74. ಹಣವಿದ್ದರೆ ನೆಮ್ಮದಿ ಇರಬೇಕೆಂದಿಲ್ಲ

ಶೀಲವಂತ ಒಬ್ಬ ಬಡ ರೈತ. ಅವನು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ. ರಾತ್ರಿ ಮಲಗುವಾಗ ಅವನು ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚುತ್ತಿರಲಿಲ್ಲ. ಯಾಕೆಂದರೆ ಅವನ ಮನೆಯಲ್ಲಿ ಬೆಲೆ ಬಾಳುವ ಯಾವುದೇ ವಸ್ತು ಇರಲಿಲ್ಲ. ಪ್ರತಿ ದಿನವೂ ಗಾಢ ನಿದ್ದೆ ಮಾಡುತ್ತಿದ್ದ.

ಶೀಲವಂತನ ನೆರೆಮನೆಯವನು ಲಕ್ಷ್ಮೀಪತಿ. ಇವನು ಶ್ರೀಮಂತ ಜಮೀನುದಾರ. ಯಾವಾಗಲೂ ಚಿಂತೆಯಲ್ಲಿ ಮುಳುಗಿರುತ್ತಿದ್ದ. ರಾತ್ರಿ ಮಲಗುವಾಗ ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚುತ್ತಿದ್ದ. ಮಲಗುವ ಮುನ್ನ ಎಲ್ಲ ಬಾಗಿಲು ಕಿಟಕಿಗಳನ್ನು ಸರಿಯಾಗಿ ಮುಚ್ಚಲಾಗಿದೆಯೋ ಎಂದು ಎರಡೆರಡು ಬಾರಿ ಪರೀಕ್ಷಿಸುತ್ತಿದ್ದ. ಆದರೂ ಅವನಿಗೆ ಚೆನ್ನಾಗಿ ನಿದ್ದೆ ಬರುತ್ತಿರಲಿಲ್ಲ. ಅವನು ಪಕ್ಕದ ಮನೆಯ ಶೀಲವಂತನನ್ನು ಕಂಡು ಅಸೂಯೆ ಪಡುತ್ತಿದ್ದ.

ಅದೊಂದು ದಿನ ಶೀಲವಂತನಿಗೆ ಲಕ್ಷ್ಮೀಪತಿ ಒಂದು ಪೆಟ್ಟಿಗೆಯನ್ನು ಕೊಡುತ್ತಾ ಹೇಳಿದ, "ನನ್ನ ಬಳಿ ಸಾಕಷ್ಟು ಸಂಪತ್ತಿದೆ. ನೀನು ಬಡತನದಲ್ಲಿ ಜೀವಿಸುತ್ತಿದ್ದಿ. ಹಾಗಾಗಿ ಇದರಲ್ಲಿರುವ ಹಣ ಇಟ್ಟುಕೋ. ಚೆನ್ನಾಗಿ ಜೀವನ ಮಾಡು."

ಶೀಲವಂತನಿಗೆ ಬಹಳ ಸಂತೋಷವಾಯಿತು. ಅವನು ಆ ಪೆಟ್ಟಿಗೆಯ ಮುಚ್ಚಳ ತೆಗೆದು ನೋಡಿದಾಗ ಅದರೊಳಗೆ ಗರಿಗರಿ ನೋಟುಗಳಿದ್ದವು. ಅದನ್ನು ಮನೆಯಲ್ಲಿ ಜೋಪಾನವಾಗಿ ತೆಗೆದಿಟ್ಟ. ಆ ದಿನ ರಾತ್ರಿ ಅವನಿಗೆ ನಿದ್ದೆಯೇ ಬರಲಿಲ್ಲ. ಅವನು ಮೊಟ್ಟ ಮೊದಲ ಬಾರಿ ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚಿದ. ರಾತ್ರಿಯಿಡೀ ಆಗಾಗ ಆ ಹಣದ ಪೆಟ್ಟಿಗೆಯನ್ನು ನೋಡುತ್ತಿದ್ದ. ಮರುದಿನ ಬೆಳಗ್ಗೆ ಶೀಲವಂತ ಆ ಪೆಟ್ಟಿಗೆಯನ್ನು ತಗೊಂಡು ಲಕ್ಷ್ಮೀಪತಿಯ ಮನೆಗೆ ಹೋದ. ಅದನ್ನು ಲಕ್ಶ್ಮೀಪತಿಗೆ ಹಿಂತಿರುಗಿಸುತ್ತಾ ಅವನು ಹೇಳಿದ, "ನಾನು ಬಡವ. ಆದರೆ ನನಗೆ ನೆಮ್ಮದಿಯಿತ್ತು. ನಿನ್ನೆ ನೀವು ಈ ಹಣದ ಪೆಟ್ಟಿಗೆ ಕೊಟ್ಟಾಗಿನಿಂದ ನನಗೆ ನೆಮ್ಮದಿಯೇ ಇಲ್ಲ. ಆದ್ದರಿಂದ ನಿಮ್ಮ ಹಣ ವಾಪಾಸು ತೆಗೆದುಕೊಳ್ಳಿ.”