ಪೈತಾನ್ ಚಿತ್ರಕಲೆ
ಮಹಾರಾಷ್ಟ್ರದ ಪೈತಾನ್ ಪಟ್ಟಣ ಈ ಚಿತ್ರಕಲೆಯ ಮೂಲ. ಸುಮಾರು ಎರಡು ದಶಕಗಳಿಂದೀಚೆಗೆ ಇದನ್ನು ಚಿತ್ರಕಥಿ ಎಂದು ಹೆಸರಿಸಲಾಗಿದೆ. ಈ ಚಿತ್ರಕಾರರು ಸಂಗೀತಗಾರರೂ ಆಗಿರುತ್ತಾರೆ. ಈ ಚಿತ್ರಗಳನ್ನು, ಕಲಾವಿದರು ಹಳ್ಳಿಯಿಂದ ಹಳ್ಳಿಗೆ ಹೊತ್ತೊಯ್ದು, ಪ್ರದರ್ಶನ ನೀಡುತ್ತಾರೆ. ಹಾಡುತ್ತಾ, ಒಂದೊಂದೇ ಚಿತ್ರ ತೋರಿಸುತ್ತಾ ಕತೆ ಹೇಳುತ್ತಾರೆ. ಅವೆಲ್ಲ ರಾಮಾಯಣ ಮತ್ತು ಮಹಾಭಾರತದ ಕತೆಗಳು.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್  ಇನ್ ಇಂಡಿಯನ್ ಆರ್ಟ್” ಪುಸ್ತಕ

ಪಟ ಚಿತ್ರಕಲೆ
ಇದು ಒರಿಸ್ಸಾದ ಚಿತ್ರಕಲೆ. ಇವನ್ನು ಪಟ ಎಂಬ ಬೋರ್ಡಿನಲ್ಲಿ ಚಿತ್ರಿಸುತ್ತಾರೆ. ಇವು ಶ್ರೀ ಜಗನ್ನಾಥ ದೇವರು ಮತ್ತು ಇತರ ಹಿಂದೂ ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಒಳಗೊಂಡಿರುತ್ತವೆ. ಜಾನಪದ, ಪ್ರಾಣಿಗಳು ಮತ್ತು ಹಕ್ಕಿಗಳಿಗೆ ಸಂಬಂಧಿಸಿದ ಚಿತ್ರಗಳೂ ಇರುತ್ತವೆ.

ಪ್ರಾಕೃತಿಕ ವಸ್ತುಗಳನ್ನೇ ಬಳಸಿ, ಕೆಂಪು, ಹಳದಿ ಮತ್ತು ಹಸುರು ಬಣ್ಣಗಳಲ್ಲಿ ಚಿತ್ರಗಳ ರಚನೆ. ಚಿತ್ರಗಳ ಮೂಲರೇಖೆಗಳು ಕಪ್ಪು ಬಣ್ಣದಲ್ಲಿರುತ್ತವೆ. ಚಿತ್ರಪಟದ ಅಂಚುಗಳು ಮತ್ತು ಮುಖ್ಯಚಿತ್ರದ ಹೊರತಾಗಿ ಉಳಿದ ಜಾಗವನ್ನು ಗಿಡಗಳು ಮತ್ತು ಹೂವಿನ ಚಿತ್ರಗಳು ತುಂಬುತ್ತವೆ.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್  ಇನ್ ಇಂಡಿಯನ್ ಆರ್ಟ್” ಪುಸ್ತಕ

ಕಾಳಿಘಾಟ್ ಚಿತ್ರಕಲೆ
ಕೊಲ್ಕತಾದಲ್ಲಿ ೧೮೧೯ರಲ್ಲಿ ನಿರ್ಮಿಸಲಾದ ಕಾಳಿ ದೇವಸ್ಥಾನದಲ್ಲಿ ರಚಿಸಿರುವ ಚಿತ್ರಗಳ ಶೈಲಿಗೆ ಈ ಹೆಸರು. ದೇವಸ್ಥಾನಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅಲ್ಲಿನ ಪೇಟೆಯ ಅಂಗಡಿಗಳಲ್ಲಿ ಈ ಚಿತ್ರಪಟಗಳನ್ನು ಮಾರುತ್ತಾರೆ.

ಈ ಚಿತ್ರಗಳಲ್ಲಿ ಚಂದದ ಉಡುಪು ಧರಿಸಿದ ಗಂಡಸರು ಮತ್ತು ಹೆಂಗಸರು, ಪ್ರಾಣಿಗಳು ಮತ್ತು ಪಕ್ಷಿಗಳು, ಕುಣಿಯುವ ಹುಡುಗಿಯರು ಮತ್ತು ಧಾರ್ಮಿಕ ಕತೆಗಳ ಪ್ರಸಂಗಗಳನ್ನು ಕಾಣಬಹುದು. ಜಲವರ್ಣದಲ್ಲಿ ಕಡಿಮೆ ಬೆಲೆಯ ಕಾಗದದಲ್ಲಿ ಇವನ್ನು ಚಿತ್ರಿಸಲಾಗುತ್ತದೆ.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್  ಇನ್ ಇಂಡಿಯನ್ ಆರ್ಟ್” ಪುಸ್ತಕ

ನೆರಳು - ಗೊಂಬೆಯಾಟದ ಚಿತ್ರಕಲೆ
ಆಂಧ್ರಪ್ರದೇಶ ನೆರಳು - ಗೊಂಬೆಯಾಟಕ್ಕೆ ಹೆಸರುವಾಸಿ. ಈ ಗೊಂಬೆಗಳನ್ನು ಚರ್ಮದಿಂದ ಮಾಡುತ್ತಾರೆ. ಗೊಂಬೆಗಳ ವಿವಿಧ ಭಾಗಗಳನ್ನು ಜೋಡಿಸಿ, ಚಲನೆಗೆ ಅವಕಾಶ ಮಾಡುತ್ತಾರೆ. ಗೊಂಬೆಯಾಟಗಾರರು ಬಿದಿರಿನ ಕಡ್ಡಿಗಳಿಂದ ಗೊಂಬೆಗಳನ್ನು ಎತ್ತಿ ಹಿಡಿದು ಆಡಿಸುತ್ತಾರೆ.

ಬಣ್ಣದ ಪಟ್ಟಿಗಳ ಮೂಲಕ ಗೊಂಬೆಗಳ ಉಡುಪು ಮತ್ತು ಆಭರಣಗಳನ್ನು ಚಿತ್ರಿಸುತ್ತಾರೆ. ಇಲ್ಲಿನ ಚಿತ್ರದಲ್ಲಿರುವ ಜಿಂಕೆ ರಾಮಾಯಣದ ಕತೆಗೆ ಸಂಬಂಧಿಸಿದ್ದು.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್  ಇನ್ ಇಂಡಿಯನ್ ಆರ್ಟ್” ಪುಸ್ತಕ

ವರ್ಲಿ ಚಿತ್ರಕಲೆ
ಮಹಾರಾಷ್ಟ್ರದ ಒಂದು ಬುಡಕಟ್ಟಿನ ಹೆಸರು ವರ್ಲಿ. ಈ ಜನರ ವಾಸ ಮಣ್ಣು ಮತ್ತು ದನದ ಸೆಗಣಿ ಸಾರಣೆ ಮಾಡಿದ ಬಿದಿರಿನ ಗೋಡೆಗಳ ಸರಳ ಗುಡಿಸಲುಗಳಲ್ಲಿ. ಈ ಗುಡಿಸಲುಗಳ ಗೋಡೆಗಳಲ್ಲಿ ಬಿಳಿಅಕ್ಕಿಯ ಪೇಸ್ಟಿನಿಂದ ಅವರು ಬರೆಯುವ ಚಿತ್ರಗಳಿಗೆ ವರ್ಲಿ ಚಿತ್ರಗಳೆಂಬ ಹೆಸರು. (ಚಿತ್ರ ನೋಡಿ)

ವರ್ಲಿ ಚಿತ್ರಗಳು ಪೌರಾಣಿಕ ಹಾಗೂ ದಂತಕತೆಗಳನ್ನು ಮತ್ತು ನಿತ್ಯಜೀವನದ ದೃಶ್ಯಗಳನ್ನು ಕಟ್ಟಿ ಕೊಡುತ್ತವೆ. ಎರಡು ತ್ರಿಕೋನಗಳನ್ನು ಜೋಡಿಸಿ, ಮನುಷ್ಯನ ದೇಹ ಬರೆದು, ಅದರ ಕೈ ಮತ್ತು ಕಾಲುಗಳನ್ನು ಸರಳರೇಖೆ ಮೂಲಕ, ತಲೆಯನ್ನು ವೃತ್ತದ ಮೂಲಕ ಚಿತ್ರಿಸಿ ಚಂದವಾಗಿ ಮನುಷ್ಯಾಕೃತಿ ಬರೆಯುತ್ತಾರೆ.

ಮದುವೆಯ ಸಂದರ್ಭದಲ್ಲಿ, ನವವಧೂವರರ ಗುಡಿಸಲಿನೊಳಗೆ ಸುಂದರ ಚಿತ್ರ ಬಿಡಿಸುವುದು ವಾಡಿಕೆ.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್  ಇನ್ ಇಂಡಿಯನ್ ಆರ್ಟ್” ಪುಸ್ತಕ

ಮಧುಬನಿ ಚಿತ್ರಕಲೆ
ಈ ಪಾರಂಪರಿಕ ಚಿತ್ರಕಲೆಯ ಮೂಲ ಬಿಹಾರದ ಮಿಥಿಲಾ ಪ್ರದೇಶ. ಮಧುಬನಿ ಜಿಲ್ಲೆಯಲ್ಲಿ ಈ ಶೈಲಿಯ ಚಿತ್ರಗಳನ್ನು ರಚಿಸುವ ಕಾರಣ ಅದೇ ಹೆಸರು ಬಂದಿದೆ.

ಪುರಾತನ ಕಾಲದಿಂದಲೂ ತಮ್ಮ ಮನೆಯ ಗೋಡೆ ಮತ್ತು ನೆಲದಲ್ಲಿ ಈ ಶೈಲಿಯ ಚಿತ್ರಗಳನ್ನು ಅಲ್ಲಿನ ಮಹಿಳೆಯರು ರಚಿಸುತ್ತಿದ್ದರು. ಅದಕ್ಕಾಗಿ ಅವರು ಬಳಸುವುದು ಅರೆದ ಅಕ್ಕಿ ಮತ್ತು ಬಣ್ಣಗಳ ಮಿಶ್ರಣದ ಅಂಟು (ಪೇಸ್ಟ್). ಅಲ್ಲಿ ಮಗುವಿನ ಜನ್ಮ, ಚೌರ (ತಲೆಗೂದಲು ಕತ್ತರಿಸುವ) ಸಮಾರಂಭ, ಹಬ್ಬಗಳು, ಉಪವಾಸ - ಈ ಸಂದರ್ಭಗಳಲ್ಲಿ ಮತ್ತು ದೇವರನ್ನು ಪೂಜಿಸಲಿಕ್ಕಾಗಿ ಮಧುಬನಿ ಚಿತ್ರಗಳನ್ನು ಬಿಡಿಸುವ ವಾಡಿಕೆ.

ಇಲ್ಲಿರುವ ಮೀನುಗಳ ಚಿತ್ರದಲ್ಲಿ ಪಾರಂಪರಿಕ ಗಾಢ ಬಣ್ಣಗಳಲ್ಲಿ ಕಪ್ಪು ಮತ್ತು ಬಿಳುಪಿನ ರೇಖೆಗಳ ವಿನ್ಯಾಸವಿದೆ.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್  ಇನ್ ಇಂಡಿಯನ್ ಆರ್ಟ್” ಪುಸ್ತಕ
 

ಅವತ್ತು, ೬ ಆಗಸ್ಟ್ ೧೯೪೫ರಂದು ಇಡೀ ಜಗತ್ತೇ ತತ್ತರಿಸಿತ್ತು. ೧,೪೦,೦೦೦ ಜನರು ಸತ್ತಿದ್ದರು - ಜಪಾನಿನ ಹಿರೋಷಿಮಾದ ಮೇಲೆ ಅಮೇರಿಕಾದ ಯುಎಸ್‌ಎ ದೇಶ ಅಣುಬಾಂಬ್ ಧಾಳಿ ನಡೆಸಿದಾಗ. ಹಲವರು ಅಣು ವಿಕಿರಣದಿಂದಾಗಿ ತಕ್ಷಣವೇ ಸತ್ತಿದ್ದರೆ, ಉಳಿದವರು ವಿಕಿರಣದ ಭಯಾನಕ ರೋಗಗಳಿಂದಾಗಿ, ದೇಹದ ಚರ್ಮ ಕಿತ್ತು ಬಂದ ಸುಟ್ಟ ಗಾಯಗಳಿಂದಾಗಿ, ಇತರ ಭಯಂಕರ ಘಾತಗಳಿಂದಾಗಿ ಅನಂತರ ಕೆಲವೇ ವಾರಗಳಲ್ಲಿ ಸಾವಿಗೆ ಬಲಿಯಾಗಿದ್ದರು.

ಮೂರು ದಿನಗಳ ನಂತರ, ಜಪಾನಿನ ನಾಗಸಾಕಿಯ ಮೇಲೆ ಯುಎಸ್‌ಎ ಇನ್ನೊಂದು ಅಣುಬಾಂಬ್ ಧಾಳಿ ನಡೆಸಿತು. ಇದರಿಂದಾಗಿ ಅದೇ ರೀತಿಯ ಚಿತ್ರಹಿಂಸೆ ಅನುಭವಿಸುತ್ತಾ ಇನ್ನೂ ೭೪,೦೦೦ ಜನರು ಪ್ರಾಣ ಕಳಕೊಂಡರು.

ಅದಾಗಿ ೭೫ ವರುಷಗಳು ದಾಟಿವೆ. ಜಪಾನಿನ ಹಿರೋಷಿಮಾದ ಶಾಂತಿ ಸ್ಮಾರಕ ಉದ್ಯಾನದಲ್ಲಿ ೬ ಆಗಸ್ಟ್ ೨೦೨೦ರಂದು ಹಿರೋಷಿಮಾ ಅಣುಬಾಂಬ್ ಧಾಳಿಯ ೭೫ನೇ ವಾರ್ಷಿಕ ಸ್ಮರಣ ದಿನವನ್ನು ಆಚರಿಸಲಾಯಿತು; ಅಣುಬಾಂಬ್ ಧಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಪಾನಿನ ಪ್ರಧಾನಿ ಶಿಂಜೊ ಅಬೆ, ಅಣುಬಾಂಬ್ ಧಾಳಿಯಿಂದ ಬದುಕಿ ಉಳಿದವರು, ಬಲಿಯಾದವರ ಬಂಧುಗಳು ಮತ್ತು ಕೆಲವು ವಿದೇಶಿ ಪ್ರತಿನಿಧಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು (ಫೋಟೋ ನೋಡಿ).

"ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂದು ಆರಂಭವಾಗುವ ಕವನ ಕನ್ನಡದ ಪ್ರಸಿದ್ಧ ಕವನ. ಬುದ್ಧನ ಜನ್ಮ ದಿನವೇ ಬುದ್ಧ ಪೂರ್ಣಿಮೆ ಅಥವಾ ಬೈಸಾಕಿ (ಮೇ ೭). ಬೈಸಾಕಿಯಂದೇ ಬುದ್ಧನಿಗೆ ಜ್ನಾನೋದಯವಾಯಿತು ಮತ್ತು ಬೈಸಾಕಿಯಂದೇ ಆತ ನಿರ್ವಾಣ ಹೊಂದಿದ ಎಂದು ಪ್ರತೀತಿ.

ಕ್ರಿಪೂ ೬೨೩ರಲ್ಲಿ ಕಪಿಲವಸ್ತುವಿನ ರಾಜ ಶುದ್ಧೋದನನ ರಾಣಿ ಮಾಯಾದೇವಿ ಜನ್ಮವಿತ್ತ ಗಂಡುಮಗು ಸಿದ್ಧಾರ್ಥ. ಅದಾಗಿ ಏಳನೇ ದಿನಕ್ಕೆ ಮಾಯಾದೇವಿ ತೀರಿಕೊಂಡಳು. ಅನಂತರ ಸಿದ್ಧಾರ್ಥನನ್ನು ಸಲಹಿದಾಕೆ ಮಲತಾಯಿ ಗೌತಮಿ ದೇವಿ. ಆದ್ದರಿಂದ ಗೌತಮನೆಂಬ ಹೆಸರು ಬಂತು.

ವಿದ್ಯಾವಂತನಾಗಿ ಶಾಸ್ತ್ರಗಳಲ್ಲಿ ಪರಿಣತನಾದ ಗೌತಮ. ಮುಂದೆ ಯಶೋಧರೆಯೊಂದಿಗೆ ಆತನ ವಿವಾಹ. ನಂತರ ರಾಹುಲ ಎಂಬ ಮಗುವಿನ ತಂದೆಯಾದ. ಆದರೆ ಗೌತಮ ಎಲ್ಲ ವೈಭೋಗ ತೊರೆದು, ಜ್ನಾನದ ಅನ್ವೇಷಣೆಗಾಗಿ ಹೊರಡಲು ಸಂಕಲ್ಪ ಮಾಡಿದ. ರಾತ್ರೋರಾತ್ರಿ ಪತ್ನಿ ಯಶೋಧರೆ, ಎಳೆ ಮಗು, ಅರಮನೆ, ಸಂಪತ್ತು, ಬಂಧುಬಳಗ ಎಲ್ಲವನ್ನೂ ತೊರೆದು ನಡೆದ.

ಜಗತ್ತಿನ ಬಹುಪಾಲು ಜನಸಂಖ್ಯೆ ಹೊಂದಿರುವ ಏಷ್ಯಾ ಖಂಡದಲ್ಲಿ ಪ್ರಪ್ರಥಮವಾಗಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತರಾದವರು ಎಂಬ ಹೆಗ್ಗಳಿಕೆ ವಿಶ್ವಕವಿ ರವೀಂದ್ರನಾಥ ಟಾಗೋರ್ ಅವರದು.

ಕೊಲ್ಕತಾದಲ್ಲಿ ೭ ಮೇ ೧೮೬೧ರಲ್ಲಿ ಜನಿಸಿದ ಟಾಗೋರರ ೧೫೯ನೇ ಜನ್ಮ ಜಯಂತಿ ಇವತ್ತು ನಮ್ಮ ದೇಶದಲ್ಲಿ ರವೀಂದ್ರ ಜಯಂತಿಯಾಗಿ ಆಚರಿಸಲ್ಪಡುತ್ತಿದೆ. ಪಶ್ಚಿಮ ಬಂಗಾಳದ ಜನರಿಗಂತೂ ಬೈಸಾಕಿಯ ಇಂದಿನ ದಿನ ಸಂಭ್ರಮದ ದಿನ.

ಟಾಗೋರರು ಕವನಗಳನ್ನು ಮಾತ್ರವಲ್ಲ, ಹಲವಾರು ಸಣ್ಣಕತೆ, ಕಾದಂಬರಿ ಮತ್ತು ನಾಟಕಗಳನ್ನು ಬರೆದಿದ್ದಾರೆ. ಜನಸಾಮಾನ್ಯರ ಬದುಕು, ಸಾಮಾಜಿಕ ಸಂಗತಿಗಳು, ಸಾಹಿತ್ಯ ವಿಮರ್ಶೆ ಮತ್ತು ತತ್ವಶಾಸ್ತ್ರ ಅವರ ಬರಹಗಳ ಹೂರಣ.ಅವರ ಬಹುಪಾಲು ಬರವಣಿಗೆ ಮೂಲತಃ ಬಂಗಾಳಿ ಭಾಷೆಯಲ್ಲಿದೆ. ಅನಂತರ, ಪಾಶ್ಚಾತ್ಯ ದೇಶಗಳ ಜನರಿಗೂ ಅವು ಓದಲು ಲಭ್ಯವಾಗಲೆಂದು ಅವನ್ನು ಇಂಗ್ಲಿಷಿಗೆ ಅನುವಾದಿಸಲಾಯಿತು.

“ಜೋಗದ ಸಿರಿಬೆಳಕಿನಲ್ಲಿ ….. ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ” - ೧೯೭೦ರ ದಶಕದಲ್ಲಿ, ನನ್ನ ತಲೆಮಾರಿನ ಯುವಕರಲ್ಲಿ ರೋಮಾಂಚನ ಮೂಡಿಸಿದ ಕವನ. ಈಗಲೂ ಕನ್ನಡ ನಾಡಿನ ಎಲ್ಲ ತಲೆಮಾರಿನವರಲ್ಲಿ ರೋಮಾಂಚನ ಚಿಮ್ಮಿಸುವ ಕವಿತೆ. ಅದನ್ನು ಬರೆದ ಕವಿ ಕೆ.ಎಸ್. ನಿಸಾರ್ ಅಹಮದ್ (೮೪) ಇಂದು ನಮ್ಮೊಂದಿಗಿಲ್ಲ. ನಿನ್ನೆ, ೩ ಮೇ ೨೦೨೦ರಂದು ನಮ್ಮನ್ನಗಲಿದರು. (ಜನನ: ೫ ಫೆಬ್ರವರಿ ೧೯೩೬, ದೇವನಹಳ್ಳಿ, ಬೆಂಗಳೂರು ಜಿಲ್ಲೆ)

ನಮ್ಮ “ಸಂಪದ"ದ "ಶ್ರಾವ್ಯ" ವಿಭಾಗದಲ್ಲಿ ಅವರ ಸಂದರ್ಶನ ಲಭ್ಯ (ಸಂಪುಟ ೭). ಆ ಸಂದರ್ಶನವನ್ನು (೪೮ ನಿಮಿಷ) ಇವತ್ತು ಪುನಃ ಕೇಳಿದೆ. ಜನಪ್ರಿಯ ಕವಿಯಾಗಿ, ಪ್ರಾಧ್ಯಾಪಕರಾಗಿ, ಚಿಂತಕರಾಗಿ, ಕನ್ನಡದ ಕಟ್ಟಾಳುವಾಗಿ, ಮಾನವತಾವಾದಿಯಾಗಿ ನಿಸಾರ್ ಅಹಮದರ ವ್ಯಕ್ತಿತ್ವ ಅದರಲ್ಲಿ ಮೂಡಿ ಬಂದಿದೆ.

ಆ ಸಂದರ್ಶನದ ಆರಂಭದಲ್ಲಿಯೇ ಅವರು ಹೇಳಿದ್ದಾರೆ, “ವಿಜ್ನಾನದ ಜೊತೆಯಲ್ಲಿ ಕನ್ನಡ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ಮುಂದುವರಿಯಲು ಆಗಲ್ಲ.” ತಂತ್ರಜ್ನಾನದ ಅಡಿಪಾಯದಿಂದ “ಸಂಪದ" ಬೆಳೆದು ಬಂದಿರುವುದು ಸಿಹಿಸುದ್ದಿ ಎಂದ ನಿಸಾರ್ ಅಹಮದರು ಇದು ಜಗತ್ತಿನ ಕನ್ನಡಿಗರೆಲ್ಲ ಸಂವಾದ ನಡೆಸಲು ವೇದಿಕೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

Pages