“ಸತ್ತ ಸಮುದ್ರ”ಗಳಿಂದ ಪಡೆದ ಆಹಾರ ಸುರಕ್ಷಿತವೇ?

ಆಮ್ಲಜನಕವಿಲ್ಲದೆ ಬದುಕಲು ಸಾಧ್ಯವೇ? ಇಲ್ಲ. ಸಮುದ್ರದ ಆಳದಲ್ಲಿರುವ ಹಲವು ಜಲಜೀವಿಗಳ ಪಾಡು ಇದು.
ಭೂಮಿಯ ವಿವಿಧ ಸಮುದ್ರಗಳಲ್ಲಿ ಆಮ್ಲಜನಕವಿಲ್ಲದ ೪೦೦ “ಮೃತ ಪ್ರದೇಶ”ಗಳನ್ನು ಗುರುತಿಸಲಾಗಿದೆ. ಅಲ್ಲಿ ವರುಷಕ್ಕೊಮ್ಮೆ ಆಮ್ಲಜನಕ ತೀರಾ ಕಡಿಮೆಯಾಗುತ್ತದೆ. ಇದರಿಂದಾಗಿ ಮೀನುಗಳ ಸಾವು ಮತ್ತು ಸಮುದ್ರಗಳ ಜೀವವೈವಿಧ್ಯ ನಾಶ. ಆ ಮೂಲಕ ಭೂಮಿಯ ಇಕಾಲಜಿ ವ್ಯವಸ್ಥೆಗೂ ಹಾನಿ.
ಸಮುದ್ರಗಳಲ್ಲಿ ಆಮ್ಲಜನಕದ ಮಟ್ಟದ ಕುಸಿತದಲ್ಲಿ ಕಳೆದ ೪೦ ವರುಷಗಳಲ್ಲಿ ವಿಪರೀತ ಹೆಚ್ಚಳ ದಾಖಲಾಗಿದೆ. ಭಾರತದ ಪಶ್ಚಿಮದಲ್ಲಿ ಅರಬಿ (ಅರೇಬಿಯನ್) ಸಮುದ್ರದಲ್ಲಿಯೂ ಇಂತಹ ಒಂದು ಮೃತ ಪ್ರದೇಶ ಪತ್ತೆಯಾಗಿರುವುದು ಆತಂಕದ ವಿಷಯ. ಅಲ್ಲಿ ಪ್ರತಿ ವರುಷ ಚಳಿಗಾಲದಲ್ಲಿ ನೀರಿನ ಬಣ್ಣ ಪ್ರಕಾಶಮಾನವಾದ ಹಸುರಾಗಿ ಬದಲಾಗುತ್ತದೆ. ಅದು ಎಷ್ಟು ದಟ್ಟವಾಗಿರುತ್ತದೆ ಎಂದರೆ ಅದನ್ನು ಬಾಹ್ಯಾಕಾಶದಿಂದಲೂ ಕಾಣಬಹುದು. ಇದಕ್ಕೆ ಕಾರಣ ನೊಕ್ಟಿಲುಕಾ ಸಿಂಟಿಲ್ಲಾನ್ ಎಂಬ ಸೂಕ್ಷ್ಮ ಪ್ಲಾಂಕ್ಟನ್ (ಜಲಸಸ್ಯ). ಇದು ಹೂ ಬಿಟ್ಟು ಸಮುದ್ರದ ಮೇಲ್ಮೈಯಲ್ಲಿ ಹರಡುತ್ತದೆ.
ಸಮುದ್ರ ಜೀವಿಗಳ ಸಮುದಾಯಗಳ ಮೇಲೆ ಕಡಿಮೆಯಾಗುತ್ತಿರುವ ಆಮ್ಲಜನಕದ ಮಟ್ಟದ ಪರಿಣಾಮಗಳನ್ನು ಇತ್ತೀಚೆಗಿನ ಅಧ್ಯಯನಗಳು ತೋರಿಸಿ ಕೊಟ್ಟಿವೆ. ಎಪ್ರಿಲ್ ೨೦೧೫ರ ಪಿಎನ್ಎಎಸ್ನಲ್ಲಿ ಪ್ರಕಟವಾದ ಲೇಖನದಲ್ಲಿರುವ ಮಾಹಿತಿ: ಆಮ್ಲಜನಕದ ಮಟ್ಟದ ಕುಸಿತವು ಸಮುದ್ರತಳದ ಜೀವಿಗಳ ಸಂರಚನೆ ಬದಲಾಗಲು ಕಾರಣವಾಗಿದೆ. ಮುಂಚೆ ಅಲ್ಲಿದ್ದ ಜೀವಿಗಳ ಬದಲಾಗಿ ಈಗ ಅಲ್ಲಿ ಕಡಿಮೆ ಆಮ್ಲಜನಕದಲ್ಲಿ ಬದುಕಬಲ್ಲ ಜೀವಿಗಳು ಕಂಡುಬರುತ್ತವೆ.
ಸಮುದ್ರಗಳಲ್ಲಿ ಮೃತ ಪ್ರದೇಶಗಳು ಉಂಟಾಗಲು ಪ್ರಧಾನ ಕಾರಣ ಕಾರ್ಖಾನೆಗಳಿಂದ ಉತ್ಪಾದಿಸಲಾದ ರಾಸಾಯನಿಕ ಗೊಬ್ಬರಗಳ ಬಳಕೆ. ಭೂಪ್ರದೇಶದಿಂದ ಸಮುದ್ರಕ್ಕೆ ಹರಿದು ಬರುವ ಪೋಷಕಾಂಶಗಳು ಸಮುದ್ರಗಳಲ್ಲಿ ದ್ಯುತಿಸಂಶ್ಲೇಷಣೆಯ ಜಲಸಸ್ಯಗಳ ಭಾರೀ ಹೆಚ್ಚಳಕ್ಕೆ ಕಾರಣ. ಈ ಜಲಸಸ್ಯಗಳು ಸಾಯುತ್ತಿದ್ದಂತೆ, ಅವು ಕೊಳೆಯಲು ಕಾರಣವಾಗುವ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತದೆ. ಇವು, ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಯಾವ ಪ್ರಮಾಣದಲ್ಲಿ ಕಬಳಿಸಿ ಕಡಿಮೆ ಮಾಡುತ್ತವೆ ಎಂದರೆ, ಆ ನೀರಿನಲ್ಲಿ ಅನಂತರ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ಆಗ, ಅಲ್ಲಿನ ಪ್ರಾಣಿಗಳು ಬೇರೆ ಸ್ಥಳಕ್ಕೆ ಚಲಿಸಿ ಬದುಕಿಕೊಳ್ಳುತ್ತವೆ. ಬೇರೆಡೆಗೆ ನಿಧಾನವಾಗಿ ಸ್ಥಳಾಂತರಗೊಳ್ಳುವ ಜೀವಿಗಳು ಉಸಿರುಗಟ್ಟಿ ಸಾಯುತ್ತವೆ. ಸಂಸ್ಕರಿಸದ ಸಾವಯವ ಕೊಳಚೆ ಮತ್ತು ಪೆಟ್ರೋಲ್/ ಡೀಸಿಲ್/ ಕಲ್ಲಿದ್ದಲು ಇಂತಹ ಸಾಂಪ್ರದಾಯಿಕ ಶಕ್ತಿಮೂಲಗಳು ಸಮಸ್ಯೆಯನ್ನು ಬಿಗಡಾಯಿಸುತ್ತವೆ.
ಅರಬಿ ಸಮುದ್ರದಲ್ಲಿ ಮೃತ ಪ್ರದೇಶದ ವಿಸ್ತೀರ್ಣ ಹೆಚ್ಚುತ್ತಿರುವುದು ಅಪಾಯದ ಮುನ್ಸೂಚನೆ. ಭೂಮಿಯ ವಿವಿಧ ಸಮುದ್ರಗಳ ಮೃತ ಪ್ರದೇಶಗಳಲ್ಲಿ ಇದುವೇ ಅತ್ಯಂತ ಆಳವಾದದ್ದು. ಇದರ ವಿಸ್ತೀರ್ಣ ಸುಮಾರು ಎರಡು ದಶಲಕ್ಷ ಚದರ ಕಿಮೀ. ಮುಂಬೈ ಮತ್ತು ಕರಾಚಿಯಂತಹ ಅಧಿಕ ಜನಸಾಂದ್ರತೆಯಿರುವ ನಗರಗಳಿಂದ ಸಮುದ್ರಕ್ಕೆ ಹರಿದು ಬರುವ ಲಕ್ಷಗಟ್ಟಲೆ ಲೀಟರ್ ಕೊಳಚೆಯೇ ಅರಬಿ ಸಮುದ್ರದಲ್ಲಿ ಅಮ್ಲಜನಕದ ಕೊರತೆಗೆ ಕಾರಣ – ಇದು ೨೦೧೪ರಲ್ಲಿ “ನೇಚರ್” ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ಲೇಖನದಲ್ಲಿರುವ ಸತ್ಯಾಂಶ.
ಅರಬಿ ಸಮುದ್ರದಲ್ಲಿ ಮೃತ ಪ್ರದೇಶ ಮೊದಲು ಪತ್ತೆಯಾದದ್ದು ೧೯೩೩-೩೪ರಲ್ಲಿ. “ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆಯು ೧೯೯೦ರ ದಶಕದ ಮಧ್ಯಭಾಗದಿಂದ ಅರಬಿ ಸಮುದ್ರದ ಮೃತ ಪ್ರದೇಶದ ವಿವರ ದಾಖಲಿಸುತ್ತಿದೆ – ಜೀವ-ಭೂ-ರಾಸಾಯನಿಕ ವಿಷಯಗಳ ಬಗ್ಗೆ – ಮುಖ್ಯವಾಗಿ, ಸಾರಜನಕದ ಚಕ್ರೀಯ ಕ್ರಿಯೆ ಮತ್ತು ಹಸುರುಮನೆ ಅನಿಲಗಳ ಬಗ್ಗೆ” ಎನ್ನುತ್ತಾರೆ ಆ ಸಂಸ್ಥೆಯ ವಾಜಿ ನಖ್ವಿ.
ಅರಬಿ ಸಮುದ್ರದ ಮಧ್ಯದಲ್ಲಿರುವ ಮೃತ ಪ್ರದೇಶದಲ್ಲಿ ಹೆಚ್ಚಿನ ಬದಲಾವಣೆ ಕಾಣಿಸುತ್ತಿಲ್ಲ. ಆದರೆ ಕಳೆದ ನಾಲ್ಕು ದಶಕಗಳಲ್ಲಿ ಸಮುದ್ರ ತೀರದಲ್ಲಿ ಕಡಿಮೆ ಆಮ್ಲಜನಕದ ಪ್ರದೇಶದ ವಿಸ್ತೀರ್ಣ ಜಾಸ್ತಿಯಾಗುತ್ತಿದೆ: ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರಗಳ (ಶೇಷಾಂಶಗಳ) ಒಳಹರಿವು ಇದಕ್ಕೆ ಮುಖ್ಯ ಕಾರಣವಾಗಿರಬೇಕು. ಆದ್ದರಿಂದ, ರಾಸಾಯನಿಕ ಗೊಬ್ಬರಗಳ ಬಳಕೆಯ ವೈಜ್ನಾನಿಕ ನಿರ್ವಹಣೆ ಅಗತ್ಯ ಎನ್ನುತ್ತಾರೆ ನಖ್ವಿ.
ಭೂಮಿಯ ಎರಡನೇ ಅತಿ ದೊಡ್ಡ ಮೃತ ಪ್ರದೇಶವಿರುವುದು ಮೆಕ್ಸಿಕೋ ಗಲ್ಫಿನಲ್ಲಿ. ಅದರ ವಿಸ್ತೀರ್ಣ ೧೪,೨೦೦ ಚದರ ಕಿಮೀ (ನವದೆಹಲಿಯ ವಿಸ್ತೀರ್ಣದ ಹತ್ತು ಪಟ್ಟು) ಎಂದು ಯುಎಸ್ಎ ದೇಶದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಪ್ರಾಧಿಕಾರ (ಎನ್ಒಎ ಎ) ಅಂದಾಜಿಸಿದೆ. ಅಲ್ಲಿ ಪ್ರತಿ ವರುಷ ಬೇಸಗೆಯಲ್ಲಿ ರಾಶಿರಾಶಿ ಸತ್ತ ಮೀನುಗಳು ತೇಲುತ್ತವೆ ಎನ್ನುತ್ತಾರೆ ದಕ್ಷಿಣ ಯುಎಸ್ಎಯ ಮೀನುಗಾರರು. ಮಾತ್ರವಲ್ಲ, ಆ ಸಮುದ್ರದಲ್ಲಿ ಸಿಗಡಿ ಮತ್ತು ಸಮುದ್ರತಳದ ಮೀನುಗಳೂ ಸಿಗುವುದಿಲ್ಲ.
ಭಾರತದ ಕರಾವಳಿ ಪ್ರದೇಶಗಳಲ್ಲಿ ಮೀನು ಪ್ರಧಾನ ಆಹಾರ. ನಗರಗಳ ಹಾಗೂ ಕಾರ್ಖಾನೆಗಳ ಕೊಳಚೆ ನೀರು ಮತ್ತು ಮಾಲಿನ್ಯಕಾರಕ ರಾಸಾಯನಿಕಗಳು ದಿನದಿನವೂ ಸಮುದ್ರ ಸೇರುತ್ತಿದ್ದು, ಅರಬಿ ಸಮುದ್ರದ ನೀರು ವರುಷದಿಂದ ವರುಷಕ್ಕೆ ಹೆಚ್ಚೆಚ್ಚು ಕಲುಷಿತವಾಗುತ್ತಿದೆ. ಇಂತಹ ನೀರಿನಲ್ಲಿ ಬೆಳೆಯುವ ಮೀನು, ಸಿಗಡಿ, ಏಡಿ ಇವೆಲ್ಲ ಸುರಕ್ಷಿತ ಆಹಾರವೇ? ಎಂದು ಎಚ್ಚರ ವಹಿಸಬೇಕಾದ ಕಾಲ ಬಂದಿದೆ, ಅಲ್ಲವೇ?