ಬಾಲಕ ಮೈಕೇಲ್ ಜೋರ್ಡಾನ್ ಕನಸು: ಶಾಲೆಯ ಬಾಸ್ಕೆಟ್ಬಾಲ್ ತಂಡ ಸೇರಿಕೊಳ್ಳುವುದು. ಹಿರಿಯ ವಿದ್ಯಾರ್ಥಿಗಳು ತಮ್ಮೊಂದಿಗೆ ಬಾಸ್ಕೆಟ್ಬಾಲ್ ಆಡುತ್ತಿದ್ದ ಮೈಕೇಲ್ಗೆ ಗೇಲಿ ಮಾಡಲಿಕ್ಕಾಗಿ ತಮ್ಮ ನಾಲಗೆ ಹೊರಕ್ಕೆ ಚಾಚುತ್ತಿದ್ದರು. ದುರದೃಷ್ಟದಿಂದ, ಶಾಲೆಯ ಬಾಸ್ಕೆಟ್ಬಾಲ್ ತಂಡದ ಆಯ್ಕೆಗೆ ಮೊದಲ ಬಾರಿ ಹಾಜರಾದಾಗ ಮೈಕೇಲ್ ಆಯ್ಕೆಯಾಗಲಿಲ್ಲ. ಯಾಕೆಂದರೆ ಅವನು ಆಯ್ಕೆಯ ಅರ್ಹತಾ ಮಟ್ಟ ತಲಪಲಿಲ್ಲ. ಅವನಿಗೆ ಬಹಳ ನಿರಾಶೆಯಾಯಿತು.
ಮೊದಲ ಸಲ ಯಶಸ್ಸು ಸಿಗದಿದ್ದರೂ ಶಾಲೆಯ ಬಾಸ್ಕೆಟ್ಬಾಲ್ ತಂಡದ ಆಯ್ಕೆಗೆ ಪುನಃ ಪ್ರಯತ್ನಿಸಲು ಮೈಕೇಲ್ ನಿರ್ಧರಿಸಿದ. ತನ್ನ ಎತ್ತರ ಹೆಚ್ಚಾಗಬೇಕೆಂಬುದು ಅವನ ದೊಡ್ಡ ಆಶೆ. ಯಾಕೆಂದರೆ, ಎತ್ತರವಿದ್ದರೆ ಆಟದಲ್ಲಿ ಬಾಲನ್ನು ಬಾಸ್ಕೆಟಿಗೆ ಎಸೆಯಲು ಅನುಕೂಲ. ಮೈಕೇಲನ ತಂದೆ ಅವನನ್ನು ಪ್ರೋತ್ಸಾಹಿಸಿದರು, “ಮೈಕೇಲ್, ಎತ್ತರವಾಗಬೇಕೆಂಬ ಆಶೆ ನಿನ್ನ ಹೃದಯದಲ್ಲಿದೆ. ನಿಜ ಹೇಳಬೇಕೆಂದರೆ, ನಿನ್ನ ಎತ್ತರ ಎಂಬುದು ನಿನ್ನೊಳಗಿದೆ. ನಿನಗೆ ಎಷ್ಟು ಎತ್ತರ ಆಗಬೇಕೆಂದಿದೆಯೋ ನೀನು ನಿನ್ನ ಯೋಚನೆಯಲ್ಲಿ ಅಷ್ಟು ಎತ್ತರ ಆಗಬಲ್ಲೆ.” ಅಬ್ಬ, ಎಂತಹ ಮಾತು!
ಮೈಕೇಲನ ಕುಟುಂಬದಲ್ಲಿ ಯಾರೂ ಬಾಸ್ಕೆಟ್ಬಾಲ್ ಆಟಗಾರ ಆಗಿರಲಿಲ್ಲ. ಅವನ ತಂದೆ ಒಬ್ಬ ಮೆಕ್ಯಾನಿಕ್ ಮತ್ತು ತಾಯಿ ಬ್ಯಾಂಕಿನ ಉದ್ಯೋಗಿ. ಅವನ ಕುಟುಂಬದಲ್ಲಿ ಯಾರೂ ಆರು ಅಡಿಗಳಿಗಿಂತ ಎತ್ತರ ಇರಲಿಲ್ಲ. ಆದರೆ ತಂದೆಯ ಮಾತುಗಳು ಅವನಲ್ಲಿ ಸಾಧನೆಯ ಕಿಚ್ಚು ಹತ್ತಿಸಿದವು. ಅವನು ನಿರಂತರವಾಗಿ ಬಾಸ್ಕೆಟ್ಬಾಲ್ ಆಟದ ಅಭ್ಯಾಸ ಮಾಡಿದ. ನೂರು ಬಾರಿ ಬಾಸ್ಕೆಟಿಗೆ ಬಾಲ್ ಎಸೆದರೆ ನೂರು ಬಾರಿಯೂ ಅದು ಬಾಸ್ಕೆಟಿನ ಒಳಗೆ ತೂರಬೇಕು ಎಂಬುದೇ ಅವನ ಗುರಿಯಾಗಿತ್ತು. ಛಲದ ಬಲದಿಂದ ಅವನು ಮಾಡಿದ ಸಾಧನೆ ಅವನನ್ನು ಬಾಸ್ಕೆಟ್ಬಾಲ್ ಆಟದಲ್ಲಿ ಉತ್ತುಂಗಕ್ಕೆ ಒಯ್ದಿತು. "ಚಿಕಾಗೋ ಬುಲ್ಸ್” ತಂಡದ ಸದಸ್ಯನಾಗಿ ಆಟವಾಡುತ್ತಿದ್ದ ಆತ ಅಮೇರಿಕಾದ ನ್ಯಾಷನಲ್ ಬಾಸ್ಕೆಟ್ಬಾಲ್ ಅಸೋಸಿಯೇಷನಿನ ಹದಿನೈದು ಸೀಸನುಗಳಲ್ಲಿ ಅದ್ಭುತವಾಗಿ ಆಟವಾಡಿ, ಆರು ಬಾರಿ ತನ್ನ ತಂಡವನ್ನು ಗೆಲ್ಲಿಸಿದ! ಅದರಿಂದಾಗಿ ಬದುಕಿದ್ದಾಗಲೇ ಬಾಸ್ಕೆಟ್ಬಾಲ್ ಆಟದ ದಂತಕತೆಯಾದ.