ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 9)

41)ಟಾಸ್ಮೇನಿಯಾದ “ತೋಳ" ಅಥವಾ “ಹುಲಿ" ಅಳಿದುಹೋದ ಮಾಂಸಾಹಾರಿ ಪರಭಕ್ಷಕ (ಪ್ರಿಡೇಟರ್). ಇವು ಎರಡು ದಶಲಕ್ಷ ವರುಷಗಳ ಮುಂಚೆ ವಿಕಾಸ ಹೊಂದಿ, ಆಸ್ಟ್ರೇಲಿಯಾ, ಟಾಸ್ಮೇನಿಯಾ ಮತ್ತು ನಿವ್ ಗಿನಿಯಾಗಳಲ್ಲಿ ವಾಸವಾಗಿದ್ದವು. ಈ ವಂಶದ ಕೊನೆಯ ಪ್ರಾಣಿ ೧೯೩೬ರಲ್ಲಿ ಟಾಸ್ಮೇನಿಯಾದ ಮೃಗಾಲಯದಲ್ಲಿ ಸತ್ತಿತು. ಐವತ್ತು ಇಂಚುಗಳಷ್ಟು ಉದ್ದವಿದ್ದ ಇವುಗಳ ಬಾಲವೇ ೨೫ ಇಂಚು ಉದ್ದವಿತ್ತು. ಇವು ಕಾಂಗರೂಗಳು, ದಂಶಕಗಳು ಮತ್ತು ಹಕ್ಕಿಗಳ ರಕ್ತವನ್ನೇ ಇಷ್ಟಪಟ್ಟು ಸೇವಿಸುತ್ತಿದ್ದವು. ಅಂದರೆ, ಈ ಪ್ರಾಣಿಗಳ ಮೂಗಿನ ಅಥವಾ ಲಿವರಿನ ರಕ್ತತುಂಬಿದ ಅಂಗಾಂಶಗಳನ್ನು ತಿನ್ನುತ್ತಿದ್ದವು; ಮಾಂಸಖಂಡಗಳನ್ನು ತಿನ್ನುತ್ತಿರಲಿಲ್ಲ. ಒಮ್ಮೆ ರಕ್ತ ಸೇವಿಸಿ ಹೋದರೆ, ಪುನಃ ಬಲಿಪ್ರಾಣಿಯ ಹತ್ತಿರ ಬರುತ್ತಿರಲಿಲ್ಲ.

42)ಆನೆಗಳಿಗೆ ಮತ್ತು ಚಿಕ್ಕ-ಬಾಲದ ಶ್ರೂಗಳಿಗೆ ದಿನಕ್ಕೆ ಕೇವಲ ಎರಡು ಗಂಟೆಗಳ ನಿದ್ದೆ ಸಾಕು; ಆದರೆ, ಗೊರಿಲ್ಲಾಗಳು ಮತ್ತು ಬೆಕ್ಕು ಜಾತಿಯ ಪ್ರಾಣಿಗಳಿಗೆ ದಿನಕ್ಕೆ ೧೪ ಗಂಟೆಗಳ ನಿದ್ದೆ ಬೇಕು. ಗಮನಿಸಿ: ಪ್ರಾಣಿಗಳ ನಿದ್ದೆಯ ಅಂತರ ೨ರಿಂದ ೧೪ ಗಂಟೆ.

43)ನಮ್ಮ ಎಲ್ಲ ಸಾಕುಪ್ರಾಣಿಗಳನ್ನು ಪಳಗಿಸಿದವರು ನಮ್ಮ ಪೂರ್ವಿಕರು. ಕಳೆದ ೪,೦೦೦ ವರುಷಗಳಲ್ಲಿ ಯಾವುದೇ ಹೊಸಪ್ರಾಣಿಯನ್ನು “ಸಾಕುಪ್ರಾಣಿ"ಯಾಗಿ ಮನುಷ್ಯರು ಪಳಗಿಸಿಲ್ಲ.
44)ಆರ್ಕಟಿಕ್ ಟುನ್‌ಡ್ರಾದ ಕಸ್ತೂರಿ ಎತ್ತು (ಮಸ್ಕ್ ಓಕ್ಸ್)ಗಳ ಉದ್ದನೆಯ ರೋಮಕವಚದ ಒಳಗಡೆ ಉಣ್ಣೆಯ ಕವಚವಿದೆ. ಇದು ಅತ್ಯುತ್ತಮ ಉಷ್ಣ ನಿರೋಧಕ. ಯಾಕೆಂದರೆ, ಕಸ್ತೂರಿ ಎತ್ತು ಅಥವಾ ದನ ಹಿಮದಲ್ಲಿ ಮಲಗಿದಾಗ, ಅದರ ದೇಹದ ಉಷ್ಣತೆಯಿಂದಾಗಿ ಅಲ್ಲಿನ ಹಿಮ ಕರಗುವುದಿಲ್ಲ!

45)ಅಮೇರಿಕಾದಲ್ಲಿ ಮರಗಳಲ್ಲಿ ವಾಸ ಮಾಡುವ ಒಪಾಸಮ್‌ಗಳು ವಿಕಾಸ ಹೊಂದಿದ್ದು ೪೫ ಮಿಲಿಯ ವರುಷಗಳ ಮುಂಚೆ. (ಫೋಟೋ ನೋಡಿ)