ಮಾನ್ಯ ಡಿ.ವಿ. ಗುಂಡಪ್ಪನವರ “ಮಂಕುತಿಮ್ಮನ ಕಗ್ಗ" ಬದುಕಿನ ಹಲವು ಪ್ರಶ್ನೆಗಳಿಗೆ ಅಧ್ಯಾತ್ಮದ ನೆಲೆಯಲ್ಲಿ ಉತ್ತರಗಳನ್ನು ಒಳಗೊಂಡಿರುವ ಕನ್ನಡದ ಜ್ನಾನ ಖಜಾನೆ.
ಮನುಷ್ಯನನ್ನು ಯಾವಾಗಲೂ ಕಾಡುವ ನಿಗೂಢ ಪ್ರಶ್ನೆ: ದೇವರು ಇದ್ದಾನೆಯೇ? ಎಂಬುದು. ದೇವರು ಇದ್ದಾನೆ ಎನ್ನುವವರು ಆಸ್ತಿಕರು. ದೇವರು ಇಲ್ಲ ಎನ್ನುವವರು ನಾಸ್ತಿಕರು. ಈ ಎರಡೂ ವರ್ಗದವರಿಗೆ ಅದು ಅವರವರ ನಂಬಿಕೆ.
ಈ ಹಿನ್ನೆಲೆಯಲ್ಲಿ, “ಮಂಕುತಿಮ್ಮನ ಕಗ್ಗ”ದ ಹಲವು ಮುಕ್ತಕಗಳು ದೇವರ ಬಗ್ಗೆ ಡಿ.ವಿ.ಜಿ.ಯವರ ನಿಲುವನ್ನು ಸೂಚಿಸುವ ಪರಿ ಅನನ್ಯ. ಮೊದಲ ಐದು ಮುಕ್ತಕಗಳು ದೇವರ ಕುರಿತಾದ ಅವರ ಮನೋಧರ್ಮಕ್ಕೆ ಕನ್ನಡಿ ಹಿಡಿಯುತ್ತವೆ.
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆಂದು ಜನಂ
ಆವುದನು ಕಾಣದೊಡಮುಳ್ತಿಯಿಂ ನಂಬಿಹುದೊ
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ
ಯಾವುದನ್ನು ಕಾಣದಿದ್ದರೂ ಅದನ್ನು ಶ್ರೀ ವಿಷ್ಣು, ವಿಶ್ವಕ್ಕೆ ಆದಿ ಮತ್ತು ಮೂಲನಾಗಿರುವವನು, ಮಾಯಾಲೋಲನು, ದೇವರು, ಸರ್ವರ ಈಶ ಮತ್ತು ಪರಬ್ರಹ್ಮ - ಈ ಎಲ್ಲ ನಾಮಾವಳಿಗಳಿಂದ ಜನರು ಪ್ರೀತಿಯಿಂದ (ಅಳ್ತಿಯಿಂ) ನಂಬಿ ನಡೆಯುತ್ತಿದ್ದಾರೆ. ಇದೊಂದು ವಿಚಿತ್ರ. ಅದಕ್ಕೆ ನಮಿಸು ಎನ್ನುತ್ತಾರೆ ಮೊದಲನೆಯ ಮುಕ್ತಕದಲ್ಲಿ ಡಿ.ವಿ.ಜಿ.ಯವರು.
ಜೀವ ಜಡರೂಪ ಪ್ರಪಂಚವನದಾವುದೋ
ಆವರಿಸಿಕೊಂಡುಮೊಳನೆರೆದುಮಿಹುದಂತೆ
ಭಾವಕೊಳಪಡದಂತೆ ಅಳತೆಗಳವಡದಂತೆ
ಆ ವಿಶೇಷಕೆ ಮಣಿಯೊ - ಮಂಕುತಿಮ್ಮ
ಜೀವವಿರುವ ಹಾಗೂ ಜಡವಾಗಿರುವ ಈ ಪ್ರಪಂಚವನ್ನು ಯಾವುದೋ ಒಂದು ಶಕ್ತಿ ಆವರಿಸಿಕೊಂಡು, ಒಳಗೆ ತುಂಬಿಕೊಂಡು (ಒಳನೆರೆದು) ಇದೆ; ನಮ್ಮೆಲ್ಲರ ಅರಿವಿಗೆ ಬರುವ ಅದು ಭಾವಕ್ಕೆ ಸಿಗುವುದಿಲ್ಲ, ಅಳತೆಗೆ ಎಟಕುವುದಿಲ್ಲ. ಆ ವಿಶೇಷಕ್ಕೆ ತಲೆಬಾಗು (ಮಣಿ) ಎಂಬುದು ಎರಡನೆಯ ಮುಕ್ತಕದಲ್ಲಿ ಡಿ.ವಿ.ಜಿ.ಯವರ ನುಡಿ.
ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ
ಮಹಿಮೆಯಿಂ ಜಗವಾಗಿ ಜೀವವೇಷದಲಿ
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ
ಗಹನ ತತ್ವಕೆ ಶರಣೊ - ಮಂಕುತಿಮ್ಮ
ಒಂದು ವಸ್ತು ಇದೆಯೋ ಇಲ್ಲವೋ ನಮಗೆ ತಿಳಿಯಲಾಗದು, ನಿಜ. ಅದು ತನ್ನ ಮಹಿಮೆಯಿಂದ ಜಗತ್ತು ಎಂದಾಗಿ ಜೀವಿಗಳ ವೇಷದಲ್ಲಿ ವಿಹರಿಸುತ್ತಿದೆ. ಅದು ಒಳ್ಳೆಯದು (ಅದು ಒಳ್ಳಿತು) ಎಂಬುದು ಸತ್ಯ(ನಿಸದ)ವಾದರೆ, ಆ ಗಹನವಾದ ತತ್ವಕ್ಕೆ ಶರಣಾಗು ಎನ್ನುತ್ತಾರೆ ಡಿ.ವಿ.ಜಿ.ಯವರು ಈ ಮೂರನೆಯ ಮುಕ್ತಕದಲ್ಲಿ.
ಏನು ಜೀವನದರ್ಥ? ಏನು ಪ್ರಪಂಚಾರ್ಥ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?
ಜ್ನಾನ ಪ್ರಮಾಣವೇಂ? - ಮಂಕುತಿಮ್ಮ
ನಾಲ್ಕನೆಯ ಮುಕ್ತಕದಲ್ಲಿ ಸರಳ ಆದರೆ ಗಹನವಾದ ಪ್ರಶ್ನೆಗಳ ಮೂಲಕ ನಮ್ಮನ್ನು ದೇವರ ಬಗ್ಗೆ ಜಿಜ್ನಾಸೆಗೆ ಹಚ್ಚುತ್ತಾರೆ ಡಿ.ವಿ.ಜಿ.ಯವರು: ನಮ್ಮ ಜೀವನದ ಅರ್ಥವೇನು? ಈ ಪ್ರಪಂಚದ ಅರ್ಥವೇನು? ಇಲ್ಲಿನ ಜೀವಿಗಳ ಮತ್ತು ಪ್ರಪಂಚಗಳ ಸಂಬಂಧವೇನು? ನಮಗೆ ಕಾಣದಿರುವುದು ಇಲ್ಲಿ ಏನಾದರೂ ಇದೆಯೇ? ಅದೇನು? ಅದಕ್ಕೆ ಜ್ನಾನ ಪ್ರಮಾಣವೇನು? ಅಥವಾ ಅದು ನಮ್ಮ ಜ್ನಾನವ್ಯಾಪ್ತಿಯನ್ನು ಮೀರಿದ್ದುದೋ?
ದೇವರೆಂಬುದದೇನು ಕಗ್ಗತ್ತಲೆಯೆ ಗವಿಯೆ?
ನಾನರಿಯಲಾರೆಲ್ಲದರೊಟ್ಟು ಹೆಸರೆ?
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು?
ಸಾವು ಹುಟ್ಟುಗಳೇನು? - ಮಂಕುತಿಮ್ಮ
ದೇವರು ಎಂಬುದು ಅದೇನು? ಅದು ಕಗ್ಗತ್ತಲೆ ತುಂಬಿದ ಗುಹೆಯೇ? ಅಥವಾ ನಮಗೆ ತಿಳಿಯದಿರುವ ಎಲ್ಲವನ್ನೂ ಒಟ್ಟುಗೂಡಿಸಿ, ಅದಕ್ಕೆ "ದೇವರು" ಎಂಬ ಹೆಸರಿಟ್ಟು ಕರೆಯುತ್ತಿದ್ದೇವೆಯೇ? ಈ ಜಗತ್ತನ್ನು ಕಾಪಾಡುವವನೊಬ್ಬ ಇರುವುದಾದಲ್ಲಿ ಈ ಜಗತ್ತಿನ ಕಥೆ ಏಕೆ ಹೀಗಿದೆ? ಸಾವಿನ ಅರ್ಥವೇನು? ಹುಟ್ಟಿನ ಅರ್ಥವೇನು? ಹೀಗೆ ಐದನೆಯ ಮುಕ್ತಕದಲ್ಲಿಯೂ ಮನುಷ್ಯನನ್ನು ಅನಾದಿ ಕಾಲದಿಂದ ಕಾಡುವ ಪ್ರಶ್ನೆಗಳನ್ನು ಮುಂದಿಡುತ್ತಾರೆ ಡಿ.ವಿ.ಜಿ.ಯವರು.
(ಭಾಗ 2ರಲ್ಲಿ ಮುಂದುವರಿದಿದೆ)