HRM

ಕಾಡಿನಲ್ಲಿ ನಾಲ್ಕು ಪ್ರಾಣಿಗಳು ಗೆಳೆಯರಾಗಿ ವಾಸ ಮಾಡುತ್ತಿದ್ದವು: ಒಂದು ಆಮೆ, ಒಂದು ಮೊಲ, ಒಂದು ಇಲಿ ಮತ್ತು ಒಂದು ಮುಂಗುಸಿ. ಇಲಿಯ ಹೊರತಾಗಿ ಉಳಿದ ಮೂರು ಪ್ರಾಣಿಗಳಿಗೆ ನೀರಿನಲ್ಲಿ ಈಜುವುದೆಂದರೆ ಪಂಚಪ್ರಾಣ. ಆ ಮೂರು ಪ್ರಾಣಿಗಳು “ಈಜಲಿಕ್ಕೆ ನೀನೂ ಬಾ" ಎಂದು ಇಲಿಯನ್ನು ಒತ್ತಾಯಿಸಿದಾಗ ಇಲಿ ಹೀಗೆನ್ನುತ್ತಿತ್ತು, “ನನಗೆ ಈಜಲು ಗೊತ್ತಿದೆ. ಆದರೆ ನೀರೆಂದರೆ ನನಗೆ ಭಯ."

ಅದೊಂದು ದಿನ ಇಲಿ ಮತ್ತು ಮುಂಗುಸಿ ಒಂದು ಕೆರೆಯ ಹತ್ತಿರ ಆಟವಾಡುತ್ತಿದ್ದವು. ಆಮೆ ಮತ್ತು ಮೊಲ ಆಹಾರ ಹುಡುಕಿಕೊಂಡು ಕಾಡಿನೊಳಕ್ಕೆ ಹೋಗಿದ್ದವು. ಆಗ ಅಚಾನಕ್ ಮುಂಗುಸಿ ನೀರಿಗೆ ಬಿತ್ತು. ಅದು ಈಜಿ ಸುಲಭವಾಗಿ ನೀರಿನಿಂದ ಹೊರ ಬರಬಹುದಿತ್ತು. ಆದರೆ ಅದರ ಕಾಲು ನೀರಿನೊಳಗೆ ಒಂದು ಬಳ್ಳಿಯಲ್ಲಿ ಸಿಕ್ಕಿಕೊಂಡಿತ್ತು. ಹಾಗಾಗಿ ಅದಕ್ಕೆ ಕಾಲುಗಳನ್ನು ಆಡಿಸಲು ಆಗಲೇ ಇಲ್ಲ.

“ಸಹಾಯ ಮಾಡು" ಎಂದು ಮುಂಗುಸಿ ಇಲಿಯನ್ನು ನೋಡುತ್ತಾ ಕಿರುಚಿತು. ಬಳ್ಳಿಯಲ್ಲಿ ಸಿಕ್ಕಿಬಿದ್ದ ಮುಂಗುಸಿ ನೀರಿನಲ್ಲಿ ಮುಳುಗುತ್ತಿತ್ತು. ಮುಂಗುಸಿಯ ಪ್ರಾಣಕ್ಕೆ ಅಪಾಯವಿದೆ ಎಂದು ತಿಳಿದುಕೊಂಡ ಇಲಿ, ತನ್ನ ಭಯ ಬಿಟ್ಟು, ನೀರಿಗೆ ಹಾರಿತು. ಇಲಿ ನೀರಿನೊಳಗೆ ಮುಳುಗಿ, ಮುಂಗುಸಿಯ ಕಾಲಿಗೆ ತೊಡರಿಕೊಂಡಿದ್ದ ಬಳ್ಳಿಯನ್ನು ಕತ್ತರಿಸಿತು. ತನ್ನ ಸಮಯಪ್ರಜ್ನೆಯಿಂದ ಮುಂಗುಸಿಯನ್ನು ಇಲಿ ರಕ್ಷಿಸಿತು. ಅನಂತರ ಇಲಿ ಮತ್ತು ಮುಂಗುಸಿ ಈಜಿಕೊಂಡು ಕೆರೆಯ ದಡ ಸೇರಿದವು.

ಪಶ್ಚಿಮ ಘಟ್ಟದ ಕಾಡಿನಲ್ಲಿ ಎರಡು ಮೊಲಗಳು ವಾಸವಿದ್ದವು - ಹಂಗಾರ ಮತ್ತು ಪಿಂಗಾರ. ಇವರಲ್ಲಿ ಪಿಂಗಾರನ ತುಂಟಾಟಕ್ಕೆ ಮಿತಿಯೇ ಇಲ್ಲ. ಇತರ ಪ್ರಾಣಿಗಳಿಗೆ ಹೊಡೆಯುವುದು ಹಾಗೂ ತೊಂದರೆ ನೀಡುವುದೇ ಇದರ ಕೆಲಸ. ಪಿಂಗಾರ ಮೊಲ ಹತ್ತಿರ ಬಂತೆಂದರೆ ಇತರ ಪ್ರಾಣಿಗಳು ದೂರ ಓಡಿ ಹೋಗುತ್ತಿದ್ದವು.

ಹಂಗಾರ ಗುಣವಂತ ಮೊಲ. ಇತರ ಪ್ರಾಣಿಗಳಿಗೆ ಸಹಾಯ ಮಾಡಲು ಹಂಗಾರ ಯಾವಾಗಲೂ ತಯಾರು. ಇತರರು ಸಹಾಯ ಕೇಳಿದರೆ ಹಂಗಾರ ಯಾವತ್ತು ತಯಾರು.

ಅದೊಂದು ದಿನ ಆಟವಾಡುವಾಗ, ಬೇಟೆಗಾರ ಇಟ್ಟಿದ್ದ ಕುಣಿಕೆಯಲ್ಲಿ ಸಿಕ್ಕಿಬಿದ್ದ ಪಿಂಗಾರ ಮೊಲ “ಸಹಾಯ ಮಾಡಿ, ಸಹಾಯ ಮಾಡಿ" ಎಂದು ಕಿರುಚ ತೊಡಗಿತು. ಇತರ ಪ್ರಾಣಿಗಳು ಹತ್ತಿರ ಬಂದರೂ, ಪಿಂಗಾರ ಮೊಲವನ್ನು ಕಂಡೊಡನೆ ಅಲ್ಲಿಂದ ಓಟ ಕಿತ್ತವು. ತಾವು ಪಿಂಗಾರನ ಹತ್ತಿರ ಹೋದರೆ, ಪಿಂಗಾರ ನಮಗೆ ಹೊಡೆಯುತ್ತಾನೆ ಎಂದು ಅವರಿಗೆಲ್ಲ ಭಯ.

ಇಡೀ ದಿನ ಕುಣಿಕೆಯಲ್ಲಿ ಸಿಕ್ಕಿ ಒದ್ದಾಡಿತು ಪಿಂಗಾರ ಮೊಲ. ರಾತ್ರಿಯಾದ ನಂತರ ಯಾರೋ ಹತ್ತಿರ ಬರುವುದು ಕಾಣಿಸಿತು ಪಿಂಗಾರನಿಗೆ. ಅದು ಮುದುಕ ಕರಡಿ ಜಂಬೂರಾಯ. ಪಿಂಗಾರ ಮೊಲ ಸಿಲುಕಿಕೊಂಡಿದ್ದ ಕುಣಿಕೆಯನ್ನು ಜಂಬೂರಾಯ ಬಿಡಿಸಿದ. “ಇವತ್ತು ನನ್ನನ್ನು ನೀನು ಬದುಕಿಸಿದೆ. ನೀನೊಬ್ಬನೇ ನನ್ನ ಸಹಾಯಕ್ಕೆ ಬಂದವನು. ನಿನ್ನ ಉಪಕಾರ ನಾನು ಮರೆಯೋದಿಲ್ಲ" ಎಂದಿತು ಪಿಂಗಾರ ಮೊಲ. “ನೀನು ಬೇರೆಯವರ ಜೊತೆ ಚೆನ್ನಾಗಿ ಇದ್ದಿದ್ದರೆ ಅವರೂ ನಿನಗೆ ಸಹಾಯ ಮಾಡುತ್ತಿದ್ದರು. ಇನ್ನಾದರೂ ಬೇರೆಯವರಿಗೆ ತೊಂದರೆ ಮಾಡದೆ ಬದುಕಲು ಕಲಿತುಕೋ" ಎನ್ನುತ್ತಾ ಜಂಬೂರಾಯ ಅಲ್ಲಿಂದ ಹೊರಟು ಹೋಯಿತು.

ಮೋನಿಕಾ ಕಿರಿಕಿರಿ ಬಾಲಕಿ. ಎಲ್ಲರ ಬಗ್ಗೆ ಮತ್ತು ಎಲ್ಲದರ ಬಗ್ಗೆ ಅವಳ ತಕರಾರು. “ಅಮ್ಮ, ಸರಿತಾ ನನ್ನ ಮಾತು ಕೇಳೋದೇ ಇಲ್ಲ”, “ರಮೇಶ ಮಾಮ ನಾನು ಹೇಳಿದ್ದನ್ನು ಯಾವತ್ತೂ ಮಾಡೋದಿಲ್ಲ" - ಹೀಗೆ ಅವಳ ದೂರುಗಳ ಸರಮಾಲೆ ಮುಗಿಯುತ್ತಲೇ ಇರಲಿಲ್ಲ. ಉಳಿದವರೆಲ್ಲ ಅವಳ ಜೊತೆ ಚೆನ್ನಾಗಿಯೇ ಇರಲು ಪ್ರಯತ್ನಿಸುತ್ತಿದ್ದರು. ಆದರೆ ಅವಳ ದೂರುಗಳನ್ನು ಕೇಳುವಾಗ ಅವರೆಲ್ಲರಿಗೂ ಬೇಸರವಾಗುತ್ತಿತ್ತು.

ಕೊನೆಗೆ ಇತರ ಮಕ್ಕಳು ಮೋನಿಕಾಳಿಂದ ದೂರ ಇರತೊಡಗಿದರು. ಅವಳೊಂದಿಗೆ ಆಟವಾಡಲು ಯಾರೂ ಬರಲಿಲ್ಲ. ಅವಳ ಮಾತನಾಡಲಿಕ್ಕೂ ಯಾರೂ ಬರಲಿಲ್ಲ. ಮೋನಿಕಾಳ ಅಮ್ಮ ಇದನ್ನೆಲ್ಲ ಗಮನಿಸುತ್ತಲೇ ಇದ್ದಳು. ಒಂದು ದಿನ ಮೋನಿಕಾಳನ್ನು ಹತ್ತಿರ ಕರೆದು ಅಮ್ಮ ತಿಳಿಯ ಹೇಳಿದಳು: "ಮೋನಿಕಾ, ಈಗ ನಿನ್ನ ಜೊತೆ ಆಟವಾಡಲಿಕ್ಕೆ ಅಥವಾ ಮಾತನಾಡಲಿಕ್ಕೆ ಯಾರೂ ಬರುತ್ತಿಲ್ಲ. ಯಾಕೆಂದು ನೀನು ಯೋಚನೆ ಮಾಡಿದ್ದೀಯಾ? ನಿನಗೆ ಗೆಳತಿಯರು ಬೇಕೆಂದಾದರೆ ನೀನು ಬೇರೆಯವರ ಮೇಲೆ ದೂರು ಹೇಳೋದನ್ನು ನಿಲ್ಲಿಸಬೇಕು. ಬೇರೆಯವರು ಒಳ್ಳೆಯ ಗುಣಗಳನ್ನು ನೋಡಲು ಕಲಿತರೆ, ಅವರು ನಿನ್ನ ಗೆಳತಿಯರು ಆಗಿಯೇ ಆಗ್ತಾರೆ. ಅಷ್ಟೇ ಅಲ್ಲ, ಅವರು ನಿನ್ನ ಜೀವದ ಗೆಳತಿಯರಾಗ್ತಾರೆ.”

ಮೋನಿಕಾ ಅಮ್ಮನ ಮಾತುಗಳನ್ನು ಗಮನವಿಟ್ಟು ಕೇಳಿದಳು. ಅಮ್ಮ ಹೇಳುತ್ತಿರುವುದು ಸರಿಯೆಂದು ಅವಳಿಗೆ ಅನಿಸಿತು. ಕ್ರಮೇಣ ಅವಳು ಇತರರ ತಪ್ಪುಗಳನ್ನು ಗಮನಿಸುವ ಬದಲಾಗಿ ಇತರರ ಒಳ್ಳೆಯ ಗುಣಗಳನ್ನು ಗಮನಿಸತೊಡಗಿದಳು. ದಿನಗಳೆದಂತೆ ಹಲವರು ಅವಳ ಗೆಳತಿಯರಾದರು. ಯಾಕೆಂದರೆ ಅವರೆಲ್ಲರೂ ಮೋನಿಕಾಳಿಗೆ ಇಷ್ಟವಾದರು!

ರಾಜಕುಮಾರ ಚಂದ್ರಸೇನ ಅಪ್ರಾಮಾಣಿಕ ಮತ್ತು ಕೆಟ್ಟ ಬುದ್ಧಿಯ ಹುಡುಗ ಎಂಬುದು ಮಹಾರಾಜನಿಗೆ ಗೊತ್ತಿರಲಿಲ್ಲ. ಅದೊಂದು ದಿನ ಅವರಿಬ್ಬರೂ ಬೇಟೆಯಾಡಲು ಹೋದರು. ಅನಂತರ ಹತ್ತಿರದ ಒಂದು ಹಳ್ಳಿಗೆ ಹೋಗಿ ತಲಪಿ, ಅಲ್ಲೇ ರಾತ್ರಿ ಕಳೆಯಲು ನಿರ್ಧರಿಸಿದರು.

ರಾತ್ರಿಯೂಟದ ನಂತರ ಮಹಾರಾಜ ನಿದ್ದೆ ಮಾಡಿದ. ಆಗ ರಾಜಕುಮಾರ ಹಳ್ಳಿಯಲ್ಲಿ ಸುತ್ತಾಡುತ್ತಾ ಹಳ್ಳಿಗರಿಗೆ ಬಹಳ ತೊಂದರೆ ನೀಡತೊಡಗಿದ. ಆಗ ರಾಜನಿಗೆ ಎಚ್ಚರವಾಯಿತು. ಅವನು ನಡೆದು ಬಂದು, ಯುವರಾಜನ ಕಿತಾಪತಿಗಳನ್ನು ಕಣ್ಣಾರೆ ಕಂಡ. ಆಗ ತನ್ನನ್ನೇ ಹೋಲುತ್ತಿದ್ದ ಹುಡುಗನೊಬ್ಬ ಪಕ್ಕದಲ್ಲಿ ನಿಂತದ್ದನ್ನು ರಾಜಕುಮಾರ ಗಮನಿಸಿದ. ತಕ್ಷಣವೇ ಆ ಹುಡುಗನನ್ನು ಮಹಾರಾಜನಿಗೆ ತೋರಿಸುತ್ತಾ ರಾಜಕುಮಾರ ಹೇಳಿದ, “ತಂದೆಯವರೇ, ಈ ಎಲ್ಲ ಕಿತಾಪತಿಗಳನ್ನು ಮಾಡಿದವನು ಇವನೇ."

ರಾಜಕುಮಾರನ ಮಾತನ್ನು ಮಹಾರಾಜ ನಂಬಲಿಲ್ಲ. ರಾಜಕುಮಾರ ಸುಳ್ಳು ಹೇಳುತ್ತಿರುವುದು ಖಚಿತವಾದಾಗ ಅವನಿಗೊಂದು ಪಾಠ ಕಲಿಸಬೇಕೆಂದು ಮಹಾರಾಜ ನಿರ್ಧರಿಸಿದ. ಹಾಗಾಗಿ ಹಳ್ಳಿಯ ಹುಡುಗನೇ ತನ್ನ ನಿಜವಾದ ಮಗನೆಂದು ಮಹಾರಾಜ ಘೋಷಿಸಿದ. ಅನಂತರ ಹಳ್ಳಿಯ ಹುಡುಗನನ್ನು ಅರಮನೆಗೆ ಕರೆದೊಯ್ದ ಮತ್ತು ನಿಜವಾದ ರಾಜಕುಮಾರನನ್ನು ಆ ಹಳ್ಳಿಯಲ್ಲೇ ಬಿಟ್ಟು ಬಂದ. ಬೇರೆ ದಾರಿ ಕಾಣದೆ ರಾಜಕುಮಾರ ಆ ಹಳ್ಳಿಯಲ್ಲಿ ದಿನಗಳೆಯ ತೊಡಗಿದ. ಕ್ರಮೇಣ ತಾನು ಸುಳ್ಳು ಹೇಳಿದ್ದಕ್ಕಾಗಿ ಮತ್ತು ತನ್ನ ಅಪ್ರಾಮಾಣಿಕತೆಗೆ ಪಶ್ಚಾತ್ತಾಪ ಪಟ್ಟ. ಅತ್ತ ಅರಮನೆಯಲ್ಲಿ ಹಳ್ಳಿಯ ಹುಡುಗ ತನ್ನ ಹಳ್ಳಿಗೆ ಹಿಂತಿರುಗಿ ತಂದೆತಾಯಿಯ ಜೊತೆಗಿರುತ್ತೇನೆಂದು ಒತ್ತಾಯಿಸತೊಡಗಿದ. ಆದ್ದರಿಂದ ಮಹಾರಾಜ ಅವನನ್ನು ಅವನ ಹಳ್ಳಿಗೆ ಕರೆದೊಯ್ದ. ಆಲ್ಲಿದ್ದ ನಿಜವಾದ ರಾಜಕುಮಾರನ ಜೊತೆ ಮಾತನಾಡಿದಾಗ ಅವನು ಪಾಠ ಕಲಿತಿದ್ದಾನೆಂದು ಮಹಾರಾಜ ತಿಳಿದುಕೊಂಡ. ಹಾಗಾಗಿ ಅವನನ್ನು ಕ್ಷಮಿಸಿ, ಅರಮನೆಗೆ ವಾಪಾಸು ಕರೆತಂದ. ಅನಂತರ, ರಾಜಕುಮಾರ ಮತ್ತು ಹಳ್ಳಿಯ ಹುಡುಗ ಜೀವಮಾನದ ಗೆಳೆಯರಾಗಿ ಬಾಳಿದರು.

ಅದೊಂದು ದಿನ ರಾಜು ತನ್ನ ಗೆಳೆಯರೊಂದಿಗೆ ಮನೆಯ ಹತ್ತಿರದ ಉದ್ಯಾನಕ್ಕೆ ಹೋದ. ಅಲ್ಲಿನ ಕೆಲಸಗಾರ ಹಾಡು ಹಾಡುತ್ತಾ ಉದ್ಯಾನವನ್ನು ಶುಚಿ ಮಾಡುತ್ತಿದ್ದ. ಇವರಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದ ಅವನನ್ನು ಕಂಡು ಅದೇನು ಅನಿಸಿತೋ? ಅವರು ತಮ್ಮ ಜೇಬಿನಲ್ಲಿದ್ದ ಕಾಗದದ ಹಾಳೆಯನ್ನು ಚೂರುಚೂರು ಮಾಡಿ ಸಿಕ್ಕಸಿಕ್ಕಲ್ಲಿ ಎಸೆಯತೊಡಗಿದರು.

ಇದನ್ನು ನೋಡಿದ ಕೆಲಸಗಾರ ಸಿಟ್ಟು ಮಾಡಿಕೊಳ್ಳಲಿಲ್ಲ. ಬದಲಾಗಿ ಅವನು ಹಾಡು ಹಾಡುತ್ತಲೇ ಶುಚಿ ಮಾಡುವ ಕೆಲಸ ಮುಂದುವರಿಸಿದ. ಆಗ ಕೆಲವು ಹಿರಿಯರೂ ಉದ್ಯಾನಕ್ಕೆ ಬಂದರು. ಹಾಡು ಹಾಡುತ್ತಾ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ ಕೆಲಸಗಾರನನ್ನು ಕಂಡು ಅವರಿಗೆ ಸೋಜಿಗವೆನಿಸಿತು. ಆದರೆ ತನ್ನ ಕೆಲಸದಲ್ಲಿ ಅವನ ಸಂತೋಷ ಪಡುವುದನ್ನು ಕಂಡು, ಅವರೂ ಅವನ ಕೆಲಸದಲ್ಲಿ ಕೈಜೋಡಿಸಿದರು. ರಾಜು ಮತ್ತು ಅವನ ಗೆಳೆಯರು ಎಸೆದಿದ್ದ ಕಾಗದದ ಚೂರುಗಳನ್ನು ಹಿರಿಯರೂ ಹೆಕ್ಕಿಹೆಕ್ಕಿ ಕಸದಬುಟ್ಟಿಗೆ ಹಾಕಿದರು.

ಇದನ್ನೆಲ್ಲ ಕಂಡು ರಾಜು ಮತ್ತು ಅವನ ಗೆಳೆಯರಿಗೆ ನಾಚಿಕೆಯಾಯಿತು. ತಾವು ಎಸೆದಿದ್ದ ಕಾಗದದ ಚೂರುಗಳನ್ನು ಈಗ ಅವರೂ ಹೆಕ್ಕಿ ಕಸದ ಬುಟ್ಟಿಗೆ ಹಾಕತೊಡಗಿದರು. ಮಾಡುವ ಕೆಲಸ ಯಾವುದೇ ಆಗಿದ್ದರೂ ಅದರಲ್ಲಿ ಸಂತೋಷ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಅವರು ಅರ್ಥ ಮಾಡಿಕೊಂಡರು. ಮುಂದೆಂದೂ ಅವರು ಕೆಲಸಗಾರರಿಗೆ ತೊಂದರೆ ಮಾಡಲಿಲ್ಲ.

ಶ್ರೀಮಂತನೊಬ್ಬನ ಮಗ ಹಲವು ಕೆಟ್ಟ ಹವ್ಯಾಸಗಳನ್ನು ಕಲಿತಿದ್ದ. ಇತರರಿಗೆ ಗೇಲಿ ಮಾಡುವುದು, ತೊಂದರೆ ಮಾಡುವುದು, ಇತರರ ವಸ್ತುಗಳನ್ನು ಅಡಗಿಸಿ ಇಡುವುದು ಇತ್ಯಾದಿ. ಹಾಗಾಗಿ, ವೃದ್ಧ ಉಪಾಧ್ಯಾಯರೊಬ್ಬರ ಬಳಿ ಹೋಗಿ, ತನ್ನ ಮಗನು ಕೆಟ್ಟ ಹವ್ಯಾಸಗಳನ್ನು ತೊರೆಯುವಂತೆ ಮಾಡಬೇಕೆಂದು ವಿನಂತಿಸಿದರು.

ಮರುದಿನ ಆ ಉಪಾಧ್ಯಾಯರು ಶ್ರೀಮಂತನ ಮಗನನ್ನು ಹತ್ತಿರದ ಉದ್ಯಾನಕ್ಕೆ ಕರೆದೊಯ್ದರು. ಅಲ್ಲೊಂದು ಪುಟ್ಟ ಸಸಿಯನ್ನು ತೋರಿಸಿ, ಅದನ್ನು ಮಣ್ಣಿನಿಂದ ಕೀಳಬೇಕೆಂದು ಅವನಿಗೆ ಹೇಳಿದರು. ಆ ಬಾಲಕ ಅದನ್ನು ಕೈಯಿಂದ ಹಿಡಿದು ಬಲವಾಗಿ ಎಳೆದಾಗ ಆ ಸಸಿ ಕಿತ್ತು ಬಂತು. ಆಗ, ಪಕ್ಕದಲ್ಲಿದ್ದ ಗಿಡವೊಂದನ್ನು ತೋರಿಸಿ, “ಇದನ್ನೂ ಕೀಳು ನೋಡೋಣ" ಎಂದರು. ಅವನು ಒಂದು ಕೈಯಿಂದ ಎಳೆದಾಗ ಅದು ಕಿತ್ತು ಬರಲಿಲ್ಲ. ಎರಡು ಕೈಗಳಿಂದ ಅದನ್ನು ಎಳೆದಾಗಲೂ ಅದು ಕಿತ್ತು ಬರಲಿಲ್ಲ. ಕೊನೆಗೆ, ತನ್ನ ಬಲವನ್ನೆಲ್ಲಾ ಹಾಕಿ ಎಳೆದಾಗ ಆ ಗಿಡ ಕಿತ್ತು ಬಂತು.

ಅಲ್ಲಿಂದ ಕೆಲವು ಹೆಜ್ಜೆ ಮುಂದಕ್ಕೆ ನಡೆದು, ಉಪಾಧ್ಯಾಯರು ಬಾಲಕನಿಗೆ ಒಂದು ಮಾವಿನ ಮರವನ್ನು ತೋರಿಸಿ, ಅದನ್ನೂ ಕೀಳಬೇಕೆಂದರು. ಆ ಬಾಲಕ ಅದರ ಕಾಂಡವನ್ನು ಎರಡೂ ಕೈಗಳಿಂದ ತಬ್ಬಿಕೊಂಡು, ಅದನ್ನು ಮಣ್ಣಿನಿಂದ ಕೀಳಲು ಪ್ರಯತ್ನಿಸಿದ. ಕೆಲವು ನಿಮಿಷ ಹೆಣಗಾಡಿದ ಶ್ರೀಮಂತನ ಮಗ ಹೇಳಿದ, “ಇದನ್ನು ಮಣ್ಣಿನಿಂದ ಕೀಳಲು ಸಾಧ್ಯವೇ ಇಲ್ಲ.”

ಆಗ ವೃದ್ಧ ಉಪಾಧ್ಯಾಯರು ಬಾಲಕನಿಗೆ ವಿವರಿಸಿದರು: "ನೋಡಿದಿಯಾ? ನಿನ್ನ ಕೆಟ್ಟ ಹವ್ಯಾಸಗಳೂ ಹೀಗೇಯೇ. ಸಸಿಗಳು ಸಣ್ಣದಾಗಿದ್ದಾಗ ಅವನ್ನು ಸುಲಭವಾಗಿ ಮಣ್ಣಿನಿಂದ ಕೀಳಬಹುದು. ಆದರೆ, ಸಸಿಗಳು ದೊಡ್ಡ ಮರವಾಗಿ ಬೆಳೆದ ನಂತರ ಅವನ್ನು ಮಣ್ಣಿನಿಂದ ಕೀಳಲು ಸಾಧ್ಯವೇ ಇಲ್ಲ.” ಆ ಬಾಲಕನಿಗೆ ಉಪಾಧ್ಯಾಯರು ಕಲಿಸಿದ ಪಾಠ ಅರ್ಥವಾಯಿತು. ಅವನು ತನ್ನ ಕೆಟ್ಟ ಹವ್ಯಾಸಗಳನ್ನು ತೊರೆದ.

ಬಾಲಕಿ ಸುಮತಿ ಶಾಲೆಗೆ ಬರುತ್ತಿದ್ದಾಗ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಳು. ಅವಳ ಶಾಲಾ ಸಮವಸ್ತ್ರ ಒದ್ದೆಯಾಯಿತು. ಅವಳು ಓಡೋಡಿ ಶಾಲೆ ತಲಪಿದಳು. "ದೇವರೇ, ನನಗೆ ಸಹಾಯ ಮಾಡು" ಎಂದು ಪ್ರಾರ್ಥಿಸಿದಳು. ಶಾಲಾ ಟೀಚರ್ ತನ್ನತ್ತ ಬರೋದನ್ನು ನೋಡಿ ಅವಳಿಗೆ ಆತಂಕವಾಯಿತು.

ಆಗ ಅವಳ ಗೆಳತಿ ಸೌಗಂಧಿಕಾ ಅಲ್ಲಿಗೆ ಬಂದಳು. ಅವಳ ಕೈಯಲ್ಲಿದ್ದ ಗಾಜಿನ ಪಾತ್ರೆಯಲ್ಲಿ ಬಣ್ಣದ ಮೀನಿತ್ತು. ಸುಮತಿಯ ಪರಿಸ್ಥಿತಿ ನೋಡಿದ ಸೌಗಂಧಿಕಾ ಎಡವಿದಳು; ಆ ಗಾಜಿನ ಪಾತ್ರೆಯ ನೀರೆಲ್ಲ ಸುಮತಿಯ ಉಡುಪಿನ ಮೇಲೆ ಬಿತ್ತು. ಆಗ ಇವರ ಹತ್ತಿರ ಬಂದ ಶಾಲಾ ಟೀಚರ್ ಏನಾಯಿತೆಂದು ಕೇಳಿದರು. ಅನಂತರ, ಸುಮತಿಯನ್ನು ಕರೆದೊಯ್ದು ಅವಳಿಗೆ ಕವಾಯತಿನ ಸಮವಸ್ತ್ರ ಕೊಟ್ಟರು. ಅದನ್ನು ತೊಟ್ಟು, ಒದ್ದೆಯಾದ ಅವಳ ಶಾಲಾ ಸಮವಸ್ತ್ರವನ್ನು ಒಣಗಿಸಲು ಹೇಳಿದರು.

ಅವತ್ತು ಸಂಜೆ, ಮನೆಗೆ ಹಿಂತಿರುಗಲಿಕ್ಕಾಗಿ ಶಾಲಾ ಬಸ್ಸಿಗೆ ಕಾಯುತ್ತಿದ್ದಾಗ, ಸೌಗಂಧಿಕಾಳ ಬಳಿಗೆ ಸುಮತಿ ಬಂದಳು. “ನೀನು ನನ್ನ ಮೇಲೆ ಗಾಜಿನ ಪಾತ್ರೆಯ ನೀರನ್ನು ಬೇಕೆಂದೇ ಚೆಲ್ಲಿದೆ, ಅಲ್ಲವೇ?” ಎಂದು ಕೇಳಿದಳು. ಸೌಗಂಧಿಕಾ ಹೌದೆಂದಳು. ನಂತರ ಅವಳು ತನ್ನ ವರ್ತನೆಗೆ ಕಾರಣವೇನೆಂದು ವಿವರಿಸಿದಳು: "ನಾನು ನಿನ್ನ ಹಾಗೆ ಒಮ್ಮೆ ಶಾಲಾ ಸಮವಸ್ತ್ರ ಒದ್ದೆ ಮಾಡಿಕೊಂಡಿದ್ದೆ. ಆ ದಿನ ನನ್ನ ಅಮ್ಮ ನನಗೊಂದು ನೀತಿ ಹೇಳಿದರು. ನಮಗಾದ ತೊಂದರೆಯನ್ನು ನಾವು ನೆನಪಿಟ್ಟುಕೊಳ್ಳಬೇಕು. ಬೇರೆ ಯಾರಿಗಾದರೂ ಅಂತಹ ತೊಂದರೆ ಆದಾಗ ಅವರಿಗೆ ಗೇಲಿ ಮಾಡಬಾರದು. ಬದಲಾಗಿ ಅವರಿಗೆ ಸಹಾಯ ಮಾಡಬೇಕು.”

ಮಕ್ಕಳ ಆಟದ ಮೈದಾನಕ್ಕೆ ಮಗನೊಂದಿಗೆ ಬಂದ ಪೂರ್ಣಿಮಾ ಅಲ್ಲಿದ್ದ ಸಿಮೆಂಟಿನ ಬೆಂಚಿನಲ್ಲಿ ಕುಳಿತಳು. ಪಕ್ಕದಲ್ಲಿ ಆಟವಾಡುತ್ತಿದ್ದ ಹುಡುಗನನ್ನು ತೋರಿಸುತ್ತಾ, ತನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಗಂಡಸಿಗೆ ಅವಳು ಹೇಳಿದಳು, "ಅವನು ನನ್ನ ಮಗ.” ಆ ಗಂಡಸು ತಲೆಯಾಡಿಸುತ್ತಾ, ನಿಮ್ಮ ಮಗ ಚುರುಕಾಗಿದ್ದಾನೆ ಎಂದರು.

ಅನಂತರ ಅಲ್ಲೇ ಪುಟ್ಟ ಸೈಕಲನ್ನು ಓಡಿಸುತ್ತಿದ್ದ ಬಾಲಕಿಯನ್ನು ತೋರಿಸುತ್ತಾ, "ಅವಳು ನನ್ನ ಮಗಳು” ಎಂದರು. ಬಳಿಕ ತನ್ನ ವಾಚನ್ನು ನೋಡಿ, ಮಗಳನ್ನು ಕರೆದರು. “ಅಪ್ಪಾ, ಇನ್ನು ಐದು ನಿಮಿಷ ಆಟವಾಡುತ್ತೇನೆ” ಎಂದು ಮಗಳು ಹೇಳಿದಾಗ ತಲೆಯಾಡಿಸುತ್ತಾ ಒಪ್ಪಿಗೆ ಸೂಚಿಸಿದರು.  ಐದು ನಿಮಿಷಗಳ ನಂತರ ಅವರು ಮಗಳನ್ನು ಪುನಃ ಕರೆದರು. ಅವಳು ಪುನಃ “ಅಪ್ಪಾ, ಇನ್ನೂ ಐದು ನಿಮಿಷ ಆಟವಾಡುತ್ತೇನೆ” ಎಂದಳು. ಇವರು ಮುಗುಳ್ನಕ್ಕು ಪುನಃ ಒಪ್ಪಿಗೆ ಸೂಚಿಸಿದರು.

ಇದನ್ನೆಲ್ಲ ನೋಡುತ್ತಿದ್ದ ಪೂರ್ಣಿಮಾ ಹೇಳಿದಳು, "ನಿಮಗೆ ಬಹಳ ತಾಳ್ಮೆ ಇದೆ.” ಆಗ ಆ ತಂದೆ ಹೀಗೆಂದರು, “ಈ ಹುಡುಗಿಯ ಅಣ್ಣ ಕಳೆದ ವರುಷ ಇಲ್ಲೇ ಸೈಕಲಿನಲ್ಲಿ ಆಟವಾಡುತ್ತಿದ್ದಾಗ ಅಪಘಾತವಾಗಿ ತೀರಿಕೊಂಡ. ನಾನು ಅವನೊಂದಿಗೆ ಸಮಯ ಕಳೆಯಲೇ ಇಲ್ಲ. ಈಗ ಅವನೊಂದಿಗೆ ಒಂದೈದು ನಿಮಿಷ ಇರಲಿಕ್ಕಾಗಿ ನಾನು ಏನನ್ನು ಬೇಕಾದರೂ ಕೊಡಬಲ್ಲೆ. ಆದರೆ ಅವನೇ ಈಗಿಲ್ಲ. ನನ್ನ ಮಗಳ ವಿಷಯದಲ್ಲಿ ಅಂತಹ ತಪ್ಪು ಮಾಡಬಾರದೆಂದು ನಾನು ಸಂಕಲ್ಪ ಮಾಡಿದ್ದೇನೆ. ಪ್ರತೀ ಸಲ ನನ್ನನ್ನು ಕೇಳಿದಾಗಲೂ ತನಗೆ ಆಟವಾಡಲು ಇನ್ನೂ ಐದು ನಿಮಿಷ ಸಿಕ್ಕಿತೆಂದು ಅವಳು ಸಂತೋಷ ಪಡುತ್ತಾಳೆ. ನಿಜ ಹೇಳಬೇಕೆಂದರೆ, ಪ್ರತೀ ಸಲ ಅವಳ ಆಟ ನೋಡಲು ನನಗೆ ಇನ್ನೂ ಐದು ನಿಮಿಷ ಸಿಗುತ್ತದೆ.”

ಶೀಲವಂತ ಒಬ್ಬ ಬಡ ರೈತ. ಅವನು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ. ರಾತ್ರಿ ಮಲಗುವಾಗ ಅವನು ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚುತ್ತಿರಲಿಲ್ಲ. ಯಾಕೆಂದರೆ ಅವನ ಮನೆಯಲ್ಲಿ ಬೆಲೆ ಬಾಳುವ ಯಾವುದೇ ವಸ್ತು ಇರಲಿಲ್ಲ. ಪ್ರತಿ ದಿನವೂ ಗಾಢ ನಿದ್ದೆ ಮಾಡುತ್ತಿದ್ದ.

ಶೀಲವಂತನ ನೆರೆಮನೆಯವನು ಲಕ್ಷ್ಮೀಪತಿ. ಇವನು ಶ್ರೀಮಂತ ಜಮೀನುದಾರ. ಯಾವಾಗಲೂ ಚಿಂತೆಯಲ್ಲಿ ಮುಳುಗಿರುತ್ತಿದ್ದ. ರಾತ್ರಿ ಮಲಗುವಾಗ ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚುತ್ತಿದ್ದ. ಮಲಗುವ ಮುನ್ನ ಎಲ್ಲ ಬಾಗಿಲು ಕಿಟಕಿಗಳನ್ನು ಸರಿಯಾಗಿ ಮುಚ್ಚಲಾಗಿದೆಯೋ ಎಂದು ಎರಡೆರಡು ಬಾರಿ ಪರೀಕ್ಷಿಸುತ್ತಿದ್ದ. ಆದರೂ ಅವನಿಗೆ ಚೆನ್ನಾಗಿ ನಿದ್ದೆ ಬರುತ್ತಿರಲಿಲ್ಲ. ಅವನು ಪಕ್ಕದ ಮನೆಯ ಶೀಲವಂತನನ್ನು ಕಂಡು ಅಸೂಯೆ ಪಡುತ್ತಿದ್ದ.

ಅದೊಂದು ದಿನ ಶೀಲವಂತನಿಗೆ ಲಕ್ಷ್ಮೀಪತಿ ಒಂದು ಪೆಟ್ಟಿಗೆಯನ್ನು ಕೊಡುತ್ತಾ ಹೇಳಿದ, "ನನ್ನ ಬಳಿ ಸಾಕಷ್ಟು ಸಂಪತ್ತಿದೆ. ನೀನು ಬಡತನದಲ್ಲಿ ಜೀವಿಸುತ್ತಿದ್ದಿ. ಹಾಗಾಗಿ ಇದರಲ್ಲಿರುವ ಹಣ ಇಟ್ಟುಕೋ. ಚೆನ್ನಾಗಿ ಜೀವನ ಮಾಡು."

ಶೀಲವಂತನಿಗೆ ಬಹಳ ಸಂತೋಷವಾಯಿತು. ಅವನು ಆ ಪೆಟ್ಟಿಗೆಯ ಮುಚ್ಚಳ ತೆಗೆದು ನೋಡಿದಾಗ ಅದರೊಳಗೆ ಗರಿಗರಿ ನೋಟುಗಳಿದ್ದವು. ಅದನ್ನು ಮನೆಯಲ್ಲಿ ಜೋಪಾನವಾಗಿ ತೆಗೆದಿಟ್ಟ. ಆ ದಿನ ರಾತ್ರಿ ಅವನಿಗೆ ನಿದ್ದೆಯೇ ಬರಲಿಲ್ಲ. ಅವನು ಮೊಟ್ಟ ಮೊದಲ ಬಾರಿ ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚಿದ. ರಾತ್ರಿಯಿಡೀ ಆಗಾಗ ಆ ಹಣದ ಪೆಟ್ಟಿಗೆಯನ್ನು ನೋಡುತ್ತಿದ್ದ. ಮರುದಿನ ಬೆಳಗ್ಗೆ ಶೀಲವಂತ ಆ ಪೆಟ್ಟಿಗೆಯನ್ನು ತಗೊಂಡು ಲಕ್ಷ್ಮೀಪತಿಯ ಮನೆಗೆ ಹೋದ. ಅದನ್ನು ಲಕ್ಶ್ಮೀಪತಿಗೆ ಹಿಂತಿರುಗಿಸುತ್ತಾ ಅವನು ಹೇಳಿದ, "ನಾನು ಬಡವ. ಆದರೆ ನನಗೆ ನೆಮ್ಮದಿಯಿತ್ತು. ನಿನ್ನೆ ನೀವು ಈ ಹಣದ ಪೆಟ್ಟಿಗೆ ಕೊಟ್ಟಾಗಿನಿಂದ ನನಗೆ ನೆಮ್ಮದಿಯೇ ಇಲ್ಲ. ಆದ್ದರಿಂದ ನಿಮ್ಮ ಹಣ ವಾಪಾಸು ತೆಗೆದುಕೊಳ್ಳಿ.”

ವಯಸ್ಸಾದ ಗೋದಾವರಿ ಮತ್ತು ನರ್ಮದಾ ಉದ್ಯಾನದಲ್ಲಿ ವಾಕಿಂಗ್ ಮಾಡುತ್ತಿದ್ದರು. ಆಗ ಅವರೊಂದು ಬೆಕ್ಕನ್ನು ಕಂಡರು. ಅದು ಒಂದು ಮರದ ಬೊಡ್ದೆಯ ಸೀಳಿನಲ್ಲಿ ಸಿಲುಕಿಕೊಂಡಿತ್ತು. ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿತ್ತು. ಗೋದಾವರಿ ಅದಕ್ಕೆ ಸಹಾಯ ಮಾಡಲಿಕ್ಕಾಗಿ ಅದರ ಮುಂಗಾಲನ್ನು ಹಿಡಿದು ಎಳೆದಳು.

ಆಗ ಬೆಕ್ಕು ಹೆದರಿಕೊಂಡು ಗೋದಾವರಿಗೆ ಪರಚಿತು. ಗೋದಾವರಿಯ ಬಲಗೈಗೆ ಗಾಯವಾಗಿ ರಕ್ತ ಬಂತು. ಇದನ್ನು ಕಂಡು ನರ್ಮದಾ ಹೇಳಿದಳು, "ಆ ಬೆಕ್ಕಿಗೆ ಸಹಾಯ ಮಾಡಬೇಡ. ಅದು ಅಲ್ಲಿಂದ ಹೇಗಾದರೂ ತಪ್ಪಿಸಿಕೊಳ್ಳುತ್ತದೆ.” ಆದರೆ ಗೋದಾವರಿ ಹಿಂದೆ ಸರಿಯಲಿಲ್ಲ. ನಿಧಾನವಾಗಿ ಬೆಕ್ಕಿನ ಎರಡೂ ಮುಂಗಾಲುಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಅದನ್ನು ಮರದ ಬೊಡ್ದೆಯ ಸೀಳಿನಿಂದ ಹೊರಕ್ಕೆ ಎಳೆದಳು. ತಕ್ಷಣವೇ ಆ ಬೆಕ್ಕು ಅಲ್ಲಿಂದ ಓಡಿ ಹೋಯಿತು.

ಗೋದಾವರಿ ನರ್ಮದಾಳಿಗೆ ಹೇಳಿದಳು, "ಆ ಬೆಕ್ಕಿಗೆ ಜೀವ ಉಳಿದರೆ ಸಾಕಾಗಿತ್ತು. ಅದು ಹೆದರಿಕೆಯಿಂದ ನನಗೆ ಪರಚಿತು. ಹಾಗಂತ ನಾನು ಅದನ್ನು ಅಲ್ಲೇ ಬಿಟ್ಟು ಹೋಗಿದ್ದರೆ ಅದು ಬದುಕುತ್ತಿತ್ತೋ ಇಲ್ಲವೋ? ನಾವು ಪ್ರಾಣಿಗಳ ಬಗ್ಗೆಯೂ ಕರುಣೆ ತೋರಬೇಕು."

Pages