HRM
ಪರಿಣೀತಾ ಐದನೆಯ ಕ್ಲಾಸಿನಲ್ಲಿ ಕಲಿಯುತ್ತಿದ್ದಳು. ಅವತ್ತು ಅವಳ ಹುಟ್ಟುಹಬ್ಬ. ಅವಳ ಅಪ್ಪ-ಅಮ್ಮ ಅವಳಿಗೆ ಹೊಸ ಉಡುಪು ಹೊಲಿಸಲು ಕೊಟ್ಟಿದ್ದರು. ಟೈಲರ್ ಯಾವಾಗ ಹೊಸ ಉಡುಪು ತರುತ್ತಾನೆಂದು ಪರಿಣೀತಾ ಕಾಯುತ್ತಿದ್ದಳು. ಅಂತೂ ಟೈಲರ್ ಹೊಸ ಉಡುಪು ತಂದಿತ್ತ.
ಅದನ್ನು ಧರಿಸಿದ ಪರಿಣೀತಾಳಿಗೆ ಆಘಾತ. ಯಾಕೆಂದರೆ ಅದು ಸ್ವಲ್ಪ ಸಣ್ಣದಾಗಿತ್ತು; ಬಿಗಿಯಾಗಿತ್ತು. ಟೈಲರ್ ಮುಖ ಸಣ್ಣದು ಮಾಡಿಕೊಂಡ; ತನ್ನದು ತಪ್ಪಾಯಿತು, ಕ್ಷಮಿಸಬೇಕೆಂದು ಕೇಳಿಕೊಂಡ. ಬೇರೆ ಉಡುಪು ತೊಟ್ಟುಕೊಂಡು ಹುಟ್ಟುಹಬ್ಬ ಆಚರಿಸಬೇಕೆಂದು ಪರಿಣೀತಾಳ ಅಮ್ಮ ಹೇಳಿದರು. ಆದರೆ ಪರಿಣೀತಾ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. “ಬಂದವರನ್ನೆಲ್ಲಾ ವಾಪಾಸು ಕಳಿಸು. ನನಗೆ ಹುಟ್ಟುಹಬ್ಬ ಬೇಡವೇ ಬೇಡ" ಎಂದವಳು ಕಿರುಚಿದಳು.
ಆಗ ಪರಿಣೀತಾಳ ಅಚ್ಚುಮೆಚ್ಚಿನ ಗೆಳತಿ ಮಂದಾಕಿನಿ ಬಂದಳು. ಅವಳ ಧ್ವನಿ ಕೇಳುತ್ತಲೇ ಪರಿಣೀತಾ ಕಣ್ಣೀರನ್ನು ಒರಸಿಕೊಂಡಳು; ಬೇರೆ ಉಡುಪು ಧರಿಸಿದಳು. ಇತರ ಅತಿಥಿಗಳೂ ಒಬ್ಬೊಬ್ಬರಾಗಿ ಬಂದರು. ಎಲ್ಲರೂ ಪರಿಣೀತಾಳಿಗೆ ಹುಟ್ಟುಹಬ್ಬದ ಶುಭಾಶಯ ಹಾರೈಸಿದರು. ಅವಳ ಅಮ್ಮ ಮಾಡಿದ ಸಿಹಿತಿಂಡಿಗಳನ್ನು ಎಲ್ಲರೂ ಸವಿದರು.
ಅವತ್ತು ರಾತ್ರಿ ಮಲಗುವ ಮುನ್ನ ಪರಿಣೀತಾ ಅಮ್ಮನ ಹತ್ತಿರ ಹೀಗೆಂದಳು: “ಅಮ್ಮಾ, ನನ್ನ ಹೊಸ ಡ್ರೆಸ್ ಹಾಳಾಯಿತೆಂದು ನಾನು ಹುಟ್ಟುಹಬ್ಬ ಆಚರಿಸದಿದ್ದರೆ ನಿಮಗೆಲ್ಲ ಬಹಳ ಬೇಸರವಾಗುತ್ತಿತ್ತು. ಆ ಸಣ್ಣ ಸಂಗತಿಯನ್ನು ನಾನು ದೊಡ್ದದು ಮಾಡಿ ನಿಮಗೆಲ್ಲ ತೊಂದರೆ ಮಾಡಿದೆ. ಇನ್ನು ಮುಂದೆ ಹಾಗೆಲ್ಲ ಮಾಡೋದಿಲ್ಲ. ಏನಾದರೂ ಹೆಚ್ಚುಕಡಿಮೆ ಆದರೆ ಸುಧಾರಿಸಿಕೊಳ್ಳುತ್ತೇನೆ.” ಅವಳ ಅಮ್ಮ ಅವಳನ್ನು ತಬ್ಬಿಕೊಂಡು, “ಆದದ್ದಾಯಿತು, ಈಗ ಚೆನ್ನಾಗಿ ನಿದ್ದೆ ಮಾಡು" ಎಂದರು.
ಪುರುಷೋತ್ತಮ ರಾಯರು ಶ್ರೀಮಂತರು. ಅವರಿಗೆ ವಯಸ್ಸಾಗಿದ್ದು ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು. ಅವರ ಪತ್ನಿ ತೀರಿಕೊಂಡಿದ್ದು, ಮಕ್ಕಳೆಲ್ಲರೂ ಸ್ಥಿತಿವಂತರಾಗಿದ್ದರು. ತಮ್ಮ ಸಂಪತ್ತನ್ನೆಲ್ಲ ಪ್ರಾಮಾಣಿಕ ವ್ಯಕ್ತಿಯೊಬ್ಬನಿಗೆ ದಾನ ಮಾಡಬೇಕೆಂದು ಪುರುಷೋತ್ತಮ ರಾಯರು ಯೋಚಿಸುತ್ತಿದ್ದರು. ಈ ಬಗ್ಗೆ ತನ್ನ ಗೆಳೆಯನೊಬ್ಬನೊಂದಿಗೆ ಮಾತನಾಡಿದಾಗ ಆತ ಸಲಹೆಯೊಂದನ್ನಿತ್ತ. “ನೀನು ಯಾರಿಗಾದರೂ ಏನಾದರೂ ಉಪಕಾರ ಮಾಡಿದಾಗ ಆತ ನಿನಗೆ ಪ್ರತ್ಯುಪಕಾರ ಮಾಡಿದರೆ ಅವನನ್ನು ಪ್ರಾಮಾಣಿಕ ವ್ಯಕ್ತಿ ಎಂದು ಪರಿಗಣಿಸಬಹುದು.”
ಅವತ್ತಿನಿಂದ ಪುರುಷೋತ್ತಮ ರಾಯರು ಹಲವರಿಗೆ ಸಣ್ಣಪುಟ್ಟ ಉಪಕಾರ ಮಾಡುತ್ತಲೇ ಇದ್ದರು. ಆದರೆ ಅವರಿಗೆ ಯಾರೂ ಪ್ರತ್ಯುಪಕಾರ ಮಾಡಲಿಲ್ಲ. ಹಾಗಿರುವಾಗ ಅವರ ಆರೋಗ್ಯ ಹದಗೆಟ್ಟಿತು. ಪುರುಷೋತ್ತಮ ರಾಯರು ತಮ್ಮ ನಾಲ್ವರು ಸೇವಕರಿಗೆ ಪ್ರತಿಯೊಬ್ಬರಿಗೂ ದೊಡ್ದ ಮೊತ್ತದ ಹಣ ನೀಡಿದರು. “ಮುಂದೆ ಆದಂತೆ ಆಗಲಿ” ಎಂದು ನಿಟ್ಟುಸಿರು ಬಿಟ್ಟರು.
ಅವರ ಸೇವಕರಲ್ಲೊಬ್ಬ ಗುಣವಂತ. ಹೆಸರಿಗೆ ತಕ್ಕಂತೆ ಅವನು ಗುಣವಂತನೇ ಆಗಿದ್ದ. ಅವನು ರಾಯರನ್ನು ಕಾಳಜಿಯಿಂದ ಆರೈಕೆ ಮಾಡಿದ. ಅವರಿತ್ತ ಹಣದಿಂದಲೇ ಅವರಿಗೆ ಔಷಧಿಗಳನ್ನು ತಂದಿತ್ತ. ಹಗಲೂ ರಾತ್ರಿ ಅವರ ಜೊತೆಗೇ ಇದ್ದು ಅವರ ಶುಶ್ರೂಷೆ ಮಾಡಿದ. ಅವನ ಆರೈಕೆಯಿಂದಾಗಿ ಪುರುಷೋತ್ತಮ ರಾಯರ ಆರೋಗ್ಯ ಸುಧಾರಿಸಿತು. ಅದಲ್ಲದೆ ಗುಣವಂತ ಪ್ರಾಮಾಣಿಕ ವ್ಯಕ್ತಿಯೆಂದು ಅವರಿಗೆ ಮನದಟ್ಟಾಯಿತು. ತನ್ನ ಉಳಿದ ಸಂಪತ್ತನೆಲ್ಲ ಆತನಿಗೇ ದಾನ ಮಾಡಬೇಕೆಂದು ಅವರು ನಿರ್ಧರಿಸಿದರು.
ಸ್ವಾಮಿ ವಿವೇಕಾನಂದ ಕೆಲವೇ ದಿನಗಳಲ್ಲಿ ಹಿಂದು ಧರ್ಮದ ಪ್ರಚಾರಕ್ಕಾಗಿ ಮೊದಲ ಬಾರಿ ವಿದೇಶಕ್ಕೆ ಪ್ರಯಾಣಿಸಲಿದ್ದರು. ಹೊರಡುವ ಮುಂಚಿನ ದಿನ, ಅವರ ತಾಯಿ ಸ್ವಾಮಿ ವಿವೇಕಾನಂದರಿಗೆ ಹಣ್ಣು ಮತ್ತು ಚೂರಿ ಕೊಟ್ಟರು.
ಸ್ವಾಮಿ ವಿವೇಕಾನಂದರು ಹಣ್ಣು ತಿಂದಾದ ನಂತರ ಅವರ ತಾಯಿ, "ಆ ಚೂರಿ ಇತ್ತ ಕೊಡು” ಎಂದು ಕೇಳಿದರು. ಸ್ವಾಮಿ ವಿವೇಕಾನಂದರು ತಾಯಿಗೆ ಚೂರಿ ಕೊಟ್ಟರು. ಆಗ ಅವರ ತಾಯಿ ಶಾಂತ ಭಾವದಲ್ಲಿ ಹೇಳಿದರು, “ನೀನು ನನ್ನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಿ. ನಿನ್ನ ವಿದೇಶ ಪ್ರವಾಸಕ್ಕೆ ಈಗ ನನ್ನ ಆಶೀರ್ವಾದ ಇದೆ.” ಸ್ವಾಮಿ ವಿವೇಕಾನಂದರಿಗೆ ಆಶ್ಚರ್ಯವಾಯಿತು. “ಅಮ್ಮಾ, ನೀವು ನನ್ನನ್ನು ಹೇಗೆ ಪರೀಕ್ಷೆ ಮಾಡಿದಿರಿ?" ಎಂದು ಕೇಳಿದರು.
ಅವರ ಅಮ್ಮ ಹೀಗೆ ಉತ್ತರಿಸಿದರು: "ನಾನು ಚೂರಿಯನ್ನು ವಾಪಾಸು ಕೇಳಿದಾಗ, ನೀನು ಅದರ ಹರಿತವಾದ ಅಲಗನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡು, ಅದರ ಹಿಡಿಕೆಯನ್ನು ನನ್ನ ಕಡೆಗೆ ಚಾಚಿದೆ. ಚೂರಿಯ ಹರಿತವಾದ ಅಲಗು ನನ್ನ ಕೈಗೆ ತಗಲಿ ಗಾಯವಾಗದಂತೆ ನೀನು ಎಚ್ಚರ ವಹಿಸಿದೆ. ಇನ್ನೊಬ್ಬರ ಬಗ್ಗೆ ಕಾಳಜಿ ತೋರುವವನಿಗೆ ಜಗತ್ತಿಗೆ ಉಪದೇಶ ನೀಡುವ ಅಧಿಕಾರವಿರುತ್ತದೆ. ಇದುವೇ ನಿನ್ನ ಪರೀಕ್ಷೆಯಾಗಿತ್ತು." ಅಂತಹ ಸ್ವಾಮಿ ವಿವೇಕಾನಂದರು ಇನ್ನೊಬ್ಬರ ಬಗ್ಗೆ ಕಾಳಜಿ ತೋರಬೇಕೆಂದು ಸಾವಿರಾರು ಜನರಿಗೆ ಪ್ರೇರಣೆ ನೀಡಿದ್ದರಲ್ಲಿ ಅಚ್ಚರಿಯಿಲ್ಲ.
ಒಬ್ಬ ಸನ್ಯಾಸಿ ಇಬ್ಬರು ಶಿಷ್ಯರೊಂದಿಗೆ ಕಾಡಿನಲ್ಲಿ ನಡೆದು ಹೋಗುತ್ತಿದ್ದ. ಅವರೊಂದು ನೇರಳೆ ಮರದ ಬಳಿ ಬಂದರು. ಅದನ್ನು ಶಿಷ್ಯರಿಗೆ ತೋರಿಸುತ್ತಾ ಸನ್ಯಾಸಿ ಕೇಳಿದ, “ಈ ಮರದ ಬಗ್ಗೆ ನಿಮಗೆ ಏನು ಅನಿಸುತ್ತದೆ?”
ಒಬ್ಬ ಶಿಷ್ಯ ಉತ್ತರಿಸಿದ, “ಈ ನೇರಳೆ ಮರ ಯಾರಿಗೂ ಉಪಕಾರ ಮಾಡುವುದಿಲ್ಲ. ಜನರು ಕಲ್ಲು ಎಸೆದರೆ ಅಥವಾ ಉದ್ದದ ಕೋಲುಗಳಿಂದ ಹೊಡೆದರೆ ಮಾತ್ರ ಇದು ಹಣ್ಣುಗಳನ್ನು ಕೊಡುತ್ತದೆ.” ಆಗ ಇನ್ನೊಬ್ಬ ಶಿಷ್ಯ ಉತ್ತರಿಸಿದ, “ಇದು ಬಹಳ ಒಳ್ಳೆಯ ಮರ. ಜನರು ಕಲ್ಲುಗಳನ್ನು ಎಸೆದು, ಕೋಲುಗಳಿಂದ ಹೊಡೆದು ಹಿಂಸೆ ಮಾಡಿದರೂ ಇದು ಸಿಹಿಯಾದ ರಸಭರಿತ ಹಣ್ಣುಗಳನ್ನು ಕೊಡುತ್ತದೆ. ನಾವು ಜೀವನವನ್ನು ಹೇಗೆ ಎದುರಿಸಬೇಕು ಅನ್ನೋದನ್ನು ನಮಗೆ ಈ ಮರ ಕಲಿಸುತ್ತದೆ."
ಸನ್ಯಾಸಿ ಮುಗುಳ್ನಕ್ಕರು. ಮೊದಲನೇ ಶಿಷ್ಯ ಉಪಕಾರಿ ಮರದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರೂ ಎರಡನೇ ಶಿಷ್ಯ ಅದರಿಂದ ಪ್ರಭಾವಿತನಾಗಲಿಲ್ಲ ಎಂಬುದನ್ನು ಅವರು ಗಮನಿಸಿದರು. ಆ ಮರದ ಬಗ್ಗೆ ಎರಡನೇ ಶಿಷ್ಯನ ಸಕಾರಾತ್ಮಕ ಮಾತುಗಳನ್ನು ಅವರು ಮೆಚ್ಚಿಕೊಂಡರು ಎಂಬುದನ್ನು ಅವರ ಮುಗುಳ್ನಗುವೇ ಸೂಚಿಸಿತು. ಎರಡನೇ ಶಿಷ್ಯನ ಬೆನ್ನು ತಟ್ಟುತ್ತಾ, “ಬನ್ನಿ ಹೋಗೋಣ" ಎಂದು ಅವರು ಮುಂದಕ್ಕೆ ನಡೆದರು.
ರಾಜನೊಬ್ಬ ಬೇಟೆಯಾಡಲು ಕಾಡಿಗೆ ಹೋದ. ಕಾಡಿನಲ್ಲಿ ಜಿಂಕೆಯೊಂದನ್ನು ಕಂಡು ಅದನ್ನು ಬೆನ್ನಟ್ಟಿದ. ಜಿಂಕೆ ವೇಗವಾಗಿ ಓಡುತ್ತಿತ್ತು. ಅದರ ಹಿಂದೆಯೇ ಸಾಗಿದ ರಾಜ. ಪ್ರಾಣಿಗಳನ್ನು ಹಿಡಿಯಲಿಕ್ಕಾಗಿ ಬೇಟೆಗಾರರು ಮಾಡಿದ್ದ ಬಲಿಹೊಂಡವನ್ನು ಅವನು ಗಮನಿಸಲೇ ಇಲ್ಲ. ಮರದ ಕೊಂಬೆಗಳು ಮತ್ತು ಹುಲ್ಲಿನಿಂದ ಮುಚ್ಚಿದ್ದ ಆಳವಾದ ಹೊಂಡದೊಳಗೆ ಬಿದ್ದ ರಾಜ.
ಬೆದರಿ ಕಂಗಾಲಾದ ರಾಜ ಬೊಬ್ಬೆ ಹೊಡೆಯತೊಡಗಿದ, “ಸಹಾಯ ಮಾಡಿ, ಯಾರಾದರೂ ಸಹಾಯ ಮಾಡಿ." ರಾಜನ ಬೊಬ್ಬೆ ಕೇಳಿ, ಇಪ್ಪತ್ತು ಅಡಿ ಮುಂದಕ್ಕಿದ್ದ ಜಿಂಕೆ ತನ್ನ ಓಟ ನಿಲ್ಲಿಸಿ, ಹಿಂತಿರುಗಿ ನೋಡಿತು. ಅದು ಆ ಹೊಂಡದ ಹತ್ತಿರ ಬಂದು, ಒಳಕ್ಕೆ ಇಣುಕಿ ನೋಡಿತು. ಅದಕ್ಕೆ ರಾಜನ ಬಗ್ಗೆ ಕರುಣೆ ಮೂಡಿತು. ಅದು ಒಂದು ಬಿರುಸಾದ ಬಳ್ಳಿಯನ್ನು ಕತ್ತರಿಸಿ ತಂದಿತು. ಅದರ ಒಂದು ತುದಿಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದು, ಇನ್ನೊಂದು ತುದಿಯನ್ನು ಹೊಂಡದೊಳಗೆ ತಳ್ಳಿತು. ಅದನ್ನು ಕಂಡ ರಾಜ, ಬಳ್ಳಿಯನ್ನು ಬಲವಾಗಿ ಹಿಡಿದು, ಹೊಂಡದಿಂದ ಮೇಲೇರತೊಡಗಿದ.
ಅಂತೂ ಬಹಳ ಹೆಣಗಾಡಿ ರಾಜ ಹೊಂಡದಿಂದ ಹೊರಕ್ಕೆ ಬಂದ. ತನ್ನ ಪ್ರಾಣ ಉಳಿಸಿದ ಜಿಂಕೆಯನ್ನು ಕಣ್ತುಂಬ ನೋಡಿದ. ತಾನು ಅದನ್ನು ಕೊಲ್ಲಲೇ ಬೇಕೆಂದು ಅದರ ಬೆನ್ನಟ್ಟಿದ್ದು ನೆನಪಾಗಿ ಅವನಿಗೆ ನಾಚಿಕೆಯಾಯಿತು. ಅನಂತರ ಅವನು ಯಾವತ್ತೂ ಬೇಟೆಯಾಡಲಿಲ್ಲ.
ಜೇಮ್ಸನ ತಂದೆಗೆ ನೂರೆಕ್ರೆ ಜಮೀನಿತ್ತು. ಅವರು “ಜೇಮ್ಸ್, ನೀನು ನಮ್ಮ ಜಮೀನಿನಲ್ಲಿ ಕೆಲಸ ಮಾಡಬೇಕು. ಒಂದು ದಿನ ಅದನ್ನೆಲ್ಲ ನೀನೇ ನೋಡಿಕೊಳ್ಳಬೇಕಾಗುತ್ತದೆ" ಎಂದು ಹೇಳುತ್ತಲೇ ಇದ್ದರು.
ಆದರೆ ಜೇಮ್ಸನಿಗೆ ಜಮೀನಿನಲ್ಲಿ ಕೆಲಸ ಮಾಡಲು ಸ್ವಲ್ಪವೂ ಆಸಕ್ತಿ ಇರಲಿಲ್ಲ. ಅವನ ತಂದೆ “ಜೇಮ್ಸ್, ನನ್ನ ಟ್ರಾಕ್ಟರಿನ ಚಕ್ರ ಹಾಳಾಗಿದೆ. ರಿಪೇರಿ ಮಾಡುತ್ತೀಯಾ?” ಎಂದಾಗೆಲ್ಲ ಬಹಳ ಉತ್ಸಾಹದಿಂದ ಅದನ್ನು ರಿಪೇರಿ ಮಾಡುತ್ತಿದ್ದ. ಅದೊಂದು ದಿನ ತಂದೆಯ ಬಳಿ ಜೇಮ್ಸ್ ಹೇಳಿದ, “ಅಪ್ಪಾ, ಕಾರು, ಟ್ರಾಕ್ಟರ್, ಸೈಕಲ್ ಹಾಳಾದಾಗ ಅವನ್ನು ರಿಪೇರಿ ಮಾಡೋದೆಂದರೆ ನನಗೆ ಬಹಳ ಇಷ್ಟ." ಇದನ್ನು ಕೇಳಿ ಅವನ ತಂದೆಗೆ ಬಹಳ ಅಸಮಾಧಾನವಾಯಿತು. ಅವರು ಹೇಳಿದರು, “ಜೇಮ್ಸ್, ಕೃಷಿ ನಮ್ಮ ಕುಟುಂಬದ ವೃತ್ತಿ. ನೀನು ಅದನ್ನು ಬಿಟ್ಟು ಮೆಕ್ಯಾನಿಕ್ ಆಗುತ್ತೀಯಾ? ಹೀಗಾದರೆ ನೀನು ಜೀವನದಲ್ಲಿ ಏನೂ ಸಾಧಿಸೋದಿಲ್ಲ.”
ಅನಂತರ ಆ ಬಗ್ಗೆ ಜೇಮ್ಸ್ ತಂದೆಯ ಬಳಿ ಮಾತನಾಡಲಿಲ್ಲ. ಶಾಲೆಯಲ್ಲಿ ಅವನು ವಿಜ್ನಾನದ ವಿಷಯಗಳನ್ನು ಬಹಳ ಆಸಕ್ತಿಯಿಂದ ಕಲಿತ. ಶಾಲೆಯ ಅವಧಿ ಮುಗಿದ ನಂತರ ಪ್ರತಿ ದಿನವೂ ಒಂದು ಗ್ಯಾರೇಜಿನಲ್ಲಿ ವಾಹನಗಳನ್ನು ರಿಪೇರಿ ಮಾಡೋದನ್ನು ಕಲಿಯುತ್ತಿದ್ದ. ವರುಷಗಳು ದಾಟಿದವು.
ಜೇಮ್ಸ್ ಪದವೀಧರನಾದ. ಒಂದು ಪ್ರಸಿದ್ಧ ವಿಮಾನ ಉತ್ಪಾದನಾ ಕಂಪೆನಿಯನ್ನು ಸೇರಿ, ಅತ್ಯುತ್ತಮ ವಿಮಾನ ವಿನ್ಯಾಸ ಇಂಜಿನಿಯರ್ ಎಂದು ಹೆಸರು ಗಳಿಸಿದ. ಆಗ ಅವನ ತಂದೆ ಮಗನನ್ನು ಅಪ್ಪಿಕೊಂಡು ಅಭಿಮಾನದಿಂದ ಹೇಳಿದರು, “ಜೇಮ್ಸ್, ನಮ್ಮ ಮಹದಾಶೆಯನ್ನು ಸಾಧಿಸಲಿಕ್ಕಾಗಿ ನಾವು ಶ್ರಮಿಸಿದರೆ ಒಂದಲ್ಲ ಒಂದು ದಿನ ಯಶಸ್ವಿ ಆಗುತ್ತೇವೆ ಎಂದು ನೀನು ತೋರಿಸಿ ಕೊಟ್ಟಿದ್ದಿ.”
ನಮಿತಾಳಿಗೆ ಮನೆಯ ಹತ್ತಿರದ ಹೂವಿನ ಅಂಗಡಿಯಲ್ಲಿರುವ ಹೂಗಳನ್ನು ನೋಡುವುದೆಂದರೆ ಪಂಚಪ್ರಾಣ. ಅದೊಂದು ದಿನ ಅವಳು ಸಂಕಲ್ಪ ಮಾಡಿದಳು: "ನಾನು ಹೂಗಳನ್ನು ಬೆಳೆಸುತ್ತೇನೆ.”
ಅವಳು ಅಮ್ಮನೊಂದಿಗೆ ಪೇಟೆಗೆ ಹೋಗಿ ಹೂವಿನ ಬೀಜ ತಂದಳು. "ಹೂವಿನ ಕೃಷಿ” ಎಂಬ ಪುಸ್ತಕ ತಂದು ಓದಿದಳು. ವಾರಾಂತ್ಯದಲ್ಲಿ ಅವಳು ಮಣ್ಣಿನಲ್ಲಿ ಪುಟ್ಟ ಹೊಂಡಗಳನ್ನು ಮಾಡಿ ಹೂವಿನ ಬೀಜಗಳನ್ನು ಬಿತ್ತಿದಳು. ಬೀಜಗಳಿಗೆ ದಿನ ಬಿಟ್ಟು ದಿನ ನೀರೆರೆದಳು. ವಾರಕ್ಕೊಮ್ಮೆ ಗೊಬ್ಬರವನ್ನೂ ಹಾಕಿದಳು. ಎರಡು ವಾರಗಳಾದರೂ ಬೀಜಗಳಿಂದ ಸಸಿಗಳು ಹುಟ್ಟಲಿಲ್ಲ.
“ಸಸಿಗಳೇ ಹುಟ್ಟಿಲ್ಲ. ಇನ್ನು ಹೂಗಳು ಅರಳುವುದು ಹೇಗೆ?” ಎಂದು ಅವಳು ಪ್ರತಿ ದಿನವೂ ಚಿಂತೆ ಮಾಡುತ್ತಿದ್ದಳು. “ಅಮ್ಮ, ಹೂಗಳು ಯಾಕೆ ಅರಳುತ್ತಿಲ್ಲ” ಎಂದು ಅಮ್ಮನ ಬಳಿ ದಿನದಿನವೂ ನಮಿತಾಳ ಪ್ರಶ್ನೆ. “ಪ್ರತಿ ದಿನವೂ ತಪ್ಪದೆ ಬೀಜಗಳಿಗೆ ನೀರು ಹಾಕುತ್ತಿರು. ಗೊಬ್ಬರವನ್ನೂ ಹಾಕುತ್ತಿರು. ಒಂದು ದಿನ ನಿನಗೆ ಹೂಗಳು ಸಿಕ್ಕಿಯೇ ಸಿಗುತ್ತವೆ” ಎಂದು ಅಮ್ಮ ಉತ್ತರಿಸುತ್ತಿದ್ದಳು.
ಕ್ರಮೇಣ ಬೀಜಗಳಿಂದ ಪುಟ್ಟ ಸಸಿಗಳು ಮೊಳೆತು ಬೆಳೆದವು. ದಿನದಿಂದ ದಿನಕ್ಕೆ ಹೂವಿನ ಸಸಿಗಳು ದೊಡ್ಡದಾದವು. ಒಂದು ತಿಂಗಳಾಗುವಾಗ ಸಸಿಗಳಲ್ಲಿ ಮೊಗ್ಗುಗಳು ಮೂಡಿದವು. ಅವತ್ತು ನಮಿತಾಳ ಹುಟ್ಟುಹಬ್ಬ. ಆ ದಿನ ಬೆಳಗ್ಗೆ ಎದ್ದು ಹೂವಿನ ಸಸಿಗಳ ಹತ್ತಿರ ಹೋದ ನಮಿತಾಳಿಗೆ ಖುಷಿಯೋ ಖುಷಿ. ಯಾಕೆಂದರೆ ಅವಳಿಗೆ ಅಮೋಘವಾದ ಹುಟ್ಟುಹಬ್ಬದ ಉಡುಗೊರೆ ಲಭಿಸಿತ್ತು: ಅವಳೇ ಬೆಳೆಸಿದ ಹೂಗಳು!
ಅವತ್ತು ಹನ್ನೊಂದು ವರುಷ ವಯಸ್ಸಿನ ಕೈಲಾಶನ ಹುಟ್ಟುಹಬ್ಬ. “ಅಪ್ಪಾ, ನಾನು ಮತ್ತು ನಂದೀಶ ಜೊತೆಯಾಗಿ ಹೋಗಿ ಒಂದು ಫಿಲ್ಮ್ ನೋಡಿ, ಹೋಟೆಲಿನಲ್ಲಿ ತಿಂದು ಮನೆಗೆ ಬರುತ್ತೇವೆ” ಎಂದು ತಂದೆಗೆ ತಿಳಿಸಿ ಮನೆಯಿಂದ ಹೊರಟ ಕೈಲಾಶ್.
ತನ್ನ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಬೇಕು ಎಂಬುದು ಕೈಲಾಶನ ಆಶೆ. ಕೇಕ್ ಕತ್ತರಿಸುವುದು, ಉರಿಯುವ ಮೊಂಬತ್ತಿಗಳನ್ನು ಊದಿ ಆರಿಸುವುದು - ಇವೆಲ್ಲ ಅವನಿಗೆ ಇಷ್ಟವಿಲ್ಲ. ಹಾಗಾಗಿ ಫಿಲ್ಮ್ ನೋಡಿದ ನಂತರ ಹತ್ತಿರದ ಹೋಟೆಲಿಗೆ ಗೆಳೆಯ ನಂದೀಶನ ಜೊತೆ ಹೋದ ಕೈಲಾಶ್. ಹಾದಿಯಲ್ಲಿ ಫ್ಲೈಓವರಿನ ಬುಡದಲ್ಲಿ ಏಳು ವರುಷದ ಬಾಲಕನೊಬ್ಬನನ್ನು ಅವನು ನೋಡಿದ. ಆ ಬಾಲಕನ ಬಟ್ಟೆ ಕೊಳಕಾಗಿತ್ತು; ಮುಖ ಬಾಡಿತ್ತು. ಅವನು ಚಳಿಯಿಂದ ನಡುಗುತ್ತಿದ್ದ.
ಕೈಲಾಶನಿಗೆ ಅದೇನು ಅನಿಸಿತೋ! ಆ ಬಾಲಕನ ಬಳಿ ಏನಾಯಿತೆಂದು ಕೇಳಿದ. ತಾನು ಮನೆಯ ದಾರಿ ತಪ್ಪಿ ಕಂಗಾಲಾಗಿದ್ದೇನೆ ಎಂದು ತಿಳಿಸಿದ ಬಾಲಕ. ಕೈಲಾಶನಿಗೆ ಅವನ ಬಗ್ಗೆ ಕರುಣೆ ಮೂಡಿತು. “ನಂದೀಶ, ಇವನೂ ನಮ್ಮ ಜೊತೆ ಹೋಟೆಲಿಗೆ ಬರಲಿ” ಎನ್ನುತ್ತಾ ಕೈಲಾಶ ಆ ಬಾಲಕನನ್ನೂ ಹೋಟೆಲಿಗೆ ಕರೆದೊಯ್ದ. ಅವರೆಲ್ಲರೂ ಹೊಟ್ಟೆ ತುಂಬಾ ತಿಂದರು.
ಅನಂತರ, ಆ ಬಾಲಕನ ಮನೆ ಹುಡುಕಿ, ಅವನನ್ನು ಮನೆಗೆ ತಲಪಿಸಿದರು ಕೈಲಾಶ್ ಮತ್ತು ನಂದೀಶ. ಆ ಬಾಲಕನದು ತೀರಾ ಬಡ ಕುಟುಂಬ. ಅವನ ತಾಯಿ ಮಗನನ್ನು ಕಂಡು ಆನಂದಬಾಷ್ಪ ಸುರಿಸಿದಳು. ಕೈಲಾಶ್ ಮತ್ತು ನಂದೀಶನಿಗೆ ಮನದಾಳದಿಂದ ಕೃತಜ್ನತೆ ಅರ್ಪಿಸಿದಳು. ಬೀಳ್ಗೊಡುವಾಗ ಕೈಲಾಶ್ ತನ್ನ ಹೊಸ ಜಾಕೆಟನ್ನು ತೆಗೆದು ಆ ಬಾಲಕನಿಗಿತ್ತ.
"ಇವತ್ತಿನ ಹುಟ್ಟುಹಬ್ಬ ಎಂದಿಗೂ ಮರೆಯಲಾಗದ್ದು” ಎಂದು ನಂದೀಶನ ಬಳಿ ಹೇಳುತ್ತಾ ಅಲ್ಲಿಂದ ಹೊರಟ ಕೈಲಾಶ್.
ದಯಾನಂದ ಶಾಲೆಯಿಂದ ಹಿಂತಿರುಗುವಾದ ಬಹಳ ಬೇಸರದಲ್ಲಿದ್ದ. ಅವನ ಮುಖ ನೋಡಿದ ಅಮ್ಮ ಕೇಳಿದರು, "ಏನಾಯಿತು ದಯಾನಂದ್?” “ಇವತ್ತು ರಮಾಕಾಂತ ಶಾಲೆಯಲ್ಲಿ ತಿನ್ನಲಿಕ್ಕಾಗಿ ಮೈಸೂರು ಪಾಕ್ ತಂದಿದ್ದ. ಅದನ್ನು ಅಂಗಡಿಯಿಂದ ತರಬೇಕಾದರೆ ಬಹಳ ದುಡ್ಡು ಬೇಕಂತೆ. ನೀನಂತೂ ನನಗೆ ಅದನ್ನು ತೆಗೆಸಿಕೊಡೋದಿಲ್ಲ. ಆದರೆ, ಅದನ್ನು ತಿನ್ನಬೇಕಂತ ನನಗೆ ಬಹಳ ಆಸೆ ಆಗ್ತಿದೆ” ಎಂದು ಹೇಳುವಷ್ಟರಲ್ಲಿ ದಯಾನಂದನ ಕಣ್ಣಿನಲ್ಲಿ ನೀರು ಬಂತು.
“ಅಯ್ಯೋ, ಇಷ್ಟಕ್ಕೆ ಯಾರಾದ್ರೂ ಅಳ್ತಾರಾ?” ಎಂದು ಹೇಳಿದರು ಅವನ ಅಮ್ಮ. "ಹಾಗಂದ್ರೆ? ನನಗೆ ಅದು ಬೇಕೇ ಬೇಕು” ಎಂದು ಸಿಟ್ಟಿನಿಂದ ಹೇಳಿದ ದಯಾನಂದ. "ಅದಕ್ಕೇನಂತೆ? ಮೈಸೂರು ಪಾಕ್ ಮಾಡಿದ್ರಾಯಿತು" ಎಂದು ಉತ್ತರಿಸಿದರು ಅವನ ಅಮ್ಮ. ದಯಾನಂದ ಮತ್ತು ಅವನ ತಂಗಿ ಶಿಲ್ಪಾ ಕುಣಿದಾಡಿದರು.
ಅವರಿಬ್ಬರೂ ಅಮ್ಮನಿಗೆ ಸಹಾಯ ಮಾಡಿದರು. ಸಂಜೆಯಾಗುವಾಗ ಅವರ ಮನೆಯಲ್ಲಿ ಮೈಸೂರು ಪಾಕ್ ತಯಾರಾಯಿತು. ಅದು ರಮಾನಂದ ತಂದಿದ್ದ ಮೈಸೂರು ಪಾಕ್‌ನಂತೆಯೇ ಇರೋದನ್ನು ನೋಡಿ ದಯಾನಂದನಿಗೆ ಖುಷಿಯೋ ಖುಷಿ. ಸಂತೋಷ ತಡೆಯಲಾಗದೆ ಅವನು ಅಮ್ಮನಿಗೆ ಹೇಳಿದ: “ಅಮ್ಮ, ನೀನೆಷ್ಟು ಒಳ್ಳೆಯವಳು. ನಾವು ಏನನ್ನು ಬೇಕಾದರೂ ಮಾಡಲು ಸಾಧ್ಯ ಎಂದು ಇನ್ನೊಮ್ಮೆ ತೋರಿಸಿಕೊಟ್ಟಿದ್ದಿ.”
ಚಾರಿಣಿ ದೊಡ್ಡ ಮಳಿಗೆಗೆ ಅಮ್ಮನೊಂದಿಗೆ ಹೋಗಿದ್ದಳು. "ಚಾರಿಣಿ, ನೀನು ಸಿಕ್ಕಿದ್ದನ್ನೆಲ್ಲ ತಗೊಳ್ಳಬೇಡ. ಎರಡೇ ಎರಡು ವಸ್ತುಗಳನ್ನು ಮಾತ್ರ ತಗೋ" ಎಂದು ಎಚ್ಚರಿಸಿದರು ಅಮ್ಮ. ಚಾರಿಣಿಗೆ ಅಲ್ಲಿದ್ದ ಹೊಸ ಗೊಂಬೆಗಳನ್ನು ಮತ್ತು ಟೆಡ್ಡಿ ಬೇರ್ ಅನ್ನು ಖರೀದಿಸುವ ಆಶೆ. ಆಗಲೇ ಅಲ್ಲಿ ಚಾಕ್ಲೆಟ್‌ಗಳನ್ನೂ ಚಾರಿಣಿ ಕಂಡಳು. “ಚಾಕ್ಲೆಟ್ ತಗೊಳ್ಳಲು ಅಮ್ಮ ಬಿಡೋಡೇ ಇಲ್ಲ. ಆದರೇನಂತೆ? ನಾನು ಒಂದೆರಡು ಚಾಕ್ಲೆಟ್ ನನ್ನ ಜೋಬಿನಲ್ಲಿ ಇಟ್ಟು ಕೊಳ್ತೇನೆ. ಯಾರಿಗೂ ಗೊತ್ತಾಗೋದಿಲ್ಲ” ಎಂದು ಯೋಚಿಸಿದಳು ಚಾರಿಣಿ.
ಆಗ ಅವಳಿಗೆ ಹಿಂದಿನ ದಿನ ರಾತ್ರಿ ಪ್ರಾಮಾಣಿಕತೆ ಬಗ್ಗೆ ಅಪ್ಪ ಹೇಳಿದ್ದ ಕತೆ ನೆನಪಾಯಿತು. ಕತೆ ಕೇಳಿದ ನಂತರ ಚಾರಿಣಿ ಅಪ್ಪನಿಗೊಂದು ಪ್ರಶ್ನೆ ಕೇಳಿದ್ದಳು, “ಅಪ್ಪಾ, ಯಾರಾದರೂ ತಪ್ಪು ಕೆಲಸ ಮಾಡಿದಾಗ, ಅದನ್ನು ಯಾರೂ ನೋಡದಿದ್ದರೆ ಅವನಿಗೆ ಶಿಕ್ಷೆ ಆಗುತ್ತದೆಯಾ?” ಅದಕ್ಕೆ ಅಪ್ಪ ಉತ್ತರಿಸಿದ್ದರು, "ಚಾರಿಣಿ, ದೇವರು ಎಲ್ಲವನ್ನೂ ನೋಡುತ್ತಾ ಇರುತ್ತಾನೆ. ಅವನ ಕಣ್ಣು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ತಪ್ಪು ಕೆಲಸ ಮಾಡಿದಾಗ ದೇವರಿಗೂ ಗೊತ್ತಾಗುತ್ತದೆ ಮತ್ತು ಅದನ್ನು ಮಾಡಿದವನಿಗೂ ಗೊತ್ತಿರುತ್ತದೆ. ತನ್ನ ತಪ್ಪನ್ನು ಅವನು ಕ್ಷಣಕ್ಷಣವೂ ಅನುಭವಿಸಬೇಕಾಗುತ್ತದೆ.”
ತಕ್ಷಣವೇ ತಾನು ಚಾಕ್ಲೆಟ್ ಕಳ್ಳತನ ಮಾಡೋದಿಲ್ಲ ಎಂದು ಚಾರಿಣಿ ನಿರ್ಧರಿಸಿದಳು. ಹೊಸ ಗೊಂಬೆ ಮತ್ತು ಟೆಡ್ದಿ ಬೇರ್ ಅನ್ನು ತಗೊಂಡು ಅವಳು ಅಮ್ಮನ ಹತ್ತಿರ ಧಾವಿಸಿದಳು.