38. ಹಸಿದವರಿಗೆ ತಿನ್ನಲು ಗಂಜಿ ಸಿಕ್ಕಿದರೂ ಸಂಭ್ರಮ

ಜಾನಿಗೆ ತರಕಾರಿಗಳೆಂದರೆ ಇಷ್ಟವಿಲ್ಲ. ಅಮ್ಮ ತರಕಾರಿಗಳನ್ನು ಊಟದ ತಟ್ಟೆಯಲ್ಲಿ ಬಡಿಸಿದಾಗ ಅವನು ಗೊಣಗುತ್ತಿದ್ದ, “ಇವನ್ನು ತಿನ್ನಬೇಕೆಂದು ಯಾಕೆ ಒತ್ತಾಯ ಮಾಡುತ್ತಿ?” ಅವನ್ನು ತಿನ್ನದೆ, ಕೊನೆಗೆ ಕಸದ ಬುಟ್ಟಿಗೆ ಎಸೆಯುತ್ತಿದ್ದ - ಅಮ್ಮನಿಗೆ ಕಾಣದಂತೆ.

ಅದೊಂದು ದಿನ ಅವನ ಅಮ್ಮ ಹೇಳಿದಳು, "ಜಾನಿ, ನಾಳೆ ನಾವೊಂದು ಹೊಸ ಊರಿಗೆ ಹೋಗೋಣ. ಅಲ್ಲಿ ನಿನಗೆ ಹೊಸ ಗೆಳೆಯರು ಸಿಗುತ್ತಾರೆ.” ಜಾನಿಗೆ ಖುಷಿಯೋ ಖುಷಿ. ಮರುದಿನ ಅವನು ಬೇಗನೇ ಎದ್ದು, ಅಮ್ಮನೊಂದಿಗೆ ಪ್ರವಾಸ ಹೋಗಲು ತಯಾರಾದ. ಅನಂತರ, ಅವನನ್ನು ಅಮ್ಮ ಕಾರಿನಲ್ಲಿ ಹತ್ತಿರದ ಹಳ್ಳಿಯೊಂದಕ್ಕೆ ಕರೆದೊಯ್ದಳು. ಅರ್ಧ ಗಂಟೆಯ ಪ್ರಯಾಣದ ನಂತರ ಅಮ್ಮ ಕಾರನ್ನು ಹಳ್ಳಿಯೊಂದರಲ್ಲಿ ನಿಲ್ಲಿಸಿದಳು. ಜಾನಿ ಉತ್ಸಾಹದಿಂದಲೇ ಕಾರಿನಿಂದ ಕೆಳಗಿಳಿದ. ಆಗಲೇ ಹಲವು ಮಕ್ಕಳು ಕಾರಿನ ಸುತ್ತಲೂ ನೆರೆದಿದ್ದರು. ಆದರೆ, ಚಿಂದಿಬಟ್ಟೆಗಳನ್ನು ಧರಿಸಿದ್ದ ಅವರನ್ನು ಕಾಣುತ್ತಲೇ ಜಾನಿಯ ಉತ್ಸಾಹ ಪುಸಕ್ಕನೆ ಇಳಿಯಿತು.

ಕಾರಿನಿಂದ ದೊಡ್ಡ ಚೀಲವೊಂದನ್ನು ಜಾನಿಯ ಅಮ್ಮ ಹೊರ ತೆಗೆದು, ಜಾನಿಗೆ ಹೇಳಿದಳು, "ಜಾನಿ, ನೀನೀಗ ಈ ಆಹಾರದ ಪೊಟ್ಟಣಗಳನ್ನು ಇಲ್ಲಿನ ಮಕ್ಕಳಿಗೆ ಹಂಚಬೇಕು.” ಜಾನಿ ಹಾಗೆಯೇ ಮಾಡಿದ. ಅಲ್ಲಿನ ಹಸಿದ ಮಕ್ಕಳು ಆತುರದಿಂದ ಆಹಾರದ ಪೊಟ್ಟಣಗಳನ್ನು ಬಿಚ್ಚಿ, ಅನ್ನ ಮತ್ತು ತರಕಾರಿಗಳನ್ನು ಗಬಗಬನೆ ತಿನ್ನುವುದನ್ನು ಕಂಡು ಜಾನಿಗೆ ನಾಚಿಕೆಯಾಯಿತು. ಅವನು ಯಾವ ತರಕಾರಿಗಳನ್ನು ರುಚಿಯಿಲ್ಲದ ಆಹಾರವೆಂದು ಎಸೆಯುತ್ತಿದ್ದನೋ ಅವನ್ನೇ ಹಳ್ಳಿಯ ಮಕ್ಕಳು ಚಪ್ಪರಿಸಿ ತಿನ್ನುತ್ತಿದ್ದರು. ಅನಂತರ ಅವರೆಲ್ಲರೂ ಒಟ್ಟಾಗಿ ಪ್ರಾರ್ಥಿಸಿದರು. ಅಲ್ಲಿಂದ ಹೊರಡುವಾಗ ಜಾನಿ ನಿರ್ಧರಿಸಿದ, “ನಾನಿನ್ನು ಯಾವತ್ತೂ ತರಕಾರಿಗಳನ್ನು ಕಸದ ಬುಟ್ಟಿಗೆ ಎಸೆಯೋದಿಲ್ಲ.” ಅನಂತರ, ಜಾನಿ ಮತ್ತು ಅವನ ಅಮ್ಮ ಪ್ರತಿ ವಾರಾಂತ್ಯದಲ್ಲಿ ಆ ಹಳ್ಳಿಗೆ ಭೇಟಿಯಿತ್ತು, ಬಡ ಮಕ್ಕಳಿಗೆ ಆಹಾರದ ಪೊಟ್ಟಣಗಳನ್ನು ಕೊಡುತ್ತಿದ್ದಾರೆ.