ಚದುರಂಗದ ನೆನಪುಗಳು


    ನನಗೆ ಚದುರಂಗದ ನಂಟು ಬೆಳೆದದ್ದು  ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ೧೯೭೩ರಲ್ಲಿ  ಕಲಿಯುತ್ತಿದ್ದಾಗ. ಅಲ್ಲಿ ನಾವಿದ್ದ ರೂಮ್ ’ಕಾರ್ನರ್ ರೂಂ’ ಎಂದೇ ಪರಿಚಿತ. ಯಾಕೆಂದರೆ ಅದು ಆಯತಾಕಾರದ  ಹಾಸ್ಟೆಲ್ ಕಟ್ಟಡದ ಮೊದಲ ಮಹಡಿಯ ಮೂಲೆಯ ಕೋಣೆ. ವಿಶಾಲವಾದ ಆ ಕೋಣೆಯಲ್ಲಿ ನಾವು ಹನ್ನೆರಡು ವಿದ್ಯಾರ್ಥಿಗಳ ಸಹ-ವಾಸ.
 
    ರಾತ್ರಿ ಊಟವಾದ ಬಳಿಕ ಹೊತ್ತು ಕಳೆಯಲು ಈಗಿನಂತೆ ಆಗ ಟೆಲಿವಿಷನ್ ಹಾಗೂ ನೂರಾರು ಟಿವಿ-ಚಾನೆಲ್‍ಗಳು ಇರಲಿಲ್ಲ. ರೂಂಮೇಟ್ ಸಿದ್ಧಯ್ಯನಿಂದ ನನಗೆ ಪ್ರತಿದಿನ ಆಹ್ವಾನ, "ಒಂದಾಟ ಚೆಸ್ ಆಡೋಣ, ಬನ್ನಿ". ಮಂಚದಲ್ಲಿ  ಎದುರುಬದುರು ಕೂತು, ನಡುವೆ ಚದುರಂಗದ ಹಾಸು ಹಾಸಿ, ನಮ್ಮಿಬ್ಬರ ಚದುರಂಗದ ಆಟ ಶುರು. ತುಸು ಹೊತ್ತಿನಲ್ಲಿ ನಮ್ಮ ಆಟಕ್ಕೆ ರಂಗೇರುತ್ತಿತ್ತು. " ಓ, ಒಂಟೆ ಹೋಯ್ತು",  "ಛೇ, ಆನೆ ಬಿತ್ತು" ಎಂಬ ನಮ್ಮ ಉದ್ಗಾರದಿಂದಾಗಿ ಇತರ ರೂಂಮೇಟ್‍ಗಳಿಗೆ ಕುತೂಹಲ.

    "ನಿದ್ದೆ ಮಾಡ್ಬೇಕು ಕಣ್ರಪೋ, ಬೇಗ ಲೈಟ್ ಆರಿಸಿ" ಎನ್ನುತ್ತಿದ್ದ ರೂಂಮೇಟ್‍ಗಳೂ ತಮ್ಮ ಮಂಚದಿಂದ ಎದ್ದು ಬರುತ್ತಿದ್ದರು . ನನ್ನ ಮಂಚದ ಪಕ್ಕದ ಮಂಚದಲ್ಲಿ ಕುಳಿತು, ತಾವೂ ಚದುರಂಗದಾಟದ ನಡೆಗಳ ಗುಂಗಿನಲ್ಲಿ ಮುಳುಗುತ್ತಿದ್ದರು. ಕೆಲವು ದಿನ ನಡುರಾತ್ರಿಯ ವರೆಗೂ ನಮ್ಮ ಆಟ ಸಾಗಿದ್ದುಂಟು. ಕೆಲವರಾಗಲೇ ಮುಸುಕಿನೊಳಗೆ ಗೊರಕೆ ಹೊಡೆಯುತ್ತಿದ್ದರು. ಆಟ ಮುಗಿಯುವವರೆಗೆ ಎಚ್ಚರವಿದ್ದವರು, ಆಟದ ನಡೆಗಳನ್ನು ಚರ್ಚಿಸುತ್ತಲೇ ನಿದ್ದೆಗೆ ಜಾರುತ್ತಿದ್ದರು.
 
ಕ್ರಮೇಣ ಚದುರಂಗದ ಗೀಳು ಹತ್ತಿತು ನನಗೆ. ಪಾಠಕ್ಕಿಂತಲೂ ಚದುರಂಗದಾಟವೇ ಹೆಚ್ಚಿನ ಹೊತ್ತು ಕಬಳಿಸತೊಡಗಿತು. ಮಧ್ಯಾಹ್ನ ಬೇಗನೇ ಊಟ ಮುಗಿಸಿ, ಚದುರಂಗದ ಆಟವಾಡಲು ಕೂತು ಬಿಡುತ್ತಿದ್ದೆ! ಆಗ ನನ್ನ ಎದುರಾಳಿ ಐ.ಎಂ. ಶಿವಕುಮಾರ್. ಅವರು ಕಾಲೇಜು ಬಸ್ಸಿನಲ್ಲಿ ಪ್ರತಿದಿನ ಮನೆಯಿಂದ ಕಾಲೇಜಿಗೆ ಬಂದು ಹೋಗುತ್ತಿದ್ದವರು. ಹಾಗಾಗಿ ಆಟಕ್ಕೆ ಅವರಿಗೆ ಮಧ್ಯಾಹ್ನವೇ ಪುರುಸೊತ್ತು (ಸಂಜೆ ನನ್ನೊಂದಿಗೆ ಆಟಕ್ಕೆ ಕುಳಿತರೆ ಮನೆಗೆ ಕರೆದೊಯ್ಯುವ ಕಾಲೇಜ್ ಬಸ್ ತಪ್ಪುತ್ತಿತ್ತು.) ಮಧ್ಯಾಹ್ನದ ಊಟದ ಬಳಿಕ, ೧೫ ನಿಮಿಷಗಳ ಅವಧಿಯಲ್ಲಿ ಒಂದೆರಡು ಮಿಂಚಿನ ಚದುರಂಗದಾಟ. ಅಂದರೆ ಲೈಟ್ನಿಂಗ್ ಚೆಸ್. ಹತ್ತು ಸೆಕೆಂಡಿಗೆ ಒಂದರಂತೆ ಅದರ ನಡೆಗಳು, ಎರಡು-ಮೂರು ನಿಮಿಷಗಳಲ್ಲೇ ಒಂದಾಟ ಮುಕ್ತಾಯ.

    ಬೆಳೆಯುತ್ತಲೇ ಸಾಗಿತು ನನ್ನ ಚದುರಂಗದ ಗೀಳು. ಐದಾರು ಚದುರಂಗದ ಪುಸ್ತಕಗಳ ಖರೀದಿ. ಅವುಗಳಲ್ಲಿ ದಾಖಲಾದ ಚದುರಂಗದ ಆಟಗಳ ಅಧ್ಯಯನ. ಒಂದೊಂದು ಆಟವೂ ಹೊಸತೊಂದು ಅನುಭವ. ಹಾಸ್ಟೆಲಿನಲ್ಲಿ ಹಾಗೂ ಕಾಲೇಜಿನಲ್ಲಿ ಚದುರಂಗದ ಸ್ಪರ್ಧೆಗಳಲ್ಲಿ ಗೆಲುವು. ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ಬಿ.ಎಸ್ಸಿ. (ಕೃಷಿ) ಪದವಿ ಕಲಿಕೆ ಮುಗಿಸಿ, ಮಂಗಳೂರಿಗೆ ಮರಳಿದರೂ ನಾನು ಚದುರಂಗ ಬಿಡಲಿಲ್ಲ. ೧೯೭೮ರಲ್ಲಿ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಕೃಷಿ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿಕೊಂಡ ಬಳಿಕವೂ ನನ್ನ ಚದುರಂಗದ ನಂಟು ಮುಂದರಿಕೆ. ಬ್ಯಾಂಕಿನ ಚದುರಂಗದ ಸ್ಪರ್ಧೆಗಳಲ್ಲೂ ಗೆಲುವು. ೧೯೮೦ರಲ್ಲಿ ಚದುರಂಗದಾಟ ಸಾಕೆನಿಸಿತು.

ಈಗ ನಾನು ಚದುರಂಗದ ಆಟವಾಡದಿದ್ದರೂ, ಮೂವತ್ತು ವರುಷಗಳ ಮುಂಚಿನ ನೆನಪುಗಳಿಗೆ ಕೊರತೆಯಿಲ್ಲ. ಅವುಗಳಲ್ಲೊಂದು ಚದುರಂಗದ ಪುಸ್ತಕವೊಂದರಲ್ಲಿ "ಜಗತ್ತಿನ ಅತ್ಯಂತ ಚುಟುಕಿನ ಚದುರಂಗದಾಟ"ದ ನಡೆಗಳನ್ನು ಓದಿದಾಗ ಉಂಟಾದ ಅಚ್ಚರಿ. ಕೇವಲ ಆರು ನಡೆಗಳಲ್ಲಿ ಮುಗಿಯುವ ಆಟ!

ಚದುರಂಗಲೋಕದ ಅಪ್ಪಟ ಪ್ರತಿಭಾವಂತ ಅಮೆರಿಕದ ಬಾಬ್ಬಿ ಫಿಷರ್ ಆಗ ನನ್ನಂಥವರಿಗೆ ವಿಸ್ಮಯದ ವ್ಯಕ್ತಿ. ೨೦೦೮ರಲ್ಲಿ ಕೊನೆಯುಸಿರೆಳೆದ ಅವರ ಬದುಕೇ ನಿಗೂಢ. ಅವರ ಚದುರಂಗದ ನಡೆಗಳಂತೆ ಅವರ ಬದುಕಿನ ನಡೆಗಳೂ ವಿಚಿತ್ರ. ಕೊನೆಯ ವರೆಗೂ ವಿವಾದಾತ್ಮಕ ವ್ಯಕ್ತಿಯಾಗಿಯೇ ಬಾಳಿದವರು. ಕೃಷಿ ಕಾಲೇಜಿನ ಗ್ರಂಥಾಲಯದಲ್ಲಿತ್ತು ಬಾಬ್ಬಿ ಫಿಷರ್ ಬರೆದ ಪುಸ್ತಕ, "ಬಾಬ್ಬಿ ಫಿಷರ್ ಟೀಚಸ್ ಚೆಸ್". ಅದರಲ್ಲಿದ್ದ ಎಲ್ಲವೂ ಕೇವಲ ಎರಡು ನಡೆಗಳಲ್ಲಿ ಮುಗಿಯುವ ಚದುರಂಗದ ಆಟಗಳು. ಆ "ಸಮಸ್ಯಾ ಆಟಗಳ" ಉತ್ತರ ತಿಳಿಯಬೇಕಾದರೆ ಪುಸ್ತಕವನ್ನು ತಲೆಕೆಳಗಾಗಿ ತಿರುಗಿಸಿ ಓದಿಕೊಳ್ಳಬೇಕಾಗಿತ್ತು.

ರಷ್ಯಾ ದೇಶದಲ್ಲಿ ಪರಿಣತ ಚದುರಂಗದ ಆಟಗಾರರ ಸಂಖ್ಯೆ ಇತರ ದೇಶಗಳಿಗೆ ಹೋಲಿಸಿದಾಗ ಬಹಳ ಜಾಸ್ತಿ. ಇದ್ಯಾಕೆ ಹೀಗೆ? ಎಂಬ ಕುತೂಹಲ ನನಗೆ. ಅಲ್ಲಿ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ವ್ಯವಸ್ಥಿತವಾಗಿ ಚದುರಂಗದ ತರಬೇತಿ ನೀಡುತ್ತಾರೆಂಬ ಮಾಹಿತಿ ನನ್ನ ಕುತೂಹಲಕ್ಕೆ ತೆರೆ ಎಳೆದಿತ್ತು. ಚದುರಂಗದ ಹಾಸು ಹಾಗೂ ಕಾಯಿಗಳಿಲ್ಲದೆ, ಕೇವಲ ಬಾಯ್ಮಾತಿನಲ್ಲೇ ಚದುರಂಗದ ನಡೆಗಳನ್ನು ಹೇಳುತ್ತಾ ಚದುರಂಗದಾಟ ಆಡುವ ತರಬೇತಿಯನ್ನೂ ಅಲ್ಲಿನ ಮಕ್ಕಳಿಗೆ ನೀಡುತ್ತಾರಂತೆ.

ನಮ್ಮ ವಿಶ್ವನಾಥನ್ ಆನಂದ್ ಚದುರಂಗದ ವಿಶ್ವ ಚಾಂಪಿಯನ್ ಆದದ್ದು ನಮಗೆಲ್ಲರಿಗೂ ಅಭಿಮಾನದ ಸಾಧನೆ. ಅವರ ಬೆನ್ನಲ್ಲೇ ಕೊನೇರು ಹಂಪಿ ಮತ್ತಿತರ ಅಗ್ರಗಣ್ಯ ಚದುರಂಗ ಪಟುಗಳು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿರುವುದು ನಮಗೆಲ್ಲ ಹೆಮ್ಮೆ. ಇವರೆಲ್ಲ ಚದುರಂಗದ ತವರೂರಾದ ಭಾರತಕ್ಕೆ ಚದುರಂಗದ ಲೋಕದಲ್ಲಿ ಮಾನ್ಯತೆ ತಂದಿತ್ತ ಧನ್ಯರು.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಏಕಕಾಲದಲ್ಲಿ ಇಪ್ಪತ್ತು-ಇಪ್ಪತ್ತೈದು ಎದುರಾಳಿಗಳೊಂದಿಗೆ ಚದುರಂಗದ ಸ್ಪರ್ಧೆಗಿಳಿಯುವ ಪರಿಣತರು ನನಗೆ ಜಾದೂಗಾರರಂತೆ ಕಾಣಿಸುತ್ತಿದ್ದರು.

ಅದೇ ರೀತಿಯಲ್ಲಿ ನಾವೆಲ್ಲರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಆಡುತ್ತಿದ್ದೇವೆ - ಬದುಕಿನ ಚದುರಂಗದಾಟವನ್ನು, ಅಲ್ಲವೇ? ಯಾವಾಗ ನಮ್ಮಾಟ ಮುಗಿಯುತ್ತದೋ, "ಚೆಕ್‍ಮೇಟ್" ಆಗುತ್ತದೋ, ನಮಗ್ಯಾರಿಗೂ ಗೊತ್ತಿಲ್ಲ. ಅದಕ್ಕೇ ಬದುಕಿನ ಚದುರಂಗ ದಿನದಿಂದ ದಿನಕ್ಕೆ ನಿಗೂಢ.

ಚದುರಂಗದ ಕೊನೆಯ ಹಂತದಲ್ಲಿ ಅಳಿದುಳಿದ ಎದುರಾಳಿ "ಕಾಲಾಳು"ಗಳು "ಮಂತ್ರಿ"ಯಾಗಲು ಮುನ್ನುಗ್ಗುತ್ತವೆ. ನಾವೂ ಹಾಗೆಯೇ, ಅಲ್ಲವೇ? ಕೆಲವೊಮ್ಮೆ ಬದುಕಿನಲ್ಲಿ ಅಂತಹ ಚಮತ್ಕಾರದ ರೂಪಾಂತರದಲ್ಲಿ ಯಶಸ್ವಿಯಾಗುತ್ತೇವೆ. ಆದರೆ ಕೆಲವೊಮ್ಮೆ "ಮಂತ್ರಿಯಾದ ಕಾಲಾಳು" ಮರುನಡೆಯಲ್ಲೇ ಮುಗ್ಗರಿಸುವಂತೆ, ಬದುಕಿನಲ್ಲಿಯೂ ಗೆದ್ದು ಸೋಲುತ್ತೇವೆ.

ಚದುರಂಗದ "ಕುದುರೆ"ಯಿಂದ ನಾವು ಬದುಕಿನಲ್ಲಿ ದೊಡ್ಡ ಪಾಠ ಕಲಿಯಬಹುದು. ಚದುರಂಗದಾಟದಲ್ಲಿ ಹಾರಿಕೊಂಡು ಹೋಗಬಲ್ಲ ಏಕೈಕ ಸರದಾರ "ಕುದುರೆ". ಒಂದು ದಿಕ್ಕಿನಲ್ಲಿ ಎರಡು ಚೌಕ, ಅನಂತರ ಎಡ ಅಥವಾ ಬಲಕ್ಕೆ ಅದರ ಮುನ್ನಡೆ. ಅನೇಕ ಸಲ, ಚಕ್ಕನೆ ಜಿಗಿದು ಎದುರಾಳಿ ರಾಜನಿಗೆ ಒದೆ ನೀಡಲು ಹೊಂಚು ಹಾಕುವ ಕುದುರೆಯಿಂದ ಆ ರಾಜ ಬಚಾವಾದರೆ, ಅದರ ಒದೆ ಇನ್ನೊಬ್ಬ ಸರದಾರನಿಗೆ ಬೀಳೋದು ಗ್ಯಾರಂಟಿ. ನಮ್ಮ ಜೀವನದಲ್ಲಿಯೂ ಹೀಗೆ ಆಗುತ್ತದೆಯಲ್ಲವೇ?

ಚದುರಂಗ ಮತ್ತು ಬದುಕಿನಲ್ಲಿ ಎಂತಹ ಸಾಮ್ಯ! ಎರಡರಲ್ಲಿಯೂ ನಡೆಗಳೂ ಅನಂತ, ಸಾಧ್ಯತೆಗಳೂ ಅನಂತ. ಎರಡೂ ಏಳುಬೀಳುಗಳ ಮುಗಿಯದ ಸರಣಿ.