ಜೇನು-ಪಾನ್ ಬೀಡಾ

ಊಟದ ನಂತರ ಪಾನ್ ಬೀಡಾ ಬಾಯಿಗೆ ಹಾಕಿಕೊಂಡು ನಿಧಾನವಾಗಿ ಸವಿಯುವ ಖುಷಿ ದಿನದಿನವೂ ಬೇಕೆನಿಸುತ್ತದೆ.
ಆದರೆ ಪಾನ್ ಬೀಡಾದ ಬಾಳ್ವಿಕೆ ಕೆಲವೇ ತಾಸುಗಳು. ಅನಂತರ ಅದು ಕೆಟ್ಟು ಹೋಗುತ್ತದೆ. ಆದ್ದರಿಂದಲೇ ಅದನ್ನು ಯಾರೂ ದಿನಗಟ್ಟಲೆ ಇಡುವಂತಿಲ್ಲ. ಬದಲಾಗಿ, ತಾಜಾ ಪಾನ್ ಬೀಡಾಕ್ಕಾಗಿ ಕಾಯುತ್ತಾರೆ.
ಇದೀಗ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳು ಪಾನ್ ಬೀಡಾದ ಬಾಳ್ವಿಕೆಯನ್ನು ನಾಲ್ಕು ತಿಂಗಳ ಅವಧಿಗೆ ಹೆಚ್ಚಿಸುವ ವಿಧಾನ ಆವಿಷ್ಕರಿಸಿದ್ದಾರೆ. ಇದಕ್ಕಾಗಿ, ಜೇನು ಇತ್ಯಾದಿ ಪ್ರಾಕೃತಿಕ ವಸ್ತುಗಳ ಬಳಕೆ.
ಅದಕ್ಕೆ ಅವರಿಟ್ಟ ಹೆಸರು ಜೇನು-ಪಾನ್ ಬೀಡಾ. ಜೇನು ಮತ್ತು ಔಷಧೀಯ ಗುಣಗಳಿರುವ ಕೆಲವು ಸಾಂಬಾರವಸ್ತುಗಳ ಮಿಶ್ರಣ ಬಳಸಿ, ಜೇನು-ಪಾನ್ ಬೀಡಾ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ನಾನ ಮತ್ತು ಪೋಷಣೆ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಬಿ. ಶಿವಲೀಲಾ.
“ಪ್ಯಾಕ್ ಮಾಡಿದ ಜೇನು-ಪಾನ್ ಬೀಡಾ ಗರಿಗರಿಯಾಗಿರುತ್ತದೆ ಮತ್ತು ಅಂಟಂಟು ಆಗೋದಿಲ್ಲ. ಇದನ್ನು ಸೂಕ್ಷ್ಮಜೀವಿ ಪತ್ತೆ ಪರೀಕ್ಷೆಗೆ ಒಳಪಡಿಸಿದಾಗ, ನಾಲ್ಕು ತಿಂಗಳಾದರೂ ಹಾಳಾಗುವುದಿಲ್ಲ ಎಂದು ಕಂಡು ಬಂದಿದೆ. ಹಾಗೆ ಪರೀಕ್ಷಿಸಿದ್ದು ಸೆಲ್ಫ್-ಸೀಲಿಂಗ್ ಪಾಲಿ ಕವರುಗಳಲ್ಲಿ ನಾವು ಪ್ಯಾಕ್ ಮಾಡಿದ ಜೇನು-ಪಾನ್ ಬೀಡಾಗಳನ್ನೇ” ಎಂದು ಅವರು ಮಾಹಿತಿ ನೀಡಿದ್ದಾರೆ.
ಜೇನು, ಶುಂಠಿ, ಲವಂಗ, ಜಾಯಿಕಾಯಿ, ಅಡಿಕೆ, ಸುಣ್ಣ ಇತ್ಯಾದಿ ಬೆರೆಸಿ ತಯಾರಿಸುವ ಜೇನು-ಪಾನ್ ಬೀಡಾದಲ್ಲಿ ಕ್ಯಾಲ್ಸಿಯಂ, ವಿಟಮಿನ್ಗಳು, ಕಬ್ಬಿಣಾಂಶದಂತಹ ಪೋಷಕಾಂಶಗಳು ಇರುತ್ತವೆ.
ಡಾ. ಶಿವಲೀಲಾ, ಸವಿತಾ ಹುಲಮನಿ, ರಾಣಿ ಅರವಿಂದ್ ಮತ್ತು ಕೃಷಿ ಪರಿಣತ ಎನ್.ಎಸ್.ಭಟ್ – ಇವರ ತಂಡ ಅಭಿವೃದ್ಧಿ ಪಡಿಸಿದ ಉತ್ಪನ್ನ ಜೇನು-ಪಾನ್ ಬೀಡಾ. ಇದರ ಪೇಟೆಂಟಿಗಾಗಿ ಕೃಷಿ ವಿಶ್ವವಿದ್ಯಾಲಯ ಅರ್ಜಿ ಸಲ್ಲಿಸಿದೆ. ಇದರ  ತಂತ್ರಜ್ನಾನವು ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮ (ಎನ್ಆರ್ಡಿಸಿ) ಮೂಲಕ ವಾಣಿಜ್ಯೀಕರಣಕ್ಕೆ ಲಭ್ಯವಿದೆ. ಅಲ್ಲಿನ ಸಂಪರ್ಕ ಫೋನ್: 080-28362255  
ನಮ್ಮ ದೇಶದಿಂದ ಹೂವುಗಳನ್ನೇ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಹಾಗಿರುವಾಗ, ನಾಲ್ಕು ತಿಂಗಳು ಬಾಳ್ವಿಕೆಯ ಜೇನು-ಪಾನ್ ಬೀಡಾವನ್ನೂ ರಫ್ತು ಮಾಡಬಹುದು.