೬೨.ಭಾರತೀಯ ಅಂಚೆ ಇಲಾಖೆಯ ಜಾಲ ಒಂದು ವಿಸ್ಮಯ
ಭಾರತೀಯ ಸಂವಹನ ಜಾಲದ ಬೆನ್ನೆಲುಬು ಭಾರತೀಯ ಅಂಚೆ ಇಲಾಖೆ. ಕಳೆದ ೧೫೫ ವರುಷಗಳಲ್ಲಿ ಭಾರತದ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದ ಇಲಾಖೆ ಇದು.
ಭೌಗೋಳಿಕ ವ್ಯಾಪ್ತಿ ಮತ್ತು ಸೇವೆ ಒದಗಿಸುವ ಗ್ರಾಹಕರ ಸಂಖ್ಯೆಯ ದೃಷ್ಟಿಯಿಂದ ಭಾರತೀಯ ಅಂಚೆ ಇಲಾಖೆಯ ಜಾಲ ಜಗತ್ತಿನಲ್ಲೇ ಅತ್ಯಂತ ದೊಡ್ಡದು. ೧೫ ಆಗಸ್ಟ್ ೧೯೪೭ರಂದು ಸ್ವಾತಂತ್ರ್ಯ ಗಳಿಸಿದಾಗ, ಭಾರತದಲ್ಲಿದ್ದ ಅಂಚೆ ಕಚೇರಿಗಳ ಸಂಖ್ಯೆ ೨೩,೩೪೪. ಇವುಗಳಲ್ಲಿ ಬಹುಪಾಲು ಅಂಚೆ ಕಚೇರಿಗಳು ನಗರಗಳು ಹಾಗೂ ಪಟ್ಟಣಗಳಲ್ಲಿ ಇದ್ದವು.
ಅನಂತರ ೭೦ ವರುಷಗಳಲ್ಲಿ ಅಂಚೆ ಕಚೇರಿಗಳ ಸಂಖ್ಯೆ ೧,೫೫,೦೦೦ ದಾಟಿದೆ. ಇವುಗಳಲ್ಲಿ ಸುಮಾರು ೧,೪೦,೦೦೦ ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶಗಳಲ್ಲಿವೆ.
೫.೭ ಲಕ್ಷ ಅಂಚೆ ಪೆಟ್ಟಿಗೆಗಳಿಂದ ಪತ್ರಗಳನ್ನು ದಿನದಿನವೂ ಸಂಗ್ರಹಿಸಿ, ಅಂಚೆ ಕಚೇರಿಗಳಲ್ಲಿ ವಿಂಗಡಿಸಿ, ವಾಹನಗಳು, ರೈಲುಗಳು ಮತ್ತು ವಿಮಾನಗಳ ಮೂಲಕ ಸಾಗಿಸಿ ದೇಶದ ಮೂಲೆಮೂಲೆಗೂ ತಲಪಿಸುವುದೇ ಒಂದು ವಿಸ್ಮಯ.