ಪುಸ್ತಕ: ಉಲ್ಲಾಸಕ್ಕೆ ದಾರಿ ನೂರಾರು
ಲೇಖಕರು: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 2023 ಪುಟ: 128 ಬೆಲೆ: ರೂ. 150/-
ದಿನದಿನವೂ ಕ್ಷಣಕ್ಷಣವೂ ಉಲ್ಲಾಸದಿಂದ ಇರಬೇಕೆಂಬುದು ನಮ್ಮೆಲ್ಲರ ಬಹು ದೊಡ್ಡ ಆಶೆ. ಆದರೆ ಬಹುಪಾಲು ವ್ಯಕ್ತಿಗಳಿಗೆ ಹಾಗಿರಲು ಸಾಧ್ಯವಾಗುತ್ತಿಲ್ಲ. ಏನೋ ಸಂಕಟ, ಏನೋ ಆತಂಕ, ಏನೋ ಹತಾಶೆ, ಏನೋ ನಿರಾಶೆ, ಏನೋ ಒತ್ತಡ ನಮ್ಮನ್ನು ಬಾಧಿಸುತ್ತಲೇ ಇರುತ್ತದೆ.
ಹಾಗಿರುವಾಗ, ಅವನ್ನೆಲ್ಲ ಎದುರಿಸುತ್ತ, ಅವನ್ನೆಲ್ಲ ನಿಭಾಯಿಸುತ್ತ ಉಲ್ಲಾಸದಿಂದಿರಲು ಏನು ಮಾಡಬೇಕೆಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಲೇಖಕರು ಇಪ್ಪತ್ತೈದು ವರುಷಗಳಿಂದ ನಡೆಸಿದ ಅಧ್ಯಯನ, ತನ್ನ ಮೇಲೇಯೇ ಮಾಡಿಕೊಂಡ ಪ್ರಯೋಗಗಳ ಫಲವೇ ಈ ಅಪೂರ್ವ ಪುಸ್ತಕ.
ಇದರ 40 ಅಧ್ಯಾಯಗಳಲ್ಲಿ, ಪ್ರತಿಯೊಂದರಲ್ಲಿಯೂ ಒಂದು ಚಿಂತನೆಯನ್ನು ಅಡಿಪಾಯವಾಗಿ ಇರಿಸಿಕೊಂಡು, ಆ ನೆಲೆಯಲ್ಲಿ ಉಲ್ಲಾಸದಿಂದಿರಲು ಏನು ಮಾಡಬೇಕೆಂದು ಲೇಖಕರು ವಿವರಿಸಿದ್ದಾರೆ. ಉದಾಹರಣೆಗೆ, ಮೊದಲ ಹತ್ತು ಅಧ್ಯಾಯಗಳು:
1)ದಿನದ ಆರಂಭದಲ್ಲಿ ಉಲ್ಲಾಸ
2)ಉಲ್ಲಾಸಕ್ಕಾಗಿ ದಿನದ ಮೊದಲ ಹತ್ತು ನಿಮಿಷಗಳ ತಯಾರಿ
3)ಎಳೆಬಿಸಿಲು ಚುರುಕಾಗುವಾಗ ಉಲ್ಲಾಸ
4)ಬೆಳಗ್ಗೆ ನಮ್ಮೊಳಗೆ ಉತ್ಸಾಹ ತುಂಬಿಕೊಳ್ಳುವ ದಾರಿಗಳು
5)ಮಾನಸಿಕ ಒತ್ತಡದಿಂದ ಬಿಡುಗಡೆಗೆ ದಾರಿಗಳು
6)ಸಮಸ್ಯೆಯಿಂದುಂಟಾದ ಆತಂಕ ಪರಿಹಾರದ ದಾರಿಗಳು
7)ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದಾಗ…
8)ಸಮಸ್ಯಾ ಪರಿಹಾರಕ್ಕೆ ಮಾನಸಿಕ ಚಿತ್ರಣಗಳು
9)ಉಲ್ಲಾಸಕ್ಕಾಗಿ ಚಿಂತನೆಯ ದಿಕ್ಕು ಬದಲಾಯಿಸಿ
10)ನಿಮ್ಮ ಉಲ್ಲಾಸಕ್ಕೆ ನೀವೇ ಜವಾಬ್ದಾರಿ ವಹಿಸಿ
“ಈ ಚಟುವಟಿಕೆ ಮಾಡಿ, ಆ ಚಟುವಟಿಕೆ ಮಾಡಿ, ಏನೇ ಆದರೂ ಉಲ್ಲಾಸದಿಂದಿರಿ" ಎಂಬುದು ನನ್ನ ಉದ್ದೇಶವೇ ಹೊರತು ಉಪದೇಶ ಕೊಡುವುದು ನನ್ನ ಉದ್ದೇಶವಲ್ಲ ಎಂದು ಲೇಖಕರು ಮುನ್ನುಡಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಇಲ್ಲಿನ ಅಧ್ಯಾಯಗಳಲ್ಲಿ ಸೂಚಿಸಿದ ಚಟುವಟಿಕೆಗಳನ್ನು ತಾನೇ ಮತ್ತೆಮತ್ತೆ ಅನುಸರಿಸಿದ್ದು, ಅದರಿಂದ ತನಗಂತೂ ಉಲ್ಲಾಸದಿಂದಿರಲು ಸಹಾಯವಾಗಿ ಎಂಬುದನ್ನು ಲೇಖಕರು ಹಂಚಿಕೊಂಡಿದ್ದಾರೆ. ಓದುಗರಿಗೂ ಈ ಪುಸ್ತಕದಲ್ಲಿ ವಿವರಿಸಿರುವ ಮುನ್ನೂರಕ್ಕೂ ಮಿಕ್ಕಿದ ಚಟುವಟಿಕೆಗಳಿಂದ ಉಲ್ಲಾಸದಿಂದಿರಲು ಸಹಾಯವಾಗುತ್ತದೆಂಬುದು ಲೇಖಕರ ನಂಬಿಕೆ.
ನಮ್ಮನ್ನು ಆತಂಕ, ಖಿನ್ನತೆ, ಸಂಕಟ, ನೋವು, ನಿರಾಶೆ ಆಗಾಗ್ಗೆ ಕಾಡುತ್ತಲೇ ಇರುತ್ತವೆ. ಅವುಗಳಿಂದ ಹೊರಬಂದು ಮನೋಲ್ಲಾಸದಿಂದ ಇರಲು ಸಾಧ್ಯವೇ? ಎಂಬ ಪ್ರಶ್ನೆಗೆ “ಖಂಡಿತ ಸಾಧ್ಯ” ಎಂಬ ಉತ್ತರ ಈ ಪುಸ್ತಕ ಓದಿದಾಗ ನಿಮ್ಮದಾಗುತ್ತದೆ. ಉಲ್ಲಾಸದಿಂದ ಇರಬೇಕಾದರೆ ದೇಹ-ಮನಸ್ಸುಗಳಿಗೆ ಚಟುವಟಿಕೆಗಳು ಬೇಕು. ಇಲ್ಲವಾದರೆ ಜಡತ್ವ ಆವರಿಸುತ್ತದೆ. ಅಂತಹ ಚಟುವಟಿಕೆಗಳು ಯಾವುವು? ಎಂಬುದನ್ನೂ ಸ್ಪಷ್ಟವಾಗಿ ತೋರಿಸಿಕೊಡುತ್ತದೆ ಈ ಪುಸ್ತಕ.
ದಿನದಿನವೂ ಹೊಸಹೊಸ ವಿಧಾನಗಳಿಂದ ಮನಸ್ಸನ್ನು ಅರಳಿಸುತ್ತಾ, ದೇಹ ಮತ್ತು ಮನಸ್ಸಿನ ಆರೋಗ್ಯ ವೃದ್ಧಿಸಿಕೊಳ್ಳುತ್ತಾ ಯಾವಾಗಲೂ ಮನೋಲ್ಲಾಸದಿಂದಿರಲು ಹಲವಾರು ಮಾರ್ಗೋಪಾಯಗಳನ್ನು ತಿಳಿಸಿದ್ದಾರೆ ಲೇಖಕರು. ಉಲ್ಲಾಸದಿಂದಿರಲು “ಹಣ ಸಂಪಾದನೆಯೊಂದೇ ದಾರಿ" ಎಂದು ನಂಬುವರಿಗೆ, ಅದಕ್ಕಿಂತ ಹೊರತಾದ ನೂರಾರು ದಾರಿಗಳಿವೆ ಎಂಬುದನ್ನು ಲೇಖಕರು ತೋರಿಸಿಕೊಟ್ಟಿರುವುದೇ ಈ ಪುಸ್ತಕದ ವಿಶೇಷತೆ.