ಪುಸ್ತಕ: ಕೃಷಿ ಸಿರಿ
ಸಂಪಾದಕರು: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ರಾಜ್ಯಮಟ್ಟದ ಕೃಷಿ ಮೇಳ ಆಯೋಜನಾ ಸಮಿತಿ, ಕೊಲ್ನಾಡು-ಮುಲ್ಕಿ, ದಕ್ಷಿಣ ಕನ್ನಡ
ಪ್ರಕಟಣೆ: 2022 ಪುಟ: 100 ಬೆಲೆ: ರೂ. 100/-
ಭಾರತದ ಕೃಷಿರಂಗ ಚರಿತ್ರೆಯಲ್ಲೇ ಕಂಡುಕೇಳರಿಯದ ಸಂಧಿಕಾಲವನ್ನು ಎದುರಿಸುತ್ತಿದೆ. ಒಂದೆಡೆ ಹವಾಮಾನದ ವೈಪರೀತ್ಯಗಳು ಸ್ಫೋಟಕ ಸ್ಥಿತಿ ತಲಪಿದ್ದು, ಕೃಷಿಕರ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡುತ್ತಿವೆ. ಇನ್ನೊಂದೆಡೆ, ಕೊರೋನಾ ವೈರಸ್ (ಕೋವಿಡ್ ೧೯) ಹೊಸಹೊಸ ರೂಪಾಂತರಿಗಳ ಮೂಲಕ ಮತ್ತೆಮತ್ತೆ ದಾಳಿ ಮಾಡುತ್ತಿದೆ. ಇದರಿಂದಾಗಿ ಭಾರತ ಸಹಿತ ಇಡೀ ಜಗತ್ತು ತಲ್ಲಣಿಸಿದೆ.
ಭಾರತದ ಜನಸಂಖ್ಯೆ 144 ಕೋಟಿ ದಾಟಿದೆ. ಇಂತಹ ಅಗಾಧ ಜನಸಾಗರಕ್ಕೆ ಆಹಾರ ಒದಗಿಸುವ ಪುಣ್ಯದ ಕಾಯಕವನ್ನು ಮಾಡುತ್ತಿರುವವರು ಕೃಷಿಕರು. ಅವರನ್ನು ಅನ್ನದಾತರೆಂದು ಗೌರವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಆದರೆ, ಕೃಷಿಕರಿಗೆ ಸಿಗೋದು ಹೀನಾಯ ಮಾತ್ರವಲ್ಲ ವಿವಿಧ ರೀತಿಯ ಶೋಷಣೆ. ಇದರಿಂದಾಗಿಯೇ, 2001 - 2011ರ ದಶಕದಲ್ಲಿ 85 ಲಕ್ಷ ರೈತರು ಕೃಷಿ ತೊರೆದಿದ್ದಾರೆ ಮಾತ್ರವಲ್ಲ ಕೃಷಿಕರ ಮಕ್ಕಳು ಕೃಷಿಯಿಂದ ದೂರ ಸರಿಯುತ್ತಿದ್ದಾರೆ.
ಭಾರತದ ಅಪರಾಧ ದಾಖಲೆ ಬ್ಯುರೋ (ಎನ್.ಸಿ.ಆರ್.ಬಿ.) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ 1995ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 2,96,438. ಇದು ರೈತರ ಹತಾಶೆಯ ಸೂಚಕ, ಅಲ್ಲವೇ?
ಇದು, ಯಾವುದೇ ದೇಶ ಆತಂಕ ಪಡಬೇಕಾದ ಅಂಕಿಅಂಶಗಳು. ಆದ್ದರಿಂದಲೇ ನಮ್ಮ ದೇಶದ ರೈತರ ಆದಾಯವನ್ನು ಈ ವರುಷ ಇಮ್ಮಡಿಗೊಳಿಸುವ ಬಗ್ಗೆ ಮಾನ್ಯ ಪ್ರಧಾನಮಂತ್ರಿಯವರು ಕಳೆದ ಏಳು ವರುಷಗಳಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಈ ನಿಟ್ಟಿನಲ್ಲಿ, ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜ್ಯಾರಿಗೊಳಿಸಿದೆ.
ಕೃಷಿಯಲ್ಲಿ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂಬುದನ್ನು ಲಕ್ಷಗಟ್ಟಲೆ ಕೃಷಿಕರು ಮತ್ತೆಮತ್ತೆ ಸಾಧಿಸಿ ತೋರಿಸಿದ್ದಾರೆ. ಇದಕ್ಕಾಗಿ ಅವರು ಅನುಸರಿಸಿದ ಕಾರ್ಯತಂತ್ರಗಳನ್ನು ಪರಿಶೀಲಿಸಿದರೆ, ಮೂರು ಕಾರ್ಯತಂತ್ರಗಳು ಎದ್ದು ಕಾಣಿಸುತ್ತವೆ: ಬಹುಬೆಳೆಗಳ ಬೇಸಾಯ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟಜಾಲ.
ಮಾರಾಟಗಾರಿಕೆಯಂತೂ ಕೃಷಿಯ ಲಾಭ ಹೆಚ್ಚಿಸಬಲ್ಲ ಪರಿಣಾಮಕಾರಿ ದಾರಿ. ಕೃಷಿಕರಿಗೆ ಸಿಗಬೇಕಾಗಿದ್ದ ಲಾಭವನ್ನು ಬಾಚಿಕೊಳ್ಳುತ್ತಿರುವವರು ಮಧ್ಯವರ್ತಿಗಳು. ಯಾವುದೇ ಕೃಷಿ ಉತ್ಪನ್ನದ ಬೆಲೆ ಪರೀಕ್ಷಿಸಿ: ಗ್ರಾಹಕ ಪಾವತಿಸುವ ಬೆಲೆ, ಕೃಷಿಕನಿಗೆ ಸಿಗುವ ಬೆಲೆಯಿಂದ ಕನಿಷ್ಠ ನಾಲ್ಕು ಪಟ್ಟು ಜಾಸ್ತಿ! ಈ “ಹೆಚ್ಚಿನ ಬೆಲೆ” ಎಲ್ಲವೂ ಮಧ್ಯವರ್ತಿಗಳ ಪಾಲು! ಇದನ್ನು ತಪ್ಪಿಸಲು ಇರುವ ಪ್ರಧಾನ ತಂತ್ರ: ಕೃಷಿಕನಿಂದ ಅಥವಾ ಕೃಷಿಕರ ತಂಡಗಳಿಂದ ಗ್ರಾಹಕರಿಗೆ ನೇರ ಮಾರಾಟ. ಇದಕ್ಕೆ ನಿದರ್ಶನಗಳು ಸಾವಿರಾರು. “ಸಾವಯವ ಕೃಷಿಕ ಗ್ರಾಹಕ ಬಳಗ” ಇದು ಪರಿಣಾಮಕಾರಿ ಪರಿಹಾರವೆಂದು ಕಳೆದ ಹತ್ತು ವರುಷಗಳಿಂದ ಮಂಗಳೂರಿನಲ್ಲಿ ಸಾಧಿಸಿ ತೋರಿಸಿದೆ. ಪ್ರತಿ ಭಾನುವಾರ ಬೆಳಗ್ಗೆ 6ರಿಂದ 9 ಗಂಟೆ ಅವಧಿಯಲ್ಲಿ ಬಳಗದ ಸಾವಯವ ಸಂತೆಗೆ ಕೃಷಿಕರು ತರುವ ಉತ್ಪನ್ನವೆಲ್ಲ ಮಾರಾಟ. ಈಗಿನ ಇಂಟರ್-ನೆಟ್ ಯುಗದಲ್ಲಿ ಪ್ರತಿ ಕೃಷಿಕ ಅಥವಾ ಕೃಷಿಕರ ತಂಡ ತನ್ನದೇ ಗ್ರಾಹಕರ ಬಳಗ ಸಂಘಟಿಸಿ, ಅವರಿಗೆ ಕೃಷಿ ಉತ್ಪನ್ನಗಳ ಮಾಹಿತಿ ನೀಡುವುದು ಬಹಳ ಸುಲಭ.
ಕೃಷಿಕರು ತಮ್ಮ ಉದ್ಧಾರಕ್ಕಾಗಿ ಈ ಮೂರು ದಾರಿಗಳನ್ನು ಅನುಸರಿಸಲು ಅವರಿಗೆ ಬೇಕಾದ್ದೇನು? ಮಾಹಿತಿ ಮತ್ತು ಭಂಡವಾಳ. ಇವೆರಡೂ ಇವತ್ತು ಕೃಷಿಕರಿಗೆ ಬೆರಳ ತುದಿಯಲ್ಲೇ ಲಭ್ಯ. ಒಂದು ಮೊಬೈಲ್ ಫೋನ್, ಕೃಷಿಯಲ್ಲಿ ಯಶಸ್ಸಿನ ಬಾಗಿಲನ್ನೇ ತೆರೆಯುತ್ತದೆ. ಕೃಷಿಕರಿಗೆ ಪ್ರಯೋಜನಕಾರಿಯಾದ ನೂರಾರು ವೆಬ್ ಸೈಟುಗಳು, ಆಪ್ ಗಳು ಉಚಿತವಾಗಿ ಸಿಗುತ್ತಿವೆ. ಭಂಡವಾಳವಂತೂ ರಾಷ್ಟ್ರೀಕೃತ ಬ್ಯಾಂಕುಗಳ, ಸಹಕಾರಿ ಸಂಘಗಳ ಮತ್ತು ಸ್ವಸಹಾಯ ಸಂಘಗಳ ಮೂಲಕ ಖಂಡಿತವಾಗಿ ಲಭ್ಯ.
ಈ ನಿಟ್ಟಿನಲ್ಲಿ, ಕೃಷಿಕರಿಗೆ ಕೃಷಿಲೋಕದ ಹೊಸ ಸಾಧ್ಯತೆಗಳನ್ನು ಪರಿಚಯಿಸಿ, ಕೃಷಿಯಿಂದ ಲಾಭ ಗಳಿಸುವ ದಾರಿಗಳ ಬಗ್ಗೆ ಸಾಚಾ ಮಾಹಿತಿ ಒದಗಿಸುವ ಪ್ರಧಾನ ಉದ್ದೇಶದಿಂದ ರೂಪಿಸಲಾದ ಸಂಪುಟ - “ಕೃಷಿ ಸಿರಿ 2022”. ದಕ್ಷಿಣ ಕನ್ನಡದ ಮಂಗಳೂರಿನ ಹತ್ತಿರದ ಕೊಲ್ನಾಡಿನಲ್ಲಿ ಜರಗಿದ ಮೂರು ದಿನಗಳ (14 -16 ಜನವರಿ 2022) ರಾಜ್ಯಮಟ್ಟದ ಕೃಷಿಮೇಳದ ಸಂದರ್ಭದಲ್ಲಿ ಇದು ಲೋಕಾರ್ಪಣೆಯಾಯಿತು.