಹಾರಗಳನ್ನು ಗಮನಿಸಿದರೆ, ಬ್ರಹ್ಮಾಂಡ ರಂಗಸ್ಥಳದ ವಿವಿಧ ಆಯಾಮಗಳು ತೆರೆದುಕೊಳ್ಳುತ್ತವೆ. ನಮ್ಮನ್ನು ಕ್ಷಣಕ್ಷಣವೂ ದಂಗುಬಡಿಸುವ ಈ ನಾಟಕದ ಬೆಳವಣಿಗೆಗಳಿಂದ ಹೊರಹೊಮ್ಮುವ ಸಂದೇಶ ಏನು? ಈ ನಾಟಕದ ಪ್ರತಿಯೊಂದು ಅಂಕವೂ ಮುಕ್ತಾಯವಾಗುತ್ತಲೇ, ಹೊಸ ಅಂಕ ಶುರು. ನಾಗರಿಕತೆಗಳು ಅಳಿದಿವೆ. ಸಾಮ್ರಾಜ್ಯಗಳು ಪತನವಾಗಿವೆ. ಸಮುದಾಯಗಳು ನಾಶವಾಗಿವೆ. ವಂಶಗಳು ನಿರ್ವಂಶವಾಗಿವೆ. ಕ್ಷಣಕ್ಷಣವೂ ವ್ಯಕ್ತಿಗಳು ನಾಟಕದ ರಂಗಸ್ಥಳದಿಂದ ಶಾಶ್ವತವಾಗಿ ಕಣ್ಮರೆಯಾಗುತ್ತಿದ್ದಾರೆ. ಆದ್ದರಿಂದಲೇ, ಈ ನಾಟಕದ ಪಾತ್ರಧಾರಿಗಳು ತಮ್ಮ ಪಾತ್ರ ಮುಗಿದಾಗ ರಂಗಸ್ಥಳದಿಂದ ನಿರ್ಗಮಿಸಲು ತಯಾರಾಗಿರಬೇಕು, ಅಲ್ಲವೇ?
ಜೀವಿತವೆ ನಾಟಕವೊ ಜೀವವೇ ಸೂತ್ರಧರ
ನಾವು ನೀವವರೆಲ್ಲ ಪಾತ್ರಗಳು ವಿವಿಧ
ಭೂವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ
ದೇವನಾ ಲೀಲೆಯಿದು – ಮರುಳ ಮುನಿಯ
ನಮ್ಮ ಜೀವನವೇ ಒಂದು ನಾಟಕ. ನಮ್ಮ ಜೀವವೇ ಇದರ ಸೂತ್ರಧಾರ. ಈ ನಾಟಕದಲ್ಲಿ ನಾವು, ನೀವು ಮತ್ತು ಇತರರೆಲ್ಲರೂ ವಿವಿಧ ಪಾತ್ರಧಾರಿಗಳು. ಭೂಮಿಯ ವಿಲಾಸವೇ ರಂಗಮಂದಿರವಾದರೆ, ಪ್ರತಿಯೊಬ್ಬ ಮನುಷ್ಯನ ಕಥೆಯೂ ಈ ನಾಟಕದ ಒಂದು ದೃಶ್ಯ. ಇವೆಲ್ಲವೂ ದೇವನ ಲೀಲೆ ಎಂದು ಮಾನ್ಯ ಡಿವಿಜಿಯವರು ಚಿತ್ರಿಸುತ್ತಾರೆ.
ಜನಸಾಮಾನ್ಯರ ಬದುಕು ಹಾಗಿರಲಿ. ಮಾನವ ಜನಾಂಗಕ್ಕೆ ಹೊಸ ದಿಕ್ಕು ತೋರಿಸಿದ, ಜಗತ್ತಿನ ಚರಿತ್ರೆಯನ್ನೇ ಬದಲಾಯಿಸಿದ ಕೆಲವು ಮಹಾನ್ ವ್ಯಕ್ತಿಗಳನ್ನು ನೆನೆಯೋಣ. ವಿಶ್ವವಿಖ್ಯಾತ ತತ್ವಶಾಸ್ತ್ರಜ್ನ ಸಾಕ್ರೆಟಿಸ್ ಹೊಸ ಚಿಂತನೆಗಳನ್ನು ನೀಡಿದವರು; ಅವರನ್ನು ಧರ್ಮವಿರೋಧಿ ಎಂದು ಪರಿಗಣಿಸಿ, ಸೆರೆಮನೆಯಲ್ಲಿ ವಿಷ ಕುಡಿಸಿ ವಧಿಸಲಾಯಿತು. ರೋಮನ್ ಸಾಮ್ರಾಜ್ಯದ ಅಧಿಪತಿ ಜೂಲಿಯಸ್ ಸೀಸರ್ ಮಹಾ ಪರಾಕ್ರಮಿ; ಆತ ತನ್ನ ಬಂಟ ಮಾರ್ಕಸ್ ಜ್ಯೂನಿಯಸ್ ಬ್ರೂಟಸನಿಂದ ರಾಜಸಭೆಯಲ್ಲೇ ಹತನಾದ. ಕೊಲಂಬಸ್ ನೌಕೆಯಲ್ಲಿ ಸಾಗರಯಾನ ಆರಂಭಿಸಿದ್ದು ಏಷ್ಯಾ ಖಂಡ ತಲಪಲಿಕ್ಕಾಗಿ; ಆದರೆ ಆತ ೬ ಸಪ್ಟಂಬರ್ ೧೪೯೫ರಂದು ತಲಪಿದ್ದು ವೆಸ್ಟ್ ಇಂಡೀಸಿನ ಸಾನ್ಸಾಲ್ವಡಾರ್ ದ್ವೀಪವನ್ನು; ಮುಂದೆ ಇದುವೇ ಅಮೇರಿಕಾ ಖಂಡದ ಪತ್ತೆಗೆ ನಾಂದಿಯಾಯಿತು. ೧ ಜನವರಿ ೧೮೬೩ರಲ್ಲಿ ಅಮೇರಿಕಾದಲ್ಲಿ ಗುಲಾಮಗಿರಿ ರದ್ದು ಪಡಿಸಿದ ಖ್ಯಾತಿ ಅಧ್ಯಕ್ಷ ಅಬ್ರಹಾಂ ಲಿಂಕನ್ನರದು; ಅವರನ್ನು ೧೫ ಎಪ್ರಿಲ್ ೧೮೬೫ರಲ್ಲಿ ವಾಷಿಂಗ್ಟನಿನ ಫೋರ್ಡ್ಸ್ ಥಿಯೇಟರಿನಲ್ಲಿ ಕೊಲೆ ಮಾಡಲಾಯಿತು. ಅಮೇರಿಕಾದ ಸುಪ್ರಸಿದ್ಧ ಅಧ್ಯಕ್ಷ ಜಾನ್.ಎಫ್. ಕೆನೆಡಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಾರ್ಟಿನ್ ಲೂಥರ್ ಕಿಂಗ್ – ಇಬ್ಬರೂ ಕೊಲೆಗಡುಕರ ಗುಂಡಿಗೆ ಬಲಿಯಾದರು. ಏಸುಕ್ರಿಸ್ತನಂತಹ ಮಹಾನ್ ಶಾಂತಿದೂತರನ್ನೇ ಶಿಲುಬೆಗೇರಿಸಲಾಯಿತು. ಕೋಟಿಗಟ್ಟಲೆ ಭಾರತೀಯರಿಗೆ ಆತ್ಮವಿಶ್ವಾಸ ತುಂಬಿ, ಭಾರತದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿ, ಭಾರತಕ್ಕೆ ಸ್ವಾತಂತ್ರ್ಯ ತಂದಿತ್ತ ಮಹಾತ್ಮ ಗಾಂಧಿಯವರೂ ೩೦ ಜನವರಿ ೧೯೪೮ರಂದು ಗುಂಡೇಟಿಗೆ ಬಲಿಯಾದರು. ಇವರೆಲ್ಲರ ಬದುಕನ್ನು ಅವಲೋಕಿಸಿದಾಗ, ಈ ಮುಕ್ತಕದ ಸಂದೇಶ ಸ್ಪಷ್ಟವಾಗುತ್ತದೆ: ಭೂಮಿಯ ರಂಗಮಂದಿರದಲ್ಲಿ ಕೋಟಿಗಟ್ಟಲೆ ಮನುಜರ ಕಥೆಗಳ ದೃಶ್ಯಾವಳಿಗಳ ನಿರಂತರ ನಾಟಕ ನಡೆಯುತ್ತಲೇ ಇದೆ.
ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು
ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ
ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು
ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ
ತೋಟಗಾರನು ಮಣ್ಣನ್ನು ಅಗೆದು, ಗೊಬ್ಬರ ಹಾಕಿ, ನೀರೆರೆದು ಗುಲಾಬಿ ಗಿಡವನ್ನು ಬೆಳೆಸುತ್ತಾನೆ. ಅದರ ಆರೈಕೆ ಮಾಡುವಾಗೆಲ್ಲ, ಆ ಗಿಡದ ಮೊನಚಾದ ಮುಳ್ಳುಗಳ ಇರಿತಗಳನ್ನೂ ಚುಚ್ಚುವಿಕೆ (ಜಗಿವ)ಯನ್ನೂ ಸಹಿಸಿಕೊಳ್ಳುತ್ತಾನೆ. ಇಷ್ಟೆಲ್ಲ ಆರೈಕೆ ಮಾಡಿ ಬೆಳೆಸಿದ ಗಿಡದಲ್ಲಿ ಮೂಡುವ ಮೊಗ್ಗು, ಗುಲಾಬಿ ಹೂವಾಗಿ ಅರಳಿ ನಗುವುದು ಸ್ವಲ್ಪ ಸಮಯ (ಅರೆ ನಿಮಿಷ) ಮಾತ್ರ. ಹಾಗೆ ಅರಳುತ್ತಲೇ ಆ ಗುಲಾಬಿ ಹೂವಿನ ಬಾಳು ಮುಗಿಯುತ್ತದೆ; ಅದು ಬಾಡಿ ಹೋಗುತ್ತದೆ. ಗುಲಾಬಿಯ ಮೊಗ್ಗು (ಮುಗುಳು) ಮತ್ತು ಸ್ವಲ್ಪ ಸಮಯ ಅರಳಿದಾಗಿನ ಚೆಲುವೇ ತೋಟಗಾರನ ದುಡಿತಕ್ಕೆ ಸಿಗುವ ಪ್ರತಿಫಲ ಹಾಗೂ ತೃಪ್ತಿ ಎಂದು ಈ ಮುಕ್ತಕದಲ್ಲಿ ಮನಮುಟ್ಟುವ ಸಂದೇಶ ನೀಡುತ್ತಾರೆ ಮಾನ್ಯ ಡಿ.ವಿ.ಗುಂಡಪ್ಪನವರು.
ಇದಕ್ಕೆ ಉಜ್ವಲ ಉದಾಹರಣೆ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕು. ತೀರಾ ಬಡತನದಲ್ಲಿ ಬೆಳೆದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಉತ್ಸಾಹದಿಂದ ಭಾಗವಸಿದರು. ನಮ್ಮ ದೇಶ ೧೫ ಆಗಸ್ಟ್ ೧೯೪೭ರಂದು ಸ್ವಾತಂತ್ರ್ಯ ಗಳಿಸಿದ ನಂತರವೂ, ತಮ್ಮ ಬದುಕನ್ನು ದೇಶಸೇವೆಗೆ ಮುಡಿಪಾಗಿಟ್ಟರು. ಶಾಸ್ತ್ರಿಯವರ ಪ್ರಾಮಾಣಿಕತೆ, ಶಿಸ್ತು, ದೇಶಪ್ರೇಮ, ಸೇವಾತತ್ಪರತೆ ಹಾಗೂ ಕಾರ್ಯದಕ್ಷತೆಯನ್ನು ಹತ್ತಿರದಿಂದ ಕಂಡಿದ್ದ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ, ಶಾಸ್ತ್ರಿಯವರನ್ನು ಕೇಂದ್ರ ಸರಕಾರದ ಸಚಿವ ಸ್ಥಾನಕ್ಕೆ ಸೇರಿಸಿಕೊಂಡರು. ಕೇಂದ್ರ ರೈಲ್ವೇ ಸಚಿವರಾಗಿದ್ದಾಗ, ರೈಲು ಅಪಘಾತಗಳಲ್ಲಿ ನೂರಾರು ಜನರು ಸತ್ತಾಗ, ಅದರ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಶಾಸ್ತ್ರಿ. ಅನಂತರ, ಪುನಃ ಕೇಂದ್ರ ಸರಕಾರದ ಸಚಿವಸ್ಥಾನ ಅವರನ್ನು ಅರಸಿಕೊಂಡು ಬಂತು. ತಮ್ಮ ಜವಾಬ್ದಾರಿಗಳ ನಿರ್ವಹಣೆಗಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದ ಶಾಸ್ತ್ರಿಯವರಿಗೆ ಎರಡು ಬಾರಿ ಹೃದಯಾಘಾತ. ತದನಂತರ, ಜವಾಹರಲಾಲ್ ನೆಹರೂ ತೀರಿಕೊಂಡಾಗ, ದೇಶವಾಸಿಗಳಿಗೆಲ್ಲ “ಮುಂದೇನು?” ಎಂಬ ಆತಂಕ. ಆ ಸಂಧಿಕಾಲದಲ್ಲಿ ಭಾರತದ ಪ್ರಧಾನಮಂತ್ರಿಯಾದವರು ಲಾಲ್ ಬಹಾದ್ದೂರ್ ಶಾಸ್ತ್ರಿ. ಕೆಲವೇ ತಿಂಗಳುಗಳಲ್ಲಿ, ಕಾಲುಕೆರೆದು ಯುದ್ಧಕ್ಕೆ ಬಂದ ಪಾಕಿಸ್ಥಾನ ಸೈನ್ಯವನ್ನು ತಮ್ಮ ದಿಟ್ಟ ನಿರ್ಧಾರಗಳಿಂದ ಮಣಿಸಿದರು ಶಾಸ್ತ್ರಿ. ಅನಂತರ, ರಷ್ಯಾದ ಅಧ್ಯಕ್ಷರ ಒತ್ತಾಯದ ಮೇರೆಗೆ ಟಾಷ್ಕೆಂಟಿಗೆ ಹೋಗಿ, ಸಂಧಾನ ನಡೆಸಿ, ಪಾಕಿಸ್ಥಾನದೊಂದಿಗೆ ಚಾರಿತ್ರಿಕ “ಶಾಂತಿ ಒಪ್ಪಂದಕ್ಕೆ“ ಸಹಿ ಹಾಕಿದರು; ಅದೇ ದಿನ ನಡುರಾತ್ರಿ ದಾಟಿದ ನಂತರ ಅಲ್ಲೇ ವಿಧಿವಶರಾದರು. ದೇಶಕ್ಕಾಗಿ ಬದುಕನ್ನೇ ಸವೆಯಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇಹಲೋಕ ತ್ಯಜಿಸಿದಾಗ ಅವರಿಗೊಂದು ಸ್ವಂತ ಮನೆಯೂ ಇರಲಿಲ್ಲ. ಹಾಗಾದರೆ, ಅವರ ದುಡಿತಕ್ಕೆ ಸಿಕ್ಕ ಪ್ರತಿಫಲ ಏನು? ಅದು, ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅವರ ಬಗ್ಗೆ ಇರುವ ಅಪಾರ ಗೌರವ, ಅಲ್ಲವೇ?
ನಗುನಗುತ ಕರೆಯುವವೊಲಾಡುತ್ತಿತ್ತು ಗುಲಾಬಿ
ಸೊಗದ ವಾಸನೆಗೆಂದು ಪಿಡೆಯೆ ನಿರ್ಗಂಧ
ಮುಗಿದೆ ನಾಂ ಕೈಯ ಮುಳ್ಳು ಚುಚ್ಚಲಿಲ್ಲೆಂದು
ಜಗದ ಸಂಗತಿಯಷ್ಟು – ಮರುಳ ಮುನಿಯ
ಗುಲಾಬಿ ಗಿಡದಲ್ಲಿ ಅರಳಿದ್ದ ಗುಲಾಬಿ ಹೂವೊಂದು “ನನ್ನ ಚೆಲುವನ್ನು ನೋಡು, ನನ್ನ ಮೃದುತನವನ್ನು ಸ್ಪರ್ಶಿಸಿ ನೋಡು” ಎಂದು ಕರೆಯುವಂತೆ ಕಂಡಿತು. ಅದರ ಪರಿಮಳ (ಸೊಗದ ವಾಸನೆ) ಆಸ್ವಾದಿಸಬೇಕೆಂದು, ಆ ಗುಲಾಬಿ ಹೂವನ್ನು ಹಿಡಿದಾಗ ನನ್ನ ಕೈಗೆ ಸಿಕ್ಕಿದ್ದು ವಾಸನೆಯಿಲ್ಲದ ಹೂವು. ನನ್ನಾಶೆ ನಿರಾಶೆಯಾದರೂ, ನನ್ನ ಕೈಗೆ ಗುಲಾಬಿ ಗಿಡದ ಮುಳ್ಳುಗಳು ಚುಚ್ಚಲಿಲ್ಲವೆಂದು ಸಮಾಧಾನ ಮಾಡಿಕೊಂಡು ಕೈಮುಗಿದೆ. ಈ ಜಗತ್ತಿನ ಸಂಗತಿಗಳೂ ಇಷ್ಟೇ ಎಂದು ನಮ್ಮ ತಲೆಯ ಮೇಲೆ ಹೊಡೆದಂತೆ ಸತ್ಯವೊಂದನ್ನು ಬಿಚ್ಚಿಡುತ್ತಾರೆ ಡಿ.ವಿ.ಜಿ.ಯವರು.
ಇದು ಮನವರಿಕೆಯಾಗಲು ಒಂದು ಪ್ರಕರಣ ಗಮನಿಸಿ. ಒಬ್ಬರು ತನ್ನ ಹಳೆಯ ಬೈಕ್ ಮಾರಲೆತ್ನಿಸುತ್ತಿದ್ದರು. ಮಂಗಳೂರಿನಲ್ಲಿ ಒಂದು ಬ್ರ್ಯಾಂಡಿನ ಬೈಕಿನ ವರ್ಕ್-ಷಾಪಿನಲ್ಲಿ ಮೆನೇಜರ್ ಆಗಿದ್ದ ಅವರ ಮಿತ್ರ, ಒಳ್ಳೆಯ ರೇಟಿಗೆ ಮಾರಾಟ ಮಾಡಿಸುತ್ತೇನೆ ಎಂದು ಆ ಬೈಕ್ ಒಯ್ದರು. ಆದರೆ ಒಂದು ವರುಷ ಕಳೆದರೂ ಆ ಬೈಕ್ ಮಾರಾಟ ಆಗಲಿಲ್ಲ. ಬೈಕಿನ ಮಾಲೀಕ ತನಿಖೆ ಮಾಡಿದಾಗ ತಿಳಿದದ್ದು: ಆ ಮಿತ್ರ ಬೈಕನ್ನು ಒಂದು ವರುಷ ಆರಾಮವಾಗಿ ಸ್ವಂತ ಬೈಕಿನಂತೆ ಓಡಾಡಿಸುತ್ತಿದ್ದರು!
“ಅರ್ಧ ಬೆಲೆಗೆ ಫ್ರಿಜ್, ಬೈಕ್, ಕಾರು ಪಡೆಯಿರಿ” ಎಂಬ ಸ್ಕೀಮುಗಳು, “ಪ್ಲಾಂಟೇಷನ್ ಸ್ಕೀಮಿನಲ್ಲಿ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿ ೨೦ ವರುಷಗಳ ನಂತರ ೨೦ ಲಕ್ಷ ರೂಪಾಯಿ ಗಳಿಸಿರಿ” ಎಂದು ರೂ.೨೫,೦೦೦ ಕೋಟಿಗಳನ್ನೇ ನುಂಗಿ ಹಾಕಿದ ಪ್ಲಾಂಟೇಷನ್ ಕಂಪೆನಿಗಳು, “ವಾರ್ಷಿಕ ಶೇಕಡಾ ೨೫ ಬಡ್ಡಿ ನೀಡುತ್ತೇವೆ” ಎಂದು ಜಾಹೀರಾತು ಪ್ರಕಟಿಸಿ, ಲಕ್ಷಗಟ್ಟಲೆ ಠೇವಣಿದಾರರ ಕೋಟಿಗಟ್ಟಲೆ ರೂಪಾಯಿ ಹಣ ದೋಚಿದ ಬ್ಲೇಡ್ ಕಂಪೆನಿಗಳು, ಇ-ಮೆಯಿಲ್ ಮತ್ತು ಎಸ್.ಎಮ್.ಎಸ್. ಮೂಲಕ “ನಿಮಗೆ ಕೋಟಿಕೋಟಿ ರೂಪಾಯಿ ಲಾಟರಿ ಬಂದಿದೆ” ಎಂದೆಲ್ಲ ಈಗ ಮತ್ತೆಮತ್ತೆ ಬಲೆಬೀಸುವವರು – ಇವೆಲ್ಲವೂ “ನಗುನಗುತ ಕರೆಯುವವೊಲಾಡುವ ಗುಲಾಬಿಗಳೇ” ಅಲ್ಲವೇ?
ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ?
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ?
ಬಿದ್ದ ಮನೆಯನು ಕಟ್ಟೊ - ಮಂಕುತಿಮ್ಮ
ಬಿದ್ದದ್ದನ್ನು ಎತ್ತಿ ನಿಲ್ಲಿಸುವುದೇ ಮಾನವನ ಮೃತ್ಯುಂಜಯತೆ ಎಂದು ಈ ಮುಕ್ತಕದಲ್ಲಿ ಘೋಷಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಆಕಾಶದಿಂದ ಸುರಿಯುವ ಮಳೆ ಭೂಮಿಯನ್ನು ಮತ್ತೆಮತ್ತೆ ಶುದ್ಧಗೊಳಿಸುವುದಿಲ್ಲವೇ? ಗದ್ದೆಯ ಬೆಳೆಯನ್ನು ಕೊಯ್ದ ನಂತರ, ಅದು ಪುನಃ (ಮಗುಳ್ದು) ಫಸಲು ಕೊಡುವುದಿಲ್ಲವೇ? ಎಂಬುದಾಗಿ ಪ್ರಕೃತಿಯ ಉದಾಹರಣೆಗಳನ್ನು ಪ್ರಶ್ನೆಗಳ ಮೂಲಕ ಎತ್ತಿ ತೋರಿಸುತ್ತಾರೆ. ಮನೆ ಕುಸಿದು ನೆಲಕ್ಕೆ ಬಿದ್ದರೆ ಕೈಕಟ್ಟಿ ಕೂರಬೇಡ; ಅದನ್ನು ಮತ್ತೆ ಕಟ್ಟು ಎಂಬ ಸಂದೇಶ ಇದರಲ್ಲಿದೆ.
ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೇರಿಕಾದ ವಿಮಾನಗಳು ಅಣುಬಾಂಬುಗಳನ್ನು ಎಸೆದ ಕಾರಣ ಆ ನಗರಗಳು ಧ್ವಂಸವಾದವು. ಜಪಾನ್ ಸೈನ್ಯ ಶರಣಾಯಿತು. ಜಪಾನ್ ದೇಶದ ಕತೆ ಮುಗಿಯಿತೆಂದೇ ಹಲವರು ಭಾವಿಸಿದರು. ಆದರೆ ಜಪಾನಿನ ಜನರು ತಮ್ಮ ದೇಶವನ್ನು ಮತ್ತೆ ಮುಂಚೂಣಿಗೆ ತರಲು ಸಂಕಲ್ಪ ಮಾಡಿದರು. ಎರಡೇ ದಶಕಗಳಲ್ಲಿ ಆ ಎರಡು ನಗರಗಳನ್ನು ಪುನರ್ ನಿರ್ಮಿಸಿ, ಜಗತ್ತೇ ನಿಬ್ಬೆರಗಾಗುವ ಸಾಧನೆ ಮಾಡಿದರು.
ಫ್ರಾನ್ಸ್ ಮತ್ತು ರಷ್ಯಾದಲ್ಲಿ ರಕ್ತಕ್ರಾಂತಿ ನಡೆಯಿತು. “ಮುಂದೇನು” ಎಂಬ ಪ್ರಶ್ನೆ ಅಲ್ಲಿನ ಜನತೆಯ ಮುಂದಿತ್ತು. ಸಮರ್ಥ ನಾಯಕತ್ವ ಆ ಎರಡೂ ದೇಶಗಳನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಿತು. ಕೆಲವೇ ದಶಕಗಳಲ್ಲಿ ಆ ದೇಶಗಳು ಅಗಾಧ ಅಭಿವೃದ್ಧಿ ಸಾಧಿಸಿದವು.
ಒಂದನೆಯ ಮತ್ತು ಎರಡನೆಯ ಮಹಾಯುದ್ಧ ಆರಂಭಿಸಿದ ದೇಶ ಜರ್ಮನಿ. ದೂರದರ್ಶಿತ್ವ ಮತ್ತು ಮಾನವೀಯತೆ ಇಲ್ಲದ ನಾಯಕರಿಂದಾಗಿ ಆ ದೇಶ ಮಹಾಯುದ್ಧಕ್ಕಿಳಿದು, ಇತರ ದೇಶಗಳ ಸೈನ್ಯಗಳೊಂದಿಗೆ ಭೀಕರ ಹೋರಾಟ ನಡೆಸಿತು. ಅಂತಿಮವಾಗಿ ಎರಡೂ ಯುದ್ಧಗಳಲ್ಲಿ ಜರ್ಮನಿ ಸೋತಾಗ, ಆ ದೇಶ ನುಚ್ಚುನೂರಾಗಿತ್ತು. ಆದರೆ, ಅಲ್ಲಿಯ ಜನರ ಮನೋಬಲ ದೊಡ್ಡದು. ಅವರು ತಮ್ಮ ದೇಶವನ್ನು ಮತ್ತೆ ಪ್ರಗತಿಯ ಹಾದಿಗೆ ತಂದರು. ದೇಶಗಳ ನೆಲೆಯಲ್ಲಿ ಬಿದ್ದ ಮನೆಯನ್ನು ಮತ್ತೆ ಕಟ್ಟುವುದೆಂದರೆ ಇದೇ ಅಲ್ಲವೇ?
ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ-
ನಿಳೆಗೆ ಬೇಸರ ತರುವ ದಿನದಿನದ ಮಾತು
ಅಳಿದ ಮನೆಯನು ಮತ್ತೆ ನಿಲಿಸಿ ಕಟ್ಟಿಸಿ ಬೆಳಕ
ಗಳಿಸುವವೊಲ್ ಯತ್ನಿಸಲೆ – ಮರುಳ ಮುನಿಯ
ರಭಸದಿಂದ ಸುರಿಯುವ ಮಳೆಯ ಹೊಡೆತಕ್ಕೆ ಸಿಲುಕಿ, ಹಳೆಯ ಮನೆ ಬೀಳುವುದು ಜಗತ್ತಿಗೆ ಬೇಸರ ಹಾಗೂ ನೋವು ತರುವ ದಿನದಿನದ ಮಾತು. ಅಳಿದ ಮನೆಯನ್ನು ಮತ್ತೆ ಕಟ್ಟಿ, ಅಲ್ಲಿ ಬದುಕುತ್ತಿದ್ದ ಜನರ ಬಾಳಿನಲ್ಲಿ ಬೆಳಕು ಬರುವಂತಾಗಲು, ಅವರಿಗೆ ಹೊಸಬದುಕು ನೀಡಲು ಪ್ರಯತ್ನಿಸು ಎಂಬ ಸಂದೇಶ ನೀಡುತ್ತಾರೆ ಮಾನ್ಯ ಡಿವಿಜಿ.
ಮಾನವ ಮಾಡುವ ಯುದ್ಧಗಳಿಂದಾಗುವ ಅನಾಹುತಗಳು ಒಂದೆಡೆ; ಪ್ರಾಕೃತಿಕ ವಿಕೋಪಗಳಿಂದ ಆಗುವ ಪ್ರಾಣಹಾನಿ ಮತ್ತು ಸೊತ್ತು ಹಾನಿ ಇನ್ನೊಂದೆಡೆ. ಎರಡರಿಂದಲೂ ತತ್ತರಿಸಿ ಹೋಗುತ್ತದೆ ಜನಸಾಮಾನ್ಯರ ಬದುಕು. ಕಳೆದ ೧೭ ವರುಷಗಳಲ್ಲಿ ಭಾರತದಲ್ಲಿ ಅತಿ ದೊಡ್ಡ ಭೂಕಂಪ ಸಂಭವಿಸಿದ್ದು ೨೬-೧-೨೦೦೧ರಂದು ಗುಜರಾತಿನಲ್ಲಿ. ಅದರಲ್ಲಿ ಸತ್ತವರ ಸಂಖ್ಯೆ ೨೦,೦೮೫. ಈ ಅವಧಿಯಲ್ಲಿ ಅತ್ಯಂತ ಜಾಸ್ತಿ ಪ್ರಾಣಹಾನಿಯಾದದ್ದು ೨೬-೧೨-೨೦೦೪ರ ಭೂಕಂಪ ಮತ್ತು ಸುನಾಮಿಯಲ್ಲಿ. ಅದರಂದಾಗಿ ಇಂಡೋನೇಷ್ಯಾದ ಸುಮಾತ್ರದಲ್ಲಿ ಮೃತರಾದವರು ೨.೩೦ ಲಕ್ಷಕ್ಕಿಂತ ಅಧಿಕ. ೮-೧೦-೨೦೦೫ರಂದು ಪಾಕಿಸ್ಥಾನದಲ್ಲಿ ಭೂಕಂಪಕ್ಕೆ ಬಲಿಯಾದವರು ಸುಮಾರು ೮೭,೦೦೦ ಜನರು. ಅನಂತರ, ಚೀನಾದ ಪೂರ್ವ ಸಿಚುಆನಿನಲ್ಲಿ ೧೨-೫-೨೦೦೮ರಂದು ಭೂಕಂಪದಿಂದಾಗಿ ಕೊನೆಯುಸಿರು ಎಳೆದವರ ಸಂಖ್ಯೆ ೬೯,೧೯೭. ಈ ಅವಧಿಯ ಅತ್ಯಂತ ಭೀಕರ ಭೂಕಂಪ ಸಂಭವಿಸಿದ್ದು ಹಾಯಿತಿ ದ್ವೀಪದಲ್ಲಿ ೧೨-೧-೨೦೧೦ರಂದು. ಅದಕ್ಕೆ ಬಲಿಯಾದವರು ಸುಮಾರು ೧,೬೦,೦೦೦ ಜನರು. ೧೧-೩-೨೦೧೧ರಂದು ಜಪಾನಿನ ಹೊನ್ಷುನನ್ನು ಮೂರು ಬಾರಿ ನಡುಗಿಸಿದ ಭೂಕಂಪ ಕಬಳಿಸಿದ್ದು ೧೮,೧೮೪ ಜನರ ಪ್ರಾಣಗಳನ್ನು. ೨೫-೪-೨೦೧೫ರಂದು ಪಕ್ಕದ ನೇಪಾಳದ ಭೂಕಂಪದಲ್ಲಿ ಅಸು ನೀಗಿದವರು ೯,೦೧೮ ಜನರು. ಇತ್ತೀಚೆಗೆ, ೧೨-೧೧-೨೦೧೭ರಂದು ಇರಾನ್-ಇರಾಕ್ ಗಡಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ತೀರಿಕೊಂಡವರು ೫೪೦ ಜನರು.
ಅಬ್ಬ, ಎಂತಹ ದುರಂತಗಳು! ಇವಿಷ್ಟೇ ಅಲ್ಲ; ೨೦೦೧ರಿಂದೀಚೆಗೆ, ಇವಲ್ಲದೆ ಇತರ ಹಲವಾರು ಭೂಕಂಪಗಳು ಮತ್ತು ಚಂಡಮಾರುತಗಳಿಗೆ ಸಾವಿರಾರು ಜನರು ಬಲಿಯಾಗಿದ್ದಾರೆ. ನೂರಾರು ಕುಟುಂಬಗಳು ನಿರ್ನಾಮವಾಗಿವೆ. ಅವರಿಗೆ ಹೊಸ ಮನೆಗಳನ್ನೇನೋ ಕಟ್ಟಿ ಕೊಡಬಹುದು. ಆದರೆ, ಅವರ ಬದುಕನ್ನು ಪುನಃ ಕಟ್ಟುವುದು ಸುಲಭದ ಕೆಲಸವೇ? ಇದನ್ನು ಸವಾಲಾಗಿ ಸ್ವೀಕರಿಸಿ, ಹಲವಾರು ಸಂಘಸಂಸ್ಥೆಗಳು ಅವರಿಗೆ ಹೊಸಬದುಕು ನೀಡಲು ದುಡಿಯುತ್ತಿವೆ. ಈ ಕಾಯಕದ ಅಗಾಧತೆ ಗಮನಿಸಿದಾಗ, ಡಿವಿಜಿಯವರ ಸಂದೇಶಕ್ಕೆ ಹೊಸ ಅರ್ಥ ಮೂಡುತ್ತದೆ, ಅಲ್ಲವೇ?
ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ
ಸುತ್ತ ನೀನನುಭವಿಪ ಬಾಹ್ಯ ಚಿತ್ರದೊಳೋ
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ
ತತ್ತ್ವದರ್ಶನವಹುದು - ಮಂಕುತಿಮ್ಮ
ಸತ್ಯವಿಂಬುದು ಎಲ್ಲಿದೆ? ನಿನ್ನ ಅಂತರಂಗದಲ್ಲಿದೆಯೋ? ಅಥವಾ ನಿನ್ನ ಸುತ್ತಮುತ್ತ ನೀನು ಅನುಭವಿಸುತ್ತಿರುವ ಬಾಹ್ಯ ಜಗತ್ತಿನಲ್ಲಿದೆಯೋ? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತಕದಲ್ಲಿ ಕೇಳುವ ಮಾನ್ಯ ಡಿ.ವಿ. ಗುಂಡಪ್ಪನವರು ಆ ಮೂಲಕ ನಮ್ಮನ್ನು ಗಹನವಾದ ಚಿಂತನೆಗೆ ಹಚ್ಚುತ್ತಾರೆ. ಚಿಂತನೆ ಮಾಡುತ್ತಾ ಯುಕ್ತಿಯಿಂದ ಇವೆರಡನ್ನು ಒಂದನೊಂದಕೆ ತೊಡಿಸಿ ಸರಿನೋಡಿದರೆ ಮಹಾನ್ ತತ್ವದ ದರ್ಶನವಾಗುತ್ತದೆ ಎಂಬ ಸೂಚನೆಯನ್ನೂ ನೀಡುತ್ತಾರೆ.
ನಿಕೋಲಸ್ ಕೊಪರ್ನಿಕಸ್ (೧೪೭೩ – ೧೫೪೩) ಭೂಮಿ ಸೂರ್ಯನ ಸುತ್ತ ತಿರುಗುತ್ತಿದೆ ಎಂಬ ಸತ್ಯವನ್ನು ತಿಳಿದುಕೊಂಡ. ಗಣಿತ ಲೆಕ್ಕಾಚಾರದ ಮೂಲಕ ಇದನ್ನು ಸ್ಪಷ್ಟವಾಗಿ ವಿವರಿಸಿದ. ಆದರೆ “ಸೂರ್ಯ ಭೂಮಿಯ ಸುತ್ತ ತಿರುಗುತ್ತಾನೆ” ಎಂದು ನಂಬಿದ್ದ ಜನರು ಈ ಸತ್ಯವನ್ನು ಒಪ್ಪಲು ತಯಾರಿರಲಿಲ್ಲ. ಮುಂದೆ ೧೬೧೬ನೇ ಇಸವಿಯಲ್ಲಿ ಗೆಲಿಲಿಯೋ ಗೆಲಿಲಿ (೧೫೬೪ -೧೬೪೨) ಈ ಸತ್ಯವನ್ನು ಸಾರ್ವಜನಿಕವಾಗಿ ಸಮರ್ಥಿಸಿದ. ಸೂರ್ಯನೇ ಸೌರವ್ಯೂಹದ ಕೇಂದ್ರ, ಭೂಮಿಯಲ್ಲ ಎಂದು ಪ್ರತಿಪಾದಿಸಿದ. ಇದನ್ನು ಸುತಾರಾಂ ಒಪ್ಪದ ಕ್ಯಾಥೋಲಿಕ್ ಚರ್ಚ್ ಗೆಲಿಲಿಯೋನಿಗೆ ತನ್ನ ಚಿಂತನೆ ಪ್ರಕಟಿಸದಂತೆ ನಿಷೇಧ ಹೇರಿತು. ಆದರೂ ಆತ ತನ್ನ ಚಿಂತನೆಗಳನ್ನು ೧೬೩೨ರಲ್ಲಿ ಪ್ರಕಟಿಸಿದ.
ಅಷ್ಟೇಕೆ, “ಭೂಮಿ ದುಂಡಗಿಲ್ಲ, ಚಪ್ಪಟೆ” ಎಂಬುದೇ ಸತ್ಯವೆಂದು ಹಲವು ಶತಮಾನಗಳ ಕಾಲ ವಾದಿಸುತ್ತಿದ್ದರಲ್ಲ! ಕೊನೆಗೆ ಫರ್ಡಿನಾಂಡ್ ಮೆಗೆಲ್ಲನ್ ೨೦ ಸಪ್ಟಂಬರ್ ೧೫೧೯ರಂದು ಐದು ನೌಕೆಗಳಲ್ಲಿ ಸ್ಪೇನ್ ದೇಶದಿಂದ ಸಮುದ್ರಯಾನ ಹೊರಟ. ದಕ್ಷಿಣ ಅವೇರಿಕದ ತುದಿಯನ್ನು ಸುತ್ತಿ, ೧೫೨೧ರಲ್ಲಿ ಫಿಲಿಪೈನ್ಸ್ ದ್ವೀಪಗಳನ್ನು ತಲಪಿ, ಆತ ಅಲ್ಲೇ ಕೊನೆಯುಸಿರೆಳೆದ. ಆದರೆ ಅವನ ಸಹನಾವಿಕರು ಸಾಗರಯಾನ ಮುಂದುವರಿಸಿ, ಸ್ಪೇನಿಗೆ ಹಿಂತಿರುಗಿದರು. ಭೂಮಿಯನ್ನು ಸುತ್ತಿದ ಈ ಮೊತ್ತಮೊದಲ ಸಾಗರಯಾನದಿಂದಾಗಿ ಭೂಮಿ ದುಂಡಗಿದೆ ಎಂಬುದು ಸಾಬೀತಾಯಿತು.
ಆತ್ಮ-ಪರಮಾತ್ಮ ಇವೆರಡೂ ಒಂದರೊಳಗೊಂದಿಲ್ಲವೇ? ನಾನು ವಿಶ್ವದೊಳಗೋ ಅಥವಾ ವಿಶ್ವ ನನ್ನೊಳಗೋ? ಈ ರೀತಿಯಲ್ಲಿ ಚಿಂತನೆ ಮಾಡುತ್ತಾ ಹೋದರೆ ನಮಗೆ ಸತ್ಯದರ್ಶನವಾಗುತ್ತಲೇ ಇರುತ್ತದೆ – ದಿನದಿನವೂ, ಕ್ಷಣಕ್ಷಣವೂ. ಸತ್ಯಗಳನ್ನು ಒಪ್ಪಿಕೊಳ್ಳಲಿಕ್ಕಾಗಿ ಮನಸ್ಸನ್ನು ಮುಕ್ತವಾಗಿಟ್ಟು ಕೊಳ್ಳೋಣ.
ಪರಿಪರಿಯ ಮೃಷ್ಟಾನ್ನ ಭಕ್ಷ್ಯ ಭೋಜ್ಯಗಳು ತಾ-
ವರಗಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ
ಬರಿಯೋದು ಬರಿತರ್ಕ ಬರಿಭಕ್ತಿಗಳುಮಂತು
ಹೊರೆಯೆ ಅರಿವಾಗದೊಡೆ – ಮರುಳ ಮುನಿಯ
ವಿಧವಿಧದ ರಸಭರಿತ ಭಕ್ಷ್ಯ ಭೋಜ್ಯಗಳನ್ನು ನಾವು ಸೇವಿಸಿದ ಬಳಿಕ ಅವೆಲ್ಲ ಜೀರ್ಣವಾಗಿ ನಮ್ಮ ರಕ್ತದಲ್ಲಿ ಬೆರೆಯಬೇಕು; ಇಲ್ಲವಾದರೆ ಅವು ಹೊಟ್ಟೆಗೆ (ಪೊಡೆಗೆ) ಪೀಡೆಯಾಗುತ್ತವೆ ಎಂಬ ನಿತ್ಯಸತ್ಯವನ್ನು ಈ ಮುಕ್ತಕದಲ್ಲಿ ಎತ್ತಿ ಹೇಳುತ್ತಾರೆ ಮಾನ್ಯ ಡಿ.ವಿ.ಜಿ.ಯವರು. ಹಾಗೆಯೇ ಓದು, ತರ್ಕ ಮತ್ತು ಭಕ್ತಿಗಳೂ ನಮಗೆ ಸರಿಯಾಗಿ ಅರ್ಥವಾಗಿ, ನಮ್ಮ ಪ್ರಜ್ನೆಯ ಆಳಕ್ಕೆ ಇಳಿಯಬೇಕು. ಇಲ್ಲವಾದರೆ ಅವೆಲ್ಲ ಬರಿಯೋದು, ಬರಿತರ್ಕ, ಬರಿಭಕ್ತಿಯಾಗಿ ಉಳಿದು ನಮಗೆ ಹೊರೆಯಾಗುತ್ತವೆ ವಿನಃ ಅವುಗಳಿಂದ ನಮ್ಮ ಜ್ನಾನ ಬೆಳೆಯುವುದಿಲ್ಲ; ವರ್ತನೆ ಬದಲಾಗುವುದಿಲ್ಲ.
೨೦೧೫-೧೬ನೇ ಆರ್ಥಿಕ ವರ್ಷದಲ್ಲಿ ನಮ್ಮ ದೇಶ ಆಮದು ಮಾಡಿಕೊಂಡ ಕೃಷಿ ಉತ್ಪನ್ನಗಳ ಮೌಲ್ಯ ರೂಪಾಯಿ ೧.೪ ಲಕ್ಷ ಕೋಟಿ! (ಮುಖ್ಯವಾಗಿ ತಾಳೆಯೆಣ್ಣೆ, ದ್ವಿದಳಧಾನ್ಯಗಳು ಮತ್ತು ಗೋಧಿ) ಇದನ್ನು ಕೇವಲ ತಿಳಿದು ಏನು ಪ್ರಯೋಜನ? ಅಷ್ಟು ಮೌಲ್ಯದ ಅವನ್ನು ಆಮದು ಮಾಡಿಕೊಳ್ಳದಿದ್ದರೆ, ಆ ಮೌಲ್ಯದ ಬಹುಪಾಲು ಅವನ್ನು ಇಲ್ಲೇ ಬೆಳೆಸಿದ್ದ ನಮ್ಮ ರೈತರ ಕೈಸೇರುತ್ತಿತ್ತು; ಅವರ ಆರ್ಥಿಕ ಸಂಕಷ್ಟ ಕಡಿಮೆಯಾಗಿ ಸಾವಿರಾರು ರೈತರ ಆತ್ಮಹತ್ಯೆ ತಪ್ಪುತ್ತಿತ್ತು ಎಂಬ ಅರಿವು ನಮ್ಮಲ್ಲಿ ಮೂಡಬೇಕು. ಯಾಕೆಂದರೆ, ಕಳೆದ ಇಪ್ಪತ್ತೊಂದು ವರುಷಗಳಲ್ಲಿ ಹಣಕಾಸಿನ ಸಂಕಟ ತಾಳಲಾಗದೆ, ೩,೧೮,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಗೆಯೇ, ಇಂಡೋನೇಷ್ಯಾದ ಕಾಡುಗಳ ನಾಶಕ್ಕೆ ಭಾರತೀಯರ ತಾಳೆಣ್ಣೆ ಬಳಕೆ ಕಾರಣವಾಗುತ್ತಿದೆ ಎಂಬುದು ನಮಗೆ ಅರಿವಾಗಬೇಕು. ಯಾಕೆಂದರೆ, ೨೦೧೫-೧೬ರಲ್ಲಿ ನಮ್ಮ ದೇಶ ಆಮದು ಮಾಡಿಕೊಂಡ ತಾಳೆಣ್ಣೆಯ ಮೌಲ್ಯ ರೂಪಾಯಿ ೭೦,೦೦೦ ಕೋಟಿ. ಭಾರತಕ್ಕೆ ತಾಳೆಣ್ಣೆ ರಫ್ತು ಮಾಡಿದರೆ ಭಾರೀ ಲಾಭ ಸಿಗುತ್ತದೆಂದು ಇಂಡೋನೇಷ್ಯಾದವರು ಕಾಡುಗಳನ್ನು ನಾಶ ಮಾಡಿ ಅಲ್ಲಿ ಎಣ್ಣೆತಾಳೆ ಗಿಡಗಳನ್ನು ಬೆಳೆಸುತ್ತಿದ್ದಾರೆ!
ಮಂಗಳೂರಿನಲ್ಲಿ ೨೦೧೬ರ ಬೇಸಗೆಯಲ್ಲಿ ಸುಮಾರು ಒಂದು ತಿಂಗಳವಧಿ ಐದು ದಿನಗಳಿಗೊಮ್ಮೆ ನಳ್ಳಿನೀರು ಸರಬರಾಜು! ಆದರೂ ಎಷ್ಟು ಮನೆಗಳಲ್ಲಿ ಮಳೆನೀರು ಕೊಯ್ಲು ಮಾಡುತ್ತಿದ್ದಾರೆ? ದಿನಕ್ಕೆ ೧೦೦ ಲೀಟರಿನಂತೆ ಒಂದು ವರುಷದಲ್ಲಿ ಪ್ರತಿಯೊಬ್ಬರೂ ೩೫,೬೦೦ ಲೀಟರ್ ನೀರು ಬಳಸುತ್ತಿದ್ದೇವೆ. ಎಷ್ಟು ಜನರು ಪ್ರತೀ ವರುಷ ಅಷ್ಟು ನೀರನ್ನು ಭೂಮಿಯೊಳಕ್ಕೆ ಇಂಗಿಸುತ್ತಿದ್ದಾರೆ? ಹೀಗೆ ವಿಷಯ ತಿಳಿದಿದ್ದೂ ವರ್ತನೆ ಬದಲಾಗದಿದ್ದರೆ, ಆ ಮಾಹಿತಿ ಕೇವಲ ಹೊರೆ,