ಕಗ್ಗ ದರ್ಶನ – 48

ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ
ಕೋಟಿ ನಟರಾಂತಿಹರು ಚಿತ್ರಪಾತ್ರಗಳ
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ
ನೋಟಕರು ಮಾಟಕರೆ - ಮಂಕುತಿಮ್ಮ
ಈ ಬ್ರಹ್ಮಾಂಡದ ರಂಗಸ್ಥಳದಲ್ಲಿ ನಿರಂತರ ನಾಟಕ ನಡೆಯುತ್ತಿದೆ. ಇದರಲ್ಲಿ ಚಿತ್ರವಿಚಿತ್ರ ಪಾತ್ರಗಳನ್ನು ಧರಿಸಿ (ಆಂತು) ನಟಿಸುತ್ತಿದ್ದಾರೆ ೭೦೦ ಕೋಟಿಗಳಿಗಿಂತ ಅಧಿಕ ನಟರು. ಹೀಗೆ ನಡೆಯುತ್ತಿರುವ ನಾಟಕಕ್ಕೆ ಕಥೆಯಿಲ್ಲ; ಆರಂಭವೂ ಇಲ್ಲ, ಮುಕ್ತಾಯವೂ ಇಲ್ಲ. ಈ ನಾಟಕ ನೋಡುವವರೂ ಇದರ ನಟರು (ಆಟಕರು) ಆಗಿರುವುದೇ ಇದರ ವಿಶೇಷ ಎಂದು ನಮ್ಮ ಬದುಕನ್ನು ಒಂದು ಮಹಾನ್ ನಾಟಕಕ್ಕೆ ಹೋಲಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ನಮ್ಮ ದೇಶವನ್ನು ಆಳಿದ ಮಹಾರಾಜರನ್ನು ನೆನೆಯೋಣ. ಸಾಮ್ರಾಟ್ ಅಶೋಕ, ಹರ್ಷವರ್ಧನ, ಕೃಷ್ಣದೇವರಾಯ ಮತ್ತಿತರ ಮಹಾರಾಜರು. ಇವರ ಒಬ್ಬೊಬ್ಬರ ಆಳ್ವಿಕೆಯೂ ಮಹಾನ್ ನಾಟಕದ ಒಂದು ಅಂಕದಂತಿತ್ತು. ರಷ್ಯಾ, ಫ್ರಾನ್ಸ್, ಬ್ರಿಟನ್, ಜರ್ಮನಿ ಹಾಗೂ ಇತರ ವಿದೇಶಗಳಲ್ಲಿಯೂ ಒಬ್ಬೊಬ್ಬ ರಾಜ ಅಥವಾ ರಾಣಿಯ ಆಳ್ವಿಕೆಯ ಅವಧಿಯೂ ಆ ನಾಟಕದ ಒಂದು ಭಾಗವಾಗಿತ್ತು. ಸಿಂಧೂ ನಾಗರಿಕತೆ, ದಕ್ಷಿಣ ಅಮೇರಿಕದ ಇಂಕಾ ನಾಗರಿಕತೆ, ಈಜಿಪ್ಟಿನ ಫಾರೋಗಳ ಅವಧಿಯ ನಾಗರಿಕತೆ – ಇವೆಲ್ಲವೂ ಈ ಮುಗಿಯದ ನಾಟಕದ ಮಹತ್ವದ ಅಧ್ಯಾಯಗಳು.
ಕೈಗಾರಿಕಾ ಕ್ರಾಂತಿಯ ನಂತರ, ಪ್ರಪಂಚದ ನಾಟಕ ಹೆಚ್ಚೆಚ್ಚು ವರ್ಣಮಯ. ವಾಹನಗಳು, ರೈಲುಗಳು ಹಾಗೂ ಮಾನವನನ್ನು ಆಕಾಶಯಾನದ ಯುಗಕ್ಕೆ ಒಯ್ದ ವಿಮಾನಗಳಿಂದಾಗಿ ಈ ನಾಟಕ ಇನ್ನಷ್ಟು ರಂಗುರಂಗು. ರಾಕೆಟ್ ಮತ್ತು ಉಪಗ್ರಹಗಳ ಉಡ್ಡಯನ, ಮಾನವನ ಚಂದ್ರಯಾನ ಹಾಗೂ ಬಾಹ್ಯಾಕಾಶಯಾನ, ಸೌರಮಂಡಲದ ಇತರ ಗ್ರಹಗಳಿಗೆ ವಾಹನಗಳ ಯಾನ – ಇವೆಲ್ಲ ಈ ನಾಟಕದ ರಂಗಸ್ಥಳವನ್ನೇ ವಿಸ್ತರಿಸಿದವು.
ಈಗ ಜಗತ್ತಿನ ವ್ಯವಹಾರಗಳನ್ನು ಗಮನಿಸಿದರೆ, ಬ್ರಹ್ಮಾಂಡ ರಂಗಸ್ಥಳದ ವಿವಿಧ ಆಯಾಮಗಳು ತೆರೆದುಕೊಳ್ಳುತ್ತವೆ. ನಮ್ಮನ್ನು ಕ್ಷಣಕ್ಷಣವೂ ದಂಗುಬಡಿಸುವ ಈ ನಾಟಕದ ಬೆಳವಣಿಗೆಗಳಿಂದ ಹೊರಹೊಮ್ಮುವ ಸಂದೇಶ ಏನು? ಈ ನಾಟಕದ ಪ್ರತಿಯೊಂದು ಅಂಕವೂ ಮುಕ್ತಾಯವಾಗುತ್ತಲೇ, ಹೊಸ ಅಂಕ ಶುರು. ನಾಗರಿಕತೆಗಳು ಅಳಿದಿವೆ. ಸಾಮ್ರಾಜ್ಯಗಳು ಪತನವಾಗಿವೆ. ಸಮುದಾಯಗಳು ನಾಶವಾಗಿವೆ. ವಂಶಗಳು ನಿರ್ವಂಶವಾಗಿವೆ. ಕ್ಷಣಕ್ಷಣವೂ ವ್ಯಕ್ತಿಗಳು ನಾಟಕದ ರಂಗಸ್ಥಳದಿಂದ ಶಾಶ್ವತವಾಗಿ ಕಣ್ಮರೆಯಾಗುತ್ತಿದ್ದಾರೆ. ಆದ್ದರಿಂದಲೇ, ಈ ನಾಟಕದ ಪಾತ್ರಧಾರಿಗಳು ತಮ್ಮ ಪಾತ್ರ ಮುಗಿದಾಗ ರಂಗಸ್ಥಳದಿಂದ ನಿರ್ಗಮಿಸಲು ತಯಾರಾಗಿರಬೇಕು, ಅಲ್ಲವೇ?


ಜೀವಿತವೆ ನಾಟಕವೊ ಜೀವವೇ ಸೂತ್ರಧರ
ನಾವು ನೀವವರೆಲ್ಲ ಪಾತ್ರಗಳು ವಿವಿಧ
ಭೂವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ
ದೇವನಾ ಲೀಲೆಯಿದು – ಮರುಳ ಮುನಿಯ
ನಮ್ಮ ಜೀವನವೇ ಒಂದು ನಾಟಕ. ನಮ್ಮ ಜೀವವೇ ಇದರ ಸೂತ್ರಧಾರ. ಈ ನಾಟಕದಲ್ಲಿ ನಾವು, ನೀವು ಮತ್ತು ಇತರರೆಲ್ಲರೂ ವಿವಿಧ ಪಾತ್ರಧಾರಿಗಳು. ಭೂಮಿಯ ವಿಲಾಸವೇ ರಂಗಮಂದಿರವಾದರೆ, ಪ್ರತಿಯೊಬ್ಬ ಮನುಷ್ಯನ ಕಥೆಯೂ ಈ ನಾಟಕದ ಒಂದು ದೃಶ್ಯ. ಇವೆಲ್ಲವೂ ದೇವನ ಲೀಲೆ ಎಂದು ಮಾನ್ಯ ಡಿವಿಜಿಯವರು ಚಿತ್ರಿಸುತ್ತಾರೆ.
ಜನಸಾಮಾನ್ಯರ ಬದುಕು ಹಾಗಿರಲಿ. ಮಾನವ ಜನಾಂಗಕ್ಕೆ ಹೊಸ ದಿಕ್ಕು ತೋರಿಸಿದ, ಜಗತ್ತಿನ ಚರಿತ್ರೆಯನ್ನೇ ಬದಲಾಯಿಸಿದ ಕೆಲವು ಮಹಾನ್ ವ್ಯಕ್ತಿಗಳನ್ನು ನೆನೆಯೋಣ. ವಿಶ್ವವಿಖ್ಯಾತ ತತ್ವಶಾಸ್ತ್ರಜ್ನ ಸಾಕ್ರೆಟಿಸ್ ಹೊಸ ಚಿಂತನೆಗಳನ್ನು ನೀಡಿದವರು; ಅವರನ್ನು ಧರ್ಮವಿರೋಧಿ ಎಂದು ಪರಿಗಣಿಸಿ, ಸೆರೆಮನೆಯಲ್ಲಿ ವಿಷ ಕುಡಿಸಿ ವಧಿಸಲಾಯಿತು. ರೋಮನ್ ಸಾಮ್ರಾಜ್ಯದ ಅಧಿಪತಿ ಜೂಲಿಯಸ್ ಸೀಸರ್ ಮಹಾ ಪರಾಕ್ರಮಿ; ಆತ ತನ್ನ ಬಂಟ ಮಾರ್ಕಸ್ ಜ್ಯೂನಿಯಸ್ ಬ್ರೂಟಸನಿಂದ ರಾಜಸಭೆಯಲ್ಲೇ ಹತನಾದ. ಕೊಲಂಬಸ್ ನೌಕೆಯಲ್ಲಿ ಸಾಗರಯಾನ ಆರಂಭಿಸಿದ್ದು ಏಷ್ಯಾ ಖಂಡ ತಲಪಲಿಕ್ಕಾಗಿ; ಆದರೆ ಆತ ೬ ಸಪ್ಟಂಬರ್ ೧೪೯೫ರಂದು ತಲಪಿದ್ದು ವೆಸ್ಟ್ ಇಂಡೀಸಿನ ಸಾನ್ಸಾಲ್ವಡಾರ್ ದ್ವೀಪವನ್ನು; ಮುಂದೆ ಇದುವೇ ಅಮೇರಿಕಾ ಖಂಡದ ಪತ್ತೆಗೆ ನಾಂದಿಯಾಯಿತು. ೧ ಜನವರಿ ೧೮೬೩ರಲ್ಲಿ ಅಮೇರಿಕಾದಲ್ಲಿ ಗುಲಾಮಗಿರಿ ರದ್ದು ಪಡಿಸಿದ ಖ್ಯಾತಿ ಅಧ್ಯಕ್ಷ ಅಬ್ರಹಾಂ ಲಿಂಕನ್ನರದು; ಅವರನ್ನು ೧೫ ಎಪ್ರಿಲ್ ೧೮೬೫ರಲ್ಲಿ ವಾಷಿಂಗ್ಟನಿನ ಫೋರ್ಡ್ಸ್ ಥಿಯೇಟರಿನಲ್ಲಿ ಕೊಲೆ ಮಾಡಲಾಯಿತು. ಅಮೇರಿಕಾದ ಸುಪ್ರಸಿದ್ಧ ಅಧ್ಯಕ್ಷ ಜಾನ್.ಎಫ್. ಕೆನೆಡಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಾರ್ಟಿನ್ ಲೂಥರ್ ಕಿಂಗ್ – ಇಬ್ಬರೂ ಕೊಲೆಗಡುಕರ ಗುಂಡಿಗೆ ಬಲಿಯಾದರು. ಏಸುಕ್ರಿಸ್ತನಂತಹ ಮಹಾನ್ ಶಾಂತಿದೂತರನ್ನೇ ಶಿಲುಬೆಗೇರಿಸಲಾಯಿತು. ಕೋಟಿಗಟ್ಟಲೆ ಭಾರತೀಯರಿಗೆ ಆತ್ಮವಿಶ್ವಾಸ ತುಂಬಿ, ಭಾರತದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿ, ಭಾರತಕ್ಕೆ ಸ್ವಾತಂತ್ರ್ಯ ತಂದಿತ್ತ ಮಹಾತ್ಮ ಗಾಂಧಿಯವರೂ ೩೦ ಜನವರಿ ೧೯೪೮ರಂದು ಗುಂಡೇಟಿಗೆ ಬಲಿಯಾದರು. ಇವರೆಲ್ಲರ ಬದುಕನ್ನು ಅವಲೋಕಿಸಿದಾಗ, ಈ ಮುಕ್ತಕದ ಸಂದೇಶ ಸ್ಪಷ್ಟವಾಗುತ್ತದೆ: ಭೂಮಿಯ ರಂಗಮಂದಿರದಲ್ಲಿ ಕೋಟಿಗಟ್ಟಲೆ ಮನುಜರ ಕಥೆಗಳ ದೃಶ್ಯಾವಳಿಗಳ ನಿರಂತರ ನಾಟಕ ನಡೆಯುತ್ತಲೇ ಇದೆ.