HRM

ಶಾಮು, ಸೋಮು ಮತ್ತು ಗೋಪು ಗೆಳೆಯರು. ಇವರಲ್ಲಿ ಗೋಪು ವಕ್ರಬುದ್ಧಿಯವನು. ಇವನಿಗೆ ಶಾಮು ಮತ್ತು ಸೋಮು ಆಡುವ ಆಟಗಳ ಬಗ್ಗೆ ಆಸಕ್ತಿಯೇ ಇಲ್ಲ. "ಅವರೇನು ಆಟ ಆಡುತ್ತಾರೋ …. ಶಾಲಾ ಕಂಪೌಂಡಿನೊಳಗೆ ಓಡುವುದು, ಸೈಕಲ್ ಓಡಿಸುವುದು - ಇವೆಲ್ಲ ಆಟಗಳೇ ಅಲ್ಲ. ರಸ್ತೆಯಲ್ಲಿ ಓಡುವುದು, ಎತ್ತರದ ಸ್ಥಳದಿಂದ ಕೆಳಕ್ಕೆ ಹಾರುವುದು, ಇತರ ವಿದ್ಯಾರ್ಥಿಗಳ ನೋಟ್ ಪುಸ್ತಕಗಳಿಂದ ಪುಟಗಳನ್ನು ಹರಿಯುವುದು - ಇವೆಲ್ಲ ನನಗೆ ಖುಷಿ ಕೊಡುವ ಆಟಗಳು” ಎಂಬುದು ಗೋಪುವಿನ ಯೋಚನೆ.

ಅದೊಂದು ದಿನ, ಗೋಪು ಯೋಚಿಸಿದ: ನಾನು ನನ್ನ ಪಾಡಿಗೆ ಆಟವಾಡುತ್ತೇನೆ. ನನಗೆ ಅವರಿಬ್ಬರ ಸಹವಾಸವೇ ಬೇಡ. ಅವನು ಯಾರದೋ ಹಣ ಕದ್ದ; ಇತರ ವಿದ್ಯಾರ್ಥಿಗಳ ನೋಟ್ ಪುಸ್ತಕಗಳ ಪುಟಗಳನ್ನು ಹರಿದ; ಅಧ್ಯಾಪಕರ ಕುರ್ಚಿಗೆ ಗಮ್ ಅಂಟಿಸಿದ! ಇದೆಲ್ಲ ಉಪಟಳ ಮಾಡಿದವರು ಯಾರೆಂಬುದು ಯಾರಿಗೂ ತಿಳಿಯಲಿಲ್ಲ.

ಅನಂತರ ಗೋಪು ಶಾಲೆಯಿಂದ ದೂರದಲ್ಲಿದ್ದ ಸೇತುವೆಗೆ ಹೋಗಿ, ಸೇತುವೆಯಿಂದ ಕಿರುಚುತ್ತಾ ನದಿಗೆ ಹಾರಿದ! ಅವನಿಗೆ ಈಜು ಬರುತ್ತಿರಲಿಲ್ಲ. ಬಾಯೊಳಗೆ ನೀರು ತುಂಬಿ ಉಸಿರು ಕಟ್ಟಿದಾಗ ಅವನಿಗೆ ಜೀವಭಯ ಶುರುವಾಯಿತು. “ನನ್ನನ್ನು ಬಚಾವ್ ಮಾಡಿ, ಬಚಾವ್ ಮಾಡಿ" ಎಂದು ಬೊಬ್ಬೆ ಹೊಡೆಯತೊಡಗಿದ. ಅವನನ್ನು ಹಿಂಬಾಲಿಸಿ ಬಂದಿದ್ದ ಶಾಮು ಮತ್ತು ಸೋಮು, ಒಂದು ಹಗ್ಗ ತಂದು ಅದನ್ನು ಸೇತುವೆಯಿಂದ ಕೆಳಕ್ಕೆ ಇಳಿಸಿದರು. ಗೋಪು ಹೇಗೋ ಮಾಡಿ ಆ ಹಗ್ಗವನ್ನು ಹಿಡಿದುಕೊಂಡಾಗ ಅವರಿಬ್ಬರೂ ಸೇರಿ, ಅವನನ್ನು ಮೇಲಕ್ಕೆ ಎಳೆದು, ಅವನ ಜೀವ ಕಾಪಾಡಿದರು. "ನಿನಗೆ ಖುಷಿ ಬೇಕಾದರೆ ಅಪಾಯದ ಕೆಲಸ ಮಾಡಬೇಕೇ? ಅಥವಾ ಇತರರಿಗೆ ತೊಂದರೆ ಕೊಡಬೇಕೇ?" ಎಂದು ಗೆಳೆಯರು ಕೇಳಿದಾಗ ಗೋಪು ನಿರುತ್ತರನಾದ. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ತನ್ನ ಗೆಳೆಯರ ಬಳಿ ಕ್ಷಮೆ ಕೇಳಿದ. ತನ್ನ ಜೀವ ಉಳಿಸಿದ್ದಕ್ಕಾಗಿ ಕೃತಜ್ನತೆ ಅರ್ಪಿಸಿದ.

ಲಾಮೊ ಡೊನ್‌ಡ್ರುಬ್ ಟಿಬೆಟಿಯನ್ ತಂದೆತಾಯಿಯರ ಮಗ. ರೈತರಾದ ಅವರ ಹೆತ್ತವರು ಬಾರ್ಲಿ, ಗೋಧಿ ಮತ್ತು ಆಲೂಗಡ್ಡೆ ಬೆಳೆಯುತ್ತಿದ್ದರು. ಆಗಿನ ಟಿಬೆಟಿಯನ್ ಸರಕಾರವು ದಲಾಯಿ ಲಾಮಾನಾಗಿ ಜನ್ಮ ತಳೆದ ಹೊಸ ವ್ಯಕ್ತಿಯನ್ನು ಪತ್ತೆ ಮಾಡಲಿಕ್ಕಾಗಿ “ಶೋಧ ತಂಡ”ವನ್ನು ಕಳಿಸಿದಾಗ ಲಾಮೊಗೆ ಕೇವಲ ಎರಡು ವರುಷ ವಯಸ್ಸು.

ಹಲವು ಗುರುತುಗಳು ಶೋಧ ತಂಡವನ್ನು ಲಾಮೊನ ಮನೆಗೆ ಕರೆತಂದವು. ಲಾಮೊನ ಮನೆಯ ಚಾವಣಿಯ ಮೇಲೆ ಜ್ಯುನಿಪರ್ ಮರದ ಕೊಂಬೆಗಳನ್ನು ಕಂಡಾಗ ಭವಿಷ್ಯದ ದಲಾಯಿ ಲಾಮಾ ಇಲ್ಲೇ ವಾಸವಿದ್ದಾರೆಂಬುದು ಶೋಧ ತಂಡಕ್ಕೆ ಖಚಿತವಾಯಿತು. ಹದಿಮೂರನೆಯ ದಲಾಯಿ ಲಾಮಾರಿಗೆ ಸೇರಿದ ಮತ್ತು ಅವರದಲ್ಲದ ಹಲವು ಸೊತ್ತುಗಳನ್ನು ಶೋಧ ತಂಡವು ತಂದಿತ್ತು. ಹದಿಮೂರನೆಯ ದಲಾಯಿ ಲಾಮಾರಿಗೆ ಸೇರಿದ ಎಲ್ಲ ಸೊತ್ತುಗಳನ್ನೂ “ಇದು ನನ್ನದು" ಎನ್ನುತ್ತಾ ಲಾಮೊ ಸರಿಯಾಗಿ ಗುರುತಿಸಿದ.

ಅನಂತರ ಟಿಬೆಟಿನ ಪ್ರಾಚೀನ ಬೌದ್ಧ ಶಾಲೆಗೆ ಲಾಮೊನನ್ನು ಕರೆದೊಯ್ಯಲಾಯಿತು. ಅಲ್ಲಿ ಆತನಿಗೆ ಸೂಕ್ತ ಮಾರ್ಗದರ್ಶನ ನೀಡಿ, ಆತನನ್ನು ಟಿಬೆಟಿಯನ್ನರ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕನಾದ ದಲಾಯಿ ಲಾಮಾನಾಗಿ ಬೆಳೆಸಲಾಯಿತು. ಅನಂತರ ಟಿಬೇಟಿನ ಮೇಲೆ ಚೀನಾ ದೇಶವು ದುರಾಕ್ರಮಣ ಮಾಡಿ, ಅದನ್ನು ಆಕ್ರಮಿಸಿಕೊಂಡದ್ದು, ಟಿಬೆಟಿಯನ್ನರ ಮೇಲೆ ಕ್ರೂರ ದಬ್ಬಾಳಿಕೆ ಮಾಡುತ್ತಿರುವುದು, ದಲಾಯಿ ಲಾಮಾ ಟಿಬೆಟಿನಿಂದ ಪಲಾಯನ ಮಾಡಿ, ತನ್ನ ಸಾವಿರಾರು ಅನುಯಾಯಿಗಳೊಂದಿಗೆ ಭಾರತದಲ್ಲಿ ಆಶ್ರಯ ಪಡೆದದ್ದು ಈಗ ಚರಿತ್ರೆ. ಈಗಲೂ ಟಿಬೆತನ್ನು ಚೀನಾದ ಆಕ್ರಮಣದಿಂದ ಪಾರು ಮಾಡಲು ದಲಾಯಿ ಲಾಮಾ ಅವರ ಹೋರಾಟ ಮುಂದುವರಿದಿದೆ. ಇಡೀ ಜಗತ್ತು ದಲಾಯಿ ಲಾಮಾ ಅವರನ್ನು ವಿಶ್ವಗುರು ಎಂದು ಗೌರವಿಸುತ್ತದೆ.

ರಷ್ಯಾ ಆಕ್ರಮಿತ ಪೊಲೆಂಡಿನ ಕುಟುಂಬದ ಕೊನೆಯ ಮಗುವೇ ಮರಿಯಾ. ಅವಳ ಅಮ್ಮ ಐದು ಮಕ್ಕಳ ಕಾಳಜಿ ವಹಿಸಿದರೆ, ಅಪ್ಪ ಮಕ್ಕಳಿಗೆ ಗಣಿತ ಮತ್ತು ಭೂಗೋಳ ಪಾಠ ಕಲಿಸಿದರು. ಯಾಕೆಂದರೆ, ಆಗಿನ ಕಾಲದಲ್ಲಿ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಪೊಲೆಂಡಿನಲ್ಲಿ ನಿಷೇಧಿಸಲಾಗಿತ್ತು. ಆದರೂ ಮರಿಯಾ ಉನ್ನತ ಶಿಕ್ಷಣ ಪಡೆದಳು - ಮನೆಗಳಲ್ಲೇ ಶಿಕ್ಷಣ ಒದಗಿಸುತ್ತಿದ್ದ ಒಂದು ಅಕಾಡೆಮಿಯ ಮೂಲಕ.

ಮರಿಯಾ ಮತ್ತು ಅವಳ ಸೋದರಿ ಬ್ರೊನಿಯಾ - ಇಬ್ಬರಿಗೂ ಕಲಿಕೆಯ ಉತ್ಸಾಹ. ಆದ್ದರಿಂದ, ಫ್ರಾನ್ಸಿನಲ್ಲಿ ಬ್ರೊನಿಯಾಳ ವೈದ್ಯಕೀಯ ಶಿಕ್ಷಣಕ್ಕೆ ಬೇಕಾದಷ್ಟು ಹಣವನ್ನು ತಾವಿಬ್ಬರೂ ಉಳಿತಾಯ ಮಾಡಬೇಕೆಂದು ಅವರಿಬ್ಬರೂ ನಿರ್ಧರಿಸಿದರು. ಆಕೆಯ ವೈದ್ಯಕೀಯ ಶಿಕ್ಷಣ ಮುಗಿಯುತ್ತಿದ್ದಂತೆ, ಆಕೆ ಮರಿಯಾಳಿಗೆ ಸಹಾಯ ಮಾಡಬೇಕೆಂದು ಅವರಿಬ್ಬರೂ ನಿಶ್ಚಯಿಸಿದರು. ಬ್ರೊನಿಯಾಳ ವೈದ್ಯಕೀಯ ಶಿಕ್ಷಣ ಮುಗಿಯುವ ತನಕ ಹಳ್ಳಿಗಾಡಿನಲ್ಲಿ ನೆಲೆಸಿದ ಮರಿಯಾ, ಅಲ್ಲೇ ಹಗಲು ಕೆಲಸ ಮಾಡುತ್ತಾ, ರಾತ್ರಿ ಅಧ್ಯಯನ ಮಾಡಿ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಕಲಿತಳು.

ಒಂದು ವರುಷವಾಗುತ್ತಿದ್ದಂತೆ, ಬ್ರೊನಿಯಾ ತನ್ನ ಸೋದರಿ ಮರಿಯಾಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ಕರೆಸಿಕೊಂಡಳು. ಮುಂದೆ ಮರಿಯಾಳ ಬದುಕು ರೋಚಕ ತಿರುವು ಪಡೆಯಿತು. ಅವಳು ಮೇರಿ ಎಂದು ಕರೆಸಿಕೊಂಡಳು. ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಉನ್ನತ ಪದವಿ ಪಡೆದಳು. (ಅದನ್ನು ಗಳಿಸಿದ ಕೇವಲ ಐದು ಮಹಿಳೆಯರಲ್ಲಿ ಆಕೆ ಒಬ್ಬಳು.) ಅವಳು ರೇಡಿಯಮ್ ಅನ್ನು ಸಂಶೋಧಿಸಿದಳು. ಮಾತ್ರವಲ್ಲ, ಪ್ರಪ್ರಥಮ ಮೊಬೈಲ್-ಎಕ್ಸ್ ರೇ ಯಂತ್ರವನ್ನು ಆವಿಷ್ಕರಿಸಿದಳು. ನೊಬೆಲ್ ಪಾರಿತೋಷಕ ಗಳಿಸಿದ ಮೊತ್ತಮೊದಲ ಮಹಿಳೆ ಮೇರಿ ಕ್ಯೂರಿ - ಒಂದಲ್ಲ, ಎರಡು ನೊಬೆಲ್ ಪಾರಿತೋಷಕ ಗಳಿಸಿದ್ದು ಆಕೆಯ ಮಹತ್ಸಾಧನೆ. (ಎರಡು ಪ್ರತ್ಯೇಕ ವೈಜ್ನಾನಿಕ ವಿಭಾಗಗಳಲ್ಲಿ.)

ಜಾನಿಗೆ ತರಕಾರಿಗಳೆಂದರೆ ಇಷ್ಟವಿಲ್ಲ. ಅಮ್ಮ ತರಕಾರಿಗಳನ್ನು ಊಟದ ತಟ್ಟೆಯಲ್ಲಿ ಬಡಿಸಿದಾಗ ಅವನು ಗೊಣಗುತ್ತಿದ್ದ, “ಇವನ್ನು ತಿನ್ನಬೇಕೆಂದು ಯಾಕೆ ಒತ್ತಾಯ ಮಾಡುತ್ತಿ?” ಅವನ್ನು ತಿನ್ನದೆ, ಕೊನೆಗೆ ಕಸದ ಬುಟ್ಟಿಗೆ ಎಸೆಯುತ್ತಿದ್ದ - ಅಮ್ಮನಿಗೆ ಕಾಣದಂತೆ.

ಅದೊಂದು ದಿನ ಅವನ ಅಮ್ಮ ಹೇಳಿದಳು, "ಜಾನಿ, ನಾಳೆ ನಾವೊಂದು ಹೊಸ ಊರಿಗೆ ಹೋಗೋಣ. ಅಲ್ಲಿ ನಿನಗೆ ಹೊಸ ಗೆಳೆಯರು ಸಿಗುತ್ತಾರೆ.” ಜಾನಿಗೆ ಖುಷಿಯೋ ಖುಷಿ. ಮರುದಿನ ಅವನು ಬೇಗನೇ ಎದ್ದು, ಅಮ್ಮನೊಂದಿಗೆ ಪ್ರವಾಸ ಹೋಗಲು ತಯಾರಾದ. ಅನಂತರ, ಅವನನ್ನು ಅಮ್ಮ ಕಾರಿನಲ್ಲಿ ಹತ್ತಿರದ ಹಳ್ಳಿಯೊಂದಕ್ಕೆ ಕರೆದೊಯ್ದಳು. ಅರ್ಧ ಗಂಟೆಯ ಪ್ರಯಾಣದ ನಂತರ ಅಮ್ಮ ಕಾರನ್ನು ಹಳ್ಳಿಯೊಂದರಲ್ಲಿ ನಿಲ್ಲಿಸಿದಳು. ಜಾನಿ ಉತ್ಸಾಹದಿಂದಲೇ ಕಾರಿನಿಂದ ಕೆಳಗಿಳಿದ. ಆಗಲೇ ಹಲವು ಮಕ್ಕಳು ಕಾರಿನ ಸುತ್ತಲೂ ನೆರೆದಿದ್ದರು. ಆದರೆ, ಚಿಂದಿಬಟ್ಟೆಗಳನ್ನು ಧರಿಸಿದ್ದ ಅವರನ್ನು ಕಾಣುತ್ತಲೇ ಜಾನಿಯ ಉತ್ಸಾಹ ಪುಸಕ್ಕನೆ ಇಳಿಯಿತು.

ಕಾರಿನಿಂದ ದೊಡ್ಡ ಚೀಲವೊಂದನ್ನು ಜಾನಿಯ ಅಮ್ಮ ಹೊರ ತೆಗೆದು, ಜಾನಿಗೆ ಹೇಳಿದಳು, "ಜಾನಿ, ನೀನೀಗ ಈ ಆಹಾರದ ಪೊಟ್ಟಣಗಳನ್ನು ಇಲ್ಲಿನ ಮಕ್ಕಳಿಗೆ ಹಂಚಬೇಕು.” ಜಾನಿ ಹಾಗೆಯೇ ಮಾಡಿದ. ಅಲ್ಲಿನ ಹಸಿದ ಮಕ್ಕಳು ಆತುರದಿಂದ ಆಹಾರದ ಪೊಟ್ಟಣಗಳನ್ನು ಬಿಚ್ಚಿ, ಅನ್ನ ಮತ್ತು ತರಕಾರಿಗಳನ್ನು ಗಬಗಬನೆ ತಿನ್ನುವುದನ್ನು ಕಂಡು ಜಾನಿಗೆ ನಾಚಿಕೆಯಾಯಿತು. ಅವನು ಯಾವ ತರಕಾರಿಗಳನ್ನು ರುಚಿಯಿಲ್ಲದ ಆಹಾರವೆಂದು ಎಸೆಯುತ್ತಿದ್ದನೋ ಅವನ್ನೇ ಹಳ್ಳಿಯ ಮಕ್ಕಳು ಚಪ್ಪರಿಸಿ ತಿನ್ನುತ್ತಿದ್ದರು. ಅನಂತರ ಅವರೆಲ್ಲರೂ ಒಟ್ಟಾಗಿ ಪ್ರಾರ್ಥಿಸಿದರು. ಅಲ್ಲಿಂದ ಹೊರಡುವಾಗ ಜಾನಿ ನಿರ್ಧರಿಸಿದ, “ನಾನಿನ್ನು ಯಾವತ್ತೂ ತರಕಾರಿಗಳನ್ನು ಕಸದ ಬುಟ್ಟಿಗೆ ಎಸೆಯೋದಿಲ್ಲ.” ಅನಂತರ, ಜಾನಿ ಮತ್ತು ಅವನ ಅಮ್ಮ ಪ್ರತಿ ವಾರಾಂತ್ಯದಲ್ಲಿ ಆ ಹಳ್ಳಿಗೆ ಭೇಟಿಯಿತ್ತು, ಬಡ ಮಕ್ಕಳಿಗೆ ಆಹಾರದ ಪೊಟ್ಟಣಗಳನ್ನು ಕೊಡುತ್ತಿದ್ದಾರೆ.

ಬಾಲಕ ಹರ್ಲಾಂಡ್ ಸ್ಯಾಂಡರ್ಸ್‌ನ ತಂದೆ ತೀರಿಕೊಂಡಾಗ ಅವನಿಗೆ ಕೇವಲ ಆರು ವರುಷ ವಯಸ್ಸು. ಅವನ ತಾಯಿ ಕೆಲಸಕ್ಕೆ  ಹೋಗುತ್ತಿದ್ದಳು. ಆಗ ಮೂರು ವರುಷದ ತಮ್ಮ ಮತ್ತು ಪುಟ್ಟ ತಂಗಿಯನ್ನು ಹರ್ಲಾಂಡ್ ಸ್ಯಾಂಡರ್ಸ್ ನೋಡಿಕೊಳ್ಳುತ್ತದ್ದ. ಆ ಸಮಯದಲ್ಲಿಯೇ ಅವನು ಚೆನ್ನಾಗಿ ಅಡುಗೆ ಮಾಡಲು ಕಲಿತುಕೊಂಡ. ಯೌವನದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ ಸ್ಯಾಂಡರ್ಸ್, ಅನಂತರ ಸೈನ್ಯ ಸೇರಿದ. ಅಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿ ಕರ್ನಲ್ ಹುದ್ದೇಗೇರಿದ.

ತದನಂತರ ಸೈನ್ಯ ತೊರೆದ ಕರ್ನಲ್ ಸ್ಯಾಂಡರ್ಸ್ ತನ್ನ 40ನೆಯ ವಯಸ್ಸಿನಲ್ಲಿ ಹೆದ್ದಾರಿಯ ಪಕ್ಕದಲ್ಲಿ ಹೋಟೆಲ್ ತೆರೆದು ಪ್ರಯಾಣಿಕರಿಗೆ ಆಹಾರ ಮಾರತೊಡಗಿದ. ಹೆಚ್ಚೆಚ್ಚು ಗ್ರಾಹಕರು ಅವನ ಹೋಟೆಲಿಗೆ ಬರತೊಡಗಿದಾಗ, ತನ್ನ ವ್ಯವಹಾರ ವಿಸ್ತರಿಸಿದ. ಮುಂದಿನ ಒಂಭತ್ತು ವರುಷ ಅವನ ವ್ಯವಹಾರ ಚೆನ್ನಾಗಿ ನಡೆಯಿತು. ಯಾಕೆಂದರೆ, ಅವನು ಹನ್ನೊಂದು ಮೂಲಿಕೆಗಳು ಮತ್ತು ಸಾಂಬಾರಪದಾರ್ಥಗಳನ್ನು ಬಳಸಿ ತಯಾರಿಸಿದ ಆಹಾರ ಬಹಳ ರುಚಿಯಾಗಿದ್ದು, ಜನಪ್ರಿಯವಾಯಿತು.

ಆದರೆ, ಹೊಸ ಹೆದ್ದಾರಿ ನಿರ್ಮಾಣದ ಕೆಲಸ ಶುರುವಾದ ಕಾರಣ ಕರ್ನಲ್ ಸ್ಯಾಂಡರ್ಸ್ ತನ್ನ ಹೋಟೆಲನ್ನು ಮುಚ್ಚಬೇಕಾಯಿತು. ತನ್ನ ಸಾಲವನ್ನೆಲ್ಲ ಮರುಪಾವತಿಸಿದಾಗ ಅವನ ಕೈಯಲ್ಲಿ ಉಳಿದ ಹಣ ಕೇವಲ 104 ಡಾಲರ್. ಇಷ್ಟಾದರೂ ಕರ್ನಲ್ ಸ್ಯಾಂಡರ್ಸ್ ಧೃತಿಗೆಡಲಿಲ್ಲ. ಅವನು, ಯು.ಎಸ್.ಎ. ದೇಶದ ಉದ್ದಗಲದಲ್ಲಿ ಸಂಚರಿಸಿದ; ಹಲವಾರು ರೆಸ್ಟೊರೆಂಟುಗಳಿಗೆ ಭೇಟಿಯಿತ್ತು ತನ್ನ ಫ್ರೈಡ್ ಚಿಕನ್ ಅನ್ನು ಅಲ್ಲೇ ತಯಾರಿಸಿ ಗ್ರಾಹಕರಿಗೆ ಒದಗಿಸಿದ. ಅನಂತರ, ಅನೇಕ ರೆಸ್ಟೊರೆಂಟ್‌ಗಳ ಜೊತೆ ಅವನೊಂದು ಒಪ್ಪಂದ ಮಾಡಿಕೊಂಡ - ಅವರು ಮಾರಾಟ ಮಾಡಿದ ಪ್ರತಿಯೊಂದು ಪ್ಲೇಟ್ ಚಿಕನ್‌ಗಾಗಿ ತನಗೆ ಒಂದು ನಿಕ್ಕಲ್ ಪಾವತಿಸಬೇಕೆಂದು. ಹೀಗೆ ಶುರುವಾಯಿತು ಕೆ.ಎಫ್.ಸಿ. ಅಂದರೆ ಕೆಂಚುಕಿ ಫ್ರೈಡ್ ಚಿಕನ್ ಎಂಬ ಉದ್ಯಮ. ಕೆಲವೇ ವರುಷಗಳಲ್ಲಿ ಕರ್ನಲ್ ಸ್ಯಾಂಡರ್ಸಿನ ಕೆ.ಎಫ್.ಸಿ. ಜಗತ್ತಿನ ಉದ್ದಗಲದಲ್ಲಿ ಪ್ರಸಿದ್ಧ ಬ್ರಾಂಡ್ ಆಗಿ ಮೆರೆಯಿತು.

ಆ ದಿನ ಭಾರೀ ಗಾಳಿಮಳೆ. ಗಾಳಿಯ ವೇಗಕ್ಕೆ ಎತ್ತರದ ಮರಗಳು ತೊನೆದಾಡುತ್ತಿದ್ದವು. ರಸ್ತೆಯಲ್ಲಿ ನಡೆದು ಬರುತ್ತಿದ್ದ ಸುರಭಿಗೆ ಚಿಂತೆಯಾಯಿತು. ಗಾಳಿಮಳೆಯಿಂದಾಗಿ ಮನೆ ತಲಪುವುದು ಕಷ್ಟವೆನಿಸಿತು. ಮಳೆಯಿಂದಾಗಿ ಮೂರಡಿ ಮುಂದಿನ ರಸ್ತೆಯೂ ಕಾಣಿಸುತ್ತಿರಲಿಲ್ಲ. ಮನೆ ತಲಪಲು ಅವಳೊಂದು ತೊರೆಯನ್ನು ಹಾದು ಹೋಗಬೇಕಾಗಿತ್ತು. ಅವಳು ತೊರೆಯ ಬಳಿ ಬಂದಾಗ, ತೊರೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ತೊರೆ ಅಡ್ಡವಾಗಿದ್ದ ಕಿರುಸೇತುವೆಯ ಅಂಚಿನ ವರೆಗೆ ನೀರು ಏರಿತ್ತು. “ಓ ದೇವರೇ, ನಾನು ಈ ಕಿರುಸೇತುವೆಯನ್ನು ಸುರಕ್ಷಿತವಾಗಿ ದಾಟಲು ಸಾಧ್ಯವೇ?” ಎಂದು ಅವಳು ಭಯದಿಂದ ಒಂದು ಕ್ಷಣ ನಿಂತಳು.

ಅಷ್ಟರಲ್ಲಿ, ಕಿರುಸೇತುವೆಯ ಹತ್ತಿರ ಅಳುತ್ತಾ ನಿಂತಿದ್ದ ಪುಟ್ಟ ಬಾಲಕನನ್ನು ಸುರಭಿ ಕಂಡಳು. ಅವಳು ಅವನ ಬಳಿ ಹೋಗಿ, ಅವನನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡಳು. ಅವನನ್ನು ಅವಳು ಮಾತನಾಡಿಸಿದಳು. ಅವನು ಹೆದರಿಕೆಯಿಂದ ನಡುಗುತ್ತಾ ಹೀಗೆಂದ: "ನಾನು ಈ ಸೇತುವೆ ದಾಟಿ ಮನೆಗೆ ಹೋಗಬೇಕಾಗಿದೆ. ಆದರೆ ನನಗೆ ತೊರೆಯ ನೀರು ನೋಡಿ ಹೆದರಿಕೆ ಆಗ್ತಿದೆ.” ಸುರಭಿ ಅವನ ಮೈದಡವುತ್ತಾ ಹೇಳಿದಳು, “ಮುದ್ದು ಹುಡುಗಾ, ನೀನೇನೂ ಹೆದರಬೇಡ. ನಾನು ನಿನ್ನನ್ನು ಎತ್ತಿಕೊಂಡು ಸೇತುವೆ ದಾಟಿಸುತ್ತೇನೆ. ಅನಂತರ ನೀನು ಮನೆಗೆ ಓಡಿಕೊಂಡು ಹೋಗು.” ಅವಳು ಜಾಗರೂಕತೆಯಿಂದ ಅವನನ್ನು ಎತ್ತಿಕೊಂಡು ಸೇತುವೆ ದಾಟಿಸಿದಳು. “ಓ, ನೀವೆಷ್ಟು ಒಳ್ಳೆಯವರು. ಅಮ್ಮನಿಗೆ ಹೇಳ್ತೇನೆ” ಎಂದ ಆ ಪುಟ್ಟ ಬಾಲಕ. ಆಗ ಸುರಭಿಗೆ ತನ್ನ ಹೆದರಿಕೆ ಕಾಣೆಯಾದದ್ದು ಅರಿವಾಯಿತು. ಇನ್ನೊಬ್ಬರ ಕಷ್ಟ ಕಂಡಾಗ, ನಮ್ಮ ಕಷ್ಟ ಏನೂ ಅಲ್ಲ ಅನಿಸುತ್ತದೆ.

ಬಾಲಕ ಮೈಕೇಲ್ ಜೋರ್ಡಾನ್ ಕನಸು: ಶಾಲೆಯ ಬಾಸ್ಕೆಟ್‌ಬಾಲ್ ತಂಡ ಸೇರಿಕೊಳ್ಳುವುದು. ಹಿರಿಯ ವಿದ್ಯಾರ್ಥಿಗಳು ತಮ್ಮೊಂದಿಗೆ ಬಾಸ್ಕೆಟ್‌ಬಾಲ್ ಆಡುತ್ತಿದ್ದ ಮೈಕೇಲ್‌ಗೆ ಗೇಲಿ ಮಾಡಲಿಕ್ಕಾಗಿ ತಮ್ಮ ನಾಲಗೆ ಹೊರಕ್ಕೆ ಚಾಚುತ್ತಿದ್ದರು. ದುರದೃಷ್ಟದಿಂದ, ಶಾಲೆಯ ಬಾಸ್ಕೆಟ್‌ಬಾಲ್ ತಂಡದ ಆಯ್ಕೆಗೆ ಮೊದಲ ಬಾರಿ ಹಾಜರಾದಾಗ ಮೈಕೇಲ್ ಆಯ್ಕೆಯಾಗಲಿಲ್ಲ. ಯಾಕೆಂದರೆ ಅವನು ಆಯ್ಕೆಯ ಅರ್ಹತಾ ಮಟ್ಟ ತಲಪಲಿಲ್ಲ. ಅವನಿಗೆ ಬಹಳ ನಿರಾಶೆಯಾಯಿತು.

ಮೊದಲ ಸಲ ಯಶಸ್ಸು ಸಿಗದಿದ್ದರೂ ಶಾಲೆಯ ಬಾಸ್ಕೆಟ್‌ಬಾಲ್ ತಂಡದ ಆಯ್ಕೆಗೆ ಪುನಃ ಪ್ರಯತ್ನಿಸಲು ಮೈಕೇಲ್ ನಿರ್ಧರಿಸಿದ. ತನ್ನ ಎತ್ತರ ಹೆಚ್ಚಾಗಬೇಕೆಂಬುದು ಅವನ ದೊಡ್ಡ ಆಶೆ. ಯಾಕೆಂದರೆ, ಎತ್ತರವಿದ್ದರೆ ಆಟದಲ್ಲಿ ಬಾಲನ್ನು ಬಾಸ್ಕೆಟಿಗೆ ಎಸೆಯಲು ಅನುಕೂಲ. ಮೈಕೇಲನ ತಂದೆ ಅವನನ್ನು ಪ್ರೋತ್ಸಾಹಿಸಿದರು, “ಮೈಕೇಲ್, ಎತ್ತರವಾಗಬೇಕೆಂಬ ಆಶೆ ನಿನ್ನ ಹೃದಯದಲ್ಲಿದೆ. ನಿಜ ಹೇಳಬೇಕೆಂದರೆ, ನಿನ್ನ ಎತ್ತರ ಎಂಬುದು ನಿನ್ನೊಳಗಿದೆ. ನಿನಗೆ ಎಷ್ಟು ಎತ್ತರ ಆಗಬೇಕೆಂದಿದೆಯೋ ನೀನು ನಿನ್ನ ಯೋಚನೆಯಲ್ಲಿ ಅಷ್ಟು ಎತ್ತರ ಆಗಬಲ್ಲೆ.” ಅಬ್ಬ, ಎಂತಹ ಮಾತು!

ಮೈಕೇಲನ ಕುಟುಂಬದಲ್ಲಿ ಯಾರೂ ಬಾಸ್ಕೆಟ್‌ಬಾಲ್ ಆಟಗಾರ ಆಗಿರಲಿಲ್ಲ. ಅವನ ತಂದೆ ಒಬ್ಬ ಮೆಕ್ಯಾನಿಕ್ ಮತ್ತು ತಾಯಿ ಬ್ಯಾಂಕಿನ ಉದ್ಯೋಗಿ. ಅವನ ಕುಟುಂಬದಲ್ಲಿ ಯಾರೂ ಆರು ಅಡಿಗಳಿಗಿಂತ ಎತ್ತರ ಇರಲಿಲ್ಲ. ಆದರೆ ತಂದೆಯ ಮಾತುಗಳು ಅವನಲ್ಲಿ ಸಾಧನೆಯ ಕಿಚ್ಚು ಹತ್ತಿಸಿದವು. ಅವನು ನಿರಂತರವಾಗಿ ಬಾಸ್ಕೆಟ್‌ಬಾಲ್ ಆಟದ ಅಭ್ಯಾಸ ಮಾಡಿದ. ನೂರು ಬಾರಿ ಬಾಸ್ಕೆಟಿಗೆ  ಬಾಲ್ ಎಸೆದರೆ ನೂರು ಬಾರಿಯೂ ಅದು ಬಾಸ್ಕೆಟಿನ ಒಳಗೆ ತೂರಬೇಕು ಎಂಬುದೇ ಅವನ ಗುರಿಯಾಗಿತ್ತು. ಛಲದ ಬಲದಿಂದ ಅವನು ಮಾಡಿದ ಸಾಧನೆ ಅವನನ್ನು ಬಾಸ್ಕೆಟ್‌ಬಾಲ್ ಆಟದಲ್ಲಿ ಉತ್ತುಂಗಕ್ಕೆ ಒಯ್ದಿತು. "ಚಿಕಾಗೋ ಬುಲ್ಸ್” ತಂಡದ ಸದಸ್ಯನಾಗಿ ಆಟವಾಡುತ್ತಿದ್ದ ಆತ ಅಮೇರಿಕಾದ ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನಿನ ಹದಿನೈದು ಸೀಸನುಗಳಲ್ಲಿ ಅದ್ಭುತವಾಗಿ ಆಟವಾಡಿ, ಆರು ಬಾರಿ ತನ್ನ ತಂಡವನ್ನು ಗೆಲ್ಲಿಸಿದ! ಅದರಿಂದಾಗಿ ಬದುಕಿದ್ದಾಗಲೇ ಬಾಸ್ಕೆಟ್‌ಬಾಲ್ ಆಟದ ದಂತಕತೆಯಾದ.

ಬಾಲಕ ಶಂಭು ಸಿಟ್ಟು ಮಾಡಿಕೊಂಡಿದ್ದ. “ನನಗೆ ಕಲಿಯೋದು ಇಷ್ಟವಿಲ್ಲ. ಅಪ್ಪ ಓದುಓದು ಅಂತಾರೆ. ಅಮ್ಮನೂ ಓದುಓದು ಅಂತಾರೆ. ಹಾಗಾದರೆ ಆಟ ಆಡಲಿಕ್ಕೇ ಇಲ್ಲವಾ?" ಎಂಬುದು ಅವನ ಗೊಣಗಾಟ. ಮನೆಯ ಕಿಟಕಿಯಿಂದ ಕಾಣುವ ಹೊರಗಿನ ನೋಟ ನೋಡುತ್ತ ನಿಂತಿದ್ದ ಅವನು. ಅಲ್ಲಿ ಕಾಣುವ ಮರವೊಂದರಲ್ಲಿ ಹಲವು ಹಕ್ಕಿಗಳ ನಲಿದಾಟ. ಕೆಲವು ಹಕ್ಕಿಗಳು ತಮ್ಮದೇ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿದ್ದವು; ಕೆಲವು ಪ್ರಾಸಬದ್ಧವಾಗಿ ಚಿಲಿಪಿಲಿ ಸದ್ದು ಮಾಡುತ್ತಿದ್ದವು; ಕೆಲವು ರೆಂಬೆಯಿಂದ ರೆಂಬೆಗೆ ಜಿಗಿಯುತ್ತಿದ್ದವು; ಇನ್ನು ಕೆಲವು ಹಕ್ಕಿಗಳು ಇತ್ತಲಿಂದ ಹಾರಿ, ಮರಕ್ಕೊಂದು ಸುತ್ತು ಬಂದು, ಅತ್ತಲಿನ ರೆಂಬೆಗೆ ಮರಳುತ್ತಿದ್ದವು. “ಹಕ್ಕಿಗಳು ಇಡೀ ದಿನ ಆಟವಾಡುತ್ತವೆ; ನಾನು ಮಾತ್ರ ಇಡೀ ದಿನ ಪಾಠ ಓದಬೇಕು" ಎಂದು ಬೇಜಾರು ಮಾಡಿಕೊಂಡ ಶಂಭು.

ಆಗ, ಕಿಟಕಿಗೆ ಹತ್ತಿರವಾಗಿದ್ದ ಮರದ ರೆಂಬೆಯಲ್ಲಿ ಗೀಜಗನ ಹಕ್ಕಿಯೊಂದು ಬಂದು ಕುಳಿತಿತು. ಅದೇನು ಮಾಡುತ್ತದೆಂದು ನೋಡಲು ಶುರು ಮಾಡಿದ ಶಂಭು. ಅದು ಸಣ್ಣಸಣ್ಣ ಕಡ್ಡಿಗಳನ್ನು ತಂದು ರೆಂಬೆ ಟಿಸಿಲು ಒಡೆದಿದ್ದಲ್ಲಿ ಇಟ್ಟಿತು. ಪುನಃ ಹಾರಿ ಹೋಗಿ ಇನ್ನಷ್ಟು ಕಡ್ಡಿಗಳನ್ನು ಕೊಕ್ಕಿನಲ್ಲಿ ಕಚ್ಚಿ ತಂದಿತು. ಮತ್ತೊಮ್ಮೆ ಹಾರಿ ಹೋಗಿ ಇನ್ನೂ ಕೆಲವು ಕಡ್ಡಿಗಳನ್ನು ತಂದಿತು. ಅವನ್ನೆಲ್ಲ ಜೋಡಿಸತೊಡಗಿತು. ಗೀಜಗನ ಹಕ್ಕಿ ಗೂಡು ಕಟ್ಟುತ್ತಿದೆಯೆಂದು ಶಂಭುವಿಗೆ ಅರ್ಥವಾಯಿತು.

ಸಂಜೆಯ ಹೊತ್ತಿಗೆ ಗೀಜಗನ ಗೂಡು ತಯಾರಾಗಿತ್ತು - ಚಂದದ ಗೂಡು ಮರದ ಕೊಂಬೆಯಿಂದ ನೇತಾಡುತ್ತಿತ್ತು. ಅದರ ಒಳಹೋಗಲು ಒಂದು ರಂಧ್ರವನ್ನು ಗೀಜಗ ಬಿಟ್ಟಿತ್ತು. ಈ ಗೂಡು ಕಟ್ಟಲು ಅದು ಬಹುಶಃ ಐನೂರು ಸಲ ಹಾರಿ ಹೋಗಿ ಕಡ್ಡಿಗಳನ್ನು ತಂದಿತ್ತು. ಅನಂತರ ಅವನ್ನೆಲ್ಲ ಒಬ್ಬ ನೇಕಾರನಂತೆ ನಾಜೂಕಿನಿಂದ ಜೋಡಿಸಿತ್ತು. ಆ ಪುಟ್ಟ ಹಕ್ಕಿ ಅದೆಷ್ಟು ಕೆಲಸ ಮಾಡಿತ್ತು! ಮನಮೋಹಕ ಗೂಡು ಸಿದ್ಧವಾದಾಗ ಗೀಜಗನ ಹಕ್ಕಿ ಅದರ ಪಕ್ಕ ಕುಳಿತು ಇಂಪಾಗಿ ಹಾಡಿತ್ತು. ಇದನ್ನೆಲ್ಲ ನೋಡುತ್ತಿದ್ದ ಶಂಭು ದಂಗು ಬಡಿದು ಹೋಗಿದ್ದ. ಏನನ್ನಾದರೂ ಸಾಧಿಸಬೇಕಾದರೆ ಕಷ್ಟ ಪಡಬೇಕು ಎಂದು ಅವನಿಗೆ ಚೆನ್ನಾಗಿ ಅರ್ಥವಾಗಿತ್ತು. ಶಾಲಾ ಪಾಠಗಳನ್ನು ಕಲಿಯಲಿಕ್ಕಾಗಿ ತಾನೂ ಕಷ್ಟ ಪಡುತ್ತೇನೆಂದು ಅವನು ಅವತ್ತೇ ನಿರ್ಧರಿಸಿದ.

ರೊಬರ್ಟ್ ಡಾರ್ವಿನ್ ಎಂಬ ಶ್ರೀಮಂತ ವೈದ್ಯರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಕಿರಿಯ ಮಗ ಚಾರ್ಲ್ಸ್ ಎಂಟು ವರುಷದವನಿದ್ದಾಗ ಅವನ ತಾಯಿ ತೀರಿಕೊಂಡಳು. ಹಾಗಾಗಿ ಅವನ ಅಕ್ಕಂದಿರು ಅವನನ್ನು ಬೆಳೆಸಿದರು. ತಂದೆ ರೊಬರ್ಟ್ ಕಿರಿಯ ಮಗನಿಗೆ ಸಸ್ಯಗಳ ಬಗ್ಗೆ ಇದ್ದ ಆಸಕ್ತಿಯನ್ನು ಗಮನಿಸಿ ಅದನ್ನು ಪ್ರೋತ್ಸಾಹಿಸಿದ. ಜೊತೆಗೆ, ಬೋರ್ಡಿಂಗ್ ಶಾಲೆಯಲ್ಲಿ ಚಾರ್ಲ್ಸ್-ನಿಗೆ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಶಿಕ್ಷಣವನ್ನೂ ಕೊಡಿಸಿದ.

ಚಾರ್ಲ್ಸ್-ನಿಗೆ ಶಾಲೆಯೆಂದರೆ ಬೇಜಾರು. ಆದ್ದರಿಂದ ಅವನು ಶಾಲಾ ಕೆಲಸಗಳನ್ನು ಎಷ್ಟು ಬೇಕೋ ಅಷ್ಟೇ ಮಾಡುತ್ತಿದ್ದ. ಉಳಿದ ಸಮಯದಲ್ಲಿ ಹಕ್ಕಿಗಳನ್ನು ವೀಕ್ಷಿಸುತ್ತಾ, ಚಿಪ್ಪುಹುಳಗಳನ್ನು ಸಂಗ್ರಹಿಸುತ್ತಾ ಕಾಲ ಕಳೆಯುತ್ತಿದ್ದ. ಅವನ ತಂದೆಗೆ ಅವನ ಬಗ್ಗೆ ಆತಂಕ - ಇವನು ಯಾವ ಕೆಲಸಕ್ಕೂ ಬಾರದವನು ಆಗುತ್ತಾನೇನೋ ಎಂದು. ಅವನು ಆಗಾಗ ಚಾರ್ಲ್ಸ್-ನನ್ನು ಎಚ್ಚರಿಸುತ್ತಿದ್ದ: “ನೀನು ಹಕ್ಕಿಗಳನ್ನು ನೋಡೋದು, ನಾಯಿಗಳನ್ನು ಆಡಿಸೋದು ಮತ್ತು ಇಲಿಗಳನ್ನು ಹಿಡಿಯೋದು - ಇವುಗಳಲ್ಲೇ ಮುಳುಗಿರುತ್ತೀಯಾ. ನೀನು ಹೀಗೇ ಮಾಡುತ್ತಿದ್ದರೆ, ನಿನಗೂ ನಮ್ಮ ಕುಟುಂಬಕ್ಕೂ ಕೆಟ್ಟ ಹೆಸರು ತರುತ್ತಿ.”

ಅದೇನಿದ್ದರೂ ಚಾರ್ಲ್ಸ್ ತನ್ನ ಹವ್ಯಾಸಗಳನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸಿದ. ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗಲೇ ಅವನ ಚಿಪ್ಪುಹುಳಗಳ ಸಂಗ್ರಹ ಹೆಸರುವಾಸಿಯಾಗಿತ್ತು. ಅವನ ಹವ್ಯಾಸಗಳೇ ಅವನ ಸಂಶೋಧನೆಯ ಸೋಪಾನಗಳಾದವು. ಅಂತಿಮವಾಗಿ, “ನೈಸರ್ಗಿಕ ಆಯ್ಕೆಯಿಂದ ವಿಕಾಸ” ಎಂಬ ಸುಪ್ರಸಿದ್ಧ ಸಿದ್ಧಾಂತವನ್ನು ಮಂಡಿಸಿ ಅವನು ಜಗತ್ಪ್ರಸಿದ್ಧನಾದ. ಇದುವೇ ಆಧುನಿಕ ವಿಕಾಸವಾದದ ಅಧ್ಯಯನಗಳಿಗೆ ನಾಂದಿಯಾಯಿತು.

ಗುಣವತಿ ಎಂಬ ಬಾಲಕಿಗೆ ಮನೆಯ ಬಾಗಿಲಿನ ಬಳಿ ಕುಂಯ್ಗುಟ್ಟುವ ಸದ್ದು ಕೇಳಿಸಿತು. ಅವಳು ಬಾಗಿಲು ತೆರೆದು ನೋಡಿದಾಗ ಒಂದು ನಾಯಿ ಕುಂಯ್ ಕುಂಯ್ ಸದ್ದು ಮಾಡುತ್ತಿತ್ತು. ಹೊರಗೆ ಜೋರು ಮಳೆ ಸುರಿಯುತ್ತಿತ್ತು. ಆ ಹೆಣ್ಣು ನಾಯಿ ಪೂರ್ತಿ ಒದ್ದೆಯಾಗಿತ್ತು. "ಏನಾಯಿತು? ಯಾಕೆ ಕುಂಯ್ ಕುಂಯ್ ಅನ್ನುತ್ತಿದ್ದಿ?” ಎಂದವಳು ನಾಯಿಯನ್ನು ಮಾತನಾಡಿಸಿದಳು. ತಕ್ಷಣವೇ ಆ ನಾಯಿ ಮಳೆಯಲ್ಲೇ ಅಂಗಳ ದಾಟಿ, ಕಂಪೌಂಡಿನ ಹೊರಗಿದ್ದ ಸಿಮೆಂಟ್ ಪೈಪಿನ ಹತ್ತಿರ ಓಡಿತು.

ಗುಣವತಿ ಕುತೂಹಲದಿಂದ ನಾಯಿಯನ್ನು ಹಿಂಬಾಲಿಸಿದಳು. ಆ ಪೈಪಿನ ಹತ್ತಿರ ಬಂದಾಗ ಅವಳು ಮೂರು ಪುಟ್ಟ ನಾಯಿ ಮರಿಗಳನ್ನು ಕಂಡಳು. ಪೈಪಿನೊಳಗೆ ಮಳೆನೀರು ನುಗ್ಗಿತ್ತು. ಆ ನಾಯಿಮರಿಗಳಿಗೆ ಅಲ್ಲಿಂದ ಹೊರಬರಲಾಗುತ್ತಿರಲಿಲ್ಲ. “ಅಯ್ಯೋಯ್ಯೋ, ನೀವು ಇಲ್ಲಿದ್ದರೆ ಸತ್ತೇ ಹೋಗುತ್ತೀರಿ” ಎನ್ನುತ್ತಾ ಗುಣವತಿ ಆ ನಾಯಿಮರಿಗಳನ್ನು ಒಂದೊಂದಾಗಿ ಎತ್ತಿಕೊಂಡಳು. ಪುಟ್ಟ ಮರಿಗಳು ಚಳಿಯಿಂದಲೂ ಭಯದಿಂದಲೂ ನಡುಗುತ್ತಿದ್ದವು. ಅಂತೂ ಅವನ್ನು ಎತ್ತಿಕೊಂಡು ಬಂದು ಮನೆಯ ಜಗಲಿಯಲ್ಲಿಟ್ಟಳು. ತಾಯಿ ನಾಯಿಯೂ ಅಲ್ಲಿಗೆ ಧಾವಿಸಿ ಬಂತು. ಅದು ತನ್ನ ಮರಿಗಳನ್ನು ನೆಕ್ಕತೊಡಗಿತು. ಅದನ್ನು ನೋಡುತ್ತಾ ಗುಣವತಿಯ ಕಣ್ಣು ಮಂಜಾಯಿತು. ಮರಿಗಳ ಒದ್ದೆ ಮೈಯನ್ನು ನೆಕ್ಕಿದ ನಂತರ, ತಾಯಿ ನಾಯಿ ಗುಣವತಿಯ ಹತ್ತಿರ ಬಂದು ಜೋರಾಗಿ ಬಾಲ ಅಲ್ಲಾಡಿಸತೊಡಗಿತು. ಅನಂತರ ಗುಣವತಿ ತಾಯಿ ನಾಯಿಗೆ ಮತ್ತು ಮರಿಗಳಿಗೆ ಕಂಪೌಂಡಿನ ಮೂಲೆಯಲ್ಲಿ ಜೋಪಡಿಯೊಂದನ್ನು ಕಟ್ಟಿ ಕೊಟ್ಟಳು. ಗುಣವತಿಯ ಹಲವು ಗೆಳತಿಯರು ಬಂದು ನಾಯಿ ಸಂಸಾರವನ್ನು ನೋಡಿ, ಆ ಮರಿಗಳ ಜೀವ ಉಳಿಸಿದ್ದಕ್ಕಾಗಿ ಗುಣವತಿಯನ್ನು ಅಭಿನಂದಿಸಿದರು.

Pages