ಭಾರತದಲ್ಲಿ ಪ್ರತಿ ವರುಷ ಹಾವಿನ ವಿಷದಿಂದ ಸಾಯುವವರ ಸಂಖ್ಯೆ ಎಷ್ಟಿರಬಹುದು? ಆಸ್ಪತ್ರೆಗಳಿಂದ ಪಡೆದ ಅಂಕೆಸಂಖ್ಯೆಗಳ ಪ್ರಕಾರ (ಆರು ರಾಜ್ಯಗಳ ಹೊರತಾಗಿ) ಅದು ೨೦೦೮ರಲ್ಲಿ ೧,೩೬೪.
ಆದರೆ, ಸಾರ್ವಜನಿಕ ಅಂತರಾಷ್ಟ್ರೀಯ ಆರೋಗ್ಯ ಸಂಶೋಧಕರ ತಂಡದ ಪ್ರಕಾರ, ಅದು ಪ್ರತಿ ವರುಷ ೪೫,೯೦೦. ಯಾಕೆಂದರೆ ಹಾವು ಕಚ್ಚಿದವರಲ್ಲಿ ಬಹುಪಾಲು ಜನ ಹಳ್ಳಿಮದ್ದಿನ ಚಿಕಿತ್ಸೆ ಪಡೆದು, ಅದು ಫಲಕಾರಿಯಾಗದೆ ಸಾಯುತ್ತಾರೆ. ಉತ್ತರಪ್ರದೇಶ (೮,೭೦೦), ಆಂಧ್ರಪ್ರದೇಶ (೫,೨೦೦) ಮತ್ತು ಬಿಹಾರ (೪,೫೦೦) ರಾಜ್ಯಗಳಲ್ಲಿ ಹಾವಿನ ಕಡಿತಕ್ಕೆ ಬಲಿಯಾಗುವವರ ಸಂಖ್ಯೆ ಜಾಸ್ತಿ.
ಆದ್ದರಿಂದಲೇ, ಹಾವು ಕಚ್ಚಿದವರ ಜೀವ ಉಳಿಸಬಲ್ಲ ಸಂಶೋಧನೆಗೆ ಪ್ರಾಮುಖ್ಯತೆ. ಅಂತಹ ಒಂದು ಇತ್ತೀಚೆಗಿನ ಸಂಶೋಧನೆ ಕೊಲ್ಕತ್ತಾದ ಭಾರತೀಯ ರಾಸಾಯನಿಕ ಜೀವಶಾಸ್ತ್ರ ಸಂಸ್ಥೆಯ ವಿಜ್ನಾನಿಗಳ ತಂಡದ ಸಾಧನೆ.
ಔಷಧಿಯಾಗಿ ಸಿಗುವ ಹಾವಿನ ಪ್ರತಿವಿಷದ ಜೊತೆ ಮೂರು ಸಸ್ಯಮೂಲದ ಸಂಯುಕ್ತಗಳನ್ನು ಬೆರೆಸಿ ಪ್ರಯೋಗಿಸಿದಾಗ, ಅದು ಭಾರತದ ಕಟ್ಟುಹಾವಿನ ವಿಷವನ್ನು ನಿಷ್ಕ್ರಿಯಗೊಳಿಸುತ್ತದೆ – ಇದು ಅವರ ಸಂಶೋಧನೆಯಿಂದ ತಿಳಿದು ಬಂದ ವಿಷಯ.
ತೇಜಪುರ ವಿಶ್ವವಿದ್ಯಾಲಯದ್ ಪ್ರೊ. ಅಶೀಷ್ ಕುಮಾರ್ ಈ ಬಗ್ಗೆ ತಿಳಿಸಿದ ವಿವರ: ಭಾರತದಲ್ಲಿ ಹಾವಿನಿಂದ ಕಚ್ಚಿಸಿಕೊಂಡ ಗರಿಷ್ಠ ಸಂಖ್ಯೆಯ ಜನರು ಚಿಕಿತ್ಸೆಗಾಗಿ ಬರೋದು ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ. ಆದರೆ ಅವರಿಗೆ ಪ್ರತಿವಿಷ ನೀಡಬೇಕಾದಾಗ ನಮಗೆ ಎದುರಾಗುವ ಸಮಸ್ಯೆ, ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಪ್ರತಿವಿಷ ಸಿಗದಿರುವುದು.
“ಸಸ್ಯಮೂಲದ ರಾಸಾಯನಿಕಗಳು ವಾತಾವರಣದ ಉಷ್ಣತೆಯಲ್ಲಿ ಕೆಟ್ಟು ಹೋಗುವುದಿಲ್ಲ. ಆದ್ದರಿಂದ ಇವನ್ನು ಗ್ರಾಮೀಣ ಪ್ರದೇಶದಲ್ಲಿ ಹಾಳಾಗದಂತೆ ಶೇಖರಿಸಿ ಇಡುವುದು ಸುಲಭ” ಎಂದು ದನಿಗೂಡಿಸುತ್ತಾರೆ, ಅಮೇರಿಕಾದ ಉತ್ತರ ಕೊಲೆರಾಡೊದ ವಿಶ್ವವಿದ್ಯಾಲಯದ ವಿಜ್ನಾನಿ ಮುಖರ್ಜಿ.
“ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್” ಪತ್ರಿಕೆಯಲ್ಲಿ ವರದಿಯಾಗಿರುವ ಈ ಸಂಶೋಧನೆಯಿಂದಾಗಿ ಕೆಲವು ಸಾವಿರ ಜನರನ್ನು ಸಾವಿನ ದವಡೆಯಿಂದ ಬದುಕಿಸಲು ಸಾಧ್ಯ.