“ಮಂಕುತಿಮ್ಮನ ಕಗ್ಗ”ದ ಇನ್ನೂ ಕೆಲವು ಮುಕ್ತಕಗಳಲ್ಲಿ "ದೇವರು" ಎಂಬ ಪರಿಕಲ್ಪನೆಯ ಇನ್ನಷ್ಟು ಆಯಾಮಗಳನ್ನು ಮಾನ್ಯ ಡಿ.ವಿ. ಗುಂಡಪ್ಪನವರು ಪ್ರಸ್ತುತಪಡಿಸುತ್ತಾರೆ:
ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆ
ನಾನೆನುವ ಚೇತನದಿ ರೂಪುಗೊಂಡಿಹುದೋ?
ನಾನೆನುವ ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿ
ಬಾನಾಚೆ ಹಬ್ಬಿಹುದೊ? - ಮಂಕುತಿಮ್ಮ
ಈ ಮುಕ್ತಕದಲ್ಲಿ ಅವರು ಎತ್ತಿರುವ ಮೂಲಭೂತ ಪ್ರಶ್ನೆ: ಆಕಾಶದಿಂದ ಆಚೆಗೆ ಇರುವ ವಿರಾಟ್ ಶಕ್ತಿ (ವಿಶ್ವಸತ್ತ್ವ) ತಾನು ಈ ಪ್ರಪಂಚಕ್ಕೆ (ಇಳೆಗೆ) ಇಳಿದು, ನಾನು ಎನ್ನುವ ಚೇತನವಾಗಿ ರೂಪುಗೊಂಡಿದೆಯೋ ಅಥವಾ "ನಾನು" ಎನ್ನುವ ಕೇಂದ್ರದಿಂದ ಹೊರಟ ಸತ್ತ್ವದ ಪರಿಧಿಯು ಆಕಾಶದಾಚೆಗೆ ಹಬ್ಬಿದೆಯೋ?
ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು
ಬಿಳಲೂರೆಗಳ ಲೆಕ್ಕಕ್ಕಿಲ್ಲ ಕೊನೆ ಮೊದಲು
ಬೆಳೆವುದೀ ಪರಿಯರಳಿಮರದಂತೆ ನರ ಕೋಟಿ
ನಲಿವನದರಲಿ ಬೊಮ್ಮ - ಮಂಕುತಿಮ್ಮ
ತಲೆಯ ಮೇಲೆ ಬೇರು, ಕೆಳಗಡೆ ಕೊಂಬೆ, ಎಲೆ ಮತ್ತು ಚಿಗುರು. ಬಿಳಲು ಮತ್ತು ಊರೆಗಳಂತೂ ಲೆಕ್ಕವಿಲ್ಲದಷ್ಟು. ಇವುಗಳಿಗೆ ಕೊನೆಯೂ ಇಲ್ಲ, ಮೊದಲೂ ಇಲ್ಲ. ಹೀಗೆ ಅರಳಿ ಮರ ಬೆಳೆದಂತೆ, ನರಕೋಟಿಯೂ ಬೆಳೆಯುತ್ತಲೇ ಇರುತ್ತದೆ. ಪರಬ್ರಹ್ಮನು ಇದರಲ್ಲಿ ನಲಿಯುತ್ತಾನೆ. ಈ ಮುಕ್ತಕದ ಅರ್ಥಕ್ಕೆ ಪೂರಕವಾದ ಭಾವ ಮುಂಚಿನ (“ಬಾನಾಚೆಯಿಂ ….) ಮುಕ್ತಕದಲ್ಲಿದೆ. ಮರಕ್ಕೆ ಬೇರು ಸತ್ವವನ್ನು ತುಂಬುತ್ತದೆ; ಹಾಗೆಯೇ ಬ್ರಹ್ಮಾಂಡಕ್ಕೆ ಸತ್ವವನ್ನು ತುಂಬುವ ಅವ್ಯಕ್ತ ಶಕ್ತಿ ಬಾನಾಚೆಯಲ್ಲಿದೆ. ಅದು ತನ್ನ ಲೀಲೆಗಾಗಿ ಸೃಷ್ಟಿಸಿರುವ ಬ್ರಹ್ಮಾಂಡದ ಒಂದು ತುಣುಕು ಈ ಭೂಮಿ. ಇದರಲ್ಲಿರುವ ಜೀವಿಗಳು, ಜೀವಜಾಲಗಳು ಅಸಂಖ್ಯ. ಈ ಲೀಲೆಯೊಳಗೆ ಆ ಅವ್ಯಕ್ತ ಶಕ್ತಿ ಲೀನವಾಗಿದ್ದು, ಕ್ಷಣಕ್ಷಣವೂ ನಲಿಯುತ್ತಿದೆ.
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ-
ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ
ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ
ಬೀಜದಿಂದ ಮರ ಬೆಳೆಯುತ್ತದೆ; ಮರವನ್ನು ಹೆತ್ತ ಬೀಜ ಇಲ್ಲವಾಗಿ, ಮರ ವಿಸ್ತರಿಸುತ್ತದೆ. ಹಾಗೆಯೇ, ಸೃಷ್ಟಿ ತನ್ನ ಮೂಲವಾದ ಅವ್ಯಕ್ತ ಶಕ್ತಿಯನ್ನು ಮರೆಮಾಚಿ ಮೆರೆಯುತ್ತಿದೆ - ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಹಾಲನ್ನು ಸುರಿದಾಗ, ನೊರೆ ಉಕ್ಕಿ ಬಂದು ಹಾಲು ಮರೆಯಾಗುವಂತೆ.
ಈ ಹಿನ್ನೆಲೆಯಲ್ಲಿ, ಜ್ನಾನದ ಸಾಗರಗಳಾದ ಉಪನಿಷತ್ತುಗಳು ಯಾವ ತತ್ವಜ್ನಾನವನ್ನು ಪ್ರತಿಪಾದಿಸುತ್ತವೆ? ಎಂಬುದನ್ನು ಗಮನಿಸುವುದು ಅವಶ್ಯ. ಅವುಗಳಲ್ಲಿ ವ್ಯಕ್ತವಾಗಿರುವುದು ಆಸ್ತಿಕತೆಯೇ ಅಥವಾ ನಾಸ್ತಿಕತೆಯೇ ಎಂದು ನಿರ್ಣಯಿಸುವುದು ಸುಲಭವಲ್ಲ. ಅವುಗಳ ನೆಲೆ ಆಸ್ತಿಕವಲ್ಲ ಯಾಕೆಂದರೆ ಅವು ಯಾವ ದೇವರನ್ನೂ ಆರಾಧಿಸುವುದಿಲ್ಲ. ಅವುಗಳ ನೆಲೆ ನಾಸ್ತಿಕವೂ ಅಲ್ಲ ಯಾಕೆಂದರೆ ಅವುಗಳಲ್ಲಿ ಬ್ರಹ್ಮದ ಪ್ರಸ್ತಾಪವಿದೆ. ಆದರೆ ಬ್ರಹ್ಮನನ್ನು ದೇವರು ಎನ್ನುವಂತಿಲ್ಲ ( ಬ್ರಹ್ಮನ ದೇವಸ್ಥಾನ ವಿರಳಾತಿ ವಿರಳ.)
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳಸುವೀ
ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕೆ ನರನು
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೊ
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ
ಈ ಸೃಷ್ಟಿಯ ಕುರಿತಾಗಿ ನಾವೆಷ್ಟು ಚಿಂತನೆ ನಡೆಸಿದರೂ ನಮ್ಮಲ್ಲಿ ಶಂಕೆಯೇ ಬೆಳೆಯುತ್ತದೆ. ಇದರಲ್ಲೇನಾದರೂ ಸಿದ್ಧಾಂತವಿದೆಯೇ ಎಂದು ಬೆದಕುತ್ತಾ ಹೋದರೆ, ನಾವು ಕಷ್ಟ ಪಡುತ್ತಲೇ ಇರಬೇಕೆಂಬುದು ಬ್ರಹ್ಮವಿಧಿಯೆನೋ? ಅಷ್ಟೇ ನಮ್ಮಯ ಪಾಡು ಎನ್ನುತ್ತಾರೆ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ.
ಯಾಕೆಂದರೆ, ದೇವರು ಇದ್ದಾನೆ ಎನ್ನುವವರು ದೇವರನ್ನು ಕಂಡಿಲ್ಲ. ದೇವರು ಇಲ್ಲ ಎನ್ನುವವರು ಈ ಸೃಷ್ಟಿಗೆ ಕಾರಣ ಯಾವುದು ಎಂಬುದನ್ನು ಸಾಬೀತು ಪಡಿಸಿಲ್ಲ. ಹೀಗಿರುವಾಗ, ಅಂತಿಮವಾಗಿ ನಾವು ಯಾವುದಕ್ಕೆ ಶರಣಾಗಬೇಕು ಎಂಬುದನ್ನು “ಮಂಕುತಿಮ್ಮನ ಕಗ್ಗ”ದ ಕೊನೆಯ (945ನೆಯ) ಮುಕ್ತಕದಲ್ಲಿ ಡಿ.ವಿ. ಗುಂಡಪ್ಪನವರು ಹೀಗೆ ನಿವೇದಿಸಿದ್ದಾರೆ:
ಶರಣುವೊಗು ಜೀವನರಹಸ್ಯದಲಿ ಸತ್ತ್ವದಲಿ
ಶರಣು ಜೀವನವ ಸುಮವೆನಿಪ ಯತ್ನದಲಿ
ಶರಣಂತರಾತ್ಮ ಗಂಭೀರಪ್ರಶಾಂತಿಯಲಿ
ಶರಣು ವಿಶ್ವಾತ್ಮದಲಿ - ಮಂಕುತಿಮ್ಮ
ಜೀವನದ ರಹಸ್ಯಕ್ಕೆ, ಸತ್ವಕ್ಕೆ, ಜೀವನವು ಹೂವಿನಂತೆ ಅರಳಲು ಮಾಡುವ ಪ್ರಯತ್ನಕ್ಕೆ, ಎಲ್ಲದಕ್ಕಿಂತ ಮುಖ್ಯವಾಗಿ ಅಂತರಾತ್ಮದ ಗಂಭೀರ ಪ್ರಶಾಂತಿಗೆ ಹಾಗೂ ವಿಶ್ವಾತ್ಮಕ್ಕೆ ಶರಣಾಗು; ಮೂಢತನ ತೊರೆದು ಜ್ನಾನದ ಬೆಳಕಿನತ್ತ ನಡೆ ಎಂದು ನಮಗೆಲ್ಲರಿಗೂ ದಾರಿ ತೋರಿದ್ದಾರೆ.
(ಜನವರಿ 2023 ಮತ್ತು ಫೆಬ್ರವರಿ 2023)