ಇಪ್ಪತ್ತು ವರುಷಗಳ ಮುಂಚೆ ಆಂಧ್ರಪ್ರದೇಶದ ಗುಂಟೂರಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಮಂಗಳೂರಿನಿಂದ ಹೊರಟು, ಮದ್ರಾಸಿನಲ್ಲಿ ರೈಲು ಬದಲಾಯಿಸಿ, ಗುಂಟೂರಿನತ್ತ ಸಾಗಿದ್ದೆ.
ಸುಮಾರು ಸಾವಿರ ಕಿಲೋಮೀಟರ್ ದೂರದ ಗುಂಟೂರನ್ನು ಅಪರಾಹ್ನ ತಲಪಿದಾಗ ಗೆಳೆಯ ನೆಟ್ಟಾರ್ ಎದುರಾದರು. ಅವರ ಜೊತೆ ದಕ್ಷಿಣ ಕನ್ನಡದವರ ಹೋಟೆಲಿಗೆ ಹೋಗಿ, ಬಿಸಿಬಿಸಿ ಇಡ್ಲಿ ತರಿಸಿದೆ - ಜೊತೆಯಲ್ಲೇ ಸಾಸರ್ ತುಂಬಾ ಚಟ್ನಿ. ತಕ್ಷಣವೇ ಬಕೆಟ್ನಲ್ಲಿ ಸಾಂಬಾರು ತಂದ ಸರ್ವರ್ "ಸಾಂಬಾರ್, ಸಾಂಬಾರ್" ಎನ್ನುತ್ತಾ ಬಕೆಟಿಗೆ ಸೌಟು ಬಡಿದು ಸದ್ದು ಮಾಡಿದ. "ಇದೇನು?" ಎಂದು ನೆಟ್ಟಾರರನ್ನು ಕೇಳಿದೆ. ಕೂಡಲೇ ಆ ಸರ್ವರ್ ’ಓ, ನೀವು ಊರಿನವರಾ" ಅಂತಂದು ನಗುತ್ತಾ ಅತ್ತ ಹೋದ. "ಇಲ್ಲಿನ ಕ್ರಮ ಹೀಗೆ. ಒಂದು ಇಡ್ಲಿ ತಿನ್ನಲು ಇಲ್ಲಿನವರಿಗೆ ಒಂದು ಸಾಸರ್ ಚಟ್ನಿ ಮತ್ತು ನಾಲ್ಕು ಸೌಟು ಸಾಂಬಾರ್ ಬೇಕಾಗುತ್ತದೆ" ಎಂದು ನೆಟ್ಟಾರರಿಂದ ವಿವರಣೆ. ಚಟ್ನಿಯಲ್ಲಿ ಇಡ್ಲಿ ಅದ್ದಿ ಬಾಯಿಗಿಟ್ಟೆ. ಬಾಯೊಳಗೆ ಬೆಂಕಿಯಿಟ್ಟಾಂತಾಯಿತು; ಉರಿ ತಡೆಯಲಾಗದೆ "ಹೋ" ಎಂದೆ. "ಮಾರಾಯರೇ, ಹೇಳಲು ಮರೆತೇ ಹೋಯ್ತು. ಇಲ್ಲಿನ ಚಟ್ನಿ ಉರಿ ಖಾರ, ಹಾಗೆಲ್ಲಾ ತಿನ್ನಬೇಡಿ" ಎಂದು ಎಚ್ಚರಿಸಿದರು ನೆಟ್ಟಾರ್. ಎರಡು ಲೋಟ ನೀರು ಕುಡಿದರೂ ತಗ್ಗದ ಉರಿ. ಅನ್ನನಾಳಕ್ಕೇ ಕಿಚ್ಚಿಟ್ಟ ಅನುಭವ. "ಮಜ್ಜಿಗೆ, ಮಜ್ಜಿಗೆ" ಎಂದು ಕೂಗಿ ನೆಟ್ಟಾರ್ ಮಜ್ಜಿಗೆ ತರಿಸಿದರು. ಐಸ್ ಹಾಕಿದ್ದ ಮಂದ ಮಜ್ಜಿಗೆ. ನಿಧಾನವಾಗಿ ಹೀರಿದೆ. ರುಚಿಯಾಗಿತ್ತು. ಇನ್ನೊಂದು ಗ್ಲಾಸ್ ಮಜ್ಜಿಗೆ ತರಿಸಿ ಸವಿದೆ. ಮರುದಿನದಿಂದ ಪ್ರತಿದಿನವೂ ಬೆಳಿಗ್ಗೆ ಇಡ್ಲಿ ಜೊತೆ ಎರಡು ಗ್ಲಾಸ್ ಮಜ್ಜಿಗೆ ಕುಡಿಯತೊಡಗಿದೆ. ಗುಂಟೂರಿನ ಚಟ್ನಿಯ ಸಹವಾಸ ಅಂದಿಗೇ ಬಿಟ್ಟುಬಿಟ್ಟೆ.
ಮೊದಲ ದಿನ ಸಂಜೆ ಪೇಟೆ ಸುತ್ತಾಡಿ, ಅನಂತರ ಊಟಕ್ಕೆ ಹೋಟೆಲಿಗೆ ಹೋದೆವು. ಗಲ್ಲಾದಲ್ಲಿ ಕೂತಿದ್ದ ಮಾಲೀಕರ ಪರಿಚಯ ಮಾಡಿಸಿದರು ನೆಟ್ಟಾರ್. ಅಲ್ಲಿ ಮಜ್ಜಿಗೆಯಲ್ಲೇ ಅನ್ನ ಉಣ್ಣಬೇಕೆಂದೂ, ಬೇಕಾದಷ್ಟು ಮಜ್ಜಿಗೆ ಪಡೆಯಲು ಈ ಪರಿಚಯ ಅವಶ್ಯವೆಂದೂ ತಿಳಿಸಿದರು. ಊಟದ ಬಟ್ಟಲು ಬಂದಾಗ ತೊವ್ವೆ, ಚಟ್ನಿ, ಪಲ್ಯ, ಸಾಂಬಾರ್ ಎಲ್ಲವೂ ಪ್ರಚಂಡ ಖಾರ ಎಂದು ಎಚ್ಚರಿಸಿದರು. ನಾಲ್ಕು ದಿನಗಳ ಬಳಿಕವೇ ನಾನು ಅವನ್ನೆಲ್ಲ ನಾಲಿಗೆಯ ತುದಿಗೆ ತಗಲಿಸಿ ಖಾರದ ಅಂದಾಜು ಮಾಡುವ ಧೈರ್ಯ ಮಾಡಿದೆ. ಊಟದ ಮೇಜಿನಲ್ಲಿ ಎರಡು ಗಾಜಿನ ತಟ್ಟೆಗಳಿದ್ದವು. ಒಂದರಲ್ಲಿ ಕೆಂಪು ಅಂಟು ಪದಾರ್ಥ. ಇನ್ನೊಂದರಲ್ಲಿ ನಸು ಕಂದು ಬಣ್ಣದ ಪುಡಿ. ಅವೆರಡೂ ನಮಗೆ "ನಿಷಿದ್ಧ" ಎಂದರು ನೆಟ್ಟಾರ್. ನನ್ನ ಪ್ರಶ್ನಾರ್ಥಕ ನೋಟ ನೋಡಿ, ಅವು ಮೆಣಸು ಚಟ್ನಿ ಮತ್ತು ಖಾರದ ಪುಡಿ ಎಂದು ತಿಳಿಸಿದರು. ತಟ್ಟೆಯಲ್ಲಿದ್ದ ಅನ್ನವನ್ನೆಲ್ಲ ಮಜ್ಜಿಗೆಯಲ್ಲೇ ಕಲಸಿ ಊಟ ಮುಗಿಸಿದ್ದಾಯಿತು.
ಮಂಗಳೂರಿನಿಂದ ಹೊರಡುವ ಮುನ್ನ ನಮ್ಮ ಆಫೀಸಿನಲ್ಲಿದ್ದ ಆಂಧ್ರದ ಗೆಳೆಯರೊಂದಿಗೆ ಕೇಳಿದ್ದೆ, "ಗುಂಟೂರು ಹೇಗಿದೆ?" ಅಲ್ಲಿನ ಬಿಸಿಲಿನ ಬಗ್ಗೆ ಅವರಿತ್ತ ಎಚ್ಚರಿಕೆ, "ಅಲ್ಲಿ ಬಿಸಿಲಿನ ಝಳಕ್ಕೆ ಪ್ರತಿ ವರುಷವೂ ಬಹಳ ಜನ ಸಾಯ್ತಾರೆ. ನೀವಂತೂ ಅಲ್ಲಿ ಬಿಸಿಲಿನಲ್ಲಿ ಅಡ್ಡಾಡಲೇ ಬಾರದು."
ಗುಂಟೂರಿಗೆ ಹೋದ ದಿನವೇ ನನಗೆ ಅವರ ಮಾತಿನ ಬಿಸಿ ತಗಲಿತ್ತು - ಅಲ್ಲಿನ ಸೆಕೆಯಿಂದಾಗಿ. ಅಲ್ಲಿ ಬೇಸಿಗೆಯಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯ ತನಕ ಬಿಸಿಲ ಧಗೆಯಿಂದಾಗಿ ಹೊರಹೋಗುವುದೇ ಕಷ್ಟ. ಆ ಅವಧಿಯಲ್ಲಿ ಗುಂಟೂರಿನ ಮಾರುಕಟ್ಟೆಯಲ್ಲಿ, ಅಂಗಡಿಗಳಲ್ಲಿ ಗ್ರಾಹಕರು ವಿರಳ. ಅದರಿಂದಾಗಿ ಕೆಲವು ವ್ಯಾಪಾರಿಗಳಂತೂ ಆ ಅವಧಿಯಲ್ಲಿ ತಮ್ಮ ಅಂಗಡಿಗಳನ್ನು ತೆರೆಯುತ್ತಲೇ ಇರಲಿಲ್ಲ. ಆಫೀಸಿಗೆ ಹೋಗುವವರು ಬೆಳಿಗ್ಗೆ ೧೦ ಗಂಟೆಗೆ ಊಟ ಮಾಡಿ, ಕೆಲಸಕ್ಕೆ ಹಾಜರಾಗುತ್ತಿದ್ದರು. ಅಲ್ಲಿನ ಹೋಟೆಲುಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿಂದಲೇ ಊಟ ಲಭ್ಯವಿರುತ್ತಿತ್ತು. ಆಫೀಸಿನಲ್ಲಿ ಅಥವಾ ಮನೆಯಲ್ಲಿ ಕುಳಿತಿದ್ದರೆ ಹೊತ್ತೇರಿದಂತೆಯೇ ನಮ್ಮ ಉಡುಪು ಬಿಸಿಯೇರುವುದು ನಮ್ಮ ಗಮನಕ್ಕೆ ಬರುತ್ತಿತ್ತು.
ಬೇಸಿಗೆಯಲ್ಲಿ ನಡುಮಧ್ಯಾಹ್ನದಿಂದ ಅಪರಾಹ್ನ ೨ ಗಂಟೆಯ ವರೆಗೆ ನಮ್ಮನ್ನು ಹಬೆಯಲ್ಲಿ ಹಾಕಿದಂತಿರುತ್ತಿತ್ತು. ಆ ಹೊತ್ತಿನಲ್ಲಿ ಪರವೂರಿನವರು ಗುಂಟೂರಿನಲ್ಲಿ ಬಿಸಿಲಿನಲ್ಲಿ ಅರ್ಧ ತಾಸು ನಡೆದಾಡಿದರೆ ಬಿಸಿಲಿನ ತಾಪದಿಂದ ಮೂರ್ಛೆ ತಪ್ಪಿ ಬಿದ್ದಾರು. ಅದಕ್ಕಾಗಿ ಬಿಸಿಲಿನಲ್ಲಿ ಪ್ರಯಾಣ ಮಾಡುವುದಿದ್ದರೆ ಅಥವಾ ನಡೆಯುವುದಿದ್ದರೆ ತಲೆಗೆ ಟೊಪ್ಪಿ ಹಾಕಿಕೊಳ್ಳಲೇ ಬೇಕು. ಗಂಟೆಗೊಮ್ಮೆ ನಿಂಬೆಹಣ್ಣಿನ ಷರಬತ್ತು ಅಥವಾ ಉಪ್ಪು ಬೆರೆಸಿದ ಸೋಡಾ ಅಥವಾ ಹೂಜಿಯ ತಂಪು ನೀರು ಕುಡಿಯಲೇ ಬೇಕು. ಆಗಾಗ ತಣ್ಣೀರನ್ನು ಮುಖಕ್ಕೆ ಎರಚಿಕೊಳ್ಳುವುದು, ಊಟದಲ್ಲಿ ಮೊಸರಿಗೆ ಅರ್ಧ ಚಮಚ ಉಪ್ಪು ಬೆರೆಸಿ ತಿನ್ನುವುದು - ಇಂತಹ ಮುಂಜಾಗರೂಕತೆ ವಹಿಸದೆ ಸುಡು ಬಿಸಿಲಿಗೆ ಹೊರಬಂದರೆ ಬಿಸಿಲಿನ ಝಳಕ್ಕೆ (ಸನ್ ಸ್ಟ್ರೋಕ್ಗೆ) ಬಲಿಯಾಗಬೇಕಾದೀತು. ಸನ್ಸ್ಟ್ರೋಕ್ ಹೇಗಾಗುತ್ತದೆಂದು ಹೇಳುವಂತಿಲ್ಲ. ಬಿಸಿಲಿಗೆ ಬಸವಳಿದ ಶರೀರದ ಆಧಾರ ವ್ಯವಸ್ಥೆಗಳೆಲ್ಲವೂ ಒಂದೇಟಿಗೆ ಸೋತು, ವ್ಯಕ್ತಿ ಕುಸಿಯುತ್ತಾನೆ. ತಕ್ಷಣವೇ ದೇಹದ ವ್ಯವಸ್ಥೆಗಳನ್ನು ಪುನಶ್ಚೇತನಗೊಳಿಸುವ ಚಿಕಿತ್ಸೆ ದೊರೆಯದಿದ್ದರೆ ಜೀವ ಉಳಿಸುವುದು ಕಷ್ಟಸಾಧ್ಯ.
ಗುಂಟೂರು ದೊಡ್ಡ ವ್ಯಾಪಾರೀ ಕೇಂದ್ರ. ಅಲ್ಲಿ ದಿನನಿತ್ಯ ಕೈಬದಲಾಗುವ ಹಣದ ಮೊತ್ತ ಕೋಟಿಕೋಟಿ ರೂಪಾಯಿಗಳು. ಸುತ್ತಮುತ್ತಲಿನ ಪ್ರದೇಶದಲ್ಲಿ ತಂಬಾಕು ಮುಖ್ಯ ಬೆಳೆ. ಗುಂಟೂರು- ವಿಜಯವಾಡ ರಸ್ತೆಯಲ್ಲಿ, ತಂಬಾಕು ಖರೀದಿಸಿ, ಪರಿಷ್ಕರಿಸಿ, ರಫ್ತು ಮಾಡುವ ಹಲವಾರು ಘಟಕಗಳಿವೆ. ಅಲ್ಲಿ ಕೃಷಿಗೆ ಪೂರಕವಾದ ಉದ್ದಿಮೆಗಳೂ ಇವೆ. ಪ್ರಮುಖವಾದದ್ದು ಕೀಟನಾಶಗಳ ಉತ್ಪಾದನೆ. ಗುಂಟೂರಿನ ಹೊರವಲಯದಲ್ಲಿದ್ದ ಇಂತಹ ಘಟಕಗಳ ಸಂಖ್ಯೆ ೬೦. ಗುಂಟೂರು ಪೇಟೆಯಲ್ಲಿ ಕೀಟನಾಶಕಗಳ ವ್ಯಾಪಾರದ್ದೇ ಬಿರುಸು. ಒಂದೇ ರಸ್ತೆಯಲ್ಲಿ ಎಣಿಸಿದಾಗ ಕೀಟನಾಶಕಗಳನ್ನು ಮಾರಾಟ ಮಾಡುವ ೪೨ ಅಂಗಡಿಗಳಿದ್ದವು.
ಅಗ್ರಹಾರಗಳು ಗುಂಟೂರಿನ ಜನನಿಬಿಡ ಪ್ರದೇಶಗಳು. ಅಗ್ರಹಾರಗಳಲ್ಲಿ ಅಗಲ ಕಿರಿದಾದ ರಸ್ತೆಗಳಿಂದ ಒಡೆದು ಹೋಗುವ ಹಲವು ಓಣಿಗಳು. ರಸ್ತೆಗಳ ಇಕ್ಕಡೆಗಳಲ್ಲಿ ಹಾಗೂ ಓಣಿಗಳಲ್ಲಿ ಅಲ್ಲಲ್ಲಿ ಕೊಳೆತು ನಾರುವ ಕಸಕಡ್ಡಿ. ಕೊಚ್ಚೆ ತುಂಬಿದ ಚರಂಡಿಗಳಲ್ಲಿ ಅಲ್ಲಲ್ಲಿ ನಿಂತು ನಾರುವ ನೀರು. ಅಲ್ಲಿನವರಿಗೆ ಇವೆಲ್ಲದರ ಗೊಡವೆಯೇ ಇಲ್ಲ. ರಸ್ತೆಯ ಬದಿಯಲ್ಲಿಟ್ಟು ಮಾರುವ ಇಡ್ಲಿ, ವಡೆ, ಸಿಹಿತಿಂಡಿಗಳು, ಹಣ್ಣುಗಳು - ಇವನ್ನೆಲ್ಲ ಖರೀದಿಸಿ, ಮುತ್ತಿರುವ ನೊಣಗಳನ್ನು ಜಾಡಿಸಿ, ಮೆಲ್ಲುತ್ತಿದ್ದರು. ಅಲ್ಲಿನ ಓಣಿಗಳಲ್ಲಿ ನಡೆಯುವುದೂ ಅಪಾಯ. ಒಂದೆಡೆ ಕೊಚ್ಚೆಗೆ ಕಾಲಿಟ್ಟು ಜಾರಿ ಬೀಳುವ ಅಪಾಯ, ಇನ್ನೊಂದೆಡೆ ಮಹಡಿಗಳ ಮೇಲಿನಿಂದ ಮಹಿಳೆಯರು ಕೆಳಗೆಸೆಯುವ ಬುಟ್ಟಿತುಂಬ ಕೊಳೆತ ಬಟಾಟೆ, ಕ್ಯಾಬೇಜ್ ಸಿಪ್ಪೆ ನಮ್ಮ ಮೈ ಮೇಲೆ ಬೀಳುವ ಅಪಾಯ.
ಗುಂಟೂರಿನವರ ಕೈಯಲ್ಲಿ ದುಡ್ಡು ಜೋರಾಗಿ ಓಡಾಡುತ್ತದೆ. ಚೆನ್ನಾಗಿ ಗಳಿಸುತ್ತಾರೆ, ಗಡದ್ದಾಗಿ ಖರ್ಚು ಮಾಡುತ್ತಾರೆ. ಮದುವೆಗೆ ಹಾಗೂ "ಪಾರ್ಟಿ"ಗಳಿಗೆ ಕೈಬಿಟ್ಟು ವೆಚ್ಚ ಮಾಡುತ್ತಾರೆ. ಸಣ್ಣಪುಟ್ಟ ಕಾರಣಗಳಿಗೂ ಪಾರ್ಟಿ ಕೇಳುತ್ತಾರೆ. ಸಂಗಡಿಗರ ಒತ್ತಾಯಕ್ಕೆ ಕಟ್ಟುಬಿದ್ದು ಪಾರ್ಟಿಯ ಹೆಸರಿನಲ್ಲಿ ದುಂದು ವೆಚ್ಚ ಮಾಡುವುದೇ ಅಲ್ಲಿನವರಿಗೊಂದು ಷೋಕಿ.
ಅಲ್ಲಿ ಹಲವು ಸಮಾರಂಭಗಳು ರಸ್ತೆಯಲ್ಲೇ ನಡೆಯುವುದನ್ನ್ಜು ಕಂಡೆ - ಮಗುವಿನ ನಾಮಕರಣ, ಹೆಣ್ಣು ಮೈನೆರೆತದ್ದು, ಮದುವೆ. ಇವೆಲ್ಲ ಸಂದರ್ಭಗಳಲ್ಲಿ ರಸ್ತೆಯಲ್ಲಿ ಷಾಮಿಯಾನ ಹಾಕಿ, ಕುರ್ಚಿಗಳನ್ನು ಜೋಡಿಸಿ, ರಸ್ತೆ ಬಂದ್ ಮಾಡುತ್ತಿದ್ದರು. ಆ ರಸ್ತೆಯಲ್ಲಿ ಹಾದು ಹೋಗಬೇಕಾದವರಲ್ಲರೂ, ವಾಹನಗಳನ್ನು ಹಿಂದಕ್ಕೆ ತಿರುಗಿಸಿ, ಬೇರೆ ರಸ್ತೆಯಲ್ಲಿ ಸಾಗುತ್ತಿದ್ದರು.
ಈಗ, ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಆಗಿರುವಾಗ, ದಶಕಗಳ ಮುಂಚೆ ಅಲ್ಲಿ ಹತ್ತು ದಿನಗಳನ್ನು ಕಳೆದದ್ದು ನೆನಪಾಯಿತು.