News Papers - Front Pages

೬೪.ಭಾರತದ ವಾರ್ತಾಪತ್ರಿಕೆಗಳ ಉದ್ಯಮಕ್ಕೆ ಜಗತ್ತಿನಲ್ಲಿ ಮುಂಚೂಣಿ ಸ್ಥಾನ
ಟೆಲಿವಿಷನ್ ಮತ್ತು ಇಂಟರ್-ನೆಟ್‌ನಿಂದಾಗಿ ವಾರ್ತಾಪತ್ರಿಕೆಗಳು ಓದುಗರನ್ನು ಕಳೆದುಕೊಳ್ಳುತ್ತಿವೆ ಎಂಬ ಕೂಗು ಕಳೆದ ಇಪ್ಪತ್ತು ವರುಷಗಳಲ್ಲಿ ಜೋರಾಗಿದೆ. ಆದರೆ ಹಾಗೇನೂ ಆಗಿಲ್ಲ. ಅಂಕೆಸಂಖ್ಯೆಗಳ ಅನುಸಾರ ವಾರ್ತಾಪತ್ರಿಕೆಗಳ ಓದುಗರ ಸಂಖ್ಯೆಯಲ್ಲಿ ವರುಷದಿಂದ ವರುಷಕ್ಕೆ ಗಣನೀಯ ಹೆಚ್ಚಳ ದಾಖಲಾಗಿದೆ - ಮುಖ್ಯವಾಗಿ ಭಾರತ ಮತ್ತು ಚೀನಾದಲ್ಲಿ.

ಭಾರತದಲ್ಲಿ ಹಣ ತೆತ್ತು ಪತ್ರಿಕೆ ಖರೀದಿಸುವವರ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ. ಸುಮಾರು ೪೦ ಲಕ್ಷ ಓದುಗರನ್ನು ಹೊಂದಿರುವ ಜಗತ್ತಿನ ಅತ್ಯಧಿಕ ಪ್ರಸಾರದ ಇಂಗ್ಲಿಷ್ ಪತ್ರಿಕೆ - ಭಾರತದ “ಟೈಮ್ಸ್ ಆಫ್ ಇಂಡಿಯಾ".
ಅತ್ಯಧಿಕ ಪ್ರಸಾರ ಹೊಂದಿರುವ ಕನ್ನಡ ವಾರ್ತಾಪತ್ರಿಕೆ “ವಿಜಯವಾಣಿ". ಇದರ ಓದುಗರ ಸಂಖ್ಯೆ ಸುಮಾರು ಏಳು ಲಕ್ಷ. (ಎಲ್ಲ ಆವೃತ್ತಿಗಳ ಸರಾಸರಿ ಒಟ್ಟು ಪ್ರಸಾರ)

Airmail 100 Years - Commemorative Card

೬೩.ಭಾರತದ ಏರ್-ಮೆಯಿಲ್ ಚರಿತ್ರೆ ರೋಚಕ
ಭಾರತದಲ್ಲಿ ಮೊತ್ತಮೊದಲ ಏರ್-ಮೆಯಿಲನ್ನು ವಿಮಾನದಲ್ಲಿ ಸಾಗಿಸಿದ್ದು ೧೯೧೧ರಲ್ಲಿ. ಈ ಏರ್-ಮೆಯಿಲ್ ಸೇವೆಗಾಗಿ ಪೋಸ್ಟ್ ಮಾಸ್ಟರ್ ಜನರಲ್ ಅವರಿಂದ ಬ್ರಿಟಿಷ್ ವೈಮಾನಿಕ ಸರ್ ವಾಲ್ಟರ್ ಜಾರ್ಜ್ ವಿನ್-ಧಾಮ್ ಅನುಮತಿ ಪಡೆದು ಕೊಂಡರು. ಜನಸೇವೆಯ ಉದ್ದೇಶಕ್ಕೆ ಹಣ ಸಂಗ್ರಹಿಸಲಿಕ್ಕಾಗಿ, ತಾನು ನಡೆಸಲಿದ್ದ ಒಂದು ವಸ್ತುಪ್ರದರ್ಶನಕ್ಕೆ ಪ್ರಚಾರ ಪಡೆಯಲಿಕ್ಕಾಗಿ ಅವರು ಈ ಅನುಮತಿ ಪಡೆದರು.

೧೮ ಫೆಬ್ರವರಿ ೧೯೧೧ರಂದು ೬,೦೦೦ ಪತ್ರಗಳ ಮೂಟೆಯನ್ನು ಅಲ್ಲಹಾಬಾದಿನಿಂದ ನೈನಿಗೆ ವಿಮಾನದಲ್ಲಿ ಒಯ್ದ ಪೈಲೆಟ್ ಹೆನ್ರಿ ಪೆಕೆಟ್. ಆ ಪತ್ರಗಳಿಗೆ ಹಾಕಲಾದ ವಿಶೇಷ ಅಂಚೆಮುದ್ರೆಯಲ್ಲಿ ಪರ್ವತಗಳ ಮೇಲೆ ಹಾರುತ್ತಿರುವ ಒಂದು ವಿಮಾನದ ಚಿತ್ರವಿತ್ತು ಮತ್ತು “ಮೊದಲ ಏರಿಯಲ್ ಪೋಸ್ಟ್, ೧೯೧೧, ಯುಪಿ ಎಕ್ಸಿಬಿಷನ್ ಅಲ್ಲಹಾಬಾದ್" ಎಂದು ಮುದ್ರಿಸಲಾಗಿತ್ತು.

ಫೋಟೋ: ಏರ್-ಮೆಯಿಲ್ ೧೦೦ ವರುಷಗಳ ಸಂಸ್ಮರಣಾ ಕಾರ್ಡ್

India Post Logo

೬೨.ಭಾರತೀಯ ಅಂಚೆ ಇಲಾಖೆಯ ಜಾಲ ಒಂದು ವಿಸ್ಮಯ
ಭಾರತೀಯ ಸಂವಹನ ಜಾಲದ ಬೆನ್ನೆಲುಬು ಭಾರತೀಯ ಅಂಚೆ ಇಲಾಖೆ. ಕಳೆದ ೧೫೫ ವರುಷಗಳಲ್ಲಿ ಭಾರತದ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದ ಇಲಾಖೆ ಇದು.

ಭೌಗೋಳಿಕ ವ್ಯಾಪ್ತಿ ಮತ್ತು ಸೇವೆ ಒದಗಿಸುವ ಗ್ರಾಹಕರ ಸಂಖ್ಯೆಯ ದೃಷ್ಟಿಯಿಂದ ಭಾರತೀಯ ಅಂಚೆ ಇಲಾಖೆಯ ಜಾಲ ಜಗತ್ತಿನಲ್ಲೇ ಅತ್ಯಂತ ದೊಡ್ಡದು. ೧೫ ಆಗಸ್ಟ್ ೧೯೪೭ರಂದು ಸ್ವಾತಂತ್ರ್ಯ ಗಳಿಸಿದಾಗ, ಭಾರತದಲ್ಲಿದ್ದ ಅಂಚೆ ಕಚೇರಿಗಳ ಸಂಖ್ಯೆ ೨೩,೩೪೪. ಇವುಗಳಲ್ಲಿ ಬಹುಪಾಲು ಅಂಚೆ ಕಚೇರಿಗಳು ನಗರಗಳು ಹಾಗೂ ಪಟ್ಟಣಗಳಲ್ಲಿ ಇದ್ದವು.

ಅನಂತರ ೭೦ ವರುಷಗಳಲ್ಲಿ ಅಂಚೆ ಕಚೇರಿಗಳ ಸಂಖ್ಯೆ ೧,೫೫,೦೦೦ ದಾಟಿದೆ. ಇವುಗಳಲ್ಲಿ ಸುಮಾರು ೧,೪೦,೦೦೦ ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶಗಳಲ್ಲಿವೆ.

೫.೭ ಲಕ್ಷ ಅಂಚೆ ಪೆಟ್ಟಿಗೆಗಳಿಂದ ಪತ್ರಗಳನ್ನು ದಿನದಿನವೂ ಸಂಗ್ರಹಿಸಿ, ಅಂಚೆ ಕಚೇರಿಗಳಲ್ಲಿ ವಿಂಗಡಿಸಿ, ವಾಹನಗಳು, ರೈಲುಗಳು ಮತ್ತು ವಿಮಾನಗಳ ಮೂಲಕ ಸಾಗಿಸಿ ದೇಶದ ಮೂಲೆಮೂಲೆಗೂ ತಲಪಿಸುವುದೇ ಒಂದು ವಿಸ್ಮಯ.

All India Radio Station at Leh in Ladakh, India

ಬಾಹ್ಯಾಕಾಶ ಮತ್ತು ಸಂವಹನ
೬೧.ಜಗತ್ತಿನ ಅತ್ಯಂತ ಎತ್ತರ ಪ್ರದೇಶದ ರೇಡಿಯೋ ಕೇಂದ್ರ ಭಾರತದಲ್ಲಿದೆ.
ಲಡಕ್ ಪ್ರದೇಶದ ಲೆಹ್ ಜಿಲ್ಲೆಯಲ್ಲಿ ಸಮುದ್ರಮಟ್ಟದಿಂದ ೩,೫೯೬ ಮೀಟರ್ ಎತ್ತರದ ಸ್ಥಳದಲ್ಲಿರುವ ರೇಡಿಯೋ ಕೇಂದ್ರ ಜಗತ್ತಿನ ಅತ್ಯಂತ ಎತ್ತರ ಪ್ರದೇಶದ ರೇಡಿಯೋ ಕೇಂದ್ರ. ಆಲ್ ಇಂಡಿಯಾ ರೇಡಿಯೋದ ಈ ಕೇಂದ್ರ ೨೫ ಜೂನ್ ೧೯೭೧ರಿಂದ ಕಾರ್ಯಾಚರಿಸುತ್ತಿದೆ.

ಈ ಕೇಂದ್ರವನ್ನು ೨೦೦೮ರಲ್ಲಿ ಎಫ್-ಎಮ್ ಕೇಂದ್ರವನ್ನಾಗಿ ಪರಿವರ್ತಿಸಿ, ಉಪಗ್ರಹ ಸಂಪರ್ಕ ಒದಗಿಸಿದಾಗ ಇದರ ಪ್ರಸಾರ ಸಾಮರ್ಥ್ಯ ಇನ್ನಷ್ಟು ಹೆಚ್ಚಾಯಿತು. ಭೌಗೋಳಿಕ ಅಡೆತಡೆಗಳಿಂದಾಗಿ ರೇಡಿಯೋ ಮತ್ತು ಟೆಲಿವಿಷನ್ ಸಿಗ್ನಲುಗಳನ್ನು ಪಡೆಯುವುದು ಸಾಧ್ಯವಿಲ್ಲದಿದ್ದ ಪ್ರದೇಶದಲ್ಲಿ ಅವನ್ನೆಲ್ಲ ನಿವಾರಿಸಿ ಪ್ರಸಾರ ಸೇವೆ ಒದಗಿಸಿದ್ದು ಕ್ರಾಂತಿಕಾರಿ ಬೆಳವಣಿಗೆ. ಅಲ್ಲಿನ ಯುವಜನರಿಗಂತೂ ಇದೊಂದು ವರದಾನವಾಗಿದೆ. ಅಲ್ಲಿನ ಎಫ್-ಎಮ್ ಪ್ರಸಾರ ಜನಪ್ರಿಯತೆಯ ಉತ್ತುಂಗದಲ್ಲಿದೆ.

 

Test Tubes in Laboratory

೬೦.ಜಗತ್ತಿಗೆ ಭಾರತದ ಕೊಡುಗೆ: ಓಪನ್ ಸೋರ್ಸ್ ಡ್ರಗ್ ಡಿಸ್ಕವರಿ ಪ್ರೋಗ್ರಾಮ್
ಭಾರತದ ವೈಜ್ನಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿ (ಸಿಎಸ್‌ಐಆರ್) ಓಪನ್ ಸೋರ್ಸ್ ಡ್ರಗ್ ಡಿಸ್ಕವರಿ ಪ್ರೋಗ್ರಾಮ್ ಎಂಬ ವಿಶೇಷ ಪ್ರೋಗ್ರಾಮನ್ನು ಶುರು ಮಾಡಿದೆ. ಜಗತ್ತಿನ ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ಜನರಿಗೆ, ಮುಖ್ಯವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರಗಳಲ್ಲಿ ಔಷಧಿಗಳನ್ನು ಒದಗಿಸುವುದು ಇದರ ಉದ್ದೇಶ.

ಕ್ಷಯ ಮತ್ತು ಮಲೇರಿಯಾ ಇತ್ಯಾದಿ ಉಷ್ಣವಲಯದ ಜನರನ್ನು ಬಾಧಿಸುವ ರೋಗಗಳಿಗೆ ಹೊಸ ಮತ್ತು ಅಗ್ಗದ ದರದ ಔಷಧಿ ಮತ್ತು ಚಿಕಿತ್ಸಾ ವಿಧಾನಗಳನ್ನು ಶೋಧಿಸುವ ಬಗೆಗಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲಿಕ್ಕಾಗಿ ಜಗತ್ತಿನ ಪ್ರತಿಭಾವಂತರು ಒಟ್ಟಾಗಿ ಕೆಲಸ ಮಾಡಲು ವೇದಿಕೆಯೊಂದನ್ನು ಒದಗಿಸುವುದೇ ಈ ಪ್ರೋಗ್ರಾಮಿನ ಪ್ರಧಾನ ಉದ್ದೇಶ.

ಈಗಾಗಲೇ ಸಾಫ್ಟ್-ವೇರ್ ಮತ್ತು ಹ್ಯೂಮನ್ ಜೀನೋಮ್ ಸೀಕ್ವೆನ್ಸಿಂಗ್ ಇಂತಹ ಕ್ಷೇತ್ರಗಳಲ್ಲಿ ಈ ರೀತಿಯ ಜಾಗತಿಕ ಸಹಯೋಗದ ಪ್ರೋಗ್ರಾಮುಗಳು ಚಾಲ್ತಿಯಲ್ಲಿವೆ. ಡ್ರಗ್ ಡಿಸ್ಕವರಿ ಬಗ್ಗೆ ಇಂತಹ ಪ್ರೋಗ್ರಾಮ್ ಮೊದಲಾಗಿ ಕೈಗೆತ್ತಿಕೊಂಡದ್ದು ಭಾರತದ ಹೆಗ್ಗಳಿಕೆ.

ಫೋಟೋ: ವೈದ್ಯಕೀಯ ಸಂಶೋಧನೆಯ ಸಾಂದರ್ಭಿಕ ಚಿತ್ರ

Graduates in Convocation

೫೯.ಅತ್ಯಧಿಕ ಸಂಖ್ಯೆಯ ಕುಶಲ ವೃತ್ತಿಪರರು - ಭಾರತದ ಹೆಗ್ಗಳಿಕೆ
ಭಾರತೀಯರಿಗೆ ತಮ್ಮ ಮಗ ಅಥವಾ ಮಗಳು ಡಾಕ್ಟರ್, ಇಂಜಿನಿಯರ್, ಕಂಪ್ಯೂಟರ್ ಪರಿಣತ, ವಿಜ್ನಾನಿ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು.

ಇದಕ್ಕೆ ಪೂರಕವಾಗಿ ಭಾರತದಲ್ಲಿವೆ ಜಗತ್ತಿನ ಅತ್ಯಧಿಕ ಸಂಖ್ಯೆಯ ವಿಶ್ವವಿದ್ಯಾಲಯಗಳು; ಕೆಲವು ವಿಶ್ವವಿದ್ಯಾಲಯಗಳು ಜಗತ್ತಿನ ಶ್ರೇಷ್ಠ ವಿದ್ಯಾಸಂಸ್ಥೆಗಳೆಂದು ಗುರುತಿಸಲ್ಪಟ್ಟಿವೆ. ಉದಾಹರಣೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್. ಇದರಿಂದಾಗಿ, ಒಂಭತ್ತು ಶೈಕ್ಷಣಿಕ ವಿಭಾಗಗಳಲ್ಲಿ, ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ವೃತ್ತಿಪರರನ್ನು ಹೊಂದಿರುವ ದೇಶಗಳಲ್ಲಿ ಭಾರತಕ್ಕೆ (ಯುಎಸ್‌ಎ ದೇಶದ ನಂತರ) ಎರಡನೆಯ ಸ್ಥಾನ.

ಆ ಶೈಕ್ಷಣಿಕ ವಿಭಾಗಗಳು: ಕಂಪ್ಯೂಟರ್ ಸಾಫ್ಟ್-ವೇರ್, ಗಣಿತ, ಇಂಟರ್ ಪರ್ಸನಲ್ ಕಮ್ಯೂನಿಕೇಷನ್, ಕಂಪ್ಯೂಟರ್ ಹಾರ್ಡ್-ವೇರ್, ಫೈನಾನ್ಸ್, ಆರೋಗ್ಯಸೇವೆ, ಮಾಹಿತಿ ತಂತ್ರಜ್ನಾನ, ಭಾಷೆಗಳು ಮತ್ತು ಸಂವಹನ, ಮೆನೇಜ್‌ಮೆಂಟ್ ಮತ್ತು ಆಫೀಸ್ ಕೌಶಲ್ಯಗಳು.

ಫೋಟೋ: ಪದವೀದಾನ ಸಮಾರಂಭದಲ್ಲಿ ಪದವೀಧರರ ಸಂಭ್ರಮ

IIT, Delhi

೫೮.ವಿಶ್ವಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳು ಭಾರತದ ಐಐಟಿಗಳು
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) - ನಮ್ಮ ದೇಶದ ಈ ವಿದ್ಯಾಸಂಸ್ಥೆಗಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ವಿಶ್ವಮಾನ್ಯತೆ ಗಳಿಸಿವೆ.

ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲ ಪ್ರತಿಭಾವಂತ ಮತ್ತು ತರಬೇತಾದ ವಿಜ್ನಾನಿಗಳು ಮತ್ತು ಇಂಜಿನಿಯರುಗಳ ದೊಡ್ಡ ತಂಡವನ್ನು ಹೊಂದಬೇಕೆಂಬ ಉದ್ದೇಶದಿಂದ ಐಐಟಿಗಳನ್ನು ಸ್ಥಾಪಿಸಲಾಯಿತು.

ಈಗ ಮುಂಬೈ, ಢೆಲ್ಲಿ, ಕಾನ್ಪುರ, ರೂರ್ಕಿ ಇತ್ಯಾದಿ ಹದಿನಾರು ಸ್ಥಳಗಳಲ್ಲಿ ಐಐಟಿಗಳಿವೆ. ಯಾವುದೇ ಐಐಟಿಗೆ ಪ್ರವೇಶ ಪಡೆಯಬೇಕು ಎಂಬುದೇ ಇಂಜಿನಿಯರ್ ಅಥವಾ ವಿಜ್ನಾನಿ ಆಗಬೇಕೆಂದು ಕನಸು ಕಾಣುವ ಬಹುಪಾಲು ವಿದ್ಯಾರ್ಥಿಗಳ ಬಯಕೆ. ಅದಕ್ಕಾಗಿ ಅವರು ಐಐಟಿ-ಜೀ ಅಂದರೆ ಐಐಟಿ - ಜಾಯಿಂಟ್ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು.   

ಫೋಟೋ: ಐಐಟಿ, ಢೆಲ್ಲಿ

Mangalore University, Mangalore, Karnataka, India

೫೭.ಜಗತ್ತಿನಲ್ಲಿ ಅತ್ಯಧಿಕ ವಿಶ್ವವಿದ್ಯಾಲಯಗಳಿರುವ ದೇಶ ಭಾರತ
ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಸಂಖ್ಯೆ (೮೭೫) ಅಭಿವೃದ್ಧಿ ಹೊಂದಿದ ದೇಶವಾದ ಯುಎಸ್‌ಎಯಲ್ಲಿ ಇರುವುದರ ಇಮ್ಮಡಿ ಎಂದಾಗ ನಾವು ಹೆಮ್ಮೆ ಪಡಲೇ ಬೇಕು.

ಭಾರತದಲ್ಲಿ ನಾಲ್ಕು ವಿಧದ ವಿಶ್ವವಿದ್ಯಾಲಯಗಳಿವೆ: ಕೇಂದ್ರ ವಿವಿಗಳು (೫೪), ರಾಜ್ಯ ವಿವಿಗಳು (೪೧೧), ಡೀಮ್ಡ್ ವಿವಿಗಳು (೧೨೩) ಮತ್ತು ಖಾಸಗಿ ವಿವಿಗಳು (೨೮೮).

ಸರಕಾರಿ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರ್ಥಿಕ ನೆರವು ನೀಡುತ್ತವೆ. ಖಾಸಗಿ ವಿಶ್ವವಿದ್ಯಾಲಯಗಳನ್ನು ಖಾಸರಿ ಸಂಸ್ಥೆಗಳು ಅಥವಾ ಖಾಸಗಿ ಸೊಸೈಟಿಗಳು ನಡೆಸುತ್ತವೆ.

ಅತ್ಯುತ್ತಮ ದಕ್ಷತೆಯಿಂದ ಕೆಲಸ ಮಾಡುವ ವಿಶ್ವವಿದ್ಯಾಲಯಗಳನ್ನು "ಡೀಮ್ಡ್ ವಿಶ್ವವಿದ್ಯಾಲಯಗಳು” ಎಂದು ಗುರುತಿಸಲಾಗುತ್ತದೆ.

ಫೋಟೋ: ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು

City Montessori School, Lucknow

೫೬.ಜಗದ್ವಿಖ್ಯಾತ ಸಿಟಿ ಮೊಂಟೆಸ್ಸೊರಿ ಶಾಲೆ, ಲಕ್ನೋ
ಡಾ. ಜಗಧೀಶ್ ಗಾಂಧಿ ೧೯೫೯ರಲ್ಲಿ ಕೇವಲ ಐದು ವಿದ್ಯಾರ್ಥಿಗಳೊಂದಿಗೆ ಸಿಟಿ ಮೊಂಟೆಸ್ಸೊರಿ ಶಾಲೆಯನ್ನು ಲಕ್ನೋದಲ್ಲಿ ಆರಂಭಿಸಿದರು. ಇದೀಗ ಜಗತ್ತಿನ ಅತಿ ದೊಡ್ಡ ಶಾಲೆಯಾಗಿ ಬೆಳೆದಿದೆ. ಇದರ ವಿದ್ಯಾರ್ಥಿಗಳ ಸಂಖ್ಯೆ ೪೭,೦೦೦! ಈ ಶಾಲೆಯ ಕ್ಲಾಸ್-ರೂಮುಗಳ ಸಂಖ್ಯೆ ೧,೦೦೦ ಮತ್ತು ಇಲ್ಲಿವೆ ೩,೭೦೦ ಕಂಪ್ಯೂಟರುಗಳು. ಇಲ್ಲಿನ ಶಿಕ್ಷಕರು ಮತ್ತು ಇತರ ಸಿಬ್ಬಂದಿಯ  ಸಂಖ್ಯೆ ೩,೮೦೦.

ತಮ್ಮ ಶಾಲೆಯ ವಿದ್ಯಾರ್ಥಿಗಳು ಜಾಗತಿಕ ಐಕ್ಯತೆ ಮತ್ತು ಶಾಂತಿಯ ಸಂದೇಶವನ್ನು ಸಮಾಜಕ್ಕೆ ಒಯ್ಯುತ್ತಾರೆಂಬುದು ಡಾ. ಜಗಧೀಶ್ ಗಾಂಧಿ ಅವರ ಕನಸಾಗಿತ್ತು. ೨೦೦೨ರಲ್ಲಿ ಈ ಶಾಲೆಗೆ ಯುನೆಸ್ಕೋ ಶಾಂತಿ ಶಿಕ್ಷಣದ ಪುರಸ್ಕಾರ ಲಭಿಸಿತು. ಇಡೀ ಜಗತ್ತಿನಲ್ಲಿ ಈ ಪುರಸ್ಕಾರ ಗಳಿಸಿದ ಶಾಲೆ ಇದೊಂದೇ ಆಗಿದೆ.

IGNOU - Campus Entrance

೫೫.ಐ.ಜಿ. ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ: ಜಗತ್ತಿನ ಅತಿ ದೊಡ್ಡ ಮುಕ್ತ ವಿಶ್ವವಿದ್ಯಾಲಯ
ಭಾರತದ ಸಂಸತ್ತಿನಲ್ಲಿ ೧೯೮೫ರಲ್ಲಿ ಮಂಜೂರಾದ ಕಾನೂನಿನ ಅನುಸಾರ ಈ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇದರ ಮುಖ್ಯ ಕಚೇರಿ ನವದೆಹಲಿಯಲ್ಲಿದೆ. ಲಕ್ಷಗಟ್ಟಲೆ ಆಸಕ್ತರಿಗೆ ದೂರಶಿಕ್ಷಣ ಒದಗಿಸುತ್ತಿದೆ.

ಎರಡು ಶಿಕ್ಷಣ ಕೋರ್ಸುಗಳ ಮೂಲಕ ೧೯೮೭ರಲ್ಲಿ ಇದು ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಿತು. ಈಗ ಭಾರತ ಮತ್ತು ೩೬ ವಿದೇಶಗಳ ಸುಮಾರು ೫೦ ಲಕ್ಷ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ನೀಡುತ್ತಿದೆ.

ಜನಸಾಮಾನ್ಯರ ವಿಶ್ವವಿದ್ಯಾಲಯ ಎಂದು ಹೆಸರಾಗಿರುವ ಈ ರಾಷ್ಟ್ರೀಯ ವಿಶ್ವವಿದ್ಯಾಲಯ ಎಲ್ಲ ವರ್ಗದ ಜನರಿಗೂ ಉನ್ನತ ಶಿಕ್ಷಣ ನೀಡುತ್ತಿದೆ. ಉದ್ಯೋಗಿಗಳಿಗೂ ತಮ್ಮ ಶಿಕ್ಷಣ ಮುಂದುವರಿಸಲು ಅವಕಾಶ ಒದಗಿಸುತ್ತಿದೆ. ಪ್ರತ್ಯೇಕ ಟಿವಿ ಚಾನೆಲಿನ ಮೂಲಕ ತನ್ನ ಪಾಠಗಳ ಪ್ರಸಾರ ಮಾಡುತ್ತಿದೆ. ಹಾಗಾಗಿ, ಮನೆಯಲ್ಲೇ ಕುಳಿತು ಅಧ್ಯಯನ ಮಾಡಲು ಸಾಧ್ಯ.

Pages