ನಮ್ಮ ಹೆಮ್ಮೆಯ ಭಾರತ

ಪುಸ್ತಕ: ನಮ್ಮ ಹೆಮ್ಮೆಯ ಭಾರತ
ಲೇಖಕರು: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವ್ಯ ಸಂಪದ, “ಸುಮ", 5ನೇ ಕ್ರಾಸ್, ಬಿಜೈ ನ್ಯೂ ರೋಡ್, ಮಂಗಳೂರು 575004
ಮೊದಲ ಮುದ್ರಣ: 2022          ಪುಟ: 128             ಬೆಲೆ: ರೂ. 100/-

ಭಾರತದ ಜನಸಂಖ್ಯೆ ಎಪ್ರಿಲ್ 2023ರಲ್ಲಿ 144 ಕೋಟಿ ದಾಟಿದ್ದು, ನಮ್ಮ ದೇಶವೀಗ ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ. ಅವರಲ್ಲಿ ಪ್ರತಿಯೊಬ್ಬರಿಗೂ ಭವಿಷ್ಯದ ಭರವಸೆಯಿತ್ತಿರುವ ಈ ಮಹಾನ್ ದೇಶದ ಬಗ್ಗೆ ಹೆಮ್ಮೆ ಪಡಲು ಒಂದೆರಡಲ್ಲ, ನೂರಾರು ಕಾರಣಗಳಿವೆ.

ಭವ್ಯ ಭಾರತದ ಪರಿಚಯದ ಬಗ್ಗೆ ಕನ್ನಡ ಪುಸ್ತಕ ಭಂಡಾರದಲ್ಲಿ ಅನೇಕ ಪುಸ್ತಕಗಳು ಇರಬಹುದಾದರೂ ಈ ಪುಸ್ತಕವು ವಿಶಿಷ್ಟವಾಗಿದೆ. ಭೌಗೋಳಿಕವಾಗಿ ಮೂರು ದಿಕ್ಕುಗಳಲ್ಲಿ ಮೂರು ಸಮುದ್ರಗಳಿಂದ ಆವೃತವಾದ, ವಿವಿಧ ಸಂಪನ್ಮೂಲಗಳಿಂದ ಸಮೃದ್ಧವಾದ, ಅಪರೂಪದ ವನ್ಯಜೀವಿಗಳು, ಭಾಷೆ, ಜನಸಮುದಾಯಗಳಿಂದ ಕೂಡಿರುವ ನಮ್ಮ ದೇಶವು ಪ್ರಪಂಚದ ಇನ್ನಿತರ ದೇಶಗಳಿಗೆ ಹೋಲಿಸಿದರೆ ಯಾವ ಕಾರಣಗಳಿಗಾಗಿ ವಿಭಿನ್ನವಾಗಿದೆ ಎಂಬುದಕ್ಕೆ ನೂರು ಉದಾಹರಣೆಗಳನ್ನು ಈ ಪುಸ್ತಕದಲ್ಲಿ “ಕ್ಯಾಪ್ಸೂಲ್” ರೂಪದಲ್ಲಿ ನೀಡಿದ್ದಾರೆ ಲೇಖಕರು. ಇಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಇರುವ ಮಾಹಿತಿ ಸಂಕ್ಷಿಪ್ತವಾಗಿದ್ದರೂ ಸ್ವಯಂಪೂರ್ಣವಾಗಿದೆ.

ನಾವು ನಿಬ್ಬೆರಗಾಗುವ ಭಾರತದ ವೈಶಿಷ್ಟ್ಯಗಳಾದ ನಮ್ಮ ಚಲನಶೀಲ ಪ್ರಜಾಪ್ರಭುತ್ವ, ಅಸಾಮಾನ್ಯ ಚುನಾವಣಾ ಪ್ರಕ್ರಿಯೆಗಳು, ಲಿಪಿ ಇರುವ ಹಾಗೂ ಲಿಪಿ ಇಲ್ಲದ ಸಾವಿರಾರು ಭಾಷೆಗಳು/ ಜನಸಮುದಾಯಗಳು, ನೂರಾರು ಹಬ್ಬ ಹರಿದಿನಗಳು, ವೇಷ-ಭೂಷಣ-ಉಡುಪುಗಳ ವೈವಿಧ್ಯತೆ, ಊಟ-ಖಾದ್ಯಗಳ ವಿವಿಧತೆ, ಹೈನುಗಾರಿಕೆ ಕೇಂದ್ರಿತ ಕೃಷಿ ಪದ್ಧತಿ, ಜಾಗತಿಕ ದಾಖಲೆಯ ವಿಶ್ವವಿದ್ಯಾಲಯಗಳು/ ವಿದ್ಯಾಸಂಸ್ಥೆಗಳು, ಜನಸಾಮಾನ್ಯರನ್ನೂ ತನ್ನ ತೆಕ್ಕೆಗೆ ಸೆಳೆದಿರುವ ಅಗಾಧ ಬ್ಯಾಂಕಿಂಗ್ ಕ್ಷೇತ್ರ, ಐಟಿ/ ಬಿಟಿ ಕ್ಷೇತ್ರಗಳ ಅಪ್ರತಿಮ ಸಾಧನೆಗಳು, ಹಾಕಿ-ಕ್ರಿಕೆಟ್-ಚದುರಂಗ ಕ್ರೀಡೆಗಳ ಒಲವು-ಸಾಧನೆಗಳು - ಹೀಗೆ ಹತ್ತುಹಲವು ಸಂಗತಿಗಳು ಈ ಪುಸ್ತಕದಲ್ಲಿ ಓದುಗರ ಗಮನ ಸೆಳೆಯುತ್ತವೆ.

ಈ ಪುಸ್ತಕವು ಯಾವುದೇ ಒಂದು ಪ್ರಕಾರದ ಚೌಕಟ್ಟಿಗೆ ಒಳಗಾಗದೆ ವಿಭಿನ್ನ ನಿರೂಪಣಾ ಶೈಲಿಯಲ್ಲಿ ಮೂಡಿಬಂದಿದೆ. ಪ್ರಜಾಪ್ರಭುತ್ವ, ಕೃಷಿ, ವಾಣಿಜ್ಯ, ವಿಜ್ನಾನ, ಶಿಕ್ಷಣ, ಕ್ರೀಡೆ, ಕಲೆ, ಸಾಹಿತ್ಯ, ಜನಪದ ಇತ್ಯಾದಿ ವಿವಿಧ ಆಯಾಮಗಳಲ್ಲಿ ಭಾರತವನ್ನು ವೀಕ್ಷಿಸಿದ ಲೇಖಕರು ದೇಶದ ಬಗ್ಗೆ ಒಂದು ಸಮಗ್ರ ದೃಷ್ಟಿಕೋನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಭಾರತವು ನಮಗೆ ಯಾಕೆ ಹೆಮ್ಮೆಯಾಗಬೇಕು ಎಂಬುದನ್ನು ವಸ್ತುನಿಷ್ಠವಾಗಿ ಇದರಲ್ಲಿ ಚಿತ್ರಿಸಿದ್ದಾರೆ.

ಹಲವು ವಿದೇಶೀಯರಿಗೆ ಭಾರತದ ಬಗ್ಗೆ ಹಗುರವಾಗಿ ಮಾತನಾಡುವ ಚಟವಿದೆ: ಭಾರತ ಬಡವರ ದೇಶ; ಭಾರತ ಹಾವಾಡಿಗರ ದೇಶ; ಭಾರತ ಮೌಢ್ಯ ತುಂಬಿದ ದೇಶ ಇತ್ಯಾದಿ. ನಮ್ಮಲ್ಲಿಯೂ ಕೆಲವರಿಗೆ ಈ ಕೆಟ್ಟ ಚಟವಿದೆ. ಸತ್ಯಸಂಗತಿಗಳ ಬಲದಿಂದ ಮಾತ್ರ ಅಂಥವರ ಅಭಿಪ್ರಾಯ ಬದಲಾಯಿಸಲು ಸಾಧ್ಯವಿದೆ.

ಉದಾಹರಣೆಗೆ, 144 ಕೋಟಿ ಎಂಬುದು ಅಗಾಧ ಜನಸಂಖ್ಯೆ. ಕೇವಲ ಒಂದು ಕೋಟಿ ಜನಸಂಖ್ಯೆ ಇರುವ ದೇಶಗಳೇ ತಮ್ಮ ಸಮಸ್ಯೆಗಳಿಂದ ತತ್ತರಿಸಿವೆ. ಕೆಲವು ಪುಟ್ಟ ದೇಶಗಳೇ ದಿವಾಳಿಯಾಗಿವೆ. ಹಾಗಿರುವಾಗ, ಎಲ್ಲ ಸಮಸ್ಯೆಗಳನ್ನೂ ಸಮರ್ಥವಾಗಿ ನಿಭಾಯಿಸುತ್ತ, ದಿನದಿಂದ ದಿನಕ್ಕೆ ನಮ್ಮ ದೇಶ ಪ್ರಗತಿ ಪಥದಲ್ಲಿ ಸಾಗುತ್ತಿರುವುದು ಯಾರೇ ಆದರೂ ಹೆಮ್ಮೆ ಪಡಬೇಕಾದ ಸಾಧನೆ.

ಆ ವಿರಾಟ್ ಸಾಧನೆಯ ಪಕ್ಷಿನೋಟ ಓದುಗರಿಗೆ ಈ ಪುಸ್ತಕದ ಪುಟಪುಟಗಳಲ್ಲಿ ಲಭ್ಯ. ಇಲ್ಲಿರುವ ಅಂಕೆಸಂಖ್ಯೆಗಳು ಯಾರ ಕಣ್ಣುಗಳನ್ನಾದರೂ ತೆರೆಸಬಲ್ಲವು. ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ದೇಶದ ಬಗ್ಗೆ ನಾವು ಯಾಕೆ ಹೆಮ್ಮೆ ಪಡಬೇಕೆಂದು ನಮ್ಮ ಮನೆಯ ಮಕ್ಕಳಿಗೆ ತಿಳಿಸಲು ನಿಮಗೊಂದು ಪುಟ್ಟ ಕೈಪಿಡಿ ಈ ಪುಸ್ತಕ.