36)ನೀಲಗಿರಿ ಮರ ನಿರ್ವಂಶವಾದರೆ ಆಸ್ಟ್ರೇಲಿಯಾದ ಮರ ಹತ್ತುವ ಕೋಲಾ ಕರಡಿಗಳೂ ನಿರ್ವಂಶವಾಗುತ್ತವೆ! ಯಾಕೆಂದರೆ, ಕೋಲಾ ಕರಡಿಗಳು ನೀಲಗಿರಿ ಮರದ ಎಲೆಗಳನ್ನು ಮಾತ್ರ ತಿನ್ನುತ್ತವೆ. ಹಾಗೆಯೇ, ಆಫ್ರಿಕಾದ ಜೀಬ್ರಾಗಳು ನಿರ್ವಂಶವಾದರೆ, ಆಫ್ರಿಕಾದ ಸಿಂಹಗಳ ಸಂಖ್ಯೆಯೂ ಕುಸಿಯುತ್ತದೆ. ಜೇನ್ನೊಣಗಳು ನಿರ್ವಂಶವಾದರೆ, ಪರಕೀಯ ಪರಾಗಸ್ಪರ್ಶಕ್ಕಾಗಿ ಜೇನ್ನೊಣಗಳನ್ನೇ ಅವಲಂಬಿಸಿರುವ ಸಾವಿರಾರು ಸಸ್ಯ ಜಾತಿಗಳೂ ನಿರ್ನಾಮವಾಗುತ್ತವೆ.
37)ಉತ್ತರ ಅಮೇರಿಕಾದ ಬಯಲುಗಳಲ್ಲಿ ಕಾಡುಕೋಣಗಳ ಹಿಂಡುಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಲದಲ್ಲಿ, ಥೋಮಸ್ ಫರ್ನ್-ಹಾಮ್ ಎಂಬಾತ ಬೃಹತ್ ಹಿಂಡು ಕಂಡದ್ದು ದಾಖಲಾಗಿದೆ. ಸಂಟಾ ಫೆ ಎಂಬಲ್ಲಿ ೧೮೩೯ರಲ್ಲಿ ಪ್ರಯಾಣಿಸುತ್ತಿದ್ದ ಆತ ಆ ಹಿಂಡನ್ನು ದಾಟಲು ಮೂರು ದಿನಗಳು ತಗಲಿದ್ದವು. ಹತ್ತು ಲಕ್ಷಗಳಿಗಿಂತ ಅಧಿಕ ಕಾಡುಕೋಣಗಳಿದ್ದ ಆ ಬೃಹತ್ ಹಿಂಡು ೧,೩೫೦ ಚದರ ಮೈಲು ಪ್ರದೇಶವನ್ನು ಆವರಿಸಿತ್ತು ಎಂದು ಅಂದಾಜಿಸಲಾಗಿದೆ.
38)ಅಧಿಕೃತ ಅಂಕೆಸಂಖ್ಯೆಗಳ ಅನುಸಾರ, ಇಪ್ಪತ್ತನೆಯ ಶತಮಾನದ ಆರಂಭದ ವರುಷಗಳಲ್ಲಿ, ಅಮೇರಿಕಾದ ನ್ಯೂಯಾರ್ಕ್ ನಗರದ ರಸ್ತೆಗಳಲ್ಲಿ ಒಂದು ಲಕ್ಷಕ್ಕಿಂತ ಜಾಸ್ತಿ ಕುದುರೆಗಳು ಓಡಾಡುತ್ತಿದ್ದವು ಮತ್ತು ನಗರವನ್ನು ಮಲಿನ ಮಾಡುತ್ತಿದ್ದವು.
39)ಒಬ್ಬ ಮನುಷ್ಯನ ಕೈಯನ್ನು ತುಂಡು ಮಾಡುವಷ್ಟು ಬಲದಿಂದ ಅಲಿಗೇಟರ್ (ಮೊಸಳೆ) ತನ್ನ ದವಡೆಗಳನ್ನು ಮುಚ್ಚ ಬಲ್ಲದು. ಆದರೆ, ಅದರ ದವಡೆಗಳನ್ನು ತೆರೆಯುವ ಮಾಂಸಖಂಡಗಳು ಎಷ್ಟು ದುರ್ಬಲವಾಗಿವೆ ಎಂದರೆ, ವಯಸ್ಕ ಅಲಿಗೇಟರಿನ ಬಾಯಿಯನ್ನು ಒಬ್ಬ ಮನುಷ್ಯ ಒಂದೇ ಕೈಯಿಂದ ತೆರೆಯಲಾಗದಂತೆ ಒತ್ತಿ ಹಿಡಿಯಬಲ್ಲ! (ಫೋಟೋ)
40)ಮೊಸಳೆಗಳ ಜೀರ್ಣ-ರಸಗಳಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಭರ್ಜರಿಯಾಗಿದೆ. ಅದು ಎಷ್ಟಿದೆಯೆಂದರೆ, ಮೊಸಳೆಗಳು ನುಂಗಿದ ಈಟಿಯ ಕಬ್ಬಿಣದ ಮೊನೆಗಳು ಮತ್ತು ಆರು-ಇಂಚು ಉದ್ದದ ಉಕ್ಕಿನ ಕೊಕ್ಕೆಗಳೂ ಕರಗಿ ಹೋಗಿವೆ!