ನೀರಿನಿಂದ ಭಾರಲೋಹಗಳನ್ನು ಫಿಲ್ಟರ್ ಮಾಡಲು ಬಾಳೆಸಿಪ್ಪೆಯನ್ನು ಮಾಧ್ಯಮವಾಗಿ ಬಳಸಬಹುದೆಂದು ಬ್ರೆಜಿಲಿನ ವಿಜ್ನಾನಿಗಳು ಸಂಶೋಧಿಸಿದ್ದಾರೆ.
ಭಾರಲೋಹಗಳಾದ ಸೀಸ ಮತ್ತು ತಾಮ್ರ - ಇವು ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯದ ಮೂಲಕ ನೀರಿನಲ್ಲಿ ಸೇರಿಕೊಳ್ಳುತ್ತವೆ. ಇದರಿಂದಾಗಿ ಮಣ್ಣು ವಿಷಮಯವಾಗಿ ನಮ್ಮ ಆರೋಗ್ಯಕ್ಕೆ ಅಪಾಯ. ಅದಲ್ಲದೆ, ಸೀಸವು ಕ್ಯಾನ್ಸರಿಗೆ ಕಾರಣ.
ಸಿಲಿಕಾ, ಸೆಲ್ಯುಲೋಸ್ ಮತ್ತು ಅಲ್ಯುಮಿನಿಯಂ ಆಕ್ಸೈಡ್ - ಇವನ್ನು ಬಳಸಿ ನೀರಿನಿಂದ ಭಾರಲೋಹ ಬೇರ್ಪಡಿಸುವುದು ಹಳೆಯ ವಿಧಾನ. ಆದರೆ ಈ ವಿಧಾನ ದುಬಾರಿ ಮತ್ತು ಈ ವಿಧಾನಗಳಿಂದ ಅಡ್ಡಪರಿಣಾಮಗಳೂ ಇವೆ.
ಇದಕ್ಕೆ ಹೋಲಿಸಿದಾಗ, ನೀರಿನಿಂದ ಭಾರಲೋಹ ಬೇರ್ಪಡಿಸಲು ಬಾಳೆಹಣ್ಣಿನ ತ್ಯಾಜ್ಯವಾದ ಸಿಪ್ಪೆಯ ಬಳಕೆ ಸುರಕ್ಷಿತ. ಬಾಳೆಸಿಪ್ಪೆಯ ಸಂಯುಕ್ತಗಳಲ್ಲಿ ಸಾರಜನಕ ಹಾಗೂ ಗಂಧಕದ ಅಣುಗಳು ಮತ್ತು ಕಾರ್‍ಬೊಕ್ಸಿಲಿಕ್ ಆಮ್ಲ ಇವೆ (ಹಳೆಯ ವಿಧಾನದಲ್ಲಿ ಬಳಸುವ ವಸ್ತುಗಳಲ್ಲಿ ಇರುವುದೂ ಇವೇ.) ಈ ಆಮ್ಲದಲ್ಲಿ ಋಣಾತ್ಮಕ ಚಾರ್ಜ್ ಇದೆ. ಆದ್ದರಿಂದ, ಇದು ನೀರಿನಲ್ಲಿರುವ ಧನಾತ್ಮಕ ಚಾರ್ಜ್ ಹೊಂದಿರುವ ಭಾರಲೋಹಗಳೊಂದಿಗೆ ಸೇರಿಕೊಂಡು ಬಂಧವಾಗುತ್ತದೆ.
ಕಬ್ಬಿನ ಬಗಸ್ಸೆ, ನೆಲಗಡಲೆ ಸಿಪ್ಪೆ ಮತ್ತು ಸೇಬುಹಣ್ಣಿನ ತ್ಯಾಜ್ಯ - ಇವನ್ನೂ ನೀರಿನಿಂದ ಭಾರಲೋಹ ಬೇರ್ಪಡಿಸಲು ಬಳಸಲಾಗಿದೆ. ಆದರೆ ಇದಕ್ಕಾಗಿ ಅವನ್ನು ರಾಸಾಯನಿಕ ಬದಲಾವಣೆಗೆ ಒಳಪಡಿಸಬೇಕಾಗುತ್ತದೆ. ಬಾಳೆಸಿಪ್ಪೆಯ ಅನುಕೂಲವೆಂದರೆ ಅದನ್ನು ನೇರವಾಗಿ ಬಳಸಬಹುದು.
ಸಂಶೋಧಕರ ತಂಡವು ಬಳಸಿದ ವಿಧಾನ ಹೀಗಿದೆ: ಭಾರಲೋಹಗಳು ಇರುವ ೧೦ ಮಿಲೀ ನೀರಿಗೆ ೧೦ ಮಿಗ್ರಾ ಬಾಳೆಸಿಪ್ಪೆ ಪುಡಿ (ಕಣಗಳ ಅಳತೆ ೩೫ - ೪೫ ಮೈಕ್ರೊಮೀಟರ್) ಸೇರಿಸಿದರು. ಅನಂತರ, ಈ ಮಿಶ್ರಣವನ್ನು ಫಿಲ್ಟರ್ ಮಾಡಿದರು. ಈಗ ನೀರನ್ನು ಪರೀಕ್ಢಿಸಿದಾಗ, ಅದರಲ್ಲಿ ಭಾರಲೋಹಗಳ ಪ್ರಮಾಣ ಕಡಿಮೆಯಾಗಿತ್ತು.
ಆ ತಂಡವು ಸಂಶೋಧಿಸಿದ ೩ ವಿಷಯಗಳು: ಇತರ ಪ್ರಾಕೃತಿಕ ವಸ್ತುಗಳಾದ ನೆಲಗಡಲೆ ಸಿಪ್ಪೆ ಮತ್ತು ಮರದ ಹುಡಿಯ ಜೊತೆ ಹೋಲಿಸಿದಾಗ ಬಾಳೆಸಿಪ್ಪೆಯ ಸೋಸಕ (ಫಿಲ್‍ಟ್ರೇಷನ್) ಸಾಮರ್ಥ್ಯ ಜಾಸ್ತಿ. ಕಣಗಳ ಅಳತೆ ಕಡಿಮೆಯಾದಂತೆ, ಮೇಲ್ಮೈ ವಿಸ್ತೀರ್ಣ ಜಾಸ್ತಿಯಾಗುವ ಕಾರಣ ಸೋಸಕ ಸಾಮರ್ಥ್ಯ ಹೆಚ್ಚುತ್ತದೆ. ಬಾಳೆಸಿಪ್ಪೆಯ ಸೋಸಕವನ್ನು ಮತ್ತೆಮತ್ತೆ ೧೧ ಸಲ ಬಳಸಿದರೂ ಅದರ ಸೋಸಕ ಸಾಮರ್ಥ್ಯ ಕುಗ್ಗುವುದಿಲ್ಲ.