ರಾಮಾಯಣದ ಜೀವನ ಪಾಠಗಳು

ವಾಲ್ಮೀಕಿ ಮಹರ್ಷಿ ಬರೆದ ಶ್ರೀ ರಾಮಾಯಣದ ಕತೆ ನಮಗೆಲ್ಲರಿಗೂ ತಿಳಿದಿದೆ. ಶ್ರೀ ರಾಮನ ರಾಮರಾಜ್ಯವಂತೂ ಜಗತ್ತಿಗೆ ಆದರ್ಶವೆಂದು ಹೆಸರಾಗಿದೆ. ಭರತ ಖಂಡದಲ್ಲಿ ಧರ್ಮಸಂಸ್ಥಾಪನೆ ಮಾಡಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಅನುಕರಣೀಯ ಗುಣಗಳೆಲ್ಲವೂ ಮನೆಮಾತಾಗಿವೆ. ಆ ಮಹಾಕಥನದಿಂದ ನಾವು ಕಲಿಯಬೇಕಾದ ಜೀವನ ಪಾಠಗಳು ಹಲವು. ಈಗಿನ ಬದುಕಿಗೆ ಪ್ರಸ್ತುತವಾದ ಒಂದು ಪಾಠವಂತೂ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ್ದು.

ಅದೇನು? ಮಹಾರಾಜ ದಶರಥನು "ಶ್ರೀ ರಾಮನಿಗೆ ನಾಳೆ ಪಟ್ಟಾಭಿಷೇಕ" ಎಂದು ಘೋಷಿಸಿದ ದಿನ ಏನಾಯಿತೆಂದು ನೆನಪು ಮಾಡಿಕೊಳ್ಳೋಣ. ಭರತನ ತಾಯಿ ಕೈಕೇಯಿಯ ದಾಸಿ ಮಂಥರೆ ಧಾವಿಸಿ ಬಂದು, ಕೈಕೇಯಿಗೆ ಆ ಸುದ್ದಿ ತಿಳಿಸುತ್ತಾಳೆ. "ಹೌದೇನು! ನಾನು ಭರತನಿಗಿಂತಲೂ ಹೆಚ್ಚಾಗಿ ಶ್ರೀ ರಾಮನನ್ನು ಪ್ರೀತಿಸುತ್ತೇನೆ. ಅವನಿಗೆ ನಾಳೆ ಪಟ್ಟಾಭಿಷೇಕ ಆಗುವುದು ಸಂತೋಷದ ಸಂಗತಿ" ಎನ್ನುತ್ತಾಳೆ ಕೈಕೇಯಿ.

ಆದರೆ, ಅದಾಗಲೇ ದುಷ್ಟ ಯೋಚನೆಗಳಲ್ಲಿ ಮುಳುಗಿದ್ದ ಮಂಥರೆ, ಶುದ್ಧ ಮನಸ್ಸಿನ ಕೈಕೇಯಿಯ ತಲೆಯಲ್ಲಿ ಅವನ್ನು ತುಂಬಲು ಶುರು ಮಾಡುತ್ತಾಳೆ. "ಶ್ರೀ ರಾಮ ರಾಜನಾದರೆ, ಅವನ ತಾಯಿ ಕೌಸಲ್ಯೆಯ ದಾಸಿಯರು ನಿನ್ನನ್ನು ಹೀನಾಯವಾಗಿ ಕಾಣುತ್ತಾರೆ. ನಿನ್ನ ಮಗ ಭರತನಿಗಂತೂ ಭವಿಷ್ಯವೇ ಇರುವುದಿಲ್ಲ" ಎಂಬಂತಹ ಮಾತುಗಳಿಂದ ಮತ್ತೆಮತ್ತೆ ಚುಚ್ಚುತ್ತಾಳೆ. ಅವನ್ನು ಕೇಳಿಕೇಳಿ ಕ್ರಮೇಣ ಕೈಕೇಯಿಯ ತಲೆಯಲ್ಲೂ ವಿಷ ತುಂಬಿಕೊಳ್ಳುತ್ತದೆ. "ಹಾಗಾದರೆ ನಾನೀಗ ಏನು ಮಾಡಬೇಕು?" ಎಂದು ಕೇಳುತ್ತಾಳೆ ಕೈಕೇಯಿ.

ಇದೇ ಅವಕಾಶಕ್ಕಾಗಿ ಕಾದಿದ್ದ ಮಂಥರೆ ತಕ್ಷಣವೇ ವಿಷಭರಿತ ಸಲಹೆ ನೀಡುತ್ತಾಳೆ, "ಅಂದೊಮ್ಮೆ ದಶರಥ ಮಹಾರಾಜನಿಗೆ ಯುದ್ಧದಲ್ಲಿ ನೀನು ಸಹಾಯ ಮಾಡಿದ್ದೆ. ಆಗ ನಿನಗೆ ಎರಡು ವರ ನೀಡುವುದಾಗಿ ಮಹಾರಾಜ ಮಾತು ಕೊಟ್ಟಿದ್ದ. ಅವನ್ನು ನೀನು ಈಗ ಕೇಳು. ಮೊದಲನೆಯದು ಭರತನಿಗೆ ನಾಳೆ ಪಟ್ಟಾಭಿಷೇಕ ಮಾಡಬೇಕೆಂದು; ಎರಡನೆಯದು ಶ್ರೀ ರಾಮ ಹದಿನಾಲ್ಕು ವರುಷಗಳ ವನವಾಸಕ್ಕೆ ನಾಳೆಯೇ ಹೊರಡಬೇಕೆಂದು."

ಅದೇ ದಿನ ರಾತ್ರಿ, ದಶರಥ ಮಹಾರಾಜ ಕೈಕೇಯಿಯ ಬಳಿ ಬಂದಾಗ, ಆಕೆ ಇವೆರಡು ವರಗಳನ್ನು ಕೇಳುತ್ತಾಳೆ. ದಶರಥ ಮಹಾರಾಜ ಕುಸಿದು ಬೀಳುತ್ತಾನೆ. ಆತ ಕೈಕೇಯಿಯ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ, "ಭರತನಿಗೆ ಬೇಕಾದರೆ ಪಟ್ಟಾಭಿಷೇಕ ಮಾಡೋಣ. ಆದರೆ, ಶ್ರೀ ರಾಮ ವನವಾಸಕ್ಕೆ ಹೋಗಬೇಕೆಂಬ ಪ್ರಸ್ತಾಪ ಹಿಂತೆಗೆದುಕೊ. ಯಾಕೆಂದರೆ ನಾನು ಶ್ರೀ ರಾಮನನ್ನು ಬಿಟ್ಟು ಬದುಕಿರಲಾರೆ." ಆದರೆ ಕೈಕೇಯಿ ತನ್ನ ಹಠ ಸಾಧಿಸುತ್ತಾಳೆ.

ಮುಂದೇನಾಯಿತೆಂಬುದು ನಮಗೆಲ್ಲರಿಗೂ ಕಣ್ಣಿಗೆ ಕಟ್ಟಿದಂತಿದೆ. ತಂದೆಯ ಮಾತಿನ ಪಾಲನೆಗಾಗಿ ಶ್ರೀ ರಾಮ ವನವಾಸಕ್ಕೆ ಹೊರಡುತ್ತಾನೆ. ಪತ್ನಿ ಸೀತೆ ಅವನನ್ನು ಹಿಂಬಾಲಿಸುತ್ತಾಳೆ. ತಮ್ಮ ಲಕ್ಷ್ಮಣನೂ ಹೋಗುತ್ತಾನೆ. ರಾಜನಾಗಬೇಕಾಗಿದ್ದ ಪುತ್ರ ಶ್ರೀ ರಾಮ ಕಾಡಿನ ಪಾಲಾದ ದುಃಖ ಸಹಿಸಲಾಗದೆ ದಶರಥನ ಮರಣ. ರಾಜ್ಯದ ಸಿಂಹಾಸನವೇರಲು ಸುತಾರಾಂ ಒಪ್ಪದ ಭರತ, ಶ್ರೀ ರಾಮನ ಪಾದುಕೆಗಳನ್ನು ತಂದಿಟ್ಟು, ಶ್ರೀ ರಾಮನ ಹೆಸರಿನಲ್ಲೇ ರಾಜ್ಯವಾಳುತ್ತಾನೆ.  

ಶ್ರೀ ರಾಮ ವನವಾಸಕ್ಕೆ ತೆರಳಿದ ಸಂದರ್ಭವನ್ನು ಪರಿಶೀಲಿಸೋಣ. ಸಂಭ್ರಮ ತುಂಬಿತುಳುಕಾಡುತ್ತಿದ್ದ ಅಯೋಧ್ಯೆ ದುಃಖದ ಕಡಲಿನಲ್ಲಿ ಮುಳುಗುತ್ತದೆ. ಅಯೋಧ್ಯೆಯ ಜನರೆಲ್ಲಾ ಸರಯೂ ನದಿಯ ವರೆಗೆ ಶ್ರೀ ರಾಮನನ್ನು ಹಿಂಬಾಲಿಸುತ್ತಾರೆ. ರಾತ್ರಿ ಕಳೆದು ಬೆಳಗಾಗುವಾಗ ಅಯೋಧ್ಯೆ ಎಂಬ ಸಮೃದ್ಧ ರಾಜ್ಯದ ರಾಜಧಾನಿಯಲ್ಲಿ ಎಲ್ಲವೂ ತಲೆಕೆಳಗಾಗಿತ್ತು. ಗಮನಿಸಿ: ಒಬ್ಬಳು ನೀಚ ಬುದ್ಧಿಯ ದುಷ್ಟ ವ್ಯಕ್ತಿಯ ಕುತಂತ್ರದಿಂದಾಗಿ ಮಹಾಸಾಮ್ರಾಜ್ಯ, ಮಹಾರಾಜ, ಮಹಾಮಂತ್ರಿ, ಮಹಾಸೇನಾನಿ ಸಹಿತ ಸಮಾಜ ಹಾಗೂ ಆಡಳಿತ ವ್ಯವಸ್ಥೆ ಅಸಹಾಯಕವಾಗಿ ತತ್ತರಿಸಿ ಹೋಯಿತು.

ಶ್ರೀ ರಾಮಾಯಣದ ಹತ್ತುಹಲವು ಜೀವನ ಪಾಠಗಳ ಜೊತೆಗೆ ಇಂತಹ ಪಾಠಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ ಅಲ್ಲವೇ? ಅಂದರೆ, ದೊಡ್ಡ ಸಂಸ್ಥೆ, ಕಂಪೆನಿ, ಆಡಳಿತ ವ್ಯವಸ್ಥೆ ಅಥವಾ ದೇಶವನ್ನು ಬುಡಮೇಲು ಮಾಡಲು ವಿಷಪೂರಿತ ಯೋಚನೆ ತುಂಬಿದ ಯಾವುದೇ ಸ್ತರದ ಒಬ್ಬ ವ್ಯಕ್ತಿ ಸಾಕು. ಅಂತಹ ದುಷ್ಟ ಯೋಚನೆಗಳನ್ನು ಶುದ್ಧ ಮನಸ್ಸಿನವರಲ್ಲಿ ತುಂಬಿ, ದುಷ್ಟ ಯೋಜನೆಗಳನ್ನು ಕಾರ್ಯಗತಗೊಳಿಸಲು ತಯಾರು ಮಾಡುವ (ಅಂದರೆ ಬ್ರೈನ್ ವಾಷ್ ಮಾಡುವ) ಅಪಾಯಕಾರಿ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ, ಅಲ್ಲವೇ? ಆದ್ದರಿಂದ ಅಂಥವರ ಜೊತೆ ಅತ್ಯಂತ ಜಾಗರೂಕತೆಯಿಂದ ವ್ಯವಹರಿಸಬೇಕು.

ಸರಿ, ಶ್ರೀ ರಾಮಾಯಣದ ಕತೆಯನ್ನು ನಮ್ಮ ಮಕ್ಕಳಿಗೆ ಕಲಿಸಲು ನಾವೇನು ಮಾಡಿದ್ದೇವೆ? ಈ ಉದ್ದೇಶ ಸಾಧನೆಗೆ ಎರಡು ಸರಳ ದಾರಿಗಳಿವೆ: ಮೊದಲನೆಯದು, ನಮ್ಮ ಮಕ್ಕಳಿಗೆ ನಾಲ್ಕು ವರುಷ ವಯಸ್ಸಾಗುವ ಮುಂಚೆ ಅವರಿಗೆ "ಏಕಶ್ಲೋಕೀ ರಾಮಾಯಣಂ"ಕಂಠಪಾಠ ಮಾಡಿಸುವುದು:
ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ
ವಾಲೀ ನಿಗ್ರಹಣಂ ಸಮುದ್ರ ತರಣಂ ಲಂಕಾಪುರೀ ದಹನಂ
ಪಶ್ಚಾತ್ದ್ರಾವಣ ಕುಂಭಕರ್ಣ ಹನನಂ ಹ್ಯೇತದ್ಧಿ ರಾಮಾಯಣಂ

ಈ ಶ್ಲೋಕದ ಭಾವಾರ್ಥ: ರಾಮ ಕಾಡಿಗೆ ಹೋದದ್ದು - ಚಿನ್ನದ ಜಿಂಕೆಯನ್ನು ಬೇಟಿಯಾಡಿದ್ದು -
ಸೀತೆಯ ಅಪಹರಣವಾದದ್ದು - ಜಟಾಯು ಮರಣವನ್ನಪ್ಪಿದ್ದು - ಸುಗ್ರೀವನೊಂದಿಗೆ ಸಹಚರ್ಯ -
ವಾಲಿಯನ್ನು ಸಂಹರಿಸಿದ್ದು - ಸಾಗರವನ್ನು ದಾಟಿದ್ದು - ಲಂಕೆಯು ಸುಟ್ಟದ್ದು -
ರಾವಣ ಮತ್ತು ಕುಂಭಕರ್ಣರನ್ನು ವಧಿಸಿದ್ದು - ಇವೆಲ್ಲವೂ ಸೇರಿ ಆದುದೇ ರಾಮಾಯಣ

ಎರಡನೆಯ ದಾರಿ, "ಚಿಣ್ಣರ ಚಿತ್ರ ರಾಮಾಯಣ" ಪುಸ್ತಕದ ಒಂದೊಂದು ಪುಟದ ಚಿತ್ರವನ್ನು ಮಕ್ಕಳಿಗೆ ದಿನಕ್ಕೆ ಒಂದರಂತೆ ತೋರಿಸುತ್ತಾ, ಅದರಲ್ಲಿರುವ ಕತೆಯನ್ನು ಅವರಿಗೆ ಓದಿ ಹೇಳುವುದು (ಇದಕ್ಕೆ ಪ್ರತಿ ದಿನ ಹತ್ತು ನಿಮಿಷ ಸಾಕು). ಇದು 1917ರಲ್ಲಿ ಪ್ರಕಟವಾದ ಪುಸ್ತಕ. ಇದರ ಪ್ರತಿ ಪುಟದ ಎಡಭಾಗದಲ್ಲಿ ಆಕರ್ಷಕ ಚಿತ್ರ ಹಾಗು ಬಲಭಾಗದಲ್ಲಿ ಅದರ ಕತೆಯ ಸೊಗಸಾದ ವಿವರಣೆ ಇದೆ. ಈ ವಿವರಣೆ ಬರದವರು ಪ್ರೊ. ಜಿ. ವೆಂಕಟಸುಬ್ಬಯ್ಯ. 128 ಪುಟಗಳ ಈ ಪುಸ್ತಕದಲ್ಲಿರುವ ರಾಮಾಯಣದ 60 ಘಟನೆಗಳ ಚಿತ್ರಗಳೂ ವಿವರಣೆಗಳೂ ಬಹುಕಾಲ ನೆನಪಿನಲ್ಲಿ ಉಳಿಯುತ್ತವೆ. (ಪ್ರಕಾಶಕರು: ಪ್ರಿಸಂ ಬುಕ್ಸ್, ಬೆಂಗಳೂರು, ಬೆಲೆ ರೂ. 160) "ಅಮರ ಚಿತ್ರ ಕತೆ" ಸರಣಿಯ "ರಾಮಾಯಣ" ಪುಸ್ತಕವನ್ನೂ ಮಕ್ಕಳಿಗೆ ಓದಲು ಕೊಡಬಹುದು. ಹೆತ್ತವರು ಈ ಎರಡು ಸರಳ ದಾರಿಗಳ ಮೂಲಕ ಮಕ್ಕಳ ಮನದಲ್ಲಿ ರಾಮಾಯಣದ ಕತೆಯನ್ನು ಬಾಲ್ಯದಲ್ಲೇ ದಾಖಲಿಸಲು ಖಂಡಿತ ಸಾಧ್ಯ.

ಕ್ರಮೇಣ, ಮಕ್ಕಳಿಗೆ ರಾಮಾಯಣದ ವಿವರವಾದ ಕತೆ ತಿಳಿಸಲಿಕ್ಕಾಗಿ ಯಾವುದೇ "ರಾಮಾಯಣ" ಪುಸ್ತಕವನ್ನು ಬೇಸಗೆ ರಜೆಯಲ್ಲಿ ಓದಲು ಕೊಡಬಹುದು. ರಾಜಾಜಿಯವರು ಬರೆದಿರುವ ರಾಮಾಯಣದ ಕತೆ ಸರಳವಾಗಿದೆ. ಅದಲ್ಲದೆ, ಹಲವು ಪ್ರಕಾಶಕರು ರಾಮಾಯಣವನ್ನು ಪುಸ್ತಕವಾಗಿ ಪ್ರಕಟಿಸಿದ್ದಾರೆ. ಮಕ್ಕಳಿಗೆ ಹತ್ತು ವರುಷ ತುಂಬುವ ಮುನ್ನ, ಎರಡು ವರುಷಗಳ ಬೇಸಗೆ ರಜೆಯಲ್ಲಿ ರಾಮಾಯಣದ ಕತೆ ಓದಿ ಹೇಳಿದರೆ, ಅದರ ವಿವರಗಳು ಅವರ ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.

ಹೀಗೆ, ಬಾಲ್ಯದಲ್ಲಿಯೇ ನಮ್ಮ ಮಕ್ಕಳಿಗೆ ರಾಮಾಯಣದ ಕತೆ ತಿಳಿಸಿದರೆ, ಅವರ ಬದುಕಿನುದ್ದಕ್ಕೂ ರಾಮಾಯಣದ ಜೀವನಪಾಠಗಳು ಅವರಿಗೆ ದಾರಿದೀಪವಾಗ ಬಲ್ಲವು.


ಫೋಟೋ: ಶ್ರೀರಾಮ ಮತ್ತು ಸೀತಾದೇವಿಯ ಪ್ರಾಚೀನ ಶಿಲ್ಪ … ಕೃಪೆ: ರೆಡ್ಡಿಟ್
(ಫೆಬ್ರವರಿ - ಮಾರ್ಚ್ 2024)