ಬದುಕಿನ ಗೆಲುವಿನ ಬಾಗಿಲು ಪ್ರಜ್ನೆ

ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪಕ್ಕದವರು ಬಿಸ್ಕಿಟ್ ಕೊಡುತ್ತಾರೆ. ಅದನ್ನು ತಿಂದ ನಂತರ ಎಚ್ಚರ ತಪ್ಪುತ್ತದೆ. ಎಚ್ಚರವಾದಾಗ ನಮ್ಮ ವಾಚ್, ಬಂಗಾರದ ಉಂಗುರ, ಚೈನ್, ಪರ್ಸ್, ಸೂಟ್ಕೇಸ್ ಮಾಯ. ಇನ್ನೊಂದು ಸನ್ನಿವೇಶ: ಮನೆಯ ಬಾಗಿಲು ಬಡಿದ ಸದ್ದು ಕೇಳಿ ಬಾಗಿಲು ತೆಗೆದಾಗ, ಅಪರಿಚಿತರು ನೀರು ಕೇಳುತ್ತಾರೆ ಅಥವಾ ಆಹ್ವಾನ ಪತ್ರಿಕೆ ಕೊಡುತ್ತಾರೆ. ಅವರನ್ನು ಮನೆಯ ಒಳಗೆ ಸೇರಿಸಿಕೊಂಡರೆ ನಿಮಗೆ ಅರಿವಿಲ್ಲದಂತೆಯೇ ಮನೆಯ ಸೊತ್ತನ್ನೆಲ್ಲ ದೋಚಿಕೊಂಡು ಹೋಗಿರುತ್ತಾರೆ.

ಅಪರಿಚಿತರು ಕೊಟ್ಟದ್ದನ್ನು ತಿನ್ನಬಾರದು ಮತ್ತು ಅಪರಿಚಿತರನ್ನು ಮನೆಯೊಳಗೆ ಬಿಡಬಾರದೆಂದು ನಮಗೆಲ್ಲ ಚೆನ್ನಾಗಿ ತಿಳಿದಿದೆ. ಆದರೂ ಏಕೆ ಹೀಗಾಗುತ್ತದೆ? ಏಕೆಂದರೆ ನಾವು ನಮ್ಮ ಪ್ರಜ್ನೆಯನ್ನು ಬಳಸಿಕೊಳ್ಳುತ್ತಿಲ್ಲ!

ಏನಿದು ಪ್ರಜ್ನೆ? ಪ್ರಜ್ನೆ ಎಂದರೆ ಅತ್ಯಂತ ಎಚ್ಚರದ ಸ್ಥಿತಿ. ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡದಿರುವುದು. ನಾವೆಲ್ಲರೂ ಬಹಳ ಎಚ್ಚರದಿಂದ ಇರುತ್ತೇವೆ ಎಂದೇ ಅಂದುಕೊಳ್ಳುತ್ತೇವೆ. ಉದಾಹರಣೆಗೆ, ಸೈಕಲ್,  ಬೈಕ್ ಅಥವಾ ವಾಹನ ಚಲಾಯಿಸುವಾಗ, ವಿದ್ಯುತ್ ಉಪಕರಣ ಬಳಸುವಾಗ ನಾವು ಎಚ್ಚರಿಕೆಯಿಂದಲೇ ಇರುತ್ತೇವೆ. ಆದರೂ ಅಪಘಾತಗಳು ಆಗುತ್ತವೆ. ಏಕೆಂದರೆ ಎಚ್ಚರಿಕೆ ಬೇರೆ, ಎಚ್ಚರದ ಸ್ಥಿತಿ ಬೇರೆ.

ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ನೀವೀಗ ಓದುತ್ತಿರುವುದು ನಿಮಗೆ ಸಂಪೂರ್ಣ ಅರ್ಥ ಆಗುತ್ತಿದೆಯೇ? ಯಾರೊಡನೆಯೋ ಮಾತನಾಡುವಾಗ ಅವರ ಮಾತಿನ ಉದ್ದೇಶ ಮತ್ತು ಗೂಡಾರ್ಥ ನಿಮಗೆ ನೂರಕ್ಕೆ ನೂರರಷ್ಟು ಅರ್ಥ ಆಗುತ್ತದೆಯೇ? ಯಾವುದೇ ಕೆಲಸ ಮಾಡುವಾಗ ಅದರಲ್ಲಿ ನಾವು ಸಂಪೂರ್ಣ ತೊಡಗಿಕೊಳ್ಳುವುದು ಅಪರೂಪ. ನಮ್ಮ ಗಮನ ಆಗಾಗ ಬೇರೆತ್ತಲೋ ಜಿಗಿದಿರುತ್ತದೆ. ಇದು ನಮ್ಮ ಅಭ್ಯಾಸ. ಆದ್ದರಿಂದಲೇ ನಮಗೆ ಸಂಪೂರ್ಣ ಪ್ರಜ್ನೆಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಪ್ರಜ್ನೆಯಿಂದ ಅರಿವು
ಸಂಪೂರ್ಣ ಪ್ರಜ್ನಾವಂತರಾಗಿ ಇರಬೇಕಾದರೆ, ಒಂದು ಕೆಲಸ ಮಾಡುತ್ತಿರುವಾಗ ಇನ್ನೊಂದಕ್ಕೆ ಗಮನ ಕೊಡುವ ಪರಿಪಾಠ ನಿಲ್ಲಿಸಬೇಕು. ಏಕೆಂದರೆ ಒಂದು ಕ್ಷಣದಲ್ಲಿ ಒಂದು ಕೆಲಸಕ್ಕೆ ಮಾತ್ರ ಗಮನ ಕೊಡಲು ಸಾಧ್ಯ. ಊಟ ಮಾಡುತ್ತ ಟಿವಿ ನೋಡುತ್ತಿದ್ದರೆ ಊಟವನ್ನೂ ಸರಿಯಾಗಿ ಅನುಭವಿಸಲಾಗದು ಮತ್ತು ಟಿವಿಯಲ್ಲಿ ನೋಡಿದ್ದನ್ನೂ ಸರಿಯಾಗಿ ಅನುಭವಿಸಲಿಕ್ಕಾಗದು. ಪಂಚೇಂದ್ರಿಯಗಳಿಂದ ಬರುವ ಸಂದೇಶಗಳನ್ನು ಪರಾಮರ್ಶೆಗೆ ಒಳಪಡಿಸಲು ನಾವು ಕಲಿತಿರುವುದಿಲ್ಲ. ಸಂಪೂರ್ಣ ಜಾಗೃತ ಸ್ಥಿತಿಯಲ್ಲಿ ನಾವು ಇರಬೇಕಾದರೆ ಮುಖ್ಯವಾಗಿ ಕಣ್ಣುಬಿಟ್ಟು ನೋಡಲು ಮತ್ತು ಕಿವಿಗೊಟ್ಟು ಕೇಳಲು ಕಲಿಯಬೇಕಾಗಿದೆ. ಅರೆಬರೆ ನೋಡುವ ಮತ್ತು ಅರೆಬರೆ ಕೇಳುವ ನಮ್ಮ ಅಭ್ಯಾಸವನ್ನೇ ಬದಲಾಯಿಸಿಕೊಳ್ಳ ಬೇಕಾಗಿದೆ.

ಪ್ರಜ್ನಾಪೂರ್ವಕ ನಿರ್ಧಾರಗಳು
ಬೆಳಗ್ಗೆ ಎಷ್ಟು ಹೊತ್ತಿಗೆ ಏಳಬೇಕು? ರಾತ್ರಿ ಯಾವಾಗ ಮಲಗಬೇಕು? ಇತ್ಯಾದಿ ದಿನನಿತ್ಯದ ಕೆಲಸಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸುಲಭ. ಆದರೆ ನಮ್ಮ ಬದುಕಿನಲ್ಲಿ ದೂರಗಾಮಿ ಪರಿಣಾಮ ಬೀರುವ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕಷ್ಟ.

ಯಾವ ಕೋರ್ಸಿಗೆ ಸೇರಬೇಕು? ಯಾವ ಕೆಲಸಕ್ಕೆ ಸೇರಬೇಕು? ಯಾರ ಸ್ನೇಹ ಮಾಡಬೇಕು? ಯಾರನ್ನು ಮದುವೆ ಆಗಬೇಕು? ಯಾವುದರಲ್ಲಿ ಹಣ ಹೂಡಬೇಕು? ಉಳಿತಾಯದ ಹಣ ಎಲ್ಲಿ ತೊಡಗಿಸಬೇಕು? ಯಾವ ಊರಿನಲ್ಲಿ ಮನೆ ಕಟ್ಟಬೇಕು? ಇಂತಹ ನಿರ್ಧಾರಗಳನ್ನು ಪ್ರಜ್ನಾಪೂರ್ವಕವಾಗಿ ಕೈಗೊಳ್ಳಬೇಕು. ಅಂದರೆ, ಅನುಕೂಲ ಹಾಗೂ ಅನಾನುಕೂಲಗಳನ್ನು ತೂಗಿ ನೋಡಬೇಕು. ನಮ್ಮ ಇಂದಿನ ನಿರ್ಧಾರದಿಂದಾಗಿ ಮುಂದೊಂದು ದಿನ ನಾವೇ ಪಶ್ಚಾತಾಪ ಪಡುವಂತಾಗಬಾರದು.

"ಅರ್ಧ ಬೆಲೆಗೆ ನಿಮಗೆ ಬೇಕಾದ್ದನ್ನು ಖರೀದಿಸಿ. ಟಿವಿ, ಪ್ರಿಜ್, ಡಿವಿಡಿ ಪ್ಲೇಯರ್, ಕೆಮರಾ, ಬೈಕ್, ಕಾರು ಏನು ಬೇಕಾದರೂ ಖರೀದಿಸಿರಿ..." ಎಂಬ ಜಾಹೀರಾತು ಕಂಡರೆ, ಈಗಲೂ ಜನ ಆ ಅಂಗಡಿಗೆ ಮುಗಿಬೀಳುತ್ತಾರೆ. ಮುಂಗಡ ತೆತ್ತು ಆ ಸೊತ್ತು ತಮ್ಮ ಕೈಗೆ ಬರಲಿಕ್ಕಾಗಿ ವಾರಗಟ್ಟಲೆ ಕಾಯುತ್ತಾರೆ. ಉದಾಹರಣೆಗೆ ೬೨೫ ಪ್ಲಾಂಟೇಷನ್ ಕಂಪೆನಿಗಳು ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ಜನರಿಗೆ ಕೋಟಿಗಟ್ಟಲೆ ರೂಪಾಯಿ ಹಣ ಟೊಪ್ಪಿ ಹಾಕಿದವು. "ಈಗ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ, ಇಪ್ಪತ್ತು ವರುಷಗಳ ಕೊನೆಗೆ ೨೦ ಲಕ್ಷ ರೂಪಾಯಿ ಹಿಂತಿರುಗಿಸುತ್ತೇವೆ" ಎಂದಾಗ ಜನ ನಂಬಿದರು. ಸಾಗುವಾನಿ ಗಿಡ ೨೦ ವರುಷಗಳಲ್ಲೇ ಬೆಳೆದು ದಿಮ್ಮಿಯಾಗುತ್ತದೆಯೇ? ಇಲ್ಲ. ಕನಿಷ್ಠ ೬೦ ವರುಷಗಳು ಬೇಕು! ಖಾಸಗಿ ಕಂಪೆನಿಗಳು ಕಾನೂನಿನ ಪ್ರಕಾರ (ಆಗ) ಕೃಷಿ ಜಮೀನು ಖರೀದಿಸಲು ಸಾಧ್ಯವೇ? ಈಗಾಗಲೇ ಆ ಜಮೀನು ಖರೀದಿಸಿವೆಯೇ? ಎಲ್ಲಿ? ಎಂಬ ಸರಳ ಪ್ರಶ್ನೆಗಳನ್ನೂ ಜನ ಕೇಳಲಿಲ್ಲ. ಆದರೆ ಠೇವಣಿ ಸಂಗ್ರಹವಾದ ಒಂದೆರಡು ವರುಷಗಳಲ್ಲೇ ಪ್ಲಾಂಟೇಷನ್ ಕಂಪೆನಿಗಳು ಕಾಣದಂತೆ ಮಾಯವಾದವು.

ಶೇಕಡಾ ೨೪ರಿಂದ ೩೬ರ ವಾರ್ಷಿಕ ಬಡ್ಡಿಯ ಆಮಿಷ ಒಡ್ಡಿ, ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟನೆ, ವರ್ಣರಂಜಿತ ಮಾಹಿತಿ ಪತ್ರಗಳು, ಬೀದಿಬೀದಿಗಳಲ್ಲಿ ಜಾಹೀರಾತು ಫಲಕಗಳು, ಝಗಮಗಿಸುವ ಕಚೇರಿಗಳು - ಇವುಗಳಿಂದ ಜನಸಾಮಾನ್ಯರನ್ನು ಮರುಳು ಮಾಡಿದ ಬ್ಲೇಡ್ ಕಂಪನಿಗಳು ಸಾವಿರಾರು ಕೋಟಿ ರೂಪಾಯಿಗಳನ್ನು ನುಂಗಿಹಾಕಿದವು.

ಇಂಥ ಮೋಡಿಗೆ ಒಳಗಾದವರ ಪ್ರಜ್ನೆ ಎಲ್ಲಿ ಹೋಗಿತ್ತು? ಅದು ಒಳದನಿಯ ರೂಪದಲ್ಲಿ ಎಚ್ಚರಿಸುತ್ತಿತ್ತು! ಆದರೆ ಅದನ್ನು ಕೇಳುವ ವ್ಯವಧಾನ, ಅರ್ಥ ಮಾಡಿಕೊಳ್ಳುವ ತಾಳ್ಮೆ ಮತ್ತು ನಿರ್ಧಾರವನ್ನು ಪುನರ್ ಪರಿಶೀಲಿಸುವ ಜಾಗೃತ ಮನಃಸ್ಥಿತಿ ಅವರಲ್ಲಿ ಇರಲಿಲ್ಲ. ಆಗ ಒಳದನಿಗೆ ಕಿವಿಗೊಡದ ತಪ್ಪಿಗೆ ಈಗ ದಂಡ ತೆರಬೇಕಾಗಿದೆ.

ಒಂದು ಕ್ಷಣ ನಿಮ್ಮ ಕೈ ಹೆಬ್ಬೆರಳಿನ ತುದಿಯಿಂದ ತೋರುಬೆರಳ ತುದಿಯನ್ನು ಒತ್ತಿ ಹಿಡಿದುಕೊಳ್ಳಿ. ಆ ಬೆರಳ ತುದಿಗಳಲ್ಲಿ "ನಿಮ್ಮದೇ ನಾಡಿಮಿಡಿತ" ನಿಮ್ಮ ಅನುಭವಕ್ಕೆ ಬರುತ್ತದೆಯೇ? ಸಂಪೂರ್ಣ ಪ್ರಜ್ನೆಯ ಸ್ಥಿತಿಯಲ್ಲಿದ್ದಾಗ ಅದು ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ.

ಇದೇ ಸಾಧನೆಯನ್ನು ಮುಂದುವರಿಸಿದರೆ, ನಿಮ್ಮ ದೇಹದ ಕೋಶಕೋಶದಲ್ಲಿ ಏನಾಗುತ್ತದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಹಸಿವು, ದಣಿವು, ನೋವು, ನಿಮ್ಮ ಮನಸ್ಸಿನ ಪದರಪದರದ ಆಗುಹೋಗುಗಳು ನಿಮಗೆ ಅರ್ಥವಾಗಲು ಶುರುವಾಗುತ್ತದೆ. ನಂತರದ ಹಂತದಲ್ಲಿ ನಿಮ್ಮ ಸುತ್ತಲಿನ ವ್ಯಕ್ತಿಗಳಲ್ಲಿ ಹಾಗೂ ವಸ್ತುಗಳಲ್ಲಿ ಏನಾಗುತ್ತಿದೆ ಎಂಬುದನ್ನು ಗ್ರಹಿಸಲು ನಿಮಗೆ ಸಾಧ್ಯವಾಗುತ್ತದೆ. ಇದುವೇ ಪ್ರಜ್ನೆಯ ಪರಕಾಷ್ಠೆಯ ಸ್ಥಿತಿ. ಆ ಸ್ಥಿತಿಯನ್ನು ತಲುಪಿ, ಅತ್ಯಂತ ಜಾಗೃತಾವಸ್ಥೆಯಲ್ಲಿ ನಿಮ್ಮ ಬದುಕಿನ ಕ್ಷಣಕ್ಷಣವನ್ನೂ ಬೆಳಗಿಸುವ ಪ್ರಜ್ನೆಯನ್ನು ನಿಮ್ಮದಾಗಿಸಿಕೊಳ್ಳಿ.