ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ

ಪುಸ್ತಕ: ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ
ಲೇಖಕರು: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಸಾವಯವ ಕೃಷಿಕ ಗ್ರಾಹಕ ಬಳಗ (ರಿ.), ಮಂಗಳೂರು
ಮೊದಲ ಮುದ್ರಣ: ಅಕ್ಟೋಬರ್ 2022        2ನೇ ಮುದ್ರಣ: ಎಪ್ರಿಲ್ 2023        ಪುಟ: 32         ಬೆಲೆ: ರೂ. 15/-

“ನೀವು ತಿನ್ನುವ ಆಹಾರದಲ್ಲಿ ವಿಷವಿದೆ” ಎಂದಾಗ ಬಹುಪಾಲು ಜನರು “ಇಲ್ಲ, ಸಾಧ್ಯವೇ ಇಲ್ಲ. ನಾವು ಎಷ್ಟೋ ವರುಷಗಳಿಂದ ಒಂದೇ ಮಳಿಗೆಯಿಂದ ಆಹಾರಧಾನ್ಯ ಖರೀದಿಸುತ್ತಿದ್ದೇವೆ. ಅದರಲ್ಲಿ ಯಾವತ್ತೂ ಹುಳ ಆಗಿಲ್ಲ. ಮನೆಯ ಹತ್ತಿರದ ಅಂಗಡಿಯಿಂದಲೇ ತರಕಾರಿ ತರುತ್ತಿದ್ದೇವೆ. ಇಲ್ಲಿಯ ವರೆಗೆ ನಮಗೇನೂ ತೊಂದರೆಯಾಗಿಲ್ಲ” ಎಂದು ವಾದ ಮಾಡುತ್ತಾರೆ.

ಆದರೆ, ಅವರಿಗೆ ತೊಂದರೆಯಾದಾಗ ಕಾಲ ಮಿಂಚಿರುತ್ತದೆ. ವಿಷಭರಿತ ಆಹಾರ ತಿಂದರೆ ಏನಾಗುತ್ತದೆ? ಎಂಬುದಕ್ಕೆ ಇತ್ತೀಚೆಗಿನ ಉದಾಹರಣೆ ಕೊರೋನಾ ವೈರಸ್ (ಕೋವಿಡ್ 19) ಧಾಳಿಯಿಂದಾಗಿ ಲಕ್ಷಗಟ್ಟಲೆ ಜನರ ಸಾವು. 13.09.2022ರ ವರೆಗಿನ ಇದರ ಅಂಕೆಸಂಖ್ಯೆಗಳು ಇಲ್ಲಿವೆ: (ಆಕರ: www.worldometers.info)
                   ಸೋಂಕಿತರ ಸಂಖ್ಯೆ              ನಿಧನರಾದವರ ಸಂಖ್ಯೆ
ಜಗತ್ತಿನಲ್ಲಿ          61,44,04,344            65,18,291
ಭಾರತದಲ್ಲಿ          4,45,04,949              5,28,185

ಈ ಲಕ್ಷಗಟ್ಟಲೆ ಸಾವುಗಳಿಗೆ ಮುಖ್ಯ ಕಾರಣ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು ಎಂಬುದು ನಿರ್ವಿವಾದ. ನಮ್ಮ ದೈಹಿಕ ಆರೋಗ್ಯ ಮತ್ತು ಅದರ ಅಂಗವಾದ ರೋಗನಿರೋಧಕ ಶಕ್ತಿ ನಾವು ತಿನ್ನುವ ಆಹಾರವನ್ನು ಅವಲಂಬಿಸಿರುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆದ್ದರಿಂದ, ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ.

ಆದರೆ, ಬಹಳಷ್ಟು ಜನರಲ್ಲಿ ತಿನ್ನುವ ಆಹಾರದ ಬಗ್ಗೆ ಅಸಡ್ಡೆ. “ಏನನ್ನೋ ತಿಂದರಾಯಿತು; ಹೊಟ್ಟೆ ತುಂಬಿದರಾಯಿತು” ಎಂಬ ಭಾವನೆ. ಇದು ಬಹಳ ಅಪಾಯಕಾರಿ ಎಂಬುದಕ್ಕೆ ಒಂದು ಉದಾಹರಣೆ: ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ” (ರಿ.)ವು ವಿಷಮುಕ್ತ ಊಟದ ಬಟ್ಟಲು ಆಂದೋಲನದ ಒಂದು ವರುಷ ಪೂರೈಸಿದ ಹೊತ್ತಿಗೆ, ಜೂನ್ 2014ರಲ್ಲಿ, ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಸುದ್ದಿ ಬಹಿರಂಗ: ಮ್ಯಾಗಿ ನೂಡಲ್ಸ್ ನಿಷೇಧ. ಯಾಕೆಂದರೆ, ಅದರಲ್ಲಿ ಮಿತಿ ಮೀರಿದ ಸೀಸದ ಅಂಶವಿತ್ತು. ಅದನ್ನು ತಿಂಗಳುಗಟ್ಟಲೆ ತಿಂದು ದೇಹಾರೋಗ್ಯ ಕೆಡಿಸಿಕೊಂಡ ಹಲವರು ಈಗಲೂ ಅದರ ದುಪ್ಷರಿಣಾಮಗಳನ್ನು ಅನುಭವಿಸುತ್ತಿದ್ದಾರೆ.  “ಅಬ್ಬ, ಈ ವಿಷಭರಿತ “ಜಂಕ್ ಫುಡ್” ತೊಲಗಿತು ಎಂದು ಪ್ರಜ್ನಾವಂತರು ನಿಟ್ಟುಸಿರು ಬಿಡುವಾಗ ಅದು ಹೊಸ ಅವತಾರದಲ್ಲಿ ಒಂದು ವರುಷದೊಳಗೆ ಪುನಃ ಮಾರುಕಟ್ಟೆ ಪ್ರವೇಶಿಸಿತು! "ಎರಡೇ ನಿಮಿಷದಲ್ಲಿ ಮ್ಯಾಗಿ ತಿನ್ನಲು ರೆಡಿ” ಎಂಬ ಕಾರಣಕ್ಕಾಗಿ, ಜನರು ಅದರ ಪ್ಯಾಕೆಟುಗಳನ್ನು ಪುನಃ ಖರೀದಿಸಿ, ಬೇಯಿಸಿ, ಚಪ್ಪರಿಸತೊಡಗಿದರು!

“ತಿನ್ನುವ ಆಹಾರದಲ್ಲಿ ವಿಷ ತುಂಬಿದೆ” ಎನ್ನುವಾಗ ಹಲವರು ಅದನ್ನು ನಂಬುವುದಿಲ್ಲ. ಯಾಕೆಂದರೆ, ಖರೀದಿಸುವ ಧಾನ್ಯ, ಸಾಂಬಾರ ಪದಾರ್ಥ, ಸಂಸ್ಕರಿತ ಆಹಾರಗಳ ಪ್ಯಾಕೇಜಿಂಗ್ ಮತ್ತು ಜಾಹೀರಾತುಗಳು ಅವರ ದಾರಿ ತಪ್ಪಿಸುತ್ತವೆ. ಹಾಗೆಯೇ, ತರಕಾರಿಗಳು ಮತ್ತು ಹಣ್ಣುಹಂಪಲುಗಳ ಮೇಲ್ನೋಟದ ತಾಜಾತನ, ಗಾತ್ರ ಮತ್ತು ಅಂದಚಂದ ಅವರ ದಿಕ್ಕು ತಪ್ಪಿಸುತ್ತವೆ.

ಆದ್ದರಿಂದ, ಜನಜಾಗೃತಿ ಮೂಡಿಸಲಿಕ್ಕಾಗಿ “ಸಾವಯವ ಕೃಷಿಕ ಗ್ರಾಹಕ ಬಳಗ" (ರಿ.)ವು ಈ ಪುಟ್ಟ ಪುಸ್ತಕ ಪ್ರಕಟಿಸಿದೆ. ಕೇವಲ ಆರು ತಿಂಗಳುಗಳಲ್ಲಿ ಇದು ಮರುಮುದ್ರಣ ಆಗಿರುವುದು ಇದರಲ್ಲಿರುವ ಮಾಹಿತಿ ಜನೋಪಯೋಗಿ ಎಂಬುದರ ಪುರಾವೆ.

ಇದರಲ್ಲಿ ಐದು ಅಧ್ಯಾಯಗಳಲ್ಲಿ ತಮ್ಮ ಆರೋಗ್ಯರಕ್ಷಣೆಗಾಗಿ ಜನಸಾಮಾನ್ಯರು ತಿಳಿದಿರಲೇ ಬೇಕಾದ ಮಾಹಿತಿಯನ್ನು   ಪ್ರಸ್ತುತಪಡಿಸಲಾಗಿದೆ:
1)ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ
2)ನಮ್ಮ ದಿನನಿತ್ಯದ ಆಹಾರ ಹೇಗಿರಬೇಕು?
3)ಆರೋಗ್ಯಪೂರ್ಣ ಬದುಕಿಗಾಗಿ ಕ್ಯಾನ್ಸರ್ ಬಗ್ಗೆ ಕಟ್ಟೆಚ್ಚರ
4)ನಾವೇನು ಮಾಡಬಹುದು?
5)ಆರೋಗ್ಯಪೂರ್ಣ ಜೀವನಕ್ಕಾಗಿ 8 ಆಹಾರಸೂತ್ರಗಳು

ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ” (ರಿ.)ವು ಕಳೆದ ಹತ್ತು ವರುಷಗಳಿಂದ ಜನರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಮತ್ತು ಆರೋಗ್ಯರಕ್ಷಣೆಗಾಗಿ ಜನರು ಅನುಸರಿಸಲೇ ಬೇಕಾದ ಸೂತ್ರಗಳ ಬಗ್ಗೆ ಜನಸಮುದಾಯದಲ್ಲಿ ಅರಿವು ಮೂಡಿಸುತ್ತಾ ಬಂದಿದೆ. ಜೊತೆಗೆ ಪ್ರತೀ ಭಾನುವಾರ ಬೆಳಗ್ಗೆ 6ರಿಂದ 9 ಗಂಟೆ ತನಕ ಮಂಗಳೂರಿನ ಪಂಜೆ ಮಂಗೇಶ ರಾವ್ ರಸ್ತೆ ಪಕ್ಕದಲ್ಲಿ “ಸಾವಯವ ಸಂತೆ" ಸಂಘಟಿಸಿ, ಸಾವಯವ ಕೃಷಿಕರಿಂದ ಗ್ರಾಹಕರಿಗೆ ಸಾವಯವ ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕೆ ಅನುವು ಮಾಡಿ ಕೊಟ್ಟಿದೆ.

ಇದರೊಂದಿಗೆ, ಸಾವಯವ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರಗಳು, ವಿಷಮುಕ್ತ ಆಹಾರ ಸೇವನೆಯ ಅಗತ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ಮನೆಮದ್ದು ಶಿಬಿರಗಳು, ಆರೋಗ್ಯ ಸಪ್ತಾಹಗಳನ್ನು ಆಗಾಗ ಜರಗಿಸುತ್ತಿದೆ. ಹಲಸು ಮೇಳ, ಸಿರಿಧಾನ್ಯ ಮೇಳ ಮತ್ತು ಬೀಜ ಹಾಗೂ ಸಸಿಗಳ ಮಾರಾಟ ಶಿಬಿರಗಳನ್ನೂ ಸಂಘಟಿಸುತ್ತಿದೆ. “ಕೈತೋಟ ಕ್ರಾಂತಿ” ಅಭಿಯಾನದಲ್ಲಿ 2022ರಲ್ಲಿ ಸುಮಾರು 80 ಉಚಿತ ತರಬೇತಿ ಶಿಬಿರಗಳ ಮೂಲಕ, ಮನೆಯ ಕೈತೋಟ ಅಥವಾ ಚಾವಣಿಯಲ್ಲಿ ತಮ್ಮ ಕುಟುಂಬಕ್ಕೆ ಬೇಕಾದಷ್ಟು ತರಕಾರಿ ಬೆಳೆಯುವ ಬಗ್ಗೆ ಆಸಕ್ತರಿಗೆ ಮಾರ್ಗದರ್ಶನ ನೀಡಿದೆ.

ಇವೆಲ್ಲದಕ್ಕೆ ಪೂರಕವಾಗಿ, ಪ್ರತಿಯೊಬ್ಬರೂ ಓದಿ, ಅನುಸರಿಸಲು ಸಹಾಯವಾಗುವಂತೆ “ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ" ಎಂಬ ಕೈಪಿಡಿಯನ್ನು ಬಳಗವು ಪ್ರಕಟಿಸಿದೆ.