ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 5)

21)ಸಿಂಹಗಳ ಕುಟುಂಬಗಳಲ್ಲಿ ಹೆಣ್ಣು ಸಿಂಹಗಳೇ ಶೇಕಡಾ ೯೦ಕ್ಕಿಂತ ಜಾಸ್ತಿ ಬೇಟೆ ಮಾಡುತ್ತವೆ. ಗಂಡು ಸಿಂಹಗಳಿಗೆ ಜೀವಭಯ ಜಾಸ್ತಿ ಮತ್ತು ಅವು ವಿರಮಿಸಲು ಇಷ್ಟ ಪಡುತ್ತವೆ.

22)ಚಕ್‌ವಲ್ಲಾ ಎಂಬ ಹಲ್ಲಿಗಳು ತಮ್ಮನ್ನು ಹಿಡಿಯಲು ಪ್ರಯತ್ನಿಸುವ ಜೀವಿಗಳಿಂದ ಪಾರಾಗಲು ಬಳಸುವ ಉಪಾಯ: ಹತ್ತಿರದ ಕಲ್ಲಿನ ಸೀಳಿನೊಳಗೆ ನುಸುಳಿ, ತನ್ನ ದೇಹದೊಳಗೆ ಗಾಳಿ ತುಂಬಿಕೊಳ್ಳುವುದು. ಆಗ ಇದರ ದೇಹ ಆ ಸೀಳಿನೊಳಗೆ ಬಿಗಿಯಾಗಿ ಅಂಟಿಕೊಂಡು, ಇದನ್ನು ಹೊರಕ್ಕೆಳೆಯಲು ಸಾಧ್ಯವಾಗೋದಿಲ್ಲ.

23)ಕತ್ತೆಕಿರುಬಗಳ ಬಗ್ಗೆ ಇರುವ ತಪ್ಪು ಕಲ್ಪನೆ: ಅವು ಸಿಂಹಗಳು ಕೊಂದು ತಿಂದು ಬಿಟ್ಟ ಪ್ರಾಣಿಗಳು ಅಳಿದುಳಿದ ಭಾಗಗಳನ್ನು ತಿಂದು ಬದುಕುವ ಹೇಡಿ ಸ್ವಚ್ಛಕಾರಿ ಪ್ರಾಣಿಗಳು ಎಂದು. ಆದರೆ, ನಿಜವಾಗಿ ಅವು ಚುರುಕಿನ ಮತ್ತು ಧೈರ್ಯವಂತ ಬೇಟೆಗಾರ ಪ್ರಾಣಿಗಳು. ಅವುಗಳ ಬಲಿಪ್ರಾಣಿಗಳು ರೋಗಪೀಡಿತ ಅಥವಾ ಅಸಹಾಯ ಪ್ರಾಣಿಗಳಲ್ಲ; ಬದಲಾಗಿ, ಆರೋಗ್ಯವಂತ ಹಾಗೂ ವಯಸ್ಕ ಜೀಬ್ರಾಗಳು. ಅರ್ಧ ಟನ್ ತೂಕದ ಆಫ್ರಿಕನ್ ಕಾಡುಕೋಣಗಳನ್ನೂ ಕತ್ತೆಕಿರುಬಗಳು ಬೆನ್ನಟ್ಟಿ ಕೊಲ್ಲುತ್ತವೆ.

24)ಒಂದಾನೊಂದು ಕಾಲದಲ್ಲಿ ಯುರೋಪಿನ ಎಲ್ಲ ಅರಣ್ಯಗಳಲ್ಲಿಯೂ ತೋಳಗಳ ಹಿಂಡುಗಳು ಸುತ್ತಾಡುತ್ತಿದ್ದವು. ೧೪೨೦ ಮತ್ತು ೧೪೩೮ರಲ್ಲಿ ಪ್ಯಾರಿಸಿನ ರಸ್ತೆಗಳಲ್ಲಿಯೂ ತೋಳಗಳು ತಿರುಗಾಡುತ್ತಿದ್ದವು!

25)ಒಂಟೆಗಳ ಮೂಲಸ್ಥಾನ ಉತ್ತರ ಅಮೇರಿಕಾ. ಅಲ್ಲಿ ನಿರ್ವಂಶವಾಗುವ ಮುನ್ನ, ಒಂಟೆಗಳ ಹಿಂಡುಗಳು ದಕ್ಷಿಣ ಅಮೇರಿಕಾ ಮತ್ತು ಏಷ್ಯಾ ಖಂಡಗಳಿಗೆ ವಲಸೆ ಹೋದವು. ದಕ್ಷಿಣ ಅಮೇರಿಕಾದಲ್ಲಿ ಈಗ ಕಾಣ ಬರುವ ಒಂಟೆ ಜಾತಿಯ ಪ್ರಾಣಿಗಳು: (ಅ) ಕಾಡು ಗುನಾಕೊ ಮತ್ತು ವಿಕುನಾ (ಆ) ಸಾಕುಪ್ರಾಣಿ ಅಲ್ಪಾಕ ಮತ್ತು ಲಾಮಾ. ಏಷ್ಯಾದಲ್ಲಿ ಈಗ ಎರಡು ಜಾತಿಯ ಒಂಟೆಗಳಿವೆ: (ಇ) ಒಂದು ಬೆನ್ನು-ಡುಬ್ಬದ ಅರೇಬಿಯನ್ ಒಂಟೆ (ಈ) ಎರಡು ಬೆನ್ನು-ಡುಬ್ಬದ ಮಧ್ಯಏಷ್ಯಾ ಒಂಟೆ. (ಫೋಟೋ ನೋಡಿ)