ನಮ್ಮ ಹೆಮ್ಮೆಯ ಭಾರತ (ಭಾಗ 64)

News Papers - Front Pages

೬೪.ಭಾರತದ ವಾರ್ತಾಪತ್ರಿಕೆಗಳ ಉದ್ಯಮಕ್ಕೆ ಜಗತ್ತಿನಲ್ಲಿ ಮುಂಚೂಣಿ ಸ್ಥಾನ
ಟೆಲಿವಿಷನ್ ಮತ್ತು ಇಂಟರ್-ನೆಟ್‌ನಿಂದಾಗಿ ವಾರ್ತಾಪತ್ರಿಕೆಗಳು ಓದುಗರನ್ನು ಕಳೆದುಕೊಳ್ಳುತ್ತಿವೆ ಎಂಬ ಕೂಗು ಕಳೆದ ಇಪ್ಪತ್ತು ವರುಷಗಳಲ್ಲಿ ಜೋರಾಗಿದೆ. ಆದರೆ ಹಾಗೇನೂ ಆಗಿಲ್ಲ. ಅಂಕೆಸಂಖ್ಯೆಗಳ ಅನುಸಾರ ವಾರ್ತಾಪತ್ರಿಕೆಗಳ ಓದುಗರ ಸಂಖ್ಯೆಯಲ್ಲಿ ವರುಷದಿಂದ ವರುಷಕ್ಕೆ ಗಣನೀಯ ಹೆಚ್ಚಳ ದಾಖಲಾಗಿದೆ - ಮುಖ್ಯವಾಗಿ ಭಾರತ ಮತ್ತು ಚೀನಾದಲ್ಲಿ.

ಭಾರತದಲ್ಲಿ ಹಣ ತೆತ್ತು ಪತ್ರಿಕೆ ಖರೀದಿಸುವವರ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ. ಸುಮಾರು ೪೦ ಲಕ್ಷ ಓದುಗರನ್ನು ಹೊಂದಿರುವ ಜಗತ್ತಿನ ಅತ್ಯಧಿಕ ಪ್ರಸಾರದ ಇಂಗ್ಲಿಷ್ ಪತ್ರಿಕೆ - ಭಾರತದ “ಟೈಮ್ಸ್ ಆಫ್ ಇಂಡಿಯಾ".
ಅತ್ಯಧಿಕ ಪ್ರಸಾರ ಹೊಂದಿರುವ ಕನ್ನಡ ವಾರ್ತಾಪತ್ರಿಕೆ “ವಿಜಯವಾಣಿ". ಇದರ ಓದುಗರ ಸಂಖ್ಯೆ ಸುಮಾರು ಏಳು ಲಕ್ಷ. (ಎಲ್ಲ ಆವೃತ್ತಿಗಳ ಸರಾಸರಿ ಒಟ್ಟು ಪ್ರಸಾರ)

ಪತ್ರಿಕೆ ಬಿಡುಗಡೆಯಾದ ದಿನವೇ ಅತ್ಯಧಿಕ ಪ್ರತಿಗಳ ಮಾರಾಟ ದಾಖಲಿಸಿದ ಸಾಧನೆ “ದೈನಿಕ್ ಭಾಸ್ಕರ್" ಎಂಬ ಹಿಂದಿ ವಾರ್ತಾಪತ್ರಿಕೆಯದು. ಇದಕ್ಕಾಗಿ ಆ ಪತ್ರಿಕೆ ಅನುಸರಿಸಿದ ಮಾರಾಟ ತಂತ್ರ ಕುತೂಹಲಕರ: ಪತ್ರಿಕೆಯ ಮೊದಲ ಸಂಚಿಕೆಯ ಜೊತೆ ಒಂದು ಕಿಲೋಗ್ರಾಮ್ ಅಡುಗೆ ಉಪ್ಪನ್ನು ಉಚಿತವಾಗಿ ಕೊಡಲಾಗುವುದು ಎಂದು ಆ ಪತ್ರಿಕೆ ಭರ್ಜರಿ ಪ್ರಚಾರ ಮಾಡಿತು! ಅಡುಗೆ ಉಪ್ಪು ಮನೆಮನೆಗೂ ಬೇಕು ತಾನೇ? ಹಾಗಾಗಿ ದೈನಿಕ್ ಭಾಸ್ಕರ್ ಪತ್ರಿಕೆಯ ಮೊದಲ ಸಂಚಿಕೆಯನ್ನು ಜನರು ಮುಗಿಬಿದ್ದು ಖರೀದಿಸಿದ್ದರಿಂದ, ಅದರ ದಾಖಲೆ ಮಾರಾಟ ಸಾಧ್ಯವಾಯಿತು.