ಉತ್ತರ ಭಾರತ ಪ್ರವಾಸದ ನೆನಪು

ತ್ತು ವರುಷಗಳ ಮುನ್ನ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾಗ...

ನಮ್ಮ ತಂಡದೊಂದಿಗೆ ಢೆಲ್ಲಿಯಿಂದ ಹೃಷಿಕೇಶಕ್ಕೆ ಪ್ರವಾಸ ಬಂದಿದ್ದ ಆ ವೃದ್ಧ ದಂಪತಿ ತಮಿಳ್ನಾಡಿನವರು. ಹಾದಿಯಲ್ಲಿ ಹರಿದ್ವಾರ ತಲಪಿದ ನಾವೆಲ್ಲರೂ ಹೋಟೆಲೊಂದಕ್ಕೆ ಹೋದೆವು. ಕೆಲವರು ಅನ್ನ ಸಹಿತ ಊಟ ತರಿಸಿ ಉಣ್ಣತೊಡಗಿದರು. ವೃದ್ಧ ದಂಪತಿ, ತಾವು ತಂದಿದ್ದ ಬುತ್ತಿ ಬಿಚ್ಚಿ ಚಪಾತಿ ತಿನ್ನುತ್ತಾ ಎರಡು ಕಾಫಿ ತರಿಸಿದರು. ಅವರು ಕಾಫಿ ಕುಡಿದು ಮುಗಿಸಿದಾಗ ಸರ್ವರ್ ಬಿಲ್ ತಂದಿತ್ತ. ಬಿಲ್ ಎಷ್ಟೆಂದು ಕೇಳಿದಾಗ, ಹಿಂದಿಯಲ್ಲಿ "ಬೀಸ್ ರುಪಿಯಾ" ಎಂದು ಉತ್ತರಿಸಿದ. ಅವರಿಗೆ ಅರ್ಥವಾಗಲಿಲ್ಲ. ಸರ್ವರ್ ಕೈಸನ್ನೆ ಮಾಡಿ ತೋರಿಸಿದ. ತಕ್ಷಣ ಅಜ್ಜಿಯ ಮುಖದ ಬಣ್ಣವೇ ಬದಲು. ಆಕೆ ಗಾಬರಿಯಾಗಿ ಕೈಗಳನ್ನಾಡಿಸುತ್ತಾ ತಮಿಳಿನಲ್ಲಿ ಉದ್ಗರಿಸಿದ್ದು, "ಅಬ್ಬಬ್ಬಾ, ಒಂದು ಕಪ್ ಕಾಫಿಗೆ ಹತ್ತು ರೂಪಾಯಿ! ನಮ್ಮ ಕಾಲದಲ್ಲಿ ಒಂದಾಣೆಗೆ ಎರಡು ಕಪ್ ಸಿಗುತ್ತಿತ್ತು." ಅವರಂತಹ ಹಿರಿಯರು ಹಳೆಯ ಕಾಲದ ರೂಪಾಯಿಯ ಪರ‍್ಚೇಸಿಂಗ್ ಪವರಿನ ಗುಂಗಿನಲ್ಲೇ ಇರುತ್ತಾರೆ. ರೂಪಾಯಿಯ ಬೆಲೆ ಕುಸಿದಿರುವುದು ಹೀಗೆ ಗಮನಕ್ಕೆ ಬಂದಾಗ ಅವರಿಗೆ ಆಘಾತ. ಮುಂದೊಂದು ದಿನ ನಮಗೂ ಹೀಗಾಗಬಹುದು, ಅಲ್ಲವೇ?

ಹರಿದ್ವಾರದ ಪ್ರಸಿದ್ಧ ಮಾನಸದೇವಿಯ ದೇವಾಲಯಕ್ಕೆ ಹೋಗುತ್ತಿದ್ದಾಗ ನಡೆದ ಘಟನೆ: ರೋಪ್‍ವೇಯಲ್ಲಿ ಬೆಟ್ಟವೇರಿ ದೇವರ ದರ್ಶನಕ್ಕೆ ಸಾಗುವ ಕ್ಯೂನಲ್ಲಿ ಮುಂದಕ್ಕೆ ಸಾಗುತ್ತಿದ್ದೆವು. ಭಕ್ತಿಭಾವದಿಂದ ಕೈ ಮುಗಿದುಕೊಂಡು ಗರ್ಭಗುಡಿಯತ್ತ ಕ್ಯೂನಲ್ಲಿ ನಡೆಯುತ್ತಿದ್ದರು ಹಲವರು. ದೇವರ ಸ್ತೋತ್ರ ಪಠಿಸುತ್ತಿದ್ದರು ಕೆಲವರು. ಭಜನೆ ಹಾಡುತ್ತಿದ್ದರು ಇನ್ನು ಕೆಲವರು. ಮಾನಸದೇವಿಗೆ ಜಯಕಾರ ಹಾಕುತ್ತಾ ಮುನ್ನಡೆಯುತ್ತಿದ್ದವರೂ ಇದ್ದರು. ಅಲ್ಲಿಯ ಪರಿಸರದಲ್ಲಿ ತುಂಬಿತ್ತು ಭಕ್ತಿಯ ಭಾವಾವೇಶ. ಎಲ್ಲರಲ್ಲಿಯೂ ಪವಿತ್ರ ಭಾವನೆ ಸ್ಪುರಿಸುವಂತಹ ವಾತಾವರಣ ಅಲ್ಲಿತ್ತು.

ಆದರೆ ನಮ್ಮ ಮುಂದೆ ಸಾಗುತ್ತಿದ್ದ ಕಾಲೇಜ್ ಯುವಕರ ಗುಂಪೊಂದು ಇದಕ್ಕೆ ಅಪವಾದ. ಅವರದು ಇಲ್ಲಸಲ್ಲದ ಚೇಷ್ಟೆ. ಕೆಲವರು ವಿಚಿತ್ರವಾಗಿ ನಗುತ್ತಿದ್ದರು. ಇನ್ನು ಕೆಲವರು ವಿನಾಕಾರಣ ಕೇಕೆ ಹಾಕುತ್ತಿದ್ದರು. ಅಲ್ಲಿ ಕ್ಯೂ ಸಾಗುವ ಹಾದಿಯ ಪಕ್ಕದ ಗೋಡೆಗಳಲ್ಲಿ ಸಾವಿರಾರು (ಹಣೆಯ) ಬಿಂದಿಗಳು. ಅವು ಭಕ್ತರಿಂದ ಮಾನಸದೇವಿಗೆ ಸಮರ್ಪಿತವಾದ ಬಿಂದಿಗಳು. ಈ ಗುಂಪಿನ ಕೆಲವರು ಅವನ್ನು ಕಿತ್ತುಕೊಂಡರು. ತಮ್ಮ ಸಂಗಾತಿಯೊಬ್ಬನ ಬೆನ್ನು ತಟ್ಟುತ್ತಾ, ಅವನ ಷರಟಿಗೆ ಆ ಕೆಂಪು ಬಿಂದಿಗಳನ್ನು ಅಂಟಿಸ ತೊಡಗಿದರು. ಅವನ ಬಿಳಿ ಷರಟಿನ ಬೆನ್ನುಭಾಗದಲ್ಲಿ ಹಲವು ಬಿಂದಿಗಳ ರಂಗೋಲಿ. ಅವರೆಲ್ಲ ಅದನ್ನು ನೋಡುತ್ತಾ ಮೋಜಿನಲ್ಲಿ ಮುಳುಗಿದರು. ಅಷ್ಟರಲ್ಲಿ ಅವರೆಲ್ಲ ಮಾನಸದೇವಿಯ ಗರ್ಭಗುಡಿಯ ಎದುರಿಗೇ ಬಂದಿದ್ದರೂ ಅವರ ಮೋಜು ನಿಲ್ಲಲಿಲ್ಲ. ಮುಂದಿನ ಕ್ಷಣದಲ್ಲಿ ಅವರಲ್ಲೊಬ್ಬ ನೆಲದಲ್ಲಿ ಚೆಲ್ಲಿದ್ದ ನೀರಿನ ಮೇಲೆ ಕಾಲಿಟ್ಟು ಜಾರಿ ಬಿದ್ದ. ಅವನ ದವಡೆ ಕಲ್ಲಿಗೆ ಬಡಿದು ಗಾಯವಾಗಿ ಸುರಿಯಿತು ರಕ್ತ. ಈಗ ಅವನ ಷರಟಿನಲ್ಲಿಯೂ ಮೂಡಿತು "ರಕ್ತದ ಬಿಂದಿಗಳ" ರಂಗೋಲಿ. ಇದೆಲ್ಲ ಏನೆಂದು ಅವರಿಗೆ ಅರ್ಥವಾಯಿತೋ ಇಲ್ಲವೋ.... ಆದರೆ ಇದನ್ನೆಲ್ಲ ನೋಡುತ್ತಿದ್ದ ಹಲವರಿಗೆ ಅರ್ಥವಾಗಿತ್ತು.
ನಮ್ಮ ತಂಡ ಬಸ್ಸಿನಲ್ಲಿ ಹರಿದ್ವಾರ ತಲಪಿದಾಗ ನಮಗೊಂದು ಅಚ್ಚರಿ ಕಾದಿತ್ತು. ಹರಿದ್ವಾರದ ಗಂಗಾಘಾಟ್‍ನಲ್ಲಿ ಗಂಗಾನದಿಯೇ ಇರಲಿಲ್ಲ! ಗಂಗಾಸ್ನಾನಕ್ಕಾಗಿ ಕಾತರಿಸುತ್ತಿದ್ದವರೆಲ್ಲ ಕಂಗಾಲಾದರು. ಅಷ್ಟರಲ್ಲಿ ಬಸ್ಸಿನ ಸಹಾಯಕ ವಿಷಯವೇನೆಂದು ಕೇಳಿ ಬಂದು ತಿಳಿಸಿದ. ಹಿಂದಿನ ದಿನ ಗಂಗಾನದಿಯ ಪಥ ಬದಲಾಯಿಸಿದ್ದರು! ಅಲ್ಲಿ ಅಪರೂಪಕ್ಕೊಮ್ಮೆ ಹಾಗೆ ಮಾಡುತ್ತಾರಂತೆ. ಗಂಗಾನದಿಗೆ ಅಡ್ಡವಾಗಿರುವ ಗೇಟುಗಳನ್ನು ತೆರೆದಿಟ್ಟಾಗ ಗಂಗಾನದಿ ಬಲಕ್ಕೆ ತಿರುಗಿ ತನ್ನ ಪ್ರಾಕೃತಿಕ ಪಥದಲ್ಲಿ ಹರಿಯುತ್ತದೆ. ಆ ಗೇಟುಗಳನ್ನು ಮುಚ್ಚಿದಾಗ, ನೇರವಾಗಿ ಗಂಗಾಘಾಟ್‍ಗೆ ಹರಿಯುತ್ತದೆ.

ಅಂತೂ ಗಂಗಾನದಿಯ ದಡ ತಲಪಿದೆವು. ಅಲ್ಲಿ ನೀರು ಕಲುಷಿತ. ಪರಿಸರವೆಲ್ಲ ಹೊಲಸು. ಗಂಗಾಸ್ನಾನಕ್ಕಾಗಿ ಕಾದಿದ್ದವರು ಆ ನೀರನ್ನು ನೋಡಿ ಒಮ್ಮೆ ಹಿಂಜರಿದರೂ ಮತ್ತೆ ಸ್ನಾನಕ್ಕಿಳಿದರು. ಅಲ್ಲಿನ ನೀರಿನಲ್ಲಿ ಸ್ನಾನ ಮಾಡಿ ಮೈ ಕೊಳೆ ಕಳೆಯುವಂತಿರಲಿಲ್ಲ. ಆದರೂ ಸಾವಿರಾರು ಜನರು ಗಂಗಾಸ್ನಾನ ಮಾಡುತ್ತಿದ್ದಾರಲ್ಲ! ಏನಿದರ ಅರ್ಥ? ಗಂಗಾನದಿ ಬದುಕಿನ ನಿರಂತರ ಪ್ರವಾಹದ ಸಂಕೇತವಾದರೆ, ಗಂಗಾಸ್ನಾನ ಅಂತಃಕರಣ ಶುದ್ಧಿಯ ಸಂಕೇತವಲ್ಲವೇ? ದಿನದಿನವೂ ಒಳ್ಳೆಯ ಯೋಚನೆಗಳಲ್ಲಿ ಮುಳುಗಿ ಏಳುವುದೇ ಗಂಗಾಸ್ನಾನವಲ್ಲವೇ? ದಿನನಿತ್ಯವೂ ಒಳ್ಳೆಯ ಕೆಲಸಗಳನ್ನು ಮಾಡುವುದೇ ಪುಣ್ಯ ಗಳಿಕೆಯ ಸಾಧನವಲ್ಲವೇ?

ಉಜ್ಜಯಿನಿಯ ದೇವಾಲಯಗಳನ್ನು ನೋಡಿ, ಮರುದಿನ ಭೋಪಾಲಕ್ಕೆ ಬಂದಿದ್ದೆವು. "ನಿಮಗೆ ಬಿಸಿಬಿಸಿ ಇಡ್ಲಿ ಕೊಡಿಸುತ್ತೆನೆ" ಇಂದು ಅಲ್ಲೊಂದು ಜಾಗಕ್ಕೆ ಕರದೊಯ್ದ ನಮ್ಮ ಟ್ಯಾಕ್ಸಿ ಚಾಲಕ. ಅಲ್ಲಿ ಸಾಲಾಗಿ ನಿಂತಿದ್ದವು ನಾಲ್ಕು ಚಕ್ರಗಳ "ಗಾಡಿ ಹೋಟೆಲ್‍ಗಳು." ಹಿಂದಿ ಭಾಷೆಯಲ್ಲಿ ವಿಚಾರಿಸಿದಾಗ, "ಇಡ್ಲಿ ಎಲ್ಲ ಮುಗಿದಿದೆ. ಬಿಸಿಬಿಸಿ ದೋಸೆ ಮಾಡಿ ಕೊಡ್ತೇನೆ" ಎಂದ ಒಬ್ಬಾತ. "ಇಡ್ಲಿಯೇ ಬೇಕು" ಎಂದಾಗ, ಅವನ ಪ್ರಶ್ನೆ "ನೀವು ಎಲ್ಲಿಯವರು?" ನಾವು ಕರ್ನಾಟಕದ ಮಂಗಳೂರಿನವರು ಎನ್ನುತ್ತಲೇ ಆತ ಮುಗುಳ್ನಕ್ಕು, "ನಾನು ಕೇರಳದವನು. ಹತ್ತು ನಿಮಿಷದಲ್ಲಿ ದೋಸೆ ಹಿಟ್ಟಿನಲ್ಲಿ ಇಡ್ಲಿ ಮಾಡಿಕೊಡ್ತೇನೆ. ತಿಂದು ಹೋಗಿ" ಎಂದು ಒತ್ತಾಯಿಸಿದ. ಒಲೆ ಹಚ್ಚಿ, ಇಡ್ಲಿ ಪಾತ್ರೆಯಲ್ಲಿ ದೋಸೆ ಹಿಟ್ಟನ್ನೇ ಹೊಯ್ದು ಇಡ್ಲಿ ಬೇಯಲಿಟ್ಟ. ಹತ್ತೇ ನಿಮಿಷಗಳಲ್ಲಿ ಇಡ್ಲಿ ತಯಾರು. ಒಂದೊಂದು ತಟ್ಟೆಗೆ ನಾಲ್ಕು ಇಡ್ಲಿ ಮತ್ತು ಸಾಂಬಾರು ಹಾಕಿ ನಮಗೆ ನಗುನಗುತ್ತಾ ಕೊಟ್ಟ. ಹಲವು ದಿನಗಳ ಬಳಿಕ ಇಡ್ಲಿ ತಿನ್ನುತ್ತಿದ್ದಂತೆ ಹಲವು "ಸ್ಟಾರ್ ಹೋಟೆಲ್‍ಗಳ" ಕಹಿ ಅನುಭವಗಳ ನೆನಪು. ಅಲ್ಲಿನ ಗಲ್ಲಾದಲ್ಲಿ ಕೂತವರಿಗೂ ಈ "ಗಾಡಿ ಹೋಟೆಲಿನ" ಬಡ ಮಾಲೀಕನಿಗೂ ಎಂತಹ ವ್ಯತ್ಯಾಸ!