ಝೆನ್ ಪ್ರಸಂಗ: ಮಾರ್ಗದ ಅರಿವು

ಒಬ್ಬ ಝೆನ್ ಗುರುಗಳ ಬಳಿಗೆ ಕನ್‌ಫ್ಯೂಷಿಯನ್ ಪಂಡಿತನೊಬ್ಬ ಬಂದ. "ಕನ್‌ಫ್ಯೂಷಿಯನ್ ತತ್ವಗಳ ಅನುಸಾರ "ಮಾರ್ಗ" ಎಂದರೇನೆಂದು ತಿಳಿದುಕೊಂಡಿದ್ದೇನೆ. ಝೆನ್ ತತ್ವಗಳ ಅನುಸಾರ ಮಾರ್ಗ ಎಂದರೇನೆಂದು ತಿಳಿಯಲು ಬಂದಿದ್ದೇನೆ. ದಯವಿಟ್ಟು ತಿಳಿಸುವಿರಾ?" ಎಂದು ಝೆನ್ ಗುರುವನ್ನು ವಿನಂತಿಸಿದ.

ಝೆನ್ ಗುರುಗಳು ಪಂಡಿತನ ಕೆನ್ನೆಗೆ ಜೋರಾಗಿ ಒಂದೇಟು ಬಿಗಿದು, ಆತನನ್ನು ತಳ್ಳಿದರು. ಕೋಪದಿಂದ ಕುದಿದು ಹೋದ ಪಂಡಿತ ತನ್ನ ಸೊಂಟದ ಖಡ್ಗವನ್ನು ಹೊರಕ್ಕೆಳೆದು ಝಳಪಿಸಿದ. ಆ ಕ್ಷಣದಲ್ಲಿ ಭಿಕ್ಷುವೊಬ್ಬ ಪಂಡಿತನನ್ನು ಅಡ್ಡಗಟ್ಟಿ, ಅವನ ಕ್ರೋಧಕ್ಕೆ ಕಾರಣವೇನೆಂದು ಪ್ರಶ್ನಿಸಿದ. ಗುರುಗಳು ಕೆನ್ನೆಗೆ ಬಾರಿಸಿ ತಳ್ಳಿದ ಸಂಗತಿಯನ್ನು ಸಿಟ್ಟಿನಿಂದ ಕಂಪಿಸುತ್ತಲೇ ತಿಳಿಸಿದ ಪಂಡಿತ.

“ನನ್ನೊಂದಿಗೆ ಬಾ, ಚಹಾ ಕುಡಿಯೋಣ. ಅನಂತರ ಗುರುಗಳ ಕೋಪಕ್ಕೆ ಕಾರಣವೇನೆಂದು ಕೇಳೋಣ" ಎನ್ನುತ್ತಾ ಪಂಡಿತನನ್ನು ಪಕ್ಕದಲ್ಲಿದ್ದ ಚಹಾ ಕೋಣೆಗೆ ಕರೆದೊಯ್ದ ಭಿಕ್ಷು. ಪಂಡಿತನಿಗೆ ಚಹಾ ಬಟ್ಟಲನ್ನು ಕೊಟ್ಟು ಉಪಚರಿಸಿದ. ಪಂಡಿತ ಚಹಾ ಬಟ್ಟಲನ್ನೆತ್ತಿ ಇನ್ನೇನು ಚಹಾ ಕುಡಿಯಬೇಕು; ಆಗ ಪಂಡಿತನ ರಟ್ಟೆಗೆ ಒಂದೇಟು ನೀಡಿದ ಭಿಕ್ಷು. ಬಟ್ಟಲಿನಿಂದ ಚಹಾ ನೆಲಕ್ಕೆ ಚೆಲ್ಲಿತು. "ಕನ್‌ಫ್ಯೂಷಿಯನ್ ಮಾರ್ಗದ ಅರಿವು ನಿನಗಿದೆ ಎಂದೆಯಲ್ಲ. ಅದೇನೆಂದು ಈಗ ಹೇಳು” ಎಂದ ಭಿಕ್ಷು.

ಆ ಕ್ಷಣದಲ್ಲಿ ಪಂಡಿತನಿಗೆ ತಾನು ಕಲಿತದ್ದು ಯಾವುದೂ ನೆನಪಾಗಲಿಲ್ಲ. ಭಿಕ್ಷು ಸುಮ್ಮನಿರದೆ ಪಂಡಿತನ ರಟ್ಟೆಯನ್ನು ಮತ್ತೆಮತ್ತೆ ಅಲುಗಾಡಿಸುತ್ತಾ ಕೇಳಿದ, “ಹೇಳು, ಬೇಗ ಹೇಳು, ಆ ಮಾರ್ಗ ಯಾವುದು?" ಪಂಡಿತನಿಗೆ ಉತ್ತರಿಸಲಾಗಲೇ ಇಲ್ಲ.

ಆಗ, "ನಮ್ಮ ಮಾರ್ಗ ಯಾವುದೆಂದು ತಿಳಿಸಬೇಕೇನು?" ಎಂದು ಕೇಳುತ್ತಾ ಭಿಕ್ಷು, ನೆಲದಲ್ಲಿ ಚೆಲ್ಲಿದ್ದ ಚಹಾವನ್ನು ಬಟ್ಟೆಯಿಂದ ಒರಸ ತೊಡಗಿದ. ಅದನ್ನೆಲ್ಲ ಒರಸಿ ನೆಲ ಶುಚಿ ಮಾಡಿದ ನಂತರ ಭಿಕ್ಷು ಹೇಳಿದ, "ನೋಡಿದೆಯಾ? ಇದುವೇ ನಮ್ಮ ಮಾರ್ಗ."

ಆ ಕ್ಷಣದಲ್ಲಿ ಪಂಡಿತನಿಗಾಯಿತು ಜ್ನಾನೋದಯ.