ಹಿಂದೂಗಳು ಮೂರ್ತಿಪೂಜೆ ಯಾಕೆ ಮಾಡುತ್ತಾರೆ? ಎಂಬ ಜಿಜ್ನಾಸೆ ಇಂದು ನಿನ್ನೆಯದಲ್ಲ. ನಮ್ಮ ಋಷಿಮುನಿಗಳು ಸಾವಿರಾರು ವರುಷಗಳ ಮುಂಚೆಯೇ ಈ ಪ್ರಶ್ನೆಗೆ ಸುಸ್ಪಷ್ಟವಾದ ಉತ್ತರ ಕೊಟ್ಟಿದ್ದಾರೆ: ಅನಂತವಾದ ವಿಶ್ವವನ್ನು ನಿಯಂತ್ರಿಸುವ ಶಕ್ತಿಯನ್ನು ಮೂರ್ತಿಯ ರೂಪದಲ್ಲಿ ನಾವು ಪೂಜಿಸುತ್ತೇವೆ; ಇದು ನಮಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಭಕ್ತಿಯ ಪಥದಲ್ಲಿ ಮುನ್ನಡೆಯಲು ಆಧಾರ.
ಈ ಉತ್ತರ ತಪ್ಪೆಂದು ಸಾಧಿಸಲಿಕ್ಕಾಗಿ ಮೂರ್ತಿಪೂಜೆಯ ಟೀಕಾಕಾರರಿಗೆ ಯಾವುದೇ ತರ್ಕವನ್ನು ಮುಂದೊಡ್ಡಲು ಸಾಧ್ಯವಾಗಿಲ್ಲ. “ಅದು ತಪ್ಪೆಂದು ನಾವು ಹೇಳುತ್ತೇವೆ; ಆದ್ದರಿಂದ ಅದು ತಪ್ಪು” ಎಂಬುದೇ ಅವರ ಉಡಾಫೆಯ ಮಾತು.
ಅವರೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಒಂದು ಮುಖ್ಯ ಸಂಗತಿ ಏನೆಂದರೆ, ಯಾವುದೇ ದೇವಸ್ಥಾನವನ್ನು ನಿರ್ಮಿಸಿ, ಅಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮುಂಚೆ ಹಲವಾರು ವಿಧಿವಿಧಾನಗಳನ್ನು ಅನುಸರಿಸಲಾಗುತ್ತದೆ. ಅವುಗಳಲ್ಲೊಂದು “ಪಾಣ ಪ್ರತಿಷ್ಠಾಪನೆ”. ಇದರ ಉದ್ದೇಶ ಅಲ್ಲಿ ಪೂಜಿಸಲ್ಪಡುವ ಮೂರ್ತಿಯಲ್ಲಿ ಪ್ರಾಣವನ್ನು ಆಹ್ವಾನಿಸುವುದು. ಗಮನಿಸಿ: ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಹಿಂದೂ ವ್ಯಕ್ತಿ, ದೇವರ ಮೂರ್ತಿಗೆ ತಲೆ ಬಾಗಿ, ಅಡ್ಡ ಬಿದ್ದು, ದೇವರ ದಯೆಗಾಗಿ ಪ್ರಾರ್ಥಿಸುತ್ತಾನೆ. ಆ ಸಂದರ್ಭದಲ್ಲಿ ದೇವರ ಮೂರ್ತಿಗೆ ಮುಖಾಮುಖಿಯಾಗಲು ಸರ್ವ ಪ್ರಯತ್ನ ಮಾಡುತ್ತಾನೆ. ದೇವರ ಮೂರ್ತಿಯ ದೃಷ್ಟಿಯ ಅಳವಿನೊಳಗೆ ಬರಬೇಕೆಂಬುದು ಅವನ ಏಕಮಾತ್ರ ಉದ್ದೇಶ. ಆತನ/ ಆಕೆಯ ನಂಬಿಕೆ ಏನೆಂದರೆ, ಇಲ್ಲಿ ಮೂರ್ತಿ ರೂಪದಲ್ಲಿರುವ ದೇವರು ನನ್ನನ್ನು ನೋಡುತ್ತಾನೆ, ನನ್ನ ಮಾತುಗಳನ್ನು ಕೇಳುತ್ತಾನೆ ಮತ್ತು ನನಗೆ ಸ್ಪಂದಿಸುತ್ತಾನೆ. ಇದರ ಆಳದಲ್ಲಿರುವ ಭಾವ ಏನೆಂದರೆ, "ದೇವರೇ, ಇಲ್ಲಿ ನೋಡು, ನಿನ್ನ ಚರಣಗಳಿಗೆ ಭಕ್ತಿಯಿಂದ ನಮಿಸುತ್ತಿದ್ದೇನೆ; ನನ್ನ ಶರಣಾಗತಿಯನ್ನು ಸ್ವೀಕರಿಸಿ, ನನ್ನನ್ನು ಹರಸು, ನನ್ನನ್ನು ರಕ್ಷಿಸು."
ನಮ್ಮ ದೇಶದ ಚರಿತ್ರೆಯಲ್ಲಿ ಸಾವಿರಾರು ದೇವಸ್ಥಾನಗಳನ್ನು ಅನ್ಯ ಮತೀಯರು ಧ್ವಂಸ ಮಾಡಿದ್ದು ದಾಖಲಾಗಿದೆ. ಆ ದೇವಸ್ಥಾನಗಳಲ್ಲಿದ್ದ ದೇವರ ಮೂರ್ತಿಯ ಬಗ್ಗೆ ಹಿಂದೂಗಳಲ್ಲಿ ಯಾವ ಮಟ್ಟದ ಭಕ್ತಿಭಾವ ತುಂಬಿತ್ತು, ಅದನ್ನು ರಕ್ಷಿಸಲಿಕ್ಕಾಗಿ ಅವರು ಎಂತಹ ತ್ಯಾಗ ಮಾಡಿದರು ಎಂಬುದಕ್ಕೆ ಹಲವಾರು ನಿದರ್ಶನಗಳು ಸಿಗುತ್ತವೆ. ಉದಾಹರಣೆಗೆ, ಗೋವಾದಲ್ಲಿ ಕ್ರೈಸ್ತರು ದೇವಸ್ಥಾನವನ್ನು ಧ್ವಂಸ ಮಾಡುವ ಕೆಲವೇ ದಿನಗಳ ಮುಂಚೆ, ಅಲ್ಲಿನ ಮೂರ್ತಿಯನ್ನು ಭಕ್ತರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದರು. ಅನಂತರ, ಆ ಹೊಸ ಸ್ಥಳದಲ್ಲಿ ದೇವಸ್ಥಾನ ಕಟ್ಟಿ, ಅಲ್ಲಿ ದೇವರ ಮೂರ್ತಿ ಇರಿಸಿ, ಅದರಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿದ್ದರು. ಗಮನಿಸಿ: ಈ ಕಾಯಕದಲ್ಲಿ ಅವರ ಪ್ರಾಣಕ್ಕೆ ಅಪಾಯವಿದ್ದರೂ ಅವರು ಅದನ್ನು ಮಾಡಿಯೇ ಮಾಡಿದರು.
ಇನ್ನು ಕೆಲವು ದೇವಸ್ಥಾನಗಳ ಮೂರ್ತಿಗಳನ್ನು ಮಣ್ಣಿನೊಳಗೆ ಹೂತು ಅಥವಾ ಕೆರೆ/ ಸರೋವರದಲ್ಲಿ ಮುಳುಗಿಸಿ, ದೇವಸ್ಥಾನ ಧ್ವಂಸ ಮಾಡಲು ಬಂದಿದ್ದ ಮತಾಂಧರಿಂದ ಅವನ್ನು ರಕ್ಷಿಸಿದ್ದರು. ಮುಂದೊಮ್ಮೆ, ದೇವರ ಮೂರ್ತಿಯನ್ನು ಅವಿತಿಟ್ಟಿದ್ದ ಜಾಗದಿಂದ ಹೊರತೆಗೆದು, ಪುನಃ ದೇವಸ್ಥಾನದಲ್ಲಿ ಇರಿಸಿ, ಮತ್ತೆ ಪ್ರಾಣಪ್ರತಿಷ್ಠಾಪನೆ ಮಾಡುವುದು ಅವರ ಉಪಾಯವಾಗಿತ್ತು. ದೇವಸ್ಥಾನದ ದೇವರ ಮೂರ್ತಿಯನ್ನು ರಕ್ಷಿಸಲಿಕ್ಕಾಗಿ ಭಕ್ತರು ತಮ್ಮ ಪ್ರಾಣವನ್ನೇ ಬಲಿಗೊಟ್ಟ ಉದಾಹರಣೆಗಳೂ ಇವೆ.
ಹಿಂದೂ ರಾಜ್ಯಗಳನ್ನು ಆಕ್ರಮಿಸಿ, ಅಲ್ಲಿಯ ಸಂಪತ್ತನ್ನೆಲ್ಲ ಲೂಟಿ ಮಾಡಿ, ಕೊನೆಗೆ ಅಲ್ಲಿನ ಪ್ರಜೆಗಳನ್ನು ತಮ್ಮ ಅಡಿಯಾಳುಗಳಾಗಿ ಮಾಡಲು, ಮುಸ್ಲಿಂ ಮತಾಂಧ ರಾಜರು ಅನುಸರಿಸುತ್ತಿದ್ದ ತಂತ್ರ: ದೇವಸ್ಥಾನಗಳ ಪ್ರಧಾನ ಮೂರ್ತಿಯನ್ನು ನೆಲಕ್ಕೆ ಕೆಡವಿ, “ನಿಮ್ಮ ದೇವರು ತನ್ನನ್ನೇ ರಕ್ಷಿಸಿಕೊಳ್ಳಲಾಗಲಿಲ್ಲ, ನೋಡಿ” ಎನ್ನುತ್ತಾ, ಅಲ್ಲಿನ ಹಿಂದೂಗಳ ಆತ್ಮಸ್ಥೈರ್ಯವನ್ನೇ ಅಲುಗಾಡಿಸುವುದು. ಯಾವೆಲ್ಲ ಕ್ರೂರ ರೀತಿಗಳಲ್ಲಿ ಅವರು ಹಿಂದೂಗಳ ಆತ್ಮಸ್ಥೈರ್ಯ ಅಲುಗಾಡಿಸಲು ಪ್ರಯತ್ನಿಸಿದರು ಎಂಬುದನ್ನು ತಿಳಿಯಬೇಕಾದರೆ ಜನಮನ್ನಣೆ ಗಳಿಸಿರುವ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ “ಆವರಣ" ಕಾದಂಬರಿಯನ್ನು ಓದಬೇಕು. ಆ ಕಾದಂಬರಿಯಲ್ಲಿ ಪ್ರಸ್ತಾಪಿಸಲಾದ ಚಾರಿತ್ರಿಕ ಸತ್ಯಸಂಗತಿಗಳಿಗೆ ಆಧಾರವಾಗಿ ಅದರ ಕೊನೆಯಲ್ಲಿ ಕೊಟ್ಟಿರುವ ಸುಮಾರು 150 ರೆಫರೆನ್ಸ್-ಗಳನ್ನು ಮನನ ಮಾಡಬೇಕು.
ನೆನಪಿರಲಿ: ದೇವಸ್ಥಾನಗಳನ್ನು ಧ್ವಂಸ ಮಾಡಿದ ಮತಾಂಧರು ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದಾರೆ. ಅವರು ಧ್ವಂಸ ಮಾಡಿದ ದೇವಸ್ಥಾನಗಳು ಹಿಂದೂಗಳ ಅಖಂಡ ನಂಬಿಕೆಯ ಶಾಶ್ವತ ಆಧಾರಸ್ತಂಭಗಳಾಗಿ ಮತ್ತೆಮತ್ತೆ ತಲೆಯೆತ್ತಿ ನಿಂತಿವೆ. ಇದಕ್ಕೆ ಇತ್ತೀಚೆಗಿನ ಉದಾಹರಣೆ: ಅಯೋಧ್ಯೆಯ ಶ್ರೀರಾಮ ದೇವಸ್ಥಾನ. ಅಲ್ಲಿನ ಭವ್ಯ ಶ್ರೀರಾಮ ದೇವಸ್ಥಾನದಲ್ಲಿ ಹಿಂದೂಗಳ ಮಹಾನ್ ಧಾರ್ಮಿಕ ಗ್ರಂಥ “ರಾಮಾಯಣ"ದ ಆರಾಧ್ಯ ಪುರುಷೋತ್ತಮ ಶ್ರೀರಾಮನ ದಿವ್ಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆದದ್ದು 22 ಜನವರಿ 2024ರಂದು. ಅಂದಿನಿಂದ ಪ್ರತಿದಿನವೂ ಒಂದು ಲಕ್ಷಕ್ಕಿಂತ ಅಧಿಕ ಹಿಂದೂಭಕ್ತರು ಶ್ರೀರಾಮನ ದರ್ಶನ ಪಡೆಯುತ್ತಾ ಭಕ್ತಿ ಪರವಶರಾಗುತ್ತಿದ್ದಾರೆ. ಸಾವಿರಾರು ವರುಷಗಳಿಂದ ಹಿಂದೂಗಳು ನಂಬಿಕೊಂಡು ಬಂದಿರುವ ಮೌಲ್ಯಗಳು ಅಜರಾಮರ ಎಂಬುದಕ್ಕೆ ಇದು ಮಗದೊಂದು ನಿದರ್ಶನ, ಅಲ್ಲವೇ?
ಜಗತ್ತಿನಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ “ತುಲನಾತ್ಮಕ ಧಾರ್ಮಿಕ ಪಾಠ"ಗಳನ್ನು ಕಲಿಸಲಾಗುತ್ತದೆ. ಅದನ್ನು ಕಲಿಸುವವರಿಗೆ ಒಂದು ದೊಡ್ಡ ಜವಾಬ್ದಾರಿ ಇದೆ. ಅದೇನೆಂದರೆ, ಹಿಂದೂ ಧರ್ಮದ ಬಗ್ಗೆ ಮಾತನಾಡುವ ಮುನ್ನ ಅದರ ತತ್ವಗಳನ್ನು ಅರ್ಥ ಮಾಡಿಕೊಳ್ಳುವುದು. ಯಾಕೆಂದರೆ, ಕೆಲವು ಪಾಶ್ಚಾತ್ಯ "ವಿದ್ವಾಂಸರು", ಹಿಂದೂ ಧರ್ಮವು ಶ್ರೇಷ್ಠವಲ್ಲ ಎಂಬುದನ್ನು ಪ್ರತಿಪಾದಿಸಲಿಕ್ಕಾಗಿ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರವನ್ನೇ ಮಾಡಿದ್ದಾರೆ. ಅವರು ಬರೆದದ್ದನ್ನೇ ಓದಿಕೊಂಡವರು (ಸಂಸ್ಕೃತದ ಮೂಲಪಠ್ಯಗಳನ್ನು ಓದದವರು) ಆ ಅಪಪ್ರಚಾರವನ್ನೇ ನಂಬಿಕೊಂಡು ಹಿಂದೂ ಧರ್ಮದ ಬಗ್ಗೆ ತಪ್ಪು ಕಲ್ಪನೆಗಳನ್ನು ಬೆಳೆಸಿಕೊಂಡಿದ್ದಾರೆ.
ಅದೃಷ್ಟವಶಾತ್, ಅಂತಹ ತಪ್ಪು ಕಲ್ಪನೆಗಳಲ್ಲಿ ಮುಳುಗಿರುವ ಎಲ್ಲರಿಗೂ ಸತ್ಯ ಏನೆಂದು ತಿಳಿಯಲು ಒಂದು ಸುಲಭದ ದಾರಿ ಇದೆ. ಅದೇನೆಂದರೆ, ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ 1893ರಲ್ಲಿ “ವಲ್ಡ್ ಪಾರ್ಲಿಮೆಂಟ್ ಆಫ್ ರಿಲಿಜಿಯನ್ಸ್”ನಲ್ಲಿ ನೀಡಿದ ಜಗತ್ಪ್ರಸಿದ್ಧ ಉಪನ್ಯಾಸವನ್ನು ಓದುವುದು. ಅದನ್ನೋದಿದ ನಂತರ, ಹಿಂದೂ ವೇದಾಂತವನ್ನು ಅರೆದು ಕುಡಿದು, ಅದನ್ನು ಇಂಗ್ಲಿಷ್ ಭಾಷೆಯಲ್ಲೇ ಜಗತ್ತಿಗೆ ಧಾರೆಯೆರೆದಿರುವ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಮೂಲಭೂತ ತತ್ವಗಳ ಬಗ್ಗೆ ನೀಡಿದ ಇತರ ಉಪನ್ಯಾಸಗಳನ್ನೂ ಓದಿ ಅರ್ಥ ಮಾಡಿಕೊಳ್ಳುವುದು.
ಕೊನೆಗೊಂದು ಮಾತು: ಎಲ್ಲರಿಗೂ ಅವರವರ ಉದಾತ್ತ ನಂಬಿಕೆಗಳಿಗೆ ಅನುಸಾರವಾಗಿ ಬದುಕುವ ಹಕ್ಕು ಇದೆ. ಅದನ್ನು ಎಲ್ಲರೂ ಗೌರವಿಸುವುದೇ ನಾಗರಿಕತೆಯ ಪ್ರಧಾನ ಲಕ್ಷಣ. “ನಿನ್ನ ನಂಬಿಕೆ ತಪ್ಪು. ಯಾಕೆಂದರೆ ನಾನು ಹೇಳುತ್ತಿದ್ದೇನೆ” ಎನ್ನುವುದು ಅನಾಗರಿಕತೆಯ ಲಕ್ಷಣ. ಹಿಂದೂಗಳು ಮುಕ್ಕೋಟಿ ದೇವರನ್ನು ಪೂಜಿಸಲಿ; ಅದು ಅವರ ನಂಬಿಕೆ, ಅದು ಅವರ ಆಚರಣೆ, ಅದು ಅವರ ಬದುಕಿನ ಅವಿಭಾಜ್ಯ ಸಂಗತಿ. "ಸರ್ವ ಧರ್ಮ ಸಮನ್ವಯ”, “ಧಾರ್ಮಿಕ ಸಹಿಷ್ಣುತೆ" ಎಂದೆಲ್ಲ ಮಾತನಾಡುವವರು ಹಿಂದೂಗಳ ಸಾಂವಿಧಾನಿಕ ಹಕ್ಕನ್ನು ಗೌರವಿಸಲೇ ಬೇಕು, ಅಲ್ಲವೇ?
ಫೋಟೋ: ಅಯೋಧ್ಯಾ ನೂತನ ದೇವಸ್ಥಾನದ ಅಲಂಕೃತ ಶ್ರೀರಾಮಲಲ್ಲಾ …ಕೃಪೆ: ಇಂಡಿಯಾ ಟುಡೇ
(ನವಂಬರ್ 2022)