40. ದಲಾಯಿ ಲಾಮಾ ಎಂಬ ವಿಶ್ವಗುರು

ಲಾಮೊ ಡೊನ್‌ಡ್ರುಬ್ ಟಿಬೆಟಿಯನ್ ತಂದೆತಾಯಿಯರ ಮಗ. ರೈತರಾದ ಅವರ ಹೆತ್ತವರು ಬಾರ್ಲಿ, ಗೋಧಿ ಮತ್ತು ಆಲೂಗಡ್ಡೆ ಬೆಳೆಯುತ್ತಿದ್ದರು. ಆಗಿನ ಟಿಬೆಟಿಯನ್ ಸರಕಾರವು ದಲಾಯಿ ಲಾಮಾನಾಗಿ ಜನ್ಮ ತಳೆದ ಹೊಸ ವ್ಯಕ್ತಿಯನ್ನು ಪತ್ತೆ ಮಾಡಲಿಕ್ಕಾಗಿ “ಶೋಧ ತಂಡ”ವನ್ನು ಕಳಿಸಿದಾಗ ಲಾಮೊಗೆ ಕೇವಲ ಎರಡು ವರುಷ ವಯಸ್ಸು.

ಹಲವು ಗುರುತುಗಳು ಶೋಧ ತಂಡವನ್ನು ಲಾಮೊನ ಮನೆಗೆ ಕರೆತಂದವು. ಲಾಮೊನ ಮನೆಯ ಚಾವಣಿಯ ಮೇಲೆ ಜ್ಯುನಿಪರ್ ಮರದ ಕೊಂಬೆಗಳನ್ನು ಕಂಡಾಗ ಭವಿಷ್ಯದ ದಲಾಯಿ ಲಾಮಾ ಇಲ್ಲೇ ವಾಸವಿದ್ದಾರೆಂಬುದು ಶೋಧ ತಂಡಕ್ಕೆ ಖಚಿತವಾಯಿತು. ಹದಿಮೂರನೆಯ ದಲಾಯಿ ಲಾಮಾರಿಗೆ ಸೇರಿದ ಮತ್ತು ಅವರದಲ್ಲದ ಹಲವು ಸೊತ್ತುಗಳನ್ನು ಶೋಧ ತಂಡವು ತಂದಿತ್ತು. ಹದಿಮೂರನೆಯ ದಲಾಯಿ ಲಾಮಾರಿಗೆ ಸೇರಿದ ಎಲ್ಲ ಸೊತ್ತುಗಳನ್ನೂ “ಇದು ನನ್ನದು" ಎನ್ನುತ್ತಾ ಲಾಮೊ ಸರಿಯಾಗಿ ಗುರುತಿಸಿದ.

ಅನಂತರ ಟಿಬೆಟಿನ ಪ್ರಾಚೀನ ಬೌದ್ಧ ಶಾಲೆಗೆ ಲಾಮೊನನ್ನು ಕರೆದೊಯ್ಯಲಾಯಿತು. ಅಲ್ಲಿ ಆತನಿಗೆ ಸೂಕ್ತ ಮಾರ್ಗದರ್ಶನ ನೀಡಿ, ಆತನನ್ನು ಟಿಬೆಟಿಯನ್ನರ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕನಾದ ದಲಾಯಿ ಲಾಮಾನಾಗಿ ಬೆಳೆಸಲಾಯಿತು. ಅನಂತರ ಟಿಬೇಟಿನ ಮೇಲೆ ಚೀನಾ ದೇಶವು ದುರಾಕ್ರಮಣ ಮಾಡಿ, ಅದನ್ನು ಆಕ್ರಮಿಸಿಕೊಂಡದ್ದು, ಟಿಬೆಟಿಯನ್ನರ ಮೇಲೆ ಕ್ರೂರ ದಬ್ಬಾಳಿಕೆ ಮಾಡುತ್ತಿರುವುದು, ದಲಾಯಿ ಲಾಮಾ ಟಿಬೆಟಿನಿಂದ ಪಲಾಯನ ಮಾಡಿ, ತನ್ನ ಸಾವಿರಾರು ಅನುಯಾಯಿಗಳೊಂದಿಗೆ ಭಾರತದಲ್ಲಿ ಆಶ್ರಯ ಪಡೆದದ್ದು ಈಗ ಚರಿತ್ರೆ. ಈಗಲೂ ಟಿಬೆತನ್ನು ಚೀನಾದ ಆಕ್ರಮಣದಿಂದ ಪಾರು ಮಾಡಲು ದಲಾಯಿ ಲಾಮಾ ಅವರ ಹೋರಾಟ ಮುಂದುವರಿದಿದೆ. ಇಡೀ ಜಗತ್ತು ದಲಾಯಿ ಲಾಮಾ ಅವರನ್ನು ವಿಶ್ವಗುರು ಎಂದು ಗೌರವಿಸುತ್ತದೆ.