೫೪. “ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಕಾರ್ಯಕ್ರಮ” - ಜಗತ್ತಿನ ಬೃಹತ್ ಪೋಷಕಾಂಶ ಪೂರೈಕೆ ಕಾರ್ಯಕ್ರಮ
ಭಾರತದ “ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಕಾರ್ಯಕ್ರಮ”ದ ಮೂಲ ೧೯೨೫ರ ಒಂದು ಕಾರ್ಯಕ್ರಮದಲ್ಲಿದೆ. ಅದುವೇ ನಿರ್ಗತಿಕ ಮಕ್ಕಳಿಗೆ ಆಹಾರ ಒದಗಿಸಲಿಕ್ಕಾಗಿ ಆಗಿನ ಮದ್ರಾಸ್ ಮುನಿಸಿಪಲ್ ಕಾರ್ಪೊರೇಷನ್ ಆರಂಭಿಸಿದ ಕಾರ್ಯಕ್ರಮ.
ಭಾರತ ಸ್ವಾತಂತ್ರ್ಯ ಗಳಿಸಿದ ನಂತರ, ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಕಾರ್ಯಕ್ರಮ ಜ್ಯಾರಿಗೊಳಿಸಿದ ಮೊದಲ ರಾಜ್ಯ ತಮಿಳ್ನಾಡು. ಕ್ರಮೇಣ ಇತರ ರಾಜ್ಯಗಳೂ ಇದೇ ಕಾರ್ಯಕ್ರಮ ಆರಂಭಿಸಿದವು. ಈಗ ಇದು ಜಗತ್ತಿನ ಅತಿ ದೊಡ್ಡ ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಕಾರ್ಯಕ್ರಮ: ೧೨.೬೫ ಲಕ್ಷ ಶಾಲೆಗಳಲ್ಲಿ ೧೨ ಕೋಟಿ ಮಕ್ಕಳಿಗೆ ಮಧ್ಯಾಹ್ನದ ಊಟದ ಮೂಲಕ ಪೋಷಕಾಂಶ ಪೂರೈಸುವ ಬೃಹತ್ ಕಾರ್ಯಕ್ರಮ ಇದಾಗಿದೆ.
ಫೋಟೋ: ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡುತ್ತಿರುವ ವಿದ್ಯಾರ್ಥಿಗಳು
೫೩.ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯರ ಯಶೋಗಾಥೆ
ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರದೇಶವು ಮಾಹಿತಿ ತಂತ್ರಜ್ನಾನದ ಅನುಶೋಧನೆ ಮತ್ತು ಅಭಿವೃದ್ಧಿಗಾಗಿ ಜಗತ್ತಿನಲ್ಲೇ ಹೆಸರುವಾಸಿ. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಭಾರತೀಯ ಇಂಜಿನಿಯರರು ದೊಡ್ಡ ಸಂಖ್ಯೆಯಲ್ಲಿ ಸಿಲಿಕಾನ್ ವ್ಯಾಲಿಯ ವಿವಿಧ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಲು ಶುರುಮಾಡಿದರು. ಭಾರತದ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತು, ಸಿಲಿಕಾನ್ ವ್ಯಾಲಿಯ ಕಂಪೆನಿಗಳಲ್ಲಿ ಶ್ರದ್ಧೆಯಿಂದ ದುಡಿದ ಇವರು ಆ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಿಗೆ ಭಡ್ತಿ ಪಡೆದರು.
ಹಲವರು ಜಗತ್ತೇ ಬೆರಗಾಗುವ ತಂತ್ರಜ್ನಾನಗಳನ್ನು ಶೋಧಿಸಿದರು; ಇನ್ನು ಕೆಲವರು ಉದ್ಯಮಶೀಲರಾಗಿ ತಾವೇ ಅಥವಾ ಇತರರ ಜೊತೆಗೂಡಿ ಹೊಸ ಕಂಪೆನಿಗಳನ್ನು ಹುಟ್ಟು ಹಾಕಿದರು. ೨೦೨೦ರ ಹೊತ್ತಿಗೆ ಮೈಕ್ರೋಸಾಫ್ಟ್, ಇನ್‌ಟೆಲ್, ಗೂಗಲ್ ಇಂತಹ ಬಹುರಾಷ್ಟ್ರೀಯ ಕಂಪೆನಿಗಳ ಅತ್ಯುನ್ನತ ಹುದ್ದೆಗಳಲ್ಲಿ ಇರುವವರು ಭಾರತೀಯರು ಎಂಬುದೇ ಭಾರತೀಯರ ಕಠಿಣ ದುಡಿಮೆ, ಶ್ರದ್ಧೆ ಮತ್ತು ಬುದ್ಧಿಮತ್ತೆಯ ಪುರಾವೆ.
ಫೋಟೋ: ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿಯ ವಿಹಂಗಮ ನೋಟ; ಕೃಪೆ: ಗೆಟ್ಟಿ ಇಮೇಜಸ್
೫೨.ಜಗತ್ತಿನ ಅತಿ ಶ್ರೀಮಂತರಲ್ಲಿ ಇಬ್ಬರು ಭಾರತೀಯರು: ಮುಖೇಶ್ ಅಂಬಾನಿ ಮತ್ತು ಲಕ್ಷ್ಮೀ ಮಿತ್ತಲ್
ಬೃಹತ್ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಇದರ ಚೇರ್-ಮನ್ ಮುಖೇಶ್ ಅಂಬಾನಿ ೨೦೨೦ರಲ್ಲಿ ಜಗತ್ತಿನ ಐದನೆಯ ಅತಿ ಶ್ರೀಮಂತ ಎಂದು ಗುರುತಿಸಲ್ಪಟ್ಟಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಪೆಟ್ರೋ-ಕೆಮಿಕಲ್ ಕಂಪೆನಿ. ಗೂಗಲ್ ಎಂಬ ದೈತ್ಯ ಕಂಪೆನಿಯೂ ರಿಲಯನ್ಸ್ ಇಂಡಸ್ಟ್ರೀಸಿನಲ್ಲಿ ಭಂಡವಾಳ ಹೂಡಿಕೆ ಮಾಡಿರುವುದರಿಂದ ಇದರ ಮಾರುಕಟ್ಟೆ ಮೌಲ್ಯ ೨೦೨೦ರಲ್ಲಿ ಹಲವು ಪಟ್ಟು ಏರಿಕೆಯಾಯಿತು. ಜಗತ್ತಿನ ಅತ್ಯಂತ ದುಬಾರಿ ಮನೆಯ ಮಾಲೀಕರು ಮುಖೇಶ್ ಅಂಬಾನಿ.
ಜಗತ್ತಿನ ಅತಿ ದೊಡ್ಡ ಉಕ್ಕು ಕಂಪೆನಿ ಆರ್ಸೆಲೊರ್ ಮಿತ್ತಲ್ ಇದರ ಮಾಲೀಕರು ಲಕ್ಷ್ಮೀ ಮಿತ್ತಲ್. ಇವರು ತಮ್ಮ ತಂದೆಯ ಉಕ್ಕಿನ ವಹಿವಾಟಿನಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. “ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿ”ಯಲ್ಲಿ ಟೈಮ್ ಮ್ಯಾಗಝೀನ್ ಇವರ ಹೆಸರನ್ನು ೨೦೦೭ರಲ್ಲಿ ಸೇರಿಸಿತು.
ಫೋಟೋ: ರಿಲಯನ್ಸ್ ಇಂಡಸ್ಟ್ರೀಸ್ ಲಾಂಛನ
೫೧.ಜಗತ್ತಿನ ಅತ್ಯಧಿಕ ಥೋರಿಯಮ್ ನಿಕ್ಷೇಪ ಇರುವ ದೇಶ ಭಾರತ
ಥೋರಿಯಮ್ ನೈಸರ್ಗಿಕವಾಗಿ ಸಿಗುವ ರೇಡಿಯೋ-ಆಕ್ಟಿವ್ ರಾಸಾಯನಿಕ ಮೂಲವಸ್ತು. ಸ್ವೀಡನಿನ ರಾಸಾಯನಿಕ ವಿಜ್ನಾನಿ ಜೋನ್ಸ್ ಜಾಕೊಬ್ ಬೆರ್-ಜಿಲಿಯಸ್ ೧೮೨೮ರಲ್ಲಿ ಇದನ್ನು ಪತ್ತೆ ಮಾಡಿ, ಗುಡುಗಿನ ದೇವರು ಥೋರ್ ಹೆಸರನ್ನು ಇದಕ್ಕಿಟ್ಟರು.
ಅಣುಶಕ್ತಿ ಉತ್ಪಾದನೆಗೆ ಥೋರಿಯಮನ್ನು ಬಳಸುತ್ತಾರೆ. ಜಗತ್ತಿನಲ್ಲಿ ಮನುಷ್ಯರ ಜನಸಂಖ್ಯೆ ಮತ್ತು ಕೈಗಾರೀಕರಣ ಹೆಚ್ಚಾದಂತೆ ಶಕ್ತಿಯ ಬೇಡಿಕೆಯೂ ಹೆಚ್ಚುತ್ತದೆ. ಇದನ್ನು ಪೂರೈಸಲು ಥೋರಿಯಮನ್ನು ಅವಲಂಬಿಸಲೇ ಬೇಕಾಗುತ್ತದೆ.
ಜಗತ್ತಿನ ಅತ್ಯಧಿಕ ಥೋರಿಯಮ್ ನಿಕ್ಷೇಪ ಹೊಂದಿರುವುದು ಭಾರತದ ಅನುಕೂಲ. ಪ್ರಧಾನವಾಗಿ ರಾಂಚಿ, ಗುಜರಾತ್, ಬಿಹಾರ ಮತ್ತು ತಮಿಳ್ನಾಡು ಪ್ರದೇಶಗಳಲ್ಲಿ ಈ ನಿಕ್ಷೇಪವಿದೆ.
ಫೋಟೋ: ಮೂಲವಸ್ತುಗಳ ಕೋಷ್ಠಕದಲ್ಲಿ ಥೋರಿಯಮ್‌ನ ಸ್ಥಾನ - ೯೦
೫೦.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - ಭಾರತದ ಹೆಮ್ಮೆಯ ಬ್ಯಾಂಕ್
ಭಾರತದ ಹೆಮ್ಮೆಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಬಹುರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವೆಗಳ ಸಂಸ್ಥೆಯಾಗಿ ಬೆಳೆದಿದೆ.
ಸರಕಾರಿ ಸ್ವಾಮ್ಯದ ಈ ಬೃಹತ್ ಬ್ಯಾಂಕಿನ ಪ್ರಧಾನ ಕಚೇರಿ ಮುಂಬೈಯಲ್ಲಿದೆ. ಜಗತ್ತಿನ ಇತರ ಬ್ಯಾಂಕುಗಳಿಗೆ ಹೋಲಿಸಿದಾಗ ಇದರ ೨೧,೦೦೦ ಬ್ರ್ಯಾಂಚುಗಳ ಸಂಖ್ಯೆ ಅತ್ಯಧಿಕ! (ವಿದೇಶಿ ಬ್ರ್ಯಾಂಚುಗಳ ಸಹಿತ) ಅದಲ್ಲದೆ, ಗ್ರಾಹಕರ ಅನುಕೂಲಕ್ಕಾಗಿ ೨೧,೦೦೦ ಎಟಿಎಂಗಳನ್ನೂ ಸ್ಥಾಪಿಸಿದೆ.
ಭಾರತದ ಎಲ್ಲ ಬ್ಯಾಂಕುಗಳ ಠೇವಣಿ ಮತ್ತು ಸಾಲಗಳ ಒಟ್ಟು ಮೊತ್ತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಾಲು ಶೇಕಡಾ ೨೦.
ಫೋಟೋ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲಾಂಛನ
೪೯.ಜಗತ್ತಿನ ಅತಿ ದೊಡ್ಡ ಹಲವು ಬ್ರಾಂಡ್‌ಗಳಿರುವ ದೇಶ ಭಾರತ
ವಿಶ್ವವಿಖ್ಯಾತವಾದ ಹಲವು ಬ್ರಾಂಡ್‌ಗಳ ಮೂಲಕ ಭಾರತವು ಜಾಗತಿಕ ಮಾರುಕಟ್ಟೆಯ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿದೆ. ಅವುಗಳಲ್ಲೊಂದು ಟಾಟಾ ಗ್ರೂಪ್. ಇದು ಭಾರತೀಯರ ಅಚ್ಚುಮೆಚ್ಚಿನ ಬ್ರಾಂಡ್. ಉಕ್ಕಿನ ಸ್ಥಾವರ, ರಾಸಾಯನಿಕ ಉತ್ಪಾದನಾ ಘಟಕಗಳು, ಮಾಹಿತಿ ತಂತ್ರಜ್ನಾನ (ಐಟಿ), ವಾಹನಗಳು, ಮನೆಬಳಕೆಯ ಉತ್ಪನ್ನಗಳು, ಕಮ್ಯುನಿಕೇಷನ್, ಹಾಸ್ಪಿಟಾಲಿಟಿ, ಸಂಶೋಧನೆ - ಹೀಗೆ ಹತ್ತುಹಲವು ಉದ್ಯಮಕ್ಷೇತ್ರಗಳಲ್ಲಿ ಟಾಟಾ ಗ್ರೂಪ್ ತನ್ನ ಛಾಪು ಮೂಡಿಸಿದೆ. ಜೇಮ್ ಷೇಟ್-ಜಿ ೧೮೬೮ರಲ್ಲಿ ಸ್ಥಾಪಿಸಿದ ಈ ವಾಣಿಜ್ಯ ಕಂಪೆನಿ ಈಗ ೮೦ ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ಜಗತ್ತಿನ ಪ್ರಭಾವಿ ಹಾಗೂ ಬೃಹತ್ ಉದ್ಯಮ ಸಮೂಹಗಳಲ್ಲಿ ಒಂದಾಗಿದೆ.
೪೮.ಜಗತ್ತಿನ ಅತ್ಯಂತ ದೊಡ್ಡ ಸೌರಶಕ್ತಿ ಕುಕ್ಕರ್ ಇರುವ ದೇಶ ಭಾರತ
ಸೌರಶಕ್ತಿ ಕುಕ್ಕರಿಗೆ ಸೂರ್ಯನ ಶಕ್ತಿಯೇ ಇಂಧನ. ಹಾಗಾಗಿ ಇದಕ್ಕೆ ಬೇರಾವ ಇಂಧನವೂ ಬೇಕಾಗಿಲ್ಲ; ಇದರಲ್ಲಿ ಅಡುಗೆ ಮಾಡಲು ಯಾವುದೇ ವೆಚ್ಚವಿಲ್ಲ! ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಆಹಾರ ಬೇಯಿಸಲು ಬಳಸುವುದೇ ಇದರ ತಂತ್ರ.
ಜಗತ್ತಿನ ಅತ್ಯಂತ ದೊಡ್ಡ ಸೌರಶಕ್ತಿ ಕುಕ್ಕರ್ ತಿರುಪತಿಯಲ್ಲಿದೆ. ಪ್ರತಿದಿನ ೧೫,೦೦೦ ಯಾತ್ರಿಕರಿಗೆ ಆಹಾರ ಬೇಯಿಸಲು ಅದರ ಬಳಕೆ. ಈಗ ಶಿರಡಿಯಲ್ಲಿ ೧೯ನೆಯ ಶತಮಾನದ ಸಂತ ಸಾಯಿ ಬಾಬಾ ಅವರ ಪುಣ್ಯಕ್ಷೇತ್ರದಲ್ಲಿ ಇದಕ್ಕಿಂತಲೂ ದೊಡ್ಡ ಸೌರಶಕ್ತಿ ಕುಕ್ಕರನ್ನು ಸ್ಥಾಪಿಸಲಾಗಿದೆ. ಇದು, ಪ್ರತಿದಿನ ೨೦,೦೦೦ ಯಾತ್ರಿಕರಿಗೆ ಆಹಾರ ಬೇಯಿಸಲಿಕ್ಕಾಗಿ ೩,೫೦೦ ಕಿಲೋಗ್ರಾಮ್ ಹಬೆ ಉತ್ಪಾದಿಸುತ್ತದೆ.
ಫೋಟೋ: ಸೌರ ಫಲಕಗಳು: ಕೃಪೆ: ಅನ್ ಪ್ಲಾಶ್.ಕೋಮ್
೪೭.ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ ಇರುವ ದೇಶ ಭಾರತ
ಹೀರೋ ಮೋಟೋ ಕೋರ್ಪ್ ಲಿಮಿಟೆಡ್ - ಪಂಜಾಬಿನ ಲುಧಿಯಾನಾದ ಈ ಕಂಪೆನಿ ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ. ೧೯೮೪ರಲ್ಲಿ ಈ ಕಂಪೆನಿ ಜಪಾನಿನ ಹೊಂಡಾ ಮೋಟಾರ್ಸ್ ಜೊತೆ ಸೇರಿಕೊಂಡು, ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ ಅಗ್ರ ಸ್ಥಾನ ಗಳಿಸಿತು. ಅನಂತರ, ಇದು ಸ್ಕೂಟರುಗಳ ಉತ್ಪಾದನೆಯನ್ನೂ ಆರಂಭಿಸಿತು. ತದನಂತರ ೨೦೧೦ರಲ್ಲಿ, ಈ ಜಂಟಿ-ಕಂಪೆನಿಯಿಂದ ಹೊಂಡಾ ಮೋಟರ್ಸ್ ಹೊರ ಬಂತು.
ಇದೆಲ್ಲ ಶುರುವಾದದ್ದು ೧೯೪೪ರಲ್ಲಿ - ಮುಂಜಾಲ್ ಕುಟುಂಬದ ನಾಲ್ವರು ಸೋದರರು ಸೇರಿಕೊಂಡು, ಅಮೃತಸರದಲ್ಲಿ ಸೈಕಲುಗಳ ಬಿಡಿಭಾಗಗಳನ್ನು ಉತ್ಪಾದಿಸಲು ಆರಂಭಿಸಿದಾಗ. ಭಾರತೀಯರಿಗೆ ಓಡಾಟಕ್ಕೆ ಸರಳ ಹಾಗೂ ದುಬಾರಿಯಲ್ಲದ ವಾಹನವನ್ನು ಒದಗಿಸುವುದು ಅವರ ಕನಸಾಗಿತ್ತು.
ಅನಂತರ ಅವರು ಲುಧಿಯಾನಾದಲ್ಲಿ ೧೯೫೬ರಲ್ಲಿ ಹೀರೋ ಸೈಕಲ್ಸ್ ಎಂಬ ಸೈಕಲ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸಿದರು. ೧೯೭೫ರಲ್ಲಿ ಈ ಕಂಪೆನಿ ಭಾರತದಲ್ಲಿ ಅತ್ಯಧಿಕ ಸೈಕಲ್ ಉತ್ಪಾದಿಸುವ ಕಂಪೆನಿಯಾಗಿ ಬೆಳೆಯಿತು.
ಫೋಟೋ: ಹೀರೋ ಮೋಟರ್ ಬೈಕ್
೪೬.ರತ್ನ ಮತ್ತು ಬೆಲೆಬಾಳುವ ಮುತ್ತುಮಾಣಿಕ್ಯಗಳ ಉದ್ಯಮದಲ್ಲಿ ಭಾರತಕ್ಕೆ ಅಗ್ರಗಣ್ಯ ಸ್ಥಾನ
ಪುರಾತನ ಕಾಲದಿಂದಲೂ ಭಾರತವು ಅದ್ಭುತ ರತ್ನಗಳು, ಮುತ್ತುಮಾಣಿಕ್ಯಗಳಿಗೆ ಜಗತ್ತಿನಲ್ಲೇ ಪ್ರಸಿದ್ಧ. ಭಾರತದ ರತ್ನದ ಗಣಿಗಳು ವಿಶ್ವವಿಖ್ಯಾತವಾದ ರತ್ನಗಳನ್ನು ಉತ್ಪಾದಿಸಿವೆ.
ಈಗ ಭಾರತದ ರತ್ನ ಕತ್ತರಿಸುವ ಮತ್ತು ಪಾಲಿಷ್ ಮಾಡುವ ಉದ್ಯಮ ಜಗತ್ತಿನಲ್ಲಿ ಅತಿ ದೊಡ್ಡದು. ಅದರಲ್ಲಿ ಆಧುನಿಕ ತಂತ್ರಜ್ನಾನ ಮತ್ತು ಪಾರಂಪರಿಕ ಕೌಶಲ್ಯಗಳನ್ನು ಸಮರ್ಥವಾಗಿ ಬಳಸಲಾಗಿದೆ.
ಈ ಕಸುಬಿನಲ್ಲಿ ಪರಿಣತರಾಗಿರುವ ಭಾರತದ ಕುಶಲಕರ್ಮಿಗಳ ಸಂಖ್ಯೆ ೧೦ ಲಕ್ಷಕ್ಕಿಂತ ಅಧಿಕ. ಇದುವೇ ಅಂತರರಾಷ್ಟ್ರೀಯ ಆಭರಣ ತಯಾರಕರು ಭಾರತದಲ್ಲಿ ತಮ್ಮ ಮಳಿಗೆಗಳನ್ನು ತೆರೆಯಲು ಕಾರಣ. ಅಂತೂ ಜಗತ್ತಿನ ಅತಿ ದೊಡ್ಡ ರತ್ನ ಉತ್ಪಾದನಾ ಕೇಂದ್ರವಾಗಿ ಭಾರತ ಹೆಸರುವಾಸಿ.
ಫೋಟೋ ಕೃಪೆ: ಐಸ್ಟಾಕ್ ಫೋಟೋಸ್
೪೫.ಹಾಸುಗಂಬಳಿ ಉತ್ಪಾದನೆ: ಭಾರತದ ಮಗದೊಂದು ಮುಂಚೂಣಿ ರಂಗ
ಪ್ರಾಚೀನ ಕಾಲದಿಂದಲೂ ಭಾರತದ ಹಲವಾರು ಮನೆಗಳನ್ನು ಉಣ್ಣೆ, ಹತ್ತಿ, ಸೆಣಬು, ತೆಂಗಿನನಾರು ಮತ್ತು ಹುಲ್ಲುಗಳ ಹಾಸುಗಂಬಳಿಗಳು ಅಲಂಕರಿಸಿವೆ. ಪರ್ಷಿಯನ್ ಹಾಸುಗಂಬಳಿಗಳನ್ನು ಭಾರತಕ್ಕೆ ಮೊದಲಾಗಿ ತಂದವರು ಮೊಘಲರು. ಮಹಾರಾಜ ಅಕ್ಬರ್ ಆಗ್ರಾದಲ್ಲಿ ಹಾಸುಗಂಬಳಿ ನೇಯ್ಗೆ ಉದ್ಯಮವನ್ನು ಆರಂಭಿಸಿದ. ಅಂದಿನಿಂದ ಭಾರತದ ಹಾಸುಗಂಬಳಿಗಳು ಅದ್ಭುತ ವಿನ್ಯಾಸಗಳು, ಬಣ್ಣ ಸಂಯೋಜನೆ ಮತ್ತು ಕುಶಲ ನೇಯ್ಗೆಗಾಗಿ ಜಗತ್ತಿನಲ್ಲೇ ಪ್ರಸಿದ್ಧವಾಗಿವೆ.
ಉಣ್ಣೆ ಮತ್ತು ಸಿಲ್ಕ್ ಹಾಸುಗಂಬಳಿ ಹೆಣಿಗೆಗೆ ಬಳಸುವ ಪ್ರಧಾನ ವಸ್ತುಗಳು. ಇವುಗಳ ವಿನ್ಯಾಸಗಳು ಬಳ್ಳಿ ಮತ್ತು ಹೂಗಳ ನಮೂನೆಗಳು, ಪ್ರಾಣಿ ಮತ್ತು ಹಕ್ಕಿಗಳ ಚಿತ್ರಗಳು ಹಾಗೂ ಕ್ಯಾಲಿಗ್ರಾಫಿ ವಿನ್ಯಾಸಗಳನ್ನು ಒಳಗೊಂಡಿರುತ್ತವೆ.
ಈಗ ಕೈಗಳಿಂದ ನೇಯ್ದ ಹಾಸುಗಂಬಳಿಗಳ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇಕಡಾ ೩೫. ತಂತ್ರಜ್ನಾನದ ಬಳಕೆ ಮತ್ತು ಗುಣಮಟ್ಟ ಸುಧಾರಣೆಯಿಂದ ಈ ಪಾಲು ಹೆಚ್ಚಾಗಲು ಸಾಧ್ಯವಿದೆ.
ಫೋಟೋ: ವೃತ್ತಾಕಾರದ ಹಾಸುಗಂಬಳಿ; ಕೃಪೆ: ಯೇಹೈಇಂಡಿಯಾ.ಕೋಮ್