ಕಾಡಿನ ದೊಡ್ಡ ಮರವೊಂದರ ಕೊಂಬೆಯಲ್ಲಿ ಚಿರತೆಯೊಂದು ಮಲಗುತಿತ್ತು. ಅದು ಹಗಲಿಡೀ ಮಲಗಿ ರಾತ್ರಿ ಬೇಟೆಗೆ ಹೊರಡುತ್ತಿತ್ತು. ಒಂದು ದಿನ ರಾತ್ರಿ, ಮರಕುಟುಕವೊಂದು ಇತರ ಪ್ರಾಣಿಪಕ್ಷಿಗಳ ವಸ್ತುಗಳನ್ನು ಕದಿಯುವುದನ್ನು ಚಿರತೆ ನೋಡಿತು. ಕಳ್ಳನನ್ನು ಕಣ್ಣಾರೆ ಕಂಡರೂ ಚಿರತೆ ಇತರ ಪ್ರಾಣಿಗಳನ್ನು ಎಚ್ಚರಿಸಲಿಲ್ಲ. ಮರುದಿನ ಬೆಳಗ್ಗೆ, ಹಲವು ಪ್ರಾಣಿಪಕ್ಷಿಗಳು ತಮ್ಮ ವಸ್ತುಗಳು ಕಾಣೆಯಾದ ಬಗ್ಗೆ ಮಾತಾಡಿಕೊಳ್ಳುತ್ತಿದ್ದವು. ಆನೆಯ ಕಿವಿಯೋಲೆಗಳು, ಹುಲಿಯ ಭುಜಕೀರ್ತಿ, ಗಿಳಿಯ ಕೈಬೀಸಣಿಕೆ ಇತ್ಯಾದಿ ಕದಿಯಲಾಗಿತ್ತು. ಆ ಪ್ರಾಣಿಪಕ್ಷಿಗಳು ತಮ್ಮ ಕದ್ದು ಹೋದ ವಸ್ತುಗಳ ಬಗ್ಗೆ ಪರಸ್ಪರ ಮಾತಾಡಿಕೊಂಡವು. ಇದನ್ನೆಲ್ಲ ಕೇಳಿಸಿಕೊಂಡರೂ ಚಿರತೆ ಸುಮ್ಮನಿತ್ತು.
ಅದೊಂದು ದಿನ ರಾತ್ರಿ ಎಂದಿನಂತೆ ಚಿರತೆ ಬೇಟೆಗೆ ಹೋಗಿತ್ತು. ತಾನು ಮಲಗುವ ದೊಡ್ಡ ಮರದ ಬಳಿಗೆ ಮರಳಿದಾಗ ಅದಕ್ಕೆ ಆಘಾತವಾಯಿತು. ಅದು ಮಲಗುತ್ತಿದ್ದ ಕೊಂಬೆ ತುಂಡಾಗಿ ನೆಲಕ್ಕೆ ಬಿದ್ದಿತ್ತು. ಅದು ಮರಕುಟುಕನ ಉಪಟಳವೆಂದು ಕಾಣಿಸುತ್ತಿತ್ತು. “ಅಯ್ಯೋ, ನನಗೆ ಸಹಾಯ ಮಾಡಿ” ಎಂದು ಚಿರತೆ ಬೊಬ್ಬೆ ಹಾಕಿತು. ಅದರ ಬೊಬ್ಬೆ ಕೇಳಿದ ಹಲವಾರು ಪ್ರಾಣಿಪಕ್ಷಿಗಳು ಅದರ ಸುತ್ತಲೂ ಸೇರಿಕೊಂಡು ಏನಾಯಿತೆಂದು ವಿಚಾರಿಸಿದವು. ಮರಕುಟುಕ ಕಳ್ಳತನ ಮಾಡುತ್ತಿತ್ತೆಂದೂ, ಈಗ ತನ್ನ ಮಲಗುಕೊಂಬೆ ಮುರಿದು ಹಾಕಿದೆಯೆಂದೂ ಚಿರತೆ ತಿಳಿಸಿತು. “ಮರಕುಟುಕನ ಕಳ್ಳತನ ನೋಡಿದಾಗಲೇ ಬೇರೆಯವರ ತೊಂದರೆಗಳು ನಿನ್ನ ತೊಂದರೆಗಳೆಂದು ನೀನು ಯೋಚಿಸಬೇಕಾಗಿತ್ತು" ಎಂದು ಇತರ ಪ್ರಾಣಿಪಕ್ಷಿಗಳು ಚಿರತೆಗೆ ತಿಳಿಯಹೇಳಿದವು. ಅನಂತರ ಆ ಎಲ್ಲ ಪ್ರಾಣಿಪಕ್ಷಿಗಳು ಮರಕುಟುಕವನ್ನು ಹಿಡಿದು, ಗದರಿಸಿದವು. ಮಾತ್ರವಲ್ಲ, ಅದು ತಮ್ಮ ಕಾಡನ್ನು ತೊರೆದು ಹೋಗಬೇಕೆಂದು ತಾಕೀತು ಮಾಡಿದವು.