“ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜೂನ್ 21ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಯೋಗವನ್ನು ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಇದರ ಉದ್ದೇಶ.
ಈ ಹಿನ್ನೆಲೆಯಲ್ಲಿ “ಯೋಗಾಸನಗಳ ಕ್ರಮಬದ್ಧ ಅಭ್ಯಾಸದಿಂದ ಆರೋಗ್ಯ ಉತ್ತಮಪಡಿಸಲು ಸಹಾಯವಾಗುತ್ತದೆಯೇ?” ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳುವುದು ಅಗತ್ಯ.
ನವದೆಹಲಿಯ ಎಐಐಎಂಎಸ್ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ನಮ್ಮ ದೇಶದಲ್ಲಿ ಯೋಗದ ಬಗೆಗಿನ ಸಂಶೋಧನೆಗಳ ಪ್ರಧಾನ ಕೇಂದ್ರವಾಗಿದೆ. ಇಲ್ಲಿ ವೈದ್ಯರು ಮತ್ತು ಸಂಶೋಧಕರು ಯೋಗದ ಚಿಕಿತ್ಸೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಯೋಗ ಚಿಕಿತ್ಸೆಯನ್ನು ಆಧುನಿಕ ಔಷಧಿಗಳ ಜೊತೆ ರೋಗಿಗಳಿಗೆ ನೀಡುವುದು ಮತ್ತು ಕ್ಲಿನಿಕಲ್ ಪ್ರಾಕ್ಟೀಸಿಗಾಗಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು ಇದರ ಉದ್ದೇಶ. ಯೋಗ ಭಾರತದ ಸಾಂಸ್ಕೃತಿಕ ಸೊತ್ತು ಆಗಿದ್ದು, ಎಐಐಎಂಎಸ್ನ ಈ ಸಂಶೋಧನೆಗಳ ಬಗ್ಗೆ ಜಗತ್ತಿನ ಎಲ್ಲೆಡೆಗಳ ವಿಜ್ನಾನಿಗಳೂ ತಜ್ನರೂ ಆಸಕ್ತಿ ತೋರುತ್ತಿದ್ದಾರೆ.
ಎಐಐಎಂಎಸ್ನಲ್ಲಿ 2016ರಲ್ಲಿ ಸಿಐಎಂಆರ್ (ಸೆಂಟರ್ ಫಾರ್ ಇಂಟೆಗ್ರೇಟಿವ್ ಮೆಡಿಸಿನ್ ಆಂಡ್ ರೀಸರ್ಚ್) ಸ್ಥಾಪಿಸಲಾಯಿತು. ಇಲ್ಲಿ ಆಧುನಿಕ ಔಷಧಿಗಳ ಚಿಕಿತ್ಸಕರು ಯೋಗ ಮತ್ತು ಆಯುರ್ವೇದ ಚಿಕಿತ್ಸಕರ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಡಾ. ರಿಮಾ ದಾದಾ ಹಾಗೂ ಇತರ ಸಂಶೋಧಕರೂ ಕಾರ್ಯನಿರತರಾಗಿದ್ದಾರೆ. ಇವರು ಅಂಗರಚನಾ ವಿಜ್ನಾನ ವಿಭಾಗದ ಅಣು ಪುನರುತ್ಪಾದನಾ ಮತ್ತು ತಳಿವಿಜ್ನಾನ ಪ್ರಯೋಗಾಲಯದ ಪ್ರೊಫೆಸರ್. 2008ರಿಂದೀಚೆಗೆ ಇವರು ರುಮಾಟಿಕ್ ಆರ್ಥರೈಟಿಸ್, ಗ್ಲುಕೋಮಾ, ಖಿನ್ನತೆ ಮತ್ತು ಪುರುಷರ “ಬಂಜೆತನ" - ಈ ಅನಾರೋಗ್ಯ ಸಮಸ್ಯೆಗಳ ಮೇಲೆ ಯೋಗದ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದಾರೆ.
ಡಾ. ರಿಮಾ ದಾದಾ ಅವರ ಬಳಿ ಸುಮಾರು ಒಂದು ನೂರು ರೋಗಿಗಳ ಕೇಸ್ ಸ್ಟಡೀಸ್ (ಚಿಕಿತ್ಸಾ ದಾಖಲೆಗಳು) ಇವೆ. ಇವನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ: ಕೇವಲ ಔಷಧಿ ಸೇವಿಸುವ ರೋಗಿಗಳು ಮತ್ತು ಔಷಧಿ ಸೇವನೆ ಜೊತೆ ಯೋಗಾಸನಗಳ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು. ತನ್ನ ಸಂಶೋಧನೆಯ ಅನುಸಾರ, ಯೋಗವು ಅನೇಕ ರೋಗಗಳ ಉಲ್ಬಣತೆಯನ್ನು ಕಡಿಮೆಮಾಡುತ್ತದೆ ಮತ್ತು ಪೂರಕ ಚಿಕಿತ್ಸೆಯಾಗಿ ಇಮ್ಯುನೋಲೋಜಿಕಲ್ ಟಾಲರೆನ್ಸ್ ಅನ್ನು ಪುನರ್-ಸ್ಥಾಪನೆ ಮಾಡುತ್ತದೆ ಎನ್ನುತ್ತಾರೆ ಡಾ. ರಿಮಾ ದಾದಾ.
ಕಳೆದ ವರುಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ “ಮನ್ ಕಿ ಬಾತ್” ರೇಡಿಯೋ ಕಾರ್ಯಕ್ರಮದಲ್ಲಿ ಸಿಐಎಂಆರ್ ಇದರ ಸಾಧನೆಗಳನ್ನು ಪ್ರಸ್ತಾಪಿಸಿದ್ದಾರೆ. "ನಮ್ಮ ಪಾರಂಪರಿಕ ಔಷಧಿ ಪದ್ಧತಿಗಳನ್ನು ಸ್ವೀಕಾರಾರ್ಹ ಆಗಿಸಲಿಕ್ಕಾಗಿ ಸಿಐಎಂಆರ್ ಅನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯ 20 ಸಂಶೋಧನಾ ಪ್ರಬಂಧಗಳು ಅಂತರರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟವಾದ ನಂತರ ಸಂಸ್ಥೆಯು ಪ್ರಸಿದ್ಧಿ ಗಳಿಸಿದೆ" ಎಂದಿದ್ದಾರೆ.
“ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಈ ಎರಡು ಸಿಐಎಂಆರ್ ನಡೆಸಿದ ಅಧ್ಯಯನಗಳನ್ನು ಉದಾಹರಿಸಿದ್ದರು: “ಜರ್ನಲ್ ಆಫ್ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯೋಲಜಿ”ಯಲ್ಲಿ ಪ್ರಕಟವಾದ ಸಿಂಕೊಪೆ ಎಂಬ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಯೋಗದಿಂದಾಗುವ ಪ್ರಯೋಜನಗಳ ಬಗೆಗಿನ ಅಧ್ಯಯನ ವರದಿ ಮತ್ತು “ನ್ಯೂರೋಲಜಿ" ಜರ್ನಲಿನಲ್ಲಿ ಪ್ರಕಟವಾದ ಮೈಗ್ರೇನ್ (ತಲೆನೋವು) ರೋಗಿಗಳಿಗೆ ಯೋಗದಿಂದಾಗುವ ಪ್ರಯೋಜನಗಳ ಬಗೆಗಿನ ಅಧ್ಯಯನ ವರದಿ.
ಹೃದಯದ ಸಮಸ್ಯೆಗಳು, ರಿದಮ್ ಡಿಸ್-ಆರ್ಡರ್, ಖಿನ್ನತೆ, ನಿದ್ದೆಯ ಸಮಸ್ಯೆಗಳು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮತ್ತು ಎಪಿಸೋಡಿಕ್ ಮೈಗ್ರೇನ್ - ಈ ಅನಾರೋಗ್ಯ ಸಮಸ್ಯೆಗಳು ಇರುವವರಿಗೆ ಯೋಗ ಚಿಕಿತ್ಸೆಯ ಪ್ರಯೋಜನಗಳನ್ನು ಸಿಐಎಂಆರ್ ನಡೆಸಿದ ಅಧ್ಯಯನಗಳು ಸಾಬೀತು ಪಡಿಸಿವೆ. ಗರ್ಭಿಣಿ ಮಹಿಳೆಯರಿಗೆ ಗರ್ಭಧಾರಣೆಯ ಅವಧಿಯಲ್ಲಿ ದೇಹದಲ್ಲಿ ಬದಲಾವಣೆಗಳು ಆಗುತ್ತಿರುವಾಗ ಸಮಚಿತ್ತದಿಂದ ಇರಲು ಸಹಾಯ ಮಾಡುವ ಪ್ರಸವಪೂರ್ವ ಯೋಗ ಚಿಕಿತ್ಸೆಯ ಅಧ್ಯಯನಗಳನ್ನೂ ಸಿಐಎಂಆರ್ ಜರಗಿಸಿದೆ.
ಮನುಷ್ಯನ ಬದುಕಿನಲ್ಲಿ ಯೋಗದ ಉಪಯುಕ್ತತೆಯ ಬಗ್ಗೆ ಜಗತ್ತಿನ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ನಡೆಸಿದ ಸಾವಿರಾರು ಅಧ್ಯಯನಗಳ ಫಲಿತಾಂಶಗಳನ್ನು ಇಂಟರ್-ನೆಟ್ನಲ್ಲಿ ಯಾರೂ ಪರಿಶೀಲಿಸಬಹುದು. ಯೋಗಾಭ್ಯಾಸಿಗಳನ್ನು ಯೋಗವು ಆರೋಗ್ಯವಂತ, ಸಮಚಿತ್ತದ, ಚುರುಕಿನ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ ಎಂಬುದಕ್ಕೆ ಲಕ್ಷಗಟ್ಟಲೆ ನಿದರ್ಶನಗಳಿವೆ. ಭಾರತದ ಪ್ರಾಚೀನ ಋಷಿಮುನಿಗಳು ಮಾನವನ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಉನ್ನತಿಗಾಗಿ ನಮಗಿತ್ತಿರುವ ಅದ್ಭುತ ಸಾಧನ ಯೋಗದ ಬಗ್ಗೆ ಅಭಿಮಾನ ಪಡೋಣ.
(ಆಗಸ್ಟ್ 2023)