೨.ಅತ್ಯಂತ ಪ್ರಾಚೀನ ವೈದ್ಯಕೀಯ ಶಾಸ್ತ್ರ “ಆಯುರ್ವೇದ"ದ ತವರೂರು ಭಾರತ
ಐದು ಸಾವಿರ ವರುಷಗಳ ಹಿಂದೆ ಭಾರತದಲ್ಲಿ ಬಳಕೆಗೆ ಬಂದ "ಆಯುರ್ವೇದ" ಜಗತ್ತಿನ ಅತ್ಯಂಚ ಪ್ರಾಚೀನ ವೈದ್ಯಕೀಯ ಶಾಸ್ತ್ರವೆಂದು ನಂಬಲಾಗಿದೆ. ಇಂದಿಗೂ ಜಗತ್ತಿನ ಮುಂಚೂಣಿ ವೈದ್ಯಕೀಯ ಪದ್ಧತಿಗಳಲ್ಲಿ ಆಯುರ್ವೇದ ಒಂದಾಗಿದೆ.
ಆಯುರ್ವೇದದ ಮೂಲ: ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದ ಗ್ರಂಥ. ಅದರಲ್ಲಿ ಹಲವಾರು ರೋಗಗಳನ್ನು ಮತ್ತು ಅವುಗಳ ಚಿಕಿತ್ಸೆಗಳನ್ನು ಪ್ರಸ್ತಾಪಿಸಲಾಗಿದೆ. ಆರೋಗ್ಯರಕ್ಷಣೆ, ಆರೋಗ್ಯವರ್ಧನೆ ಮತ್ತು ರೋಗಚಿಕಿತ್ಸೆಯಲ್ಲಿ ಔಷಧೀಯ ಸಸ್ಯಗಳಿಂದ ತಯಾರಿಸಲಾದ ಉತ್ಪನ್ನಗಳನ್ನು ಮತ್ತು ವಿಶೇಷ ಆಹಾರಗಳನ್ನು ಆಯುರ್ವೇದ ಬಳಸುತ್ತದೆ.
ಆಯುರ್ವೇದ ಕೇವಲ ಔಷಧಿ ಪದ್ಧತಿಯಲ್ಲ; ಶರೀರ, ಮನಸ್ಸು ಮತ್ತು ಆತ್ಮಗಳ ನಡುವೆ ಪರಿಪೂರ್ಣ ಸಮತೋಲನ ಇದ್ದಾಗ ಮಾತ್ರ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂಬ ಚಿಂತನೆಯೇ ಆರ್ಯುರ್ವೇದದ ಮೂಲ ತತ್ವ. ಆಯುರ್ವೇದದ ಪ್ರಸಿದ್ಧ ಪಠ್ಯಗಳನ್ನು ರಚಿಸಿದವರು ಚರಕ (ಕ್ರಿ.ಪೂ.೩೦೦) ಮತ್ತು ಸುಶ್ರುತ (ಕ್ರಿ.ಪೂ.೬೦೦)
ಆಯುರ್ವೇದ ಒಂದು ಜೀವನಪದ್ಧತಿ ಎನ್ನುವುದೇ ಸೂಕ್ತ. ಸಮತೋಲನದ ಆಹಾರ, ದಿನನಿತ್ಯದ ದೈಹಿಕ ಚಟುವಟಿಕೆಗಳು, ಸಕಾರಾತ್ಮಕ ಯೋಚನೆ - ಇವು ಆಯುರ್ವೇದ ಪದ್ಧತಿಯ ಆಧಾರಸ್ತಂಭಗಳು. ವರುಷ ೨೦೦೦ದಿಂದ ಈಚೆಗೆ ಜನಸಾಮಾನ್ಯರಿಗೆ ರಾಸಾಯನಿಕಗಳನ್ನು ಔಷಧಿಯಾಗಿ ಸೇವಿಸುವುದರ ದುಷ್ಟರಿಣಾಮಗಳು ಸ್ಪಷ್ಟವಾದವು. ಹಾಗಾಗಿ ಹೆಚ್ಚೆಚ್ಚು ಜನರು ಆರೋಗ್ಯವರ್ಧನೆಗೆ ಮತ್ತು ರೋಗಚಿಕಿತ್ಸೆಗೆ ಆಯುರ್ವೇದ ಪದ್ಧತಿಯನ್ನು ಅವಲಂಬಿಸಲು ಶುರು ಮಾಡಿದ್ದಾರೆ. ಭಾರತದಲ್ಲಿ ನೂರಾರು ಕಂಪೆನಿಗಳು ಬೃಹತ್ ಪ್ರಮಾಣದಲ್ಲಿ ಆಯುರ್ವೇದ ಔಷಧಿಗಳನ್ನು ಉತ್ಪಾದಿಸುತ್ತಿದ್ದಾರೆ.
ಫೋಟೋ: ಚರಕ ಮುನಿ ಪ್ರತಿಮೆ; ಕೃಪೆ: ವಿಕಿಪೀಡಿಯಾ