ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ
ಭಾನು ತಣುವಾದಾನು; ಸೋಮ ಸುಟ್ಟಾನು
ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು
ಮೌನದಲಿ ಸಿದ್ಧನಿರು - ಮಂಕುತಿಮ್ಮ
“ಏನಾದರಾಗಲಿ, ಆಗುವುದಾಗುತ್ತದೆ, ಸಿದ್ಧನಿರು ಅದಕೆ” ಎಂದು ಎಚ್ಚರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು, ಈ ಮುಕ್ತಕದಲ್ಲಿ. ಏನೆಲ್ಲ ಭೀಕರ ಅವಘಡಗಳು ಆದೀತು ಎಂಬುದರ ಸುಳಿವನ್ನೂ ನೀಡುತ್ತಾರೆ. ನಿಗಿನಿಗಿ ಕೆಂಡದ ಗೋಲದಂತೆ ಉರಿಯುತ್ತಿರುವ ಸೂರ್ಯ ತಣ್ಣಗಾದಾನು. ತಣ್ಣಗಿರುವ ಚಂದ್ರ ಸುಟ್ಟಾನು. ಭೂಮಿ (ಕ್ಷೋಣಿ) ಕರಗಿ ಹೋದೀತು. ಎಲ್ಲವೂ ಧ್ವಂಸವಾಗಿ ಜಗತ್ತು ಶೂನ್ಯವಾದೀತು. ಆದರೆ ನೀನು ಎದೆಗುಂದದಿರು. ಎಲ್ಲವನ್ನೂ ಎದುರಿಸಲು ಮೌನದಲಿ ಸಿದ್ಧನಾಗಿರು ಎಂಬುದವರ ಸಂದೇಶ.
ಡಿಸೆಂಬರ್ ೨೦೧೫ರ ಆರಂಭದ ದಿನಗಳಲ್ಲಿ ಚೆನ್ನೈಯಲ್ಲಿ ಸುರಿದ ಕುಂಭದ್ರೋಣ ಮಳೆ ಈ ಎಚ್ಚರಿಕೆಯ ಗಂಟೆಯನ್ನು ಮಗದೊಮ್ಮೆ ಮೊಳಗಿಸಿದೆ. ಕೇದಾರನಾಥದ ಮೇಘಸ್ಫೋಟ, ನೇಪಾಳದ ಭೂಕಂಪ ಇವೂ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು ಇಂತಹ ಎಚ್ಚರಿಕೆ ನೀಡಿದ್ದವು.
ಈಗ ಚೆನ್ನೈಯ ಜಲಪ್ರಳಯದ ಸರದಿ. ಅಲ್ಲಿನ ಭೀಕರತೆ ಕಂಡವರಿಗಷ್ಟೇ ಅರ್ಥವಾದೀತು. ಯಾಕೆಂದರೆ ಎಲ್ಲೆಲ್ಲೂ ನೀರು. ಕಣ್ಣು ಹಾಯಿಸಿದಲ್ಲೆಲ್ಲ ಸಮುದ್ರದಂತೆ ನೀರು. ಬಸ್, ರೈಲು, ವಿಮಾನ ನಿಲ್ದಾಣಗಳಲ್ಲಿ ತುಂಬಿ ಹರಿಯುವ ನೀರು. ಯಾರೂ ಎಲ್ಲಿಗೂ ಪ್ರಯಾಣಿಸದಂತೆ ಇವೆಲ್ಲ ಜಲಾವೃತ. ಡಿಸೆಂಬರಿನ ಮೊದಲ ದಿನ ಧಾರಾಕಾರವಾಗಿ ಸುರಿಯ ತೊಡಗಿದ ಮಳೆ ಮೂರನೇ ದಿನವೂ ನಿಲ್ಲಲಿಲ್ಲ. ಸಮುದ್ರದಂತೆ ಸುತ್ತೆಲ್ಲ ನೀರು ತುಂಬಿದ್ದರೂ ಕುಡಿಯಲು ಒಂದು ತೊಟ್ಟು ನೀರಿಲ್ಲ. ಊಟವೂ ಇಲ್ಲ, ತಿಂಡಿಯೂ ಇಲ್ಲ, ನಿದ್ದೆಯೂ ಇಲ್ಲ. ಇಂತಹ ಭಯಾನಕ ಸ್ಥಿತಿಯಲ್ಲಿ ಆಗೊಮ್ಮೆ ಈಗೊಮ್ಮೆ ಹಾರಾಡುವ ಸೇನಾ ಹೆಲಿಕಾಪ್ಟರಿನ ಸದ್ದು. ಅದನ್ನು ಕೇಳುತ್ತಲೇ, ತಮ್ಮನ್ನು ಬಚಾವ್ ಮಾಡಿಯಾರೆಂಬ ಆಸೆಯಲ್ಲಿ ಕೈಗಳನ್ನೆತ್ತಿ ಕೂಗುವ ಸಾವಿರಾರು ಜನರು.
ಅದು ಶತಮಾನದ ದಾಖಲೆ ಮಳೆ. ೨ ಡಿಸೆಂಬರ್ ೨೦೧೫ರಂದು ೨೪ ಗಂಟೆಗಳ ಅವಧಿಯಲ್ಲಿ ಚೆನ್ನೈಯಲ್ಲಿ ಸುರಿದ ಮಳೆ ೪೯ ಸೆ.ಮೀ. ಇದು ಕಳೆದ ೧೧೪ ವರುಷಗಳ ಚರಿತ್ರೆಯಲ್ಲೇ ಅತ್ಯಧಿಕ ಮಳೆ. ಇದರಿಂದಾಗಿ ಇಡೀ ನಗರವೇ ನೀರಿನಲ್ಲಿ ಮುಳುಗಿದೆ. ಅಲ್ಲೇ ಸಂತ್ರಸ್ತರಾದವರು ೧.೮೦ ಲಕ್ಷ ಜನರು. ತಮಿಳುನಾಡಿನಲ್ಲಿ ಈ ಮಳೆಯಿಂದಾಗಿ ಸಂಕಟಕ್ಕೆ ಸಿಲುಕಿದವರು ೫೦ ಲಕ್ಷ ಜನರೆಂದು ಅಂದಾಜು. ಸತ್ತವರ ಸಂಖ್ಯೆ ೩೦೦ ದಾಟಿದೆ. ಇಂತಹ ವಿಕೋಪಗಳನ್ನು ತಪ್ಪಿಸಲಾಗದು. ಹಾಗಾಗಿ ಎದುರಿಸಲು ಸನ್ನದ್ಧರಾಗಿರಬೇಕು.
ಕುಸಿದು ಬೀಳಲಿ ಧರಣಿ ಕಳಚಿ ಬೀಳಲಿ ಗಗನ
ನಶಿಸಲೀ ನಿನ್ನೆಲ್ಲವೇನಾದೊಡೇನು?
ಬಸವಳಿಯದಿರು ಜೀವ ವಸಿಸು ಶಿವಸತ್ತ್ವದಲಿ
ಕುಶಲವೆದೆಗಟ್ಟಿಯಿರೆ – ಮರುಳ ಮುನಿಯ
ಅದೇ ಸಂದೇಶವನ್ನು ಈ ಮುಕ್ತಕದಲ್ಲಿ ಮತ್ತೆ ನೀಡಿದ್ದಾರೆ ಮಾನ್ಯ ಡಿ.ವಿ.ಜಿ. ಈ ಭೂಮಿ ಕುಸಿದು ಹೋಗಲಿ, ಆ ಗಗನ ಕಳಚಿ ಬೀಳಲಿ. ನಿನ್ನದೆಲ್ಲವೂ ನಾಶವಾಗಿ ಹೋಗಲಿ. ಏನಾದರೇನು? ನೀನು ಮಾತ್ರ ಅಧೀರನಾಗದಿರು; ಕಂಗಾಲಾಗಿ, ಹತಾಶನಾಗಿ ದಣಿಯದಿರು. ಆ ಜಗನ್ನಿಯಾಮಕನ ಸತ್ತ್ವದಲ್ಲಿ ನಂಬಿಕೆಯಿಟ್ಟು ಬದುಕು (ವಸಿಸು). ನಿನ್ನ ಎದೆಗಟ್ಟಿಯಿದ್ದರೆ, ನಿನಗೆ ಆತ್ಮವಿಶ್ವಾಸವಿದ್ದರೆ, ಎಲ್ಲವೂ ಒಳಿತಾಗುತ್ತದೆ.
ಚೆನ್ನೈಯಲ್ಲಿ ಡಿಸೆಂಬರ್ ೨೦೧೫ರ ಆರಂಭದಲ್ಲಿ ಆದಂತೆ ಆದಾಗ ….. ಎಲ್ಲವೂ ನಾಶವಾಗಿ, ಬದುಕೆಲ್ಲ ಕತ್ತಲಾಗಿ ಕಂಗೆಟ್ಟಾಗ ಇಂತಹ ಸಂದೇಶವೇ ಬದುಕಿನ ಆಶಾಕಿರಣ, ಅಲ್ಲವೇ?
ಚೆನ್ನೈಯ ಜಲಪ್ರಳಯವನ್ನು ಹೇಗೆ ಎದುರಿಸಲಾಯಿತು? ೩೫,೦೦೦ ನಿರಾಶ್ರಿತರ ಕೇಂದ್ರಗಳನ್ನು ತೆರೆದು ಜನರಿಗೆ ಆಹಾರ ಹಾಗೂ ವಾಸದ ವ್ಯವಸ್ಥೆ. ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮೂಲಕ ಆಹಾರ ಹಾಗೂ ಇತರ ಅಗತ್ಯ ಸಾಮಗ್ರಿ ಪೂರೈಕೆ. ಸುಮಾರು ೧,೫೦೦ ಸೈನಿಕರ ಮೂಲಕ ಸಂಕಟದಲ್ಲಿ ಸಿಲುಕಿದವರ ರಕ್ಷಣೆ. ನೌಕಾದಳದ ಬೋಟುಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾವಿರಾರು ಜನರ ರವಾನೆ. ಕಟ್ಟಡಗಳ ಮೇಲೆ ನಿಂತು ಜೀವ ಉಳಿಸಲು ಮೊರೆಯಿಡುವವರನ್ನು ಹೆಲಿಕಾಪ್ಟರಿನಿಂದ ಎತ್ತಿ ಪಾರು ಮಾಡಿದ್ದು. ಕೇಂದ್ರ ಸರಕಾರದಿಂದ ಮುಂಚಿನ ರೂ.೯೦೦ ಕೋಟಿಗಳಲ್ಲದೆ ಹೆಚ್ಚುವರಿ ರೂ.೧,೦೦೦ ಕೋಟಿ ನೆರವಿನ ಭರವಸೆ. ಇವೆಲ್ಲದರ ಪರಿಣಾಮವಾಗಿ ಕೇವಲ ಐದು ದಿನಗಳಲ್ಲಿ ಪರಿಸ್ಥಿತಿಯ ನಿಯಂತ್ರಣ.
ವ್ಯಕ್ತಿಯಾಗಿ ಮಾತ್ರವಲ್ಲ, ಸಮಾಜವಾಗಿ ನಾವು ಎದೆಗಟ್ಟಿ ಮಾಡಿಕೊಳ್ಳಲು ಕಲಿಯಲೇ ಬೇಕಾಗಿದೆ. ಸುನಾಮಿ ಅಪ್ಪಳಿಸಿದಾಗಲೂ ೨.೭೫ ಲಕ್ಷ ಜನರ ಸಾವು. ಹಲವು ಕುಟುಂಬಗಳ ಸರ್ವ ನಾಶ. ಅವೆಲ್ಲ ಆಘಾತ ಸಹಿಸಿಕೊಂಡು, ಲಕ್ಷಗಟ್ಟಲೆ ಜನರು ಮತ್ತೆ ಬದುಕು ಕಟ್ಟಿಕೊಂಡರು. ಈ ಮುಕ್ತಕಗಳ ಇನ್ನೊಂದು ಸಂದೇಶ: ಈ ಜಗತ್ತಿನಲ್ಲಿ ಎಲ್ಲವೂ ನಶ್ವರ. ಇದನ್ನು ಒಪ್ಪಿಕೊಳ್ಳದವರು, ಚೆನ್ನೈಯಲ್ಲಿ ಪ್ರಕೃತಿಯ ರುದ್ರನಾಟಕದಿಂದಲಾದರೂ ಪಾಠ ಕಲಿಯಲಿ.