93. ಗಾಳಿಪಟದ ಜಂಭದ ಪತನ

ಚಂದದ ಗಾಳಿಪಟವೊಂದು ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿತ್ತು. ಭಾರೀ ಎತ್ತರದ ಮರಗಳಿಗಿಂತಲೂ ಎತ್ತರದಲ್ಲಿತ್ತು ಅದು. ತಾನೇರಿದ ಎತ್ತರವನ್ನು ಕಂಡು ಅದು ಜಂಭದಿಂದ ಬೀಗುತ್ತಿತ್ತು.

ಆದರೂ ಅದಕ್ಕೆ ಸಮಾಧಾನವಿಲ್ಲ. "ಛೇ, ಈ ದಾರವೊಂದು ನನ್ನನ್ನು ಬಿಗಿದು ಎಳೆಯದಿದ್ದರೆ ನಾನು ಇನ್ನೂ ಎತ್ತರಕ್ಕೆ ಏರುತ್ತಿದ್ದೆ” ಎಂಬುದೇ ಅದರ ಕೊರಗು. ತನ್ನನ್ನು ದಾರದಿಂದ ಬಿಡಿಸಿಕೊಳ್ಳಲಿಕ್ಕಾಗಿ ಅದು ದಾರವನ್ನು ಎಳೆಯಿತು. ಯಾಕೆಂದರೆ, ಮೋಡಗಳಿಗಿಂತಲೂ ಎತ್ತರದಲ್ಲಿ ಹಾರಬೇಕೆಂಬುದು ಅದರ ಹೆಬ್ಬಯಕೆ.

ಆದರೆ ಗಾಳಿಪಟದ ದಾರ ಬಲವಾಗಿತ್ತು. ಆ ದಾರ ಸುಲಭದಲ್ಲಿ ತುಂಡಾಗುವಂತಿರಲಿಲ್ಲ. ಗಾಳಿಪಟಕ್ಕೆ ಇನ್ನು ತಡೆಯಲಾಗಲಿಲ್ಲ. ಅದು ತನ್ನೆಲ್ಲ ಬಲ ಹಾಕಿ ದಾರವನ್ನು ಎಳೆಯಿತು. ಆಗ ಅದರ ದಾರ ತುಂಡಾಯಿತು. ಸ್ವಲ್ಪ ಹೊತ್ತು ಅಲ್ಲೇ ತೇಲಾಡಿದ ಗಾಳಿಪಟಕ್ಕೆ ಖುಷಿಯೋ ಖುಷಿ.

ತಟಕ್ಕನೆ ಗಾಳಿಪಟ ಕೆಳಕ್ಕೆ ಕುಸಿಯತೊಡಗಿತು. ಏನು ಮಾಡಿದರೂ ಆ ಬಿರುಸಿನ ಕುಸಿತವನ್ನು ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಧುಸ್ಸೆಂದು ಸಮುದ್ರದ ನೀರಿಗೆ ಬಿದ್ದ ಗಾಳಿಪಟ ಒದ್ದೆಮುದ್ದೆಯಾಯಿತು. ಸಮುದ್ರದ ತೆರೆಗಳ ರಭಸದಲ್ಲಿ ಗಾಳಿಪಟ ಕೊಚ್ಚಿಕೊಂಡು ಹೋಯಿತು. ಈಗ ಗಾಳಿಪಟ ಸೋತು ಸುಣ್ಣವಾಗಿ ಕೂಗಿತು, “ಓ, ಇದೇನಿದು? ನಾನು ಆಕಾಶದಲ್ಲಿ ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ಹಾರಬೇಕೆಂದಿದ್ದೆ. ನನ್ನಷ್ಟು ಎತ್ತರದಲ್ಲಿ ಬೇರಾರೂ ಹಾರಲು ಸಾಧ್ಯವಿಲ್ಲವೆಂದು ಜಂಭ ಪಟ್ಟಿದ್ದ ನನಗಿದು ತಕ್ಕ ಪಾಠ.”