ಶ್ರೀಮಂತನೊಬ್ಬನ ಮಗ ಹಲವು ಕೆಟ್ಟ ಹವ್ಯಾಸಗಳನ್ನು ಕಲಿತಿದ್ದ. ಇತರರಿಗೆ ಗೇಲಿ ಮಾಡುವುದು, ತೊಂದರೆ ಮಾಡುವುದು, ಇತರರ ವಸ್ತುಗಳನ್ನು ಅಡಗಿಸಿ ಇಡುವುದು ಇತ್ಯಾದಿ. ಹಾಗಾಗಿ, ವೃದ್ಧ ಉಪಾಧ್ಯಾಯರೊಬ್ಬರ ಬಳಿ ಹೋಗಿ, ತನ್ನ ಮಗನು ಕೆಟ್ಟ ಹವ್ಯಾಸಗಳನ್ನು ತೊರೆಯುವಂತೆ ಮಾಡಬೇಕೆಂದು ವಿನಂತಿಸಿದರು.
ಮರುದಿನ ಆ ಉಪಾಧ್ಯಾಯರು ಶ್ರೀಮಂತನ ಮಗನನ್ನು ಹತ್ತಿರದ ಉದ್ಯಾನಕ್ಕೆ ಕರೆದೊಯ್ದರು. ಅಲ್ಲೊಂದು ಪುಟ್ಟ ಸಸಿಯನ್ನು ತೋರಿಸಿ, ಅದನ್ನು ಮಣ್ಣಿನಿಂದ ಕೀಳಬೇಕೆಂದು ಅವನಿಗೆ ಹೇಳಿದರು. ಆ ಬಾಲಕ ಅದನ್ನು ಕೈಯಿಂದ ಹಿಡಿದು ಬಲವಾಗಿ ಎಳೆದಾಗ ಆ ಸಸಿ ಕಿತ್ತು ಬಂತು. ಆಗ, ಪಕ್ಕದಲ್ಲಿದ್ದ ಗಿಡವೊಂದನ್ನು ತೋರಿಸಿ, “ಇದನ್ನೂ ಕೀಳು ನೋಡೋಣ" ಎಂದರು. ಅವನು ಒಂದು ಕೈಯಿಂದ ಎಳೆದಾಗ ಅದು ಕಿತ್ತು ಬರಲಿಲ್ಲ. ಎರಡು ಕೈಗಳಿಂದ ಅದನ್ನು ಎಳೆದಾಗಲೂ ಅದು ಕಿತ್ತು ಬರಲಿಲ್ಲ. ಕೊನೆಗೆ, ತನ್ನ ಬಲವನ್ನೆಲ್ಲಾ ಹಾಕಿ ಎಳೆದಾಗ ಆ ಗಿಡ ಕಿತ್ತು ಬಂತು.
ಅಲ್ಲಿಂದ ಕೆಲವು ಹೆಜ್ಜೆ ಮುಂದಕ್ಕೆ ನಡೆದು, ಉಪಾಧ್ಯಾಯರು ಬಾಲಕನಿಗೆ ಒಂದು ಮಾವಿನ ಮರವನ್ನು ತೋರಿಸಿ, ಅದನ್ನೂ ಕೀಳಬೇಕೆಂದರು. ಆ ಬಾಲಕ ಅದರ ಕಾಂಡವನ್ನು ಎರಡೂ ಕೈಗಳಿಂದ ತಬ್ಬಿಕೊಂಡು, ಅದನ್ನು ಮಣ್ಣಿನಿಂದ ಕೀಳಲು ಪ್ರಯತ್ನಿಸಿದ. ಕೆಲವು ನಿಮಿಷ ಹೆಣಗಾಡಿದ ಶ್ರೀಮಂತನ ಮಗ ಹೇಳಿದ, “ಇದನ್ನು ಮಣ್ಣಿನಿಂದ ಕೀಳಲು ಸಾಧ್ಯವೇ ಇಲ್ಲ.”
ಆಗ ವೃದ್ಧ ಉಪಾಧ್ಯಾಯರು ಬಾಲಕನಿಗೆ ವಿವರಿಸಿದರು: "ನೋಡಿದಿಯಾ? ನಿನ್ನ ಕೆಟ್ಟ ಹವ್ಯಾಸಗಳೂ ಹೀಗೇಯೇ. ಸಸಿಗಳು ಸಣ್ಣದಾಗಿದ್ದಾಗ ಅವನ್ನು ಸುಲಭವಾಗಿ ಮಣ್ಣಿನಿಂದ ಕೀಳಬಹುದು. ಆದರೆ, ಸಸಿಗಳು ದೊಡ್ಡ ಮರವಾಗಿ ಬೆಳೆದ ನಂತರ ಅವನ್ನು ಮಣ್ಣಿನಿಂದ ಕೀಳಲು ಸಾಧ್ಯವೇ ಇಲ್ಲ.” ಆ ಬಾಲಕನಿಗೆ ಉಪಾಧ್ಯಾಯರು ಕಲಿಸಿದ ಪಾಠ ಅರ್ಥವಾಯಿತು. ಅವನು ತನ್ನ ಕೆಟ್ಟ ಹವ್ಯಾಸಗಳನ್ನು ತೊರೆದ.