ಖಡ್ಗಮೃಗದ ಕೊಂಬುಗಳ್ಳರು ಅವನ್ನು ಕೊಲ್ಲುವುದು ಕೇವಲ ಕೊಂಬಿಗಾಗಿ. ಆದ್ದರಿಂದ, ಖಡ್ಗಮೃಗಗಳ ಕೊಂಬನ್ನೇ ಕತ್ತರಿಸಿದರೆ ಹ್ಯಾಗೆ?

ಭಾರತದ ಒಂದು-ಕೊಂಬಿನ ಖಡ್ಗಮೃಗಗಳನ್ನು ಉಳಿಸಲಿಕ್ಕಾಗಿ ಹೀಗೊಂದು ಚರ್ಚೆ ಕೆಲವು ವರುಷಗಳಿಂದ ನಡೆಯುತ್ತಿದೆ. ಅಸ್ಸಾಂನಲ್ಲಿ ಖಡ್ಗಮೃಗಗಳನ್ನು ಹೊಂಚು ಹಾಕಿ ಕೊಲ್ಲುವ ದಂಧೆ ನಡೆಯುತ್ತಲೇ ಇದೆ. ಅವನ್ನು ಉಳಿಸಲಿಕ್ಕಾಗಿ ಕೈಗೊಂಡ ಕ್ರಮಗಳು ಹಲವು. ಆದರೆ, ಎಲ್ಲ ಕ್ರಮಗಳೂ ವೈಜ್ನಾನಿಕ ಅಧ್ಯಯನಗಳನ್ನು ಆಧರಿಸಿವೆ ಎನ್ನುವಂತಿಲ್ಲ.

ಉದಾಹರಣೆಗೆ, ರಾಷ್ಟ್ರೀಯ ಉದ್ಯಾನಗಳ ಕಣ್ಗಾವಲಿಗಾಗಿ ಪೈಲಟ್-ರಹಿತ ವಿಮಾನಗಳನ್ನು ಬಳಸಲಾಯಿತು. ಇದರಿಂದಾಗಿ ಸಾರ್ವಜನಿಕ ಹಣ ಪೋಲಾಯಿತು ವಿನಃ ಬೇರೇನೂ ಪ್ರಯೋಜನವಾಗಲಿಲ್ಲ. ಹಾಗೆಯೇ, ಕೊಂಬುಗಳ್ಳರ ಪತ್ತೆಗಾಗಿ ತರಬೇತಾದ ನಾಯಿಗಳನ್ನು ಬಳಸಬೇಕೆಂದು ಕೆಲವು ಸರಕಾರೇತರ ಸಂಸ್ಥೆಗಳ ಸಲಹೆ! ಇತ್ತೀಚೆಗಿನದು ರಾಜ್ಯ ಅರಣ್ಯ ಇಲಾಖೆಯ ಸಲಹೆ: ಖಡ್ಗಮೃಗಗಳ ಕೊಂಬು ಕತ್ತರಿಸುವುದು.

ಈಶಾನ್ಯದ ತ್ರಿಪುರಾ ರಾಜ್ಯದಲ್ಲಿ ಬೊಸ್ತಮಿ ಆಮೆ ಎಂದೇ ಹೆಸರಾದ ಮೃದುಚಿಪ್ಪಿನ ಆಮೆಗಳು ನಿರ್ವಂಶವಾಗುವ ಅಪಾಯ ದಟ್ಟವಾಗಿತ್ತು. ಇದೀಗ, ಅವನ್ನು ಉಳಿಸುವ ದಾರಿ ತೋರಿಸಿದೆ, ಪರಿಸರ ಕಾರ್ಯಕರ್ತರ ಕಾರ್ಯಾಚರಣೆ.

ಯಾಕೆಂದರೆ, ಹತ್ತು ವರುಷಗಳ ನಂತರ, ಈ ವರುಷ ೨೦೧೫ರ ಜೂನ್ ಮೊದಲ ವಾರದಲ್ಲಿ ಬೊಸ್ತಮಿ ಆಮೆಗಳು ಮೊಟ್ಟೆಯಿಟ್ಟವು – ತ್ರಿಪುರಾದ ರಾಜಧಾನಿ ಅಗರ್ತಲಾದಿಂದ ೫೫ ಕಿಮೀ ದೂರದ ಉದಯಪುರದ ತ್ರಿಪುರೇಶ್ವರಿ ದೇವಸ್ಥಾನದ ಪವಿತ್ರ ಸರೋವರದಲ್ಲಿ. ಅನಂತರ, ಭಾರೀ ಮಳೆ ಸುರಿದ ದಿನ, ಹತ್ತು ವರುಷಗಳ ನಂತರ ಮೊದಲ ಬಾರಿಗೆ ಹತ್ತು ಆಮೆ ಮರಿಗಳು ರಾಷ್ಟ್ರೀಯ ಹೆದ್ದಾರಿ ೪೪ಎಯಲ್ಲಿ ಕಾಣಿಸಿಕೊಂಡವು. ಸುಮಾರು ೧೬೩ ಮೊಟ್ಟೆಗಳು ಒಡೆದು ಹೊರಬಂದ ಆಮೆ ಮರಿಗಳಲ್ಲಿ ಇವು ಕೆಲವು.

ಬೊಸ್ತಮಿ ಆಮೆಗಳನ್ನು ಆ ಪರಿತ್ರ ಸರೋವರಕ್ಕೆ ತಂದದ್ದು ತ್ರಿಪುರಾದ ರಾಜನಾಗಿದ್ದ ಮಾಣಿಕ್ಯ ರಾಜ ಎಂದು ಪ್ರತೀತಿ. ದಕ್ಷಿಣ ಬಾಂಗ್ಲಾ ದೇಶದ ಚಿತ್ತಗಾಂಗ್ ಗುಡ್ಡಗಳಿಂದ ಪವಿತ್ರತೆಯ ಸಂಕೇತವಾಗಿ ಆತ ಆಮೆಗಳನ್ನು ತಂದನಂತೆ. ತ್ರಿಪುರೇಶ್ವರಿ ದೇವಸ್ಥಾನ ಭಾರತದ ೫೧ ಶಕ್ತಿ ಪೀಠಗಳಲ್ಲೊಂದು. ಅದು ರಾಜಾ ಧನ್ಯಮಾಣಿಕ್ಯ ೧೫ನೇ ಶತಮಾನದಲ್ಲಿ ಕಟ್ಟಿಸಿದ ದೇವಸ್ಥಾನ.

ಡೆಲ್ಲಿ ಪಕ್ಕದ ಗುರುಗ್ರಾಮದಲ್ಲಿ “ಜನತಾ ಮೀಲ್ಸ್”ನ ೩೦ ಮಾರಾಟ ಕೇಂದ್ರಗಳಿಂದ ಪ್ರತಿ ದಿನ ೯,೦೦೦ ಊಟ ಮಾರಾಟ!
ಈ ದಾಖಲೆ ಮಾರಾಟದ ಗುಟ್ಟು: ಕಡಿಮೆ ಬೆಲೆಗೆ ಆರೋಗ್ಯಯುತ ಊಟ ಪೂರೈಕೆ. ಮಂಗಳೂರು ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ಐವತ್ತು ರೂಪಾಯಿಗೆ ಎರಡು ಊಟ ಸಿಕ್ಕೀತೇ? ಇಲ್ಲ. ಆದರೆ ಗುರುಗ್ರಾಮದಲ್ಲಿ ಆ ಬೆಲೆಗೆ ಎರಡು ಜನತಾ ಮೀಲ್ಸ್ ಲಭ್ಯ. ಉದಾಹರಣೆಗೆ, ಬಿಹಾರದಿಂದ ಗುರುಗ್ರಾಮಕ್ಕೆ ಬಂದು ರಿಕ್ಷಾ ತಳ್ಳುತ್ತಾ ಬದುಕು ಸಾಗಿರುತ್ತಿರುವ ಮನೋಜ್ ಮಹತೋ ಜನತಾ ಮೀಲ್ಸಿನಿಂದ ದಿನನಿತ್ಯ ಖರೀದಿಸುವ ಎರಡು ಊಟಗಳ ವೆಚ್ಚ ರೂ.೫೦. ಮಧ್ಯಾಹ್ನ ರೂ.೩೦ರ ಊಟದಲ್ಲಿ ಚಪಾತಿಗಳು, ತೊವ್ವೆ, ಅನ್ನ, ತರಕಾರಿ ಸಾಂಬಾರ್ ಮತ್ತು ಸಲಾಡ್. ರಾತ್ರಿಯ ರೂ.೨೦ರ ಊಟದಲ್ಲಿ ಐದು ಚಪಾತಿಗಳು, ತರಕಾರಿ ಪಲ್ಯ, ಚಟ್ನಿ ಮತ್ತು ಸಲಾಡ್. ಜೊತೆಗೆ ಇದು ಸುರಕ್ಷಿತ ಎಂಬ ವಿಶ್ವಾಸ ಆತನಿಗೆ.
ಸೆಕ್ಯುರಿಟಿ ಗಾರ್ಡ್ ಆಗಿರುವ ರಣಜಿತ್ ಗಲ್ ಸಿನ್ಹಾ ದಿನದಿನವೂ ಜನತಾ ಊಟ ಮಾಡಲು ಕಾರಣ: ಊಟದಲ್ಲಿರುವ ತಾಜಾ ತರಕಾರಿಗಳು ಮತ್ತು ಊಟದ ಕಡಿಮೆ ಬೆಲೆ. ಈಗಂತೂ ಅಲ್ಲಿನ ಶಾಲೆ, ಕಾರ್ಖಾನೆ, ಕೆಫೆತೀರಿಯ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಘಟಕಗಳಲ್ಲಿ ಜನತಾ ಮೀಲ್ಸ್ ಭಾರೀ ಜನಪ್ರಿಯ.

ಆಮ್ಲಜನಕವಿಲ್ಲದೆ ಬದುಕಲು ಸಾಧ್ಯವೇ? ಇಲ್ಲ. ಸಮುದ್ರದ ಆಳದಲ್ಲಿರುವ ಹಲವು ಜಲಜೀವಿಗಳ ಪಾಡು ಇದು.
ಭೂಮಿಯ ವಿವಿಧ ಸಮುದ್ರಗಳಲ್ಲಿ ಆಮ್ಲಜನಕವಿಲ್ಲದ ೪೦೦ “ಮೃತ ಪ್ರದೇಶ”ಗಳನ್ನು ಗುರುತಿಸಲಾಗಿದೆ. ಅಲ್ಲಿ ವರುಷಕ್ಕೊಮ್ಮೆ ಆಮ್ಲಜನಕ ತೀರಾ ಕಡಿಮೆಯಾಗುತ್ತದೆ. ಇದರಿಂದಾಗಿ ಮೀನುಗಳ ಸಾವು ಮತ್ತು ಸಮುದ್ರಗಳ ಜೀವವೈವಿಧ್ಯ ನಾಶ. ಆ ಮೂಲಕ ಭೂಮಿಯ ಇಕಾಲಜಿ ವ್ಯವಸ್ಥೆಗೂ ಹಾನಿ.
ಸಮುದ್ರಗಳಲ್ಲಿ ಆಮ್ಲಜನಕದ ಮಟ್ಟದ ಕುಸಿತದಲ್ಲಿ ಕಳೆದ ೪೦ ವರುಷಗಳಲ್ಲಿ ವಿಪರೀತ ಹೆಚ್ಚಳ ದಾಖಲಾಗಿದೆ. ಭಾರತದ ಪಶ್ಚಿಮದಲ್ಲಿ ಅರಬಿ (ಅರೇಬಿಯನ್) ಸಮುದ್ರದಲ್ಲಿಯೂ ಇಂತಹ ಒಂದು ಮೃತ ಪ್ರದೇಶ ಪತ್ತೆಯಾಗಿರುವುದು ಆತಂಕದ ವಿಷಯ. ಅಲ್ಲಿ ಪ್ರತಿ ವರುಷ ಚಳಿಗಾಲದಲ್ಲಿ ನೀರಿನ ಬಣ್ಣ ಪ್ರಕಾಶಮಾನವಾದ ಹಸುರಾಗಿ ಬದಲಾಗುತ್ತದೆ. ಅದು ಎಷ್ಟು ದಟ್ಟವಾಗಿರುತ್ತದೆ ಎಂದರೆ ಅದನ್ನು ಬಾಹ್ಯಾಕಾಶದಿಂದಲೂ ಕಾಣಬಹುದು. ಇದಕ್ಕೆ ಕಾರಣ ನೊಕ್ಟಿಲುಕಾ ಸಿಂಟಿಲ್ಲಾನ್ ಎಂಬ ಸೂಕ್ಷ್ಮ ಪ್ಲಾಂಕ್ಟನ್ (ಜಲಸಸ್ಯ). ಇದು ಹೂ ಬಿಟ್ಟು ಸಮುದ್ರದ ಮೇಲ್ಮೈಯಲ್ಲಿ ಹರಡುತ್ತದೆ.

ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹಾವಿನ ಕಡಿತಕ್ಕೆ ಒಳಗಾಗುವವರು ಬೀದರ್ ಜಿಲ್ಲೆಯವರು. ಹಾವಿನ ಕಡಿತದಿಂದಾಗಿ ಅತ್ಯಧಿಕ ಜನರು ಸಾಯುವುದೂ ಅದೇ ಜಿಲ್ಲೆಯಲ್ಲಿ.
ಇದಕ್ಕೇನು ಕಾರಣ? ಅಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ಹಾವಿನ ಪ್ರತಿವಿಷದ (ಆಂಟಿವೆನಮ್) ವಿಪರೀತ ಕೊರತೆ ಇದಕ್ಕೆ ಪ್ರಧಾನ ಕಾರಣ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತ್ತೀಚೆಗಿನ ಅಧ್ಯಯನ ವರದಿಯ ಪ್ರಕಾರ ಪ್ರತಿದಿನ ಬೀದರ್ ಜಿಲ್ಲೆಯಲ್ಲಿ ಹಾವಿನ ಕಡಿತಕ್ಕೆ ಒಳಗಾಗುವ ವ್ಯಕ್ತಿಗಳ ಸಂಖ್ಯೆ ೧೩. ಅಂದರೆ ವರುಷಕ್ಕೆ ೪,೭೪೫ ಜನರಿಗೆ ಹಾವಿನ ಕಡಿತ! ಇವುಗಳಲ್ಲಿ ಕೆಲವು ಹಾವು ಕಡಿತಗಳು ಜೀವಕ್ಕೇ ಅಪಾಯಕಾರಿ. ಹಾವು ಕಡಿತದಿಂದ ಕರ್ನಾಟಕದಲ್ಲಿ ಸಾಯುವ ಪ್ರತಿ ಐವರಲ್ಲಿ ಒಬ್ಬರು ಬೀದರ್ ಜಿಲ್ಲೆಯವರು.
ಹಾವಿನ ಪ್ರತಿವಿಷದ ಕೊರತೆಯ ಸಮಸ್ಯೆಗೆ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನು ವಿಜ್ನಾನಗಳ ವಿಶ್ವವಿದ್ಯಾಲಯದ ವಿಜ್ನಾನಿಗಳು ಪರಿಹಾರ ಸೂಚಿಸಿದ್ದಾರೆ: ಹಾವಿನ ಪ್ರತಿವಿಷ ಹೊಂದಿರುವ ಮೊಟ್ಟೆಗಳನ್ನಿಡುವ ಕೋಳಿಗಳನ್ನು ಅಭಿವೃದ್ಧಿ ಪಡಿಸುವುದು.

ನೀರಿನಿಂದ ಭಾರಲೋಹಗಳನ್ನು ಫಿಲ್ಟರ್ ಮಾಡಲು ಬಾಳೆಸಿಪ್ಪೆಯನ್ನು ಮಾಧ್ಯಮವಾಗಿ ಬಳಸಬಹುದೆಂದು ಬ್ರೆಜಿಲಿನ ವಿಜ್ನಾನಿಗಳು ಸಂಶೋಧಿಸಿದ್ದಾರೆ.

ಭಾರಲೋಹಗಳಾದ ಸೀಸ ಮತ್ತು ತಾಮ್ರ - ಇವು ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯದ ಮೂಲಕ ನೀರಿನಲ್ಲಿ ಸೇರಿಕೊಳ್ಳುತ್ತವೆ. ಇದರಿಂದಾಗಿ ಮಣ್ಣು ವಿಷಮಯವಾಗಿ ನಮ್ಮ ಆರೋಗ್ಯಕ್ಕೆ ಅಪಾಯ. ಅದಲ್ಲದೆ, ಸೀಸವು ಕ್ಯಾನ್ಸರಿಗೆ ಕಾರಣ.

ಸಿಲಿಕಾ, ಸೆಲ್ಯುಲೋಸ್ ಮತ್ತು ಅಲ್ಯುಮಿನಿಯಂ ಆಕ್ಸೈಡ್ - ಇವನ್ನು ಬಳಸಿ ನೀರಿನಿಂದ ಭಾರಲೋಹ ಬೇರ್ಪಡಿಸುವುದು ಹಳೆಯ ವಿಧಾನ. ಆದರೆ ಈ ವಿಧಾನ ದುಬಾರಿ ಮತ್ತು ಈ ವಿಧಾನಗಳಿಂದ ಅಡ್ಡಪರಿಣಾಮಗಳೂ ಇವೆ.

ಇದಕ್ಕೆ ಹೋಲಿಸಿದಾಗ, ನೀರಿನಿಂದ ಭಾರಲೋಹ ಬೇರ್ಪಡಿಸಲು ಬಾಳೆಹಣ್ಣಿನ ತ್ಯಾಜ್ಯವಾದ ಸಿಪ್ಪೆಯ ಬಳಕೆ ಸುರಕ್ಷಿತ. ಬಾಳೆಸಿಪ್ಪೆಯ ಸಂಯುಕ್ತಗಳಲ್ಲಿ ಸಾರಜನಕ ಹಾಗೂ ಗಂಧಕದ ಅಣುಗಳು ಮತ್ತು ಕಾರ್‍ಬೊಕ್ಸಿಲಿಕ್ ಆಮ್ಲ ಇವೆ (ಹಳೆಯ ವಿಧಾನದಲ್ಲಿ ಬಳಸುವ ವಸ್ತುಗಳಲ್ಲಿ ಇರುವುದೂ ಇವೇ.) ಈ ಆಮ್ಲದಲ್ಲಿ ಋಣಾತ್ಮಕ ಚಾರ್ಜ್ ಇದೆ. ಆದ್ದರಿಂದ, ಇದು ನೀರಿನಲ್ಲಿರುವ ಧನಾತ್ಮಕ ಚಾರ್ಜ್ ಹೊಂದಿರುವ ಭಾರಲೋಹಗಳೊಂದಿಗೆ ಸೇರಿಕೊಂಡು ಬಂಧವಾಗುತ್ತದೆ.

ಭಾರತದಲ್ಲಿ ಪ್ರತಿ ವರುಷ ಹಾವಿನ ವಿಷದಿಂದ ಸಾಯುವವರ ಸಂಖ್ಯೆ ಎಷ್ಟಿರಬಹುದು? ಆಸ್ಪತ್ರೆಗಳಿಂದ ಪಡೆದ ಅಂಕೆಸಂಖ್ಯೆಗಳ ಪ್ರಕಾರ (ಆರು ರಾಜ್ಯಗಳ ಹೊರತಾಗಿ) ಅದು ೨೦೦೮ರಲ್ಲಿ ೧,೩೬೪.
ಆದರೆ, ಸಾರ್ವಜನಿಕ ಅಂತರಾಷ್ಟ್ರೀಯ ಆರೋಗ್ಯ ಸಂಶೋಧಕರ ತಂಡದ ಪ್ರಕಾರ, ಅದು ಪ್ರತಿ ವರುಷ ೪೫,೯೦೦. ಯಾಕೆಂದರೆ ಹಾವು ಕಚ್ಚಿದವರಲ್ಲಿ ಬಹುಪಾಲು ಜನ ಹಳ್ಳಿಮದ್ದಿನ ಚಿಕಿತ್ಸೆ ಪಡೆದು, ಅದು ಫಲಕಾರಿಯಾಗದೆ ಸಾಯುತ್ತಾರೆ. ಉತ್ತರಪ್ರದೇಶ (೮,೭೦೦), ಆಂಧ್ರಪ್ರದೇಶ (೫,೨೦೦) ಮತ್ತು ಬಿಹಾರ (೪,೫೦೦) ರಾಜ್ಯಗಳಲ್ಲಿ ಹಾವಿನ ಕಡಿತಕ್ಕೆ ಬಲಿಯಾಗುವವರ ಸಂಖ್ಯೆ ಜಾಸ್ತಿ.
ಆದ್ದರಿಂದಲೇ, ಹಾವು ಕಚ್ಚಿದವರ ಜೀವ ಉಳಿಸಬಲ್ಲ ಸಂಶೋಧನೆಗೆ ಪ್ರಾಮುಖ್ಯತೆ. ಅಂತಹ ಒಂದು ಇತ್ತೀಚೆಗಿನ ಸಂಶೋಧನೆ ಕೊಲ್ಕತ್ತಾದ ಭಾರತೀಯ ರಾಸಾಯನಿಕ ಜೀವಶಾಸ್ತ್ರ ಸಂಸ್ಥೆಯ ವಿಜ್ನಾನಿಗಳ ತಂಡದ ಸಾಧನೆ.
ಔಷಧಿಯಾಗಿ ಸಿಗುವ ಹಾವಿನ ಪ್ರತಿವಿಷದ ಜೊತೆ ಮೂರು ಸಸ್ಯಮೂಲದ ಸಂಯುಕ್ತಗಳನ್ನು ಬೆರೆಸಿ ಪ್ರಯೋಗಿಸಿದಾಗ, ಅದು ಭಾರತದ ಕಟ್ಟುಹಾವಿನ ವಿಷವನ್ನು ನಿಷ್ಕ್ರಿಯಗೊಳಿಸುತ್ತದೆ – ಇದು ಅವರ ಸಂಶೋಧನೆಯಿಂದ ತಿಳಿದು ಬಂದ ವಿಷಯ.

ಮಳೆಕಾಡಿನ ಬಳ್ಳಿಯೊಂದು "ಡಿಶ್" ಆಕಾರದ ಎಲೆಗಳನ್ನು ರೂಪಿಸಿಕೊಂಡಿದೆ. ಯಾಕೆ ಗೊತ್ತೇ? ಪರಾಗಸ್ಪರ್ಶಕ್ಕಾಗಿ ಬಾವಲಿಗಳನ್ನು ಆಕರ್ಷಿಸಲು.

ಈ ಎಲೆಗಳ ಆಕಾರದಿಂದಾಗಿ ಉಂಟಾಗುವ ಸ್ಪಷ್ಟ ಪ್ರತಿಧ್ವನಿಗಳನ್ನು ಬಾವಲಿಗಳು ಎರಡು ಪಟ್ಟು ವೇಗವಾಗಿ ಗುರುತಿಸುತ್ತವೆ (ಈ ಆಕಾರವಿಲ್ಲದ ಇತರ ಎಲೆಗಳಿಂದ ಮೂಡುವ ಪ್ರತಿಧ್ವನಿಗಳಿಗೆ ಹೋಲಿಸಿದಾಗ).

ಈ ಬಳ್ಳಿಯ ಸಸ್ಯಶಾಸ್ತ್ರೀಯ ಹೆಸರು ಮಾರ್ಕ್ ಗ್ರಾವಿಯಾ ಇವೆನಿಯಾ. ಇದರ ಹೂಗಳ ಪಕ್ಕದಲ್ಲಿರುವ ಎಲೆಗಳು ಥೇಟ್ ಡಿಶ್ ಫಲಕದಂತೆಯೇ ನಿಮ್ನವಾಗಿವೆ ಎಂಬುದನ್ನು ಸಂಶೋಧಕರು ಗಮನಿಸಿದರು. ಈ ಸಂಶೋಧನೆ ಮಾಡಿದ್ದು ಬ್ರಿಟನಿನ ಬ್ರಿಸ್‍ಟೋಲ್ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಉಲಂ ವಿಶ್ವವಿದ್ಯಾಲಯದ ವಿಜ್ನಾನಿಗಳು.

"ಎಲೆಗಳಿಂದ ಪ್ರತಿಧ್ವನಿಸುವ ಅಲೆಗಳಿಂದ ಬಳ್ಳಿ ಮತ್ತು ಬಾವಲಿಗಳು - ಇವೆರಡಕ್ಕೂ ಪ್ರಯೋಜನ" ಎನ್ನುತ್ತಾರೆ ಬ್ರಿಸ್‍ಟೋಲ್ ವಿಶ್ವವಿದ್ಯಾಲಯದ ಜೈವಿಕ ವಿಜ್ನಾನಗಳ ವಿಭಾಗದ ಮಾರ್ಕ್ ಹೊಲ್ಡಿರೀಡ್.

ಊಟದ ನಂತರ ಪಾನ್ ಬೀಡಾ ಬಾಯಿಗೆ ಹಾಕಿಕೊಂಡು ನಿಧಾನವಾಗಿ ಸವಿಯುವ ಖುಷಿ ದಿನದಿನವೂ ಬೇಕೆನಿಸುತ್ತದೆ.
ಆದರೆ ಪಾನ್ ಬೀಡಾದ ಬಾಳ್ವಿಕೆ ಕೆಲವೇ ತಾಸುಗಳು. ಅನಂತರ ಅದು ಕೆಟ್ಟು ಹೋಗುತ್ತದೆ. ಆದ್ದರಿಂದಲೇ ಅದನ್ನು ಯಾರೂ ದಿನಗಟ್ಟಲೆ ಇಡುವಂತಿಲ್ಲ. ಬದಲಾಗಿ, ತಾಜಾ ಪಾನ್ ಬೀಡಾಕ್ಕಾಗಿ ಕಾಯುತ್ತಾರೆ.
ಇದೀಗ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳು ಪಾನ್ ಬೀಡಾದ ಬಾಳ್ವಿಕೆಯನ್ನು ನಾಲ್ಕು ತಿಂಗಳ ಅವಧಿಗೆ ಹೆಚ್ಚಿಸುವ ವಿಧಾನ ಆವಿಷ್ಕರಿಸಿದ್ದಾರೆ. ಇದಕ್ಕಾಗಿ, ಜೇನು ಇತ್ಯಾದಿ ಪ್ರಾಕೃತಿಕ ವಸ್ತುಗಳ ಬಳಕೆ.
ಅದಕ್ಕೆ ಅವರಿಟ್ಟ ಹೆಸರು ಜೇನು-ಪಾನ್ ಬೀಡಾ. ಜೇನು ಮತ್ತು ಔಷಧೀಯ ಗುಣಗಳಿರುವ ಕೆಲವು ಸಾಂಬಾರವಸ್ತುಗಳ ಮಿಶ್ರಣ ಬಳಸಿ, ಜೇನು-ಪಾನ್ ಬೀಡಾ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ನಾನ ಮತ್ತು ಪೋಷಣೆ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಬಿ. ಶಿವಲೀಲಾ.
“ಪ್ಯಾಕ್ ಮಾಡಿದ ಜೇನು-ಪಾನ್ ಬೀಡಾ ಗರಿಗರಿಯಾಗಿರುತ್ತದೆ ಮತ್ತು ಅಂಟಂಟು ಆಗೋದಿಲ್ಲ. ಇದನ್ನು ಸೂಕ್ಷ್ಮಜೀವಿ ಪತ್ತೆ ಪರೀಕ್ಷೆಗೆ ಒಳಪಡಿಸಿದಾಗ, ನಾಲ್ಕು ತಿಂಗಳಾದರೂ ಹಾಳಾಗುವುದಿಲ್ಲ ಎಂದು ಕಂಡು ಬಂದಿದೆ. ಹಾಗೆ ಪರೀಕ್ಷಿಸಿದ್ದು ಸೆಲ್ಫ್-ಸೀಲಿಂಗ್ ಪಾಲಿ ಕವರುಗಳಲ್ಲಿ ನಾವು ಪ್ಯಾಕ್ ಮಾಡಿದ ಜೇನು-ಪಾನ್ ಬೀಡಾಗಳನ್ನೇ” ಎಂದು ಅವರು ಮಾಹಿತಿ ನೀಡಿದ್ದಾರೆ.

ಹೂಗಳು ಬಾಡುವುದನ್ನು ನಿಧಾನಗೊಳಿಸುವ ವಿಧಾನ ಶೋಧಿಸಿರುವುದಾಗಿ ಜಪಾನಿನ ವಿಜ್ನಾನಿಗಳು ಘೋಷಿಸಿದ್ದಾರೆ. ಇದರಿಂದಾಗಿ, ಹೂಗಳು ದೀರ್ಘ ಸಮಯ ತಾಜಾ ಆಗಿರಲು ಸಾಧ್ಯ.
ಇದನ್ನು ಶೋಧಿಸಿದವರು ಟೋಕಿಯೋದ ಪೂರ್ವದ ಸುಕುಬಾದಲ್ಲಿರುವ ರಾಷ್ಟ್ರೀಯ ಕೃಷಿ ಮತ್ತು ಆಹಾರ ಸಂಶೋಧನಾ ಸಂಸ್ಥೆಯ ಸಂಶೋಧಕರು. ಜನಪ್ರಿಯ ಹೂವಿನ ಒಂದು ಜಪಾನಿ ತಳಿಯ ಅಲ್ಪಕಾಲದ ಅರಳುವಿಕೆಗೆ ಕಾರಣವಾದ ಜೀನನ್ನು ಪತ್ತೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಮುಂಜಾನೆ ಅರಳಿ ಸಂಜೆ ಬಾಡಿ ಹೋಗುವ ಈ ಜನಪ್ರಿಯ ಹೂಗಳ ಹೆಸರು ಮಾರ್ನಿಂಗ್  ಗ್ಲೊರಿ (ಮುಂಜಾವದ ಪ್ರಭೆ). ಈ ಹೂಗಳಲ್ಲಿ ನೂರಾರು ತಳಿಗಳು.
ಈ ಹೂಗಳು ಬಾಡಲು ಕಾರಣ “ಎಫೆಮೆರಾಲಿ” ಹೆಸರಿನ ಜೀನ್. “ಇದು ನಿಷ್ಕ್ರಿಯವಾಗುವಂತೆ ಮಾಡಿದ್ದರಿಂದಾಗಿ ಹೂಗಳು ಅರಳಿಕೊಂಡಿದ್ದ ಸಮಯ ಇಮ್ಮಡಿಯಾಯಿತು” ಎನ್ನುತ್ತಾರೆ, ಈ ಸಂಶೋಧನಾ ತಂಡರ ಪ್ರಮುಖರಲ್ಲಿ ಒಬ್ಬರಾದ ಕೆನಿಚಿ ಶಿಬುಯಾ. ದಕ್ಷಿಣ ಜಪಾನಿನ ಕಾಗೊಷಿಮಾ ವಿಶ್ವವಿದ್ಯಾಲಯದ ಜೊತೆಗೂಡಿ, ಆ ರಾಷ್ಟ್ರೀಯ ಸಂಸ್ಥೆ ಈ ಸಂಶೋಧನೆ ನಡೆಸಿತ್ತು.
ಜೈವಿಕವಾಗಿ ಮಾರ್ಪಡಿಸಿದ ಹೂಗಳು 24 ಗಂಟೆ ಅರಳಿಕೊಂಡಿದ್ದವು; ಆದರೆ ಹಾಗೆ ಮಾರ್ಪಡಿಸದ ಹೂಗಳು ಅರಳಿದ 13 ಗಂಟೆಗಳ ಬಳಿಕ ಬಾಡಲು ಶುರುವಾದವು ಎಂದು ಅವರು ವಿವರಿಸುತ್ತಾರೆ.

Pages