ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 11)

51)ದಕ್ಷಿಣ ಅಮೇರಿಕಾದ ವಿಕುನಾ ಎಂಬ ಪ್ರಾಣಿ ಒಂಟೆಯಂತಿದೆ. ಆದರೆ ಒಂಟೆಗಿಂತ ಬಹಳ ಸಣ್ಣದು; ಇದರ ಉಣ್ಣೆ ಬಹಳ ಮೃದು. ಕೇವಲ ಒಂದು ನಿಮಿಷದ ಮುಂಚೆ ಹುಟ್ಟಿದ ವಿಕುನಾ ಎಳೆಗರು ಮನುಷ್ಯನಿಗಿಂತ ವೇಗವಾಗಿ ಓಡಬಲ್ಲದು!

52)ವಯಸ್ಕ ಮುಳ್ಳುಹಂದಿಯ ಮೈಯಲ್ಲಿ ೩೦,೦೦೦ ಮುಳ್ಳುಗಳಿವೆ - ತಲೆ, ಬೆನ್ನು, ಎಡ-ಬಲ ಪಕ್ಕೆ ಮತ್ತು ಬಾಲದಲ್ಲಿ. ಅದರ ಹೊಟ್ಟೆಯಲ್ಲಿ ಮಾತ್ರ ಮುಳ್ಳುಗಳಿಲ್ಲ. ಅದರ ಮುಳ್ಳು ಇತರ ಪ್ರಾಣಿಗಳ ಮಾಂಸದಲ್ಲಿ ತೂರಿ ಕೊಂಡರೆ, ಅದನ್ನು ಕಿತ್ತು ತೆಗೆಯುವುದು ಕಷ್ಟಸಾಧ್ಯ. (ಫೋಟೋ ನೋಡಿ)

53)ಮರಳಿನಲ್ಲಿ ಗುಳಿ ತೋಡಿ, ಹೆಣ್ಣು ಮೊಸಳೆ ಮೊಟ್ಟೆಯಿಟ್ಟು ಮೂರು ತಿಂಗಳ ನಂತರ ಅವುಗಳಿಂದ ಮರಿಗಳು ಹೊರ ಬರಲು ತಯಾರು. ಆದರೆ, ಮರಿಗಳಿಗೆ ತಮ್ಮ ಮೇಲಿರುವ ಮರಳನ್ನು ಜಾಡಿಸಲು ಶಕ್ತಿ ಇರೋದಿಲ್ಲ; ಹಾಗಾಗಿ ಅವು ಮೊಟ್ಟೆಯೊಳಗೆ ಇದ್ದುಕೊಂಡೇ ತಲೆ ಹೊರಗೆ ಹಾಕಿ, ಪಿಳಿಪಿಳಿ ಕಣ್ಣು ಬಿಡುತ್ತವೆ. ಆಗ, ಮೊಟ್ಟೆಗಳನ್ನು ರಕ್ಷಿಸುತ್ತಿರುವ ಅಮ್ಮ-ಮೊಸಳೆಗೆ ಮರಿಗಳ ಕೂಗು ಕೇಳಿಸಿ, ಅದು ಮರಳನ್ನು ಅಗೆದು ತೆಗೆದು, ಮರಿಗಳನ್ನು ಬಿಡುಗಡೆ ಮಾಡುತ್ತದೆ.

54)ಅರುವತ್ತು ಮಿಲಿಯ ವರುಷಗಳ ಮುಂಚೆ ಈಗಿನ ಕುದುರೆಗಳ ಪೂರ್ವಿಕರ ಎತ್ತರ ಕೇವಲ ಒಂದು ಅಡಿ!

55)ಉತ್ತರ ಅಮೇರಿಕಾದ ಗೋಫರ್ ಎಂಬ ಇಲಿಯಂತಿರುವ ಪ್ರಾಣಿ ಸುರಂಗ ತೋಡುತ್ತದೆ. ಅದರ ವೇಗ, ಒಬ್ಬ ಮನುಷ್ಯ ೧೮ ಇಂಚು ವ್ಯಾಸದ ಮತ್ತು ೧೧ ಕಿಮೀ ಉದ್ದದ ಸುರಂಗವನ್ನು ೧೦ ಗಂಟೆ ಅವಧಿಯಲ್ಲಿ ಕೊರೆಯುವುದಕ್ಕೆ ಸಮ!

56)ಮಧ್ಯ ಮತ್ತು ದಕ್ಷಿಣ ಅಮೇರಿಕಾದ ಮಂಗಗಳು ತಮ್ಮ ಬಾಲಗಳಿಂದ ನೇತಾಡುತ್ತವೆ. ಆಫ್ರಿಕಾ ಮತ್ತು ಏಷ್ಯಾದ ಮಂಗಗಳಿಗೆ ಉದ್ದ ಬಾಲವಿದ್ದರೂ ಅವು ಬಾಲಗಳಿಂದ ನೇತಾಡುವುದಿಲ್ಲ. ಇವುಗಳ ನಡುವಣ ಇನ್ನೊಂದು ವ್ಯತ್ಯಾಸ: ಆಫ್ರಿಕಾ ಮತ್ತು ಏಷ್ಯಾದ ಮಂಗಗಳಿಗೆ ದಪ್ಪ ಚರ್ಮದ "ಕೂರುವ ಪ್ಯಾಡ್” (ಸಿಟ್ಟಿಂಗ್ ಪ್ಯಾಡ್) ಇದೆ; ಮಧ್ಯ ಮತ್ತು ದಕ್ಷಿಣ ಅಮೇರಿಕಾದ ಮಂಗಗಳಲ್ಲಿ ಇದು ಇಲ್ಲ.