೧೧. ಭಾರತದ ಅಪ್ರತಿಮ ಸಂವಿಧಾನ
ಭಾರತ ಸ್ವಾತಂತ್ರ್ಯ ಗಳಿಸಿದ್ದು ೧೯೪೭ರಲ್ಲಿ. ಅದಾಗಿ ಸುಮಾರು ಮೂರು ವರುಷಗಳಲ್ಲಿ ಭಾರತದ ಸಂವಿಧಾನವನ್ನು ಅಂತಿಮಗೊಳಿಸಲಾಯಿತು.
ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಮುಖ್ಯಸ್ಥರಾಗಿದ್ದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವು ೨೬ ಜನವರಿ ೧೯೫೬ರಂದು ಜ್ಯಾರಿಗೆ ಬಂತು. ಆ ದಿನವನ್ನು ಭಾರತದಲ್ಲಿ ಪ್ರತಿ ವರುಷ ಪ್ರಜಾಪ್ರಭುತ್ವ ದಿನವಾಗಿ ಆಚರಿಸಲಾಗುತ್ತದೆ. ಅವತ್ತು ನವದೆಹಲಿಯಲ್ಲಿ ರಾಜಪಥದಲ್ಲಿ ನಡೆಯುವ ಪಥಸಂಚಲನವು ಭಾರತದ ವೈವಿಧ್ಯತೆಯನ್ನೂ ವಿರಾಟ್ ಮಿಲಿಟರಿ ಶಕ್ತಿಯನ್ನೂ ಇಡೀ ಜಗತ್ತಿಗೆ ಅನಾವರಣಗೊಳಿಸುತ್ತದೆ.
ಜಗತ್ತಿನ ವಿವಿಧ ದೇಶಗಳ ಸಂವಿಧಾನಕ್ಕೆ ಹೋಲಿಸಿದಾಗ, ಭಾರತದ ಸಂವಿಧಾನ ಅತಿ ದೀರ್ಘವಾದದ್ದು ಮತ್ತು ವಿವರಣಾತ್ಮಕವಾದದ್ದು. ಅದು ಭಾರತದ ವಿವಿಧ ಆಡಳಿತಾತ್ಮಕ ಘಟಕಗಳ ಮತ್ತು ಪ್ರಜೆಗಳ ಕರ್ತವ್ಯಗಳು, ಹೊಣೆಗಾರಿಕೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ನಿಯಮಗಳನ್ನು ವಿಶದಪಡಿಸಿದೆ.
ಬದಲಾಗುತ್ತಿರುವ ಕಾಲಮಾನಕ್ಕೆ ಅನುಸಾರವಾಗಿ ಬದಲಾವಣೆಗಳನ್ನು ಮಾಡಲಿಕ್ಕೂ ಸಂವಿಧಾನವು ಅವಕಾಶ ಕಲ್ಪಿಸಿದೆ. ಈಗಾಗಲೇ ಭಾರತದ ಸಂವಿಧಾನಕ್ಕೆ ಮಾಡಲಾಗಿರುವ ತಿದ್ದುಪಡಿಗಳ ಸಂಖ್ಯೆ ೧೦೦ಕ್ಕಿಂತ ಅಧಿಕ.
ಫೋಟೋ: ಭಾರತದ ಸಂವಿಧಾನ
೯.ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ಭಾರತ
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಸಂವಿಧಾನ ೨೬ ಜನವರಿ ೧೯೫೬ರಲ್ಲಿ ಜ್ಯಾರಿಯಾಯಿತು. ಕೇಂದ್ರ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟವನ್ನು ಆಳುತ್ತಿದೆ. ಸಂವಿಧಾನದ ಅನುಸಾರ, ಕೇಂದ್ರ ಸರಕಾರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯಾಗಿದೆ. ಭಾರತದ ರಾಜಧಾನಿ ನವದೆಹಲಿ.
೧೦.ಭಾರತದ ಅಸಾಧಾರಣ ಚುನಾವಣೆಗಳು
ಭಾರತದಲ್ಲಿ ಐದು ವರುಷಗಳಿಗೊಮ್ಮೆ ಸಾರ್ವಜನಿಕ ಚುನಾವಣೆಗಳು ಜರಗುತ್ತವೆ. ಭಾರತದ ಸಂಸತ್ತು ಲೋಕಸಭೆ (ಮೇಲ್ಮನೆ) ಮತ್ತು ರಾಜ್ಯಸಭೆ (ಕೆಳಮನೆ)ಗಳನ್ನು ಒಳಗೊಂಡಿದೆ. ಲೋಕಸಭೆಯ ಸದಸ್ಯರನ್ನು (ಇಬ್ಬರ ಹೊರತಾಗಿ) ಮತದಾರರು ಚುನಾವಣೆ ಮೂಲಕ ನೇರವಾಗಿ ಚುನಾಯಿಸುತ್ತಾರೆ. ಆ ಇಬ್ಬರನ್ನು ರಾಷ್ಟ್ರಪತಿಯವರು ನಾಮಕರಣ ಮಾಡುತ್ತಾರೆ. ಸರಕಾರದ ಮುಖ್ಯಸ್ಥರಾದ ಪ್ರಧಾನಮಂತ್ರಿಯವರನ್ನು ಲೋಕಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ.
ರಾಜ್ಯಸಭೆಯ ಸದಸ್ಯರನ್ನು ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಚುನಾಯಿಸುತ್ತಾರೆ.
೨೦೨೧ರಲ್ಲಿ ಭಾರತದ ಜನಸಂಖ್ಯೆ ಸುಮಾರು ೧೩೯ ಕೋಟಿ. ಭಾರತದ ೨೦೧೯ರ ಲೋಕಸಭೆಯ ಮಹಾಚುನಾವಣೆಯಲ್ಲಿ ಮತದಾರರ ಸಂಖ್ಯೆ ೧೦೦ ಕೋಟಿಗಿಂತ ಅಧಿಕ. ಇದು ಯುರೋಪಿಯನ್ ಯೂನಿಯನ್ ಮತ್ತು ಯುಎಸ್‌ಎ ದೇಶದ ಮತದಾರರ ಒಟ್ಟು ಸಂಖ್ಯೆಗಿಂತ ಜಾಸ್ತಿ.
೮.ಹಲವು ಧರ್ಮಗಳ ಜನ್ಮಸ್ಥಾನ ಭಾರತ
ಭಾರತವನ್ನು “ಧರ್ಮಗಳ ಜನ್ಮಭೂಮಿ” ಎಂದು ಕರೆಯಲಾಗುತ್ತದೆ. ಯಾಕೆಂದರೆ, ಹಿಂದೂ, ಭೌದ್ಧ, ಜೈನ ಮತ್ತು ಸಿಖ್ ಧರ್ಮಗಳ ಜನ್ಮಸ್ಥಾನ ಭಾರತ.
ಭಾರತದ ಶೇಕಡಾ ೮೦ ಜನರು ಜಗತ್ತಿನ ಅತ್ಯಂತ ಪ್ರಾಚೀನ ಧರ್ಮವಾದ ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಭೌದ್ಧ ಧರ್ಮ ಹುಟ್ಟಿ ಬೆಳೆದದ್ದೇ ಭಾರತದಲ್ಲಿ. ಅನಂತರ ಅದು ನೇಪಾಳ, ಚೀನಾ, ಜಪಾನ್, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದ ದೇಶಗಳಿಗೆ ವ್ಯಾಪಿಸಿತು. ಬೌದ್ಧ ಧರ್ಮದ ಅನುಯಾಯಿಗಳು ಗೌತಮ ಬುದ್ಧನ ಉಪದೇಶಗಳನ್ನು ಅನುಸರಿಸುತ್ತಾರೆ.
ಜೈನ ಧರ್ಮದ ಸ್ಥಾಪಕ ಭಗವಾನ್ ಮಹಾವೀರ. ತನ್ನ ಅನುಯಾಯಿಗಳಿಗೆ ಆತ ಉಪದೇಶಿಸಿದ್ದು ಅಹಿಂಸೆ ಮತ್ತು ತ್ಯಾಗದ ಬದುಕನ್ನು. ಜೈನ ಧರ್ಮದ ಜಗಜ್ಜನಿತ ಅನುಯಾಯಿ ಬಾಹುಬಲಿ. ಈತನ ಬೃಹತ್ ಏಕಶಿಲಾ ವಿಗ್ರಹಗಳು ದಕ್ಷಿಣ ಭಾರತದ ಶ್ರವಣಬೆಳಗೊಳ, ಕಾರ್ಕಳ, ವೇಣೂರು, ಧರ್ಮಸ್ಥಳ ಇತ್ಯಾದಿ ಸ್ಥಳಗಳಲ್ಲಿ ಎತ್ತರದ ಗುಡ್ಡಗಳ ತುದಿಯಲ್ಲಿ ಸ್ಥಾಪಿಸಲ್ಪಟ್ಟಿವೆ. ಈ ವಿಗ್ರಹಗಳಿಗೆ ಹನ್ನೆರಡು ವರುಷಗಳಿಗೊಮ್ಮೆ ವಿಜೃಂಭಣೆಯಿಂದ ಮಹಾಮಸ್ತಕಾಭಿಷೇಕ ಜರಗುತ್ತದೆ.
೭.ಜಗತ್ತಿನ ಅಪ್ರತಿಮ ಧಾರ್ಮಿಕ ಸಮಾವೇಶ ಭಾರತದ ಕುಂಭಮೇಳ
ಕುಂಭಮೇಳ ಜಗತ್ತಿನ ಅತ್ಯಂತ ಬೃಹತ್ ಧಾರ್ಮಿಕ ಸಮಾವೇಶ ಎಂದು ದಾಖಲಾಗಿದೆ. ಇದರಲ್ಲಿ ಲಕ್ಷಗಟ್ಟಲೆ ಹಿಂದೂಗಳೂ ಪ್ರವಾಸಿಗಳೂ ಭಾಗವಹಿಸುತ್ತಾರೆ.
ಹಿಂದೂ ಧಾರ್ಮಿಕ ಪ್ರತೀತಿಯ ಪ್ರಕಾರ, ದೇವತೆಗಳು ಮತ್ತು ರಾಕ್ಷಸರ ನಡುವೆ ಯುದ್ಧವಾದಾಗ, ಅಮರತ್ವದ ಪಾನೀಯ ಅಮೃತದ ಕೆಲವು ಬಿಂದುಗಳು ನಾಲ್ಕು ಸ್ಥಳಗಳಿಗೆ ಬಿದ್ದವು: ಪ್ರಯಾಗ ಅಥವಾ ಅಲ್ಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ. ಈ ನಾಲ್ಕು ಪವಿತ್ರ ಸ್ಥಳಗಳಲ್ಲಿ ಪರ್ಯಾಯವಾಗಿ ಕುಂಭಮೇಳ ಜರಗುತ್ತದೆ.
ಗೋದಾವರಿ ನದಿ ದಡದಲ್ಲಿ ನಾಸಿಕ್, ಶಿಪ್ರಾ ನದಿ ದಡದಲ್ಲಿ ಉಜ್ಜಯಿನಿ, ಗಂಗಾ ನದಿ ದಡದಲ್ಲಿ ಹರಿದ್ವಾರ ಮತ್ತು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮದಲ್ಲಿ ಪ್ರಯಾಗ ಇವೆ. ಈ ನದಿಗಳ ದಡದಲ್ಲಿ ಜರಗುವ ಲಕ್ಷಗಟ್ಟಲೆ ಜನರ ಸಮಾವೇಶವೇ ಕುಂಭಮೇಳ. ಈ ನದಿಗಳಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲ ಪರಿಹಾರ ಎಂಬುದು ಹಿಂದೂಗಳ ನಂಬಿಕೆ.
ಪ್ರಯಾಗದಲ್ಲಿ ೨೦೧೩ರಲ್ಲಿ ಜರಗಿದ ಮಹಾಕುಂಭಮೇಳದಲ್ಲಿ ೧,೨೦,೦೦,೦೦೦ ಜನರು ಭಾಗವಹಿಸಿದರೆಂದು ಅಂದಾಜು. ಗಮನಿಸಿ: ಒಮ್ಮೆ ಕುಂಭಮೇಳ ಜರಗಿ, ಪುನಃ ಅದೇ ಸ್ಥಳದಲ್ಲಿ ಜರಗುವ ಸರದಿ ಬರುವುದು ೧೨ನೆಯ ವರುಷದಲ್ಲಿ.
ಫೋಟೋ: ಸಂಗಮದ ೨೦೧೯ರ ಕುಂಭಮೇಳದಲ್ಲಿ ಜನಸಾಗರ; ಕೃಪೆ: ಇಂಡಿಯಾ ಟಿವಿ ನ್ಯೂಸ್
೬.ಬಹುಭಾಷೆಗಳ ದೇಶ ಭಾರತ
ಭಾರತದ ಸಂಪನ್ನ ವೈವಿಧ್ಯತೆಗೆ ಒಂದು ಉದಾಹರಣೆ ಇಲ್ಲಿ ಬಳಕೆಯಲ್ಲಿರುವ ಭಾಷೆಗಳು: ೭೮೦ ಭಾಷೆಗಳು ಮತ್ತು ೮೬ ಲಿಪಿಗಳು. ನಮ್ಮ ಭಾಷೆಗಳನ್ನು ಇಂಡೋ-ಆರ್ಯನ್ ಮತ್ತು ದ್ರಾವಿಡ ಭಾಷೆಗಳೆಂದು ೨ ವರ್ಗಗಳಾಗಿ ವರ್ಗೀಕರಿಸಲಾಗಿದೆ.
ಭಾರತದ ಸಂವಿಧಾನ ೨೨ ಭಾಷೆಗಳನ್ನು ಷೆಡ್ಯೂಲ್ ಭಾಷೆಗಳೆಂದು ಗುರುತಿಸಿದೆ. ಭಾರತ ಸರಕಾರದ ಅಧಿಕೃತ ಭಾಷೆ ದೇವನಾಗರಿ ಲಿಪಿಯ ಹಿಂದಿ. (ಸಂವಿಧಾನದ ಆರ್ಟಿಕಲ್ ೩೪೩ ಅನುಸಾರ.) ಇಂಗ್ಲಿಷನ್ನು ಒಂದು ಅಸೋಸಿಯೇಟ್ ಒಫಿಷಿಯಲ್ ಭಾಷೆ ಎಂದು ಕರೆಯಲಾಗಿದೆ. ಹಿಂದಿ ಮತ್ತು ಉರ್ದು ಸಹಿತ ಹಲವು ಭಾರತೀಯ ಭಾಷೆಗಳಿಗೆ ಸಂಸ್ಕೃತವೇ ಮೂಲ ಭಾಷೆ.
ಮಹಾ ಜನಗಣತಿ ೨೦೦೧ರ ಅನುಸಾರ ಭಾರತದಲ್ಲಿವೆ ೧೨೨ ಪ್ರಧಾನ ಭಾಷೆಗಳು ಮತ್ತು ೧,೫೯೯ ಇತರ ಭಾಷೆಗಳು. ಭಾರತದ ಮುಖ್ಯ ಭಾಷೆಗಳು: ಹಿಂದಿ, ಬೆಂಗಾಳಿ, ಮರಾಠಿ, ತೆಲುಗು, ತಮಿಳು, ಉರ್ದು, ಗುಜರಾತಿ, ಕನ್ನಡ, ಮಲೆಯಾಳಿ, ಒಡಿಯಾ, ಪಂಜಾಬಿ, ಅಸ್ಸಾಮಿ ಮತ್ತು ಮೈಥಿಲಿ.
ಫೋಟೋ: ಭಾರತದ ನಕ್ಷೆಯಲ್ಲಿ ಅಕ್ಷರಗಳು; ಕೃಪೆ: ಡ್ರೀಮ್ಸ್ ಟೈಮ್.ಕೋಮ್
೫.ಜಗತ್ತನ್ನು ಬೆರಗಾಗಿಸಿದ ನಾಗರಿಕತೆ: ಭಾರತದ ಸಿಂಧೂ ಕಣಿವೆ ನಾಗರಿಕತೆ
ಸಿಂಧೂ ನದಿಯ ದಡದಲ್ಲಿ ಬೆಳೆದ ಪ್ರಾಚೀನ ನಾಗರಿಕತೆ ಸಿಂಧೂ ಕಣಿವೆ ನಾಗರಿಕತೆ. ಇದು ಸುಮಾರು ಒಂದು ಸಾವಿರ ವರುಷ (ಕ್ರಿ.ಪೂ.೨,೫೦೦ರಿಂದ ಕ್ರಿ.ಪೂ.೧,೫೦೦ ವರೆಗೆ) ಮೆರೆದ ನಾಗರಿಕತೆ. ಇಲ್ಲಿನ ಜನವಸತಿ ಈಗಿನ ಭಾರತ ಹಾಗೂ ಅಫಘಾನಿಸ್ಥಾನಗಳ ಭಾಗಗಳನ್ನು ಮತ್ತು ಈಗಿನ ಇಡೀ ಪಾಕಿಸ್ಥಾನವನ್ನು ಒಳಗೊಂಡಿತ್ತು.
ಸಿಂಧೂ ನಾಗರಿಕತೆಯ ಇಂಜಿನಿಯರುಗಳ ಕೌಶಲ್ಯ ನಮ್ಮನ್ನು ಬೆರಗಾಗಿಸುತ್ತದೆ. ಅವರು ಸೀಸ, ತಾಮ್ರ ಮತ್ತು ಸತು ಸಂಶೋಧಿಸಿದರು; ಅಲ್ಲಿನ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಇಟ್ಟಿಗೆಗಳನ್ನು ಉಪಯೋಗಿಸುತ್ತಿದ್ದರು. ರಸ್ತೆಯ ಪಕ್ಕಗಳಲ್ಲಿ ಅತ್ಯುತ್ತಮ ಒಳಚರಂಡಿ ಜಾಲವನ್ನು ರಚಿಸಿದ್ದರು.
ಸಿಂಧೂ ಕಣಿವೆ ಪ್ರದೇಶದಲ್ಲಿ ನಡೆಸಿದ ಉತ್ಖನನದಲ್ಲಿ ಧಾನ್ಯ ಸಂಗ್ರಹ ಕೋಠಿಗಳೂ ಕಂಡು ಬಂದಿವೆ. ಒಂದು ಅಚ್ಚುಕಟ್ಟಾದ, ವಿಶಾಲವಾದ ಸಾರ್ವಜನಿಕ ಸ್ನಾನಗೃಹವೂ ಕಂಡುಬಂದಿದೆ.
ಅಲ್ಲಿ ಬಳಕೆಯಲ್ಲಿದ್ದ "ಸಿಂಧೂ ಲಿಪಿ”ಯನ್ನು ಜಗತ್ತಿನ ಪ್ರಾಚೀನ ಲಿಪಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಸುಮಾರು ಒಂದು ಶತಮಾನದ ಸಂಶೋಧನೆಯ ಫಲವಾಗಿ ಆ ಲಿಪಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು.
ಫೋಟೋ: ಸಿಂಧೂ ಕಣಿವೆಯ ಒಂದು ಉತ್ಖನನ ಜಾಗ; ಕೃಪೆ: ಬೈಜುಸ್
೪.ಸಂಖ್ಯಾಪದ್ಧತಿಯ ಮತ್ತು ಸೊನ್ನೆಯ ಮೂಲ ಭಾರತ
ಸೊನ್ನೆಯಿಂದ ಒಂಭತ್ತರ ವರೆಗಿನ ಸಂಖ್ಯೆಗಳನ್ನು ಭಾರತೀಯ-ಅರಾಬಿಕ್ ಸಂಖ್ಯೆಗಳು ಎಂದು ಕರೆಯಲಾಗುತ್ತದೆ. ೦,೧,೨.೩,೪,೫,೬,೭,೮,೯ - ಈ ಸಂಖ್ಯೆಗಳನ್ನು ಈಗ ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲಿ ಬಳಸಲಾಗುತ್ತಿದೆ. ಸಂಖ್ಯೆಗಳಲ್ಲಿ ಸಮಸಂಖ್ಯೆಗಳು (೨,೪,೬ ಇತ್ಯಾದಿ) ಮತ್ತು ವಿಷಮಸಂಖ್ಯೆಗಳು (೧,೩,೫ ಇತ್ಯಾದಿ) ಎಂದು ಎರಡು ವಿಧ.
ಪ್ರಾಚೀನ ಭಾರತದಲ್ಲಿ ಬೆಳೆದು ಬಂದ ಸಂಖ್ಯಾಪದ್ಧತಿಯನ್ನು ೯ನೆಯ ಶತಮಾನದಲ್ಲಿ ಅರಬರು ಬಳಸಲು ಶುರು ಮಾಡಿದರು. ೧೦ನೆಯ ಶತಮಾನದಲ್ಲಿ ಅರಬರು ಇದನ್ನು ಯುರೋಪಿಯನರಿಗೆ ಪರಿಚಯಿಸಿದರು. ಆದ್ದರಿಂದ ಯುರೋಪಿನಲ್ಲಿ ಇದನ್ನು ಅರಾಬಿಕ್ ಸಂಖ್ಯಾಪದ್ಧತಿ ಎಂದು ಹೆಸರಿಸಿದರು. ಆದರೆ ಅರಬ್ ಜನರು ಇದನ್ನು ಇಂಡಿಯನ್ (ಭಾರತೀಯ) - ಅರಾಬಿಕ್ ಸಂಖ್ಯಾಪದ್ಧತಿ ಎಂದು ಕರೆಯುತ್ತಾರೆ.
ಜಗತ್ತಿಗೆ ಭಾರತದ ಅದ್ಭುತ ಕೊಡುಗೆಗಳಲ್ಲೊಂದು ಸೊನ್ನೆ. ಇದರ ಪರಿಕಲ್ಪನೆ ಜಗತ್ತಿನಲ್ಲಿ ಗಣಿತದ ಕ್ರಾಂತಿಗೆ ಕಾರಣವಾಯಿತು. ಸೊನ್ನೆಗೆ ಬೆಲೆಯಿಲ್ಲ; ಆದರೆ ಸೊನ್ನೆ ಜೊತೆಗೂಡದಿದ್ದರೆ ಯಾವ ಸಂಖ್ಯೆಗೂ ಬೆಲೆಯಿಲ್ಲ.
೩.ಯೋಗ - ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ
ಸಂಸ್ಕೃತದ “ಯುಜ್" ಎಂಬ ಮೂಲಶಬ್ದದಿಂದ “ಯೋಗ" ಪದ ಮೂಡಿ ಬಂದಿದೆ. ಇದರ ಅರ್ಥ “ಜೊತೆಗೂಡುವುದು”. ಇದು ವ್ಯಕ್ತಿಯ ಶರೀರ ಮತ್ತು ಆತ್ಮದ ಸಂಯೋಗವನ್ನು ಸಂಕೇತಿಸುತ್ತದೆ.
ಯೋಗವೆಂದರೆ ಕೇವಲ ಯೋಗಾಸನಗಳ ಸಾಧನೆಯಲ್ಲ; ಯೋಗದಲ್ಲಿ ಎಂಟು ಭಾಗಗಳಿವೆ. ಇದುವೇ ಅಷ್ಟಾಂಗ ಯೋಗ. ಯೋಗದ ಅಭ್ಯಾಸದಿಂದ ದೇಹಕ್ಕೆ ಚೈತನ್ಯ ಮತ್ತು ಮನಸ್ಸಿಗೆ ಶಾಂತತೆ ಲಭ್ಯವಾಗುತ್ತದೆ. ನೂರಾರು ಯೋಗಾಸನಗಳಿವೆ. ಇವನ್ನು ಯೋಗಗುರುಗಳಿಂದ ಕಲಿತು ದಿನದಿನವೂ ಅಭ್ಯಾಸ ಮಾಡಿದರೆ, ಪ್ರತಿಯೊಂದು ಯೋಗಾಸನದಿಂದ ನಿರ್ದಿಷ್ಟ ಪ್ರಯೋಜನಗಳು ಲಭಿಸುತ್ತವೆ.
ಸಾವಿರಾರು ವರುಷಗಳಲ್ಲಿ ಅಸಂಖ್ಯ ಋಷಿಗಳ ಮತ್ತು ಸಾಧಕರ ಪರಿಶ್ರಮ ಹಾಗೂ ಸಾಧನೆಯಿಂದಾಗಿ "ಯೋಗ" ಇಂದಿನ ರೂಪಕ್ಕೆ ವಿಕಾಸವಾಗಿದೆ. ಸುಮಾರು ಸಾವಿರ ವರುಷಗಳ ಮುಂಚೆ, ಆ ವರೆಗಿನ ಯೋಗದ ಜ್ನಾನವನ್ನು ಸೂತ್ರಗಳ ರೂಪದಲ್ಲಿ ಪ್ರಸ್ತುತಪಡಿಸಿದ ಮಹಾಮುನಿ ಪತಂಜಲಿ. ಅದುವೇ ಪತಂಜಲಿಯ ”ಯೋಗಸೂತ್ರಗಳು”.
೨೦೧೪ರಿಂದೀಚೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗಕ್ಕೆ ವಿಶ್ವಮಾನ್ಯತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಜಗತ್ತಿನ ಹಲವಾರು ದೇಶಗಳಲ್ಲಿ ಆರೋಗ್ಯವರ್ಧನೆಗಾಗಿ ಯೋಗವನ್ನು ಅನುಸರಿಸಲಾಗುತ್ತಿದೆ.
೨.ಅತ್ಯಂತ ಪ್ರಾಚೀನ ವೈದ್ಯಕೀಯ ಶಾಸ್ತ್ರ “ಆಯುರ್ವೇದ"ದ ತವರೂರು ಭಾರತ
ಐದು ಸಾವಿರ ವರುಷಗಳ ಹಿಂದೆ ಭಾರತದಲ್ಲಿ ಬಳಕೆಗೆ ಬಂದ "ಆಯುರ್ವೇದ" ಜಗತ್ತಿನ ಅತ್ಯಂಚ ಪ್ರಾಚೀನ ವೈದ್ಯಕೀಯ ಶಾಸ್ತ್ರವೆಂದು ನಂಬಲಾಗಿದೆ. ಇಂದಿಗೂ ಜಗತ್ತಿನ ಮುಂಚೂಣಿ ವೈದ್ಯಕೀಯ ಪದ್ಧತಿಗಳಲ್ಲಿ ಆಯುರ್ವೇದ ಒಂದಾಗಿದೆ.
ಆಯುರ್ವೇದದ ಮೂಲ: ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದ ಗ್ರಂಥ. ಅದರಲ್ಲಿ ಹಲವಾರು ರೋಗಗಳನ್ನು ಮತ್ತು ಅವುಗಳ ಚಿಕಿತ್ಸೆಗಳನ್ನು ಪ್ರಸ್ತಾಪಿಸಲಾಗಿದೆ. ಆರೋಗ್ಯರಕ್ಷಣೆ, ಆರೋಗ್ಯವರ್ಧನೆ ಮತ್ತು ರೋಗಚಿಕಿತ್ಸೆಯಲ್ಲಿ ಔಷಧೀಯ ಸಸ್ಯಗಳಿಂದ ತಯಾರಿಸಲಾದ ಉತ್ಪನ್ನಗಳನ್ನು ಮತ್ತು ವಿಶೇಷ ಆಹಾರಗಳನ್ನು ಆಯುರ್ವೇದ ಬಳಸುತ್ತದೆ.
ಆಯುರ್ವೇದ ಕೇವಲ ಔಷಧಿ ಪದ್ಧತಿಯಲ್ಲ; ಶರೀರ, ಮನಸ್ಸು ಮತ್ತು ಆತ್ಮಗಳ ನಡುವೆ ಪರಿಪೂರ್ಣ ಸಮತೋಲನ ಇದ್ದಾಗ ಮಾತ್ರ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂಬ ಚಿಂತನೆಯೇ ಆರ್ಯುರ್ವೇದದ ಮೂಲ ತತ್ವ. ಆಯುರ್ವೇದದ ಪ್ರಸಿದ್ಧ ಪಠ್ಯಗಳನ್ನು ರಚಿಸಿದವರು ಚರಕ (ಕ್ರಿ.ಪೂ.೩೦೦) ಮತ್ತು ಸುಶ್ರುತ (ಕ್ರಿ.ಪೂ.೬೦೦)
೧೫ ಆಗಸ್ಟ್ ಭಾರತದ ಸ್ವಾತಂತ್ರ್ಯ ದಿನ. ನಮ್ಮ ಹೆಮ್ಮೆಯ ಭಾರತದ ಬಗ್ಗೆ ನಮ್ಮಲ್ಲಿ ಪುಟಿದೇಳುತ್ತದೆ ಅಭಿಮಾನ. ಈ ನಿಟ್ಟಿನಲ್ಲಿ ನಮ್ಮ ಮಾತೃಭೂಮಿಯ ಬಗ್ಗೆ ೧೦೦ ಕುತೂಹಲಕರ ಸಂಗತಿಗಳನ್ನು ತಿಳಿಯೋಣ.
ಚರಿತ್ರೆ ಮತ್ತು ಸಂಸ್ಕೃತಿ
೧.ಜಗತ್ತಿನ ಅತಿ ದೊಡ್ಡ ಮಹಾಕಾವ್ಯ “ಮಹಾಭಾರತ"
ಮಹಾಭಾರತದ ಕತೆ ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿದೆ. ಇದನ್ನು ಸಾವಿರಾರು ವರುಷಗಳಿಂದ ಮತ್ತೆಮತ್ತೆ ಹೇಳಲಾಗಿದೆ. ಜೊತೆಗೆ ಮತ್ತೆಮತ್ತೆ ಬರೆಯಲಾಗಿದೆ. ಇದನ್ನು ಆಧರಿಸಿ ಭಾರತದ ವಿವಿಧ ಭಾಷೆಗಳಲ್ಲಿ ಅಸಂಖ್ಯ ಕತೆ, ಕವನ, ನಾಟಕಗಳನ್ನು ರಚಿಸಲಾಗಿದೆ. “ಮಹಾಭಾರತ"ದ ಟಿವಿ ಧಾರವಾಹಿ ದೂರದರ್ಶನದಿಂದ ಮೊದಲ ಬಾರಿ ಪ್ರಸಾರವಾದಾಗ ಜನರೆಲ್ಲ ಮನೆಗಳಲ್ಲಿ ಟಿವಿಯೆದುರು ಕೂತು ನೋಡುತ್ತಿದ್ದ ಕಾರಣ ರಸ್ತೆಗಳೆಲ್ಲ ಖಾಲಿ ಹೊಡೆಯುತ್ತಿದ್ದವು. ೨೦೨೦ರಲ್ಲಿ ಕೋವಿಡ್ ವೈರಸ್ ಲಾಕ್-ಡೌನಿನಿಂದಾಗಿ ಇದರ ಮರುಪ್ರಸಾರ ಆರಂಭವಾದಾಗ ಇದು ಜಗತ್ತಿನಲ್ಲೇ ಅತಿ ಹೆಚ್ಚು ಜನರು ವೀಕ್ಷಿಸಿದ ಟಿವಿ ಕಾರ್ಯಕ್ರಮವಾಗಿ ದಾಖಲಾಯಿತು.