ರಷ್ಯಾ ಆಕ್ರಮಿತ ಪೊಲೆಂಡಿನ ಕುಟುಂಬದ ಕೊನೆಯ ಮಗುವೇ ಮರಿಯಾ. ಅವಳ ಅಮ್ಮ ಐದು ಮಕ್ಕಳ ಕಾಳಜಿ ವಹಿಸಿದರೆ, ಅಪ್ಪ ಮಕ್ಕಳಿಗೆ ಗಣಿತ ಮತ್ತು ಭೂಗೋಳ ಪಾಠ ಕಲಿಸಿದರು. ಯಾಕೆಂದರೆ, ಆಗಿನ ಕಾಲದಲ್ಲಿ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಪೊಲೆಂಡಿನಲ್ಲಿ ನಿಷೇಧಿಸಲಾಗಿತ್ತು. ಆದರೂ ಮರಿಯಾ ಉನ್ನತ ಶಿಕ್ಷಣ ಪಡೆದಳು - ಮನೆಗಳಲ್ಲೇ ಶಿಕ್ಷಣ ಒದಗಿಸುತ್ತಿದ್ದ ಒಂದು ಅಕಾಡೆಮಿಯ ಮೂಲಕ.
ಮರಿಯಾ ಮತ್ತು ಅವಳ ಸೋದರಿ ಬ್ರೊನಿಯಾ - ಇಬ್ಬರಿಗೂ ಕಲಿಕೆಯ ಉತ್ಸಾಹ. ಆದ್ದರಿಂದ, ಫ್ರಾನ್ಸಿನಲ್ಲಿ ಬ್ರೊನಿಯಾಳ ವೈದ್ಯಕೀಯ ಶಿಕ್ಷಣಕ್ಕೆ ಬೇಕಾದಷ್ಟು ಹಣವನ್ನು ತಾವಿಬ್ಬರೂ ಉಳಿತಾಯ ಮಾಡಬೇಕೆಂದು ಅವರಿಬ್ಬರೂ ನಿರ್ಧರಿಸಿದರು. ಆಕೆಯ ವೈದ್ಯಕೀಯ ಶಿಕ್ಷಣ ಮುಗಿಯುತ್ತಿದ್ದಂತೆ, ಆಕೆ ಮರಿಯಾಳಿಗೆ ಸಹಾಯ ಮಾಡಬೇಕೆಂದು ಅವರಿಬ್ಬರೂ ನಿಶ್ಚಯಿಸಿದರು. ಬ್ರೊನಿಯಾಳ ವೈದ್ಯಕೀಯ ಶಿಕ್ಷಣ ಮುಗಿಯುವ ತನಕ ಹಳ್ಳಿಗಾಡಿನಲ್ಲಿ ನೆಲೆಸಿದ ಮರಿಯಾ, ಅಲ್ಲೇ ಹಗಲು ಕೆಲಸ ಮಾಡುತ್ತಾ, ರಾತ್ರಿ ಅಧ್ಯಯನ ಮಾಡಿ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಕಲಿತಳು.
ಒಂದು ವರುಷವಾಗುತ್ತಿದ್ದಂತೆ, ಬ್ರೊನಿಯಾ ತನ್ನ ಸೋದರಿ ಮರಿಯಾಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ಕರೆಸಿಕೊಂಡಳು. ಮುಂದೆ ಮರಿಯಾಳ ಬದುಕು ರೋಚಕ ತಿರುವು ಪಡೆಯಿತು. ಅವಳು ಮೇರಿ ಎಂದು ಕರೆಸಿಕೊಂಡಳು. ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಉನ್ನತ ಪದವಿ ಪಡೆದಳು. (ಅದನ್ನು ಗಳಿಸಿದ ಕೇವಲ ಐದು ಮಹಿಳೆಯರಲ್ಲಿ ಆಕೆ ಒಬ್ಬಳು.) ಅವಳು ರೇಡಿಯಮ್ ಅನ್ನು ಸಂಶೋಧಿಸಿದಳು. ಮಾತ್ರವಲ್ಲ, ಪ್ರಪ್ರಥಮ ಮೊಬೈಲ್-ಎಕ್ಸ್ ರೇ ಯಂತ್ರವನ್ನು ಆವಿಷ್ಕರಿಸಿದಳು. ನೊಬೆಲ್ ಪಾರಿತೋಷಕ ಗಳಿಸಿದ ಮೊತ್ತಮೊದಲ ಮಹಿಳೆ ಮೇರಿ ಕ್ಯೂರಿ - ಒಂದಲ್ಲ, ಎರಡು ನೊಬೆಲ್ ಪಾರಿತೋಷಕ ಗಳಿಸಿದ್ದು ಆಕೆಯ ಮಹತ್ಸಾಧನೆ. (ಎರಡು ಪ್ರತ್ಯೇಕ ವೈಜ್ನಾನಿಕ ವಿಭಾಗಗಳಲ್ಲಿ.)