ಮಕ್ಕಳು ತಮ್ಮ ವರ್ತನೆಗಳನ್ನು, ಧೋರಣೆಗಳನ್ನು ಯಾರಿಂದ ಕಲಿಯುತ್ತಾರೆ? ತಮ್ಮ ಹೆತ್ತವರಿಂದಲೇ ಎಂಬುದು ವೈಜ್ನಾನಿಕ ಸಂಶೊಧನೆಗಳಿಂದ ಮತ್ತೆಮತ್ತೆ ಸಾಬೀತಾಗಿದೆ.
ಆದ್ದರಿಂದ, ಐವತ್ತು ವರುಷ ದಾಟಿದಾಗಲಾದರೂ, ಹೆತ್ತವರು ತಮ್ಮ ಕಳೆದ ಬದುಕನ್ನು ಅವಲೋಕಿಸಬೇಕು. ಆಗ ಬಹುಪಾಲು ಹೆತ್ತವರಿಗೆ, "ಛೇ, ನಮ್ಮ ಮಕ್ಕಳಿಗೆ ಇದನ್ನು ನಾನು ಬಾಲ್ಯದಲ್ಲೇ ಕಲಿಸಬೇಕಾಗಿತ್ತು” ಎಂದು ಅನಿಸಬಹುದು. ಅಂತಹ ಕೆಲವು ಬೆಲೆ ಬಾಳುವ ಬದುಕಿನ ಪಾಠಗಳನ್ನು ಗಮನಿಸೋಣ.
“ನಿನ್ನ ಕ್ಲಾಸಿಗೆ ನೀನೇ ಫಸ್ಟ್ ಬರಬೇಕು” … “ಈ ಸ್ಪರ್ಧೆಯಲ್ಲಿ ನೀನೇ ಫಸ್ಟ್ ಬರಬೇಕು" (ಓಟ, ಆಟ, ಹಾಡುವಿಕೆ, ಸಂಗೀತ, ನೃತ್ಯ ಇತ್ಯಾದಿಗಳಲ್ಲಿ) … "ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಬೇಕು” - ಬಹುಪಾಲು ಹೆತ್ತವರು ಮಕ್ಕಳಿಗೆ ಇಂತಹ ಗುರಿ ಸಾಧನೆಗಾಗಿ ಒತ್ತಡ ಹೇರುತ್ತಾರೆ. ಅದಕ್ಕೆ ಬೇಕಾದ ವ್ಯವಸ್ಥೆಗಳಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಮಕ್ಕಳನ್ನು ಪ್ರೋತ್ಸಾಹಿಸಲೂ ಬಹುದು. ಆದರೆ, ಆ ಗುರಿಗಳನ್ನು ಸಾಧಿಸಿದಾಗ ಮಾತ್ರ, ಮಕ್ಕಳನ್ನು ಮೆಚ್ಚುತ್ತಾರೆ; ಬಹುಮಾನಗಳನ್ನು ನೀಡುತ್ತಾರೆ; ಹಾಡಿ ಹೊಗಳುತ್ತಾರೆ. ಆದರೆ, ಸಾಧನೆಯ ಹಾದಿಯ ಸಣ್ಣಪುಟ್ಟ ಗೆಲುವುಗಳೂ ಸಂಭ್ರಮಿಸಬೇಕಾದವುಗಳೇ ಎಂಬ ಪಾಠವನ್ನು ಕಲಿಸುವುದಿಲ್ಲ. ಇದರಿಂದಾಗಿ, ತಮ್ಮ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳೂ ದೊಡ್ಡ ಗುರಿ ಸಾಧಿಸಲಿಲ್ಲ ಎಂಬ ನಿರಾಶೆಯಿಂದ ಬಳಲುತ್ತಾರೆ. ಇದರ ಬದಲಾಗಿ, ಅವರ ಅತ್ಯುತ್ತಮ ಪ್ರಯತ್ನಕ್ಕೆ ಸಿಕ್ಕ ಫಲವನ್ನು ಸಂಭ್ರಮಿಸುವ ನೂರಾರು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ, ಅಲ್ಲವೇ?
ಕೆಲವು ಮಕ್ಕಳು ಇತರರ ಸಣ್ಣಸಣ್ಣ ಟೀಕೆಗಳಿಗೂ ತಲೆಕೆಡಿಸಿಕೊಳ್ಳುತ್ತಾರೆ. "ಅವನು/ ಅವಳು ನನಗೆ ಹಾಗೆ ಹೇಳಬಹುದಾ?” ಎಂದು ದಿನಗಟ್ಟಲೆ ಪರಿತಪಿಸುತ್ತಾರೆ. ಈ ವರ್ತನೆಯನ್ನು ಅವರು ತಂದೆಯಿಂದ ಅಥವಾ ತಾಯಿಯಿಂದ ಕಲಿತಿರುತ್ತಾರೆ.
ಇದರಿಂದಾಗಿ, ಅವರ ಸಮಯ ಮತ್ತು ಚೈತನ್ಯ ಎರಡೂ ದೊಡ್ಡ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ. ಈ ವರ್ತನೆ ಇರುವ ತಂದೆ ಅಥವಾ ತಾಯಿ, ಇದರ ಬದಲಾಗಿ ಏನು ಮಾಡಬಹುದಾಗಿತ್ತು? ಯಾರಾದರೂ ತಮ್ಮ ಬಗ್ಗೆ ಏನಾದರೂ ಟೀಕೆ ಮಾಡಿದಾಗ ಅದರಲ್ಲಿ ಸತ್ಯಾಂಶ ಏನಾದರೂ ಇದೆಯೇ ಎಂದು ವಿಶ್ಲೇಷಣೆ ಮಾಡಬೇಕಾಗಿತ್ತು; ಆ ಟೀಕೆಯಲ್ಲಿ ಸತ್ಯಾಂಶ ಇದೆ ಎಂದಾದರೆ ಮುಂದೆ ಅಂತಹ ಟೀಕೆಗೆ ಅವಕಾಶ ಸಿಗದಂತೆ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕಾಗಿತ್ತು. ಉದಾಹರಣೆ: “ನೀನು ಯಾವಾಗಲೂ ಒಪ್ಪಿಕೊಂಡ ಕೆಲಸ ಮಾಡೋದಿಲ್ಲ" ಎಂಬ ಟೀಕೆ. ಆ ಟೀಕೆಯಲ್ಲಿ ಸತ್ಯಾಂಶ ಇಲ್ಲ ಎಂದಾದರೆ, ಟೀಕೆ ಮಾಡಿದವರಿಗೆ ಅದನ್ನು ಸ್ಪಷ್ಟವಾಗಿ ತಿಳಿಸಿ, ಆ ಟೀಕೆಯಿಂದಾಗಿ ಟೀಕೆ ಮಾಡಿದವರ ಯೋಗ್ಯತೆ ಜಾಹೀರಾಗಿದೆ ಎಂದು ಯೋಚಿಸ ಬೇಕು ವಿನಃ ತಲೆಕೆಡಿಸಿಕೊಳ್ಳಬಾರದು. (ಯಾಕೆಂದರೆ, ಟೀಕೆ ಮಾಡಿದವರಿಗೂ, ಕೆಲವೇ ದಿನಗಳ ನಂತರ ತಾವು ಮಾಡಿದ ಇಂತಹ ಟೀಕೆಗಳೆಲ್ಲ ನೆನಪೇ ಇರೋದಿಲ್ಲ.) ಇಲ್ಲವಾದರೆ, ಹೆತ್ತವರ ಈ ವರ್ತನೆಯನ್ನು ಮಕ್ಕಳೂ ಕಲಿತು ತಮ್ಮ ಜೀವಮಾನವಿಡೀ ಸಂಕಟ ಪಡಬೇಕಾದಿತು, ಅಲ್ಲವೇ?
ತಮ್ಮ ಮಕ್ಕಳು ಉತ್ತಮ ಅಂಕ ಗಳಿಸಬೇಕು ಎಂಬ ಉದ್ದೇಶದಿಂದ, ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಶಾಲೆಯ ಹೋಂವರ್ಕ್ ಮಾಡಲು ಸಹಾಯ ಮಾಡುತ್ತಾರೆ. ಇದರಿಂದಾಗಿ ಏನಾಗುತ್ತದೆ? ಎಂದು ಆ ಹೆತ್ತವರು ಯೋಚಿಸುವುದಿಲ್ಲ. ಇದರಿಂದಾಗಿ, ಅವರ ಮಕ್ಕಳು ಹಲವು ಪರಿಕಲ್ಪನೆಗಳನ್ನು, ವಿಷಯಗಳನ್ನು ಸ್ವ-ಪಯತ್ನದಿಂದ ಕಲಿಯುವ ಖುಷಿಯಿಂದ ವಂಚಿತರಾಗುತ್ತಾರೆ. ಹಾಗಾಗಿ, ಹೊಸಹೊಸ ವಿಷಯಗಳನ್ನು ತಾವಾಗಿಯೇ ಕಲಿಯುವ ಕುತೂಹಲವನ್ನೂ ಕಳೆದುಕೊಳ್ಳುತ್ತಾರೆ. ನನಗೆ ಪಿಯುಸಿ ಮೊದಲ ವರುಷದಲ್ಲಿ ಗಣಿತದಲ್ಲಿ “ಲಾಗರಿಥಮ್" ಎಂಬುದು ಅರ್ಥವಾಗಿರಲಿಲ್ಲ. ಅದೊಂದು ದಿನ, ನನ್ನ ತಂದೆ ನನಗೆ ಇಂಗ್ಲಿಷಿನ “ಡಿಕ್ಷನರಿ ಆಫ್ ಮೆಥಮ್ಯಾಟಿಕ್ಸ್” ತಂದಿತ್ತರು. ಅವತ್ತೇ ನಾನು ಅದರಲ್ಲಿ ಲಾಗರಿಥಮ್ ಬಗ್ಗೆ ಇದ್ದ ವಿವರಗಳನ್ನು ಓದಿದೆ. ಅದೆಷ್ಟು ಚೆನ್ನಾಗಿ ನನಗೆ ಅರ್ಥವಾಯಿತೆಂದರೆ, ಆ ಖುಷಿ ಈಗಲೂ (52 ವರುಷಗಳ ನಂತರವೂ) ನನಗೆ ಚೆನ್ನಾಗಿ ನೆನಪಿದೆ. ಆದ್ದರಿಂದ, ಸ್ವ-ಪ್ರಯತ್ನದಿಂದ ಕಲಿಯುವ ಖುಷಿಯನ್ನು ಮಕ್ಕಳು ಮತ್ತೆಮತ್ತೆ ಅನುಭವಿಸಲು ಹೆತ್ತವರು ಅವಕಾಶ ನೀಡಬೇಕು, ಅಲ್ಲವೇ?
ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಮಕ್ಕಳಿಗೆ ಗುರಿ ಸಾಧಿಸಲು ಸಾಧ್ಯವಾಗೋದಿಲ್ಲ. ಉದಾಹರಣೆ: ಕ್ಲಾಸಿನಲ್ಲಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸುವುದು; ಶಾಲೆಯ ಬಾಸ್ಕೆಟ್-ಬಾಲ್ ಅಥವಾ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗುವುದು; ಶಾಲೆಯ ವಾರ್ಷಕೋತ್ಸವದ ನಾಟಕ ತಂಡಕ್ಕೆ ಆಯ್ಕೆಯಾಗುವುದು. ಕೆಲವು ಹೆತ್ತವರು, ಅಂತಹ ಸಂದರ್ಭಗಳಲ್ಲಿ ಮಕ್ಕಳ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿ, ಮಕ್ಕಳ "ಸೋಲಿನ" ನೋವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಇದರ ಬದಲಾಗಿ, "ಬದುಕಿನಲ್ಲಿ ಗೆಲುವು ಮುಖ್ಯ, ಆದರೆ ಸೋಲು ಸಹಜ” ಎಂಬುದನ್ನು ಮಕ್ಕಳಿಗೆ ಹೆತ್ತವರು ಮನದಟ್ಟು ಮಾಡಿಸಬೇಕು, ಅಲ್ಲವೇ? ಯಾಕೆಂದರೆ, ಒಂದು ಕ್ಲಾಸಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮೊದಲ ಸ್ಥಾನ ಗಳಿಸಲು ಸಾಧ್ಯವಿಲ್ಲ.
ಕೆಲವರು ಇರುತ್ತಾರೆ - ನೀವು ಏನೇ ಮಾಡಿದರೂ ಅವರು ನಿಮ್ಮನ್ನು ಮೆಚ್ಚುವುದಿಲ್ಲ. ಬದಲಾಗಿ ಅವರು ನಿಮ್ಮನ್ನು ವಿನಾಕಾರಣ ದ್ವೇಷಿಸುತ್ತಾರೆ! ಇಂಥವರು ಹಲವರು ಇರುತ್ತಾರೆ ಎಂಬ ಅರಿವನ್ನು ನಿಮ್ಮ ಮಕ್ಕಳಲ್ಲಿ ಮೂಡಿಸುವುದು ಅಗತ್ಯ. ಈಗಿನ ಸಾಮಾಜಿಕ ಮಾಧ್ಯಮಗಳು ಹುಟ್ಟು ಹಾಕಿರುವ ಒತ್ತಡದ ವಾತಾವರಣದಲ್ಲಂತೂ ಇದು ಅತ್ಯಗತ್ಯ. ಉದಾಹರಣೆ: ಅವನು/ ಅವಳು ಸಂದೇಶಗಳಿಗೆ ಪ್ರತಿಕ್ರಿಯಿಸಿಲ್ಲ; ಅವನು/ ಅವಳು ನನ್ನ ಪೋಸ್ಟ್ಗೆ “ಲೈಕ್" ಹಾಕಿಲ್ಲ. ಅಂಥವರು ಇದ್ದೇ ಇರುತ್ತಾರೆ ಎಂಬ ವಾಸ್ತವವನ್ನು ಒಪ್ಪಿಕೊಂಡು ನಮ್ಮ ಬದುಕಿನಲ್ಲಿ ಮುನ್ನಡೆಯಲು ಕಲಿಯಬೇಕು, ಅಲ್ಲವೇ? ಯಾಕೆಂದರೆ, ನನ್ನ ಬದುಕು ನನ್ನದು. ಪ್ರತಿಯೊಬ್ಬರನ್ನೂ “ಮೆಚ್ಚಿಸುವುದು" ನನ್ನ ಬದುಕಿನ ಉದ್ದೇಶವಲ್ಲ. ಬದಲಾಗಿ, ಪ್ರತಿಯೊಂದು ಕೆಲಸವನ್ನೂ ನನ್ನಿಂದ ಆದಷ್ಟು ಚೆನ್ನಾಗಿ ಮಾಡುವುದು ನನ್ನ ಉದ್ದೇಶ, ಅಲ್ಲವೇ?
ಇವೆಲ್ಲ ಬದುಕಿನ ಅಮೂಲ್ಯ ಪಾಠಗಳು. ಇಂತಹ ಪಾಠಗಳನ್ನು ಮುಂದಿನ ತಲೆಮಾರಿಗೆ ಕಲಿಸುವ ಅವಕಾಶ ಇರುವವರೆಲ್ಲ ಆ ಅವಕಾಶವನ್ನು ಬಳಸಿಕೊಳ್ಳಿ. ಯಾಕೆಂದರೆ, ಈ ತಪ್ಪುಗಳನ್ನು ಆ ಮುಂದಿನ ತಲೆಮಾರಿನವರು ಮಾಡದಂತೆ ತಡೆಯಲು ಸಾಧ್ಯವಾದರೆ, ಅದು ಅವರಿಗೆ ನೀವು ಕೊಡಬಹುದಾದ ಬೆಲೆ ಕಟ್ಟಲಾಗದ ಸಂಪತ್ತು.
(ಡಿಸೆಂಬರ್ 2023)