51)ದಕ್ಷಿಣ ಅಮೇರಿಕಾದ ವಿಕುನಾ ಎಂಬ ಪ್ರಾಣಿ ಒಂಟೆಯಂತಿದೆ. ಆದರೆ ಒಂಟೆಗಿಂತ ಬಹಳ ಸಣ್ಣದು; ಇದರ ಉಣ್ಣೆ ಬಹಳ ಮೃದು. ಕೇವಲ ಒಂದು ನಿಮಿಷದ ಮುಂಚೆ ಹುಟ್ಟಿದ ವಿಕುನಾ ಎಳೆಗರು ಮನುಷ್ಯನಿಗಿಂತ ವೇಗವಾಗಿ ಓಡಬಲ್ಲದು!
52)ವಯಸ್ಕ ಮುಳ್ಳುಹಂದಿಯ ಮೈಯಲ್ಲಿ ೩೦,೦೦೦ ಮುಳ್ಳುಗಳಿವೆ - ತಲೆ, ಬೆನ್ನು, ಎಡ-ಬಲ ಪಕ್ಕೆ ಮತ್ತು ಬಾಲದಲ್ಲಿ. ಅದರ ಹೊಟ್ಟೆಯಲ್ಲಿ ಮಾತ್ರ ಮುಳ್ಳುಗಳಿಲ್ಲ. ಅದರ ಮುಳ್ಳು ಇತರ ಪ್ರಾಣಿಗಳ ಮಾಂಸದಲ್ಲಿ ತೂರಿ ಕೊಂಡರೆ, ಅದನ್ನು ಕಿತ್ತು ತೆಗೆಯುವುದು ಕಷ್ಟಸಾಧ್ಯ. (ಫೋಟೋ ನೋಡಿ)
53)ಮರಳಿನಲ್ಲಿ ಗುಳಿ ತೋಡಿ, ಹೆಣ್ಣು ಮೊಸಳೆ ಮೊಟ್ಟೆಯಿಟ್ಟು ಮೂರು ತಿಂಗಳ ನಂತರ ಅವುಗಳಿಂದ ಮರಿಗಳು ಹೊರ ಬರಲು ತಯಾರು. ಆದರೆ, ಮರಿಗಳಿಗೆ ತಮ್ಮ ಮೇಲಿರುವ ಮರಳನ್ನು ಜಾಡಿಸಲು ಶಕ್ತಿ ಇರೋದಿಲ್ಲ; ಹಾಗಾಗಿ ಅವು ಮೊಟ್ಟೆಯೊಳಗೆ ಇದ್ದುಕೊಂಡೇ ತಲೆ ಹೊರಗೆ ಹಾಕಿ, ಪಿಳಿಪಿಳಿ ಕಣ್ಣು ಬಿಡುತ್ತವೆ. ಆಗ, ಮೊಟ್ಟೆಗಳನ್ನು ರಕ್ಷಿಸುತ್ತಿರುವ ಅಮ್ಮ-ಮೊಸಳೆಗೆ ಮರಿಗಳ ಕೂಗು ಕೇಳಿಸಿ, ಅದು ಮರಳನ್ನು ಅಗೆದು ತೆಗೆದು, ಮರಿಗಳನ್ನು ಬಿಡುಗಡೆ ಮಾಡುತ್ತದೆ.
54)ಅರುವತ್ತು ಮಿಲಿಯ ವರುಷಗಳ ಮುಂಚೆ ಈಗಿನ ಕುದುರೆಗಳ ಪೂರ್ವಿಕರ ಎತ್ತರ ಕೇವಲ ಒಂದು ಅಡಿ!
46)ಆಸ್ಟ್ರೇಲಿಯಾದ ಕೋಲಾ ಕರಡಿಗಳು ಒಂದೇ ಒಂದು ಮರವನ್ನು ಅವಲಂಬಿಸಿ ಬದುಕುತ್ತವೆ - ಅದು ನೀಲಗಿರಿ ಮರ. ಅವುಗಳಿಗೆ ಬೇರೇನೂ ಬೇಕಾಗಿಲ್ಲ, ನೀರು ಕೂಡ ಬೇಕಾಗಿಲ್ಲ. ಈ ಭೂಮಿಯಲ್ಲಿ ಬದುಕಲಿಕ್ಕಾಗಿ, ಆಹಾರದ ಜೊತೆಗೆ ನೀರು ಅಗತ್ಯವಿಲ್ಲದ ಕೆಲವೇ ಕೆಲವು ಪ್ರಾಣಿಗಳಲ್ಲೊಂದು ಕೋಲಾ ಕರಡಿ.
47)ಮಧ್ಯ ಆಫ್ರಿಕಾದ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಸಸ್ತನಿ ಒಕಾಪಿ ಒಂದು ವಿಚಿತ್ರ ಪ್ರಾಣಿ. ಇದನ್ನು ಕಾಡು ಜಿರಾಫೆ ಅಥವಾ ಜೀಬ್ರಾ ಜಿರಾಫೆ ಎಂದೂ ಕರೆಯುತ್ತಾರೆ. ಯಾಕೆಂದರೆ, ಇದರ ಕಾಲುಗಳಲ್ಲಿ ಜೀಬ್ರಾಕ್ಕೆ ಇರುವಂತೆ ಕಪ್ಪು-ಬಿಳಿ ಪಟ್ಟೆಗಳಿವೆ. ಇದರ ಎತ್ತರ ೧.೫ ಮೀ. (ಭುಜದ ಮಟ್ಟದಲ್ಲಿ) ಹಾಗೂ ತೂಕ ೨೦೦-೩೫೦ ಕಿ.ಗ್ರಾ. ಇದು ತನ್ನ ೧೮ ಇಂಚು (೪೬ ಸೆ.ಮೀ.) ಉದ್ದದ ನಾಲಗೆಯಿಂದ ತನ್ನ ಮುಖ, ಕಿವಿ, ಕಣ್ಣುಗಳನ್ನು ಸ್ವಚ್ಛ ಮಾಡಿಕೊಳ್ಳುತ್ತದೆ. ಅದೇ ನಾಲಗೆಯಿಂದ ತನ್ನ ಮೈ ಮೇಲೆ ಕೂರುವ ನೊಣಗಳನ್ನು ಓಡಿಸುತ್ತದೆ ಮತ್ತು ಮರಗಳ ಹಾಗೂ ಗಿಡಗಂಟಿಗಳ ಎಳೆಯ ಎಲೆಗಳನ್ನು ತಿನ್ನುತ್ತದೆ. ಇದು ಜಿರಾಫೆಯನ್ನು ಹೋಲುತ್ತದೆ; ಆದರೆ ಜಿರಾಫೆಗಿಂತ ಸಣ್ಣದು ಮತ್ತು ಇದರ ಕತ್ತು ಸಣ್ಣದು. (ಫೋಟೋ ನೋಡಿ)
48)ಜಾಕ್ ಮೊಲ ಅದ್ಭುತ ಲಾಂಗ್-ಜಂಪರ್. ಇದು ಅತಿ ವೇಗದಲ್ಲಿ ಓಡುತ್ತಾ ಒಂದೇಟಿಗೆ ೧೫ ಅಡಿ ಅಂತರ ಜಿಗಿಯುತ್ತದೆ!
41)ಟಾಸ್ಮೇನಿಯಾದ “ತೋಳ" ಅಥವಾ “ಹುಲಿ" ಅಳಿದುಹೋದ ಮಾಂಸಾಹಾರಿ ಪರಭಕ್ಷಕ (ಪ್ರಿಡೇಟರ್). ಇವು ಎರಡು ದಶಲಕ್ಷ ವರುಷಗಳ ಮುಂಚೆ ವಿಕಾಸ ಹೊಂದಿ, ಆಸ್ಟ್ರೇಲಿಯಾ, ಟಾಸ್ಮೇನಿಯಾ ಮತ್ತು ನಿವ್ ಗಿನಿಯಾಗಳಲ್ಲಿ ವಾಸವಾಗಿದ್ದವು. ಈ ವಂಶದ ಕೊನೆಯ ಪ್ರಾಣಿ ೧೯೩೬ರಲ್ಲಿ ಟಾಸ್ಮೇನಿಯಾದ ಮೃಗಾಲಯದಲ್ಲಿ ಸತ್ತಿತು. ಐವತ್ತು ಇಂಚುಗಳಷ್ಟು ಉದ್ದವಿದ್ದ ಇವುಗಳ ಬಾಲವೇ ೨೫ ಇಂಚು ಉದ್ದವಿತ್ತು. ಇವು ಕಾಂಗರೂಗಳು, ದಂಶಕಗಳು ಮತ್ತು ಹಕ್ಕಿಗಳ ರಕ್ತವನ್ನೇ ಇಷ್ಟಪಟ್ಟು ಸೇವಿಸುತ್ತಿದ್ದವು. ಅಂದರೆ, ಈ ಪ್ರಾಣಿಗಳ ಮೂಗಿನ ಅಥವಾ ಲಿವರಿನ ರಕ್ತತುಂಬಿದ ಅಂಗಾಂಶಗಳನ್ನು ತಿನ್ನುತ್ತಿದ್ದವು; ಮಾಂಸಖಂಡಗಳನ್ನು ತಿನ್ನುತ್ತಿರಲಿಲ್ಲ. ಒಮ್ಮೆ ರಕ್ತ ಸೇವಿಸಿ ಹೋದರೆ, ಪುನಃ ಬಲಿಪ್ರಾಣಿಯ ಹತ್ತಿರ ಬರುತ್ತಿರಲಿಲ್ಲ.
42)ಆನೆಗಳಿಗೆ ಮತ್ತು ಚಿಕ್ಕ-ಬಾಲದ ಶ್ರೂಗಳಿಗೆ ದಿನಕ್ಕೆ ಕೇವಲ ಎರಡು ಗಂಟೆಗಳ ನಿದ್ದೆ ಸಾಕು; ಆದರೆ, ಗೊರಿಲ್ಲಾಗಳು ಮತ್ತು ಬೆಕ್ಕು ಜಾತಿಯ ಪ್ರಾಣಿಗಳಿಗೆ ದಿನಕ್ಕೆ ೧೪ ಗಂಟೆಗಳ ನಿದ್ದೆ ಬೇಕು. ಗಮನಿಸಿ: ಪ್ರಾಣಿಗಳ ನಿದ್ದೆಯ ಅಂತರ ೨ರಿಂದ ೧೪ ಗಂಟೆ.
43)ನಮ್ಮ ಎಲ್ಲ ಸಾಕುಪ್ರಾಣಿಗಳನ್ನು ಪಳಗಿಸಿದವರು ನಮ್ಮ ಪೂರ್ವಿಕರು. ಕಳೆದ ೪,೦೦೦ ವರುಷಗಳಲ್ಲಿ ಯಾವುದೇ ಹೊಸಪ್ರಾಣಿಯನ್ನು “ಸಾಕುಪ್ರಾಣಿ"ಯಾಗಿ ಮನುಷ್ಯರು ಪಳಗಿಸಿಲ್ಲ.
36)ನೀಲಗಿರಿ ಮರ ನಿರ್ವಂಶವಾದರೆ ಆಸ್ಟ್ರೇಲಿಯಾದ ಮರ ಹತ್ತುವ ಕೋಲಾ ಕರಡಿಗಳೂ ನಿರ್ವಂಶವಾಗುತ್ತವೆ! ಯಾಕೆಂದರೆ, ಕೋಲಾ ಕರಡಿಗಳು ನೀಲಗಿರಿ ಮರದ ಎಲೆಗಳನ್ನು ಮಾತ್ರ ತಿನ್ನುತ್ತವೆ. ಹಾಗೆಯೇ, ಆಫ್ರಿಕಾದ ಜೀಬ್ರಾಗಳು ನಿರ್ವಂಶವಾದರೆ, ಆಫ್ರಿಕಾದ ಸಿಂಹಗಳ ಸಂಖ್ಯೆಯೂ ಕುಸಿಯುತ್ತದೆ. ಜೇನ್ನೊಣಗಳು ನಿರ್ವಂಶವಾದರೆ, ಪರಕೀಯ ಪರಾಗಸ್ಪರ್ಶಕ್ಕಾಗಿ ಜೇನ್ನೊಣಗಳನ್ನೇ ಅವಲಂಬಿಸಿರುವ ಸಾವಿರಾರು ಸಸ್ಯ ಜಾತಿಗಳೂ ನಿರ್ನಾಮವಾಗುತ್ತವೆ.
37)ಉತ್ತರ ಅಮೇರಿಕಾದ ಬಯಲುಗಳಲ್ಲಿ ಕಾಡುಕೋಣಗಳ ಹಿಂಡುಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಲದಲ್ಲಿ, ಥೋಮಸ್ ಫರ್ನ್-ಹಾಮ್ ಎಂಬಾತ ಬೃಹತ್ ಹಿಂಡು ಕಂಡದ್ದು ದಾಖಲಾಗಿದೆ. ಸಂಟಾ ಫೆ ಎಂಬಲ್ಲಿ ೧೮೩೯ರಲ್ಲಿ ಪ್ರಯಾಣಿಸುತ್ತಿದ್ದ ಆತ ಆ ಹಿಂಡನ್ನು ದಾಟಲು ಮೂರು ದಿನಗಳು ತಗಲಿದ್ದವು. ಹತ್ತು ಲಕ್ಷಗಳಿಗಿಂತ ಅಧಿಕ ಕಾಡುಕೋಣಗಳಿದ್ದ ಆ ಬೃಹತ್ ಹಿಂಡು ೧,೩೫೦ ಚದರ ಮೈಲು ಪ್ರದೇಶವನ್ನು ಆವರಿಸಿತ್ತು ಎಂದು ಅಂದಾಜಿಸಲಾಗಿದೆ.
38)ಅಧಿಕೃತ ಅಂಕೆಸಂಖ್ಯೆಗಳ ಅನುಸಾರ, ಇಪ್ಪತ್ತನೆಯ ಶತಮಾನದ ಆರಂಭದ ವರುಷಗಳಲ್ಲಿ, ಅಮೇರಿಕಾದ ನ್ಯೂಯಾರ್ಕ್ ನಗರದ ರಸ್ತೆಗಳಲ್ಲಿ ಒಂದು ಲಕ್ಷಕ್ಕಿಂತ ಜಾಸ್ತಿ ಕುದುರೆಗಳು ಓಡಾಡುತ್ತಿದ್ದವು ಮತ್ತು ನಗರವನ್ನು ಮಲಿನ ಮಾಡುತ್ತಿದ್ದವು.
31)ಪ್ರಾಚೀನ ಈಜಿಪ್ಟಿನಲ್ಲಿ, ಹಮದ್ರ್ಯಾಸ್ ಬಬೂನ್ಗಳು (ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ವಾಸಿಸುವ, ನಾಯಿಯ ಮುಖವಿರುವ ದೊಡ್ಡ ಮಂಗ) ತೊತ್ ದೇವರ ಜೊತೆಗಾರರೆಂದು ನಂಬುತ್ತಿದ್ದರು. ಆದ್ದರಿಂದ ಅವು ಸತ್ತಾಗ ಅವನ್ನು ಮಮ್ಮಿಗಳಾಗಿ ರಕ್ಷಿಸುತ್ತಿದ್ದರು!
32)ಬಾಯಿಯಲ್ಲೇ ಮರಿ ಬೆಳೆಸುವ ಕಪ್ಪೆ ಒಂದು ವಿಸ್ಮಯ. ಇದರ ಪ್ರಾಣಿಶಾಸ್ತ್ರೀಯ ಹೆಸರು ರೈನೋಡರ್ಮಾ ಡಾರ್-ವಿನಿ. ಗಂಡು ಕಪ್ಪೆಯು ತನ್ನ ಬಾಯಿಯ ಸಂಚಿ (ಪೌಚ್)ಯಲ್ಲಿ ಸಣ್ಣ ಮರಿಗಳನ್ನು ಸಾಕುತ್ತದೆ. ಹೆಣ್ಣು ಕಪ್ಪೆ ಇಟ್ಟ ಮೊಟ್ಟೆಗಳಿಂದ ಮರಿಗಳು ಹೊರಬರುವ ಸಮಯದಲ್ಲಿ, ಯಾವುದೇ ಗಂಡು ಕಪ್ಪೆ (ಅಪ್ಪ ಕಪ್ಪೆಯೇ ಆಗಿರಬೇಕೆಂದಿಲ್ಲ.) ಹಲವಾರು ಮರಿಗಳನ್ನು ಎತ್ತಿಕೊಂಡು, ತನ್ನ ಬಾಯಿಯ ಸಂಚಿಯೊಳಗೆ ಹಾಕಿಕೊಳ್ಳುತ್ತದೆ. ಈ ಮರಿಗಳು ಕಪ್ಪೆಗಳಾಗಿ ಬೆಳೆಯುವ ತನಕ ಆ ಸಂಚಿಯಲ್ಲೇ ಇರುತ್ತವೆ! ಚಾರ್ಲ್ಸ್ ಡಾರ್ವಿನ್ ಪತ್ತೆ ಮಾಡಿದ ಕಾರಣ ಅವರ ನೆನಪಿಗಾಗಿ ಈ ಹೆಸರನ್ನಿಡಲಾಗಿದೆ. ಭೂಮಿಯಲ್ಲಿ ಈ ರೀತಿಯಲ್ಲಿ ಮರಿ ಬೆಳೆಸುವ ಬೇರೆ ಯಾವುದೇ ಜೀವಿ ಇಲ್ಲ. (ಫೋಟೋ ನೋಡಿ)
33)ಬೇರೆಬೇರೆ ವಿಧದ ಪೋಲಿಯೋ ವೈರಾಣುಗಳ ಪತ್ತೆಗಾಗಿ ಮೂರು ವರುಷ ಕಾಲ ನಡೆಸಿದ ಬೃಹತ್ ಸಂಶೋಧನೆಯಲ್ಲಿ ಮೂವತ್ತು ಸಾವಿರ ಮಂಗಗಳನ್ನು ಬಳಸಲಾಗಿತ್ತು.
26)ಉತ್ತರ ಅಮೇರಿಕಾದ ಒಪಾಸಮ್ ತನ್ನ ಮರಿಗಳನ್ನು ಹೊಟ್ಟೆಯ ಸಂಚಿ (ಪೌಚ್)ಯಲ್ಲಿ ಹೊತ್ತೊಯ್ಯುತ್ತದೆ. ಹುಟ್ಟುವಾಗ ಇದರ ಮರಿಯ ತೂಕ ೧.೯ ಗ್ರಾಮ್. ಈ ಮರಿಗಳು ಪೂರ್ತಿ ಬೆಳೆದಿರುವುದಿಲ್ಲ. ಒಪಾಸಮ್ನ ಮರಿಗಳು ಸಂಚಿಯಲ್ಲಿ ಹುಟ್ಟುವುದಿಲ್ಲ; ಇನ್ನೂ ಕಣ್ಣು ಕಾಣಿಸದ ಸ್ಥಿತಿಯಲ್ಲಿರುವ ಅವು ತಮ್ಮ ಸಹಜಪ್ರವೃತ್ತಿಯಿಂದ ಅಮ್ಮನ ಸಂಚಿಯನ್ನು ಸೇರಿಕೊಳ್ಳುತ್ತವೆ. ಅನಂತರ ಹಲವಾರು ತಿಂಗಳು ಸಂಚಿಯಲ್ಲೇ ಉಳಿದು ಬೆಳೆಯುತ್ತವೆ.
27)ಅತಿ ದೊಡ್ಡ ಆಫ್ರಿಕನ್ ಆನೆಯ ತೂಕ ಏಳು ಟನ್ ಇದ್ದೀತು. ಇದು ಈಗ ನೆಲದಲ್ಲಿ ವಾಸಿಸುವ ಅತ್ಯಂತ ದೊಡ್ಡ ಸಸ್ತನಿ. (ಅದೇನಿದ್ದರೂ ಈ ಆನೆಯ ತೂಕ ಈಗ ತಾನೇ ಹುಟ್ಟಿದ ನೀಲಿ-ವೇಲ್ನ ತೂಕಕ್ಕೆ ಸಮ.) ನೆಲದಲ್ಲಿ ವಾಸ ಮಾಡಿದ ಅತ್ಯಂತ ದೊಡ್ಡ ಸಸ್ತನಿ ದೈತ್ಯ ಖಡ್ಗಮೃಗ; ಅದೀಗ ನಿರ್ವಂಶವಾಗಿದೆ. ಅದರ ಎತ್ತರ (ಭುಜ ಮಟ್ಟದಲ್ಲಿ) ೧೮ ಅಡಿ, ಮತ್ತು ತೂಕ ಸುಮಾರು ೧೩.೫ ಟನ್. (ಆದರೆ, ಅದರ ತೂಕ ವಯಸ್ಕ ನೀಲಿ-ವೇಲ್ನ್ ತೂಕದ ಹತ್ತನೆಯ-ಒಂದು ಭಾಗಕ್ಕೆ ಸಮ.)
28)ಕಾಡುಕೋಣಗಳ ಮಾರಣಹೋಮ: ೧೮೬೦ನೇ ದಶಕದ ಮಧ್ಯಭಾಗದಿಂದ ೧೮೮೩ರ ವರೆಗಿನ ಅವಧಿಯಲ್ಲಿ ಉತ್ತರ ಅಮೇರಿಕಾದಲ್ಲಿ ಕಾಡುಕೋಣಗಳ ಸಂಖ್ಯೆ ೧೩ ದಶಲಕ್ಷದಿಂದ ಸುಮಾರು ಐನೂರಕ್ಕೆ ಕುಸಿಯಿತು!
21)ಸಿಂಹಗಳ ಕುಟುಂಬಗಳಲ್ಲಿ ಹೆಣ್ಣು ಸಿಂಹಗಳೇ ಶೇಕಡಾ ೯೦ಕ್ಕಿಂತ ಜಾಸ್ತಿ ಬೇಟೆ ಮಾಡುತ್ತವೆ. ಗಂಡು ಸಿಂಹಗಳಿಗೆ ಜೀವಭಯ ಜಾಸ್ತಿ ಮತ್ತು ಅವು ವಿರಮಿಸಲು ಇಷ್ಟ ಪಡುತ್ತವೆ.
22)ಚಕ್ವಲ್ಲಾ ಎಂಬ ಹಲ್ಲಿಗಳು ತಮ್ಮನ್ನು ಹಿಡಿಯಲು ಪ್ರಯತ್ನಿಸುವ ಜೀವಿಗಳಿಂದ ಪಾರಾಗಲು ಬಳಸುವ ಉಪಾಯ: ಹತ್ತಿರದ ಕಲ್ಲಿನ ಸೀಳಿನೊಳಗೆ ನುಸುಳಿ, ತನ್ನ ದೇಹದೊಳಗೆ ಗಾಳಿ ತುಂಬಿಕೊಳ್ಳುವುದು. ಆಗ ಇದರ ದೇಹ ಆ ಸೀಳಿನೊಳಗೆ ಬಿಗಿಯಾಗಿ ಅಂಟಿಕೊಂಡು, ಇದನ್ನು ಹೊರಕ್ಕೆಳೆಯಲು ಸಾಧ್ಯವಾಗೋದಿಲ್ಲ.
23)ಕತ್ತೆಕಿರುಬಗಳ ಬಗ್ಗೆ ಇರುವ ತಪ್ಪು ಕಲ್ಪನೆ: ಅವು ಸಿಂಹಗಳು ಕೊಂದು ತಿಂದು ಬಿಟ್ಟ ಪ್ರಾಣಿಗಳು ಅಳಿದುಳಿದ ಭಾಗಗಳನ್ನು ತಿಂದು ಬದುಕುವ ಹೇಡಿ ಸ್ವಚ್ಛಕಾರಿ ಪ್ರಾಣಿಗಳು ಎಂದು. ಆದರೆ, ನಿಜವಾಗಿ ಅವು ಚುರುಕಿನ ಮತ್ತು ಧೈರ್ಯವಂತ ಬೇಟೆಗಾರ ಪ್ರಾಣಿಗಳು. ಅವುಗಳ ಬಲಿಪ್ರಾಣಿಗಳು ರೋಗಪೀಡಿತ ಅಥವಾ ಅಸಹಾಯ ಪ್ರಾಣಿಗಳಲ್ಲ; ಬದಲಾಗಿ, ಆರೋಗ್ಯವಂತ ಹಾಗೂ ವಯಸ್ಕ ಜೀಬ್ರಾಗಳು. ಅರ್ಧ ಟನ್ ತೂಕದ ಆಫ್ರಿಕನ್ ಕಾಡುಕೋಣಗಳನ್ನೂ ಕತ್ತೆಕಿರುಬಗಳು ಬೆನ್ನಟ್ಟಿ ಕೊಲ್ಲುತ್ತವೆ.
24)ಒಂದಾನೊಂದು ಕಾಲದಲ್ಲಿ ಯುರೋಪಿನ ಎಲ್ಲ ಅರಣ್ಯಗಳಲ್ಲಿಯೂ ತೋಳಗಳ ಹಿಂಡುಗಳು ಸುತ್ತಾಡುತ್ತಿದ್ದವು. ೧೪೨೦ ಮತ್ತು ೧೪೩೮ರಲ್ಲಿ ಪ್ಯಾರಿಸಿನ ರಸ್ತೆಗಳಲ್ಲಿಯೂ ತೋಳಗಳು ತಿರುಗಾಡುತ್ತಿದ್ದವು!
16)ಕುರುಡರಿಗೆ ಮಾರ್ಗದರ್ಶನ ನೀಡಲು ತರಬೇತಾದ ನಾಯಿಗಳಿಗೆ ರಸ್ತೆಗಳಲ್ಲಿ ಟ್ರಾಫಿಕ್ ದೀಪಗಳಲ್ಲಿ ಕೆಂಪು-ದೀಪ ಮತ್ತು ಹಸುರು-ದೀಪಗಳ ವ್ಯತ್ಯಾಸ ತಿಳಿಯುವುದಿಲ್ಲ. ಆದರೆ, ತನ್ನ ಮಾಲೀಕನನ್ನು ರಸ್ತೆ ದಾಟಿಸುವಾಗ, ವಾಹನಗಳ ದಟ್ಟಣೆಯನ್ನು ಗಮನಿಸಿ, ಯಾವಾಗ ರಸ್ತೆ ದಾಟುವುದು ಸುರಕ್ಷಿತ ಎಂದು ನಾಯಿ ನಿರ್ಧರಿಸುತ್ತದೆ.
17)ಹನ್ನೆರಡನೆಯ ಶತಮಾನದ ತನಕ ಕುದುರೆಗಳನ್ನು ಹೊಲದ ಕೆಲಸಗಳಿಗೆ ಬಳಸುತ್ತಿರಲಿಲ್ಲ. ಯಾಕೆಂದರೆ, ರೋಮನರ ಕಾಲದಿಂದ ಬಳಕೆಯಲ್ಲಿದ್ದ ಕುದುರೆಗಳ ಎದೆ-ಜೀನುಗಳು ಹೊಲದ ಕೆಲಸಕ್ಕೆ ಸರಿ ಹೊಂದುತ್ತಿರಲಿಲ್ಲ. ಅನಂತರ ಆವಿಷ್ಕರಿಸಿದ ಹೆಗಲು-ಜೀನುಗಳು ಮತ್ತು ‘ಕುದುರೆ ಕೊಲರ್”ಗಳು ಹೆಚ್ಚು ತೂಕದ ವಸ್ತುಗಳನ್ನು ಹಾಗೂ ಕೃಷಿ ಉಪಕರಣಗಳನ್ನು ಕುದುರೆಗಳು ಎಳೆಯಲು ಸಹಕರಿಸಿದವು.
18)ಏಕೈಕ ಹಾರುವ ಸಸ್ತನಿ ಬಾವಲಿ. ಅದೇನಿದ್ದರೂ “ಹಾರುವ ಅಳಿಲು” ಕಡಿಮೆ ದೂರವನ್ನು ಗಾಳಿಯಲ್ಲಿ ತೇಲುತ್ತಾ ಕ್ರಮಿಸಬಲ್ಲದು.
11)ವ್ಯಾಂಪೈರ್ ಬಾವಲಿಗಳನ್ನೂ ಭಯಂಕರ ಪ್ರಾಣಿಗಳೆಂದು ಜನರು ಭಾವಿಸಿದ್ದಾರೆ. ಆದರೆ, ರಕ್ತ ಹೀರುವ ಈ ಬಾವಲಿ, ಇತರ ಪ್ರಾಣಿಗಳ ಕುತ್ತಿಗೆಯ ಚರ್ಮವನ್ನು ಕಚ್ಚಿ ಸೀಳುವುದಿಲ್ಲ. ಬದಲಾಗಿ, ಬಟ್ಟೆಯಿಂದ ಮುಚ್ಚದಿರುವ ಚರ್ಮವನ್ನು ರಕ್ತ ಸಿಗುವ ವರೆಗೆ ತನ್ನ ಹಲ್ಲುಗಳಿಂದ ಕೆರೆಯುತ್ತದೆ. ಅದರ ಕೆರೆಯುವಿಕೆ ಎಷ್ಟು ನಯವಾಗಿರುತ್ತದೆ ಎಂದರೆ, ನಿದ್ದೆಯಲ್ಲಿರುವ ಬಲಿಪ್ರಾಣಿಗೆ ಎಚ್ಚರವಾಗುವುದೇ ಇಲ್ಲ!
12)ಕುದುರೆ ಬಹಳ ಸಣ್ಣ ಪ್ರಾಣಿಯಾಗಿತ್ತು. ಒಬ್ಬ ಸವಾರನನ್ನು ಹೆಚ್ಚು ಸಮಯ ಹೊತ್ತುಕೊಂಡು ಹೋಗುವಷ್ಟು ಅದು ಶಕ್ತಿಶಾಲಿಯಾಗಿರಲಿಲ್ಲ. ಅಲೆಮಾರಿ ಜನಾಂಗದವರು ಯುದ್ಧಕ್ಕಾಗಿ ಪಳಗಿಸಿದ ಸಂಕರ ತಳಿಯ ದೊಡ್ಡ ಕುದುರೆಗಳನ್ನು ಮಧ್ಯಪ್ರಾಚ್ಯ ಮತ್ತು ಯುರೋಪಿನಲ್ಲಿ ಜನರು ಮೊದಲ ಬಾರಿ ಕಂಡಾಗ ಹೆದರಿದ್ದರು!
13)ಕರಡಿ (ಗ್ರಿಜ್ಲಿ ಬೇರ್) ಒಳ್ಳೆಯ ಓಟಗಾರ. ಅದು ಕುದುರೆಯಷ್ಟೇ ವೇಗದಲ್ಲಿ ಓಡಬಲ್ಲದು.
14)ಆಫ್ರಿಕಾದ ಗೊಲಿಯಾಥ್ ಕಪ್ಪೆ (ರಾನಾ ಗೊಲಿಯಾತ್) ಎರಡೂವರೆ ಅಡಿಗಳಿಗಿಂತ ಜಾಸ್ತಿ ಉದ್ದವಿರುತ್ತದೆ! ಮೂಗಿನಿಂದ ಕಾಲಿನ ತುದಿಯ ವರೆಗೆ ಅವುಗಳ ಉದ್ದ ೩೨.೦೮ ಇಂಚಿನ ವರೆಗೆ ದಾಖಲಾಗಿದೆ. ಅವುಗಳ ತೂಕವೂ ಭರ್ಜರಿ - ೩.೧೫ ಕಿಲೋ ತನಕ! (ಫೋಟೋ)
6)ಅಳಿಲಿನ ಕುಟುಂಬಕ್ಕೆ ಸೇರಿದ ವುಡ್ಚಕ್ (ಅಥವಾ ಗ್ರೌಂಡ್ಹೊಗ್) ಮರಗಳನ್ನು ಹತ್ತುತ್ತದೆ. ಇದರ ಪ್ರಾಣಿಶಾಸ್ತ್ರೀಯ ಹೆಸರು ಮರ್ಮೊಟಾ ಮೊನಾಕ್ಸ್. ಉತ್ತರ ಅಮೇರಿಕಾದ ಯುಎಸ್ಎ ಹಾಗೂ ಕೆನಡಾ ದೇಶಗಳಲ್ಲಿ ವಾಸಿಸುವ ಇದು ಗಂಟೆಗೆ ೨,೧೦೦ ಸಲ ಉಸಿರಾಡುತ್ತದೆ. ಆದರೆ, ಶಿಶಿರ ನಿದ್ದೆ ಮಾಡುವಾಗ ಗಂಟೆಗೆ ಕೇವಲ ಹತ್ತು ಸಲ ಉಸಿರಾಡುತ್ತದೆ! (ಫೋಟೋ)
7)ಶ್ರೂ ಎಂಬ ಉತ್ತರ ಅಮೇರಿಕಾದ ಅತಿ ಸಣ್ಣ ಸಸ್ತನಿ ಭಯಂಕರ ಪ್ರಾಣಿ. ಈ ಗುಂಪಿನ ಸಣ್ಣ ಬಾಲದ ಶ್ರೂ, ತನ್ನ ಮೈತೂಕದ ಎರಡು ಪಟ್ಟು ತೂಕವಿರುವ ಪ್ರಾಣಿಗಳಿಗೂ ಧಾಳಿ ಮಾಡುತ್ತದೆ; ತನ್ನ ಜೊಲ್ಲುರಸದ ಗ್ರಂಥಿಗಳ ವಿಷಪೂರಿತ ಸ್ರಾವದಿಂದ ಅವನ್ನು ಕೊಂದು, ಅವುಗಳ ಎಲುಬು ಸಹಿತವಾಗಿ ತಿಂದು ಬಿಡುತ್ತದೆ. ಇದರ ಆ ಗ್ರಂಥಿಗಳಲ್ಲಿರುವ ವಿಷ ೨೦೦ ಇಲಿಗಳನ್ನು ಕೊಲ್ಲಲು ಸಾಕು ಎಂಬುದನ್ನು ಪ್ರಯೋಗಗಳು ತೋರಿಸಿ ಕೊಟ್ಟಿವೆ.
8)ನೀರಾನೆಗಳು ತಮ್ಮ ಮರಿಗಳಿಗೆ ನೀರಿನೊಳಗೆ ಜನ್ಮ ನೀಡುತ್ತವೆ; ತಮ್ಮ ಮರಿಗಳನ್ನು ನದಿಗಳಲ್ಲೇ ಸಾಕುತ್ತವೆ. ಎಳೆಯ ನೀರಾನೆಗಳು ಗಾಳಿಗಾಗಿ ಆಗಾಗ್ಗೆ ನೀರಿನೊಳಗಿನಿಂದ ಮೇಲಕ್ಕೆ ಬರುತ್ತವೆ.
9)ರಾಜ ಕುಬ್ಲಾಯ್ ಖಾನ್ ಆಳ್ವಿಕೆಯ ಕಾಲದಲ್ಲಿ ಚೀನೀಯರು ಬೇಟೆಗಾಗಿ ಸಿಂಹಗಳನ್ನು ಪಳಗಿಸಿದ್ದರು. ಈ ಸಿಂಹಗಳು ಕಾಡುಕೋಣಗಳು ಮತ್ತು ಕರಡಿಗಳಂತಹ ದೊಡ್ದ ಪ್ರಾಣಿಗಳನ್ನು ಬೆನ್ನಟ್ಟಿ, ಕೊಂದು, ಬೇಟೆಗಾರರು ಬರುವ ವರೆಗೆ ಕಾಯುತ್ತಿದ್ದವು.