ಕೋಳಿಮೊಟ್ಟೆಯಲ್ಲಿ ಹಾವಿನ ವಿಷದ ಪ್ರತಿವಿಷ?

ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹಾವಿನ ಕಡಿತಕ್ಕೆ ಒಳಗಾಗುವವರು ಬೀದರ್ ಜಿಲ್ಲೆಯವರು. ಹಾವಿನ ಕಡಿತದಿಂದಾಗಿ ಅತ್ಯಧಿಕ ಜನರು ಸಾಯುವುದೂ ಅದೇ ಜಿಲ್ಲೆಯಲ್ಲಿ.
ಇದಕ್ಕೇನು ಕಾರಣ? ಅಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ಹಾವಿನ ಪ್ರತಿವಿಷದ (ಆಂಟಿವೆನಮ್) ವಿಪರೀತ ಕೊರತೆ ಇದಕ್ಕೆ ಪ್ರಧಾನ ಕಾರಣ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತ್ತೀಚೆಗಿನ ಅಧ್ಯಯನ ವರದಿಯ ಪ್ರಕಾರ ಪ್ರತಿದಿನ ಬೀದರ್ ಜಿಲ್ಲೆಯಲ್ಲಿ ಹಾವಿನ ಕಡಿತಕ್ಕೆ ಒಳಗಾಗುವ ವ್ಯಕ್ತಿಗಳ ಸಂಖ್ಯೆ ೧೩. ಅಂದರೆ ವರುಷಕ್ಕೆ ೪,೭೪೫ ಜನರಿಗೆ ಹಾವಿನ ಕಡಿತ! ಇವುಗಳಲ್ಲಿ ಕೆಲವು ಹಾವು ಕಡಿತಗಳು ಜೀವಕ್ಕೇ ಅಪಾಯಕಾರಿ. ಹಾವು ಕಡಿತದಿಂದ ಕರ್ನಾಟಕದಲ್ಲಿ ಸಾಯುವ ಪ್ರತಿ ಐವರಲ್ಲಿ ಒಬ್ಬರು ಬೀದರ್ ಜಿಲ್ಲೆಯವರು.
ಹಾವಿನ ಪ್ರತಿವಿಷದ ಕೊರತೆಯ ಸಮಸ್ಯೆಗೆ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನು ವಿಜ್ನಾನಗಳ ವಿಶ್ವವಿದ್ಯಾಲಯದ ವಿಜ್ನಾನಿಗಳು ಪರಿಹಾರ ಸೂಚಿಸಿದ್ದಾರೆ: ಹಾವಿನ ಪ್ರತಿವಿಷ ಹೊಂದಿರುವ ಮೊಟ್ಟೆಗಳನ್ನಿಡುವ ಕೋಳಿಗಳನ್ನು ಅಭಿವೃದ್ಧಿ ಪಡಿಸುವುದು.
ಕೆಲವು ವಿದೇಶಗಳಲ್ಲಿ ಮತ್ತು ಭಾರತದ ಕೆಲವು ಸಂಸ್ಥೆಗಳಲ್ಲಿ ಈ ತಂತ್ರ ಬಳಕೆಯಲ್ಲಿದೆ ಎಂದು ತಿಳಿಸುತ್ತಾರ ಆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಿ. ರೇಣುಕಾ ಪ್ರಸಾದ್. ಆ ತಂತ್ರ ಹೀಗಿದೆ: ಕೋಳಿಗಳಿಗೆ ಅತ್ಯಲ್ಪ ಪ್ರಮಾಣದ ಹಾವಿನ ವಿಷ ಚುಚ್ಚಬೇಕು. ಆ ಕೋಳಿಗಳು ಹಾವಿನ ವಿಷಕ್ಕೆ ಪ್ರತಿರೋಧ ಬೆಳೆಸಿಕೊಂಡು ತಮ್ಮ ದೇಹದಲ್ಲಿ ಆಂಟಿಬಾಡಿಗಳನ್ನು ಉತ್ಪಾದಿಸುತ್ತವೆ. ಈ ಆಂಟಿಬಾಡಿಗಳು ಹಾವಿನ ಕಡಿತಕ್ಕೆ ಒಳಗಾದವರ ಪ್ರಾಣ ಉಳಿಸಬಲ್ಲವು. ಕ್ರಮೇಣ ಅಂತಹ ಕೋಳಿಗಳು ಹಾವಿನ ಪ್ರತಿವಿಷವಿರುವ ಮೊಟ್ಟೆಗಳನ್ನು ಇಡಲು ಶುರು ಮಾಡುತ್ತವೆ. ಅಂತಹ ಪ್ರತಿಯೊಂದು ಮೊಟ್ಟೆ ಹಾವಿನ ಪ್ರತಿವಿಷದ ವಯಲಿನಂತೆ ಕೆಲಸ ಮಾಡುತ್ತದೆ ಎಂದು ವಿವರಿಸುತ್ತಾರೆ ಡಾ. ಪ್ರಸಾದ್.
ಆ ವಿಶ್ವವಿದ್ಯಾಲಯದ ವ್ಯಾಕ್ಸೀನ್ ಉತ್ಪಾದನಾ ಕೇಂದ್ರ (ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯಕೀಯ ಬಯೋಲಾಜಿಕಲ್ಸ್ ಸಂಸ್ಥೆ)ದಲ್ಲಿ ಇಂತಹ ಯೋಜನೆ ಕಾರ್ಯಗತಗೊಳಿಸಲು ವ್ಯವಸ್ಥೆಗಳಿವೆ. ಅಲ್ಲಿ ೧೭ ವಿಧದ ವ್ಯಾಕ್ಸೀನುಗಳನ್ನು ಉತ್ಪಾದಿಸಲಾಗುತ್ತಿದೆ. ಕಾಲುಬಾಯಿ ರೋಗ, ಅಂತ್ರಾಕ್ಸ್ ಮತ್ತು ರೇಬಿಸ್ - ಇವುಗಳಿಗೆ ಔಷಧಿ ಮತ್ತು ವ್ಯಾಕ್ಸೀನುಗಳ ಉತ್ಪಾದನೆ ಅಲ್ಲಿ ನಡೆಯುತ್ತಿದೆ. ಕಳೆದ ವರುಷ ಎಮ್ಮೆಗಳಿಗಾಗಿ ಒಂದು ದಶಲಕ್ಷ ವ್ಯಾಕ್ಸೀನು ಡೋಸುಗಳನ್ನು ಅಲ್ಲಿ ಉತ್ಪಾದಿಸಲಾಯಿತು.
ಈ ನಡುವೆ ಬೀದರಿನ ವೈದ್ಯಕೀಯ ವಿಜ್ನಾನಗಳ ಸಂಸ್ಥೆಯ ವೈದ್ಯರ ತಂಡವು ಹಾವಿನ ಪ್ರತಿವಿಷದ ಕೊರತೆಯ ಸಮಸ್ಯೆಗೆ ಸರಳ ಪರಿಹಾರವೊಂದನ್ನು ಸೂಚಿಸಿದೆ.
ಅಲ್ಲಿನ ಜನರಲ್ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಬಿ.ಎ. ವಿಜಯ ಕುಮಾರ್ ಮತ್ತು ಅವರ ತಂಡದ ವಿಜ್ನಾನಿಗಳು ಸೂಚಿಸಿದ ಪರಿಹಾರ ಹೀಗಿದೆ: ಹಾವು ಕಚ್ಚಿದ ವ್ಯಕ್ತಿಗಳಿಗೆ ಅಧಿಕ ಡೋಸ್ ಪ್ರತಿವಿಷ ಚುಚ್ಚುವುದರಿಂದ ಸಿಗುವಷ್ಟೇ ಪ್ರಯೋಜನ ಕಡಿಮೆ ಡೋಸ್ ಕೊಟ್ಟಾಗಲೂ ಸಿಗುತ್ತದೆ.

ಜರ್ನಲ ಆಫ್ ಇವೊಲ್ಯೂಷನ್ ಆಫ್ ಮೆಡಿಕಲ್ ಆಂಡ್ ಡೆಂಟಲ್ ಸೈನ್ಸಸ್ ಎಂಬ ವೈಜ್ನಾನಿಕ ನಿಯತಕಾಲಿಕದಲ್ಲಿ ಡಾ. ವಿಜಯ ಕುಮಾರ್ ಈ ಬಗ್ಗೆ ಪ್ರಬಂಧವೊಂದನ್ನು ಪ್ರಕಟಿಸಿದ್ದಾರೆ. ಅದರಲ್ಲಿ, ಹಾವಿನ ಪ್ರತಿವಿಷದ ಕಡಿಮೆ ಡೋಸಿನ ಚಿಕಿತ್ಸೆಯು ಅಡ್ಡ ಪರಿಣಾಮಗಳನ್ನು ಮತ್ತು ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಹಾವು ಕಚ್ಚಿದ ಹಲವಾರು ವ್ಯಕ್ತಿಗಳಿಗೆ ಈ ರೀತಿಯಲ್ಲಿ ಚಿಕಿತ್ಸೆ ನೀಡಿ, ಅಡ್ಡ ಪರಿಣಾಮಗಳು ಮತ್ತು ಸಾವಿನ ಪ್ರಮಾಣ ಕಡಿಮೆಯಾಗುವುದನ್ನು ಅವರು ದಾಖಲಿಸಿದ್ದಾರೆ.
ಸಾಮಾನ್ಯವಾಗಿ ಹಾವು ಕಚ್ಚಿದ ವ್ಯಕ್ತಿಗಳಿಗೆ ೧೦ರಿಂದ ೨೫ ವಯಲ್ ಹಾವಿನ ಪ್ರತಿವಿಷ ಚುಚ್ಚಲಾಗುತ್ತದೆ. ಆದರೆ ಡಾ. ವಿಜಯ ಕುಮಾರ್ ತಂಡದವರ ಪ್ರಯೋಗಗಳಲ್ಲಿ ಕೇವಲ ಒಂದು ಅಥವಾ ಎರಡು ವಯಲ್ ಹಾವಿನ ಪ್ರತಿವಿಷ ಚುಚ್ಚಲಾಯಿತು; ಅವರೆಲ್ಲರಲ್ಲಿಯೂ ಚಿಕಿತ್ಸಾ ಪರಿಣಾಮ ಸಮಾನವಾಗಿತ್ತು.
ಹಾವಿನ ಪ್ರತಿವಿಷವನ್ನು ಪ್ರಾಣಿಗಳ ಸೀರಂನಿಂದ ತಯಾರಿಸಲಾಗುತ್ತದೆ. ಕೆಲವು ರೋಗಿಗಳು ಇದಕ್ಕೆ ಪ್ರತಿರೋಧ ಹೊಂದಿರುತಾರೆ. ಪ್ರತಿವಿಷದ ಕಡಿಮೆ ಡೋಸ್ ನೀಡಿದಾಗ, ಈ ಪ್ರತಿರೋಧವೂ ಕಡಿಮೆಯಾಗುತ್ತದೆ ಎಂದು ತಿಳಿಸುತ್ತಾರೆ ಡಾ. ವಿಜಯ ಕುಮಾರ್.
ಹಾವು ಕಚ್ಚಿದ ವ್ಯಕ್ತಿಗಳಿಗೆಲ್ಲ ಅವರ ಸಂಸ್ಥೆಯಲ್ಲಿ ಈ ಸುಧಾರಿತ ವಿಧಾನದಲ್ಲಿ (ಕಡಿಮೆ ಡೋಸಿನ ಪ್ರತಿವಿಷ) ನೀಡಲಾಗುತ್ತಿದೆ. ಇತರ ಆಸ್ಪತ್ರೆಗಳಲ್ಲಿಯೂ ಈ ವಿಧಾನ ಅನುಸರಿಸಿದರೆ, ನಮ್ಮ ರಾಜ್ಯದಲ್ಲಿ ಹಾವಿನ ಪ್ರತಿವಿಷದ ಕೊರತೆಯ ಸಮಸ್ಯೆ ಪರಿಹಾರವಾದೀತು.